ಏನನ್ನುವರು ಜನರು?

01 ಸೆಪ್ಟೆಂ 12

ಸಖೀ,
ಓರ್ವ ವ್ಯಕ್ತಿ

ದೇವರಿಗಾಗಿ
ದಿನದ ಒಂದಷ್ಟು
ಸಮಯವನ್ನು
ಮುಡಿಪಾಗಿಡಲು,
ಹೆಚ್ಚಿನ ಜನರು
ಆತನನ್ನು ಮೆಚ್ಚಿ
ಕೊಂಡಾಡುವರು;
ಒಂದು ವೇಳೆ
ದೇವರೂ ಕೂಡ
ಆ ವ್ಯಕ್ತಿಯ ಬಗ್ಗೆ
ದಿನದ ಅದಷ್ಟೇ
ಸಮಯವನ್ನು ಮಾತ್ರ
ಮುಡಿಪಾಗಿ ಇಟ್ಟರೆ,
ಜನರು ಏನನ್ನುವರು?


ನಮಗೇನು ಬೇಕು?

15 ಜುಲೈ 12

ಅಪ್ಪಯ್ಯ ಹೇಳಿದ್ದ ಕತೆ ೦೫

ಹೆಚ್ಚಾಗಿ ಮಾವಿನ ಮರಗಳಲ್ಲಿ ಹಾಗೂ ಗೇರು ಮರಗಳಲ್ಲಿ, ತಿಳಿಯಾದ ಕೆಂಪು-ಕೇಸರಿ ಬಣ್ಣದ ಹಾಗೂ ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿರುವ ಇರುವೆಗಳು ಅಡ್ಡಾಡುತ್ತಿರುತ್ತವೆ. ಅವುಗಳು ನಮ್ಮ ಮೈಮೇಲೆ ಹರಿದಾಡಿದರೆ, ನಮ್ಮನ್ನು ಕಡಿಯದೇ ಇರುವುದಿಲ್ಲ. ಕಡಿದರೆ ವಿಪರೀತ ಉರಿತ. ಅವುಗಳಿಗೆ ನಾವು “ತಬುರು” ಎಂದು ಕರೆಯುತ್ತಿದ್ದೆವು. ಬಹುಶಃ ಅದು ತುಳು ಭಾಷೆಯ ಪದವಾಗಿರಬಹುದು. ಕನ್ನಡದಲ್ಲಿ ಏನನ್ನುತ್ತಾರೋ ಗೊತ್ತಿಲ್ಲ. ನಮ್ಮನ್ನು ಕಡಿವ ಆ ತಬುರುಗಳನ್ನು ನಾವು ಹಿಸುಕಿ ಹಾಕುವುದು ಸರ್ವೇ ಸಾಮಾನ್ಯವಾಗಿತ್ತು.

ಇದೇಕೆ ಹೀಗೆ? ಎಂದು ನಾವು ಬಾಲ್ಯದಲ್ಲಿ ಒಮ್ಮೆ ನಮ್ಮ ಅಪ್ಪಯ್ಯನವರನ್ನು ಕೇಳಿದ್ದಾಗ ಅವರು ಹೇಳಿದ್ದ ಮಾತುಗಳಿವು.

ಒಮ್ಮೆ ಈ ತಬುರುಗಳೆಲ್ಲಾ ಒಂದು ಸಭೆ ನಡೆಸಿದವು. “ನಮ್ಮನ್ನು ಮನುಜರು ಹಿಸುಕಿ ಹಿಸುಕಿ ಸಾಯಿಸುತ್ತಿದ್ದಾರೆ. ಇದನ್ನು ತಡೆಯಲು ನಾವು ದೇವರ ಮೊರೆ ಹೋಗೋಣ. ತಪಸ್ಸು ಮಾಡಿ ದೇವರಲ್ಲಿ ವರ ಬೇಡೋಣ” ಎಂದು ನಿರ್ಧರಿಸಿದವು. ಒಂದು ಸುಮುಹೂರ್ಥದಲ್ಲಿ, ಎಲ್ಲಾ ತಬುರುಗಳೂ ತಪಸ್ಸಿಗೆ ಕೂತು ಬಿಟ್ಟವು. ಕೊನೆಗೂ ದೇವರು ಪ್ರತ್ಯಕ್ಷರಾಗಿ “ನಿಮ್ಮ ಸಮಸ್ಯೆ ಏನು? ಏನು ಬೇಕಾಗಿದೆ? ಒಂದು ವರ ನೀಡುತ್ತೇನೆ. ಬೇಡಿಕೊಳ್ಳಿ” ಅಂದರು. ಆಗ ಆ ತಬುರುಗಳೆಲ್ಲಾ ನಾನು ಕೇಳುತ್ತೇನೆ, ನಾನು ಕೇಳುತ್ತೇನೆ ಎಂದು ಹಾರಾಡತೊಡಗಿದವು. ಇದನ್ನು ಕಂಡ ದೇವರು “ನಿಮ್ಮಲ್ಲಿ ಯಾರಾದರೂ ಒಬ್ಬರು, ಒಂದು ವರ ಕೇಳಿ, ನೀಡುತ್ತೇನೆ” ಅನ್ನುತ್ತಾರೆ.

ಆಗ ಒಂದು ತಬುರು, “ಸುಮ್ಮನಿರಿ ನಾನು ಕೇಳುತ್ತೇನೆ” ಎಂದು ಅನ್ಯ ತಬುರುಗಳನ್ನೆಲ್ಲಾ ಸುಮ್ಮನಿರಿಸಿ “ದೇವರೇ, ನಮ್ಮ ಸಮಸ್ಯೆ ಏನೆಂದರೆ, ನಾವು ಯಾವ ಮನುಜರನ್ನು ಕಡಿಯುತ್ತೇವೆಯೋ, ಆ ಮನುಜರು ನಮ್ಮನ್ನು ಹಿಸುಕಿ ಹಿಸುಕಿ ಸಾಯಿಸುತ್ತಿದ್ದಾರೆ. ಹಾಗಾಗಿ ’ಕಡಿದ ಕೂಡಲೇ ಸಾಯುವಂತೆ ವರ ನೀಡಿ ನಮಗೆ’’’ ಎಂದು ಬೇಡಿಕೆ ಸಲ್ಲಿಸುತ್ತದೆ. ಕೂಡಲೇ ದೇವರು “ತಥಾಸ್ತು” ಎಂದು ನುಡಿದು ಅದೃಶ್ಯರಾಗುತ್ತಾರೆ.

ಆ ತಬುರುಗಳೆಲ್ಲಾ ಸಂತೋಷದಿಂದ, “ಇನ್ನು ಕಡಿದ ಕೂಡಲೇ ಸಾವು, ಕಡಿದ ಕೂಡಲೇ ಸಾವು” ಎಂದು ಹಾಡುತ್ತಾ ಮರಳುತ್ತವೆ.

ಆಗ ನಾವು “ಆದರೆ ಇಂದಿಗೂ ಮನುಜ ಆ ತಬುರುಗಳು ಕಡಿದ ಕೂಡಲೇ, ಅವುಗಳನ್ನು ಹಿಸುಕಿ ಸಾಯಿಸುತ್ತಿದ್ದಾನೆ. ಮನುಜರು ಯಾರೂ ಆ ತಬುರುಗಳು ಕಡಿದ ಕೂಡಲೇ ಸಾಯಿತ್ತಿಲ್ಲವಲ್ಲಾ? ದೇವರಲ್ಲಿ ವರ ಪಡೆದು ಏನು ಪ್ರಯೋಜನವಾಯ್ತು?” ಎಂದು ಕೇಳಿದೆವು. ನಮ್ಮ ಈ ಪ್ರಶ್ನೆಗಳಿಗೆ ಅಪ್ಪಯ್ಯ ಉತ್ತರಿಸಿದ್ದು ಹೀಗೆ.

“ದೇವರು ವರ ಬೇಡಿಕೊಳ್ಳಿ ಅಂದಾಗ, ತಮಗೆ ಏನು ಬೇಕು ಅನ್ನುವುದನ್ನು ಅರಿತುಕೊಂಡು, ಒಂದಿಷ್ಟೂ ಅಪಾರ್ಥ ಅಥವಾ ಅನರ್ಥಗಳಿಗೆ ಎಡೆಮಾಡಿಕೊಡದಂತೆ, ಸ್ಪಷ್ಟವಾಗಿ, ಬೇಡಿಕೊಳ್ಳಬೇಕಿತ್ತು. ಆದರೆ, ಹಾಗೆ ಮಾಡುವ ಬದಲು ’ಕಡಿದ ಕೂಡಲೇ ಸಾಯುವಂತೆ ವರ ನೀಡಿ’ ಎಂದು ಬೇಡಿಕೊಂಡು, ಮೋಸ ಹೋಯಿತು.  ಹಾಗೆಯೇ, ನಮ್ಮ ಜೀವನದಲ್ಲಿ ನಮಗೆ ಏನು ಬೇಕು ಅನ್ನುವುದರ ಅರಿವು ನಮಗೆ ಚೆನ್ನಾಗಿ ಇರಬೇಕು. ಅದಿಲ್ಲವಾದರೆ, ನಮಗೆ ಒದಗುವ ಅವಕಾಶಗಳನ್ನು ನಾವು ಸದುಪಯೋಗಪಡಿಸಿಕೊಳ್ಳದೇ, ಅವು ನಮ್ಮ ಕೈತಪ್ಪಿಹೋಗುತ್ತವೆ”

*****


ಮಗಳಿಗೊಂದು ಸಂದೇಶ!

13 ಮೇ 12

ದಯವಿಟ್ಟು,
ನಿನ್ನ ಹೃದಯವನ್ನೇ
ದೇವ ಮಂದಿರವನ್ನಾಗಿ
ಇರಿಸಲು ಪ್ರಯತ್ನಿಸು,
ಆ ಭಗವಂತನನ್ನು
ಅಲ್ಲಿ ಶಾಶ್ವತವಾಗಿ
ನೆಲೆಯೂರುವಂತೆ
ಆಹ್ವಾನಿಸು.

ಆಮೇಲೆ,
ನಿನಗಾವ ಭಯವೂ ಇರದು,
ಪುರೋಹಿತ ವರ್ಗವು
ದೇವರ ಹೆಸರಿನಲ್ಲಿ ವ್ಯಾಪಾರ
ನಡೆಸುವ ದೇವಸ್ಥಾನಗಳೆಂಬ
ಸ್ಥಳಗಳಿಗೆ ಓಡಾಡುವ
ಆವಶ್ಯಕತೆಯೂ ಇರದು!
____________


ದೇವಾ, ನೈವೇದ್ಯ ಸಿಗದಿದ್ದರೆ ಬೇಡ ಕೋಪ!

30 ಆಗಸ್ಟ್ 11

 

ಲಂಚ ಪಡೆಯುವುದೂ ತಪ್ಪು ಹಾಗೂ ಲಂಚ ಕೊಡುವುದೂ ತಪ್ಪು
ಮಹಾತ್ಮ ಹಜಾರೆ ನಮ್ಮೆಲ್ಲರ ಕಣ್ಣು ತೆರೆಸಿದ್ದಾರೆ, ನೀನೂ ಒಪ್ಪು

ಪರರಿಗೆ ಅನ್ಯಾಯವಾಗದಂತೆ ಬಾಳುವುದದು ನಮ್ಮ ಕರ್ತವ್ಯ
ನಮಗೆ ಒಳ್ಳೆಯದಾಗುವಂತೆ ಸಹಕರಿಸುವುದು ನಿನ್ನ ಕರ್ತವ್ಯ

ನಮ್ಮ ಸತ್ಕರ್ಮಗಳೇ ನಮ್ಮನ್ನು ಕಾಪಾಡಬೇಕು ಎಂಬ ನಂಬಿಕೆ
ನಮ್ಮ ಕುಕರ್ಮಗಳಿಂದಲೇ ನಮಗೆ ಶಿಕ್ಷೆ ಎಂಬುವುದೂ ನಂಬಿಕೆ

ನಾವು ಏನೆಂಬುದ ನೀನು ಅರಿತಿರುವೆ ಹಾಗಾಗಿ ನಮಗಿಲ್ಲ ಭಯ
ನಮ್ಮ ಅರ್ಹತೆಗೆ ತಕ್ಕುದಾದುದೇ ದಕ್ಕುವುದು ಅದು ನಿನ್ನ ನ್ಯಾಯ

ಎಲ್ಲವೂ ನಮ್ಮ ಆಚಾರ ವಿಚಾರಗಳಿಂದಲೇ ಆಗಬೇಕು ನಿರ್ಧಾರ
ಹಾಗಾಗಿ ನಿನಗೆ ಲಂಚ ನೀಡಲಾರೆವಿನ್ನು, ಇದು ನಮ್ಮ ನಿರ್ಧಾರ

ಇನ್ನು ನಿನಗೆ  ಪೂಜೆ, ನೈವೇದ್ಯ, ಕಾಣಿಕೆ, ಸಿಗದಿದ್ದರೆ ಬೇಡ ಕೋಪ
ಅಣ್ಣರ ಕಣ್ಣುಗಳಿಗೆಲ್ಲಾದರೂ ಬಿದ್ದರೆ ನಮ್ಮಿಬ್ಬರ ಗತಿ, ಅಯ್ಯೋ ಪಾಪ

ಏಕೆಂದರೆ ಲಂಚ ಪಡೆಯುವುದೂ ತಪ್ಪು, ಲಂಚ ಕೊಡುವುದೂ ತಪ್ಪು
ಮಹಾತ್ಮ ಹಜಾರೆ ನಮ್ಮೆಲ್ಲರ ಕಣ್ಣು ತೆರೆಸಿದ್ದಾರೆ, ನೀನೂ ಒಪ್ಪು!
************************


ದೇವರ ಹುಂಡಿಗಳನೆಲ್ಲಾ ಬಡವರಲಿ ಹಂಚಿಬಿಡಿ…!

04 ಜನ 11

 

 

ದೇವರುಗಳಿಗೆ ಭಕ್ತ ಜನರು ಸಲ್ಲಿಸುವ ಪೂಜೆ ಪುನಸ್ಕಾರಗಳಿಗೆ,
ಪೂಜಾರಿಗಳೇ ದರ ನಿಗದಿಮಾಡಿ ಕಿತ್ತುಕೊಳ್ಳುತ್ತಿಹರಲ್ಲಾ ಇಲ್ಲಿ;

ತಮ್ಮ ಪ್ರಿಯ ದೇವರುಗಳು ಇನ್ನೂ ಬಹು ಪ್ರಿಯರಾಗುತಿಹರೆಂಬ,
ಮೂಢನಂಬಿಕೆಯಲ್ಲಿಯೇ ಭಕ್ತ ಜನರು ಇನ್ನೂ ಇದ್ದಿಹರಲ್ಲಾ ಇಲ್ಲಿ;

ಮಧ್ಯವರ್ತಿಗಳ ಜೋಳಿಗೆಗಳ ನಾನು ತುಂಬಿಸಿದರೆ ಆ ದೇವರು,
ಒಲಿಯುವರು ಎಂಬ ಭ್ರಮೆ ನನ್ನಲ್ಲಿ ಎಳ್ಳಷ್ಟೂ ಇಲ್ಲವೇ ಇಲ್ಲ ನಿಜದಿ;

ನನ್ನ ನಡೆ ನುಡಿಯ ಸ್ವತಃ ತಾನೇ ಅರಿಯರಾದೊಡೆ ಆ ದೇವರು,
ನನ್ನನ್ನು ಕಾಪಾಡುತಿಹರೆಂಬ ನಂಬಿಕೆ ಹೇಗಿರಬಹುದು ಈ ಮನದಿ;

ನಮ್ಮ ಈ ನಾಡಿನ ಸಾವಿರಾರು ದೇವಾಲಯಗಳ ಹುಂಡಿಗಳಲಿ,
ಅದೆಷ್ಟೋ ಸಂಪತ್ತು ಕೊಳೆತುಬಿದ್ದಿಹುದಲ್ಲಾ ಈ ಪರಿ ವ್ಯರ್ಥವಾಗಿ;

ಆ ಹುಂಡಿಗಳ ಬಗೆದು, ಬಡವರ ಗುಂಡಿಗೆಗಳಿಗೆ ತಂಪನ್ನೀಯುವ,
ಕಾರ್ಯ ನಡೆಸಿದರೆ ಯಾರೂ ಉಳಿಯರೀ ನಾಡಿನಲಿ ಬಡವರಾಗಿ!
***************************


ಹೀಗೊಂದು ದುರಾಲೋಚನೆ!

23 ಜೂನ್ 10

 

ದೇವರು ಸದ್ಗುಣಿಗಳನ್ನು

ಸನ್ನಡತೆಯುಳ್ಳವರನ್ನು

ಬೇಗ ಬೇಗನೇ ತನ್ನೆಡೆಗೆ

ಕರೆದುಕೊಳ್ಳುತ್ತಾನೆಂಬರು

 

ಅಂತೆಯೇ ದುರ್ಗುಣಿಗಳನ್ನು

ಈ ಲೋಕದಲ್ಲೇ ಹೆಚ್ಚು

ಹೆಚ್ಚು ಕಾಲ ನರಳುತ್ತಿರಲು

ಬಿಟ್ಟುಬಿಡುತ್ತಾನೆಂಬರು

 

ಅದಕ್ಕೇ ನನ್ನ ಮನಸ್ಸು

ಯೋಚಿಸುತ್ತದೆ ಇಂದು

ಸದ್ಗುಣ ಸನ್ನಡತೆಗಳ

ಬೆಳೆಸಿಕೊಂಡು ನಾ ಬೇಗ ಮರಳಲೇ?

 

ಅಥವಾ

 

ನನ್ನ ಆಯುಷ್ಯವನ್ನು ಇನ್ನೂ

ಹೆಚ್ಚಿಸಿಕೊಳ್ಳುವತ್ತ ನಾನು

ದೃಢಚಿತ್ತದಿಂದ ಇಂದಿನಿಂದಲೇ

ಕಾರ್ಯೋನ್ಮುಖನಾಗಲೇ?

**************


ದೇವರೇ ರಜೆ ಹಾಕಿದರೇ?

26 ಮೇ 10

 

ನಡೆಯಲು

ಅಪ್ಪಣೆಕೊಟ್ಟು

ಕಾಲುಗಳನ್ನು

ನೀಡಿದವನ

ಮಾತನ್ನೇ ಮೀರಿ

ರೆಕ್ಕೆ ಕಟ್ಟಿಕೊಂಡು

ಬಾನಿನಲ್ಲಿ ಹಾರುವ

ಹಾರಾಟ ಇಲ್ಲಿ

 

ಎಲ್ಲವೂ ನಿನ್ನದೇ

ಹಾಗಾದರೆ

ನನ್ನದೇನಿಲ್ಲವೇ

ಎಂದ ಆ ದೇವರು

ಮುನಿಸಿಕೊಂಡು

ನೀನೇ ನೋಡಿಕೋ

ಎಂದು ಒಮ್ಮೊಮ್ಮೆ

ತೆರಳುತ್ತಾನೆ

ರಜೆಯಲ್ಲಿ

 

ಆಗ ನೋಡಿ

ಹಾರಾಡುವ

ಬಾನಾಡಿಗಳು

ಕಾರಣವೇನೂ

ಇಲ್ಲದೆಯೇ

ರೆಕ್ಕೆಮುರಿದು

ನೆಲಕ್ಕಪ್ಪಳಿಸುತ್ತವೆ

 

ಅಮಾಯಕ

ಜೀವಗಳು

ದೇವರ ಮನೆಯನ್ನು

ಸೇರಿ ಆತನನ್ನು

ಬೇಡಿ ರಜೆಯಿಂದ

ಮರಳಿ ಕೆಲಸಕ್ಕೆ

ಹಾಜರಾಗಿಸುತ್ತವೆ!

***************


ನೀನಿಂತಾಗೆನಗೆ ದೇವ ದರ್ಶನವಾಯ್ತು!

17 ಮೇ 10

 

ನಿನ್ನ ನಗುವಲ್ಲಿ ಚಂದಿರನ ಚೆಲುವ ನಾ ಕಂಡೆ

ಚಂದಿರನ ಚೆಲುವಲ್ಲಿ ನಿನ್ನ ಮೊಗವ ನಾ ಕಂಡೆ

 

ನಿನ್ನ ಒಯ್ಯಾರ ನನ್ನ ಮನದಲಿ ಚಿತ್ತಾರವಾಯ್ತು

ನಾ ಬಿಡಿಸಿದ ಚಿತ್ರದಲಿ ನಿನ್ನನ್ನೇ ಕಂಡಂತಾಯ್ತು

 

ನಡೆಯಲ್ಲಿ ಆ ಹಂಸವನೇ ನೀನು ನಾಚಿಸಿದ ಕಂಡೆ

ಹಂಸದ ಆ ನಡೆಯಿಂದ ನಾನಿನ್ನ ನೆನಪಿಸಿಕೊಂಡೆ

 

ನೀನೆನ್ನ ಕೂಗಲು ಕೋಗಿಲೆಯೇ ಕೂಗಿದಂತಾಯ್ತು

ಕೋಗಿಲೆ ಕುಹೂ ಎನಲು ನೀನೇ ಕರೆದಂತಾಯ್ತು

 

ದೇವರ ಧ್ಯಾನದಲ್ಲಿರಲು ಅಲ್ಲಿ ನಿನ್ನ ಕಂಡಂತಾಯ್ತು

ನೀ ಕಣ್ಮುಂದೆ ನಿಂತಾಗೆನಗೆ ದೇವ ದರ್ಶನವಾಯ್ತು

 

ನನ್ನ ಮನದೊಳಗಿಲ್ಲಿ ನಾನಿಲ್ಲ ಬರೀ ನೀನೇ ನೀನು

ನಿನ್ನ ಕಣ್ಣೊಳಗಣ ಬಿಂಬದಲಿ ಬರೀ ನಾನೇ ನಾನು!

*****


ಆಸುಮನಕ್ಕೆ ವರುಷ ತುಂಬುತಿರುವ ಹರುಷ!!!

11 ಫೆಬ್ರ 10

ಕಳೆದ ವರುಷ ಪ್ರೇಮಿಗಳ ದಿನಕ್ಕೆ ಒಂದು ದಿನ ಮೊದಲು

ಜನರು “ನಾಳೆ ಏನಾಗಬಹುದು” ಎಂದು ಕಾಯುತ್ತಲಿರಲು

 

ಪ್ರೀತಿಸುವವರನ್ನು ಬೆಂಬಲಿಸಲು ಆಸುಮನ ಸ್ಪಂದಿಸಿತ್ತು

’ಪಿಂಕ್’ ಚಡ್ಡೀ ಹಗರಣದವರಿಗಂದು  ಸವಾಲನ್ನೇ ಹಾಕಿತ್ತು

 

ಮತ್ತೆ ಎಂದಿಗೂ ಹಿಂದಿರುಗಿ ನೋಡದೇ ಮುನ್ನಡೆದು ಸರಾಗ

ಎರಡನೆಯ ವರುಷಕ್ಕೆ ಕಾಲಿಡುವ ಹುಮ್ಮಸ್ಸಿನಲ್ಲಿದೆ ಇದೀಗ

 

ಹದಿಮೂರರ ಶುಕ್ರವಾರ ಅವಲಕ್ಷಣ ಎಂಬುದಕೇ ಬದಲಾಗಿ

ಸಾಗುತ್ತಿದೆ ಫೆಭ್ರವರಿ ೧೩ರ ಶುಕ್ರವಾರದಂದೇ ಆರಂಭವಾಗಿ

 

ಈ ಮನ ಸ್ಪಂದಿಸಿದ ದಿನಗಳಂದೆಲ್ಲಾ ಮಿಡಿದಿತ್ತು ಆಸುಮನ

ಪಿಸು ಮಾತುಗಳ ಜೊತೆ ಜೊತೆಗೆ ಸ್ಪಂದಿಸಿತ್ತು ಓದುಗ ಮನ

 

ಬೆನ್ನು ತಟ್ಟಿ ಹುರಿದುಂಬಿಸುವ ಓದುಗರು ಇರುವಂತೆಯೇ ಇಲ್ಲಿ

ಸರಿ ಕಾಣದ್ದನ್ನು ಸರಿ ಅಲ್ಲವೆಂದು ಟೀಕಿಸುವವರು ಜೊತೆಯಲ್ಲಿ

 

ಬರೆದೆಲ್ಲಾ ಪುಟಗಳು ಇದನ್ನೂ ಸೇರಿಸಿ ಇನ್ನೂರು ಆಗುತ್ತಿರುವಾಗ

ಭೇಟಿಗಳ ಸಂಖ್ಯೆ ಹದಿನೈದು ಸಾವಿರದ ಗಡಿ ತಲುಪಿದೆ ಇಲ್ಲೀಗ

 

ವರುಷ ಪೂರ್ತಿಯಾಗುತಿರುವಾಗ ನಾನು ಎಳೆಯ ಕಂದನಂತೆ

ಬೇಡುವೆನು ಪ್ರತ್ಯಕ್ಷ ದೇವರಾದ ಅಮ್ಮ ನನಗೂ ಹರಸುವಂತೆ

 

ಓದುಗರ ನಿರೀಕ್ಷೆಯ ಮೀರಿ ಬೆಳೆವ ಪ್ರಯತ್ನದಿ ಸದಾ ಇರುವೆ

ಓದುಗರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತಿರುವೆ

 

ಆಸುಮನಕ್ಕೆ ಇದೀಗ ನಿಜಕ್ಕೂ ವರುಷ ತುಂಬುತಿರುವ ಹರುಷ

ಇದು ಹೀಗೆಯೇ ಮಿಡಿಯುತಿರಲೆಂದು ಹರಸಿ ವರ್ಷಾನುವರುಷ!

*****************************************


ಮೆಳ್ಳೆಗಣ್ಗಳ ಓ ನನ್ನ ಗೆಳತೀ!!!

10 ಡಿಸೆ 09

 

“ಗೆಳತೀ ನಿನ್ನಾ ಮೆಳ್ಳೆಗಣ್ಗಳ ಬಗ್ಗೆ ಅರ್ಧ ಕವನ ಬರೆದಿಟ್ಟಿರುತ್ತೇನೆ

ಪೂರ್ತಿ ಆದಾಗ ನಿನಗದನು ತೋರಿಸಿ ಮತ್ತೆ ಅಲ್ಲಿ ಪ್ರಕಟಿಸುತ್ತೇನೆ”

 

ಅರೇ, ನನ್ನನ್ನೇ ಕೇಳದೆ ನನ್ನ ಬಗ್ಗೆ ಅದು ಹೇಗೆ ಬರೆದೆ ನೀನು

ನೀನು ಬರೆದುದನೆಲ್ಲಾ ಕಣ್ಮುಚ್ಚಿಕೊಂಡು ಒಪ್ಪಬೇಕೇನು ನಾನು”

 

“ನಿನ್ನನ್ನು ಕೇಳದೇ ನಿನ್ನ ಮೆಳ್ಳೆಗಣ್ಗಳ ಬಗ್ಗೆ ಬರೆದಿದ್ದರೂ ಗೆಳತೀ

ನಿನ್ನ ಕೇಳಿಯೇ ಅದನು ಪ್ರಕಟಿಸುತ್ತೇನಂದೆನಲ್ಲ ಮಹರಾಯಿತೀ

 

ನಿನ್ನ ಭೇಟಿ ಆಗಬೇಕೆಂಬ ಇಚ್ಛೆ ಆದಾಗಲೆಲ್ಲಾ ನಾನಿನ್ನ ಬೇಡುತ್ತಿದ್ದೆ

ಪ್ರತಿ ಬಾರಿಯೂ ನೀನಾ ಮೆಳ್ಳಗಣ್ಗಳ ನೆಪಹೇಳಿ ಹೆದರಿಸುತಲಿದ್ದೆ”

 

“ಮೆಳ್ಳಗಣ್ಗಳು ನೆಪ ಅಲ್ಲ ಮತ್ತೆ ಆ ಮಾತು ಬರಿದೆ ಹೆದರಿಸಲೂ ಅಲ್ಲ

ನೀನೆಂದಾದರೂ ಭೇಟಿ ಆದಾಗ ನಿನಗೆ ನಿರಾಸೆಯಾಗಬಾರದಲ್ಲಾ

 

ಕಣ್ಗಳ ವಾಸ್ತವ ನಿನಗೆ ಗೊತ್ತಿರಲೆಂಬುದಷ್ಟೇ ನನ್ನೀ ಮನದ ಇಚ್ಛೆ

ನನ್ನನ್ನು ಭೇಟಿ ಆಗಲೇ ಬೇಕೆಂದು ನೀ ಹಿಡಿಯದಿರು ಹೀಗೆ ರಚ್ಚೆ”

 

“ನಿನ್ನನ್ನು ನಾ ಭೇಟಿ ಆದಾಗ ನನಗಾವ ನಿರೀಕ್ಷೆಯೂ ಇದ್ದಿರುವುದಿಲ್ಲ

ನಿರೀಕ್ಷೆಯೇ ಇಲ್ಲದಿದ್ದಲ್ಲಿ ನಿರಾಸೆಯ ಮಾತೂ ಅಲ್ಲಿ ಉಳಿದಿರುವುದಿಲ್ಲ

 

ನಿನ್ನ ನಿರ್ಮಲ ಸ್ನೇಹದ ಆಕಾಂಕ್ಷಿ ನಾನು ಬೇರೇನೂ ಬಯಸುವವನಲ್ಲ

ಭೇಟಿ ಆಗುವ ಇಚ್ಛೆ ಇದೆ ಸುಳ್ಳೇಕೆ ನಾನದನು ಮುಚ್ಚಿಡ ಬಯಸುವುದಿಲ್ಲ

 

ಭೇಟಿ ಆಗಲೇ ಬೇಕೆಂದೇನೂ ಇಲ್ಲ ಅದ ಒಪ್ಪುವುದು ಬಿಡುವುದು ನಿನ್ನಿಚ್ಛೆ

ದೇವರಲಿ ಭಕ್ತ ಬೇಡುವನು ವರ ನೀಡುವುದು ಬಿಡುವುದು ಅದು ದೈವೇಚ್ಛೆ”

 

“ಭೇಟಿ ಆಗಲೇ ಬೇಕೆಂದಿದ್ದರೆ ನಮ್ಮ ಭೇಟಿ ಆಗಿಯೇ ಆಗುವುದು ಸುಳ್ಳಲ್ಲ”

“ಭೇಟಿಯ ಬೇಡದೇ ಸುಮ್ಮನೆ ಕೂರುವವನು ಈ ನಿನ್ನ ಗೆಳೆಯನೂ ಅಲ್ಲ

 

ಪ್ರೀತಿ ಮತ್ತು ಭಕ್ತಿ ಇವೆರಡೂ ಸಮಾನ ಎಂದು ಭಾವಿಸುವವನು ನಾನು

ಸ್ನೇಹಿತರ ನಡುವೆ ನಿರ್ಮಲ ಪ್ರೀತಿ ಇದೆಯೆಂದು ನಂಬುವವನು ನಾನು”

 

“ಸ್ನೇಹವೆಂದರೇ ಅದು ನಿರ್ಮಲತೆ ಎಂದು ಸದಾ ನಂಬಿದವಳು ನಾನು

ನಿನ್ನಂತೆಯೇ ನಮ್ಮ ಭೇಟಿಗಾಗಿ ನಿಜದಿ ಹಾರೈಸುತ್ತಿರುತ್ತೇನೆ ನಾನೂ”

*********************************************