ಅಮೂಲ್ಯ ನಾಲ್ಕು ಕ್ಷಣಗಳು!

09 ಫೆಬ್ರ 11

೭೭ನೇ ಸಾಹಿತ್ಯ ಸಮ್ಮೇಳನದ ಕೊನೆಯ ದಿನ ನಾನು ಹಾಜರಾಗಿದ್ದೆ. ಮುಂಜಾನೆಯ ಹಾಸ್ಯಗೋಷ್ಟಿಯಲ್ಲಿ ಪಾಲ್ಗೊಂಡಿದ್ದ ಶ್ರೀ ಕಬ್ಬಿನಾಲೆ, ಶ್ರೀಮತಿ ಭುವನೇಶ್ವರಿ ಹೆಗಡೆ, ಶ್ರೀ ಪ್ರಾಣೇಶ್ ಮತ್ತು ಶ್ರೀ ಕೃಷ್ಣೇ ಗೌಡರು ನಮ್ಮನ್ನು ಹಾಸ್ಯದ ಕಡಲಲ್ಲಿ ತೇಲಿಸಿದರಾದರೂ, ನಿರೂಪಕರು “ಆಸ್ಯ ಗೋಷ್ಟಿ … ಆಸ್ಯ ಕಲಾವಿದ … ಆಸ್ಯ ಆಸ್ಯ ” ಎನ್ನುತ್ತಾ ಪದೇ ಪದೇ ಹಾಸ್ಯಾಸ್ಪದರಾಗಿ, ಸಾಕಷ್ಟು ಕಿರಿಕಿರಿಯುಂಟುಮಾಡಿದ್ದರು.

ಸನ್ಮಾನ ಸಮಾರಂಭ ನೀರಸವೆನಿಸಿತ್ತಾದರೂ ನನ್ನ ಪರಿಚಯದ ಡಾ. ನಾ. ಸೋಮೇಶ್ವರ ಮತ್ತು ಡಾ. ಭಾಸ್ಕರಾನಂದ ಕುಮಾರ ಅವರ ಸನ್ಮಾನ ಮನಕ್ಕೆ ಮುದ ನೀಡಿತ್ತು.

ಶ್ರೀ ಸಾ.ರಾ.ಗೋವಿಂದು ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ ಯಾಕೆ ಮಾಡಿದ್ರು ಅನ್ನುವುದೇ ನನಗೆ ಕೊನೆಗೂ ಅರ್ಥ ಆಗಲಿಲ್ಲ.

ಇನ್ನು ನಿರೂಪಕಿ ಭಾನುಮತಿ ಸೋಮಶೇಕರ್ ಅವರಿಂದ ಶ್ರೀಮತಿ ಗಿರಿಜಾ ಲೋಕೇಶ್ ಅವರ ಪರಿಚಯ ಕೇಳಿ ಸುಸ್ತಾಗಿ ಬಿಟ್ಟೆ. “ಹತ್ತು ಹಲವು ದಶಕಗಳ ಕಾಲ ಚಿತ್ರರಂಗ ಮತ್ತು ಕಿರುತೆರೆಗಳಲ್ಲಿ ನಟಿಸಿರುವ….” ಅಂದಾಗ ಗಿರಿಜಾ ಲೋಕೇಶ್ ರಿಗೆ ನೂರು ವರುಷಗಳಿಗೂ ಹೆಚ್ಚು ಪ್ರಾಯ ಆಗಿದೆಯೇ ಅನ್ನುವ ಪ್ರಶ್ನೆ ನನ್ನ ಮನದಲ್ಲಿ ಮೂಡಿತು.

ಅಲ್ಲದೇ ಧನ್ಯವಾದ ಸಮರ್ಪಣೆ ಮಾಡುವಾಗ, ಸನ್ಮಾನ ಸಮಾರಂಭದಲ್ಲಿ ತಮ್ಮ ದಿವ್ಯ ಸಾನಿಧ್ಯವನ್ನು ನೆರವೇರಿಸಿಕೊಟ್ಟ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರ್ಶ್ರೀ ವಿರೇಂದ್ರ ಹೆಗ್ಗಡೆಯವರಿಗೆ ಧನ್ಯವಾದಗಳು ಅಂತ ಅಂದರು.  ಯಾರೇ ಆದರೂ ತಮ್ಮ ಸಾನಿಧ್ಯವನ್ನು ನೆರವೇರಿಸಿಕೊಡುವುದು ಹೇಗೋ ಅರ್ಥವೇ ಆಗಲಿಲ್ಲ.

ಜನಗಣಮನ  ಬ್ಲಾಗ್ ನ ಶ್ರೀ ರಾಕೇಶ್ ಶೆಟ್ಟಿಯವರನ್ನು ಪತ್ತೆ ಮಾಡಿ ಅವರೊಡನೆ ಭೋಜನಕ್ಕೆಂದು ಹೊರ ನಡೆದಾಗ ಸಂಪದಿಗ ಜಯಂತ್ ರಾಮಾಚಾರ್ ಬಂದು ತಮ್ಮ ವಿವಾಹದ ಆಮಂತ್ರಣ ಪತ್ರಿಕೆ ನೀಡಿ “ಖಂಡಿತ ಕುಟುಂಬ ಸಮೇತ ಬರಬೇಕು ಸಾರ್” ಎಂದು ಕರೆದು ಹೊದರು.

ಸಣ್ಣ ಉಪಾಹಾರಗೃದಲ್ಲಿ ಮೊಸರನ್ನ ತಿಂದು ವಾಪಸ್ಸಾದಾಗ ಸನ್ಮಾನ ಸಮಾರಂಭ ಇನ್ನೂ ಮುಂದುವರಿದಿತ್ತು. ನಾನು ಕೂತಲ್ಲೇ ತೂಕಡಿಸುತ್ತಾ, ಹಲವಾರು ನೀರಸ ಭಾಷಣಗಳಿಗೆ ಕಿವಿಯಾದೆ. ಅಂತೂ ಇಂತೂ ಸನ್ಮಾನ ಕಾರ್ಯಕ್ರಮ ಮುಗಿಯಿತು.

ಅಪರಾಹ್ನ ಮೂರೂವರೆಯ ಸಮಯ. ಬಹಿರಂಗ ಅಧಿವೇಷನದಲ್ಲಿ ಶ್ರೀ ಪುಂಡಲೀಕ ಹಾಲಂಬಿಯವರಿಂದ ನಿರ್ಣಯಗಳ  ಮಂಡನಾಕಾರ್ಯ ನಡೆಯುತ್ತಿತ್ತು. ಸಭಾಂಗಣದಿಂದ ಹಾಗೇ ಹೊರನಡೆದು ಬಂದಾಗ, ಮಾಧ್ಯಮ ಕೇಂದ್ರದ ಪಕ್ಕದಲ್ಲಿ ಸಾಲು ಸಾಲಾಗಿ ನಿಂತಿದ್ದ ರೋಗಿ ವಾಹನಗಳ (೧೦೮) ಎದುರುಗಡೆ ವಿಜಯಕರ್ನಾಟಕದ ತಾಂತ್ರಿಕ ಅಂಕಣ ಬರಹಗಾರ ಶ್ರೀಯುತ ಹಾಲ್ದೊಡ್ಡೇರಿ ಸುಧೀಂದ್ರ, ದಟ್ಸ್ ಕನ್ನಡ ಡಾಟ್ ಒನ್ ಇಂಡಿಯಾ ಡಾಟ್ ಇನ್ ನ ಸಂಪಾದಕ ಶ್ರೀಯುತ ಶ್ಯಾಮ್ ಸುಂದರ್, ಸಂಸತ್ ಸದಸ್ಯ ಶ್ರೀಯುತ ಜನಾರ್ದನ ಸ್ವಾಮಿ ಮತ್ತು ಓರ್ವ ಮಹಿಳೆ ನಿಂತಿದ್ದರು.

ಹಾಲ್ದೊಡ್ಡೇರಿಯವರನ್ನು ಮೊದಲೊಮ್ಮೆ ಭೇಟಿಯಾಗಿ ಪರಿಚಯಿಸಿಕೊಂಡಿದ್ದೆ. ಹಾಗಾಗಿ ಅವರತ್ತ ಮುಗುಳ್ನಗೆ ಬೀರಿ “ನಮಸ್ಕಾರ” ಅಂದೆ. ಶ್ಯಾಮಸುಂದರ್ ರಿಗೆ ಕೈಕೊಟ್ಟು ಕುಲುಕಿ, ಕಿವಿಯಲ್ಲಿ “ನಾನು ಆಸು ಹೆಗ್ಡೆ” ಎಂದುಸಿರಿ ಪರಿಚಯಿಸಿಕೊಂಡೆ. ಆಗ ಸುಧೀಂದ್ರ “ಯಾರು ಅಂತ ಗೊತ್ತಾಗ್ಲಿಲ್ಲ” ಅಂದ್ರು. “ನಾವು ಮೊದಲೇ ಭೇಟಿ ಆಗಿದ್ದೀವೆ, ನಾನು ಆಸುಮನ ಬ್ಲಾಗ್‍ನ  ಆಸು ಹೆಗ್ಡೆ” ಅಂದೆ. “ಓಹ್ ಗೊತ್ತಾಯ್ತು ಗೊತ್ತಾಯ್ತು ನೀವು ಆತ್ರಾಡಿ ಸುರೇಶ ಹೆಗ್ಡೆಯವರು” ಅಂದ್ರು. “ಹೌದು” ಎಂದು ನಕ್ಕು ತಲೆಯಾಡಿಸಿದೆ. ಜನಾರ್ದನ ಸ್ವಾಮಿಯವರಿಗೂ ನಮಸ್ಕಾರ ಮಾಡಿ ಕೈಕೊಟ್ಟು ಕುಲುಕಿ, “ನಾನೀಗ ನೀವು ಹಿಂದೆ ಇದ್ದ ಸಂಸ್ಥೆಯಲ್ಲಿ ದುಡಿಯುತ್ತಿರುವವನು” ಅಂದೆ. “ಯಾವುದದು? ನಾನು ಹಲವಾರು ಸಂಸ್ಥೆಗಳಲ್ಲಿ ದುಡಿದಿದ್ದೆ” ಅಂದರು. ಆಗ ನಾನು ಈಗಿರುವ ಸಂಸ್ಥೆಯ ಹೆಸರನ್ನೂ ಹೇಳಿದೆ. “ಹಾಂ… ಹೌದು ಹೌದು ಒಳ್ಳೆಯದು” ಅಂದರು.

ಆಗ ಪಕ್ಕದಲ್ಲಿ ಇದುವರೆಗೆ ಮೌನಿಯಾಗಿ ನಿಂತಿದ್ದ ಆ ಅಪರಿಚಿತ ಮಹಿಳೆಯ ಸ್ವರ ಕೇಳಿಸಿತು “ತಮ್ಮನ್ನು ಮೂಡಬಿದರೆಯ ಆಳ್ವಾಸ್ ನುಡಿಸಿರಿಯಲ್ಲಿ ಭೇಟಿ ಮಾಡಿಸಬೇಕೆಂದು ಪ್ರಕಾಶ ಶೆಟ್ಟಿಯವರು ಬಹಳ ಪ್ರಯತ್ನಿಸಿದ್ದರು, ನೀವು ಅಂದು ಅಲ್ಲಿ ಅವರಿಗೆ ಸಿಗುವಾಗ ನಾನು ಅಲ್ಲಿಂದ ತೆರಳಿಯಾಗಿತ್ತು” ಅಂದರು. ಆಗ ಥಟ್ಟನೇ ನೆನಪಾಯ್ತು ನನಗೆ. ಅಂದು ದ ಸಂಡೇ ಇಂಡಿಯನ್ ನ ವಿನ್ಯಾಸ ಕಲಾವಿದ ಪ್ರಕಾಶ್ ಶೆಟ್ಟಿ ಉಳೆಪಾಡಿಯವರು, ಸುಪ್ತ ದೀಪ್ತಿ ಬ್ಲಾಗ್ ನ ಜ್ಯೋತಿ ಮಹಾದೇವ ಅವರನ್ನು ನನಗೆ ಭೇಟಿ ಮಾಡಿಸುವ ಬಗ್ಗೆ ಮಾತಾಡಿದ್ದರು ಎಂಬುದು. “ಓಹ್ ನೀವು ಜ್ಯೋತಿ ಮಹಾದೇವ ಅಲ್ವೇ?” ಎಂದು ನಮಸ್ಕರಿಸಿದೆ. ಹೌದು ಎಂದು ಪ್ರತಿ ನಮಸ್ಕರಿಸಿದರು.

ಶ್ಯಾಮ್ ಸುಂದರ್ ಅವರು “ನೋಡಿ ನಿಮಗೆಲ್ಲಾ ಏನನ್ನಿಸುತ್ತೋ ಗೊತ್ತಿಲ್ಲ. ನನಗನಿಸುವುದು ಏನೆಂದರೆ, ಈ ನಾಲ್ಕು ಕ್ಷಣಗಳನ್ನು ನಾವು ಇಲ್ಲಿ ಈ ರೀತಿ ಒಂದಾಗಿ ಮಾತಾಡಿ ಕಳೆಯುತ್ತ ಇದ್ದೇವೆ. ಇವು ನಮ್ಮ ಜೀವನದ ಅಮೂಲ್ಯ ಕ್ಷಣಗಳಾಗಿ ನಮ್ಮ ನೆನಪಿನಲ್ಲಿ ದಾಖಲಾಗಿ ಉಳಿದು ಬಿಡುತ್ತವೆ. ಏನಂತೀರಾ?” ಅಂದರು. ಜನಾರ್ದನ ಸ್ವಾಮಿ, ಸುಧೀಂದ್ರ ಹಾಗೂ ನಾನು “ಹೌದು ಹೌದು ನಿಮ್ಮ ಮಾತು ನಿಜ” ಎಂದು ಒಫ್ಪಿಕೊಂಡೆವು. ಜ್ಯೋತಿಯವರು “ಈ ಕ್ಷಣಗಳಷ್ಟೇ ಅಲ್ಲ ಸಾರ್, ನಮ್ಮ ಜೀವನದ ಪ್ರತಿಯೊಂದು ಕ್ಷಣವೂ ಅತ್ಯಮೂಲ್ಯ ನೆನಪಾಗಿ ದಾಖಲಾಗಿ ಉಳಿದುಬಿಡುತ್ತದೆ” ಎಂದು ದನಿಗೂಡಿಸಿದರು. ಹೌದೆನಿಸಿತು. ಹೀಗೆಯೇ ವಿಶ್ವೇಶ್ವರ ಭಟ್ಟರು ವಿಜಯ ಕರ್ನಾಟಕದಿಂದ ಹೊರಬಂದ ನಂತರದ ವಿಜಯ ಕರ್ನಾಟಕ ಹೇಗಿದೆ ಎನ್ನುವ ಬಗ್ಗೆ , ಹಾಗೂ ಭಟ್ಟರ ಮತ್ತು ಬೆಳಗೆರೆಯವರ ನಡುವಿನ ಸಮರದ ಬಗ್ಗೆ,  ಅಲ್ಲದೆ ಇನ್ನಿತರ ಹಲವು ವಿಷಯಯಗಳ ಬಗ್ಗೆ ಸ್ವಲ್ಪ ಮಾತಾಡಿದೆವು.

ಪುಸ್ತಕ ಮಳಿಗೆಗಳತ್ತ ಹೋಗೋಣ ಎಂದು ಹೊರಟರೆ ಜನಜಂಗುಳಿ ನೋಡಿ ಭಯವಾಯ್ತು. ಅಂತೆಯೇ ಹಿಂತಿರುಗಿದೆವು. ಅಲ್ಲದೇ ಅಲ್ಲಿನ ಆ ಧೂಳಿನಿಂದಾಗಿ ಮುಂದಿನ ಒಂದು ವಾರ ನನ್ನ ನಾಸಿಕ ಮುಷ್ಕರ ಹೂಡಬಹುದೆನ್ನುವ ಭಯವೂ ಇತ್ತು ನನ್ನಲ್ಲಿ.

ನಂತರ ಶ್ಯಾಮ್ ಮಾಧ್ಯಮ ಕೇಂದ್ರದತ್ತ ಹೋದರು. ಸುಧೀಂದ್ರ ಮತ್ತು ಜನಾರ್ದನ ಸ್ವಾಮಿಯವರು ಇನ್ನೆತ್ತಲೋ ತೆರಳಿದರು. ಬಹುಶಃ ನಿರ್ಗಮಿಸಿದರೇನೋ. ಜ್ಯೋತಿ ಮಹಾದೇವ ಮತ್ತು ನಾನು ಒಂದರ್ಧ ಘಂಟೆ ಮಾತಾಡುತ್ತ ನಿಂತಿದ್ದೆವು. ತೀರ ಸರಳ ವ್ಯಕ್ತಿತ್ವದ ಜ್ಯೋತಿಯವರ ಪರಿಚಯ ಸಂತಸ ನೀಡಿತ್ತು. ಅಮೇರಿಕಾ ದೇಶದಲ್ಲಿದ್ದು ಮರಳಿ ಈಗ ಉಡೂಪಿ ಸಮೀಪದ ಮಣಿಪಾಲದಲ್ಲಿ ನೆಲೆಸಿರುವ ಅವರದ್ದು, ಮಣಿಪಾಲದಲ್ಲೇ ನೌಕರಿ ಮಾಡುತ್ತಿರುವ ಪತಿ ಮತ್ತು ಸುರತ್ಕಲ್‍ನ  ಕಾಲೇಜಿನಲ್ಲಿ ಕಲಿಯುತ್ತಿರುವ ಮಗನ ಜೊತೆಗಿನ ಮೂರು ಸದಸ್ಯರ ಪುಟ್ಟ ಸಂಸಾರವಂತೆ. ಸಮ್ಮೋಹಿನಿಯ ಮೂಲಕ ಚಿಕಿತ್ಸೆ ನೀಡುವ ಕಲೆಯಲ್ಲಿ (ಹಿಪ್ನೋಥೆರಪಿ) ತರಬೇತಿ ಪಡೆದಿರುವ ಆಕೆ ಸದ್ಯ ಅದನ್ನೇ ವೃತ್ತಿಯಾಗಿಸಿಕೊಂಡಿದ್ದಾರಂತೆ. ತನ್ನ ಭಾವಬಿಂಬ ಎನ್ನುವ ಮುದ್ರಿತ ಕವನ ಸಂಕಲನವನ್ನು ನನಗಾಗಿ ನೀಡಿದರು. ಅದರ ಓದು ಇನ್ನೂ ಬಾಕಿ ಇದೆ.

ಹರಿವ ಲಹರಿ ಮತ್ತು ಸುಪ್ತ ದೀಪ್ತಿ ಎನ್ನುವ ಎರಡು ಬ್ಲಾಗ್ ಗಳಲ್ಲಿ ನಿರಂತರವಾಗಿ ಬರೆಯುತ್ತಿರುವ ಆಕೆಯೊಂದಿಗೆ ಅಂದು ಅಲ್ಲಿ ಕಳೆದ ಆ ಅರೆಗಳಿಗೆ ಬಲು ಸುಂದರವೆನಿಸಿತ್ತು. ಅಷ್ಟರಲ್ಲಿ, ಆಕೆಯ ಅನಿವಾಸಿ ಭಾರತೀಯ ಮಿತ್ರ ತ್ರಯರು ಅಲ್ಲಿಗೆ ಬಂದು ಮಾತಾಡಲು ತೊಡಗಿದ್ದರಾದ್ದರಿಂದ, ನಾನು ಜ್ಯೋತಿಯವರಿಗೆ ನಮಸ್ಕರಿಸಿ “ನಾನಿನ್ನು ಬರುತ್ತೇನೆ” ಅಂದೆ.  ಅಷ್ಟು ಹೊತ್ತು ಒಂಟಿಯಾಗಿದ್ದ ಆಕೆಗೆ ಜೊತೆ ನೀಡಿದುದಕ್ಕಾಗಿ ಆಕೆ ನನಗೆ ಕೃತಜ್ಞತೆ ಸಲ್ಲಿಸಿದರು.  ಅವರಿಂದ ಬೀಳ್ಕೊಂಡು ಮತ್ತು ಆ ಜನ ಜಾತ್ರೆಯಿಂದ ಹೊರಹೊರಟು ನಾನು ಮನೆಯ ದಾರಿ ತುಳಿದೆ.