ಆಟಕ್ಕುಂಟು ಊಟಕ್ಕಿಲ್ಲ ಈ ನಾಡಿನಲ್ಲಿ!

23 ಸೆಪ್ಟೆಂ 10

 

ನಮ್ಮವರಿಗೇ ಹೆದರಿ ಬಾಗಿಲು ಮುಚ್ಚಿಕ್ಕೊಂಡು ಒಳಕೂರುವ ದೇಶ
ಶಾಲಾ ಕಾಲೇಜುಗಳಿಗೆ ರಜೆಸಾರಿ ತೋರಿಸುವರು ತಮ್ಮ ಆವೇಶ

ವಿದೇಶಿಯರು ದಂಡೆತ್ತಿ ಬಂದಿರುವಂತೆ ಆಡುತ್ತಿರುವುದಾದರೂ ಏಕೆ
ನಮ್ಮವರಿಂದ ನಮ್ಮವರಿಗೇ ರಕ್ಷಣೆ ಕೊಡಲಾಗದ ಸರಕಾರಗಳೇಕೆ

ಸಾವಿರ ಸಾವಿರ ಕೋಟಿ ಖರ್ಚು ಮಾಡಿ ಕ್ರೀಡಾಕೂಟ ನಡೆಸುವರು
ರೈತರ ಭೂಮಿ ಕಿತ್ತುಕೊಂಡು ಬದಲಿಗೆ ಪುಡಿಗಾಸನ್ನಷ್ಟೇ ನೀಡುವರು

ಸತ್ತ ಯೋಧರ ಸಂಸಾರಗಳಿಗೆ ಪರಿಹಾರ ಸಹಕಾರ ಭಾಷಣಗಳಲ್ಲೇ
ಚೆಂಡಿನಾಟದಲಿ ಗೆದ್ದವರಿಗೆ ಸನ್ಮಾನ ಬಹುಮಾನ ರಾಜಧಾನಿಯಲ್ಲೇ

ಚಿತ್ರನಟ, ಕ್ರಿಕೆಟ್ ಆಟಗಾರ, ರಾಜಕೀಯ ನಾಯಕನಾದರಷ್ಟೇ ಬಾಳು
ರೈತನಾಗಿ ಹುಟ್ಟಿದವನದು ಜೀವನಪೂರ್ತಿ ಬರೀ ಬೇಗುದಿಯ ಗೋಳು

ಆಟಕ್ಕುಂಟು ಆದರೆ ಊಟಕ್ಕಿಲ್ಲ ಎಂಬಂತಾಗಿದೆ ನಮ್ಮ ಈ ನಾಡಿನಲ್ಲಿ
ಆ ವಿದೇಶೀಯಳ ಕೈಕೆಳಗೆ ಭಾರತೀಯರೆಲ್ಲಾ ಬಂಧಿಗಳು ಈಗ ಇಲ್ಲಿ!

************


ನನ್ನ ಆ ಅಪರಿಚಿತ ಅಭಿಮಾನಿ ಇನ್ನಿಲ್ಲ!!!

04 ಜನ 10

ಸಖೀ,

ಕಳೆದೆರಡು ತಿಂಗಳಿಂದ ಜಂಗಮ ದೂರವಾಣಿಯಲಿ ಸಂದೇಶಗಳ ರವಾನಿಸುತ್ತಿದ್ದಾಕೆ

ಅಪರಿಚಿತ ಅಭಿಮಾನಿ ಆಗಿಯೇ ಉಳಿದು ಸದಾ ನನ್ನ ಕವನಗಳ ಕೊಂಡಾಡುತ್ತಿದ್ದಾಕೆ

 

ಇಹಲೋಕ ತ್ಯಜಿಸಿ ಅದಾಗಲೇ ಎರಡು ದಿನಗಳಾಗಿವೆ ಎಂಬ ಸುದ್ದಿ ಬಂದಿದೆ ಇಂದು

ನನ್ನ ಕಿವಿಗಳ ನಂಬಲಾಗದೇ ಮಾತು ಹೊರಡದೇ ಯೋಚಿಸಿದೆ ಸುಮ್ಮನೇ ನಿಂದು

 

ಯಾರಾಕೆ, ಅದ್ಯಾಕೆ ನನ್ನ ಮನದ ಕದ ಬಡಿದು ಕಿಟಕಿಯಲಿ ಇಣುಕಿ ಮರಳಿದಳವಳು

ನಾನಿನ್ನು ಈ ಜೀವನ ಪೂರ್ತಿ ನೆನೆ ನೆನೆದು ಕೊರಗುವಂತೆ ಮಾಡಿ ಹೋದಳವಳು

 

ಮುಖವ ನಾ ಕಂಡಿಲ್ಲ, ಮಾತೊಂದನೂ ಆಡಿಲ್ಲ, ಬರಿಯ ಸಂದೇಶಗಳೇ ಪರಿಚಯ

ಅಂದಿದ್ದಳಾಕೆ, ಕಾಯುತ್ತಿರಿ ಸದ್ಯವೇ ಬರಬಹುದು ಮಾತನಾಡುವ ಸುವರ್ಣ ಸಮಯ

 

ಮಾತಿಲ್ಲ ಕತೆಯಿಲ್ಲ ಹೋಗುವಾಗ ಹೋಗುತ್ತೇನೆಂಬ ಸುಳಿವು ನೀಡದೆಯೇ ಹೋದಳು

ಎಲ್ಲಾ  ಸಂದೇಶಗಳನ್ನು ಅಳಿಸಿಯಾಗಿದೆ ಮನದಲಿನ್ನು ಬರೀ ನೆನಪಾಗಿಯೇ ಉಳಿವಳು

 

ಆಕೆಗೆನ್ನ ದೂರವಾಣಿ ಸಂಖ್ಯೆ ನೀಡಿದವರಾದರೂ ಏನು ಪರಿಚಯ ನೀಡಿಯಾರು ನನಗೆ

ಇನ್ನು ಏನ ನೀಡಿದರೂ ನಿಜದಿ ಏನು ಮತ್ತು ಹೇಗೆ ಪ್ರಯೋಜನ ಹೇಳು ಅವುಗಳಿಂದೆನಗೆ

 

ಅಗಲಿದ ಆಕೆಯಾತ್ಮಕ್ಕೆ ಚಿರ ಶಾಂತಿಯ ನೀಡಿರೆಂದು ಕೋರುವೆ ನಾನು ಆ ಭಗವಂತನಲ್ಲಿ

ಇನ್ನೆಂದೂ ಈ ತೆರನಾದ ಆಟ ನಡೆಯದಿರಲಿ ದೇವ ಎನ್ನುವೆ ಮುಂದಿನ ಜೀವನ ಕಾಲದಲ್ಲಿ!!!

************************************************************

ಆಕೆಯ ಬಗ್ಗೆ ನಾನಿಲ್ಲಿ ಬರೆದಿದ್ದೆ:  ನನ್ನ ಆ ಅಪರಿಚಿತ “ಫ್ಯಾನು”