ಶಾಂತಿಯೇನೆಂದು ಅರಿತಿಲ್ಲ ನಾನು!

16 ಸೆಪ್ಟೆಂ 12

ಶಾಂತಿಯೇನೆಂದು ಅರಿತಿಲ್ಲ ನಾನು

ಕೊರತೆಗಳಿಹವು ನನ್ನೊಳಗೆ
ನನ್ನ ಹೊರಗೂ ಇರುವಂತೆ

ಒಳಹೊರಗಿನೀ ಕೊರತೆಗಳ
ನೀಗಿಸಿಕೊಳ್ಳುವ ಹಂಬಲವು 
ನನ್ನೀ ಮನದೊಳಗಿಹುದಂತೆ

ಶಾಂತಿಯನು ಒಪ್ಪಿಕೊಂಡಿಲ್ಲ ನಾನು!

ಈ ಪ್ರಯತ್ನದಲಿ ನಾನು ನನ್ನ
ಆಯುಷ್ಯವನ್ನೇ ಸವೆಸಿಹೆನು

ಜಗವೂ ಅಲ್ಲಿಯೇ ಇಹುದು
ನಾನೂ ಅಲ್ಲಿಯೇ ಇಹೆನು

ಅದು ನನ್ನ ಹೆಡ್ಡತನವಾಗಿತ್ತೇ?
ಎಂದೀಗೀಗ ಯೋಚಿಸುತ್ತಿಹೆನು

ಶಾಂತಿಯೇನೆಂದು ಅರಿತಿಲ್ಲ ನಾನು

ಆದರೂ 

ನಿರಾಶನಾಗಲೇಕೆ ನಾನು?
ನನ್ನೀ ಯತ್ನಗಳ ಹಿಂದೆ 
ಆತ್ಮಸ್ಥೈರ್ಯ ಇಲ್ಲವೇನು?
ಜಗದ ಮುಂದೆ ಸೋಲನ್ನು
ಒಪ್ಪಿಕೊಂಡರೂ ನಾನು,
ಸೋಲೊಪ್ಪಿಕೊಂಡಿಲ್ಲ
ನನ್ನಲ್ಲಿ ನಾನು,
ಶಾಂತಿಯೇನೆಂದು ಅರಿತಿಲ್ಲ ನಾನು
*********************

(ಅಮಿತಾಭ್ ಬಚ್ಚನ್ ರವರ ಪಿತ, ದಿ. ಹರಿವಂಶ್ ರಾಯ್ ಬಚ್ಚನ್‍ರವರ ಈ ಕವಿತೆಯ ಭಾವಾನುವಾದದ ಒಂದು ಯತ್ನ)


ಹನಿ ಹನಿಯಾದರೂ ಒಂದೇ ಕವನ!!!

18 ಮೇ 09

ಜನ ಜಾತ್ರೆಯ ನಡುವೆಯೂ ನನಗೆ
ನನ್ನ ಒಂಟಿತನ ಕಾಡುತ್ತಿದ್ದಾಗ
ಅಂದುಕೊಳ್ಳುತ್ತಿದ್ದೆ ನಾನು ನನ್ನ
ಅದೃಷ್ಟದಲ್ಲಿ ಜೊತೆಗಾರರಿಲ್ಲೆಂದು;

ಒಂದು ದಿನ ಆಕಸ್ಮಿಕವಾಗಿ ನಿನ್ನ
ಗೆಳೆತನವಾದಾಗ ಅಂದುಕೊಂಡೆ
ನಾನು ನನ್ನ ಹಸ್ತರೇಖೆಯಲೇ
ಏನೋ ವಿಶೇಷತೆಯಿರಬೇಕೆಂದು!!!

ಇಂದು ಯಾರದೋ ಹರಕೆಯ
ಕೊರತೆ ಇದೆ ನನ್ನೀ ಬಾಳಲಿ
ಅದಕೇನೋ ನೋಡಿ ಹನಿಗಳು
ತುಂಬಿವೆ ನನ್ನೀ ಕಂಗಳಲಿ

ಯಾರೋ ಇದ್ದಾರೆ ನನ್ನಿಂದ
ದೂರ ನನ್ನನ್ನು ಮರೆತು
ಆದರೂ ನನ್ನ ಹೃದಯದಲಿ
ಕೂತಿದ್ದಾರೆ ಇಂದಿಗೂ ಅವಿತು

ಜೀವನ ಎಲ್ಲಾ ಭಾವನೆಗಳನು
ಶಬ್ದಗಳಲಿ ವಿವರಿಸಲಾಗುವುದಿಲ್ಲ
ಶಬ್ದಗಳಂತೆಯೇ ಮೌನವೂ
ಕೆಲವೊಮ್ಮೆ ಶೋಭೆ ಕೊಡುವುದಲ್ಲ

ಆಗಸದಿಂದ ಬಿದ್ದ ಉಲ್ಕೆಯ ಕಂಡು
ನಾನು ಆ ದೇವರಲಿ ಪ್ರಾರ್ಥಿಸಿದೆ
ಮುರಿಯದಿರಲಿ ಈ ಸ್ನೇಹ ಸಂಬಂಧ
ಎಂದು ನಾ ಮನಬಿಚ್ಚಿ ಹಾರೈಸಿದೆ.