ಕಷ್ಟ ಬರಬಹುದೆಂದು ಸತ್ಯ ನನಗನಿಷ್ಟವೆಂದೆನ್ನಲೇ

29 ಏಪ್ರಿಲ್ 10

 

 

ಕ್ಷಮೆಯೊಂದೇ ಧರೆಯೊಳಗೇ ಪರಮವೆಂದು ಅಂದರೇ ಎಲ್ಲ

ಕ್ಷಮೆಯನ್ನು ಯಾಚಿಸದವನಿಗೆ ಧರೆಯೊಳಗೆ ಕ್ಷಮೆಯೇ ಸಲ್ಲ

 

ತಪ್ಪನ್ನು ತಪ್ಪೆಂದರುಹದೊಡೆ ಆ ತಪ್ಪನ್ನು ನಾಮಾಡಿದಂತೆ

ಬಾಯ ತೆರೆಯದಿದ್ದೊಡೆ ಅನಾಹುತಕ್ಕೆ ನಾ ಕಾರಣನಾದಂತೆ

 

ದುರ್ಜನರ ಸಹವಾಸವದು ಹಾವಿನೊಂದಿಗಿನ ಸರಸದಂತೆ

ಯಾವಾಗ ಎಲ್ಲಿ ಕಡಿಯುವುದೇನೋ ನಮಗೇ ಅರಿಯದಂತೆ

 

ಸಂಬಂಧಗಳ ನೆಪದಲ್ಲಿ ಆತ್ಮ ವಂಚನೆ ಮಾಡಿಕೊಳ್ಳಲೇಕೆ

ಎಲ್ಲರ ಮೇಲೆಳೆದುಕೊಂಡು ಮೈಯೆಲ್ಲಾ ಪರಚಿಕೊಳ್ಳಲೇಕೆ

 

ಅವರಿವರನ್ನು ಮೆಚ್ಚಿಸುತ್ತಾ ಬಾಳಲಾಗದು ಜೀವನದುದ್ದಕ್ಕೂ

ದೇವರು ಮೆಚ್ಚದಿದ್ದರೆ ಈ ಆತ್ಮಕ್ಕೆ ಗೋಳೇ ಬಾಳಿನುದ್ದಕ್ಕೂ

 

ಜನರು ಮೂರ್ಖರು ಅವರ ದೇವರೇ ಕ್ಷಮಿಸಲಿ ಎಂದೆನ್ನಲೇಕೆ

ತನ್ನತನವನೇ ಮರೆತು ನಪುಂಸಕನಾಗಿ ನಾನಿಲ್ಲಿ ಬಾಳಲೇಕೆ

 

ನನಗೆ ಕಷ್ಟ ಬರಬಹುದೆಂದು ಸತ್ಯ ನನಗೆ ಅನಿಷ್ಟವೆಂದೆನ್ನಲೇ

ಅಸತ್ಯವನೇ ಮೆರೆದು ದೇವನಿಗೇ ಇಷ್ಟವಿಲ್ಲದವನಂತಾಗಲೇ

************************************