ಗಂಡ ನೀಡಬೇಕಂತೆ ಹೆಂಡತಿಗೆ ಸಂಬಳ!

06 ಸೆಪ್ಟೆಂ 12

ಹೆಂಡತಿಗಿನ್ನು ಗಂಡ ನೀಡಬೇಕಂತೆ ತಿಂಗಳ ಸಂಬಳ
ಏನು ಗತಿ ಆಕೆ ಕೇಳಿದರೆ ಸಂಬಳದೊಂದಿಗೆ ಗಿಂಬಳ?

ಕೆಲಸದಾಕೆಯಂತೆ ನೋಡ್ತಾರೆ ನನ್ನನ್ನು ಅನ್ನುವಂತಿಲ್ಲ 
ತನ್ನ ಸಂಬಳ ಪಡೆದು ಸುಮ್ಮನೇ ಕೂರುವಂತಾಯ್ತಲ್ಲ

ಕೆಲಸದಾಕೆ  ತೋರಿಸಲಿದ್ದಾಳಿನ್ನು ನೋಡಿ, ಕರಾಮತ್ತು
ನಿಮ್ ಹೇಂಡ್ತೀರೂ ನಾನೂ ಒಂದೇ ಈ ಮನೆಯ ತೊತ್ತು

ಸಾಮ್ಯತೆಯ ಮೆರೆಯಲು ಕೇಳಬಹುದು ನೀಡೆಂದು ಸೊತ್ತು
ಸೊತ್ತಿನಾ ಮಾತಿರಲಿ ಏನಾದೀತು ಕೇಳಿದರಾಕೆ ಮುತ್ತು?

ಈ ಸರಕಾರ ಇನ್ನೇನೇನು ಮಾಡಲಿದೆಯೋ ಅವಾಂತರ
ನಾಳೆ ಮಕ್ಕಳಿಗೂ ಸಂಬಳ ನೀಡಿ ಅಂದ್ರೆ ಗಂಡಾಂತರ!

ಸಂಬಳ ನೀಡದಿರೆ ಪತ್ನಿ ದೂರು ನೀಡುವಂತೆಯೂ ಇಲ್ಲ
ಪತಿಗೆ ಜೈಲಾದರೆ ಮನೆಯ ಜವಾಬ್ದಾರಿ ಹೊರಬೇಕಲ್ಲ?
*****


ಮುತ್ತು – ತೊತ್ತು!!!

22 ಆಕ್ಟೋ 09

 

ಅಂದು,

ಎನ್ನ ನಗುವಿಗೆ

ಬೇಕಿತ್ತು ನಿಮ್ಮ ಮುತ್ತು

ಎನ್ನ ಅಳುವಿನಲೂ

ಸಾಕಿತ್ತು ನಿಮ್ಮ ಮುತ್ತು

ನಾ ಗೆದ್ದಾಗ, ಬಿದ್ದಾಗ

ನಿಂತಾಗ, ಕುಂತಾಗ

ಮತ್ತದೇ ಮುತ್ತು

ಅಮ್ಮ,

ನೀವು ಕೊಡುತ್ತಿದ್ದ

ಪ್ರೀತಿಯ ಮುತ್ತು

 

ಇಂದು,

ಮುತ್ತನೀಯಲು

ನಿಮಗೆ ತ್ರಾಣವಿಲ್ಲ

ಇಂದು ಎನಗದು

ಬೇಕೆಂದೂ ಇಲ್ಲ

ನೀವು ಬಿದ್ದಾಗ

ಎದ್ದಾಗ ನಿಂತಾಗ

ಕುಂತಾಗ ಅತ್ತಾಗ

ಆಧರಿಸಲೆನಗೆ

ಇಲ್ಲ ವ್ಯವಧಾನ

ಇಲ್ಲ ಪುರುಸೊತ್ತು

 

ಅದಕ್ಕಾಗಿ ನಿಮ್ಮ

ಯೋಗ ಕ್ಷೇಮ

ವಿಚಾರಿಸಲು,

ನಾನಂದಂತೆ

ಕೇಳಿ ದುಡಿಯಲು,

ಸದಾ ಸಿದ್ಧಳಿದ್ದಾಳೆ

ಈಗ ನಮ್ಮ

ಮನೆಯಲ್ಲೊಂದು

ತೊತ್ತು!

 ಆತ್ರಾಡಿ ಪೃಥ್ವಿರಾಜ್ ಹೆಗ್ಡೆ