ಅನ್ಯಾಯ ಅಸಂವಿಧಾನಿಕ ಎಲ್ಲಾ ಮಣ್ಣಾಂಗಟ್ಟಿ!

13 ಆಕ್ಟೋ 10

ರಾಜ್ಯಪಾಲರು ತರಾತುರಿಯ ನಡವಳಿಕೆಯಿಂದ
ಈ ರೀತಿ ನಿಜದಿ ನಗೆಪಾಟಲಿಗೆ ಈಡಾಗಬಾರದಿತ್ತು

ಕಾನೂನು ತಜ್ಞನೆನಿಸಿ ರಾಷ್ಟ್ರಪತಿ ಆಳ್ವಿಕೆಗೆ
ಶಿಫಾರಸ್ಸು ಮಾಡಿ, ಈಗ ಮಾತು ಬದಲಿಸಬಾರದಿತ್ತು

ನಿನ್ನೆಯ ತನಕ ನಮ್ಮ ಮಾನ್ಯ ರಾಜ್ಯಪಾಲರು
ಕಾಂಗ್ರೇಸ್-ದಳದವರ ಪಾಲಿಗೆ ಆಗಿದ್ದರಲ್ಲಾ ದೇವರು

ಇಂದು ನೋಡಿದರೆ ಅದೇ ಹಂಸರಾಜರು
ಅವರೆಲ್ಲರ ಪಾಲಿಗೆ ಆಗಿಬಿಟ್ಟಿದ್ದಾರೆ ಕ್ರೂರ ಕಂಸರಾಜರು

ಮೊನ್ನೆ ಮೊನ್ನೆ, ಆತನಿಗಿರುವ ದೀರ್ಘ ಕಾನೂನು
ಅನುಭವವನ್ನು ಕೊಂಡಾಡಿ ಏರಿಸಿದ್ದರು ಆತನನು ಅಟ್ಟಕ್ಕೆ

ಈಗ ನೋಡಿದರೆ ಬೀದಿ ಬೀದಿಯಲ್ಲೆಲ್ಲಾ
ಜರೆದು ಏರಿಸುತ್ತಿದ್ದಾರೆ ಆತನನಿನ್ನೇನು ಜೀವಂತ ಚಟ್ಟಕ್ಕೆ

ಆತನ ಕಷ್ಟ, ಅಲ್ಲಿನ ಒಳಗುಟ್ಟು ಆತನಿಗೇ ಗೊತ್ತು
ಕೈ-ಕಮಾಂಡಿನ ಮಾತ ಪಾಲಿಸದೇ ಆತನಿಂದ ಇರಲಾಗದು

ಉತ್ತರ ಭಾರತದಲಿ ಚುನಾವಣೆಗಳಿವೆ ಹಾಗಾಗಿ
ಕಾಂಗ್ರೇಸಿಗೆ ಭಾಜಪ ಸರಕಾರವನ್ನು ಉರುಳಿಸಲೂ ಆಗದು

ಅನ್ಯಾಯ ಅಸಂವಿಧಾನಿಕ ಎಲ್ಲಾ ಬರಿ ಮಣ್ಣಾಂಗಟ್ಟಿ,
ಆ ಚುನಾವಣೆಗಳಷ್ಟೇ ಇವೆ ಈಗ ಕೇಂದ್ರ ಸರ್ಕಾರದ ದೃಷ್ಟಿಯಲ್ಲಿ

ಹಾಗಾಗಿ ಭಾಜಪಕ್ಕೆ ಕೊಟ್ಟು ಈ ಮರು ಅವಕಾಶ
ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ತಾರೆ ಚುನಾವಣ ಪ್ರಚಾರದಲ್ಲಿ
******


ಹಲ್ಲು ಕಿತ್ತ ನಾಗರಹಾವು!!!

10 ನವೆಂ 09

ಹಲ್ಲುಕಿತ್ತ ನಾಗರಹಾವು!!!

ಶೋಭೆ ಕಳೆದುಕೊಂಡು

ಕುಲಗೆಟ್ಟಿದೆ ಈಗ ಸರಕಾರ

ಇನ್ನು ಇಲ್ಲಿ ಏನಿದ್ದರೂ

ರೆಡ್ಡಿಗಳದೇ ರಾಜ್ಯಭಾರ

 

ಇವರ ಮಾತನು ಕೇಳಲಾರ

ಇನ್ನು ಯಾವುದೇ ಮಂತ್ರಿ

ಹಲ್ಲುಕಿತ್ತ ನಾಗರಹಾವು

ಹೆಸರಿಗಷ್ಟೇ ಮುಖ್ಯಮಂತ್ರಿ

**************

 

ಈಗ ಮೀಸೆ ಮೇಲೆ ಕೈ!!!

ನಾಡಿನ ಹೆಂಗಸನ್ನು

ಸರಕಾರದಿಂದ

ಹೊರಗಟ್ಟಿದವರದ್ದು

ಈಗ ಇರಬಹುದು

ಮೀಸೆ ಮೇಲೆ ಕೈ

 

ಕಟ್ಟಿಕೊಂಡು

ನಿಲ್ತಾರೆ ನಾಳೆ

ಪರ ನಾಡಿನ

ಮಹಿಳೆಯ ಮುಂದೆ

ತಮ್ಮ ಕೈ

*********

 

ಸೋನಿಯಾ – ಸುಷ್ಮಾ!!!

ಅಲ್ಲಿ ದೆಹಲಿಯಲ್ಲಿ

ವಿದೇಶಿ ಮಹಿಳೆ

ಸೋನಿಯಾಳ ಮಾತು

 

ಇನ್ನು ಬೆಂಗಳೂರಲ್ಲಿ

ಪರ ರಾಜ್ಯದ ಮಹಿಳೆ

ಸುಷ್ಮಾಳ ಮಾತು

**********

 

ಸಿದ್ಧರಾಮ ಏನೆಂಬನಯ್ಯಾ?

ಇಲ್ಲಿನ ಸಮನ್ವಯ

ಸಮಿತಿಯನ್ನು

ಅಸಾಂವಿಧಾನಿಕ

ಎಂಬ ಸಿದ್ಧರಾಮಯ್ಯ

 

ಸೋನಿಯಾ ನೇತ್ರತ್ವದ

ಯುಪಿಯೇ ಸಮಿತಿಯನು

ಈತ ಏನೆಂಬನಯ್ಯಾ

***********

 

ನೇಸರ್ಗಿ ಏಕೆ ತೆಪ್ಪಗಿರುವೀ?

ರೇಣುಕಾಚಾರ್ಯನ

ವಿರುದ್ಧ ಜಯಲಕ್ಷ್ಮಿಗಾಗಿ

ಮಾತಾಡುತ್ತಿದ್ದ

ಪ್ರಮೀಳಾ ನೇಸರ್ಗಿ

 

ಶೋಭಾಳ ಬಗ್ಗೆ

ಮಾತಾಡದೇ

ಯಾಕಮ್ಮಾ ನೀ

ಹೀಗೆ ತೆಪ್ಪಗಿರುವೀ?

**********


ಏನಿರಲೇಕೆ ಸಖೀ..?

09 ಜೂನ್ 09
ಸಖೀ,
ನೀನಿಲ್ಲದ ಮೇಲೆ ಏನಿರಲೇಕೆ?

ನಿನ್ನ ಮುಖವ ನೋಡಲಾಗದ
ನನ್ನೀ ಕಣ್ಣುಗಳಿರಲೇಕೆ?

ನಿನ್ನ ಸವಿ ಮಾತುಗಳನು
ಆಲಿಸಲಾಗದ,
ನನ್ನೀ ಕಿವಿಗಳಿರಲೇಕೆ?

ನೀನಿರುವೆಡೆ ಕೊಂಡೊಯ್ಯದ
ನನ್ನೀ ಕಾಲುಗಳಿರಲೇಕೆ?

ನಿನ್ನನ್ನೊಮ್ಮೆ ಸ್ಪರ್ಶಿಸಲಾಗದ
ನನ್ನೀ ಕೈಗಳಿರಲೇಕೆ?

ನಿನಗರ್ಪಿಸಲಾಗದ ಈ ಹೃದಯ
ನನ್ನೊಳಗಿರಲೇಕೆ?

ನಿನ್ನ ದರುಶನವಾಗದ ದಿನ,
ಆ ಸೂಯ೯ನಿರಲೇಕೆ?

ನಿಜ ಹೇಳಲೇ ಸಖೀ,
ನಿನ್ನೊಂದಿಗೆ ಸಹಜೀವನ
ನಡೆಸಲಾಗದ
ನನ್ನೀ ಜೀವವೇ ಇರಲೇಕೆ?

ಸಖೀ,
ನೀನಿಲ್ಲದ ಮೇಲೆ ಏನಿರಲೇಕೆ?
********************


ಬಂಗಾರಪ್ಪನವರೇ ವಿಶ್ರಾಂತಿ..ಶಾಂತಿ…ಶಾಂತಿ..!!!

28 ಏಪ್ರಿಲ್ 09

ಮುದುಕನಾದ ಮೇಲೆ ಸೈಕಲ್ ಬಿಡುವ ದುಸ್ಸಾಹಸ ತಪ್ಪು
ಕೊನೆಗಾಲದಲಿ ಕೈಯ ಆಸರೆ ಸಿಕ್ಕರದನು ಮನಸಾರೆ ಒಪ್ಪು

ಇಂದು ಒಂದಾದರೂ ಹಿಂದೆ ನಿಮ್ಮದು ಒಡೆದ ಮನೆ-ಮನ
ರಾಘವೇಂದ್ರ ಹಾಗಲ್ಲ ಒಪ್ಪಿಸಿದ್ದಾನೆ ಅಪ್ಪನಿಗೇ ತನು ಮನ

ಮಗನಲ್ಲಿ ನೆಪಮಾತ್ರ ಯುದ್ಧ ಯಡ್ಯೂರಪ್ಪನವರದೇ ಅಲ್ಲಿ
ಸೋಲುಂಡರೆ ಮಾತ್ರ ಯಾರ ಶೋಭೆಯೂ ಉಳಿಯದಲ್ಲಿ

ಜನ ಸೇವೆ ನಾಡ ಸೇವೆ ಎಲ್ಲಾ ನಿಮ್ಮ ಬರಿಯ ಬಾಯಿ ಮಾತು
ಮಾಡಲಾಗದೇ ಸೇವೆ ಒಂದುವೇಳೆ ನೀವು ಹೋದರೂ ಸೋತು

ಬಂಗಾರಪ್ಪನವರೇ ಸಾಕು ನೀವು ಮಾಡಿರುವ ಸೇವೆ ನಮ್ಮ ನಾಡಿಗೆ
ಇನ್ನಾದರೂ ವಿಶ್ರಾಂತಿ ಪಡೆದು ಮಕ್ಕಳನ್ನು ಬಿಡಿ ಅವರವರ ಪಾಡಿಗೆ