ಏನ ಹೇಳಲಿ ನಾನು?

12 ಮಾರ್ಚ್ 09

ಸಖೀ,

ಏನ ಹೇಳಲಿ ನಾನು,
ನಮ್ಮ ಮಿಲನವಾಗಿರದೇ
ಇದ್ದಿದ್ದರೆ ಏನಾಗುತ್ತಿತ್ತೆಂದು
ಕೇಳಿದರೆ ನೀನು

ನನಗೇನೂ
ಆಗುತ್ತಿರಲಿಲ್ಲ,

ನಾನೂ ಕೂಡ
ಏನೂ ಆಗಿರುತ್ತಿರಲೇ ಇಲ್ಲ,

ಹತ್ತಾರು ವರುಷಗಳಿಂದ
ಕಂಡಿರುವ ನನ್ನ ಕನಸುಗಳು
ನನಸಾಗುತ್ತಿರಲಿಲ್ಲ,

ಪ್ರೀತಿ ಎಂದರೇನೆಂದೇ
ನನ್ನಿಂದ ಅರಿತು
ಕೊಳ್ಳಲಾಗುತ್ತಿರಲಿಲ್ಲ,

ಪ್ರೀತಿಯಲ್ಲಿರುವ ಈ
ನೋವು – ನಲಿವಿನ ಅನುಭವ
ನನಗಾಗುತ್ತಿರಲಿಲ್ಲ,

ನನ್ನ ಮನದ ಆಶಯಗಳಿಗೆ
ಈಗಿರುವ ಅರ್ಥ ಬರುತ್ತಿರಲಿಲ್ಲ,

ನನ್ನೊಳಗೂ ಒಂದು ಹೃದಯ
ಇದೆಯೆಂಬ ಅರಿವು
ನನಗಾಗುತ್ತಿರಲಿಲ್ಲ,

ನನಗಾಗಿ ಮಿಡಿಯುವೊಂದು
ಹೃದಯಕ್ಕಾಗಿ ಇದ್ದ
ನನ್ನ ಹುಡುಕಾಟ
ಕೊನೆಗೊಳ್ಳುತ್ತಿರಲಿಲ್ಲ.

ಬಾಳ ಬಟ್ಟೆಯಲಿ ಈಗಿರುವ
ಗತಿಯೂ ಇರುತ್ತಿರಲಿಲ್ಲ,

ಅಲ್ಲದೆ, ಅಲ್ಲಿ ಯಾವ
ಪ್ರಗತಿಯೂ ಆಗುತ್ತಿರಲಿಲ್ಲ,

ನನ್ನದೇ ಕಲ್ಪನಾ ಲೋಕದಲ್ಲಿ
ಇರುತ್ತಿದ್ದ ನಾನು
ಈ ವಾಸ್ತವ ಪ್ರಪಂಚಕ್ಕೆ
ಇಳಿಯುತ್ತಿರಲೇ ಇಲ್ಲ,

ನನ್ನ ಈ ಜೀವನದಲ್ಲಿ
ಈ ನನ್ನ ಜೀವ
ಇದ್ದಿರುತ್ತಿರಲೇ ಇಲ್ಲ,

ನಿಜ ಹೇಳಲೇ ಸಖೀ,
ನಾನು ನಾನಾಗಿರುತ್ತಿರಲೇ ಇಲ್ಲ!!!
*-*-*-*-*-*-*-*-*-*-*


ರೈತರ ಮೇಲೆ ಪ್ರಮಾಣ ಮಾಡಿದವರು ಮೋಸ ಮಾಡಲಾರರೇ?

11 ಮಾರ್ಚ್ 09

ರಾಜಕೀಯದಲ್ಲಿ ಯಾರು
ಯಾರೊಂದಿಗೆ ಬೇಕಾದರೂ
ಮಾಡಿಕೊಳ್ಳುತ್ತಾರೆ ರಾಜಿ

ಸ್ವಾರ್ಥದ ಚಿಂತನೆಯಷ್ಟೇ
ತುಂಬಿಹುದು ದೇಶದ ಭವಿಷ್ಯದ
ಬಗ್ಗೆ ಇಲ್ಲ ಎಳ್ಳಷ್ಟೂ ಕಾಳಜಿ

ನಿನ್ನೆ ತನಕ ಮುಖ ಕಂಡರೆ ಹರಿ
ಹಾಯುತ್ತಿದ್ದವರು ಒಂದಾಗಿದ್ದಾರೆ
ನಗುನಗುತಾ ನೋಡಿದರೆ ಇಂದು

ವೈರಿಯ ವೈರಿ ಆದುದಕಷ್ಟೆ ಆತ
ಆಗಿದ್ದಾನೆ ಅಗತ್ಯ ಇಲ್ಲದಿದ್ದರೂ
ಇಂದು ತನ್ನ ಆತ್ಮೀಯ ಬಂಧು

ರಾಜ್ಯಪಾಲರ ಪಕ್ಷಾತೀತ ಹುದ್ದೆ
ಅಲಂಕರಿಸಿ ಬಂದವರೂ ಈಗ
ಇಳಿದಿದ್ದಾರೆ ಪಕ್ಷ ರಾಜಕೀಯಕ್ಕೆ

ಆಶ್ಚರ್ಯ ಪಡಬೇಕಾಗಿಲ್ಲ ನಾಳೆ
ಒಂದು ವೇಳೆ ರಾಷ್ಟ್ರಪತಿಗಳು
ಇಳಿದರೂ ಚುನವಣಾ ಕಣಕ್ಕೆ

ತಂದೆ ಮಕ್ಕಳ ರಾಜಕೀಯವನು
ವರ್ಷಾನುಗಟ್ಟಲೆ ಮಾಡಿದವರು
ಊರೆಲ್ಲಾ ಲೇವಡಿ

ತನ್ನ ಮಗನ ಸರದಿ ಬಂದಾಗ
ಸೀಟು ದೊರಕಿಸಿಕೊಂಡರು
ತನ್ನೆಲ್ಲ ನಾಯಕರ ಬೇಡಿ

ದೇವರಾಣೆ ಹಾಕಿದವರು
ದೇವರನೇ ಮರೆತವರಂತೆ
ಮಾತಾಡುತಿರಲು ಇಂದು

ಹೇಗೆ ನಂಬಲಿ ರೈತರ ಮೇಲೆ
ಪ್ರಮಾಣ ಮಾಡಿದವರು ನಮಗೆ
ಮೋಸ ಮಾಡದೇ ಇರಲಾರರೆಂದು