ಮಗಳ ಭವಿಷ್ಯಕ್ಕಾಗಿ ನಿಮ್ಮ ಹಾರೈಕೆಗಳಿರಲಿ!!!

25 ಆಗಸ್ಟ್ 09
 

ಇನ್ನು ನಾಲ್ಕು ದಿನ ನಾ ಬರುವುದಿಲ್ಲ ಇಲ್ಲಿಗೆ
ಹೊರಟು ನಿಂತಿಹೆನು ಕರಾವಳಿಯ ಊರಿಗೆ
 
ಮಗಳೀಗ ತನ್ನ ಜೀವನದ ಹೊಸ ತಿರುವಿನಲ್ಲಿ
ಇನ್ನವಳು ಇರಬೇಕು ಇಲ್ಲಲ್ಲ ವಸತಿ ಗೃಹದಲ್ಲಿ
 
ಹೊಸ ಊರು ಹೊಸ ಜನರು ಹೊಸ ಹುಮ್ಮಸ್ಸು
ಹೊಸತೆಲ್ಲವನೂ ಬರಮಾಡಿಕೊಂಬ ಆ ವಯಸ್ಸು
 
ಪುಣ್ಯಕೋಟಿ ಕರುವನು ಬಿಟ್ಟು ಹೋದ ಆ ಕವಿತೆ
ನೆನಪಾದರೂ ಅಷ್ಟೇನೂ ಇಲ್ಲ ಈ ಮನದಿ ವ್ಯಥೆ
 
ನಾಳೆಯ ದಿನಗಳು ಹೇಗೋ ದೇವರಿಗೇ ಗೊತ್ತು
ಮನದ ತುಂಬ ಆಶಾ ಭಾವನೆಗಳಿವೆ ಈ ಹೊತ್ತು
 
“ಡಾಕ್ಟ್ರ” ಮಗನೆಂದು ಕರೆಸಿಕೊಂಡೇ ಬೆಳೆದವನು
“ಡಾಕ್ಟ್ರ” ಅಪ್ಪನೆಂದು ಕರೆಸಿಕೊಳ್ಳಲು ಕಾಯುವೆನು
 
ನನ್ನ ಒಳಗಿರುವ ಅಪೂರ್ಣ ಆಶಯಗಳನು ನಾನು
ಆಕೆಯ ಮುಖಾಂತರ ಪೂರೈಸ ಹೊರಟಿಹೆನೇನು
 
ನನ್ನದೋ ಅವಳದೋ ಆಶಯಗಳು ಪೂರೈಸಲಿ
ಅವಳ ಭವಿಷ್ಯಕ್ಕಾಗಿ ನಿಮ್ಮೆಲ್ಲರ ಹಾರೈಕೆಗಳಿರಲಿ