ಗಾಳಿ ತಂಗಾಳಿಯಾದೀತು!!!

21 ಮೇ 09

ಸಖೀ,
ಇಂದು ನಿನ್ನ
ದರುಶನವಾಗಿಲ್ಲವೆಂಬ
ಮುನಿಸು ನನಗಿದ್ದಷ್ಟೇ
ಆ ಸೂರ್ಯನಿಗೂ
ಇದೆ ನೋಡು,
ಅದಕ್ಕೇ ಮರೆಯಾಗಿ
ಕೂತಿದ್ದಾನೆ
ಕೋಪಿಸಿಕೊಂಡು;

ನೀನಿಂದು ಎರಡು
ಸವಿಮಾತ ಆಡಿಲ್ಲವೆಂಬ
ಬೇಸರ ನನಗಿದ್ದಷ್ಟೇ
ಬೀಸುತ್ತಿರುವ ಗಾಳಿಗೂ ಇದೆ,
ನ್ನುಸಿರು ಬಿಸಿಯಾಗಿರುವಂತೆ
ಆ ಗಾಳಿಯಲೂ ಇಂದು
ಎಂದಿಲ್ಲದ ರೋಷವಿದೆ
ಕಂಡಿಲ್ಲದ ಬಿಸಿ ಇದೆ;

ಸಖೀ,
ಬಂದು ಬಿಡು
ಸೂರಿನಡಿಯಿಂದಾಚೆಗೆ,
ನಿನ್ನ ಕಂಡ ನಾನು
ತೃಪ್ತಿ ಪಡುವಂತೆ,
ಬಂದಾನು ಮುನಿಸ ಮರೆತು
ಸೂರ್ಯನೂ ಮೋಡಗಳ
ಮರೆಯಿಂದಾಚೆಗೆ;

ನೀ ನುಡಿದರೆ ನನ್ನ
ಕಿವಿಗಳಲಿ ಒಂದೆರಡು
ಸವಿಮಾತನಿಂದು,
ಈ ನನ್ನ ಮನವೂ ತಣಿದೀತು,
ಮಾತ ಕೇಳಿಸಿಕೊಂಡ
ಆ ಗಾಳಿಯೂ ತಣಿದು
ತಂಗಾಳಿಯಾದೀತು!
*-*-*-*-*-*-*-*