ಮಣ್ಣಿನ ಪ್ರೇಮ ಚುನಾವಣೆಯಲಿ ಗೆಲುವ ತನಕ!!!

07 ಜುಲೈ 09
ಮಮತಾಳ ರೈಲು ಕರ್ನಾಟಕದಿಂದ ಕೇರಳದ ಕಡೆಗೆ
ಓಡುವುದೇಕೆ ಅನ್ನುವುದಕೇ ಅಲ್ಲ ನಮಗೀಗ ಚಿಂತೆ
ಬೆಂಗಳೂರು ಮಂಗಳೂರು ರೈಲು ಉತ್ತರಕ್ಕೆ ತಿರುಗಿ
ಕರ್ನಾಟಕದ ಕರಾವಳಿಯಲೇ ಮುಂದೆ ಸಾಗಬೇಕಿತ್ತಂತೆ

ಕರಾವಳಿಯ ಮತದಾರ ಕಾಂಗ್ರೇಸಿಗೆ ಮತ ನೀಡಿಲ್ಲ
ಎನ್ನುವುದರಿಂದ ಕಾಂಗ್ರೇಸಿಗರಿಗೆ ಮುನಿಸೇನೋ
ಹೀಗೆ ತಾರತಮ್ಯ ತೋರಿದರೆ ಮತದಾರ ಅವರಿಂದ
ಇನ್ನೂ ದೂರವಾಗುತ್ತಾನೆಂದವರು ಅರಿಯರೇನೋ

ಬೆಂಗಳೂರಿನಿಂದ ಹೊರಡುವ ರೈಲು ಇನೂ ಕಡಿಮೆ
ಸಮಯದಲಿ ಸಾಗಿ ಮಂಗಳೂರು ಸೇರಬೇಕಿತ್ತು
ಮೈಸೂರಿನ ದಾರಿ ಮರೆತು ಬೆಂಗಳೂರಿನಿಂದ
ಸೀದಾ ಸಕಲೇಶಪುರದ ಮೂಲಕ ಸಾಗಬೇಕಿತ್ತು

ಮೊಯ್ಲಿ, ಕೃಷ್ಣ, ಮುನಿಯಪ್ಪ, ಖರ್ಗೆ, ಇವರನ್ನೆಲ್ಲಾ
ನಮ್ಮವರೆಂದು ಕರೆದು ಸನ್ಮಾನ ಮಾಡಿಯಾಯ್ತು
ಸನ್ಮಾನ ಮುಗಿಸಿ ಹೋದವರು ಅಲ್ಲಿ ಮಮತಾಳ
ಆಯವ್ಯಯ ಪತ್ರಕ್ಕೆ ಖುಷಿಯಿಂದ ಮೇಜು ಕುಟ್ಟಿದ್ದಾಯ್ತು

ರಾಜಕೀಯವೇ ಹೀಗೆ ಇಲ್ಲಿ ನಮ್ಮವರೆಂಬವರೇ ಇಲ್ಲ
ಇದ್ದರೂ ಅವರು ನಮ್ಮವರಾಗಿಯೇ ಉಳಿಯುವುದಿಲ್ಲ
ಕನ್ನಡಿಗರ ನಾಡಿನಿಂದ ಕನ್ನಡಿಗರೇ ಚುನಾಯಿತರಾಗಿ
ಹೋದರೂ ಇಂದು ನಮಗೇನೂ ಲಾಭ ಆಗುತ್ತಲೇ ಇಲ್ಲ

ನಾಯಕರುಗಳ ಹೋರಾಟ ಭಾಷಾಭಿಮಾನ ಮಣ್ಣಿನ
ಮೇಲಿನ ಪ್ರೇಮ ಇವೆಲ್ಲಾ ಚುನಾವಣೆಯಲಿ ಗೆಲುವ ತನಕ
ಗೆದ್ದು ಹೊದ ಮೇಲೆ ಮರೆಯುತ್ತಾರೆ ಇತ್ತ ತಲೆ ಹಾಕದೇ
ಮುಖ ಕಾಣಿಸದೇ ಮುಂದಿನ ಮತದಾನದ ಬರುವನಕ


ಇನ್ನೂ ಹತ್ತು ದಿನ ಹೀಗೆಯೇ ಕಳೆಯಬೇಕಂತೆ!!!

06 ಮೇ 09
ಯಾರೋ ಕೂಗಿದಂತಾಯ್ತು ಕುಮಾರನಿಗೆ
ಅಲ್ಲಿ ಹೊರಟಿತ್ತು ತೇಜಸ್ವಿನಿಯ ಮೆರವಣಿಗೆ
 
ಅತ್ತ ತೇಜಸ್ವಿನಿಯ ನಿದ್ದೆಗೂ ಭಂಗ ಬಂತು
ಯೋಗಿಯ ವಿಜಯ ಘೋಷ ಕೇಳಿ ಬಂತು
 
ಬಂಗಾರಪ್ಪ ತೂಕಡಿಸಿ ಬೆಚ್ಚಿ ಬಿದ್ದ ಕೂತಲ್ಲೇ
ರಾಘವೇಂದ್ರನ ಜಪ ಮಾಡುತ್ತಿದ್ದ ಹಗಲಲ್ಲೇ
 
ಸಾಂಗ್ಲಿಯಾನನ ಬಡಬಡಿಕೆ ಅರೆ ನಿದ್ರೆಯಲ್ಲಿ
ಗೋಪಿನಾಥಗೆ ಮಾತ್ರ ಗೊರಕೆ ನಿಶ್ಚಿಂತೆಯಲ್ಲಿ
 
ಅನಂತನಿಗಿಲ್ಲಿ ಹಗಲೆಲ್ಲಾ ಕೃಷ್ಣನದೇ ಧ್ಯಾನ
ಕೃಷ್ಣನಿಗೂ ಈಗ ಅನಂತ ನಾಮದಲೇ ಸ್ನಾನ
 
ಗೌಡರೂ ಚೆನ್ನಮ್ಮನೂ ಮತ್ತೆ ಆಗಿ ತಯಾರು
ಕನಸಲ್ಲೇ ಏರಿದ್ದಾರೆ ಪ್ರಧಾನಮಂತ್ರಿಯ ಕಾರು
 
ಖರ್ಗೆ ಸೋತರೆ ಸಿದ್ರಾಮಯ್ಯನದು ಕುಹಕ ನಗೆ
ಯಾರೇನೆಂದರೂ ವಿರೊಧ ಪಕ್ಷದ ಕುರ್ಚಿ ತನಗೇ
 
ಎಲ್ಲರೊಳಗೂ ಒಂದಲ್ಲ ಒಂದು ರೀತಿಯ ತಳಮಳ
ಏನಾಗುವುದೋ ಫಲಿತಾಂಶ ಎಂದೆನ್ನುವ ಕಳವಳ
 
ಈ ಕಾಯುವಿಕೆ ಬೇಕಿಲ್ಲ ಸೋತರೂ ಇಲ್ಲ ಚಿಂತೆ
ಮನದೊಳಗೀಗ ವಿಚಿತ್ರ ಯೋಚನೆಗಳದೇ ಸಂತೆ
 
ಈ ಒಂದೊಂದು ದಿನವೂ ಒಂದೊಂದು ವರ್ಷದಂತೆ
ಇನ್ನೂ ಹತ್ತು ದಿನ ಹೀಗೆಯೇ ಕಳೆಯಬೇಕಿದೆಯಂತೆ