ಅರಿವಿನ ಪುಣ್ಯ!

01 ಸೆಪ್ಟೆಂ 12

ಸಖೀ,
ನಿನ್ನರಿವಿನ

ನುಡಿಯ
ನಾನರಿತರೆ,
ನನ್ನರಿವಿನ
ನುಡಿಯ
ನೀನರಿತರೆ,
ನಮ್ಮರಿವಿನ
ನುಡಿಗಳ
ನಮ್ಮ ಅನ್ಯ
ಬಂಧುಗಳೆಲ್ಲರೂ
ಅರಿತರೆ,
ಅರಿವಿನ
ಸರಪಣಿ
ಬೆಳೆಯಬಹುದು,
ಸತ್ಕರ್ಮದ
ಪುಣ್ಯಫಲ
ಲಭಿಸಬಹುದು!


ಮಗೂ, ಅಂದು ನಾ ದಾರಿ ಬಿಡುವೆ!

29 ಜುಲೈ 10
 
 “ನಿನ್ನ ಮೋಹದಿ ನನ್ನ ಬಂಧಿಸಿ

ಈ ಕತ್ತಲಲಿ ಕೂರಿಸದಿರು

ಅಪ್ಪಾ ಬೆಳಕಿಗೆ ಮೈಯೊಡ್ಡುವೆ ದಾರಿಬಿಡು”

 

“ಸುಳ್ಳಲ್ಲ ಮಗು ನಿನ್ನ ಮಾತು

ಅಪ್ಪಂದಿರ ಆಂತರಿಕ ಆತಂಕ

ಇಂದಿನ ಮಗುವಿಗೆ ಹೇಗೆ ಅರಿವಾಗಬೇಕು

 

ಮಗೂ ಸ್ವಾತಂತ್ರ್ಯ ಬೇಕು

ಸ್ವತಂತ್ರರಿಗೂ ಬೇಲಿ ಬೇಕು

ಸ್ವಾತಂತ್ರ್ಯದ ಪರಿಧಿಯಲಿ ನಿನ್ನಪ್ಪನಿರಬೇಕು

 

ಎಲ್ಲವನೂ ಹರಿದೊಗೆದು

ಒದ್ದು ನಡೆದರೆ ಮುಂದೆ

ಸಮಾಜದ ಮುಂದೆ ಬತ್ತಲಾಗಿ ನಿಲಬೇಕು

 

ನಿನ್ನ ಅರಿವಿನ ಮಟ್ಟ

ನೀನರಿತದ್ದೇ ಅಲ್ಲ ಈ ಅಪ್ಪನೂ

ಅರಿಯಬೇಕು ಅರಿತಂದು ನಿನಗೀತ ದಾರಿ ಬಿಡಬೇಕು”

************************


ನಮ್ಮ ಸ್ನೇಹದ ಬಗ್ಗೆ ಮಾತಾಡಲಿ ಜನ!

14 ಜುಲೈ 10

ನಿನ್ನ ನನ್ನ ಭೇಟಿ ಬಸ್ಸಿನಲ್ಲಿ ಆಗುವ ಸಹಪ್ರಯಾಣಿಕರ ಭೇಟಿಯಂತಲ್ಲ

ಜೀವನ ಯಾತ್ರೆಯಲಿ ನಿನ್ನನ್ನಿಲ್ಲಿ ನನ್ನ ಜೊತೆಗೆ ಬಿಟ್ಟುಬಿಟ್ಟಿಹನಲ್ಲಾ?

 

ಕಾರಣವಿಲ್ಲದೇ ಇಲ್ಲಿ ಹುಲ್ಲುಕಡ್ಡಿಯೂ ಅಲುಗಾಡದು ಎಂಬ ಮಾತಿದೆ

ನಮ್ಮಿಬ್ಬರ ಸ್ನೇಹಕ್ಕೂ ಏನೋ ಕಾರಣವಿದೆ ಎಂಬ ನಂಬಿಕೆ ನನಗಿದೆ

 

ಯಾರೂ ಇನ್ನಾರಿಗಾಗಿ ಸುಖಾಸುಮ್ಮನೇ ತಲೆಕೆಡಿಸಿಕೊಳ್ಳುವುದಿಲ್ಲ

ಯಾರೂ ಪರರಿಗಾಗಿ ಕಾರಣವಿಲ್ಲದೇ ತಮ್ಮನ್ನೇ ಮರೆತುಬಿಡುವುದಿಲ್ಲ

 

ಕ್ಷಣಕ್ಷಣವೂ ಮನದೊಳಗೆ ನೆನೆನೆನೆದು ಪಡುವ ಸುಖಾನುಭವವದೇನು?

ತನ್ನ ಮನದ ಮಾತನ್ನೆಲ್ಲಾ ಸತತ ಹಂಚಿಕೊಳ್ಳಬೇಕೆಂಬ ತವಕವದೇನು?

 

ನಮ್ಮೀ ಸ್ನೇಹಬಂಧದ ಹಿಂದೆ ಆ ಭಗವಂತನಿಗಿರುವ ಉದ್ದೇಶ ಏನೆಂದರಿತಿಲ್ಲ

ಆದರೆ ಇದಕೇನೋ ಮಹತ್ವವಿದೆಯೆಂಬ ಅರಿವು ನಮ್ಮೀರ್ವರಿಗೂ ಇದೆಯಲ್ಲಾ?

 

ನಮ್ಮ ಸ್ನೇಹದಿಂದ ನಮಗಲ್ಲ ಈ ಸ್ನೇಹಕ್ಕೇ ಆಗುವಂತಾಗಲಿ ಪ್ರಯೋಜನ

ನಾವಳಿದ ಮೇಲೆಮ್ಮ ಸ್ನೇಹದ ಬಗ್ಗೆ ಮಾತಾಡುವಂತಾಗಲಿ ಇಲ್ಲಿಯ ಜನ!

*********************** 


ಹಾಸ್ಯ ಕಲಿಸಿದ ಹಿಂದೀ ಮೇಸ್ಟ್ರು ಇನ್ನಿಲ್ಲವಂತೆ!

10 ಜೂನ್ 10

 

೧೯೭೪ ರಿಂದ ೧೯೭೭ರ ಅವಧಿಯಲ್ಲಿ ನಾನು ಪರ್ಕಳ ಪ್ರೌಢ ಶಾಲೆಯ ವಿದ್ಯಾರ್ಥಿಯಾಗಿದ್ದೆ. ಆಗ ನಮಗೆ ಹಿಂದೀ ಬೋಧನೆ ಮಾಡುತ್ತಿದ್ದ ಕೆ. ಪದ್ಮನಾಭ ಭಟ್ (ಹಿಂದೀ ಪಂಡಿತರು) ಇಹಲೋಕ ತ್ಯಜಿಸಿದ್ದಾರೆ ಎನ್ನುವ ಸಂದೇಶ ನನ್ನ ಸಹೋದರನಿಂದ ಇಂದು ಮುಂಜಾನೆ ಬಂತು. ಉದಯವಾಣಿಯಲ್ಲಿ ಹುಡುಕಿದಾಗ ಸುದ್ದಿಯ ಸಚಿತ್ರ ವರದಿ ಸಿಕ್ಕಿತು.

ಪದ್ಮನಾಭ ಭಟ್ರ ವಿದ್ಯಾರ್ಥಿಗಳಾಗಿದ್ದ ಯಾರೊಬ್ಬರೂ ಅವರ ಹಾಸ್ಯಪ್ರಜ್ಞೆಯನ್ನು ಮರೆಯಲು ಸಾಧ್ಯವೇ ಇಲ್ಲ. ಪ್ರತಿಯೊಂದು ನಿಮಿಷಕ್ಕೂ ಒಂದೊಂದು ಹಾಸ್ಯ ಚಟಾಕಿ ಹಾರಿಸುತ್ತಿದ್ದ, ಎಲ್ಲಾ ಮಾತುಗಳಿಗೂ ಹಾಸ್ಯದ ಲೇಪನ ಕೊಟ್ಟು ಮಾತನಾಡುತ್ತಿದ್ದ ಅವರು, ನನ್ನಲ್ಲಿ ಹಾಸ್ಯಪ್ರಜ್ಞೆ ಮೂಡಿಸಿದ ಎರಡನೇ ಗುರು ಅಂದರೆ ತಪ್ಪಾಗಲಾರದು. ಮೊದಲನೆಯವರು ನಮ್ಮ ತೀರ್ಥರೂಪರು.  ಕಣ್ಣು ಮತ್ತು ಕಿವಿಗಳನ್ನು ತೆರೆದಿಟ್ಟುಕೊಂಡರೆ ಹಾಸ್ಯವನ್ನು ಎಲ್ಲೂ, ಯಾವಾಗಲೂ ಕಾಣಬಹುದು, ಅನುಭವಿಸಬಹುದು ಎನ್ನುವ ಸೂಕ್ಷ್ಮತೆಯ ಅರಿವು ಮಾಡಿಕೊಟ್ಟವರು ಅವರೀರ್ವರು.  ಈಗ ಈರ್ವರೂ ಇಲ್ಲ.
ಆದರೆ, ಹಾಸ್ಯ ಇನ್ನೂ ಜೀವಂತವಾಗಿದೆ ನನ್ನಲ್ಲಿ ಮತ್ತು ಅವರ ಸಾವಿರಾರು ವಿದ್ಯಾರ್ಥಿಗಳ ಜೀವನಗಳಲ್ಲಿ.

ಅಗಲಿದ ಆತ್ಮಕ್ಕೆ ಶ್ರದ್ಧಾಂಜಲಿ ಅರ್ಪಿಸುತ್ತಾ,  ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸುವಂತೆ ಆ ಭಗವಂತನಲ್ಲಿ ಬೇಡುತ್ತೇನೆ.

***************

 

 

 


ಜ್ಞಾನ – ವಿಜ್ಞಾನ!

14 ಏಪ್ರಿಲ್ 10

 

ನನ್ನ ಜ್ಞಾನ

ನಿನಗನಿಸಿರಬಹುದು

ಅಜ್ಞಾನವೆಂದು

ನಿನ್ನ ಜ್ಞಾನ

ನನಗನಿಸಿರಬಹುದು

ಅಜ್ಞಾನವೆಂದು

 

ಅರಿತಿರುವೆಯಾ ನೀ

ಈ ಜ್ಞಾನ ಅಜ್ಞಾನಗಳ

ಪರಿಧಿಯ ದಾಟಿ

ನಾವು ಅರಿವು

ಮೂಡಿಸಿಕೊಂಡರೆ

ಅದುವೆ ನಮಗೆ

ವಿಜ್ಞಾನವೆಂದು?!

 

*****