“ದಿನ ಪ್ರತಿದಿನ ಮಾತನಾಡಲು
ನಿಜದಿ ವಿಷಯಗಳು ಇರಬೇಕಲ್ಲಾ?”
*
“ವಿಷಯ ಏನೂ ಇಲ್ಲದಿದ್ದರೇನು
ಮಾತಾಡುವಾಸೆ ಇಲ್ಲವೆಂದೇನಲ್ಲ”
*
“ನಿನ್ನ ದನಿ ಕಿವಿಗಳಿಗೆ ಬಿದ್ದರೆ
ಅಂದಿನ ದಿನ ಸಾರ್ಥಕವಾಗುವುದಲ್ಲ”
*
“ನಿನಗಾಗಿ ಅಲ್ಲ ನಿಜವಾಗಿಯೂ
ನನಗಾಗಿಯೇ ಕರೆಮಾಡುವೆ ಸುಳ್ಳಲ್ಲ”
*
“ಸರಿ ದಿನಕ್ಕೊಂದು ಕರೆಮಾಡು
ನಿನ್ನಾಣೆಗೂ ಬೇರೇನೂ ಬೇಡುವುದಿಲ್ಲ”
*
“ಆಣೆಯ, ಬೇಡುವ ಮಾತೇಕೆ
ನನಗೂ ಇದೆ ಆಸೆ ನಾ ಮುಚ್ಚಿಡುವುದಿಲ್ಲ”
*
“ನಿನ್ನ ಮನದೊಲವ ಅರಿತಿರುವೆ
ಸರಿ ಬಿಡು ಇಂದಿನ ಮಾತು ಮುಗಿಯಿತಲ್ಲಾ?”
*
“ನಾಳೆ ಹೊಸತೊಂದು ರಾಗದಲಿ
ಹೊಸ ನೆವದೊಂದಿಗೆ ಮಾತಾಡಿದರಾಯ್ತಲ್ಲಾ?”
****************