ಕನ್ನಡದ ಕಂಪ ಪಸರಿಸುವಾ…!

22 ಜೂನ್ 10

 

ಕಾಲೆಳೆದು ಕಾಲೆಳೆದು ಪಡಲು ಸಂತೋಷ

ಬಹುಕೃತ ವೇಷ ವ್ಯರ್ಥ ಆವೇಷ

ಕಾಲೆಳೆದು ಕಾಲೆಳೆದು ಸೋತವರೇ ಎಲ್ಲ

ನೆಮ್ಮದಿಯ ಪಡೆದವರು ಯಾರೂ ಇಲ್ಲಿಲ್ಲ

 

ಸಾಹಿತ್ಯ ಲೋಕದಲಿ ಬಂಧುಗಳೇ ನಾವೆಲ್ಲಾ

ಮೇಲು ಕೀಳಾರಿಲ್ಲ ಜಾತಿಯಾ ಹಂಗಿಲ್ಲ

ಎಲ್ಲರನೂ ಸಮನಾಗಿ ಕಾಣುವಾ…

 

“ಕಾಲೆಳೆದು ಕಾಲೆಳೆದು ಪಡಲು ಸಂತೋಷ”

 

ಪ್ರತಿಕ್ರಿಯೆಗಳು ಬರಹಕ್ಕೇ ಸೀಮಿತವಾಗಿರಲಿ

ಬರೆದಾತ ಯಾರೆಂಬ ಗೋಜಿಲ್ಲದಿರಲಿ

ಎಲ್ಲರಲೂ ಒಂದಾಗಿ ಬೆರೆಯುವಾ…

 

“ಕಾಲೆಳೆದು ಕಾಲೆಳೆದು ಪಡಲು ಸಂತೋಷ”

 

ಕನ್ನಡದ ಭಾಷೆಯನು ಶ್ರೀಮಂತಗೊಳಿಸಿ

ಬೆರೆತಿರುವ ಕಳೆಯನ್ನು ಒಂದಾಗಿ ಅಳಿಸಿ

ಎಲ್ಲರೂ ಒಂದಾಗಿ ಶ್ರಮಿಸುವಾ….

 

“ಕಾಲೆಳೆದು ಕಾಲೆಳೆದು ಪಡಲು ಸಂತೋಷ”

 

ಕನ್ನಡಕೆ ಕನ್ನಡವೇ ಸಾಟಿ ತಾನೆಂದು

ಜಗಕೆಲ್ಲಾ ತೋರಿಸಲು ಪಣತೊಡುವ ಇಂದು

ಕನ್ನಡದ ಕಂಪ ಪಸರಿಸುವಾ…

 

“ಕಾಲೆಳೆದು ಕಾಲೆಳೆದು ಪಡಲು ಸಂತೋಷ”

*****************************


ಭಾಷೆಗಳ ವಿಲೀನ – ಕನ್ನಡ ಮಲಿನ!!!

11 ಮಾರ್ಚ್ 10

 

( ೨೦೧೦ರ ಸುಧಾ – ಯುಗಾದಿ ವಿಶೇಷಾಂಕದ  ಓದುಗರ ವೇದಿಕೆಯಲ್ಲಿ ಪ್ರಕಟವಾದ ಬರಹದ ಪೂರ್ಣ ಪಾಠ ಇಲ್ಲಿದೆ)

ಒಂದು ಮನದ ಭಾವನೆಗಳನ್ನು ಇನ್ನೊಂದು ಮನಕ್ಕೆ ತಲುಪಿಸುವ ಮಾಧ್ಯಮವೇ ಭಾಷೆ. ನಮ್ಮ ದೇಶದಲ್ಲಿ ಇರುವಷ್ಟು ವೈವಿಧ್ಯಮಯ ಭಾಷೆಗಳು ಬೇರೆಲ್ಲೂ ಕಾಣಸಿಗವು ಅನ್ನಬಹುದೇನೋ. ಪ್ರತೀ ಭಾಷೆಯೂ ತನ್ನದೇ ಆದ ವೈಶಿಷ್ಟ್ಯತೆಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋದರೆ ಮಾತ್ರ ಆ ಭಾಷೆ ಉಳಿಯಲು ಸಾಧ್ಯ.

ನಮ್ಮ ಭಾಷೆಯಲ್ಲಿ ಪದಪ್ರಯೋಗ ರೀತಿ ಮತ್ತು ಪದಗಳ ಸರಿಯಾದ ಉಚ್ಛಾರವನ್ನು ತಿಳಿದುಕೊಳ್ಳುವಲ್ಲಿ ಆಕಾಶವಾಣಿ ಹಾಗೂ ದೂರದರ್ಶನದ ವಾಹಿನಿಗಳು ಪ್ರಮುಖವಾಗಿ ಸಹಕಾರಿಯಾಗುತ್ತವೆ. ಉದ್ಘೋಷಕರು ಮತ್ತು ವಾರ್ತಾ ಓದುಗರು ಮಾಡುವ ಪದಪ್ರಯೋಗ ಮತ್ತು ಉಚ್ಛಾರಗಳನ್ನು ಶ್ರೋತೃಗಳು ಆಲಿಸಿ, ಅನುಸರಿಸುವುದು ಸಾಮಾನ್ಯ. ಹಾಗಾಗಿ, ಆಕಾಶವಾಣಿ ಮತ್ತು ದೂರದರ್ಶನ ಇವೆರಡರಲ್ಲೂ ಬಳಕೆಯಾಗುವ ಭಾಷೆ ಉತ್ತಮ ಮಟ್ಟದ್ದಾಗಿರಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ, ಆಕಾಶವಾಣಿ ಮತ್ತು ದೂರದರ್ಶನದ  ಹೆಚ್ಚಿನೆಲ್ಲಾ ಖಾಸಗೀ ವಾಹಿನಿಗಳು, ಆಂಗ್ಲ, ಹಿಂದಿ ಮತ್ತು ಇತರ ಭಾಷಾ ಪದಗಳಿಂದ ಮಿಶ್ರಿತವಾದ  ಕನ್ನಡವನ್ನು ಬಳಸುತ್ತಿರುವುದರಿಂದ ಕನ್ನಡ ಭಾಷೆ ತನ್ನತನವನ್ನು ಕಳೆದುಕೊಳ್ಳುತ್ತಿದೆಯೇನೋ ಅನ್ನುವ ಭಯ ಕಾಡತೊಡಗಿದೆ.

ಮೊದಮೊದಲಿಗೆ, ನಮ್ಮ ಭಾಷೆಯಲ್ಲಿ ಸರಿಯಾದ ಪದಗಳು ಸಿಗದಾದಾಗ, ಪರ ಭಾಷಾ ಪದಗಳನ್ನು ಅನಾಯಾಸವಾಗಿ ಬಳಸಿಕೊಳ್ಳಲು ಆರಂಭ ಮಾಡಿ, ನಂತರ ಆ ಪದಗಳನ್ನು  ಕನ್ನಡದೊಂದಿಗೆ ವಿಲೀನಗೊಳಿಸಿಕೊಂಡು ಬಳಸುತ್ತಲೇ ಹೋಗುತ್ತಾರೆ. ಹಾಗಾಗಿ ಆ ಪದಗಳು ಕನ್ನಡದವೇನೋ ಅನ್ನುವಷ್ಟು ಹಾಸುಹೊಕ್ಕಾಗಿ ಬಿಟ್ಟಿರುತ್ತವೆ. ಇದು ಹೀಗೆಯೇ ಮುಂದುವರಿದರೆ, ಮುಂದಿನ ಜನಾಂಗದ ಮಕ್ಕಳಿಗೆ ಆ ಪದಗಳು ಕನ್ನಡದವಲ್ಲವೆಂದು ನಂಬಲೂ  ಕಷ್ಟವಾದೀತು.

ಉದ್ಘೋಷಕರಿಗೆ ಮತ್ತು ವಾರ್ತಾ ಸಂಪಾದಕರಿಗೆ ನಮ್ಮ ಭಾಷೆಯ ಮೇಲೆ ಸಮಗ್ರ ಜ್ಞಾನ, ಹಿಡಿತ ಮತ್ತು ಅಭಿಮಾನ ಇರಬೇಕಾದುದು ಅತ್ಯಗತ್ಯ. ಇತ್ತೀಚಿನ ದಿನಗಳಲ್ಲಿ ಪ್ರಚಲಿತವಾಗಿರುವ ಸ್ವಭಾಷಾ ನಿರಭಿಮಾನ ಹಾಗೂ ನಿಯಂತ್ರಣ ಮತ್ತು ಪರಿಶ್ರಮ ರಹಿತವಾದ ಉದ್ಯೋಗ ಶೈಲಿಯೇ ಈ ಸಮಸ್ಯೆಗೆ ಕಾರಣವಾಗಿದೆಯೇನೋ ಅನಿಸುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬನ ದೃಷ್ಟಿಕೋನವೂ ಬದಲಾಗಬೇಕು. “ಹೇಗಿದ್ದರೂ ಸರಿ, ನಡೆಯುತ್ತದೆ ಬಿಡಿ”, ಎನ್ನುವ ಮನೋಭಾವನೆಯಿಂದ ಪ್ರತಿಯೊಬ್ಬನೂ ಹೊರಬರಬೇಕು.

ಆಂಗ್ಲ ಬಾಷೆಯಂತೆ ಕನ್ನಡ ಭಾಷೆಯೂ ಕೂಡ, ತನ್ನ ಮಡಿವಂತಿಕೆಯನ್ನು ತೊರೆದು, ಪರಭಾಷಾಪದಗಳನ್ನು ತನ್ನೊಳಗೆ ಸೇರಿಸಿಕೊಂಡು ಬೆಳೆಯಬೇಕು ಎನ್ನುವ ಮಾತುಗಳೇ ಈಗ ಎಲ್ಲೆಡೆ ಕೇಳಿಬರುತ್ತಿವೆ. ಅದರೆ, ತನ್ನತನವನ್ನು ತೊರೆದು ಗಳಿಸಿದ ಸಂಪತ್ತಿಗೆ ಹೇಗೆ ಬೆಲೆ ಇರುವುದಿಲ್ಲವೋ, ಹಾಗೇಯೇ ತನ್ನದಲ್ಲದ ಪದಗಳಿಂದ ಸಂಪಧ್ಭರಿತವಾದ ಭಾಷೆಯೂ ಸ್ವಂತಿಕೆ ಇಲ್ಲದೆ ತನ್ನ ಬೆಲೆಯನ್ನು ಕಳೆದುಕೊಳ್ಳುತ್ತದೆ.

ನಮ್ಮ ಬಾಷೆಯನ್ನು ಬಳಸಿ, ಉಳಿಸಿ, ಬೆಳೆಸಲು ಆಕಾಶವಾಣಿ ಮತ್ತು ದೂರದರ್ಶನ ವಾಹಿನಿಗಳ ಪ್ರತಿಯೊಬ್ಬ ಉದ್ಘೋಷಕ, ಲೇಖಕ ಮತ್ತು ಸಂಪಾದಕನೂ ಮನಸ್ಸು ಮಾಡಿ, ತನ್ನ ಪಾಲಿನ ಸೇವೆ ಮಾಡುತ್ತಿರಬೇಕು. ಆಗಷ್ಟೇ ನಮ್ಮ ಭಾಷೆ ಉಳಿಯಲು ಮತ್ತು ಬೆಳೆಯಲು ಸಾಧ್ಯ.

*****


ಕನ್ನಡವನೇ ಮರೆಸುವಂತಿದೆ ವಿಜಯ ಕರ್ನಾಟಕದ ಹೊಸ ರೂಪ!!!

20 ನವೆಂ 09

ವಿಶ್ವೇಶ್ವರ ಭಟ್ಟರು ಏಕೆ ಹೀಗಾದರೋ ಆ ದೇವರಿಗೇ ಗೊತ್ತು

ಕನ್ನಡದ ಮೇಲೆ ಅವರ ಆಸಕ್ತಿ ಕಡಿಮೆ ಆದಂತಿದೆ ಈ ಹೊತ್ತು

 

ವಿಜಯ ಕರ್ನಾಟಕದ ತುಂಬೆಲ್ಲಾ ಈಗ ಆಂಗ್ಲ ಪದಗಳ ದಾಳಿ

ಕನ್ನಡವನೇ ಮರೆಸುವಂತಿದೆ ಅದೀಗ ಹೊಸ ರೂಪವ ತಾಳಿ

 

ಲವಲvk ಎಂಬ ಹೊಸ ಪತ್ರಿಕೆ ಕಾದಿಹುದು ನೋಂದಣಿಗಾಗಿ

ಪ್ರತಿಭಟಿಸಲೇ ಬೇಕು ಕನ್ನಡವ ಕೊಲ್ಲುವವರನು ನಾವೊಂದಾಗಿ

 

ಮೊದಲೇ ತಪ್ಪುಗಳ ರಾಶಿಯಲಿ ಕನ್ನಡ ಕುಲಗೆಟ್ಟು ಹೋಗಿತ್ತು

ಈಗ ಆಂಗ್ಲ ಪದಗಳ ಬೆರಕೆಯಿಂದ ಸತ್ಯನಾಶ ಆದಂತಾಯ್ತು

 

ಯಾವ ಸಾಧನೆಗಾಗಿ ಈ ಪರಿಯ ಹುಚ್ಚಾಟವೋ ನಾನರಿಯೇ

ಹೆತ್ತ ತಾಯಿಯಿಂದಲೇ ಕ್ಯಾಬರೇ ಕುಣಿಸುವ ಮಹದಾಸೆಯೇ

 

ಟೈಮ್ಸ್ ಆಫ್ ಇಂಡಿಯಾವನಾಗಲೇ ಕಂಗ್ಲೀಷೀಕರಿಸಿಯಾಗಿದೆ

ಈಗ ನೋಡಿ ವಿ.ಕ. ವಿಚಿತ್ರ ಕರ್ನಾಟಕವಾಗಿ ಮಾರ್ಪಾಡಾಗಿದೆ

 

ಅಪ್ಪಟ ಕನ್ನಡವನು ನಮ್ಮ ಪತ್ರಿಕೆಗಳಲ್ಲಾದರೂ ಕಾಣಬಹುದಿತ್ತು

ಇದೀಗ ಈ ಹೊಸ ತಲೆಗೆಡುಕತನದಿಂದ ಅದಕೂ ಬಂತೇ ಕುತ್ತು

 

ಸರ್ಕಾರೀ ಮದ್ಯದ ಅಂಗಡಿಗಳಲ್ಲಿದ್ದವು ಕೆಂಪು ನಾಮ ಫಲಕಗಳು

ದಿನಪತ್ರಿಕೆಗಳಲೀಗ ಮತ್ತೇರಿಸುವ ಕೆಂಪು ಬಣ್ಣದ ತಲೆ ಬರಹಗಳು

 

ಇನ್ನಾದರೂ ಎಚ್ಚೆತ್ತು ಮರಳಿ ಬಂದು ಬಿಡಿ ನಮ್ಮ ಸವಿಗನ್ನಡಕೆ

ನಮ್ಮದು ಸದಾ ಚೆನ್ನ ಇವೆಲ್ಲಾ ಏನಿದ್ದರೂ ಬರೇ ನಾಲ್ಕು ದಿನಕೆ

 

ಹೊಗಳಿ ಬರೆದ ನೂರಾರು ಪತ್ರಗಳು ಬೆಳಕ ಕಂಡವು ವಿ.ಕ.ದಲ್ಲಿ

ನನ್ನ ಮಾತುಗಳು ಕಂಡಿಲ್ಲ ಹಾಗಾಗಿ ಪ್ರಕಟಿಸುತ್ತಿದ್ದೇನೆ ನಾನಿಲ್ಲಿ

*****************************************


ಆಳೇ ಪೆಪ್ಪರ್ ಮತ್ತು ಸ್ಚ್ರಪ್ ಡೀಲರ್…!!!

03 ನವೆಂ 09

old_paper

ಬೆಂಗಳೂರಿನ ಮುರುಗೇಶ್ ಪಾಳ್ಯದ ಈ ನಾಮಫಲಕ ನೋಡಿ

ಇದಕ್ಕೆಲ್ಲಾ ಅಧಿಕಾರಿಗಳು ಯಾಕೋ ಪಡಿಸುವುದೇ ಇಲ್ಲ ಅಡ್ಡಿ

 

ನಾಮ ಫಲಕ ಕನ್ನಡದಲ್ಲಿ ಇರಬೇಕು ಎನ್ನುತ್ತದೆ ಪ್ರಾಧಿಕಾರ

ಆದರೆ ಕನ್ನಡ ಹೇಗಿರಬೇಕು ಅನ್ನುವುದನ್ನು ತಿಳಿಸುತ್ತಾರಾ

 

ಅಧಿಕಾರದಲ್ಲಿರುವವರಿಗೆ ಇದಕ್ಕೆಲ್ಲಾ ಇಲ್ಲವಲ್ಲ ಪುರುಸೊತ್ತು

ಅವಧಿಗೆ ಮುಂಚೆ ಹೆಚ್ಚಿಸಿಕೊಳ್ಳಬೇಕು ಅವರು ಚರಾಚರ ವಸ್ತು

 

 ಭಾಷೆಯ ಹೆಸರಿನಲ್ಲಿ ಹತ್ತಾರು ಸಂಸ್ಥೆಗಳು ಈ ರಾಜ್ಯದಲ್ಲಿ

ಎಲ್ಲರಿಗೂ ಆಸಕ್ತಿ ಭಾಷೆಯದ್ದಲ್ಲ ಬರಿ ತಮ್ಮದೇ ಏಳಿಗೆಯಲ್ಲಿ

 

ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಿ ಈಗ ಮುಖ್ಯಮಂತ್ರಿ ಚಂದ್ರು

ಆದರೆ ಕನ್ನಡದ ಅವಸ್ಥೆ ಸದಾ ಇಷ್ಟೇ ಅಲ್ಲಿಗೆ ಯಾರೇ ಬಂದ್ರೂ


ಒಳ್ಳೆಯ ಸುದ್ದಿಗಾಗಿ ಕಣ್ಣು ಕಿವಿಗಳು ಕಾದಿವೆ!!!

01 ಆಕ್ಟೋ 09

ಈ ವರುಷದ ಒಂಭತ್ತು ತಿಂಗಳುಗಳು ಬೇಗನೇ ಕಳೆದಂತಾಗಿವೆ

ಶುಭ ಘಟನಾ ಪ್ರಸವದ ಸುದ್ದಿಗೆ ಕಣ್ಣು ಕಿವಿಗಳು ಇನ್ನೂ ಕಾದಿವೆ

 

ಒಳ್ಳೆಯ ಘಟನೆಯೊಂದೂ ಘಟಿಸಿದಂತೆಯೇ ಇಲ್ಲ ಈ ವರುಷ

ಯಾವ ಸುದ್ದಿಯೂ ತಂದಂತೇ ಇಲ್ಲ ಯಾರ ಮನಕ್ಕೂ ಹರುಷ

 

ಚಂದ್ರನ ಮೈಮೇಲೆ ದೂರದಲಿ ಕಂಡಂತಾಯ್ತಂತೆ ನೀರ ಪಸೆ

ಅದರಿಂದ ನೀಗಬಹುದೇ ಇಲ್ಲಿ ನೀರಿಲ್ಲದೆ ಪರದಾಡುವವರಾಸೆ

 

ಪ್ರತಿ ದಿನ ಅದೇ ಕೊಲೆ ಸುಲಿಗೆ ಸಾವು ನೋವುಗಳದೇ ಸುದ್ದಿ

ಮತ್ತೆ ಮತ್ತೆ ಓದುವ ಸುದ್ದಿಗಳಿಲ್ಲದೆ ಪತ್ರಿಕೆಗಳೆಲ್ಲ ಆಗಿವೆ ರದ್ದಿ

 

ತಮ್ಮ ಗಾಂಭೀರ್ಯತೆ ಕಳೆದು ಕೊಳ್ಳುತ್ತಿವೆ ದಿನ ಪತ್ರಿಕೆಗಳು

ಸಂಪಾದಕೀಯದಲ್ಲೆಲ್ಲಾ ಅಂತರ್ಜಾಲದ ಹಾಸ್ಯ ತುಣುಕುಗಳು 

 

ಉಳಿದ ಮೂರು ತಿಂಗಳಲ್ಲಿ ಒಂದು ಒಳ್ಳೆಯ ಸುದ್ದಿ ಬರಲಂತೆ

ಈ ವರುಷವನು ಜೀವನಪೂರ್ತಿ ನೆನಪಿನಲ್ಲಿರಿಸಿಕೊಳ್ಳುವಂತೆ


ಹಿಂದೀ ಪಕ್ಷಾಚರಣೆಯಿಂದ ಕನ್ನಡಕ್ಕಿಲ್ಲ ಅಪಾಯ!!!

18 ಸೆಪ್ಟೆಂ 09

ಹಿಂದೀ ಪಕ್ಷಾಚರಣೆಯಿಂದ ಕನ್ನಡಕ್ಕೆ ಆಗದು ಏನೂ ಅಪಾಯ

ಕನ್ನಡವನ್ನು ಇಲ್ಲಿ ಬೆಳೆಸುವುದಕ್ಕೆ ಬೇಕಾಗಿದೆ ಹೊಸ ಉಪಾಯ

 

ಅನ್ಯರನು ದ್ವೇಷಿಸಿದರೆ ನಮ್ಮವರಿಗೆ ಆಗದು ಹೆಚ್ಚೇನೂ ಲಾಭ

ಹೆಚ್ಚು ಭಾಷೆಗಳ ಕಲಿತರೆ ಆಗದೇ ಇರಲಾರದು ನಮಗೆ ಲಾಭ

 

ಕೇಂದ್ರ ಸರಕಾರ ಹಿಂದಿಯನ್ನು ಹೇರುತಿದೆ ಎನ್ನುತಿರುವಂತೆ

ರಾಜ್ಯ ಸರ್ಕಾರವೂ ಕನ್ನಡ ಭಾಷೆಯನಿಲ್ಲಿ ಹೇರಿದರೆ ಏನಂತೆ

 

ಹೇರಿಕೆಯಿಂದಲೇ ಭಾಷೆಯನು ಜನರು ಬಳಸುವರೆಂದಾದರೆ

ಕನ್ನಡ ಹೇರಿಕೆಯ ಆದೇಶ ಹೊರಡಿಸಿದರೆ ಏನಿದೆ ತೊಂದರೆ

 

ವಿಧಾನ ಸಭೆಯಲಿ ಇರುವಂತೆ ಸರ್ಕಾರದ ಆ ಮುಖ್ಯಮಂತ್ರಿ

ಕನ್ನಡ ಪ್ರಾಧಿಕಾರದಲೂ ನಮಗೆ ಇದ್ದಾರೆ ಈ ಮುಖ್ಯಮಂತ್ರಿ

 

ಇಬ್ಬರು ಮುಖ್ಯಮಂತ್ರಿಗಳಿದ್ದೂ ಆಗದೇ ಇದ್ದರೆ ಭಾಷೆಯ ಏಳಿಗೆ

ತಿಳಿಯಿರಿ ಭಾಷೆಯ ಹೆಸರಲ್ಲಿ ತುಂಬಿಸಿಕೊಳ್ಳುತ್ತಿದ್ದಾರೆ ಜೋಳಿಗೆ

 

ಮನಮಾಡಬೇಕಿಲ್ಲ ವೇದಿಕೆಗಳನೇರಿ ಭಾಷಷಣ ಬಿಗಿಯುವತ್ತ

ಮನೆಮನೆಯಲ್ಲೂ ಕನ್ನಡದ ದೀಪ ಹಚ್ಚಲು ಇರಲಿ ನಮ್ಮ ಚಿತ್ತ


ಕೊಲೆ ಸುಲಿಗೆಗಳ ಉದಾಹರಣೆ ನೀಡಿದ್ದರೆ ಮೆಚ್ಚಬಹುದಿತ್ತು!!!

15 ಸೆಪ್ಟೆಂ 09

ಕಾನೂನು ವ್ಯವಸ್ಥೆ ಹದಗೆಟ್ಟಿದೆ ಎಂಬ ಛೀಮಾರಿ ಇಲ್ಲಿ

ಕಾನೂನು ಸುವ್ಯವಸ್ಥೆ ಕಾಪಾಡಿದುದಕ್ಕಾಗಿ ಪ್ರಶಸ್ತಿ ಅಲ್ಲಿ

 

ಬೆಂಗಳೂರಲ್ಲಿ ಕೊಲೆಯಾದ ಒಂಟಿ ಮಹಿಳೆಯರದೆಷ್ಟೋ

ಮಂದಿರಗಳಲ್ಲಿ ಘಾಸಿಯಾದ ನಿರ್ಜೀವ ಮೂರ್ತಿಗಳೆಷ್ಟೋ

 

ಜೀವವನೇ ಕಳೆದುಕೊಂಡವರಿಗೆ ಯಾರೂ ಮರುಗುವುದಿಲ್ಲ

ಮೂರ್ತಿ ಘಾಸಿಗೊಂಡಾಗ ಮಾತ್ರ ಸುಮ್ಮನೇ ಇರವುದಿಲ್ಲ

 

ಜೀವದೊಳಗಣ ಆತ್ಮಕ್ಕೆ ಎಳ್ಳಷ್ಟೂ ಬೆಲೆ ಕೊಡುವವರು ಇಲ್ಲ

ಮೂರ್ತಿಯೊಳಗಣ ಪರಮಾತ್ಮನಿಗಾಗಿ ಪರದಾಟವೇ ಎಲ್ಲ

 

ಮನುಜನ ಗುರುತು ಇಹುದು ಚುನಾವಣೆ ಬಂದಾಗ ಮಾತ್ರ

ಮಿಕ್ಕೆಲ್ಲ ದಿನಗಳಲಿ ಇವರಿಗೆ ಧರ್ಮ ದೇವರುಗಳದೇ ಮಂತ್ರ

 

ಕೊಲೆ ಸುಲಿಗೆಗಳ ಉದಾಹರಣೆ ನೀಡಿದ್ದರೆ ಮೆಚ್ಚಬಹುದಿತ್ತು

ಬರೀ ಘಾಸಿಗೊಂಡ ಮೂರ್ತಿಗಳ ಲೆಕ್ಕ ಕೊಡುವಗತ್ಯ ಏನಿತ್ತು

 

ದಿನ ಬೆಳಗಾದರೆ ಸದನದಲಿ ನಡೆಯುತಿಹುದು ದೊಂಬರಾಟ

ಜನರ ಮರೆತು ಮಾತಿನಲಿ ಪರಸ್ಪರರ ಗೆದ್ದು ಸೋಲಿಸುವಾಟ


ಕನ್ನಡ ಕಾಪಾಡುವ ಬದಲು ಹಿಂದಿಯ ಓಲೈಕೆಯಂತೆ!!!

20 ಜುಲೈ 09

ದಿಲ್ಲಿಗೆ ಹೋದ ಕನ್ನಡಿಗ ಹಿಂದಿ ಕಲಿಯಲೇ ಬೇಕು
ವ್ಯವಹಾರಕ್ಕಾಗಿ ಅಲ್ಲಿನ ಭಾಷೆ ಬಂದಿರಲೇ ಬೇಕು

ದಿಲ್ಲಿಯವನು ಇಲ್ಲಿಗೆ ಬಂದರಾತಗೆ ಕಷ್ಟ ಏನಿಲ್ಲ ಇಲ್ಲಿ
ಬೆಂಗಳೂರು ನಗರವನಾತ ಮಾಡಿಬಿಡುತ್ತಾನೆ ದಿಲ್ಲಿ

ನಮ್ಮ ಕನ್ನಡಿಗರೂ ಕಡಿಮೆ ಏನಿಲ್ಲ ಅತಿಥಿ ಸತ್ಕಾರದಲ್ಲಿ
ಅವರೊಂದಿಗೆ ಮಾತಾಡುತ್ತಾರೆ ಅವರದೇ ಭಾಷೆಗಳಲ್ಲಿ

ಕನ್ನಡವನು ಇಲ್ಲಿ ಯಾರೂ ಕಲಿಯಯಬೇಕೆಂದೇನಿಲ್ಲ
ಅನ್ಯ ಭಾಷೆಯ ಚಟ ನಮ್ಮಲ್ಲಿ ಎಲ್ಲರಿಗೂ ಇದೆಯಲ್ಲ

ಬಸ್ಸುಗಳಲ್ಲಿನ್ನು ಹಿಂದಿಯಲಿ ಘೋಷಣೆ ಮಾಡ್ತಾರಂತೆ
ಕನ್ನಡ ಕಾಪಾಡುವ ಬದಲು ಹಿಂದಿಯ ಓಲೈಕೆಯಂತೆ

ಅಂಗವಿಕಲರಿಗೆ ನಮ್ಮ ಬಸ್ಸಿನಲಿ ಬೇಕಾದ ವ್ಯವಸ್ಥೆಗಳಿಲ್ಲ
ಆದರೆ ಹಿಂದೀ ಭಾಷಿಗರಿಗೆ ಮರ್ಯಾದೆ ಭಾರೀ ಇದೆಯಲ್ಲ

ಮುಖ್ಯಮಂತ್ರಿ ಚಂದ್ರು ಕನ್ನಡಕ್ಕಾಗಿ ಭಾಷಣಗಳ ಬಿಗಿದರೆ
ನಮ್ಮ ಸರ್ಕಾರದ ಅಧಿಕಾರಿಗಳು ಕನ್ನಡವನು ಮರೆವವರೇ


ಕಲಿತ ನಾಲ್ಕಕ್ಷರಗಳು ಕನ್ನಡಕ್ಕಿಂತಲೂ ಹೆಚ್ಚಾಗಿ!!!

01 ಜುಲೈ 09

 

ಕನ್ನಡಿಗರ ಮನೆಯಲ್ಲೇ ಇಂದು ಕನ್ನಡ ಸತ್ತು ನಾರುತ್ತಿದೆ

ಈ ನಾಡಿನನ್ಯ ಆಡುಭಾಷಿಗರ ಮೇಲೆ ದಬ್ಬಾಳಿಕೆ ಸಾಗುತಿದೆ 

 

ಅಮ್ಮನನ್ನು “ಮಮ್ಮಿ” ಎಂಬ ಕಂದಮ್ಮಗಳ ಬಾಯಲ್ಲಿ

ದೊಡ್ಡಪ್ಪ ಚಿಕ್ಕಪ್ಪನವರನ್ನೆಲ್ಲಾ “ಅಂಕಲ್” ಎಂಬವರಲ್ಲಿ

 

“ರೋಡ”ಲ್ಲಿ ನಡೆದು “ಸರ್ಕಲ್ಲ”ನ್ನು ಸುತ್ತಿ “ಸ್ಕೂಲಿ”ಗೆ ಹೋಗಿ

ಕಲಿತ ನಾಲ್ಕಕ್ಷರಗಳು ಕಂಡಿವೆ ಕನ್ನಡಕ್ಕಿಂತಲೂ ಹೆಚ್ಚಾಗಿ

 

ಆಡು ಭಾಷೆಯ ಸೋಗಿನಲಿ ಆಂಗ್ಲ ಹಾಸುಹೊಕ್ಕಾಗಿಹುದು

ಅಲ್ಲಿಂದ ಬರಹಕ್ಕೆ ಬಂದು ಕನ್ನಡವನೇ ಈಗ ಓಡಿಸಿಹುದು 

 

ಅಶ್ಟು ಇಶ್ಟು ಎಶ್ಟು ಎಂಬ ಭಾಶೆಯನು ಬಳಸಿ ಹಳೆಯದಿರಲಿ

ಎಂಬುವವರು ಚಡ್ಡಿಗಳ ಬಿಟ್ಟಿನ್ನು ಲಂಗೋಟಿಯನೇ ತೊಡಲಿ 

 

ದೊಡ್ಡ ತಾರಾ ಉಪಾಹಾರ ವಸತಿ ಗೃಹಗಳಲಿ ಕನ್ನಡವಿಲ್ಲ

ಪಾಪದ ಕಾಕಾ ತನ್ನ ತಿಂಡಿಯ ಸ್ವಭಾಷೆಯಲಿ ಕರೆಬಹುದಲ್ಲ 

 

ತಿಂಡಿಯ ನಾಮಕರಣ ಮಾಲೀಕನಲ್ಲದೆ ನಾ ಮಾಡಬಹುದೇ

ಕುಮಾರನನು ಗುಮಾರನೆಂದರೆ ಬರಿದೆ ಉರಿದಾಡಬಹುದೆ 

 

ಅನ್ಯರು ಅಲ್ಲಿ ಬಳಸಿದ ಭಾಷೆ ಯಾವುದೆನ್ನುವುದಷ್ಟೇ ಮುಖ್ಯ

ಕನ್ನಡ ನಾಡಲ್ಲಿ ಕನ್ನಡದ ಫಲಕಗಳು ಇರುವುದು ಪ್ರಾಮುಖ್ಯ 

 

ಅನ್ಯ ಭಾಷಿಗರ ಪರ ಮಾತಾಡಲೆನ್ನ ನಿರಭಿಮಾನಿ ಎಂಬರು

ಕನ್ನಡದ ಬಳಕೆ ಮಾಡದಲೇ “ಐ ಲವ್ ಕನ್ನಡ” ಎಂದೆಂಬರು 

 

ಹುಟ್ಟು ಕನ್ನಡಿಗ ಅಚ್ಚ ಕನ್ನಡಿಗರೆಂದು ತಮ್ಮ ಬೆನ್ನ ತಟ್ಟಿಕೊಂಬರು

ಕನ್ನಡ ನಾಡಲ್ಲಿ ಹುಟ್ಟಿ ಕನ್ನಡದಲೇ ಬರೆಯುವವರ ಜರೆಯುವರು 

 

ಕನ್ನಡದ ಹೆಸರಲ್ಲಿ ಹಗಲೆಲ್ಲಾ ನಾಡಲ್ಲಿ ವಸೂಲಿ ನಡೆಯುತಿಹುದು

ಕನ್ನಡ ಉಳಿಯದಿದ್ದರೂ ಅವರ ತಿಜೋರಿಗಳು ತುಂಬುತಿಹುದು 

 

ಸಾಹಿತಿಗಳ ಚಿಕ್ಕ ಚಿತ್ರಗಳ ಜೊತೆಗೆ ನಾಯಕರ ದೊಡ್ಡ ಭಾವಚಿತ್ರ

ಕನ್ನಡಕ್ಕಿಂತಲೂ ಈ ನಾಯಕರ ಪ್ರಚಾರವೇ ನಡೆದಿದೆ ಸರ್ವತ್ರ!!!


ಮುರಿದು ಬಿಡು, ಮೌನ!

17 ಮಾರ್ಚ್ 09
ಸಖೀ,
 
“ನೀನೆಂದೂ ಇಂತಿದ್ದವಳಲ್ಲ,
ಸುಮ್ಮನಂತೂ ಇದ್ದವಳೇ ಅಲ್ಲ;
ಏಕೆ ಹೇಳು ಈ ಸುದೀರ್ಘ ಮೌನ?
ಎನ್ನೊಡನೆ ಮಾತಾಡಲೆಳಸದೆ ನಿನ್ನ ಮನ?
 
ನನ್ನೀ ಒಂಟಿ ಜೀವಕೆ ನಿನ್ನ ಸವಿ ನುಡಿಗಳೇ
ಆಸರೆಯಾಗಿದ್ದವೆಂದು ನೀನು ಬಲ್ಲೆ,
ಆದರೆ, ಇಂದು ಮುನಿಸಿಕೊಂಡು ಮೂಲೆ
ಹಿಡಿದು ತೆಪ್ಪಗೇ ಕುಳಿತು ಬಿಟ್ಟೆಯಲ್ಲೆ?
 
ಮರಳುಗಾಡಿನಲಿ ಅಪರೂಪಕ್ಕೆ
ಕಂಡು ಬರುವ ಓಯಸಿಸ್‌ನಂತೆ,
ನನ್ನೀ ನಿರ್ಜೀವ ಬಾಳಿನಲಿ ನೀನು
ಜೀವ ತುಂಬೋ ಸಂಜೀವಿನಿಯಂತೆ;
 
ತಪ್ಪು ನನ್ನದೇನಿಲ್ಲವೆಂಬುದ ಅರಿತು,
ಮುನಿಸ ಮರೆತು, ಮೌನವ ಮುರಿದು ಬಿಡು,
ಹೆಚ್ಚಲ್ಲದಿದ್ದರೂ ಒಂದೆರಡು ಸವಿ ಮಾತ
ನನ್ನೀ ಕಿವಿಗಳಲಿ ಮುದದಿಂದ ಆಡಿ ಬಿಡು;”
 
ಅಂತ ಹೀಗೆಲ್ಲ ನಾನಿಂದು ಅನ್ನುತಿರುವುದು
ನಿಜವಾಗಿ ಅಲ್ಲ ಸಖೀ, ನಿನ್ನೊಡನೆ,
ಅದೆಲ್ಲಾ, ಈಗ್ಗೆ ಒಂದು ವಾರದಿಂದ ಕೆಟ್ಟು
ತೆಪ್ಪಗಾಗಿರುವ ನನ್ನೀ ಫೋನಿನೊಡನೆ!
**************************