ಸುಂದರ ಕವಿತೆ!

01 ಸೆಪ್ಟೆಂ 12

ಸಖೀ,
ನಾನು ಆವಾಗಿನಿಂದಲೂ
ಯತ್ನಿಸುತ್ತಲೇ ಇದ್ದೇನೆ, 
ಬರೆಯಲು ಜನ
ಮೆಚ್ಚುವಂತಹ
ಒಂದು ಸುಂದರ
ಕವಿತೆಯನ್ನು;

ಆಮೇಲರಿವಾಯ್ತು
ಸುಂದರವಾಗಿಸಲು
ಯತ್ನಿಸದೇ,
ಹೊರಗೆ ಹಾಕುತ್ತಾ
ಇರಬೇಕು ಮನದ
ಮಾತುಗಳನ್ನು!


ಏಕೆ ಸಿಕ್ಕೀತು ನನಗಿಂದು?!

17 ಆಗಸ್ಟ್ 10

ಎಂದೋ
ಗೀಚಿ
ಮರೆತಿದ್ದ,
ಕವಿತೆಯೊಂದು
ಕನಸಿನಲಿ ಬಂದು,
ನನಗೂ ಪ್ರಕಾಶ
ನೀಡು ಎಂದು,
ಕಾಡಿತು
ಬೇಡಿತು ಇಂದು;

ನಿದ್ದೆಯಿಂದೆದ್ದು
ಹುಡುಕಾಡಿದೆ,
ತಡಕಾಡಿದೆ,
ಎಲ್ಲಾ ಪುಸ್ತಕಗಳ
ಕೊಡವಿದೆ,
ಎಲ್ಲೂ ಸಿಗಲಿಲ್ಲ;

ಹೇಗೆ
ಸಿಕ್ಕೀತು?
ಏಕೆ
ಸಿಕ್ಕೀತು?

ಯೌವನದ
ದಿನಗಳಲಿ,
ಚಿಗುರುಮೀಸೆಯ
ಹುಡುಗನ,
ಹೃದಯ
ಬಡಿತವ
ಹೆಚ್ಚಿಸಿ,
ರಾತ್ರಿಗಳಲಿ
ನಿದ್ದೆಯ
ಕೆಡಿಸಿ,
ಕನಸುಗಳ
ಮೂಡಿಸಿ,
ಅದೊಂದು
ದಿನ ಸದ್ದಿಲ್ಲದೇ,
ನೆನಪಿನಂಗಳದಿಂದ
ಮರೆಯಾದವಳು
ಅವಳು ಅಂದು,

ಅವಳ
ಬಟ್ಟಲು ಕಂಗಳ,
ಮುಂಗುರುಳುಗಳ,
ಮಧುರ ಮಾತುಗಳ,
ನೀಳ ಕೈಗಳ,
ಕೆಂಪು ತುಟಿಗಳ,
ಬಣ್ಣಿಸಿ ಬಣ್ಣಿಸಿ,
ಗೀಚಿದ್ದ
ಆ ಕವಿತೆ,
ಹೇಗೆ
ಸಿಕ್ಕೀತು
ಏಕೆ
ಸಿಕ್ಕೀತು
ನನಗಿಂದು?
*****


ಕವಿತೆಗೆ ಮೊದಲ ಪ್ರತಿಕ್ರಿಯೆ ಗಂಭೀರ ಮೌನ!!!

06 ನವೆಂ 09

 

 

ಕವಿತೆ ಗರ್ಭ ಧಾರಣೆಗೆ ಯಾವುದೇ ಸಾಮಾಜಿಕ ಕಟ್ಟಳೆಗಳಿಲ್ಲ

ಬೆಳಕು ಮರೆಯಾಗಿ ಬರುವ ಕತ್ತಲಿಗಾಗಿ ಕವಿತೆ ಕಾಯುವುದಿಲ್ಲ

 

ಕವಿ ನನಸಿನಲ್ಲಿದ್ದಾನೋ, ಕನಸಲ್ಲಿದ್ದಾನೋ, ಕವಿ ಪ್ರೇಮಿಯೋ,

ಭಗ್ನ ಪ್ರೇಮಿಯೋ, ಎಂದರಿತ ನಂತರವಷ್ಟೇ ಹೊರ ಬರುವುದಲ್ಲ

 

ಪ್ರೀತಿಯನ್ನು ಹುಡುಕುತ್ತಿದ್ದಾನೋ, ಇಲ್ಲ ಪ್ರೀತಿಯ ಮುಂಗಾರಿನಲ್ಲಿ

ಕವಿ ತೊಯ್ದಿರುತ್ತಾನೋ ಎಂದು ತಿಳಿದು ಕವಿತೆ ಹೊರ ಬರುವುದಿಲ್ಲ

 

ಕವಿಯ ಆಂತರಿಕ ಹೊಯ್ದಾಟಗಳು ಪದಗಳ ರೂಪ ತಳೆವಾಗಲೆಲ್ಲಾ

ಬಾಹ್ಯದ ಆಗುಹೋಗುಗಳಿಗೆ ಕವಿ ಭಾವ ಸ್ಪಂದನ ಆಗುವಾಗಲೆಲ್ಲಾ

ನವಮಾಸ ತುಂಬಿದ ಗರ್ಭಿಣಿಯ ಗರ್ಭವನು ಬಿಟ್ಟು ಹೊರ ಜಗತ್ತಿಗೆ

ಕಾಲಿಡುವ ಶಿಶುವಿನಂತೆ ಮನದಿಂದ ಹೊರ ಹೊಮ್ಮುವುದೇ ಕವಿತೆ

 

ಒಂದು ಮನದಿಂದ ಹೊರ ಹೊಮ್ಮಿ ಇನ್ನೊಂದು ಮನವನ್ನು ಸ್ಪರ್ಶಿಸಿ

ಅಲ್ಲೂ ಭಾವ ಸ್ಪಂದನಕ್ಕೆ ಆಸ್ಪದ ಮಾಡಿಬಿಡುವ ಸಾಧನವೇ ಕವಿತೆ

 

ಕವಿತೆ ಮನವ ಮುಟ್ಟಲು ಮನ ಮುದಗೊಂಡರಲ್ಲಿ ಆನಂದದನುಭಾವ

ಭಾವನೆಗಳನ್ನು ಅರಿಯಲು ಓದುಗನಿಗಿರಬೇಕು ವಿಶಾಲ ಮನೋಭಾವ   

 

ಕವಿತೆ ಓದುವಾಗ ಕವಿ ಯಾರು ಎಂಬುದು ಯಾವಾಗಲೂ ಅಲ್ಲಿ ಗೌಣ

ಯಾವುದೇ ಕವಿತೆಗಾದರೂ ಮೊದಲ ಪ್ರತಿಕ್ರಿಯೆ ಗಂಭೀರ ಮೌನ !!!

 

ಇದು ಆನಂದರಕವಿತೆಗೆ ನನ್ನ ಪ್ರತಿಕ್ರಿಯೆ


ಕವಿತೆಗಳನು ನೀನೆಂದಿನಂತೆಯೇ ಬರೆದು ಬಿಡು!!!

29 ಮೇ 09
ಸಖ,

ಈ ರೀತಿಯ ಮರುಳು ಮಾತ ನೀ ಮರೆತು ಬಿಡು
ಕವಿತೆಗಳನು ನೀನೆಂದಿನಂತೆಯೇ ಬರೆದು ಬಿಡು

ಅಂದಿನಿಂದಲೂ ನೀನು ಬರೆದುದೆಲ್ಲಾ ನಿನಗಾಗಿ
ಅಲ್ಲವಾದರೆ ಅವು ಆಗಿದ್ದವು ಈ ನಿನ್ನ ಸಖಿಗಾಗಿ

ಮತ್ತೀಗ ಹೇಳು ನಿಜದಿ ನಿನಗೆ ಈ ದುಗುಡವೇಕೆ
ನನ್ನ ನಿನ್ನ ಬಗ್ಗೆ ಅನ್ಯರೇನನ್ನುವರೆಂಬ ಚಿಂತೆ ಏಕೆ

ಕವಿತೆಗಳ ಬರೆಯುವುದು ನಿನ್ನ ಜಾಯಮಾನ
ಅದ ಬಿಟ್ಟಿರಲು ಎಂತು ಒಪ್ಪುವುದು ನಿನ್ನ ಮನ

ಜನರ ಗೋಜಿಗೇ ನೀನಿನ್ನೆಂದೂ ಹೋಗದಿರು
ಬರೆದುದನ್ನು ಇನ್ನಾರಿಗೂ ನೀ ತೋರಿಸದಿರು

ಅಲ್ಲಿ ಇಲ್ಲಿ ಎಲ್ಲೆಂದು ಬರಿದೆ ಬರೆದು ಇಡಬೇಡ
ಜನರು ಏನನ್ನುವರೆನ್ನುವ ಚಿಂತೆಯೂ ಬೇಡ

ನೋಡಿಲ್ಲಿ ತೆರೆದಿಟ್ಟಿರುವೆ ನನ್ನೀ ಹೃದಯವನು
ಬರೆ ನೀನಿಲ್ಲಿ ನಿರ್ಭಯನಾಗಿ ನಿನ್ನ ಕವಿತೆಗಳನು

ನೀನು ಬರೆದಷ್ಟನ್ನೂ ನಾನು ಪ್ರೀತಿಯಿಂದ ಓದುವೆನು
ಸಂಭಾವನೆಯಾಗಿ ನನ್ನ ಹೃದಯವನ್ನೇ ನೀಡುವೆನು

ನನ್ನ ಜೀವ ವೃಕ್ಷಕ್ಕೆ ಬೇಕು ನಿನ್ನ ಕವಿತೆಗಳ ನೀರು
ಅವು ಇಲ್ಲವಾದರೆ ನಿಲ್ಲಬಹುದು ಈ ನನ್ನ ಉಸಿರು

ಆದಕೇ ಬೇಡುತಿರುವೆ ನಿನ್ನನ್ನು ಎನ್ನ ಸಖ
ಈ ರೀತಿಯ ಮರುಳು ಮಾತ ನೀ ಮರೆತು ಬಿಡು
ಕವಿತೆಗಳನು ನೀನೆಂದಿನಂತೆಯೇ ಬರೆದು ಬಿಡು
*************************