ಮಾನ್ಯ ಯಡ್ಯೂರಪ್ಪನವರಿಗೆ ದೊಡ್ಡ ನಮಸ್ಕಾರ!

28 ಜೂನ್ 10

ಮಾನ್ಯ ಯಡ್ಯೂರಪ್ಪನವರೇ,

ನಿಮಗೊಂದು ದೊಡ್ಡ ನಮಸ್ಕಾರ, ಅಲ್ಲದೇ ನಾನು ಹೃದಯನೊಂದು ತುಂಬಿ ಸಲ್ಲಿಸುತ್ತಿರುವ ಧನ್ಯವಾದಗಳು.

ನಮ್ಮ ಮನೆಯೊಳಗೇ ಸ್ವಾತಂತ್ರ್ಯಯೋಧರಾದ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಸದಸ್ಯರಾಗಿದ್ದ ನಮ್ಮ ತಾತನವರು ಇದ್ದಿದ್ದ್ದರೂ, ಒಂಭತ್ತು ಹತ್ತು ವರುಷದ ಹುಡುಗನಾಗಿದ್ದ ನನಗೆ ಜನಸಂಘದ ದೀಪದ ಗುರುತಿನ ಮೇಲೆ ಅದೇಕೋ ಅವ್ಯಕ್ತ ಪ್ರೇಮ. ಮಾನ್ಯ ಡಾ. ವಿ. ಎಸ್. ಆಚಾರ್ಯರ ಚುನಾವಣಾ ಪ್ರಚಾರ ಕಾರ್ಯಕ್ರಮಗಳಿಗೆ ಬರಿಗಾಲಿನಲ್ಲೇ ಓಡಾಡಿ ನಮ್ಮದೇ ಕೊಡುಗೆ ನೀಡಿದ್ದ ನೆನಪು ಈಗಲೂ ಇದೆ. ಅದು ಸಾವಿರದ ಒಂಭೈನೂರ ಎಪ್ಪತ್ತರ ದಶಕದ ಆದಿ.

ಶ್ರೀಮತಿ ಇಂದಿರಾಗಾಂಧಿಯವರು ಮಣಿಪಾಲಕ್ಕೆ ಭೇಟಿ ನೀಡಿದಾಗ ಹೋಗಿ ಭಾಷಣ ಕೇಳಿಬಂದಿದ್ದರೂ, ಕಾಂಗ್ರೇಸ್ ನನಗೆ ಅದೇಕೋ ಹಿಡಿಸಿರಲಿಲ್ಲ. ವಾಜಪೇಯಿಯವರ, ಜಾರ್ಜ್ ಫೆರ್ನಾಂಡಿಸರ, ಮೊರಾರ್ಜಿ ದೇಸಾಯಿಯವರ, ಆಡ್ವಾಣಿಯವರ, ಭಾಷಣಗಳಿಗೆ ನಾನೂ ಕಿವಿಯಾಗಿದ್ದೆ ಆ ದಶಕದ ಉತ್ತರಾರ್ಧದ ದಿನಗಳಲ್ಲಿ. ಅದೇಕೋ ಏನೋ ನೆಹರೂರವರಿಂದಲೇ ಉತ್ತಮ ಭಾಷಣಕಾರ ಎಂದು ಹೊಗಳಿಸಿಕೊಂಡಿದ್ದ ಅಟಲ್ ಬಿಹಾರಿ ವಾಜಪೇಯಿಯವರನ್ನು ಒಮ್ಮೆ ಪ್ರಧಾನಿಯಾಗಿ ನೋಡಬೇಕೆಂಬ ಆಸೆ ಅಂದಿನ ದಿನಗಳಿಂದಲೇ ಮನದಲ್ಲಿ ಹುದುಗಿಹೋಗಿತ್ತು. ಅದರೊಂದಿಗೆ, ನಮ್ಮ ರಾಜ್ಯದಲ್ಲೂ ಭಾರತೀಯ ಜನತಾ ಪಕ್ಷದ ಸರಕಾರ ಅಧಿಕಾರ ನಡೆಸುವುದನ್ನು ನೋಡಬೇಕೆಂಬ ಆಸೆಯೂ ಕೂಡ. ವಾಜಪೇಯಿಯವರು ಪ್ರಧಾನಿಯೂ ಆದರು, ನೇಪಥ್ಯಕ್ಕೂ ಸರಿದರು.

ಕರ್ನಾಟಕದಲ್ಲಿ ಭಾಜಪ ಅಧಿಕಾರಕ್ಕೆ ಬಂದಾಗ ನನ್ನ ಎರಡನೆಯ ಆಸೆ ಕೈಗೂಡಿದ ಸಂತಸ ನನ್ನ ಮನದಲ್ಲಿ. ಆದರೆ ಕಳೆದು ಹೋದ ಏಳುನೂರ ಮೂವತ್ತು-ನಲವತ್ತು ದಿನಗಳಲ್ಲಿ ದಿನದಿನವೂ ನನಗೆ ಮತ್ತು ನನ್ನ ಸಹಮನಸ್ಕರಿಗೆಲ್ಲಾ ಅಘಾತವನ್ನೇ ನೀಡುತ್ತಾ ಬಂದಿರಿ ನೀವು. ರಾಜಕೀಯದ ಬಗ್ಗೆ ಆಸಕ್ತಿ ತೋರಲು ತೊಡಗಿದ್ದ ವಿದ್ಯಾವಂತ ಯುವಜನಾಂಗವನ್ನು ಮತ್ತೆ ಹಿಂದಕ್ಕಟ್ಟುವಂತೆ ಮಾಡಿಬಿಟ್ಟಿರಿ ನೀವು. ಚುನಾವಣೆಗಳಲ್ಲಿ ಮತದಾನಕ್ಕೆ ಯಾಕೆ ಹೋಗಬೇಕು ಎಂದು ನಮ್ಮನ್ನೇ ನಾವು ಕೇಳಿಕೊಳ್ಳುವಂತೆ ಮಾಡಿದಿರಿ ನೀವು. ಅದಕ್ಕಾಗಿ ಈ ದೊಡ್ಡ ನಮಸ್ಕಾರ ಮತ್ತು ಧನ್ಯವಾದಗಳು. ಇನ್ನು ರಾಜಕೀಯ ಬೇಡ ಸ್ವಾಮೀ … ರಾಜಕೀಯ ಬೇಡವೇ ಬೇಡ ನಮಗೆ.

ಅವರಿವರು ಆಡಿದಂತೆ ನಿಮಗೆ ನಡೆಯಲಾಗದಿದ್ದರೂ ನೀವು ನುಡಿದಂತಾದರೂ ನಡೆದು ತೊರಿಸಿದ್ದರೆ, ಮೆಚ್ಚಿಕೊಳ್ಳಬಹುದಿತ್ತು. ತನ್ನ ಸಂಪುಟದಲ್ಲಿದ್ದ ಇದ್ದ ಏಕೈಕ ಮಹಿಳಾಮಂತ್ರಿಗೆ ಅಗತ್ಯಕ್ಕಿಂತ ಹೆಚ್ಚಿನ ಪ್ರಾಶಸ್ತ್ಯಕೊಡುವ ಯತ್ನದಲ್ಲಿ, ಕಂಡವರ ಕಣ್ಣಿಗೆ ಮುಳ್ಳುಚುಚ್ಚುವಂತೆ ಮಾಡಿದಿರಿ. ನಂತರ ತಮ್ಮ ವಿರೋಧಿಗಳ ಮಾತಿಗೆ ಮನ್ನಣೆ ನೀಡಿ ಆಕೆಯನ್ನೇ ಮನೆಗೆ ಕಳುಹಿಸಿ, ಸಾರ್ವಜನಿಕವಾಗಿ ಕಣ್ಣೀರು ಸುರಿಸಿದಿರಿ. ಅಧಿಕಾರಶಾಹಿಗಳಲ್ಲಿ ಮತ್ತು ಭ್ರಷ್ಟಾಚಾರಿಗಳಲ್ಲಿ ತಮ್ಮ ನಿಯತ್ತನ್ನೇ ಅಡವಿಟ್ಟಂತಿರುವ ನೀವು, ಜನರೆದುರು ಮೊಸಳೆಕಣ್ಣೀರು ಸುರಿಸುವುದನ್ನು ಬಿಟ್ಟು ಬೇರೇನನ್ನೂ ಮಾಡಲಾಗದ, ಪಟ್ಟಭದ್ರಹಿತಾಸಕ್ತಿಯನ್ನು ಹೊಂದಿದ, ಗಾದಿಗೇ ಅಂಟಿಕೊಂಡು ಇರಲು ಬಯಸುವ, ಓರ್ವ ಬಲಹೀನ ಎಂಬುದನ್ನು ಮತ್ತೆ ಮತ್ತೆ ಸಾಬೀತುಪಡಿಸಿದಿರಿ. ತಮ್ಮ ರಾಜಕೀಯ ಜೀವನದ ಶವಪೆಟ್ಟಿಗೆತಯಾರಾಗಿದೆ. ಎಂದು ಪತನಗೊಂಡು ಅದರೊಳಗೆ ಮಲಗುತ್ತೀರೋ ನಿಮಗೇ ಗೊತ್ತು. ಆ ಶವಪೆಟ್ಟಿಗೆಗೆ ಹಲಗೆಗಳ ಮತ್ತು ಮೊಳೆಗಳ ಸರಬರಾಜು ಮಾಡಿದ್ದು ಬೇರಾರೂ ಅಲ್ಲ. ಸ್ವತಃ ನೀವೇ ಅನ್ನುವ ಸತ್ಯದ ಅರಿವು ನಿಮಗಿದೆಯೇ? ಈಗಲೂ ಎಚ್ಚೆತ್ತುಕೊಂಡು ಉಳಿದಿರುವ ಮುಂದಿನ ಮೂರು ವರುಷಗಳಲ್ಲಿ, ತಮ್ಮ ಸುದೀರ್ಘ ರಾಜಕೀಯ ಅನುಭವದ ಶಕ್ತಿಯನ್ನು ಬಳಸಿಕೊಂಡು, ರಾಜಕೀಯ ಭ್ರಷ್ಟಾಚಾರದ ಈ ಜಲಧಾರೆಗೆ ವಿರುದ್ಧವಾಗಿ ಈಜುವ ಮನಸ್ಸುಮಾಡಿ, ಜನರ, ಅದರಲ್ಲೂ ಯುವಜನತೆಯ, ಮನಸ್ಸುಗಳನ್ನು ಗೆಲ್ಲುವ ಪ್ರಯತ್ನ ಮಾಡಿ. ಇಲ್ಲವಾದರೆ ಮೂರು ವರುಷಗಳ  ಅಥವಾ ಅದಕ್ಕೂ ಬಹಳಷ್ಟು ಮೊದಲೇ ಬರಬಹುದಾದ  ಚುನಾವಣೆಯಲ್ಲಿ ನಡೆಯುವ ಮತದಾನ ಶೇಕಡಾ ಮೂವತ್ತರ ಆಸುಪಾಸಿನಲ್ಲೇ ಉಳಿದೀತು. ಮತ್ತು ನೀವು ಖಾಯಂ ಆಗಿ ಮನೆಯಲ್ಲೇ ಉಳಿಯಬೇಕಾದೀತು. ಜನರ ಮನದಲ್ಲಿರುವ ಪ್ರಜಾಪ್ರಭುತ್ವದ ಮೇಲಿನ ವಿಶ್ವಾಸ ಸಂಪೂರ್ಣ ನಾಶವಾದೀತು ಮತ್ತು ಅದರ ಶ್ರೇಯ ನಿಮಗಷ್ಟೇ.

ಲೋಕಾಯುಕ್ತರಿಂದ ಆಪಾದಿತನಾಗಿದ್ದ ಶಾಸಕ ಸಂಪಂಗಿಯವರನ್ನು ಸದನ ಸಮಿತಿ ನಿರ್ದೋಷಿ ಎಂದು ಸಾರಿದಾಗ, “ಮಾನ್ಯ ಲೋಕಾಯುಕ್ತರೇ ದಯವಿಟ್ಟು ರಾಜೀನಾಮೆ ನೀಡಿ” ಎಂದು ನಾನು ಇಲ್ಲೇ ಬರೆದಿದ್ದೆ. 

ಆದರೆ ಇಂದು ನಿಮ್ಮಲ್ಲಿ ರಾಜೀನಾಮೆ ಬೇಡುತ್ತಿಲ್ಲ. ತಪ್ಪುಗಳನ್ನು ಸರಿಪಡಿಸಿಕೊಂಡು, ಆಡಳಿತ ಶೈಲಿಯಲ್ಲಿ ಬದಲಾವಣೆ ತಂದುಕೊಂಡು ತೋರಿಸಿಕೊಡಿ ನಮ್ಮ ನಾಡಿನ ಜನತೆಗೆ, ಭಾಜಪಕ್ಕೂ ಆಡಳಿತ ನಡೆಸಲು ಬರುತ್ತದೆ ಎಂದು.

ಆಗ ನಾನು ಇಲ್ಲೇ ನಿಮಗೆ ಮತ್ತೊಮ್ಮೆ ದೊಡ್ಡ ನಮಸ್ಕಾರಮಾಡಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

*******************


ಸಂಸತ್ತಿನಲ್ಲಿ ಅಪ್ಪ ಮಲಗಿದರೆ ಎಬ್ಬಿಸಲು ಮಗನಿರುತ್ತಾನೆ!!!

16 ಮೇ 09

ಇನ್ನು ಸಂಸತ್ತಿನಲ್ಲಿ ಅಪ್ಪ ಮಲಗಿದರೆ ಎಬ್ಬಿಸಲು ಅಲ್ಲಿ ಮಗನಿರುತ್ತಾನೆ
“ಅಪ್ಪಾ ದೊಡ್ಡಾಟ ಮುಗೀತು ಮನೇಗೆ ಹೋಗೋಣ ಬಾ” ಅನ್ನುತ್ತಾನೆ

ಇನ್ನೊಬ್ಬ ಅಪ್ಪನ ಮುಖಕ್ಕೆ ತನ್ನ ತವರೂರಿನಲ್ಲೇ ಆಯ್ತು ಮಂಗಳಾರತಿ
ಮತದಾರ ಕೇಳಿದ ಸಾಕಪ್ಪಾ ಸಾಕು ಇನ್ನೆಷ್ಟು ಬಾರಿ ಪಕ್ಷ ಬದಲಾಯಿಸುತ್ತೀ

ಭಾಜಪಕ್ಕೆ ಈ ಬಾರಿ ನೀಡಲಾಗಿದೆ ಸುಧಾರಿಸಿಕೊಳ್ಳಲು ಕೊನೆಯ ಅವಕಾಶ
ಗೆಲುವಿನ ಅಂತರ ಇದೇ ರೀತಿ ಕಡಿಮೆಯಾದರೆ ನೋಡಬೇಕಾದೀತು ಆಕಾಶ

ಕೆಂದ್ರದಲಿ ಒಂದು ಸುಸ್ಥಿರ ಸರಕಾರ ಇದ್ದರೆ ದೇಶಕ್ಕೆ ಒಳ್ಳೆಯದೇನೋ ಹೌದು
ಆದರೆ ಬಹುಮತದ ಕೊಬ್ಬಿನಿಂದ ಬೋಫೋರ್ಸಿನಂತ ಹಗರಣ ಆಗಲೂ ಬಹುದು

ಆಡ್ವಾಣಿಯವರ ಬಾಲಿಶವಾದ ಟೀಕಾಸ್ತ್ರಗಳು ಮಾಡಿದವೆಂತಹ ಆಧ್ವಾನ ನೋಡಿ
ಅವರ ಜೊತೆಗೆ ಕೈಕೊಟ್ಟದ್ದು ಮೋಡಿ ಮಾಡಲು ಹೊರಟಿದ್ದ ನರೇಂದ್ರ ಮೋದಿ

ಎರಡೆರಡು ಕಡೆ ಸ್ಪರ್ಧಿಸಿದ ಲಾಲೂ-ಚಿರಂಜೀವಿಗೆ ಒಂದೊಂದು ಕಡೆ ಸೋಲು
ಹೇಗೂ ರಾಜೀನಾಮೆ ಕೊಡುವರಲ್ಲಾ ಏಕೆ ಮಾಡಬೇಕು ಸುಮ್ಮನೆ ಹಣ ಪೋಲು

ಒಟ್ಟಾರೆ ಫಲಿತಾಂಶ ಬೊಟ್ಟು ಮಾಡಿ ತೋರಿಸುವಂತಿದೆ ದ್ವಿಪಕ್ಷೀಯ ಪದ್ಧತಿಯತ್ತ
ತೃತೀಯ ರಂಗ ಕಟ್ಟಲು ಹೊರಟ ಎಡಪಕ್ಷೀಯರನು ಸಾಗಹಾಕಿದಂತಿದೆ ಮನೆಯತ್ತ

ಆಂಧ್ರದ ಈ ಮೆಗಾಸ್ಟಾರ್ ಅದೇಕೋ ಜನರ ಮನ ಮತ ಗೆಲ್ಲುವಲ್ಲಿ ವಿಫಲನಾದ
ಎಂಜಿಆರ್ ಎನ್ಟಿಆರ್ರವರ ಹಳೆಯ ಕಾಲ ಬೇರೆಯಾಗಿತ್ತೆಂದು ಅರಿಯದೆ ಹೋದ

ಸಿದ್ಧಾಂತವಿರಬೇಕು ಬರಿಯ ಬಾಯಿಮಾತಿನ ಚಕಮಕಿ ಸಾಲದು ಮನ ಗೆಲ್ಲುವುದಕ್ಕೆ
ನೇತಾರ ನಂಬಿಗಸ್ತನಾದರೆ ಹೆಚ್ಚಿನ ಸಂಖ್ಯೆಯಲಿ ಬರುತಾರೆ ಮತ ನೀಡುವುದಕ್ಕೆ


ಮನುಜ ಮತ ಪ್ರತಿಪಾದಕನಾಗು!!!

30 ಏಪ್ರಿಲ್ 09

ಈಗ ಅರ್ಧ ಘಂಟೆಗೆ ಮೊದಲು ನನ್ನ ಅನುಜ ಆತ್ರಾಡಿ ಪೃಥಿರಾಜ್ ಹೆಗ್ಡೆಯಿಂದ ಈ ಸಂದೇಶ ಬಂತು:

“ನನಗೆ ಯಾರೂ ನಾಯಕರಿಲ್ಲ,
ಆದರೆ, ನಾ ನಿಂತ ಜನರ ಸಾಲಿನ ಮುಂಚೂಣಿಯಲ್ಲಿ ಆಡ್ವಾನಿಯ ಕಂಡೆ;
ನನಗೆ ಯಾವ ಪಕ್ಷವೂ ಇಲ್ಲ,
ಆದರೆ, ನನಗೆ ಜೈಕಾರ ಹಾಕುವವರ ಕೈಯಲ್ಲಿ ಬಿಜೆಪಿಯ ಧ್ವಜವ ಕಂಡೆ;
ನನಗೆ ಯಾವ ಮತವೂ ಇಲ್ಲ,
ಆದರೆ, ಕನಸಲ್ಲಿ ಶಿವ ಬಂದು ನಿನ್ನ ಧರ್ಮ ಯಾವುದು ಎಂದಾಗ ಹಿಂದೂ ಎಂದೆ;
ನಾನು ದೇವರಲ್ಲಿ ಏನನ್ನೂ ಬೇಡುವುದಿಲ್ಲ,
ಆದರೆ, ಶಿವ ಕನಸಲ್ಲಿ ಬಂದು ಕೇಳಿದಾಗ ಪುನರ್ಜನ್ಮ ಇದ್ದರೆ ಹಿಂದುವಾಗೇ ಹುಟ್ಟಿಸು ಅಂದೆ;
ತಾಯ್ನೆಲಕೆ, ತಾಯ್ನುಡಿಗೆ, ತಾಯ ರಕ್ತದ ಋಣಕೆ, ಬಿಜೆಪಿಯನ್ನಲ್ಲದೆ ಅನ್ಯ ರಾಜಕೀಯ ಪಕ್ಷವ ಕಾಣೆ!!!”

ಅದಕ್ಕೆ ನಾನು ಕಳುಹಿಸಿದ ಉತ್ತರ ಇಲ್ಲಿದೆ:

“ಮನುಜನಾಗು,
ಮನುಜ ಧರ್ಮೀಯನಾಗು,
ಮನುಜ ಮತ,
ವಿಶ್ವಮತದ
ಪ್ರತಿಪಾದಕನಾಗು.
ನೀನು ಇಂತಾದೊಡೆ,
ಮೋಕ್ಷ ನಿನಗಕ್ಕು
ನಿನ್ನ ಬಾಳು ನಾಕಕ್ಕೆ ದಾರಿಯಕ್ಕು,
ಇಲ್ಲವಾದೊಡೆ ಈ ನಿನ್ನ ಬದುಕು
ನರಕದ ರಹದಾರಿಯಕ್ಕು!!!”

(ಯಾವುದೇ ಪಕ್ಷ ಮತಗಳ ಬಗ್ಗೆ ಪೂರ್ವಗ್ರಹವಿಲ್ಲದೇ, ಓದುಗರೊಂದಿಗೆ ಇದನ್ನು ಹಂಚಿಕೊಳ್ಳುವ ಒಂದೇ ಉದ್ದೇಶದೊಂದಿಗೆ ಪ್ರಕಟಿಸುತ್ತಿದ್ದೇನೆ).