ಕನ್ನಡದ ಕಂಪ ಪಸರಿಸುವಾ…!

22 ಜೂನ್ 10

 

ಕಾಲೆಳೆದು ಕಾಲೆಳೆದು ಪಡಲು ಸಂತೋಷ

ಬಹುಕೃತ ವೇಷ ವ್ಯರ್ಥ ಆವೇಷ

ಕಾಲೆಳೆದು ಕಾಲೆಳೆದು ಸೋತವರೇ ಎಲ್ಲ

ನೆಮ್ಮದಿಯ ಪಡೆದವರು ಯಾರೂ ಇಲ್ಲಿಲ್ಲ

 

ಸಾಹಿತ್ಯ ಲೋಕದಲಿ ಬಂಧುಗಳೇ ನಾವೆಲ್ಲಾ

ಮೇಲು ಕೀಳಾರಿಲ್ಲ ಜಾತಿಯಾ ಹಂಗಿಲ್ಲ

ಎಲ್ಲರನೂ ಸಮನಾಗಿ ಕಾಣುವಾ…

 

“ಕಾಲೆಳೆದು ಕಾಲೆಳೆದು ಪಡಲು ಸಂತೋಷ”

 

ಪ್ರತಿಕ್ರಿಯೆಗಳು ಬರಹಕ್ಕೇ ಸೀಮಿತವಾಗಿರಲಿ

ಬರೆದಾತ ಯಾರೆಂಬ ಗೋಜಿಲ್ಲದಿರಲಿ

ಎಲ್ಲರಲೂ ಒಂದಾಗಿ ಬೆರೆಯುವಾ…

 

“ಕಾಲೆಳೆದು ಕಾಲೆಳೆದು ಪಡಲು ಸಂತೋಷ”

 

ಕನ್ನಡದ ಭಾಷೆಯನು ಶ್ರೀಮಂತಗೊಳಿಸಿ

ಬೆರೆತಿರುವ ಕಳೆಯನ್ನು ಒಂದಾಗಿ ಅಳಿಸಿ

ಎಲ್ಲರೂ ಒಂದಾಗಿ ಶ್ರಮಿಸುವಾ….

 

“ಕಾಲೆಳೆದು ಕಾಲೆಳೆದು ಪಡಲು ಸಂತೋಷ”

 

ಕನ್ನಡಕೆ ಕನ್ನಡವೇ ಸಾಟಿ ತಾನೆಂದು

ಜಗಕೆಲ್ಲಾ ತೋರಿಸಲು ಪಣತೊಡುವ ಇಂದು

ಕನ್ನಡದ ಕಂಪ ಪಸರಿಸುವಾ…

 

“ಕಾಲೆಳೆದು ಕಾಲೆಳೆದು ಪಡಲು ಸಂತೋಷ”

*****************************


ಬೆಳೆಯುವುದೆಂತು?

16 ಜೂನ್ 10

ಸಖೀ

ಒಳ್ಳೆಯ ಬೀಜ

ಮೊಳಕೆಯೊಡೆದು

ಬೆಳೆಯಲು

ನೆಲ-ಜಲ-ಗೊಬ್ಬರ

ಎಲ್ಲವೂ ಇರಬೇಕು

ಸರಿತೂಕದಲಿ

ನೀ ನೋಡು

 

ಕೆಟ್ಟದ್ದು ಹಾಗಲ್ಲ

ಸೊಕ್ಕೆದ್ದು ಬೆಳೆಯುವುದು

ಎಲ್ಲೆಂದರಲ್ಲಿ

ಇದ್ದರೂ ಕಾಡು ಮೇಡು

 

ಅಂತೆಯೇ

ಬೆಳೆಯುತ್ತವೆ ನಮ್ಮೊಳಗೆ

ತಂತಾನೇ ಬುದ್ಧಿಗಳು

ಹಾಳು – ಕೀಳು

 

ಒಳ್ಳೆಯದನು ಬೆಳೆಸಲು

ಅನವರತ ಶ್ರಮಬೇಕು

ಅದಕಾಗಿ

ಈ ಜೀವನವನೇ

ತಪಸ್ಸಾಗಿಸಬೇಕು

ನೀ ಕೇಳು!

*-*-*-*-*