ನಾನು ಏನು ಮಾಡಲಿ, ಹೇಳೋ…!

22 ಆಕ್ಟೋ 10

ಇಲ್ಲ ಕಣೇ, ಇನ್ನು ನನ್ನಿಂದ ಆಗೋಲ್ಲ. ಎಷ್ಟು ದಿನ ಅಂತ ಹೀಗೆಯೇ ತಡೆದುಕೊಂಡಿರಲಿ ಹೇಳು. ಇದರಿಂದ ನನಗೂ ಕಷ್ಟ,  ನಿನಗೂ ಕಷ್ಟ. ಹೇಳೋಣ. ಹೇಳಿ ಬಿಡೋಣ. ಒಂದೋ ನೀನೇ ಹೇಳು. ಇಲ್ಲಾಂದ್ರೆ ನಾನೇ ಹೇಳ್ತೇನೆ. ನಮ್ಮ ಮನೆಯಲ್ಲಂತೂ ಯಾವ ವಿರೋಧವೂ ಇರೋಲ್ಲ ಅಂತ ನನಗೆ ಚೆನ್ನಾಗಿ ಗೊತ್ತು. ಯಾಕಂದ್ರೆ ನಿನ್ನ ಕಂಡ್ರೆ ನನ್ನ ಅಮ್ಮ, ಅಪ್ಪ, ಅಣ್ಣ, ಅಕ್ಕ ಎಲ್ಲರಿಗೂ ಇಷ್ಟ. ಅದು ನಿನಗೂ ಗೊತ್ತಲ್ವಾ? ನಿಮ್ಮ ಮನೆಯಲ್ಲೂ ಸಮಸ್ಯೆ ಹುಟ್ಟಿಕೊಳ್ಳೋ ಸಾಧ್ಯತೆಗಳೇ ಇಲ್ಲ. ಒಂದೇ ಜಾತಿಯವರಾದ್ದರಿಂದ, ಜಾತಿಯ ಸಮಸ್ಯೆಯೂ ಎದುರಾಗುವುದಿಲ್ಲ. ಅಲ್ಲದೇ, ನನ್ನ ಮೇಲೆ ನಿಮ್ಮ ಮನೆಯವರಿಗೆ ಅಭಿಮಾನ ಇದೆ ಅಂತ ನಮ್ಮಿಬ್ಬರಿಗೂ ಗೊತ್ತು.

ನಿಮ್ಮ ಮತ್ತು ನಮ್ಮ ಮನೆಯವರಿಗೆ ಪರಸ್ಪರ ಪರಿಚಯವೂ ಇದೆ. ಮತ್ಯಾಕೆ ನಾವು ಕಾಯುತ್ತಾ ಇರಬೇಕು? ಯಾರಾದ್ರೂ ಅವರಾಗಿಯೇ ಬಂದು ನಮ್ಮನ್ನು, “ನೀವಿಬ್ಬರೂ ಮದುವೆ ಆಗ್ತೀರಾ?”, ಅಂತ ಕೇಳ್ತಾರೇನೇ?  ಬೇಕಿದ್ರೆ ನನ್ನ ರಜೆಯನ್ನು ಒಂದು ತಿಂಗಳ ವಿಸ್ತರಿಸುವಂತೆ ಈಗಲೇ “ಈ ಮೇಲ್” ಮೂಲಕ ಅರ್ಜಿ ಕಳಿಸ್ತೇನೆ. ರಜೆಯ ಬಗ್ಗೆ ಸಮಸ್ಯೆಯೇ ಇಲ್ಲ ಕಣೇ. ಮದುವೆ ಮುಗಿಸಿಕೊಂಡು, ನಿನ್ನನ್ನು ಕರೆದುಕೊಂಡೇ ಹೋಗ್ತೇನೆ. ಯಾಕೆ ಬೇಡಾ ಅಂತೀಯಾ? ನಿನ್ನ ಮನಸ್ಸಿನಲ್ಲಿ ಏನಿದೆ ಅಂತಾದ್ರೂ ಹೇಳೇ…

***

ಇಲ್ಲ ಕಣೋ… ಅವಸರ ಮಾಡಬೇಡ. ನಿನಗೆ ನನ್ನ ಮೇಲೆ ಎಷ್ಟು ಪ್ರೀತಿ ಇದೆ ಅಂತ ನನಗೂ ಗೊತ್ತು, ನನ್ನಮ್ಮನಿಗೂ ಗೊತ್ತು. ಅಲ್ಲದೇ ನಮ್ಮಿಬ್ಬರ ಪ್ರೀತಿಯ ವಿಷಯ ನಿನ್ನ ಅಕ್ಕನಿಗೂ ಗೊತ್ತು. ಸಮಸ್ಯೆ ಅದಲ್ಲ. ಸ್ವಲ್ಪ ದಿನ ತಾಳು. ಎಲ್ಲಾ ಸರಿಹೋಗುತ್ತೆ. ಈ ಸಾರಿ ಹೋಗು. ಮುಂದಿನ ಸಾರಿ ಮೇ ತಿಂಗಳಲ್ಲಿ ನೀನು ರಜೆಯಲ್ಲಿ ಊರಿಗೆ ಬರುವ ಮೊದಲೇ ನಾನು ಎಲ್ಲರಿಗೂ ಹೇಳಿ, ಎಲ್ಲರನ್ನೂ ತಯಾರಾಗಿ ಇರಿಸಿದ್ರೆ ಸಾಕು ತಾನೆ. ನೆಮ್ಮದಿಯಿಂದ ಹೋಗ್ಬಿಟ್ಟು ಬಾ.

***

ಅಂದು ನಾನು, ಬೇಡ ಬೇಡ, ಅವಸರ ಬೇಡ ಮದುವೆಗೆ ಅಂತ ಅಂತಿದ್ದದ್ದು ಯಾಕೆ ಅಂತ ನನಗೇ ಗೊತ್ತಿರಲಿಲ್ಲ ಕಣೋ…

ನಿನ್ನನ್ನು ನಾನು ಅಂದು ಕೊನೆಯ ಬಾರಿಗೆ ಬೀಳ್ಕೊಡುತ್ತಿದ್ದೆ ಎನ್ನುವುದರ ಅರಿವು ನನಗಿತ್ತೇ? ಛೇ… ಇಲ್ಲ ಕಣೋ… ಹಾಗಿರಲು, ಹೇಗೆ ಸಾಧ್ಯ ಹೇಳು

ನಾನು ನಿನ್ನ ವಿಧವೆಯಾಗಿ ಬಾಳಬೇಕಾಬಹುದೇನೋ ಅನ್ನುವ ಭಯ ಅಥವಾ ಅನುಮಾನವಾದ್ರೂ ನನಗಿತ್ತೇ? ಛೆ… ಇಲ್ಲ ಕಣೋ ಹಾಗೇ ಯಾರಾದ್ರೂ ಮದುವೆಗೆ ಮುಂಚೇನೇ ಯೋಚಿಸ್ತಾರೇನೋ…

ಮತ್ಯಾಕೆ, ನೀನೆಷ್ಟು ಗೋಗರೆದರೂ ನಾನು ಒಪ್ಪಿಕೊಳ್ಳದೇ ಉಳಿದುಬಿಟ್ಟೆ?

ನಾನು ನಿನ್ನನ್ನು ಅಂದು ಮದುವೆಯಾಗಿ ನಿನ್ನ ಜೊತೆಗೆ ತೆರಳಿದ್ದರೆ, ಈ ನತದೃಷ್ಟ ವಿಮಾನದಲ್ಲಿ, ನೀನಾಗಲೀ, ನಿನ್ನ ಜೊತೆಗೆ ನಾನಾಗಲೀ, ಮೊನ್ನೆ ಊರಿಗೆ ಬರುತ್ತಲೇ ಇದ್ದಿರಲ್ಲವೇನೋ… ಅಲ್ವೇನೋ?

ನನಗೆ ಪ್ರೀತಿ ಅಂದರೆ ಏನು ಅನ್ನೋದು ಗೊತ್ತಾಗಿದ್ದೇ ನಿನ್ನಿಂದ ಕಣೋ…

ಆದರೆ ಅದರಿಂದ ನನಗೇನು ಪ್ರಯೋಜನವಾಯ್ತು ಹೇಳು.

ನನಗೆ ಪ್ರೀತಿ ಪಾಠ ಹೇಳ್ಕೊಟ್ಟವನೇ ಆ ವಿಮಾನದೊಂದಿಗೇ ಸುಟ್ಟು ಕರಕಲಾಗಿ ಈ ಲೋಕದಿಂದ ತೆರಳಿಬಿಟ್ಟೆ.

ಇನ್ನು ನಾನು ಯಾರನ್ನು ಪ್ರೀತಿಸಲಿ?  ಹೇಗೆ ಪ್ರೀತಿಸಲಿ?

ನನಗೀಗ ಪ್ರೀತಿ ಅನ್ನೋದು ಏನೆಂದು ಗೊತ್ತಿದೆಯಾದರೂ, ನನ್ನಿಂದ, ಇನ್ನು ಇನ್ನೊಬ್ಬನನ್ನು ಪ್ರೀತಿಸಲು ಸಾಧ್ಯವೇ ಹೇಳು…

ಮದುವೆಯಾಗದೇ ಉಳಿದು ಬಿಡಲೇ ನಾನು…?

ನನ್ನ ಅಮ್ಮನಿಗೆ ಮತ್ತು ನಿನ್ನ ಅಕ್ಕನಿಗೆ ಅದರ ಕಾರಣ ಗೊತ್ತಿದೆಯಾದರೂ, ಅವರು ಯಾರ ಮುಂದೆಯೂ ಬಾಯಿ ಬಿಡೋಲ್ಲ ಕಣೋ. ಬಾಯಿಬಿಟ್ಟರೆ ನನ್ನ ಮುಂದಿನ ಜೀವನ ನೀರಸವಾಗಿ, ಅರ್ಥಹೀನವಾಗಿ ಉಳಿದು ಬಿಡುತ್ತದೆ ಎನ್ನುವ ಭಯ ಅವರಿಬ್ಬರಿಗೂ ಇರಬಹುದು. ಅಲ್ಲದೆ, ಹಾಗೊಂದು ವೇಳೆ, ಅವರಲ್ಲಿ ಆ ಭಯ ಇದ್ದರೂ, ಅದು ನಿಜವೇ ಅಲ್ವೇನೋ.

ಇಲ್ಲಾ, ನನ್ನ ಅಮ್ಮ ಅಪ್ಪ ತೋರಿಸಿದ ಗಂಡನ್ನು ಮದುವೆಯಾಗಿ ಆತನ ಮನೆಗೆ ತೆರಳಲೇ ನಾನು …?

ನಿನ್ನಿಂದ ಕಲಿತಿದ್ದ ಪ್ರೀತಿಯನ್ನು, ನಾನು ಅಲ್ಲಿ, ಆತನಿಗೆ ತೋರಿಸಲಾಗದೆ, ಆತನ ಪ್ರೀತಿಯನ್ನು ಮನಬಿಚ್ಚಿ ಸ್ವೀಕರಿಸಲೂ  ಆಗದೆ,  ಈ ಜನ್ಮಪೂರ್ತಿ ನಿರ್ಭಾವುಕತೆಯಿಂದ ಜೀವನ ಸಾಗಿಸಲೇ?

ನಾನು ಜೀವಚ್ಛವವಾಗಿ ಬಾಳುತ್ತಿರಲೇ…?

ಇಲ್ಲಾ… ನಿನ್ನನ್ನು ಸೇರಲು ನಾನೂ ಬಂದು ಬಿಡಲೇ…?

ಹೇಳೋ… ಹೇಳೋ…

ಏನು ಮಾಡಲಿ ನಾನು?

ಒಂದೇ ಒಂದು ಬಾರಿ ಬಂದು, ನನ್ನ ಕಿವಿಯಲ್ಲಿ ಹೇಳಿ ಹೋಗೋ… ಹೇಳೋ…ಹೇಳೋ…ಬಾರೋ… ಹೇಳೋ…
***************