ವಿವೇಕಾನಂದರೇ ನೀಡಲಿ ಸ್ಪೂರ್ತಿ ಈ ಮನಕೆ!

12 ಜನ 11

ಇಂದು ನಿರ್ಧರಿಸಿದ್ದೆ ನಾನು
ಈ ಏಕತಾನತೆಯಿಂದ ಬಿಡುಗಡೆ ಹೊಂದಬೇಕೆಂದು,
ಆಸುಮನದ ಮಾತುಗಳಲ್ಲಿನ
ಏಕತಾನತೆಯನ್ನೂ ಆದಷ್ಟು ಕಿತ್ತೊಗೆಯಬೇಕೆಂದು;

ಮುಂಜಾನೆ ಐದಕ್ಕೆ ಬದಲಾಗಿ
ಏಳರವರೆಗೆ ಮಲಗಿದ್ದೆ ಬದಲಾವಣೆ ಇರಲೆಂದು,
ಮುಂಜಾನೆಯ ನಡಿಗೆಗೆ ರಜಾ
ಘೋಷಿಸಿ ತಯಾರಾದೆ ನಾನು ಹಲ್ಲುಜ್ಜಿ ಮಿಂದು;

ರಾಗಿ ದೋಸೆಗೆ ಬದಲಾಗಿ ಅಕ್ಕಿ
ದೋಸೆಯ ತಿಂದೆ ಸಕ್ಕರೆ ಹೆಚ್ಚಾದರೆ ಆಗಲೆಂದು,
ಕಛೇರಿಗೆ ದ್ವಿಚಕ್ರಿಯ ಬದಲಾಗಿ
ಬಸ್ಸಿನಲೇ ಪಯಣಿಸಿದೆ ಭಿನ್ನತೆ ಇರಲಿ ಇಂದೆಂದು;

ಆದರೇನು ಮಾಡಲಿ ಕೆಲಸದಲಿ
ಅದೇ ಏಕತಾನತೆ ಅಲ್ಲೇನೂ ಬದಲಾವಣೆ ಸಾಧ್ಯವಿಲ್ಲ,
ಪತ್ರಿಕೆಗಳ ಸುದ್ದಿಗಳಲೂ ಅದೇ
ಏಕತಾನತೆ ಅಲ್ಲೂ ಹೊಸಸುದ್ದಿಗಳ ಸುಳಿವಂತೂ ಇಲ್ಲ;

ವಿಧಾನಮಂಡಲದೊಳಗೆ ಅದೇ
ಕಬಡ್ಡಿಯಾಟ, ಈರುಳ್ಳಿ ಬೆಲೆಯಲ್ಲಿ ಎಂದಿನ ಏರುಪೇರು,
ಸ್ವಾಮಿ ವಿವೇಕಾನಂದರ ಜನುಮ
ದಿನದಂದು ಹೊಸತು ಬರಲೆಂದೀ ಮನಕ್ಕೆ ಕೊಟ್ಟೆ ಜೋರು;

ಅದೇಕೋ ನನ್ನೀ ಮನವೂ
ಜಡವಾಗಿದೆ ಬೆಂಗಳೂರಿನ ಸೋಮಾರಿ ವಾತಾವರಣದಂತೆ,
ವಿವೇಕಾನಂದ ಸ್ವಾಮಿಯೇ ನನ್ನ
ಈ ಮನಕೆ ಸ್ಪೂರ್ತಿಯ ನೀಡಿ ಹೊಸ ಹೊಸತನ್ನು ಬರೆಸಲಂತೆ!
**********************