ಬಾರದೇಕೆ ಸಾವು!!!

10 ಏಪ್ರಿಲ್ 09

ಸಖೀ,
ಸಾವರಿಸಿಕೊಳ್ಳಬಹುದಾದರೂ ಬಾಳ
ಹಾದಿಯಲಿ ಮುಗ್ಗರಿಸಿ ಬಿದ್ದು ಎದ್ದು
ಸಹಿಸಲಾಗದು ನಮ್ಮವರಿಂದಲೇ ನಮಗೆ
ಸದಾ ಸಿಗುವ ಈ ಮುಸುಕಿನೊಳಗಿನ ಗುದ್ದು

ಇದು ಅತ್ತ ಉಗಿಯಲಾಗದೆ, ಇತ್ತ ನುಂಗಲಾಗದೆ
ನಮ್ಮ ಬಾಯೊಳಗಿದ್ದು ಸುಡುವ ಬಿಸಿ ತುಪ್ಪದಂತೆ
ನಮ್ಮನ್ನು ಒಳಗೊಳಗೆ ಕೊರಗಿಸುತಾ ಕ್ಷೀಣಿಸುತಾ
ಸದಾ ಕಾಲ ನಡೆವ ಒಂದು ಶೀತಲ ಯುದ್ಧದಂತೆ

ಸಾಕು ಸಾಕೆನಿಸುತಿದೆ ಈ ಮಾನಸಿಕ ಚಿತ್ರಹಿಂಸೆ
ಅನವರತ ನನ್ನೀ ಮನಕೆ ನೀಡುತಿರುವ ನೋವು
ಬರಬಾರದೇಕೆನಿಸುತಿದೆ ನನಗೆ ಈ ನೋವನ್ನೆಲ್ಲಾ
ಒಮ್ಮೆಗೇ ನುಂಗಿಬಿಡುವಂತೆ ಈಗಲೇ ನನ್ನ ಸಾವು

ಪ್ರಬುದ್ಧನಾಗಿರಿಸದೇ ಆ ದೇವರು, ಮೂರ್ಖರ
ನಡುವೆ ನನ್ನನ್ನೂ ಮೂರ್ಖನನ್ನಾಗಿರಿಸಬೇಕಿತ್ತು
ಎಲ್ಲರೊಂದಿಗೂ ಸ್ಪಂದಿಸುವ ಹೃದಯದ ಬದಲು
ಎನ್ನ ಈ ಎದೆಯೊಳಗೊಂದು ಕಲ್ಲನಿರಿಸಬೇಕಿತ್ತು

ಎಂತೆಂತವರನ್ನೆಲ್ಲಾ ಬೇಕೆಂದಾಗ ಕಾರಣ ನೀಡದೇ
ದೇವರು ತನ್ನಲ್ಲಿಗೆ ಮರಳಿ ಕರೆಸಿಕೊಳ್ಳುವಂತೆ
ನನ್ನ ಬಾಲ್ಯದ ಆ ಕೆಟ್ಟ ಖಾಯಿಲೆಯ ನೆಪದಲ್ಲಿ
ನನ್ನನ್ನೂ ತನ್ನಲ್ಲಿಗೆ ಒಯ್ದಿದ್ದರೆ ಏನಾಗುತ್ತಿತ್ತಂತೆ
*-*-*-*-*-*-*-*-*-*-*-*-*-*-*-*