ಆದ್ವಾನಿಯವರೇ ಮಾತನಾಡಿ ಇಲ್ಲಾ ಪಕ್ಷ ಬಿಟ್ಟು ಹೊರಡಿ!!!

25 ಆಗಸ್ಟ್ 09

ಆದ್ವಾನಿಯವರೇ ಮಾತನಾಡಿ ಇಲ್ಲಾ ಪಕ್ಷ ಬಿಟ್ಟು ಹೊರಡಿ
ಮಾತನಾಡಲಾಗದಿದ್ದರೆ ಬೇರೆಯವರಿಗೆ ಜಾಗ ಖಾಲಿ ಮಾಡಿ

ಮುಂದಿನ ಮಹಾ ಚುನಾವಣೆಯಲಿ ಸ್ಪರ್ಧಿಸಲೇ ಬೇಕೆಂದೇನಿಲ್ಲ
ನೀವಿರದಿದ್ದರೂ ಭಾಜಪಾದಲ್ಲೊಳ್ಳೆಯ ನಾಯಕರು ಇದ್ದಾರಲ್ಲಾ

ನಿಮಗೆ ಪ್ರಧಾನಿಯಾಗುವ ಯೋಗ್ಯತೆ ಇತ್ತು ಇದು ನಿಜಕೂ ಸತ್ಯ
ಇನ್ನೈದು ವರ್ಷ ಕಾದರೆ ನಿಮ್ಮ ಆರೋಗ್ಯಕ್ಕೆ ಆಗಬಹುದು ಅಪಥ್ಯ

ಕುಟುಂಬದಲ್ಲಿನ ಓರ್ವ ಧೂರ್ತ ತಂದೆಯ ನೆನಪು ಮಾಡಿಸಿದಿರಿ
ಆತನಂತೆಯೇ ಕಿರಿಯರು ಮಾತನಾಡಲು ಆತನಿಗೇಕೋ ಕಿರಿಕಿರಿ

ಅಂದು ಜಿನ್ನಾನನ್ನು ಹೊಗಳಿ ಮತ್ತೆ ಕಣ್ಣೀರ ಹರಿಸಿ ಮೆಚ್ಚಿಸಿದಿರಲ್ಲ
ಇಂದು ಜಸ್ವಂತ್ ಅದನ್ನೇ ಬರೆದರೆ ಎಲ್ಲರೂ ಉಗಿಯುತಿಹರಲ್ಲಾ

ಅಸಹಾಯಕನಾದ ಭೀಷ್ಮನಂತೆ ಮೌನಿಯಾಗಿಯೇ ಉಳಿಯದಿರಿ
ನಿಮ್ಮ ಮೌನ ಪಕ್ಷಕ್ಕೆ ಮಾಡಬಹುದಾದ ಹಾನಿಯನ್ನು ನೀವರಿತಿರಿ

ಸಮಸ್ಯೆ ಪರಿಹಾರವಾಗದಿದ್ದರೆ ಪಕ್ಷವನು ಯಾರೂ ಉದ್ಧರಿಸಲಾರರು
ನೀವು ಮುಂದೆ ಪರಿತಪಿಸಿ ಗೋಗರೆದರೆ ಯಾರೂ ಕಿವಿಗೊಡಲಾರರು


ಅಭಿವೃದ್ಧಿ ಅಸಾಧ್ಯ ಮುಖ್ಯಮಂತ್ರಿ ಆಗದಿದ್ದರೆ ನಿರ್ಭಯ!!!

24 ಆಗಸ್ಟ್ 09

ಆದ್ವಾನಿಯ ಹಳೇ ಮಾತನ್ನೇ ಬರೆದು ಪ್ರಕಟಿಸಿದರು ಜಸ್ವಂತ
ಪಕ್ಷ ಉಚ್ಚಾಟಿಸಿತು ಅಲ್ಲವೆಂದು ಹೇಳಿ ಯಾರೂ ಪಕ್ಷಕ್ಕೆ ಸ್ವಂತ

ಇಲ್ಲಿ ಯಡಿಯೂರಪ್ಪನವರಿಗೆ ಈಗೆಲ್ಲಾ ಬರೀ ನಿದ್ದೆಯಿಲ್ಲದ ರಾತ್ರಿ
ಕೇಂದ್ರದ ಭಾಜಪಾ ಒಡೆದರೆ ಇಲ್ಲೂ ಒಡೆಯುವುದಂತೂ ಖಾತ್ರಿ

ಸಂಪಂಗಿಯ ನಂತರ ಈಗ ಈ ಸುಧಾಕರ ರೆಡ್ಡಿಯ ಅವಾಂತರ
ಭ್ರಷ್ಟಾಚಾರದ ಸಮಸ್ಯೆಗಳು ಹೀಗೆ ಕಾಡುತ್ತಲೇ ಇವೆ ನಿರಂತರ

ವರುಷ ಕಳೆದರೂ ಒಂದು ದಿನವನ್ನೂ ನೆಮ್ಮದಿಯಿಂದ ಕಳೆದಿಲ್ಲ
ಮರಿ ಚುನಾವಣೆಯ ಫಲಿತಾಂಶವು ಎಳ್ಳಷ್ಟೂ ಹರುಷ ತರಲಿಲ್ಲ

ನಾನೇ ನಾನೆಂದ ಸೋಮಣ್ಣ ಹೀಗಲ್ಲಿ ಮಣ್ಣು ಮುಕ್ಕ ಬೇಕಾಯ್ತು
ಆತನನು ಮಂತ್ರಿ ಮಾಡಿದ ತಪ್ಪಿನರಿವು ಯಡ್ಡಿಗೆ ಈಗಷ್ಟೇ ಆಯ್ತು

ಮನತಣಿಸಲು ಸೋತ ಯೋಗೀಶನ ಮನೆಗೆ ಖುದ್ದು ಭೇಟಿ ನೀಡಿ
ತನಗಿರುವ ಅಭದ್ರತೆಯ ಭಯವ ಬಹಿರಂಗ ಪಡಿಸಿದರು ನೋಡಿ

ಮುಖ್ಯಮಂತ್ರಿಯಾದರೂ ಮನದ ತುಂಬಾ ಒಂದಿಲ್ಲೊಂದು ಭಯ
ಈ ನಾಡ ಅಭಿವೃದ್ಧಿ ಅಸಾಧ್ಯ ಮುಖ್ಯಮಂತ್ರಿ ಆಗದಿದ್ದರೆ ನಿರ್ಭಯ