ಮಾಡಿ ಅನುವಾದ!

01 ಸೆಪ್ಟೆಂ 12

ಸಖೀ,
ನಾನಂದೆ:

“ಏನ್ ಭಾಷೇನೇ ನಿಂದು?
ಜನರಿಗೆ ನಿನ್ನ ಮಾತುಗಳು
ಅರ್ಥ ಆಗುತ್ತವೆಯೇ?”

ಅವಳಂದಳು: 
“ನೀವಿದ್ದೀರಲ್ಲಾ…
ಅದೇನೇನನ್ನೆಲ್ಲಾ
ಅನುವಾದ-ಭಾವಾನುವಾದ 
ಮಾಡ್ತೀರಂತೆ…
ನನ್ನ ಮಾತುಗಳನ್ನೂ
ಅನುವಾದ-ಭಾವಾನುವಾದ
ಮಾಡಿ, ನೀಡಿ ನೋಡಿ
ಜನರಿಗೆ, ಅರ್ಥವಾಗದಿರುತ್ತದೆಯೇ?”


ಅರ್ಥ ಬೇಕು!

01 ಸೆಪ್ಟೆಂ 12

ಸಖೀ,
ನಾನಂದೆ:
“ನನಗೆ ನೀನು ಬೇಕು”

ಅವಳಂದಳು: 
“ನನಗೆ ಅರ್ಥ ಬೇಕು”

ನಾನಂದೆ:

“ಹೂಂ…
ನಿನ್ನ ಮಾತೂ 
ನಿಜ ಕಣೇ,
ಈ ಸಂಬಂಧಕೂ 
ಒಂದು ಅರ್ಥ 
ಇರಲೇಬೇಕು!”
*****


ಪೀಠವನೇರಿ ಕೂತವರೆಲ್ಲಾ ಜ್ಞಾನಿಗಳಲ್ಲ!

20 ಸೆಪ್ಟೆಂ 11

 

ನಮ್ಮ ನಾಡಲ್ಲಿ ಪೀಠವನೇರಿ ಕೂತವರೆಲ್ಲಾ ಜ್ಞಾನಿಗಳಲ್ಲ
ಆದರೆ ಇಲ್ಲಿ ಜ್ಞಾನಪೀಠಿಗಳೆನಿಸಿಕೊಂಡವರು ಕಮ್ಮಿ ಇಲ್ಲ;

ಕೋಟಿಗೊಬ್ಬನಿಗೂ ಮೀರಿ ಜ್ಞಾನಪೀಠಿಗಳು ಈ ನಾಡಿನಲ್ಲಿ
ದೇಶದ ಅನುಪಾತಕ್ಕೂ ಮೀರಿಹುದು ನಮ್ಮ ಕರುನಾಡಿನಲ್ಲಿ;

ಲೇಖನಿ ಹಿಡಿದವರೇ ಸರ್ವಕಾಲಕ್ಕೂ ಇಲ್ಲಿ ಬಹುಮಾನಿತರು
ಅಧಿಕಾರದ ಗದ್ದುಗೆಯೇರಿದವರು ಈಗ ಜೈಲು ಸೇರುತಿಹರು

ಜ್ಞಾನ ಹೊಂದಿರುವವರು ಅನ್ಯರಿಗದನು ಹಂಚಿ ಸುಖಿಸುವರು
ಜ್ಞಾನ ಪಡೆದವರು ನಿಸ್ವಾರ್ಥದಿ ದಾನಿಯ ಮನದಿ ಹರಸುವರು

ಹಂಚಿದ ಆಹಾರ, ಅರ್ಥವೆಲ್ಲಾ ಒಂದು ದಿನ ಕರಗಿ ಹೋಗುವುದು
ಜ್ಞಾನವು ಕರಗದೆ ಬೆಳೆದು ಮುಂದೆ ಮುಂದೆ ಸಾಗುತ್ತಲಿರುವುದು

ಜ್ಞಾನಪೀಠ ಪ್ರಶಸ್ತಿಗೆ ಪುರಸ್ಕೃತರು ಡಾ. ಚಂದ್ರಶೇಖರ ಕಂಬಾರ
ಎಂಟು ಪ್ರಶಸ್ತಿಗಳಿಂದಾಗಿ ಕನ್ನಡವೀಗ ಮಿಕ್ಕೆಲ್ಲಕ್ಕಿಂತ ನಿಜದಿ ಭಾರ!
*****


ಇಂತವರಿಗಿಂತ ಅಂತವರು ಬೇಕು!

04 ಜೂನ್ 10


ನನಗನ್ನಿಸುತ್ತೆ,


ನಮ್ಮನ್ನು ಅಪಾರ್ಥ

ಮಾಡಿಕೊಂಡು, ನುಡಿದರೆ

ಎಲ್ಲಿ ನೋವಾದೀತೋ

ಎಂದು ಮೌನಿಯಾಗಿಯೇ

ಇರುವವರಿಗಿಂತ,


ಮಾತುಗಳೊಂದಿಗೆ

ನಮ್ಮೊಡನೆ ಜಗ್ಗಾಡಿದರೂ

ನಮ್ಮನ್ನು ನಿಜವಾಗಿಯೂ

ಅರ್ಥಮಾಡಿಕೊಳ್ಳುವವರು

ಬೇಕಾಗಿದ್ದಾರಂತ!

***********


ಜೀವನಕೆ ಅರ್ಥ ಕೊಡಲು ವಿಫಲನಾದೊಡೆ…?!

11 ಸೆಪ್ಟೆಂ 09

 

 

ಸಖೀ,

ನಿನ್ನ ಸಮಸ್ಯೆಗಳ ನನ್ನಲ್ಲಿ ಅರುಹು

ನಾನದಕೆ ಪರಿಹಾರ ಸೂಚಿಸಬಲ್ಲೆ

ನೀನೇ ಸಮಸ್ಯೆಯಾದೆಯೆಂದಾದರೆ

ನೀ ಹೇಳು ನಾ ಹೇಗೆ ಬಾಳಬಲ್ಲೆ…?

 

ನೀನು ನನ್ನ ಪ್ರೀತಿಸದಿದ್ದರೂ ಚಿಂತಿಲ್ಲ

ನಾ ನಿನ್ನ ಮನಸಾರೆ ಪ್ರೀತಿಸಬಲ್ಲೆ

ನೀನು ನನ್ನನ್ನೇ ಶಂಕಿಸುವೆಯಾದರೆ

ಅಸಹಾಯಕ ನಾನೇನು ಮಾಡಬಲ್ಲೆ…?

 

ನೀನು ನುಡಿದ ಮಾತುಗಳನು ಅರಿತು

ಅದರಂತೆ ನಾನು ನಡೆಯಲೂ ಬಲ್ಲೆ

ನೀನೆಣಿಸಿದಂತೆ ನಾ ನಡೆದಿಲ್ಲವೆಂದರೆ

ಅದಕೆ ನಾನು ಏನ ನುಡಿಯಬಲ್ಲೆ…?

 

ಹೊಂದಾಣಿಕೆಯೇ ಜೀವನ ಇದು ನಿಜ

ನಾನು ಹೊಂದಾಣಿಕೆಗಳಿಗೆ ಒಗ್ಗ ಬಲ್ಲೆ

ಹೊಂದಾಣಿಕೆಗಾಗಿ ನನ್ನನ್ನಷ್ಟೇ ಬಗ್ಗು

ಎಂದರೆ ನಾನು ಇನ್ನೆಷ್ಟು ಬಗ್ಗ ಬಲ್ಲೆ…?

 

ಸಂಬಂಧಗಳರ್ಥವೆನಗೆ ಚೆನ್ನಾಗಿಹುದು

ಅರ್ಥೈಸಿಕೊಂಡು ನಾನು ಬಾಳಬಲ್ಲೆ

ನನ್ನ ಜೀವನಕೇ ಒಂದು ಅರ್ಥ ಕೊಡಲು

ವಿಫಲನಾದೊಡೆ  ಹೇಗೆ ಬದುಕಿರಬಲ್ಲೆ…?


ಅರ್ಥ ಇಲ್ಲದ ಜೀವನಕೂ ಅರ್ಥ ಇದೆಯೇ..?!!!

03 ಆಗಸ್ಟ್ 09

ಸಂಸಾರದೊಳಗಣ ಚಿತ್ರಹಿಂಸೆಗಳಿಂದ ಬಳಲಿ ಬೆಂಡಾಗಿ
ನೋವ ನುಂಗಿ ಮನದಲಿ ಜಿಗುಪ್ಸೆ ತುಂಬಿಕೊಂಡವನಾಗಿ

ದೇವರಿಗೆ ಮೊರೆ ಇಟ್ಟು ಗೋಗರೆದರೂ ಆತ ಕೇಳದಿದ್ದಾಗ
ಈ ಜೀವನವೇ ಸಾಕೆಂಬ ನಿರ್ಧಾರದತ್ತ ಮನ ವಾಲಿದಾಗ

ಅತ್ತ ಇತ್ತಲಿನ ಮಂದಿ ಕರೆದು ಹೇಳಿದರು ಆತನ ಕಿವಿಯಲ್ಲಿ
ಯಾಕೆ ನಿನಗೀ ವ್ಯಥೆ ನಿನ್ನ ಪ್ರೀತಿಸುವ ನಾವಿರುವೆವು ಇಲ್ಲಿ

ಕರೆದು ನಗಿಸಿ ಪ್ರೀತಿಯ ಮಾತಾಡಲಿದ್ದರೂ ನೂರು ಮಂದಿ
ಜೊತೆಗೆ ಬಾಳುವವರ ಚಿತ್ರಹಿಂಸೆಯಲೇ ಆತ ಸದಾ ಬಂಧಿ

ಮನೆಯ ಹೊರಗೆ ಜನರ ನಕ್ಕು ನಗಿಸಿ ಬಾಳಿದರೂ ಫಲವಿಲ್ಲ
ಮನೆಯ ಒಳಗಿನ ಯಾತನೆಯ ಸಹಿಸಲಾತನಿಗೆ ಸಾಧ್ಯವಿಲ್ಲ

ಪ್ರತಿಭೆಯ ಕೊಂಡಾಡಿ ನಡತೆಗೆ ಸೋತು ಮೆಚ್ಚುವಂತ ಜನರು
ದಿನದಲ್ಲಿ ಇದ್ದರೂ ಸಂಜೆಯ ಮೇಲಾತಗೆ ಜೊತೆ ನೀಡುವರೇನು

ಅರ್ಥ ಇಲ್ಲದ ಜೀವನಕೂ ಅರ್ಥ ತರುವೆನೆಂಬುದು ಮೂರ್ಖತನ
ಎಂದಾತಗೇ ಅರ್ಥ ಮಾಡಿಸಿ ಕಾಡಿಸುತಿದೆ ಆತನನ್ನಿಂದು ಬಡತನ