ತೊರೆದು ಬಂದಿಹ ನನ್ನೂರೇ!

12 ಆಗಸ್ಟ್ 12

ತೊರೆದು ಬಂದಿಹ ನನ್ನ ಊರೇ
ದೂರವಾಗಿಹ ಮನೆಯಂಗಳವೇ
ನಿನಗರ್ಪಣವೀ ಹೃದಯವು
ನೀನೇ ನನ್ನ ಹಂಬಲವು
ನೀನೇ ನನ್ನ ಮಾನವು
ನೀನೇ ನನ್ನ ಪ್ರಾಣವು

ನನ್ನ ಊರನು ಬಳಸಿ ಬರುವ ಗಾಳಿಗೆ ವಂದಿಸುವೆನು
ನನ್ನ ಊರ ಹೆಸರ ನುಡಿವ ಮುಖಕೆ ನಾ ಮುತ್ತಿಡುವೆನು
ನನ್ನೂರ ಮುಂಜಾನೆ ಸೊಗಸು, 
ಸಂಜೆಗೆ ಸೋಲುವುದು ಮನಸು
ನಿನಗರ್ಪಣವೀ ಹೃದಯವು

ಅಮ್ಮನ ಹೃದಯದಂತೆನ್ನೆದೆಯ ಅಪ್ಪಿಕೊಳ್ಳುವೆ ನೀನು
ನನಗೆ ನನ್ನ ಮಗಳಿನಂತೆ ನೆನಪು ಆಗುತ್ತಿರುವೆ ನೀನು
ನನಗೆ ನೆನಪಾದಷ್ಟೂ ನೀನು,
ಬಿಡದೆ ಪರಿತಪಿಸುವೆನು ನಾನು
ನಿನಗರ್ಪಣವೀ ಹೃದಯವು

ಊರ ತೊರೆದಿಷ್ಟೊಂದು ದೂರ ನಾನೇನೋ ಬಂದಿಹೆ
ಅದರೂ ನಿನ್ನ ತೊರೆಗಳಾಣೆಗೂ ಈಗ ನಾ ನುಡಿದಿಹೆ
ನಾ ಜನಿಸಿದ ನನ್ನೂರಿನಲ್ಲೇ
ನನ್ನ ಉಸಿರು ತೊರೆಯಲೆನ್ನ
ನಿನಗರ್ಪಣವೀ ಹೃದಯವು
**************

ಇಂದು ಮುಂಜಾನೆ ದೂರದರ್ಶನದ ರಂಗೋಲಿ ಕಾರ್ಯಕ್ರಮದಲ್ಲಿ ಕೇಳಿದ ಈ ಹಾಡನ್ನು (Aye Mere Pyaare Vatan, Aye Mere Bichhade Chaman) ನನ್ನೂರಿನ ನೆನಪಿನ ಜೊತೆಗೆ, ನನ್ನದೇ ವಾಸ್ತವದ ಭಾವ ಸಂಯೋಜನೆಯೊಂದಿಗೆ, ಕನ್ನಡಕ್ಕೆ ಇಳಿಸಿದ್ದೇನೆ.

ಇನ್ನು ನೀನೆಲ್ಲಿ?

13 ಮೇ 12

ನಾನೇ ನೀನು 
ನೀನೇ ನಾನು
ಅಂತಿದ್ದ ನನ್ನನ್ನು
ಉದ್ದೇಶಿಸಿ
ತನ್ನ ಉಸಿರು
ನಿಂತ ನಂತರ,
ನನ್ನಮ್ಮ 
ಹೀಗಂದಿರಬಹುದೇ: 

ಉಸಿರಿಲ್ಲದ ನನ್ನಲ್ಲಿ
ನಾನೇ ಇಲ್ಲ
ಇನ್ನು ನೀನೆಲ್ಲಿ?
ಆದರೆ ನಿನ್ನುಸಿರಿನಲಿ
ನಾನೇ ಎಲ್ಲ
ಇನ್ನು ನೀನೆಲ್ಲಿ?
_______ 


ಕವಿತೆಗಳನು ನೀನೆಂದಿನಂತೆಯೇ ಬರೆದು ಬಿಡು!!!

29 ಮೇ 09
ಸಖ,

ಈ ರೀತಿಯ ಮರುಳು ಮಾತ ನೀ ಮರೆತು ಬಿಡು
ಕವಿತೆಗಳನು ನೀನೆಂದಿನಂತೆಯೇ ಬರೆದು ಬಿಡು

ಅಂದಿನಿಂದಲೂ ನೀನು ಬರೆದುದೆಲ್ಲಾ ನಿನಗಾಗಿ
ಅಲ್ಲವಾದರೆ ಅವು ಆಗಿದ್ದವು ಈ ನಿನ್ನ ಸಖಿಗಾಗಿ

ಮತ್ತೀಗ ಹೇಳು ನಿಜದಿ ನಿನಗೆ ಈ ದುಗುಡವೇಕೆ
ನನ್ನ ನಿನ್ನ ಬಗ್ಗೆ ಅನ್ಯರೇನನ್ನುವರೆಂಬ ಚಿಂತೆ ಏಕೆ

ಕವಿತೆಗಳ ಬರೆಯುವುದು ನಿನ್ನ ಜಾಯಮಾನ
ಅದ ಬಿಟ್ಟಿರಲು ಎಂತು ಒಪ್ಪುವುದು ನಿನ್ನ ಮನ

ಜನರ ಗೋಜಿಗೇ ನೀನಿನ್ನೆಂದೂ ಹೋಗದಿರು
ಬರೆದುದನ್ನು ಇನ್ನಾರಿಗೂ ನೀ ತೋರಿಸದಿರು

ಅಲ್ಲಿ ಇಲ್ಲಿ ಎಲ್ಲೆಂದು ಬರಿದೆ ಬರೆದು ಇಡಬೇಡ
ಜನರು ಏನನ್ನುವರೆನ್ನುವ ಚಿಂತೆಯೂ ಬೇಡ

ನೋಡಿಲ್ಲಿ ತೆರೆದಿಟ್ಟಿರುವೆ ನನ್ನೀ ಹೃದಯವನು
ಬರೆ ನೀನಿಲ್ಲಿ ನಿರ್ಭಯನಾಗಿ ನಿನ್ನ ಕವಿತೆಗಳನು

ನೀನು ಬರೆದಷ್ಟನ್ನೂ ನಾನು ಪ್ರೀತಿಯಿಂದ ಓದುವೆನು
ಸಂಭಾವನೆಯಾಗಿ ನನ್ನ ಹೃದಯವನ್ನೇ ನೀಡುವೆನು

ನನ್ನ ಜೀವ ವೃಕ್ಷಕ್ಕೆ ಬೇಕು ನಿನ್ನ ಕವಿತೆಗಳ ನೀರು
ಅವು ಇಲ್ಲವಾದರೆ ನಿಲ್ಲಬಹುದು ಈ ನನ್ನ ಉಸಿರು

ಆದಕೇ ಬೇಡುತಿರುವೆ ನಿನ್ನನ್ನು ಎನ್ನ ಸಖ
ಈ ರೀತಿಯ ಮರುಳು ಮಾತ ನೀ ಮರೆತು ಬಿಡು
ಕವಿತೆಗಳನು ನೀನೆಂದಿನಂತೆಯೇ ಬರೆದು ಬಿಡು
*************************