ಇರಲು ಬಿಡು ಇನ್ನಷ್ಟು ದಿನ ವರುಷ!

16 ಜುಲೈ 12

 

 

 

 

 

 

 

 

 

 

ಏರಿದಷ್ಟೇ ಮೆಟ್ಟಿಲುಗಳನ್ನು ನಾ ಇಳಿಯಲೂ ಬಿಡು ದೇವ
ಏರಿದಷ್ಟೇ ಸಾವಕಾಶವಾಗಿ ನಾ ಇಳಿಯಲೂ ಬಿಡು ದೇವ

ನನಗೆ ಕಿಂಚಿತ್ತೂ ಇಲ್ಲ ತರಾತುರಿ ನಿನಗಿರಬಹುದೇನೋ
ನನ್ನ ಆಟವ ಮುಗಿಸೋ ತಯಾರಿ ನಡೆಸಿರಬಹುದೇನೋ

ನನ್ನದೇನಿಲ್ಲ ಇಲ್ಲಿ ಅರಿತಿರುವೆ ಎಲ್ಲವೂ ನಿನ್ನದೇ ದೇವಾ
ಆದರೂ ಹಚ್ಚಿಕೊಂಡಾಗಿದೆ ಬಿಡಲಾಗದು ಸುಲಭದಿ ಜೀವ

ಐವತ್ತಾಯಿತು ಹರಸು ಆಶೀರ್ವದಿಸಿ ಇದು ನೂರಾಗುವಂತೆ
ಮನದೊಳಿರುವ ಯೋಜನೆಗಳೆಲ್ಲಾ ಕೈಗೂಡಿಸಲಾಗುವಂತೆ

ಇರಲು ಬಿಡು ಇನ್ನಷ್ಟು ದಿನ ವರುಷ ಹಿಂದಿನಂತೆಯೇ ಇಲ್ಲಿ
ಕರೆದುಕೋ ನಿನ್ನ ಮರೆತು ಮೆರೆಯ ತೊಡಗಿದರೆ ನಾನಿಲ್ಲಿ
**********************************


ನಮ್ಮವರೆಂದರಿತರೆ ಇಲ್ಲಿ ನಮ್ಮವರೇ ಎಲ್ಲಾ!

14 ಏಪ್ರಿಲ್ 09

ಸಖೀ,

ಅರಿಯಬೇಕು ನಾವು, ಈ ಜೀವನವೊಂದು ಪಯಣ
ಮುಂದುವರಿಯಲೇ ಬೇಕು ನಮ್ಮಲ್ಲಿಲ್ಲದಿದ್ದರೂ ತ್ರಾಣ

ನಾಲ್ಕು ಹೆಜ್ಜೆ ನಮ್ಮ ಜೊತೆ ಜೊತೆಗೆ ನಡೆಯುವವರು
ಮುಂದೆ ನಮ್ಮ ಸಂಗವನೇ ತೊರೆದತ್ತ ತೆರಳುವವರು

ಅಲ್ಪ ಸಮಯದ ಸಂಗವು ಜೀವನವನೇ ಆವರಿಸಬಹುದು
ದೀರ್ಘಕಾಲದ ಸಂಗವನೂ ಅಲ್ಪದರಲೇ ಕಳೆಯಬಹುದು

ಹಾದಿಯಲಿ ಸಿಕ್ಕವರೆಲ್ಲಾ ನಮ್ಮ ಮನೆಗೆ ಬರುವವರಲ್ಲ
ಮನೆಗೆ ಬಂದವರೆಲ್ಲಾ ನಮ್ಮ ಮನದೊಳಗೆ ಬಾರರಲ್ಲಾ

ಮನದೊಳಗೆ ಬಂದವರನು ತೊರೆಯಲಾಗುವುದೇ ಇಲ್ಲ
ತೊರೆದು ತೆರಳಿದರೆ ಮತ್ತೆ ತಿರುಗಿ ಕರೆಯಲಾಗುವುದಿಲ್ಲ

ನಮ್ಮವರು ಎಂದರಿತರೆ ನಿಜದಿ ಇಲ್ಲಿ ನಮ್ಮವರೇ ಎಲ್ಲಾ
ಇಲ್ಲವೆಂದರಿತರೆ, ಸಖೀ, ಈ ಜಗದಿ ಯಾರಿಗಾರೂ ಇಲ್ಲ
************************************