ನಾವೇ ಏಣಿಯಾಗೋಣ!

22 ಮಾರ್ಚ್ 12


ಸಖೀ,
ಜೀವನವಿಡೀ
ಪರರ ಕೈ ಹಿಡಿದು
ನಡೆದದ್ದು ಸಾಕು,

ಪರರ ನೆರವಿಗಾಗಿ
ಕಾದದ್ದೂ ಸಾಕು,

ಇನ್ನೊಬ್ಬರನ್ನು
ಏಣಿಯಾಗಿಸಿಕೊಂಡು
ಮೇಲೇರಿದ್ದೂ ಸಾಕು.

ಬಾ ಸಖೀ,
ನಾವಿನ್ನು ಪರರಿಗಾಗಿ
ಬಾಳೋಣ,

ಅಳುವವರ ನೋವನಳಿಸಿ
ಅವರ ನಗಿಸೋಣ,

ನಡೆಯಲಾಗದವರಿಗೆ ನಾವೇ
ಊರುಗೋಲಾಗೋಣ,

ದೃಷ್ಟಿಹೀನರ ಕಣ್ಣ
ಜ್ಯೋತಿಯಾಗೋಣ,

ಕೇಳಲಾಗದವರಿಗೆ
ನಾವೇ ಕಿವಿಗಳಾಗೋಣ,

ಜೀವನದಲಿ ಏರಲಾಗದವರಿಗೆ
ನಾವೇ ಏಣಿಯಾಗೋಣ,

ಅಲ್ಲಿ – ಇಲ್ಲಿ -ಎಲ್ಲಿ
ಎಂದು ಹುಡುಕುವುದ ಬಿಟ್ಟು,
ನಮ್ಮ ನೆರೆಹೊರೆಯವರಲ್ಲೇ
ಆ ದೇವರ ದರುಶನವ ಮಾಡೋಣ.

ತಂತಾನೇ,
ನಿರಾಯಾಸವಾಗಿ ತುಂಬುತಿರುವ
ನಮ್ಮ ಪಾಪದ ಕೊಡವ
ಸರಿತೂಗಿಸಲು,
ಪುಣ್ಯದ ಕೊಡವ ನಾವೇ
ಕೈಯ್ಯಾರೆ ತುಂಬಿಸಲೆತ್ನಿಸೋಣ.

ಬಾ ಸಖೀ,
ಪರರಿಗೆ ನಾವೇ
ಏಣಿಯಾಗೋಣ!
*-*-*-*-*-*


ಹೇಳು ಬೇರೇನು ಬೇಕು!

10 ಜುಲೈ 10

ಸಖೀ, 

 

ನಿನ್ನ ನಗುವಿನಲ್ಲಿ ಅದೇನೋ ಇದೆ ಹೊಸತು

ಆ ಕಣ್ಣುಗಳಲ್ಲಿ ನಿಜಕ್ಕೂ ಅದೇನೋ ಮಾತು

 

ನೀ ನನ್ನಲ್ಲಿ ಏನೇನೋ ನುಡಿಯುತಿರುವಂತೆ

ನಾನು ದೇಹವೆಲ್ಲಾ ಕಿವಿಯಾಗಿ ಆಲಿಸುವಂತೆ

 

ಎಲ್ಲಿ ಕಲಿತೆ ಕಣ್ಣುಗಳಲ್ಲೇ ಮಾತನಾಡೋ ವಿದ್ಯೆ?

ನಗುವಿನಲ್ಲೇ ನನ್ನ ಈ ತರಹ ಬಂಧಿಸಿಡುವ ವಿದ್ಯೆ?

 

ಬಯಸಿದರೂ ನನಗೆ ಈಗ ಮಾತೇ ಬರುವುದಿಲ್ಲ

ಆ ಮೊಗವ ನೋಡುವ ನನ್ನೀ ದೃಷ್ಟಿ ಕದಲುವುದಿಲ್ಲ

 

ಮಾತುಕತೆ ಒಂದೂ ಬೇಡ ನೋಟವೊಂದೇ ಸಾಕು

ನಿನ್ನ ಸನಿಹ ಇದ್ದರೆನಗೆ ಹೇಳು ಬೇರೆ ಏನು ಬೇಕು?

*************************