ಮೂರು ಹನಿಗಳು!

13 ಮೇ 12

 

ಪಯಣ!

ನಿನ್ನೂರಿನತ್ತ 
ಸಾಗುವಾಗ 
ಪಯಣ 
ಅದೆಷ್ಟು ಸುಖಕರ!
ನಿನ್ನೂರಿನಿಂದ 
ಮರಳುವಾಗ 
ಪಯಣ 
ಯಾಕೋ ಕಷ್ಟಕರ!


ಹನಿ ಹನಿ!

ಈ ಇಳೆ
ಮೈತುಂಬಿ
ಹಸಿರಿನ
ಬಸಿರಿಂದ
ಶ್ರೀಮಂತವಾಗಲು
ಬೇಕು
ಮೇಘರಾಜನ
ಹನಿ ಹನಿ!

 


ಯಾರಿರಬಹುದು?

ಕನಸಲ್ಲಿ ಕಳುವಾಗಿ
ರಾತ್ರಿಯಿಡೀ ಕಾಡಿದ್ದೆ ನೀನು,
ಹುಡುಕಾಡಿ ಹುಡುಕಾಡಿ
ಸೋತುಹೋಗಿದ್ದೆ ನಾನು,
ಮತ್ತೆ ಬೆಳಗಾಗುವಾಗ
ಮಗ್ಗುಲಲ್ಲೇ ಕಿರುಕಿರುಚಿ
ನನ್ನನ್ನೇ ಎಬ್ಬಿಸಿಬಿಟ್ಟು
ಮುಸಿಮುಸಿ ನಗುವೆಯೇನು!?

*************** 


ಹುಚ್ಚು ಹುಡುಗಿ…!

03 ಡಿಸೆ 10

 

ಹುಚ್ಚು ಹುಡುಗಿ
ಏನೇನೋ ಕೇಳುತ್ತಿರುತ್ತಾಳೆ
ಪ್ರಶ್ನೆಗಳ ಸುರಿಮಳೆಗೈಯುತ್ತಿರುತ್ತಾಳೆ
ನನ್ನ ಬಾಯ್ಕಟ್ಟಿಸಿ ತಾನು ನಗುತ್ತಾ ಇರುತ್ತಾಳೆ!

ಹುಚ್ಚು ಹುಡುಗಿ
ವಯಸ್ಸಾಗಿಲ್ಲ ನನ್ನ ಅರ್ಧದಷ್ಟೂ
ತಲೆ ತುಂಬಾ ತುಂಬಿಕೊಂಡಂತಿದೆ ಬೆಟ್ಟದಷ್ಟು
ಹೊಗಳುತ್ತಿರುತ್ತಾಳೆ ನನ್ನನ್ನು ಅಷ್ಟೊಂದು ಇಷ್ಟಪಟ್ಟು!

ಹುಚ್ಚು ಹುಡುಗಿ
ಮನದ ನೋವ ಮರೆ ಮಾಚುತ್ತಾಳೆ
ನಗುವಿನ ಮುಖವಾಡ ಹೊತ್ತು ನಗುತ್ತಿರುತ್ತಾಳೆ
ನನ್ನ ಅರಿವಿಗೆ ತಾರದಿರಲು ಯತ್ನಿಸಿ ಸೋಲುತ್ತಿರುತ್ತಾಳೆ!

ಹುಚ್ಚು ಹುಡುಗಿ
ನನಗೇ ಪಾಠ ಮಾಡುತ್ತಿರುತ್ತಾಳೆ
ನನ್ನ ಜೀವನದ ಅನುಭವ ಏನೂ ಅಲ್ಲ ಅನ್ನುತ್ತಾಳೆ
ತನ್ನ ಮುಂದೆ ನನ್ನನ್ನು ಕಿರಿದಾಗಿಸಿ ತಾನು ಹಿರಿಯಳಾಗುತ್ತಾಳೆ!
*****************


ಸಂಬಂಧ – ಸ್ನೇಹಬಂಧ!

12 ಜುಲೈ 10

ಸಂಬಂಧಗಳಿಗಿಂತ ನಿಜಕ್ಕೂ ಸ್ನೇಹಬಂಧಗಳೇ ಶ್ರೇಷ್ಠ

ತೊರೆಯಬಹುದು ಸಂಬಂಧಿಗಳನು, ಸ್ನೇಹಿತರನ್ನು  ಕಷ್ಟ

 

ರಕ್ತ ಸಂಬಂಧವೇ ಶಾಶ್ವತ ಅನ್ನುವ ಮಾತು ನನಗೆ ಅಪಥ್ಯ

ಸ್ನೇಹಿತರೇ ಒಂದು ಕೈ ಮೇಲು ಅನ್ನುವುದು ನಿಜವಾಗಿ ಸತ್ಯ

 

ಸಂಬಂಧಗಳು ಕೂಡಿದಂತೆಲ್ಲಾ ಕಳಕೊಂಡೂ ಬಂದವಲ್ಲಾ?

ಸ್ನೇಹಿತರು ಕೂಡಿಕೊಂಡದ್ದೇ ಜಾಸ್ತಿ ಕಳೆದುಕೊಂಡದ್ದಷ್ಟಿಲ್ಲ

 

ಸಂಬಂಧಿಗಳ ನಡುವೆ ಸಂಪರ್ಕ ವಿರಳವಾದರೆ ಅದು ಕಷ್ಟ

ಸ್ನೇಹಿತರು ಅದೆಷ್ಟೇ ದೂರ ಇದ್ದರೂ ಅವರು ಮನಕೆ ಇಷ್ಟ

 

ಹೆತ್ತವರನ್ನೂ ಆಶ್ರಮಕ್ಕೆ ಅಟ್ಟುವ ಮಕ್ಕಳಿದ್ದಾರೆ ಈ ನಾಡಿನಲ್ಲಿ

ಒಳ್ಳೆಯ ಸ್ನೇಹಿತರನು ಕೈಬಿಡುವವರು ಯಾರಿದ್ದಾರೆ ಹೇಳಿ ಇಲ್ಲಿ

*****************************


ಕಷ್ಟ ಬರಬಹುದೆಂದು ಸತ್ಯ ನನಗನಿಷ್ಟವೆಂದೆನ್ನಲೇ

29 ಏಪ್ರಿಲ್ 10

 

 

ಕ್ಷಮೆಯೊಂದೇ ಧರೆಯೊಳಗೇ ಪರಮವೆಂದು ಅಂದರೇ ಎಲ್ಲ

ಕ್ಷಮೆಯನ್ನು ಯಾಚಿಸದವನಿಗೆ ಧರೆಯೊಳಗೆ ಕ್ಷಮೆಯೇ ಸಲ್ಲ

 

ತಪ್ಪನ್ನು ತಪ್ಪೆಂದರುಹದೊಡೆ ಆ ತಪ್ಪನ್ನು ನಾಮಾಡಿದಂತೆ

ಬಾಯ ತೆರೆಯದಿದ್ದೊಡೆ ಅನಾಹುತಕ್ಕೆ ನಾ ಕಾರಣನಾದಂತೆ

 

ದುರ್ಜನರ ಸಹವಾಸವದು ಹಾವಿನೊಂದಿಗಿನ ಸರಸದಂತೆ

ಯಾವಾಗ ಎಲ್ಲಿ ಕಡಿಯುವುದೇನೋ ನಮಗೇ ಅರಿಯದಂತೆ

 

ಸಂಬಂಧಗಳ ನೆಪದಲ್ಲಿ ಆತ್ಮ ವಂಚನೆ ಮಾಡಿಕೊಳ್ಳಲೇಕೆ

ಎಲ್ಲರ ಮೇಲೆಳೆದುಕೊಂಡು ಮೈಯೆಲ್ಲಾ ಪರಚಿಕೊಳ್ಳಲೇಕೆ

 

ಅವರಿವರನ್ನು ಮೆಚ್ಚಿಸುತ್ತಾ ಬಾಳಲಾಗದು ಜೀವನದುದ್ದಕ್ಕೂ

ದೇವರು ಮೆಚ್ಚದಿದ್ದರೆ ಈ ಆತ್ಮಕ್ಕೆ ಗೋಳೇ ಬಾಳಿನುದ್ದಕ್ಕೂ

 

ಜನರು ಮೂರ್ಖರು ಅವರ ದೇವರೇ ಕ್ಷಮಿಸಲಿ ಎಂದೆನ್ನಲೇಕೆ

ತನ್ನತನವನೇ ಮರೆತು ನಪುಂಸಕನಾಗಿ ನಾನಿಲ್ಲಿ ಬಾಳಲೇಕೆ

 

ನನಗೆ ಕಷ್ಟ ಬರಬಹುದೆಂದು ಸತ್ಯ ನನಗೆ ಅನಿಷ್ಟವೆಂದೆನ್ನಲೇ

ಅಸತ್ಯವನೇ ಮೆರೆದು ದೇವನಿಗೇ ಇಷ್ಟವಿಲ್ಲದವನಂತಾಗಲೇ

************************************


ದೇವರ ಬಳಿಗೆ ಹೋಗಲೇಬೇಕೇ…?

05 ಆಗಸ್ಟ್ 09
 

ಯಾರೂ ಹಜಾಮರ ಬಳಿಗೆ ಹೋಗಿಲ್ಲ ಹಾಗಾಗವರಿಗೆ ಹಜಾಮರಿಲ್ಲ
ಯಾರೂ ದೇವರ ಬಳಿಗೆ ಹೋಗಿಲ್ಲ ಹಾಗಾಗವರಿಗೆ ದೇವರೇ ಇಲ್ಲ
 
ಹಜಾಮರ ಬಳಿಗೆ ಹೋಗದವರ ತಲೆಯಲ್ಲಿ ದಪ್ಪ ಕೂದಲುಗಳಿವೆ
ದೇವರ ಬಳಿಗೆ ಹೋಗದವರ ಜೀವನದಲಿ ಸಾಕಷ್ಟು ಕಷ್ಟಗಳಿವೆ
 
ಈ ಮೇಲಿನ ಮಾತುಗಳು ಕತೆ ಹೇಳುವವರದ್ದು ನನ್ನದಲ್ಲವೇ ಅಲ್ಲ
ಹಜಾಮನಿಗೂ ದೇವರಿಗೂ ಹೋಲಿಕೆ ಮಾಡುವ ಮಂದಿ ಇದ್ದಾರಲ್ಲ
  
ಕತೆಯಲ್ಲಿ ಸ್ವಾರಸ್ಯ ಇರಬಹುದು ಆದರೆ ಅದೇ ಸಿದ್ಧಾಂತ ಎಂದಲ್ಲ
ನಮಗೆ ಬೇಕಾದಂತೆಲ್ಲಾ ಕತೆಗಳನು ಅರ್ಥೈಸಿ ಕೊಳ್ಳಬಹುದಲ್ಲಾ
 
ಕೂದಲುಗಳ ಕಳೆದುಕೊಳ್ಳಲು ಹಜಾಮರ ಬಳಿಗೆ ಹೊಗಬೇಕು
ಕಷ್ಟಗಳ ಕಳೆಯಲು ಮನುಜ ದೇವರ ಬಳಿಗೇಕೆ ಹೋಗಬೇಕು
 
ಹಜಾಮರು ಸರ್ವಂತರ್ಯಾಮಿಯರಲ್ಲ ಅದು ನಮಗೂ ಗೊತ್ತು
ದೇವರು ಸರ್ವಂತರ್ಯಾಮಿ ಇದೂ ನಾವೆಲ್ಲ ಕೇಳಿರುವ ಮಾತು
 
ಹಜಾಮರಿಲ್ಲದ ಕಡೆ ಜನರಿದ್ದಾರೆ ಆ ಹಜಾಮರಿಗೆ ಗೊತ್ತಿಲ್ಲದೆಯೇ
ಮನುಜರು ಎಲ್ಲಾ ಕಡೆ ಇದ್ದಾರೆಂಬುದು ಆ ದೇವರಿಗೆ ಗೊತ್ತಿಲ್ಲವೇ
 
ಮನುಜ ದೇವರಿದ್ದಲ್ಲಿಗೆ ಹೋಗಲೇ ಬೇಕೆಂದೇನಿಲ್ಲ ಅದು ಸುಳ್ಳು
ಎಲ್ಲರೊಳಗೂ ಇರುವಾತನನು ಹೊರಗೆ ಹುಡುಕುವುದು ಮರುಳು

 


ನಾನೀಗ ಏಕಾಂಗಿ!!!

14 ಮೇ 09
ಹಲವು ತಿಂಗಳುಗಳ
ನಂತರ ನಾನಾಗಿದ್ದೇನೆ
ಮತ್ತೀಗ  ಏಕಾಂಗಿ
 
ಏಕೆಂದರೆ ಮನೆಯಲ್ಲಿಲ್ಲ
ಈಗ ನನ್ನ ಮಗಳು
ಮತ್ತೆನ್ನ ಅರ್ಧಾಂಗಿ
 
ವರುಷವಾಗಿತ್ತು ನಮ್ಮ
ಮಗಳು ಊರತ್ತ
ಹೋಗದೇ
 
ತಪಸ್ಸಿಗೆ ಕೂತಂತಿತ್ತು
ಆಕೆ ತನ್ನ ಓದಿನಿಂದ
ಕಿಂಚಿತ್ತೂ ಬಿಡುವಿಲ್ಲದೇ
 
ಆಕೆಯಿಂದಾಗಿ ಆಕೆಯ
ತಾಯಿಗೂ ಹೋಗಲು
ಆಗಿರಲಿಲ್ಲ ಊರತ್ತ
 
ಏನೇ ಅವಶ್ಯಕತೆ
ಇದ್ದರೂ ನಾನೇ
ಓಡಬೇಕಿತ್ತು ಅತ್ತ
 
ಹಗಲು ಕಛೇರಿಯಲ್ಲಿ
ಹೇಗಾದರೂ ದಿನ
ಕಳೆದು ಹೋಗುತ್ತದೆ
 
ಮನೆಗೆ ಹೋದರೆ
ಅಲ್ಲಿಯ ಮೌನವೆನ್ನನು
ತಿನ್ನಲು ಬರುತ್ತದೆ
 
ಎಲ್ಲರೂ ಇಲ್ಲಿದ್ದಾಗ
ಹೆಚ್ಚು ಮಾತಾಡದೇ
ಮೌನವಾಗಿರುವಾಸೆ
 
ಯಾರೂ ಇಲ್ಲದಾಗ
ಯಾರಾದರೂ ಕರೆದು
ಮಾತಾಡಿಸಲೆಂಬಾಸೆ
 
ಯಾವುದನ್ನೂ ರೂಢಿ
ಮಾಡಿಕೊಂಡು ಬಿಟ್ಟರೆ
ಅದು ಬಲು ಕಷ್ಟ
 
ಯಾರ ಹಂಗೂ ಇಲ್ಲದೆ
ಬಾಳುವಭ್ಯಾಸವಾದರೆ
ಈ ಬಾಳಿನಲ್ಲಿಲ್ಲ ನಷ್ಟ