ಭಾಷೆ!!!

18 ಏಪ್ರಿಲ್ 09

ಸಖೀ,
ಆತ ವೈದ್ಯ,
ನೋಯುತಿರುವ
ನನ್ನ ಹೃದಯವನು
ಪರೀಕ್ಷಿಸುವ
ಆತನಿಗೆ,
ಹೃದಯದ
ಬಡಿತಗಳು
ಗಣನೆಗೆ
ಸಿಲುಕುವವಾದರೂ,
ಮಿಡಿತದ
ಅನುಭವ
ಆಗುವುದೇ
ಇಲ್ಲ;
ರಕ್ತದ
ಒತ್ತಡವೆಷ್ಟೆಂದು
ಆತ ಅರಿವನಾದರೂ,
ನನ್ನ ಹೃದಯದೊಳು
ಬಚ್ಚಿಟ್ಟುಕೊಂಡಿರುವ
ನಿನ್ನ ಪ್ರೀತಿಯ
ಒತ್ತಡವನು
ಆತನಿಂದ
ಅರಿಯಲಾಗುವುದೇ
ಇಲ್ಲ;
ಈ ಹೃದಯದ
ಕಾರ್ಯಶೈಲಿಯನು
ಅರಿವನಾದರೂ,
ಹೃದಯವಂತಿಕೆಯನು
ಆತನಿಂದ
ಅರಿಯಲಾಗುವುದೇ
ಇಲ್ಲ.
ಅಂತೆಯೇ
ಈತ,
ಈ ಕನ್ನಡ ಪಂಡಿತ,
ನನ್ನ ಕವನಗಳನು ಓದಿ
ಆಮೂಲಾಗ್ರವಾಗಿ
ವಿಶ್ಲೇಷಿಸಿದನೇನೋ ಸರಿ,
ಕೆಲವನ್ನು
ಕವನಗಳೆಂದೂ,
ಕೆಲವನ್ನು
ರಗಳೆಗಳೆಂದೂ,
ಕೆಲವನ್ನು
ವಚನಗಳ
ಮಟ್ಟದವೆಂದೂ,
ಇನ್ನು ಕೆಲವನ್ನು
ನವ್ಯಕವಿತೆಗಳೆಂದೂ
ವರ್ಗೀಕರಿಸಿದನಾದರೂ,
ನಾನು
ವ್ಯಕ್ತಪಡಿಸಿರುವ
ನನ್ನ ಹೃದಯದ
ಆಶಯಗಳ,
ಮನದ
ಕೂಗುಗಳ,
ಆತನಿಂದ
ಅರಿಯಲಾಗಲೇ
ಇಲ್ಲ.
ನಿಜ ನುಡಿಯಲೇ
ಸಖೀ?
ಅದನರಿಯಲು,
ನನ್ನ – ನಿನ್ನಂತೆ,
ಹೃದಯದ
ಭಾಷೆಯನು
ಅರಿತವರಿರಬೇಕು,
ಬರೇ
ಪದಗಳಿಗಲ್ಲದೇ,
ಅವುಗಳ
ನಡುವಡಗಿರುವ
ಮೌನಕ್ಕೂ,
ಅರ್ಥ
ಕೊಡುವವರಿರಬೇಕು!
*-*-*-*-*-*-*-*