ನೀಲ ಆಗಸ ಮಲಗಿದೆ-೨!

16 ಸೆಪ್ಟೆಂ 12

ನೀಲ ಆಗಸ ಮಲಗಿದೆ… ನೀಲ ಆಗಸ ಮಲಗಿದೆ!

ಕಣ್ಣ ನೀರಲಿ ಚಂದ್ರ ಮುಳುಗಿ, ರಾತ್ರಿ ಬರಡಾಯ್ತು
ನನ್ನ ಬಾಳಿನ ಏಕಾಂತ ಮುಗಿಯದಂತಾಯ್ತು!
ನಾನುಂಡ ನೋವು ಬಲು ಕಡಿಮೆ
ನೋವನ್ನೇ ಸುರಿದಿದೆ ನಿನ್ನೊಲುಮೆ

||ನೀಲ ಆಗಸ ಮಲಗಿದೆ||

ಹಳೆಯ ಗಾಥೆ ಕೇಳಿ ಬರುತಿದೆ ನೆನಪಿನಲೆಗಳಲಿ
ಜೊತೆಗೆ ನಡೆದವರು ಅಪರಿಚಿತರಿಂದೀ ಬಾಳ ಹಾದಿಯಲಿ
ನನ್ನ ಒಲವಿನ ದಾಹ ಆರಿಲ್ಲ
ಮನದೊಳಗೆ ಉಲ್ಲಾಸವೂ ಇಲ್ಲ!||ನೀಲ ಆಗಸ ಮಲಗಿದೆ||

http://www.youtube.com/watch?v=iK9PpYnmjwY


ಹತೋಟಿ!

01 ಸೆಪ್ಟೆಂ 12

ಸಖೀ,
ಚಂದಿರ
ಈ ಭೂಮಿಯ
ಮೇಲೆಲ್ಲಾ
ಪಸರಿಸುವುದು
ಆ ರವಿಯ
ಬೆಳಕನ್ನೇ;

ಆದರೆ,
ಆ ಬೆಳಕಿನ
ಮೇಲಿನ
ಹತೋಟಿ
ಮಾತ್ರ
ಇರುವುದು
ಸದಾ
ಭೂಮಿಯ
ಕೈಯಲ್ಲೇ!


ಸ್ವಾತಂತ್ರ್ಯ!

17 ಜೂನ್ 10

 

ಸಖೀ

ಆಗಸದಲಿ ತೇಲುತಿರುವ

ಚಂದಿರನ ಕಂಡಾಗ

ನಿನಗೇನನಿಸಿತ್ತೋ

ನಾನರಿಯೆ

ಆದರೆ ನನಗನ್ನಿಸಿದ್ದಿಷ್ಟು

 

ಕೋಟಿ ನಕ್ಷತ್ರಗಳ ನಡುವೆ

ಪ್ರಕಾಶಮಾನನಾಗಿ

ನಗುತಿದ್ದರೂ ತನ್ನ

ಪ್ರಭೆಯನ್ನು ಕಳೆದುಕೊಳ್ಳುವ

ಭಯ ಸದಾ ಇದೆ ಆತನಲ್ಲಿ

 

ಯಾರದೋ ಬೆಳಕಿಗೆ

ಕನ್ನಡಿ ಹಿಡಿಯುವ ಆತನಿಗೆ

ತನ್ನ ಸ್ವಂತದ್ದೇನಿಲ್ಲವೆಂಬ

ಕೀಳರಿಮೆಯೂ ಇದೆ

 

ಭೂಮಿಯ ಸುತ್ತ ಸದಾ

ಗಾಣದ ಎತ್ತಿನಂತೆ

ಸುತ್ತುತ್ತಿರುವ ಆತನಲ್ಲಿ

ಸ್ವಾತಂತ್ರ್ಯ ಹೀನತೆಯ

ಕೊರಗೂ ಇದೆ

 

ಅಂತೆಯೇ

ನಮ್ಮ ಬಾಳೂ ಕೂಡ

ಇನ್ನೊಬ್ಬರು ಕಟ್ಟಿಕೊಟ್ಟ

ಬುತ್ತಿಯನು ಹೊತ್ತು

ನಡೆವ ನಮಗೆಲ್ಲಿದೆ

ಸ್ವಾತಂತ್ರ್ಯ?

 

ಸ್ವತಂತ್ರರಾಗಿರಲು

ನಕ್ಷತ್ರಗಳಿಗೆ ಸ್ವಂತ

ಪ್ರಭೆ ಇರುವಂತೆ

ಮನುಜನಿಗೆ ಸ್ವಂತ

ಪ್ರತಿಭೆ ಇರಬೇಕು!

***********


ನಕ್ಕುಬಿಡು ಇಂದೇ!

11 ಜೂನ್ 10

 

ಸಖೀ

ನೀನು ಮುಖ

ಸಿಂಡರಿಸಿಕೊಂಡಿದ್ದಾಗ

ನನ್ನ ಪಾಲಿಗೆ

ದಿನವೂ ಅಮವಾಸ್ಯೆ

 

ಇಂದು ನಿನ್ನ

ಮುಗುಳ್ನಗೆ ಕಂಡ ನನಗೆ

ಪಾಡ್ಯದ-ಬಿದಿಗೆಯ

ಚಂದ್ರನ ದರುಶನವಾಯ್ತು

 

ನನಗೀಗ ಆ ನಾಳಿನ

ನೀನು ಪೂರ್ತಿ ನಕ್ಕಾಗ ಸಿಗುವ

ಪೂರ್ಣಚಂದ್ರ ದರುಶನದ

ಹುಣ್ಣಿಮೆಯ ನಿರೀಕ್ಷೆ

 

ಏಕೆ ಕಾಯಿಸುವೆ

ಸುಮ್ಮನೆ ಸತಾಯಿಸುವೆ

 

ನಕ್ಕು ಬಿಡಬಾರದೇಕೆ

ಪೂರ್ಣಚಂದ್ರನ ದರುಶನ

ನನಗೆ ಮಾಡಿಸಬಾರದೇಕೆ

 

ನಿನಗೆಲ್ಲಿಯ ಕಟ್ಟುಕಟ್ಟಳೆ

ಆ ಚಂದ್ರನಿಗಿರುವಂತೆ

 

ನಕ್ಕುಬಿಡು ಇಂದೇ

ನಮ್ಮ ಮನದಂಗಳದಿ

ಬೆಳದಿಂಗಳ ಚೆಲ್ಲಿಬಿಡು ಇಂದೇ

 

ಏಕೆ ಕಾಯಿಸುವೆ

ಸುಮ್ಮನೆ ಸತಾಯಿಸುವೆ

************