ಆತನ ಅಧಿಕಾರದ ಮುಂದೆ ನಡೆಯದು ಏನೊಂದೂ!

28 ಸೆಪ್ಟೆಂ 10

ಸಖೀ,
ಕಿಟಕಿಯಿಂದ ಇಣುಕುತಿಹ ಚಂದಿರನು ಅರಿತಿಹನೆ
ಮನೆಯೊಳಗೆ ನನ್ನ ಸಖಿ ನೀನು ಇಲ್ಲವೆಂದು

ದಿನವೂ ನಡೆದಿರಬಹುದೀ ಕಣ್ಣು ಮುಚ್ಚಾಲೆಯಾಟ
ಸಿಕ್ಕಿಬಿದ್ದಿಹನಿಂದಾತ ಸಖೀ ನೀನು ಇಲ್ಲದಂದು

ನಾನು ಒಳಗೊಳಗೆ ಬರಿದೆ ಸಂತಸ ಪಡುತಲಿದ್ದೆ
ನನ್ನ ಜೊತೆಗಿರುವ ನೀನು ಬರೀ ನನ್ನವಳೆಂದು

ನಿನ್ನ ಮೇಲಧಿಕಾರ ನನಗಷ್ಟೇ ಎಂದು ನಾನು ತಿಳಿದಿದ್ದೆ
ಅರಿತೆ ನಿನ್ನ ಸೌಂದರ್ಯೋಪಾಸಕ ರಜನೀಶನಿರುವನೆಂದು

ಎಷ್ಟೇ ಮುಚ್ಚಿಟ್ಟು ಕೊಂಡರೂ, ಎಲ್ಲೇ ಅಡಗಿ ಕೂತಿದ್ದರೂ
ಆತನ ಕಣ್ಣುಗಳಿಂದ ಮರೆಯಾಗಿ ಇರಲಾರೆವೆಂದೂ

ಎಲ್ಲರದು ಅಧಿಕಾರ, ಎಲ್ಲರ ಮೇಲಿದ್ದರೂ ಏನಾದೀತಿಲ್ಲಿ
ಆತನ ಅಧಿಕಾರದ ಮುಂದೆ ನಡೆಯದು ಏನೊಂದೂ
************


ಸಖೀ, ನನ್ನೀ ತಲೆಯೊಳಗೆ ಸಮಸ್ಯೆಗಳ ಸಂತೆ!!!

09 ಡಿಸೆ 09

“ಸಖೀ,

ನನ್ನೀ ತಲೆಯಲ್ಲೀಗ ನೂರೆಂಟು ಸಮಸ್ಯೆಗಳ ಸಂತೆ

ನನಗೋ ವಾರದಿಂದ ಏನೂ ಬರೆದಿಲ್ಲವೆಂಬ ಚಿಂತೆ”

 

“ಹೀಗೆಯೇ ಬರೆದು ಬಿಡು ನೂರೆಂಟು ಸಮಸ್ಯೆಗಳ ಸಂತೆ

ಅದರಿಂದಾಗಿ ನಿನಗೀಗ ಏನೂ ಬರೆದಿಲ್ಲ ಎಂಬಾ ಚಿಂತೆ”

 

“ನೋಡೀಗ ತಯಾರಾಗುತ್ತದೆ ಕವನ ಓದಿ ಹೇಳುವಿಯಂತೆ”

“ನೀನು ಬರೆದರೆ ಓದಲು ತಯಾರಾಗಿ ನಾ ಕೂತಿರುವೆನಂತೆ”

 

“ನೀನೆನ್ನ ಜೊತೆಗಿದ್ದು ನನ್ನ ಮೆದುಳ ಹೀಗೆ ಚಿವುಟುತಿರಲು

ಹರಿದು ಬರಬಹುದು ಸರಾಗವಾಗಿ ಇಲ್ಲಿ ಪದಪುಂಜಗಳು”

 

“ಗೊತ್ತಾಯಿತು ಗೊತ್ತಾಯಿತೆಂದೀ ಸಖಿಯು ಹೇಳುತಿಹಳು

ನಿನ್ನೀ  ಹೊಸ ಕವನದ ನಿರೀಕ್ಷೆಯಲಿಲ್ಲಿ ಕಾದು ಕೂತಿಹಳು”

 

“ದಿನವೂ ಒಂದೆರಡು ಮಾತ ನೀ ಆಡಿದರೆ ಎನ್ನೊಡನೆ ಸಖಿ

ನಂಬು ನನ್ನ ನಿಜಕೂ ನನಗಿಂತ ಜಗದಲ್ಲಿ ಇನ್ನಾರಿಲ್ಲ ಸುಖಿ”

 

🙂

 

“ನಕ್ಕು ಚಂದಿರನಂತೆ ಸುಮ್ಮನಿರಬೇಡ ಆಡು ಎರಡು ಮಾತ

ಚಂದಿರ ಮಾತಾಡ ಏಕೆಂದರೆ ಮಾತು ಬರದ ಮೂಕನಾತ”

 

🙂

 

“ಈ ಸಾಲುಗಳನ್ನೇ ಎತ್ತಿ ಹಾಕಿ ಬಿಡ್ತೇನೆ ನಾನೆನ್ನ ಬ್ಲಾಗಿನಲ್ಲಿ”

“ಜನರೆಲ್ಲಾ ಓದಿ ಪ್ರತಿಕ್ರಿಯಿಸಲಿ ಖುಷಿಪಡುತ್ತಿರೋಣ ನಾವಿಲ್ಲಿ!!!”

*****************************************


ಚಂದ್ರ ಅನ್ಯ ಗ್ರಹದ ತೆಕ್ಕೆಗೆ ಸೇರಿಕೊಂಡರೆ…?!

09 ಆಕ್ಟೋ 09

ಬಾಂಬುಗಳಿಂದ ಈ ಭೂಲೋಕದಲ್ಲಾದ

ನಷ್ಟ ಆಗಲೇ ಮಿತಿ ಮೀರಿ ಹೋಗಾಗಿದೆ

ಈಗ ನೋಡಿದರೆ ಬಾಂಬುಗಳ ಸವಾರಿ

ದೂರದ ಚಂದಮಾಮನತ್ತಲೂ ಸಾಗಿದೆ

 

ಆತನನು ಘಾಸಿಗೊಳಿಸಿ ಬಂದು ಇನ್ನಿಲ್ಲಿ

ಆನಂದಿಸಲಾದೀತೇ ಆ ಬೆಳದಿಂಗಳನು

ಇನ್ನು ಉಣಲೊಲ್ಲದ ಮಕ್ಕಳಿಗೆ ಇಲ್ಲಿಂದ

ತೋರಿಸಲಾದೀತೇ ಚಂದಮಾಮನನು

 

ವಾತಾವರಣದಲ್ಲಿನ ಏರುತಿರುವ ಉಷ್ಣಕ್ಕೆ

ಆತನ ಮೈಬೆವತು ಪಸೆ ಕಂಡಿರಬಹುದೇ

ಅದರ ರಹಸ್ಯವನು ಬೇಧಿಸಲು ಆತನನು

ಈ ಪರಿಯಾಗಿ ತಿವಿದು ಹಿಂಸಿಸಬಹುದೇ

 

ಶಾಂತನಾಗೇ ಬೆಳಕಿಂದ ಕಡಲ ಮತ್ತೇರಿಸಿ

ಉಕ್ಕುವ ತೆರೆಗಳನು ಸೃಷ್ಟಿಸಬಲ್ಲ ಚಂದಿರ

ಕೋಪಗೊಂಡನೆಂದರೆ ಇನ್ನು ಭೂಲೋಕದ

ಉದ್ದಗಲಕ್ಕೂ ಸುನಾಮಿ ಅಲೆಗಳದೇ ಅಬ್ಬರ

 

ಚಂದಿರ ಮುನಿಸಿನಿಂದ ಭೂಮಿಯ ಬಿಟ್ಟು

ಅನ್ಯ ಗ್ರಹದ ತೆಕ್ಕೆಗೆ ಸೇರಿಕೊಳ್ಳಬಹುದು

ತಿಂಗಳು ಪೂರ್ತಿ ಅಮವಾಸ್ಯೆ ಆಗಿ ಇಲ್ಲಿ

ರಾತ್ರಿ ಕಳ್ಳರ ಕಾಟ ಹೆಚ್ಚಾಗಲೂಬಹುದು


ಕಾಣೆಯಾದಂತೆ ಚಂದಿರ!

09 ಸೆಪ್ಟೆಂ 09
 
 
ರಾತ್ರಿಯ ನೀರವತೆಯಲ್ಲಿ
ನಿನ್ನ ನಿಟ್ಟುಸಿರ ಸದ್ದು
ನಿನಗೆ ಅರಿವಾಗದಂತೇ
ನಾ ಕೇಳಿಸಿಕೊಂಡಿದ್ದೆ ಕದ್ದು
 
ನಿದ್ದೆ ಬರುವುದಿಲ್ಲ ನಿನಗೆ
ನೆಮ್ಮದಿ ಇಲ್ಲಿಲ್ಲ ನನಗೂ
ಪರಸ್ಪರರಿಂದ ಮುಚ್ಚಿಟ್ಟು
ಮಾಡಬೇಕಾಗಿದೆ ಬೆಳಗು
 
ಮಗಳಿಲ್ಲದ ಮನೆಯಿಂದು
ಮೂರ್ತಿರಹಿತ ಮಂದಿರ
ಹುಣ್ಣಿಮೆಯ ರಾತ್ರಿಯಲಿ
ಕಾಣೆಯಾದಂತೆ ಚಂದಿರ
 
ವಸತಿ ನಿಲಯದಲಿ ಮಗಳ
ನಿದ್ದೆ ಕೆಡದಿದ್ದರೆ ಸಾಕು
ತನ್ನ ಗುರಿ ತಲುಪಲು ಆಕೆ
ಶ್ರಮ ಪಡುತಿರಲೇ ಬೇಕು
 
ಇಲ್ಲಿ ನಮ್ಮ ಮನದೊಳಗೆ
ಮಗಳ ನಾವಿರಿಸಿಕೊಳ್ಳಬೇಕು
ಅಲ್ಲಿ ಮಗಳ ಮನದೊಳಗೆ
ನಾವು ಮನೆ ಮಾಡಿರಬೇಕು

ಮೊದಲ ದಿನವೇ ಮನಸ್ಸು ನೊಂದುಕೊಂಡರೆ!!!

07 ಮೇ 09
ಯಾವ ಸಾಧನೆಗೋ ಏನೋ ಈ ಪ್ರವೇಶ ಪರೀಕ್ಷೆ
ಸಾಮಾನ್ಯ ಎಂದರೂ ಇದು ಅಸಾಮಾನ್ಯ ಪರೀಕ್ಷೆ
 
ಜೀವಶಾಸ್ತ್ರದ ಪ್ರಶ್ನೆಗಳು ಕಹಿ-ಸಿಹಿ ಪಾನಕದಂತೆ
ಗಣಿತಶಾಸ್ತ್ರದವು ಇದ್ದವು ಕಬ್ಬಿಣದ ಕಡಲೆಗಳಂತೆ
 
ಸಮಯದ ಕೊರತೆಯಲಿ ಮನ ಬೇಸರಗೊಂಡಾಗ
ಅರಿತ ಉತ್ತರಗಳೂ ನೆನಪಾಗುವುದಿಲ್ಲ ಅಲ್ಲಿ ಆಗ
 
ಮಗಳ ಮುಖವಾಗಿತ್ತು ಮೋಡದ ಮರೆಯ ಚಂದಿರ
ಆ ಮನದ ದುಗುಡ ತಂದಿದೆ ಹೆತ್ತವರಿಗೂ ಬೇಸರ
 
ಮೊದಲ ದಿನವೇ ಹೀಗೆ ಮನಸ್ಸು ನೊಂದುಕೊಂಡರೆ
ಇಂದು ಎರಡನೆ ದಿನ ಆಗಬಹುದೇನೋ ತೊಂದರೆ
 
ಇಂದು ಎಲ್ಲವೂ ಸುಗಮವಾಗಿ ನಗುನಗುತ್ತಾ ಬಂದರೆ
ನಾಳೆಯಿಂದ ನಿಮಗಿಲ್ಲ ನನ್ನ ಈ ಖಾಸಗಿ ತೊಂದರೆ