ನಾಳೆ ನಮ್ಮೂರಲ್ಲಿ ನಿಜಕ್ಕೂ ನೀವೇ ದೇವರು!

15 ಏಪ್ರಿಲ್ 10

ನಮ್ಮ ಕಷ್ಟ ಹೇಳಿಕೊಳ್ಳುವುದಕೆ ಯಾವ ದೇವರಾದರೇನು?
ನಮ್ಮ ಹೊಟ್ಟೆ ತುಂಬಿಸುವಾತ ಯಾವ ಮತದವನಾದರೇನು?

ಅಂಗಡಿಗೆ ಬರುವ ಗಿರಾಕಿಗಳ ಜಾತಿ ಕೇಳುವವರುಂಟೇನು?
ನಮ್ಮ ಸಂಪಾದನೆಯ ಹಣಕ್ಕೆ ಯಾವುದೇ ಜಾತಿ ಉಂಟೇನು?

ಇಲ್ಲಿ ಹುಟ್ಟಿ ದೇವರು ಎನಿಸಿಕೊಂಡವರ ಪೂಜಿಸುವವರೇ ಎಲ್ಲ
ಆದರೆ ಅವರಾಡಿ ಹೋದ ಮಾತನಿಂದು ನೆನೆಸುವವರೇ ಇಲ್ಲ

ರಾಮ, ಕೃಷ್ಣ, ಅಲ್ಲಾಹ್, ಯೇಸು, ಎಲ್ಲರದೂ ಆಗಿತ್ತು ಒಂದೇ ಉಕ್ತಿ
ಪ್ರೀತಿಯಿಂದ ಬಾಳಿದರೆ ನಿಜದಿ ಅದುವೇ ಆ ದೇವರ ಮೇಲಿನ ಭಕ್ತಿ

ಯಾವ ದೇವರ ಪೂಜಿಸಿದರೂ ಹೇಳಿ ಬಡತನಕೆ ಅದು ಉತ್ತರವೇ?
ಮತ ಭೇದ ಇಲ್ಲದೆಯೇ ಬಡವರ ಉದ್ಧಾರ ನಿಜಕೂ ಅಸಾಧ್ಯವೇ?

ಇವರ ಹೊಟ್ಟೆ ತುಂಬಿಸುವುದಕ್ಕೆ ಬರೀ ಎರಡು ಹೊತ್ತಿನ ಊಟ
ಅಲ್ಲದೆ ವಿದ್ಯಾವಂತರನ್ನಾಗಿಸಲು ಮಕ್ಕಳಿಗೆಲ್ಲಾ ಪುಕ್ಕಟೆ ಪಾಠ

ನೀಡಿ ನೋಡಿ, ನಾಳೇ ನಿಮ್ಮನ್ನೇ ಪೂಜಿಸುವರಿವರು
ನಾಳೆ ನಮ್ಮೂರಲ್ಲಿ ನಿಜವಾಗಿಯೂ ನೀವೇ ದೇವರು!
******

ಅಮಾಯಕರು ಮತಾಂತರದ ಆಮಿಷಗಳಿಗೆ ಏಕೆ ಬಲಿಯಾಗುತ್ತಾರೆ  ಅನ್ನುವ ಬಗ್ಗೆ ಒಂದು ವಿಭಿನ್ನ ದೃಷ್ಟಿಕೋನದಿಂದ ನೋಡಲು ಯತ್ನಿಸಿದಾಗ ಆಸುಮನದಲ್ಲಿ ಮೂಡಿದ ಮಾತುಗಳು.


ಪಂಚಾಂಗ ನನಗನಗತ್ಯ!!!

06 ನವೆಂ 09

ಸಖೀ,

 

ಈಗೀಗ ನನಗೆ

ಕಂಡು ಬರುತ್ತಿಲ್ಲ

ಹೆಚ್ಚಾಗಿ ಪಂಚಾಂಗದ

ಅಗತ್ಯ,

 

ಈಗೀಗ ನನಗೆ

ಕಂಡು ಬರುತ್ತಿಲ್ಲ

ಹೆಚ್ಚಾಗಿ ಪಂಚಾಂಗದ

ಅಗತ್ಯ,

 

ಏಕೆಂದರೆ,

ನಾನರಿವೆ ಶುಕ್ಲ ಪಕ್ಷದ

ಕೊನೆಯ ದಿನವೆಂದು

ನೀನು ಮನಬಿಚ್ಚಿ

ನಗುತಿರುವಾಗ,

ಮತ್ತು ಕೃಷ್ಣ ಪಕ್ಷದ

ಕೊನೆಯ ದಿನವೆಂದು

ನೀನು ಸಿಡುಕುತಿರುವಾಗ

ಅನಗತ್ಯ!!!


ಮಣ್ಣಿನ ಪ್ರೇಮ ಚುನಾವಣೆಯಲಿ ಗೆಲುವ ತನಕ!!!

07 ಜುಲೈ 09
ಮಮತಾಳ ರೈಲು ಕರ್ನಾಟಕದಿಂದ ಕೇರಳದ ಕಡೆಗೆ
ಓಡುವುದೇಕೆ ಅನ್ನುವುದಕೇ ಅಲ್ಲ ನಮಗೀಗ ಚಿಂತೆ
ಬೆಂಗಳೂರು ಮಂಗಳೂರು ರೈಲು ಉತ್ತರಕ್ಕೆ ತಿರುಗಿ
ಕರ್ನಾಟಕದ ಕರಾವಳಿಯಲೇ ಮುಂದೆ ಸಾಗಬೇಕಿತ್ತಂತೆ

ಕರಾವಳಿಯ ಮತದಾರ ಕಾಂಗ್ರೇಸಿಗೆ ಮತ ನೀಡಿಲ್ಲ
ಎನ್ನುವುದರಿಂದ ಕಾಂಗ್ರೇಸಿಗರಿಗೆ ಮುನಿಸೇನೋ
ಹೀಗೆ ತಾರತಮ್ಯ ತೋರಿದರೆ ಮತದಾರ ಅವರಿಂದ
ಇನ್ನೂ ದೂರವಾಗುತ್ತಾನೆಂದವರು ಅರಿಯರೇನೋ

ಬೆಂಗಳೂರಿನಿಂದ ಹೊರಡುವ ರೈಲು ಇನೂ ಕಡಿಮೆ
ಸಮಯದಲಿ ಸಾಗಿ ಮಂಗಳೂರು ಸೇರಬೇಕಿತ್ತು
ಮೈಸೂರಿನ ದಾರಿ ಮರೆತು ಬೆಂಗಳೂರಿನಿಂದ
ಸೀದಾ ಸಕಲೇಶಪುರದ ಮೂಲಕ ಸಾಗಬೇಕಿತ್ತು

ಮೊಯ್ಲಿ, ಕೃಷ್ಣ, ಮುನಿಯಪ್ಪ, ಖರ್ಗೆ, ಇವರನ್ನೆಲ್ಲಾ
ನಮ್ಮವರೆಂದು ಕರೆದು ಸನ್ಮಾನ ಮಾಡಿಯಾಯ್ತು
ಸನ್ಮಾನ ಮುಗಿಸಿ ಹೋದವರು ಅಲ್ಲಿ ಮಮತಾಳ
ಆಯವ್ಯಯ ಪತ್ರಕ್ಕೆ ಖುಷಿಯಿಂದ ಮೇಜು ಕುಟ್ಟಿದ್ದಾಯ್ತು

ರಾಜಕೀಯವೇ ಹೀಗೆ ಇಲ್ಲಿ ನಮ್ಮವರೆಂಬವರೇ ಇಲ್ಲ
ಇದ್ದರೂ ಅವರು ನಮ್ಮವರಾಗಿಯೇ ಉಳಿಯುವುದಿಲ್ಲ
ಕನ್ನಡಿಗರ ನಾಡಿನಿಂದ ಕನ್ನಡಿಗರೇ ಚುನಾಯಿತರಾಗಿ
ಹೋದರೂ ಇಂದು ನಮಗೇನೂ ಲಾಭ ಆಗುತ್ತಲೇ ಇಲ್ಲ

ನಾಯಕರುಗಳ ಹೋರಾಟ ಭಾಷಾಭಿಮಾನ ಮಣ್ಣಿನ
ಮೇಲಿನ ಪ್ರೇಮ ಇವೆಲ್ಲಾ ಚುನಾವಣೆಯಲಿ ಗೆಲುವ ತನಕ
ಗೆದ್ದು ಹೊದ ಮೇಲೆ ಮರೆಯುತ್ತಾರೆ ಇತ್ತ ತಲೆ ಹಾಕದೇ
ಮುಖ ಕಾಣಿಸದೇ ಮುಂದಿನ ಮತದಾನದ ಬರುವನಕ


ಕೇಂದ್ರ ಮಂತ್ರಿಗಳ ಕ್ಯಾತೆ!!!

25 ಮೇ 09
ಲಾಲೂ ಪ್ರಸಾದ ಓಡಿಸಿದ ರೈಲಿಗಿನ್ನು ಮಮತಾ ಬ್ಯಾನರ್ಜಿ ಚಾಲಕಿ
ತೋರಿಸಬೇಕಿದೆ ಲಾಭ ತರುತ್ತಿದ್ದ ಲಾಲೂನಂತೆ ತಾನೂ ಚಾಲಾಕಿ

ಬೇಡ ಬೇಡ ಎಂದರೂ ಚಿದಂಬರಂ ಕೈಯಲ್ಲೇ ಇನ್ನು ಗೃಹಖಾತೆ
ಬಟ್ಟೆ ಬದಲಿಸುವ ಮೊದಲು ವಹಿಸಬೇಕಾಗುತ್ತದೆ ಆತ ಜಾಗ್ರತೆ

ಬಾಂಬು ಬಿದ್ದಾಗ ಬಟ್ಟೆ ಬದಲಿಸಿ ಕುಖ್ಯಾತನಾಗಿದ್ದ ಆ ಶಿವರಾಜ
ನೀನೂ ಹಾಗೆ ಮಾಡಿದರೆ ನಿನ್ನನ್ನೂ ಬಿಡಲಾರರಲ್ಲೋ ರಾಜ

ಹಿಂದೆ ನಡೆಸಿದ ಕೃಷಿಯ ಮುಂದುವರಿಸಬೇಕಿದೆ ಶರದ ಪವಾರ್
ಕ್ರಿಕೆಟ್ಟಷ್ಟೆ ಅಲ್ಲ ನೋಡಬೇಕಿದೆ ರೈತ ಸಮುದಾಯದ ಕಾರುಬಾರ್

ಹಲವೊಮ್ಮೆ ತೋರಿದ್ದ ಇತ್ತೆಂದು ಪ್ರಧಾನಿಯಾಗುವತ್ತ ತನ್ನ ಚಿತ್ತ
ಪ್ರಣವ ಮುಖರ್ಜಿ ತೆಪ್ಪಗಿರಬೇಕಾಯ್ತು ಮಗದೊಮ್ಮೆ ಪಡೆದು ವಿತ್ತ

ವಿದೇಶೀ ಶೈಲಿಯ ದಿರಿಸು ವಿದೇಶೀ ನುಡಿ ನಮ್ಮೂರ ಕೃಷ್ಣನದು
ಅದಕ್ಕೆ ಇರಬೇಕು ಇನ್ನು ಮುಂದೆ ವಿದೇಶ ವ್ಯವಹಾರ ಅವನದು

ಪದೇ ಪದೇ ತಲೆ ಸುತ್ತು ಬಂದು ಬೀಳುವ ಆಂಟನಿಯ ಆರೋಗ್ಯ
ಈ ದೇಶದ ರಕ್ಷಣೆ ಮಾಡುವಲ್ಲಿ ಯಶಸ್ವಿಯಾದರೆ ನಮ್ಮ ಭಾಗ್ಯ