ಯಾಕಿಷ್ಟು ಕಾಡ್ತೀಯಾ?

13 ಸೆಪ್ಟೆಂ 11

 

 “ಯಾಕಿಷ್ಟು ಕಾಡ್ತೀಯಾ,
ದೂರದಿಂದಲೇ ಕೊಲ್ತೀಯಾ,
ಹಗಲಿರುಳೂ ನೀನು ನನ್ನ
ನೆನಪಲ್ಲೇ ಇರ್ತೀಯಾ?”;
***

“ಇಂತಹ ಪ್ರಶ್ನೆಗಳಿಗೆ
ಉತ್ತರವಿಲ್ಲ ನನ್ನಲ್ಲಿ,
ಉತ್ತರವಿಲ್ಲದ ಪ್ರಶ್ನೆಗಳು
ಇಲ್ಲದಿರಲಿ ನಿನ್ನಲ್ಲಿ”;
***

“ಉತ್ತರ ನೀಡಲಾಗದಂಥ
ಪ್ರಶ್ನೆಗಳನ್ನು ಪದೇ ಪದೇ
ಕೇಳುತ್ತಾ ಇರುವಾಸೆ,
ನಿನ್ನ ಮನದ ಸಾಗರದಲ್ಲಿ
ನನ್ನ ನೆನಪಿನಲೆಗಳನ್ನು
ಜೀವಂತವಾಗಿ ಇರಿಸುವಾಸೆ”;
***

“ಹೂಂ… ನಿನ್ನ ನೆನಪು
ಎಂದಿದ್ದರೂ ಜೀವಂತವೇ…
ಅದು ಮರೆಯಾದರೆ ನಿಜದಿ
ಅದೆನ್ನ ಕೊನೆಯ ದಿನವೇ”;
***

“ನೀನು ಬೇಡವೆಂದರೆ ನಿನ್ನ
ನೆನಪೆಂದಲ್ಲ ನಿನ್ನ ಕನಸಲ್ಲೂ
ನಾನು ಸುಳಿಯುವುದೇ ಇಲ್ಲ,
ಒಂದೊಮ್ಮೆ ನಾವಳಿದರೂ
ನಮ್ಮ ಈ ಪ್ರೀತಿ ಮಾತ್ರ
ಎಂದೆಂದಿಗೂ ಅಳಿಯುವುದಿಲ್ಲ”
***

“ಅಯ್ಯೋ ಬೇಕು ಅಥವಾ ಬೇಡ
ಎಂಬ ಪ್ರಶ್ನೆಯೇ ಇಲ್ಲ ಕೇಳು,
ನಿನ್ನಯ ಮನಸ್ಸಿನ ಮೇಲೆ ನನ್ನ
ಹಿಡಿತ ಸಾಧ್ಯವೇ ನೀನೇ ಹೇಳು,
ನಿನಗೋ ಇಹುದು ಪೂರ್ತಿ ಸ್ವಾತಂತ್ರ್ಯ
ಏನು ಬೇಕಾದರೂ ಹೇಳು ನೀನು,
ನಿನ್ನ ಮಾತುಗಳಿಗೆ ಕಿವಿಯಾಗಿ ಸದಾ
ಹೀಗೆಯೇ ಆಲಿಸುತ್ತಾ ಇರುವೆ ನಾನು!”
***  


ಹೆಮ್ಮಕ್ಕಳ ಹರಸೋಣ!!!

01 ಜುಲೈ 09

ಇಂದು ಹೊಸ ದಿನ
ಇಂದು ಹೊಸ ತಿಂಗಳು
ಇಂದು ಹೊಸ ವಿಚಾರ ಬರಲಿ
ಇಂದು ಮನಕೆ ಹೊಸ ತಿನಿಸು ಸಿಗಲಿ

ಹಳಸಲು ವಿಚಾರ ಹಳಸಲು ತಿಂಡಿಯ ಮೆಲುಕು
ಹಾಕಿ ಕಳೆದಾಯ್ತು ಆ ಆರನೆಯ ತಿಂಗಳು
ಈ ವರುಷವೂ ಹಳತಾಗುವ ಮೊದಲು
ಈ ವರುಷವೂ ಹಳಸಲಾಗುವ ಮೊದಲು

ಹೆಮ್ಮಕ್ಕಳ ದಿನದಂದು ನಾವೆಲ್ಲಾ
ಹೆಮ್ಮಕ್ಕಳ ಹರಸೋಣ
ಹೆಮ್ಮಕ್ಕಳನು ಪಡೆದ ಹೆಮ್ಮೆಯ
ಮಾತಾಪಿತರನು ನಾವೆಲ್ಲರೂ ಸೇರಿ
ಅಭಿನಂದಿಸೋಣ!!!

“ಇದು ಯಾವುದೋ ಪಾಶ್ಚಾತ್ಯ ಆಚರಣೆಯ ನಕಲು ಮಾಡುವುದಕ್ಕಷ್ಟೇ ಅಲ್ಲ
ಒಳ್ಳೆಯದು ಯಾವ ದಿಕ್ಕಿನಿಂದ ಬಂದರೂ ನಾವದನು ಅನುಸರಿಸಬಹುದಲ್ಲಾ?”