ಕರಾವಳಿಯ ಸಂಗ್ರಾಮದ ಕತೆ!!!

19 ಮೇ 09

ಕರಾವಳಿಯಲ್ಲಿ ಬಿಜೆಪಿ ಮತ್ತೆ ಈಗ ಜಯಭೇರಿ ಬಾರಿಸಿದೆ
ಪೂಜಾರಿ ಕಂಡ ಕನಸುಗಳ ಹೇಗೆ ನುಚ್ಚು ನೂರಾಗಿಸಿದೆ

ಮೊಯ್ಲಿ ಸೋಲುವ ಕುದುರೆ, ನಾನೇ ಗೆದ್ದು ಬರುವೆ ಎಂದಿದ್ದ
ಬಂಡು ಧೈರ್ಯಮಾಡಿ ಮತ್ತೆ ಅದೇಕೋ ಕಣಕ್ಕೆ ಧುಮುಕಿದ್ದ

ಮೊಯ್ಲಿ ಹಲವು ಬಾರಿ ಮಾಡಿದ ತಪ್ಪನ್ನೀ ಬಾರಿ ಮಾಡದಿದ್ದ
ಅದಕ್ಕೆ ಚಿಕ್ಕ ಬಳ್ಳಾಪುರದಲ್ಲಿ ನೋಡಿ ನಿರಾಯಾಸವಾಗಿ ಗೆದ್ದ

ಕ್ಷೇತ್ರ ಮರು ವಿಂಗಡಣೆ ಮಂಗ್ಳೂರಲ್ಲಿ ಗೌಡಂಗಾತಂಕ ತಂದಿತ್ತು
ಉಡುಪಿಯಲ್ಲಿ ಯಾವುದೇ ಶ್ರಮರಹಿತ ಗೆಲುವಿನ ನಿರೀಕ್ಷೆ ಇತ್ತು

ಜಯಪ್ರಕಾಶ ಹೆಗ್ಡೆಯ ಪರಿಚಯ ಉಡುಪಿ ಜಿಲ್ಲೆಯಲ್ಲಷ್ಟೇ ಜಾಸ್ತಿ
ಚಿಕ್ಕಮಗಳೂರು ಕಡೆಯ ಮತ ಪಾರ್ಟಿಯದು ಹೆಗ್ಡೆಯದಲ್ಲ ಆಸ್ತಿ

ಎಡರಂಗದವರು ಉಡುಪಿಯಲ್ಲಿ ಯಾಕೆ ಸ್ಪರ್ಧೆಗೆ ಇಳಿಯುತ್ತಾರೋ
ಅವರ ಬೇಳೆ ಬೇಯಿಸಲು ನೀರೇ ಸಿಗದು ಎಂದ್ಯಾರು ಹೇಳುತ್ತಾರೋ

ನಳಿನ ಕುಮಾರ ಹೊಸಬ ಅಲ್ಲಿ ಆತನಿಗಲ್ಲ ಅದು ಪಕ್ಷಕ್ಕೆ ಸಿಕ್ಕ ಮತ
ಮುಂದೆ ಗೆಲ್ಲಬೇಕಿದ್ದರೆ ಆತ ಮಾಡಬೇಕಿದೆ ಮಂಗಳೂರಿಗರಿಗೆ ಹಿತ

ಹಿಂದೂಗಳ ಪ್ರತಿನಿಧಿಯಾಗದೇ ಮಂಗಳೂರನ್ನೇ ಪ್ರತಿನಿಧಿಸಬೇಕು
ಅನ್ಯರಿಗೂ ಆತನ ಮೇಲೆ ಭರವಸೆ ಮೂಡುವಂತಾತ ದುಡಿಯಬೇಕು

ಮೊಯ್ಲಿ ದೊರಕಿಸಿಕೊಂಡಾನು ಮಂತ್ರಿಗಿರಿ ಯಾ ತಕ್ಕ ಸ್ಥಾನಮಾನ
ಪೂಜಾರಿಯ ಕೇಳುವವರಿಲ್ಲ ತವರೂರಲ್ಲೇ ಆದಮೇಲೆ ಈ ಅವಮಾನ

ಪೂಜಾರಿ ಮತ್ತು ಜಯಪ್ರಕಾಶ್ ಹೆಗ್ಡೆಗಿನ್ನು ನಿವೃತ್ತಿಯೇ ಒಳ್ಳೆಯದು
ಕೆಡುತ್ತಿರುವ ಆರೋಗ್ಯವ ಕಾಪಾಡಿಕೊಂಡು ಇರುವುದೊಳ್ಳೆಯದು

ಮಾರ್ಗರೇಟಳಿಗಿನ್ನು ಬೆಲೆ ದಿಲ್ಲಿಯಲಿ ಹಿಂದಿನಷ್ಟಿರುವುದಿಲ್ಲ ನೋಡಿ
ಸೋತು ಮರಳುತ್ತಿದ್ದಾಳೆ ಈಗ ಮೊದಲು ಬಾಯ್ತುಂಬಾ ಮಾತಾಡಿ

ಗೆದ್ದ ಅನಂತ ಕುಮಾರ ಹೆಗಡೆ ನಾಲಿಗೆಗೆ ಲಗಾಮು ಹಾಕಬೇಕು
ಬೇಕಾಬಿಟ್ಟಿ ಮಾತನಾಡದೇ ಕ್ಷೇತ್ರದ ಏಳಿಗೆಗಾಗಿ ದುಡಿಯಬೇಕು


ಸುದ್ದಿ ತಿಳಿದ ಕರಾವಳಿಯ ಹೆಣ್ಣು ಆತ ಹೊರ ಬರುವತನಕ ಕಾದಳು!!!

13 ಮೇ 09
ಕತ್ತಲಾದ ಮೇಲೆ ಪರಸ್ತ್ರೀಯ ಭೇಟಿಗೆ
ಯಾರೇ ಮುಖ ಮುಚ್ಚಿಕೊಂಡು ಹೋದರೆ
ಜನ ಸುಮ್ಮನಿರದೇ ಎಲ್ಲಾ ಅವರ ಮೇಲೆ
ಅಪವಾದಗಳ ಸುರಿಮಳೆ ಗೈಯುವವರೇ
 
ಅಪ್ಪ ಹೇಳುತ್ತಿದ್ದಾನೆ ನನ್ನದು ಅದೇ ಮಾತು
ನಮ್ಮದೊಂದೇ “ತರ್ಡ್ ಫ್ರಂಟೂ”
ಮಗನೂ ಆ ಮನೆಯಿಂದೀಚೆಗೆ ಬಂದು
ಅನ್ನುತ್ತಿದ್ದಾನೆ ನನ್ನದೂ “ತರ್ಡ್ ಫ್ರಂಟೂ”
 
ಅರ್ಧಂಬರ್ಧ ಸುದ್ದಿ ತಿಳಿದ ಕರಾವಳಿಯ
ಹೆಣ್ಣು ಆತ ಹೊರ ಬರುವತನಕ ಕಾದಳು
ಕೂದಲು ಕೆದರದೇ ಆತನ ಅಂಗಿ ಸರಿ
ಗಿದ್ದುದಕೆ ನೆಮ್ಮದಿಯಲಿ ನಗುತ್ತಿದ್ದಳು
 
ನಿನ್ನವನು ಯಾರದೋ ಕೈಯತ್ತ ವಾಲಿದ್ದಾನೆ
ಎಂದರೆ ಆಗಲೇ ಬೇಕು ಅನುಮಾನ
ಆದರೆ ನೀನು ಅಂದುಕೊಂಡಂತೆ ಆತ
ಹೋಗಿರಲಿಲ್ಲ ಅಲ್ಲಿ ಮಾಡಲು ಪಾಣಿಗ್ರಹಣ
 
ಹೌದು ಕಣೇ ಅವರವರ ಸಮಸ್ಯೆ ಅವರವರಿಗೆ
ಎಂದೂ ದೊಡ್ದದು ಅಲ್ಲದೇ ಮತ್ತಿನ್ನೇನು
“ತರ್ಡ್ ಫ್ರಂಟು” ಅನ್ನುತ್ತಾ ಮೂರನೇ
ಗೃಹಪ್ರವೇಶ ಮಾಡದಿರಲಿ ಅನ್ನುವೆಯೇನು
 
ನಮ್ಮೂರ ಸಮಸ್ಯೆಯ ಪರಿಹಾರಕ್ಕೆ
ಈ ಊರಲ್ಲಿರುವವರು ಯಾರೂ ಸಮರ್ಥರಲ್ಲ
ಅದಕ್ಕೇ ದೂರದೂರಿನ ಪರದೇಶಿಯ
ಸಲಹೆಯನು ಕೇಳಲು ಈತ ಹೋಗಿಹನಲ್ಲ
 
ಯಾವುದೇ ಸಿದ್ಧಾಂತವಿಲ್ಲದೇ ಇವರೆಲ್ಲಾ
ಮಾಡುತ್ತೇವೆಯೆಂಬರು ಸಮಾಜಸೇವೆ
ಇವರ ಸೇವೆಗಾಗಿ ಕಾಯದೇ ನಮ್ಮ
ಸೇವೆಯನು ಮಾಡಿಕೊಳ್ಳಬೇಕಾಗಿದೆ ನಾವೇ