ಎಲ್ಲರೂ ಒಂದೊಂದು ತರಹದ ತಾಜ್ ಮಹಲ್ ಇದ್ದಂತೆ!!!

16 ನವೆಂ 09

ನನ್ನ ತಮ್ಮ ಪೃಥ್ವಿರಾಜ್ ಮತ್ತು ನನ್ನ ನಡುವೆ ನಿನ್ನೆ ಸಾಯಂಕಾಲ ನಡೆದ ಸಂದೇಶಗಳ ವಿನಿಮಯ ಹೀಗಿತ್ತು:

 

ನಾನು:

ತಮ್ಮಾ,

ಇತ್ತೀಚೆಗಿನ ದಿನಗಳಲ್ಲಿ ನಿನ್ನ ಮನದಲ್ಲಿ ಏನೋ ಗೊಂದಲ ಇರುವಂತೆ ಅನಿಸುತ್ತಿದೆ ನನಗೆ

ಈ ಗೊಂದಲಕ್ಕೆ ಕಾರಣ ನಾನಾಗಿದ್ದೇನೋ ಎಂಬ ಗೊಂದಲ ನನ್ನ ಮನದಲ್ಲಿದೆ.

ಪೃಥ್ವಿ:

ಇದು ನಿಮ್ಮ ತಪ್ಪು ಕಲ್ಪನೆ.

ಸಂದೇಶ ಕಂಡು ಆಶ್ಚರ್ಯ ಆಯ್ತು

ಆದರೆ ಒಂದು ನಿಜ, ಮನಸ್ಸು ಲೌಕಿಕತೆಗಿಂತ ಪಾರಮಾರ್ತಿಕತೆಯ ಬಗ್ಗೆ ಹೆಚ್ಚು ಆಲೋಚಿಸುತ್ತದೆ.

ವ್ಯಯಸಾಯದಂತೆ ಇದೂ ಸ್ವಾಭಾವಿಕ ಅಂತ ತಿಳಿದಿದ್ದೇನೆ.

ಇದಕ್ಕೆ ಯಾರೂ (ನೀವೂ) ಕಾರಣರಲ್ಲ.

ಹಾಗೇನಾದರೂ ನಿಮಗೆ ಅನಿಸಿದ್ದರೆ ಕ್ಷಮಿಸಿ.

ನಾನು:

ಸಂಪರ್ಕ ವಿರಳ ಆದಾಗ, ಅನುಮಾನ ಮೂಡುವುದು ಮತ್ತು ತನ್ನದೇ ಕಾರಣ ಕೊಡುವುದು ಸ್ವಾಭಾವಿಕ ಮತ್ತು ಅದು ಪರರ ಸಹಾಯದಿಂದ ನಡೆಸುವ ಆತ್ಮ ವಿಮರ್ಶೆಯೂ ಹೌದು.

ಆಧ್ಯಾತ್ಮಿಕ ಚಿಂತನೆ ಒಳ್ಳೆಯದು, ಆದರೆ ಒಂದು ಇನ್ನೊಂದಕ್ಕೆ ಪೂರಕ ಆಗಿದ್ದರೆ ಚೆನ್ನ, ಅದು ಭೌತಿಕತೆ ಮತ್ತು ಲೌಕಿಕತೆಗೆ ಮಾರಕ ಆಗದಂತೆ ಜಾಗ್ರತೆ ವಹಿಸು ತಮ್ಮಾ…

ಪೃಥ್ವಿ:

ಪ್ರಪಂಚದ ಪ್ರತಿಯೊಂದು ಆಗು ಹೋಗುಗಳೂ ಪೂರ್ವ ನಿರ್ಣಯಿತ.

ಎಲ್ಲವೂ ಕರ್ಮಾಧೀನ ಎಂಬುದು ಮತ್ತು ತಪ್ಪು ಮಾಡಿದವನಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂಬುದು ಶತಸಿದ್ಧ.

ಕೋರ್ಟು, ಪೋಲೀಸು ಸ್ಟೇಷನ್, ಇವೆಲ್ಲಾ ನಿಮಿತ್ತ ಮಾತ್ರ. ಇವುಗಳಿಂದ ಸರಕಾರ ನಡೆಯಬಹುದೇನೋ, ಆದರೆ ಪ್ರಪಂಚ ನಡೆಯುವುದಿಲ್ಲ.

ನಾನು:

ಅದು ನಿಜವಾದ ಮಾತು. ಅದನ್ನು ನಾನೂ ನಂಬುತ್ತೇನೆ ಮತ್ತು ಒಪ್ಪುತ್ತೇನೆ.

ಆದರೆ ಕೆಲವೊಮ್ಮೆ ಮನುಜ ಸಹಜವಾದ ಕೋಪ ಮತ್ತು ಬೇಸರ ಮನದಲ್ಲಿ ಸುಳಿಯುವುದೂ ನಿಜ.

ಪೃಥ್ವಿ:

ಅನ್ಯರಿಂದ ನಿರೀಕ್ಷಿಸುವುದಕ್ಕಿಂತ ಅನ್ಯರನ್ನು ಅವಲೋಕಿಸುವುದು ಹೆಚ್ಚು ಆರೋಗ್ಯಕರ.

ಎಲ್ಲರೂ ಒಂದೊಂದು ತರಹದ ತಾಜ್ ಮಹಲ್ ಇದ್ದಂತೆ.

ನಾವು ಅವರನ್ನು ಅವಲೋಕಿಸೋಣ.

ನಾನು:

🙂