ಸಾವಿನ ಮನೆಯಲ್ಲಿ ನಾನು ಮಾತೇನ ಆಡಲಿ?

19 ಮಾರ್ಚ್ 10

 

ಸಾವಿನ ಮನೆಯಲ್ಲಿ ನಾನು ಮಾತೇನ ಆಡಲಿ

ದುಃಖವನು ನಾನರಿತರೂ ಹೇಗೆ ಹಂಚಿಕೊಳ್ಳಲಿ

 

ಅವರಿಗೆ ಅಲ್ಲಾದ ನಷ್ಟವನು ಅವರಷ್ಟೇ ಅರಿವರು

ನಮ್ಮ ನುಡಿಗಳಿಂದ ಆ ನೋವನೆಂತು ಮರೆವರು

 

ಆತ್ಮವಿಲ್ಲದ ದೇಹಕ್ಕೆ ಎಲ್ಲಾ ಮಂದಿ ನಮಿಸುವರು

ದೇಹಕ್ಕೆ ನಮಿಸಿದರೆ ಅಲ್ಲಿ ಇದ್ದವರಷ್ಟೇ ಅರಿವರು

 

ಶವ ಯಾರದ್ದೇ ಆದರೂ ಮನವ ಕರಗಿಸುವುದು

ನಮ್ಮಂತ್ಯದ ಚಿತ್ರವನು ಮನದಿ ಬಿಂಬಿಸುವುದು

 

ಆ ಅರೆಗಳಿಗೆ ಮನಸ್ಸು ಮುದುಡುವುದಷ್ಟೇ ನಿಜ

ಮತ್ತಿತ್ತ ಬಂದರೆ ಮರೆತು ಹೋಗುವುದೆಲ್ಲ ಸಹಜ

 

ಆ ಚಿತ್ರಗುಪ್ತನಿಗೆ ಈ ಸಾವುಗಳೆಲ್ಲ ಯಾವ ಲೆಕ್ಕ

ಆತನಿಗೋ ಈ ಹುಟ್ಟು ಸಾವುಗಳೆಲ್ಲ ಬರಿಯ ಲೆಕ್ಕ

 

ನಮ್ಮದೀ ಜೀವನದಿ ನಮ್ಮದೆಂದು ಏನಿಲ್ಲ ಪಕ್ಕಾ

ಶೂನ್ಯವನೇ ಸೇರುವುದೀ ಕೂಡು ಕಳೆಯುವ ಲೆಕ್ಕ

*****

 

 “ನನ್ನ ಸಹೋದ್ಯೋಗಿಯೋರ್ವರ ತಾಯಿ ನಿನ್ನೆ ರಾತ್ರಿ ಸ್ವರ್ಗಸ್ಥರಾದರು.

ಇಂದು ಮುಂಜಾನೆ ಅಂತಿಮ ದರ್ಶನ ಪಡೆದು ಹಿಂತಿರುಗಿದಾಗ

ಆಸುಮನದಲ್ಲಿ ಮೂಡಿದ ಭಾವನೆಗಳು ಅಕ್ಷರರೂಪ ಪಡೆದದ್ದು ಹೀಗೆ”


ನಿಮ್ಮಾತ್ಮವನು ತನ್ನಲ್ಲಿ ಲೀನವಾಗಿಸದಿರಲಿ ಪರಮಾತ್ಮ!!!

21 ಜುಲೈ 09
(ಇಂದು ನಿಧನರಾದ ಸಂಗೀತ ವಿದುಷಿ, ಸಂಗೀತ ಸಾಮ್ರಾಜ್ಞಿ, ಪದ್ಮ ವಿಭೂಷಣ ಗಂಗೂಬಾಯಿ ಹಾನಗಲ್ ಅವರಿಗೆ ನನ್ನ ನಮನಗಳು)
 
 
ಗಾನ ವಿದುಷಿ ನಿಮ್ಮ ಸಂಗೀತವೆಂದೂ ಸಾಯುವುದಿಲ್ಲ
ಸಂಗೀತ ಸಾಮ್ರಾಜ್ಞಿ ನಿಮ್ಮ ನೆನಪೆಂದೂ ಅಳಿಯುವುದಿಲ್ಲ
 
ನಿಮ್ಮ ಜೀವನ ನಿಜಕೂ ಒಂದು ಸಂಗೀತ ಸುಧೆಯಂತೆ
ಸಂಗೀತಕೆ ನಿಮ್ಮಿಂದಲೇ ಹೊಸ ಅರ್ಥ ಬಂದಿಹುದಂತೆ
 
ಸಂಗೀತವನ್ನೇ ಜೀವನವನ್ನಾಗಿಸಿಕೊಂಡವರು ನೀವು
ಜೀವನವನ್ನೊಂದು ತಪಸ್ಸನ್ನಾಗಿಸಿಕೊಂಡವರು ನೀವು
 
ನಿಮ್ಮ ಸ್ವರ ಕೇಳಿ ರೋಮಾಂಚನಗೊಳ್ಳದವರೇ ಇಲ್ಲ
ನಿಮ್ಮ ಸ್ವರವ ಮತ್ತೆ ಮತ್ತೆ ಕೇಳಬೇಕೆನಿಸಿದವರೇ ಎಲ್ಲ
 
ಕಾಲಗರ್ಭದಲಿ ಸೇರಿ ಹೋಗುವವರು ನಿಮ್ಮಂತೆ ನಾವೂ
ಅಮರರು ನೀವು ಆದರಿಲ್ಲಿ ಇದ್ದೂ ಸತ್ತಂತಿರುವೆವು ನಾವು
 
ನಿಮ್ಮ ಆತ್ಮವನು ತನ್ನಲ್ಲಿ ಲೀನವಾಗಿಸದಿರಲಿ ಪರಮಾತ್ಮ
ಮತ್ತೆ ನಮ್ಮೀ ನಾಡಲ್ಲೇ ಹುಟ್ಟಿ ಬರಲಿ ನಿಮ್ಮಾ ಪಾವನಾತ್ಮ