ವ್ಯವಸ್ಥೆ!

01 ಸೆಪ್ಟೆಂ 12

ಸಖೀ,
ಅವರು ಕರೆದರೆಂದು
ಅವರ ಮನೆಯೊಳಗೆ
ಕಾಲಿರಿಸಿದ್ದೆ ನಾನು
ಒಳಗೆ ಹೋದರೆ ಅಲ್ಲಿ
ಕೂತುಕೊಳ್ಳಲೂ
ಸರಿಯಾದ ವ್ಯವಸ್ಥೆ ಇಲ್ಲ.
ಇರಲು ಅಲ್ಲಿ ಎಲ್ಲವೂ ಇದೆ,
ಆದರೆ ಸುವ್ಯವಸ್ಥೆಯ ಕೊರತೆ
ಕೂರುವ ಸ್ಥಳಗಳಲ್ಲೆಲ್ಲಾ
ಏನೇನೋ ಹರಡಿ ಇಟ್ಟಿದ್ದಾರೆ
ಸರಿ, ಅವರು ಅರಿಯದವರು
ಇರಬಹುದೇನೋ ಎಂದು
ಮೆಲ್ಲನೆ ನುಡಿದೆ

“ಇದು ಹೀಗಿದ್ದರೆ ಚೆನ್ನ,
ಅದು ಹಾಗಿದ್ದರೆ ಚೆನ್ನ,
ಏನಂತೀರಿ?”

“ಇರಲಿ ಬಿಡಿ,
ಇಲ್ಲಿ ಯಾವುದು
ಹೇಗಿದ್ದರೆ ತಮಗೇನಂತೆ?
ಬಂದಿದ್ದೀರಿ,
ಇರುವಷ್ಟು ಹೊತ್ತು
ಬಾಯ್ಮುಚ್ಚಿಕೊಂಡಿದ್ದು ಬಿಡಿ
ತಮಗಾವುದು ವ್ಯವಸ್ಥೆಯೋ
ತಮ್ಮ ಮನೆಯಲ್ಲಿ ನೋಡಿಕೊಳ್ಳಿ
ಇಲ್ಲಿ ನಾವಿರೋದೇ ಹೀಗೆ, 
ನಮ್ಮನ್ನು ನಮ್ಮಷ್ಟಕ್ಕೆ ಬಿಟ್ಟುಬಿಡಿ”

“ಸರಿ,
ಹಾಗಾದರೆ ತಾವು ಹೇಗೆ
ಇರಲು ಬಯಸುವಿರೋ
ಹಾಗೆಯೇ ಇರಿ,
ನಾನು ಹೊರಟೆ, 
ಬೇರೇಯೇ ಇದೆ ನನ್ನ
ಈ ಜೀವನದ ಗುರಿ!”