ನಿನ್ನ ಸಂದೇಶಕ್ಕಾಗಿ ಕಾಯುತ್ತಿದ್ದೇನೆ ನೋಡು!

03 ಮೇ 10

 

ಇಂದಿನ ಶುಭೋದಯದ

ಸಂದೇಶ ಏಕೋ ಸಪ್ಪೆಯೆಂದೆನಿಸಿತು

 

ನಿನ್ನ ಮನದಲ್ಲಿ ನೆಮ್ಮದಿ ಇಲ್ಲ

ಎಂಬ ಭಾವನೆ ನನ್ನನ್ನು ಆವರಿಸಿತು

 

ಅದು ನಿಜವೋ ಸುಳ್ಳೋ

ಎಂಬ ಪ್ರಶ್ನೆ ಮಾಡಿದೆ ನಾನಿನಗೆ

 

ಊಹೆ ನಿಜವಾದ ಸಂತಸದ

ಜೊತೆಗೆ ಈಗ ಬೇಸರವೂ ಇದೆಯೆನಗೆ

 

ನಿನ್ನ ಮನದ ದುಗುಡಕ್ಕೆ

ಕಾರಣ ಏನೆಂದು ನಾ ಕೇಳುವುದಿಲ್ಲ

 

ಯಾರಿಂದಾಗಿ, ಯಾಕಾಗಿ ಎಂಬ

ಪ್ರಶ್ನೆಗಳ ಸುರಿಮಳೆಗೈಯುವುದಿಲ್ಲ

 

ಕೆದಕಿದಷ್ಟೂ ಮನದ ದುಗುಡ

ಹೆಚ್ಚಾಗಬಹುದು ಎಂಬುದ ನಾಬಲ್ಲೆ

 

ಅದಕೇ ನಾ ಬೇರೇನನ್ನೂ

ಕೇಳದೇ ಈಗ ಮೌನವಾಗಿರುವೆನಲ್ಲೇ

 

ಕದಡಿದ ಕೊಳದ ನೀರನ್ನು

ಮುಟ್ಟದೇ ಬಿಟ್ಟರಷ್ಟೇ ತಿಳಿಯಾಗಬಹುದು

 

ಕಾಲದ ಮಾಯೆಯಿಂದ ನೋಡು

ಮನದ ದುಗುಡವೂ ಮರೆಯಾಗಬಹುದು

 

ನಿನಗಿಷ್ಟವಾದಾಗ ಮನದ ಮಾತ

ಹಂಚಿಕೊಂಬ ನಿರ್ಧಾರ ನೀನು ಮಾಡು

 

ನಿನ್ನ ಕಡೆಯಿಂದ ಬರುವ ಮುಂದಿನ

ಸಂದೇಶಕ್ಕಾಗಿ ನಾ ಕಾಯುತ್ತಿದ್ದೇನೆ ನೋಡು!!!

 

****************************