ಭ್ರಷ್ಟರಿಂದ ಬಚಾವು ಮಾಡಲು ಬರುವವರು ಯಾರೋ?

10 ಜುಲೈ 10

ದೊಡ್ಡ ಗೌಡರಿಂದ ಹೇಳಿಸಿಕೊಳ್ಳಲಿ ನಮ್ಮ ಈ ಶಾಸಕರು ಪಾಠಗಳನ್ನು

ಸದನ ಇರುವುದು ನಿದ್ರಿಸಲು, ಬೀದಿಗಳಿವೆ ನಡೆಸಲು ಪ್ರತಿಭಟನೆಗಳನ್ನು

 

ಸದನದೊಳು ಕಾದಾಡುತ್ತಾರೆ ಜಗಜಟ್ಟಿಗಳಂತೆ ರಟ್ಟೆಬಲ ತೋರಿಸುತ್ತಾ

ಮತ್ತೆ ಎಲ್ಲೋ ಗ್ರಾಮವಾಸ್ತವ್ಯ ಹೂಡಿ ಕಾಲ ಕಳೆಯುತ್ತಾರೆ ನಿದ್ರಿಸುತ್ತಾ

 

ಸದನದೊಳಗೆ ನಿರ್ಲಜ್ಜೆಯಿಂದ ಹಾರಾಡಿ ನಾಡ ಜನತೆಗೆ ಬಗೆದು ದ್ರೋಹ

ಹೊರಗೆ ಬಂದು ಕ್ಷಮೆ ಯಾಚಿಸುತ್ತಾರೆ ತೀರಿಸಿಕೊಂಡಂತೆ ಮನದ ದಾಹ

 

ಅವರಲ್ಲ ಇವರು ನಮ್ಮವರು, ಇವರಲ್ಲ ಅವರು ನಮ್ಮವರು, ಎನ್ನುವಂತಿಲ್ಲ

ಈಗ ಎಲ್ಲರದೂ ಒಂದೇ ಉಡುಗೆ, ತೊಡುಗೆ, ಭಾಷೆ, ಅರಚಾಟಗಳೆಲ್ಲಾ

 

ಪ್ರಜಾಸತ್ತಾತ್ಮಕ ಆಡಳಿತ ಪದ್ಧತಿ ನಮ್ಮದು ಅದಕ್ಕಾಗೇ ಈಗ ಈ ದುರ್ದೆಸೆ

ಪ್ರಜೆಯದು ಇಲ್ಲಿ ಸತ್ತ ಆತ್ಮ, ಬೆಲೆಯಿಲ್ಲ ಬಹಿರಂಗ ಪಡಿಸಿದರೂ ಮನದಾಸೆ

 

ಮತ ನೀಡಲು ಮಾತ್ರ ಮತದಾರ ನಂತರ ಇವರ್ಯಾರೋ ಅವರ್ಯಾರೋ

ನಮ್ಮ ನಾಡನ್ನು ಈ ಭ್ರಷ್ಟರಿಂದ ಬಚಾವು ಮಾಡಲು ಬರುವವರು ಯಾರೋ?

**********************************


ಯಡ್ಡಿ ಇನ್ನೂ ಶೋಭಾಯಮಾನ!!!

29 ಆಕ್ಟೋ 09

ರೆಡ್ಡಿ

ಬಂಧುಗಳು

ಹಿಡಿದೆಳೆದು

ಜಗ್ಗಾಡುತ್ತಿದ್ದರೆ

ಯಡ್ಡಿಯ

ಚಡ್ಡಿ,

 

ಯಡ್ಡಿ

ಈಗಲೂ

ಹಿಂದಿನಂತೆಯೇ

ಶೋಭಾಯಮಾನ

ತನಗೇನೂ

ಆಗದೆಂಬಂತೆ

ಅಡ್ಡಿ!!!

 ******

 

ಪಕ್ಷಾಧ್ಯಕ್ಷ

ರಾಜನಾಥರೇ

ಈತನಿಗೆ

ಬೆಲೆಕೊಡದೇ

ಮಾಡುತ್ತಿರಲು

ಪದೇ ಪದೇ

ಮುಖ ಭಂಗ,

 

ದಿಲ್ಲಿಯಿಂದಿಲ್ಲಿಗೆ

ಸಂಧಾನ

ಮಾಡಿಸಲು

ಬಂದಿರುವ

ಆ ಅರುಣ ಜೇಟ್ಲಿ

ಹಿಂತಿರುಗುವನೇ

ಆಗಿ ಮಂಗ?!

 ********

 

ಬಾಯಿಯಲಿ

ಸಮಾಜಸೇವೆಯ

ಮಂತ್ರ

ಮನದೊಳಗೊಳಗೆ

ಅಧಿಕಾರ ದಾಹದ

ಕುತಂತ್ರ,

 

ಯಡ್ಡಿಯಾದರೇನು

ರೆಡ್ಡಿಯಾದರೇನು

ಗೌಡರಾದರೇನು

ಶೆಟ್ಟರಾದರೇನು

ಈಗ ಎಲ್ಲರದೂ

ಜಾಹೀರು ಸರ್ವತ್ರ!!!

************

 

ಸದಾಕಾಲ

ನಿದ್ರೆಯಲ್ಲಿರುತಿದ್ದ

ದೊಡ್ಡ ಗೌಡರ

ಮುಖದಲ್ಲೂ

ಮೊನ್ನೆ ನಾನು

ಮಂದಹಾಸವ ಕಂಡೆ,

 

ಮಾಜೀ ಮುಖ್ಯಮಂತ್ರಿಯ

ಸಹೋದರನನ್ನೂ

ಮುಖ್ಯ ಅಲ್ಲದಿದ್ದರೂ

ಉಪ ಮುಖ್ಯಮಂತ್ರಿ

ಮಾಡಿಸಬಹುದೇ

ಎಂಬ ಅನುಮಾನ

ನಾ ಮನದಲ್ಲಿ

ಮೂಡಿಸಿಕೊಂಡೆ!!!

****************


ಬಿಜೆಪಿ ಸರಕಾರ ನಿರಾತಂಕವಾಗಿರಬೇಕೇ…?!

13 ಆಕ್ಟೋ 09

ರಾಜ್ಯದ ಬಿಜೆಪಿ ಸರಕಾರ ನಿರಾತಂಕವಾಗಿ

ನಡೆಯಬೇಕೆಂದಿದ್ದರೆ ಇನ್ನು ನಾಲ್ಕು ವರುಷ

ನನ್ನಲ್ಲಿ ಒಂದು ಯೋಜನೆ ಇದೆ ಕೇಳಿ ಅದು

ನಿಮಗೆಲ್ಲರಿಗೂ ನೀಡಬಹುದೇನೋ ಹರುಷ

 

ಉಗ್ರಪ್ಪ, ಸಿದ್ಧರಾಮಯ್ಯ, ಡಿಕೆ ಶಿವಕುಮಾರ

ಗೌಡರು, ಕುಮಾರಸ್ವಾಮಿ ಮತ್ತು ಆ ರೇವಣ್ಣ

ಈ ಷಡ್ವೈರಿಗಳನ್ನು ಸರಕಾರದ ಖರ್ಚಿನಲ್ಲೇ

ವಿದೇಶ ವಿಹಾರಕ್ಕೆ ಕಡ್ಡಾಯ ಕಳುಹಿಸಬೇಕಣ್ಣ

 

ಆ ಆರು ಮಂದಿಗೂ ಅಲ್ಲಿ ಯಾವ ಚಿಂತೆಯೂ

ಇಲ್ಲದೆ ನಾಲ್ಕು ವರುಷ ಪುಕ್ಕಟೆಯಾಗಿ ಗಮ್ಮತ್ತು

ರಾಜ್ಯದ ಖಜಾನೆ ಸ್ವಲ್ಪ ಖಾಲಿ ಆದೀತಾದರೂ

ಜನತೆಯ ನೆಮ್ಮದಿಗೆ ಕಿಂಚಿತ್ತೂ ಬಾರದು ಕುತ್ತು

 

ಮುಂದಿನ ಚುನಾನಾವಣೆಯ ಸಮಯ ಎಲ್ಲರೂ

ಮರಳಿ ಬಂದರಾಯ್ತು ಅದೃಷ್ಟ ಪರೀಕ್ಷಿಸುವುದಕೆ

ಚುನಾವಣೆಯಲ್ಲಿ ಪರಸ್ಪರರ ಮೇಲೆ ಕೆಸರೆರಚಿ

ಯಾರು ಪರಿಶುದ್ಧರೆಂದು ಅರಿತು ಕೊಳ್ಳುವುದಕ್ಕೆ

 

ಅಭಿವೃದ್ದಿ ತೊರಿಸಿದ್ದರೆ ಯಡ್ಡಿಗೆ ಜನರು ಮತ್ತೆ

ಮತ ನೀಡಿ ಅಧಿಕಾರಕ್ಕೇರಿಸಿ ಕೂರಿಸಬಹುದು

ಸೋತರೆ ಶೋಭಾಹೀನರಾಗದೆ ಗದ್ದುಗೆ ಬಿಟ್ಟು

ರಜೆಯಲ್ಲಿ ತಾವೂ ವಿಹಾರಕ್ಕೆ ತೆರಳಿಬಿಡಬಹುದು


ಇನ್ನೂ ಹತ್ತು ದಿನ ಹೀಗೆಯೇ ಕಳೆಯಬೇಕಂತೆ!!!

06 ಮೇ 09
ಯಾರೋ ಕೂಗಿದಂತಾಯ್ತು ಕುಮಾರನಿಗೆ
ಅಲ್ಲಿ ಹೊರಟಿತ್ತು ತೇಜಸ್ವಿನಿಯ ಮೆರವಣಿಗೆ
 
ಅತ್ತ ತೇಜಸ್ವಿನಿಯ ನಿದ್ದೆಗೂ ಭಂಗ ಬಂತು
ಯೋಗಿಯ ವಿಜಯ ಘೋಷ ಕೇಳಿ ಬಂತು
 
ಬಂಗಾರಪ್ಪ ತೂಕಡಿಸಿ ಬೆಚ್ಚಿ ಬಿದ್ದ ಕೂತಲ್ಲೇ
ರಾಘವೇಂದ್ರನ ಜಪ ಮಾಡುತ್ತಿದ್ದ ಹಗಲಲ್ಲೇ
 
ಸಾಂಗ್ಲಿಯಾನನ ಬಡಬಡಿಕೆ ಅರೆ ನಿದ್ರೆಯಲ್ಲಿ
ಗೋಪಿನಾಥಗೆ ಮಾತ್ರ ಗೊರಕೆ ನಿಶ್ಚಿಂತೆಯಲ್ಲಿ
 
ಅನಂತನಿಗಿಲ್ಲಿ ಹಗಲೆಲ್ಲಾ ಕೃಷ್ಣನದೇ ಧ್ಯಾನ
ಕೃಷ್ಣನಿಗೂ ಈಗ ಅನಂತ ನಾಮದಲೇ ಸ್ನಾನ
 
ಗೌಡರೂ ಚೆನ್ನಮ್ಮನೂ ಮತ್ತೆ ಆಗಿ ತಯಾರು
ಕನಸಲ್ಲೇ ಏರಿದ್ದಾರೆ ಪ್ರಧಾನಮಂತ್ರಿಯ ಕಾರು
 
ಖರ್ಗೆ ಸೋತರೆ ಸಿದ್ರಾಮಯ್ಯನದು ಕುಹಕ ನಗೆ
ಯಾರೇನೆಂದರೂ ವಿರೊಧ ಪಕ್ಷದ ಕುರ್ಚಿ ತನಗೇ
 
ಎಲ್ಲರೊಳಗೂ ಒಂದಲ್ಲ ಒಂದು ರೀತಿಯ ತಳಮಳ
ಏನಾಗುವುದೋ ಫಲಿತಾಂಶ ಎಂದೆನ್ನುವ ಕಳವಳ
 
ಈ ಕಾಯುವಿಕೆ ಬೇಕಿಲ್ಲ ಸೋತರೂ ಇಲ್ಲ ಚಿಂತೆ
ಮನದೊಳಗೀಗ ವಿಚಿತ್ರ ಯೋಚನೆಗಳದೇ ಸಂತೆ
 
ಈ ಒಂದೊಂದು ದಿನವೂ ಒಂದೊಂದು ವರ್ಷದಂತೆ
ಇನ್ನೂ ಹತ್ತು ದಿನ ಹೀಗೆಯೇ ಕಳೆಯಬೇಕಿದೆಯಂತೆ