ತೊರೆದು ಬಂದಿಹ ನನ್ನೂರೇ!

12 ಆಗಸ್ಟ್ 12

ತೊರೆದು ಬಂದಿಹ ನನ್ನ ಊರೇ
ದೂರವಾಗಿಹ ಮನೆಯಂಗಳವೇ
ನಿನಗರ್ಪಣವೀ ಹೃದಯವು
ನೀನೇ ನನ್ನ ಹಂಬಲವು
ನೀನೇ ನನ್ನ ಮಾನವು
ನೀನೇ ನನ್ನ ಪ್ರಾಣವು

ನನ್ನ ಊರನು ಬಳಸಿ ಬರುವ ಗಾಳಿಗೆ ವಂದಿಸುವೆನು
ನನ್ನ ಊರ ಹೆಸರ ನುಡಿವ ಮುಖಕೆ ನಾ ಮುತ್ತಿಡುವೆನು
ನನ್ನೂರ ಮುಂಜಾನೆ ಸೊಗಸು, 
ಸಂಜೆಗೆ ಸೋಲುವುದು ಮನಸು
ನಿನಗರ್ಪಣವೀ ಹೃದಯವು

ಅಮ್ಮನ ಹೃದಯದಂತೆನ್ನೆದೆಯ ಅಪ್ಪಿಕೊಳ್ಳುವೆ ನೀನು
ನನಗೆ ನನ್ನ ಮಗಳಿನಂತೆ ನೆನಪು ಆಗುತ್ತಿರುವೆ ನೀನು
ನನಗೆ ನೆನಪಾದಷ್ಟೂ ನೀನು,
ಬಿಡದೆ ಪರಿತಪಿಸುವೆನು ನಾನು
ನಿನಗರ್ಪಣವೀ ಹೃದಯವು

ಊರ ತೊರೆದಿಷ್ಟೊಂದು ದೂರ ನಾನೇನೋ ಬಂದಿಹೆ
ಅದರೂ ನಿನ್ನ ತೊರೆಗಳಾಣೆಗೂ ಈಗ ನಾ ನುಡಿದಿಹೆ
ನಾ ಜನಿಸಿದ ನನ್ನೂರಿನಲ್ಲೇ
ನನ್ನ ಉಸಿರು ತೊರೆಯಲೆನ್ನ
ನಿನಗರ್ಪಣವೀ ಹೃದಯವು
**************

ಇಂದು ಮುಂಜಾನೆ ದೂರದರ್ಶನದ ರಂಗೋಲಿ ಕಾರ್ಯಕ್ರಮದಲ್ಲಿ ಕೇಳಿದ ಈ ಹಾಡನ್ನು (Aye Mere Pyaare Vatan, Aye Mere Bichhade Chaman) ನನ್ನೂರಿನ ನೆನಪಿನ ಜೊತೆಗೆ, ನನ್ನದೇ ವಾಸ್ತವದ ಭಾವ ಸಂಯೋಜನೆಯೊಂದಿಗೆ, ಕನ್ನಡಕ್ಕೆ ಇಳಿಸಿದ್ದೇನೆ.

ಹಾಗಲಕಾಯಿ!

13 ಮೇ 12

“ರೀ …
 ಊರಿಂದ ಬರುವಾಗ
 ಅಮ್ಮ ಅವರ ಕೈತೋಟದಲ್ಲಿ
 ಬೆಳೆದ ಹಾಗಲಕಾಯಿ
 ಕಳುಹಿಸಿಕೊಟ್ಟಿದ್ದಾರೆ.
 ನಿಮ್ಮ ರಕ್ತದಲ್ಲಿನ
 ಸಕ್ಕರೆಯ ನಿಯಂತ್ರಣಕ್ಕೆ
 ಪ್ರಯೋಜನಕಾರಿಯಂತೆ”;

 “ಅಲ್ಲಾ ಕಣೇ…
ನಿನ್ನ ಅಮ್ಮನಿಗೂ
ಬುದ್ಧಿ ಇಲ್ವಾ?
ನೀನೇ ಬರ್ತಾ ಇರೋವಾಗ
ಜೊತೆಗೆ ಹಾಗಲಕಾಯಿಯನ್ನೂ
ಕಳುಹಿಸಿ ಕೊಡುವ
ಅಗತ್ಯ ಏನಿತ್ತಂತೆ?”
***********


ಶುಭ ಹಾರೈಕೆಗಳು!

08 ಮಾರ್ಚ್ 11

 

ಅಜ್ಜಿಯಾಗಿ
ದೊಡ್ಡಮ್ಮನಾಗಿ
ಅಮ್ಮನಾಗಿ
ಚಿಕ್ಕಮ್ಮನಾಗಿ
ಅತ್ತೆಯಾಗಿ
ಅತ್ತಿಗೆಯಾಗಿ
ಅಕ್ಕನಾಗಿ
ತಂಗಿಯಾಗಿ
ಶಿಕ್ಷಕಿಯಾಗಿ
ಸಹಪಾಠಿಯಾಗಿ
ಸಹೋದ್ಯೋಗಿಯಾಗಿ
ಗೆಳತಿಯಾಗಿ
ಮಡದಿಯಾಗಿ
ನಾದಿನಿಯಾಗಿ
ಮಗಳಾಗಿ
ಸೋದರ ಸೊಸೆಯಾಗಿ
ಕಂಡರಿಯದ ಸ್ನೇಹಿತೆಯಾಗಿ
ಕೆಲವೊಮ್ಮೆ ಏನೂ ಅಲ್ಲವಾಗಿ
ಹಲವೊಮ್ಮೆ ಎಲ್ಲವೂ ಆಗಿ
ಬಹುರೂಪದಲಿ
ನನ್ನೀ ಮನದಲಿ
ಮನೆಮಾಡಿ ಅವಿತು ಕೂತ
ಅಸಂಖ್ಯಾತ ಮಹಿಳೆಯರನೆಲ್ಲಾ
ಮನದಲಿಂದು ನೆನೆಯುತ್ತಾ
ಅವರೆಲ್ಲರಿಗೂ ಮನದುಂಬಿ
ಶುಭ ಹಾರೈಸುವೆನು ನಾನೀ
ಮಹಿಳಾದಿನಾಚರಣೆಯ
ಸುಸಂದರ್ಭದಲ್ಲಿ!
********


ಒಡಹುಟ್ಟಿದವರು!

23 ಫೆಬ್ರ 11

ಆಗ:

ಒಡಹುಟ್ಟಿದವರು
ಅಮ್ಮ ಎಂದಷ್ಟೇ ನುಡಿಯುತ್ತಿದ್ದಾಗ
ಅನ್ಯ ಪದಗಳನ್ನೂ ಕಲಿಸಿದವರು

ಒಡಹುಟ್ಟಿದವರು
ಅಂಬೆಗಾಲಿಕ್ಕಿ ಮುಗ್ಗರಿಸುತ್ತಿದ್ದಾಗ
ಕೈಹಿಡಿದು ನಡೆಯ ಕಲಿಸಿದವರು

ಒಡಹುಟ್ಟಿದವರು
ನಾ ಮಳೆಯಲ್ಲಿ ನೆನೆದು ಬಂದಾಗ
ನನ್ನೊದ್ದೆ ಬಟ್ಟೆಯ ಬದಲಿಸಿದವರು

ಒಡಹುಟ್ಟಿದವರು
ನಿದ್ದೆಯಲಿ ಬೆದರಿ ಕನವರಸಿದಾಗ
ಮೈ ತಟ್ಟಿ ಮತ್ತೆ ಮಲಗಿಸಿದವರು

ಒಡಹುಟ್ಟಿದವರು
ಕಾಗದದ ದೋಣಿ ಒದ್ದೆಯಾದಾಗ
ತಮ್ಮ ದೋಣಿಯನೇ ನೀಡಿದವರು

ಒಡಹುಟ್ಟಿದವರು
ಕಣ್ಣಾ ಮುಚ್ಚಾಲೆ ಆಡುತ್ತಿರುವಾಗ
ತಾವಾಗೇ ಸೋತು ನಗಿಸಿದವರು

ಒಡಹುಟ್ಟಿದವರು
ಪಥ್ಯ ಮಾಡಲು ಒಪ್ಪದೇ ಇದ್ದಾಗ
ಮುದ್ದಿನಿಂದ ಶುಶ್ರೂಷೆ ನೀಡಿದವರು

ನಂತರ:

ಒಡಹುಟ್ಟಿದವರು
ನಾನು ನನ್ನ ಕಾಲ ಮೇಲೆ ನಿಂತಾಗ
ಒಳಗೆ ಮತ್ಸರವ ತುಂಬಿಕೊಂಡವರು

ಒಡಹುಟ್ಟಿದವರು
ತಪ್ಪು ಒಪ್ಪುಗಳ ವಿಮರ್ಶೆಗೆ ಹೋದಾಗ
ಸಂಬಂಧವನೇ ಮುರಿದು ಹೋದವರು

ಒಡಹುಟ್ಟಿದವರು
ಕುಡಿತಕ್ಕೆ ಮಾರುಹೋಗದಿರಿಯೆಂದಾಗ
ಅಮಲಿನಲ್ಲೇ ಜರೆದು ನೋಯಿಸಿದವರು

ಒಡಹುಟ್ಟಿದವರು
ನಾ ಒಂಟಿಯೇ ಎಂದು ಗಾಬರಿಯಲ್ಲಿದ್ದಾಗ
ಮುಖವಾಡವ ಧರಿಸಿ ನಾಟಕ ಆಡಿದವರು

ಈಗ:

ಒಡಹುಟ್ಟಿದವರು
ಮೊದಲು ಸಂಬಂಧಗಳ ಸರಿಪಡಿಸಿಯೆಂದಾಗ
ಸಂಬಂಧವ ಮರೆತು ಆಸ್ತಿಯ ಮಾತೆತ್ತಿದವರು

ಒಡಹುಟ್ಟಿದವರು
ಸುಧಾರಣೆಯ ಹಾದಿ ಮುಚ್ಚದಿರಿಯೆಂದಾಗ
ಕುಡುಕರ ಮಾತಿಗೇ ಸೊಪ್ಪು ಹಾಕಿದವರು

ಒಡಹುಟ್ಟಿದವರು
ಇವರಾದರೂ ನನ್ನವರೇ ಎಂದು ನಂಬಿದ್ದಾಗ
ಬೆನ್ನಲ್ಲಿ ಇರಿದೆನ್ನ ಜೀವಂತ ಸಾಯಿಸಿದವರು
*********************


ಅಮ್ಮನ ಮನದ ಒಳಗುಟ್ಟು ಸುಲಭದಲಿ ಅರಿವಾಗದೇಕೆ?

17 ಫೆಬ್ರ 11

 

ಹಗಲಿಡೀ ಶ್ರಮಪಟ್ಟು ದುಡಿದು ಬರುವ ಮಗನನ್ನು ವಿಚಾರಿಸದೇ
ಕಂಠಮಟ್ಟ ಕುಡಿದು ಬರುವ ಮಗನ ನೀವು ವಿಚಾರಿಸುವುದೇಕೆ?

ನಿಮ್ಮ ಸುಖನಿದ್ದೆಗಾಗಿ ಸದಾ ತುಡಿಯುವ ಜೀವಗಳ ಪರಿಗಣಿಸದೇ
ಕುಡಿದು ಜ್ಞಾನಕಳೆದು ಬಿದ್ದವರ ಮೈಹೊದಿಕೆ ಸರಿಪಡಿಸುವುದೇಕೆ?

ನಿಮ್ಮನ್ನು ಹೊತ್ತು ಊರೆಲ್ಲಾ ತಿರುಗಲು ತಯಾರಿರುವವರ ಲಕ್ಷಿಸದೇ
ಕೊಲ್ಲಲು ಕಲ್ಲೆತ್ತಿಕೊಂಡು ಬರುವವರ ಬಗ್ಗೆ ನಿಮಗೆ ಮರುಕವದೇಕೆ?

ನಿಮ್ಮ ಬಳಿ ಇದ್ದು ಸೇವೆಗೈವ ಸೊಸೆಯ ಮೇಲೆ ಅಕ್ಕರೆಯ ತೋರದೇ
ದೂರದೂರಲ್ಲಿರುವ ಮಗಳ ಮೇಲೆ ನಿಮ್ಮ ಮಮತೆಯ ಮಳೆ ಅದೇಕೆ?

ಬಹುಷ: ಇವಕ್ಕೆಲ್ಲಾ ಉತ್ತರ ನಾ ಅರಿತುಕೊಳ್ಳಬೇಕು ನೀವು ನೀಡದೇ
ಅಮ್ಮನ ಮನದ ಒಳಗುಟ್ಟು ಯಾರಿಗೂ ಸುಲಭದಲಿ ಅರಿವಾಗದೇಕೆ?

********************


ಉದಯ ಸೂರ್ಯ ನನಗೆ ನನ್ನಮ್ಮನಂತೆ!

11 ಫೆಬ್ರ 11

ಳಿಯಿಂದ ಬಿಸಿಲಿನೆಡೆಗೆ ನಿಧಾನವಾಗಿ ಸಾಗಿಸುತ್ತಾ,
ಕತ್ತಲೆಯಿಂದ ಬೆಳಕಿನೆಡೆಗೆ ಕೈಹಿಡಿದು ನಡೆಸುವನಂತೆ
ಒಂದೊಂದೇ ಮೆಟ್ಟಿಲನು ನಿಧಾನದಿ ಮೇಲೇರಿಸುತ್ತಾ
ಸಾಗುವ ಉದಯ ಸೂರ್ಯನವನೆನಗೆ ನನ್ನಮ್ಮನಂತೆ
ಒಮ್ಮೆಗೇ ಬಡಿದೆಬ್ಬಿಸದೇ, ತಲೆಯ ಮೇಲೆ ಕೈಸವರುತ್ತಾ
ಮೈದಡವಿ ದಿನಾ ನಿದ್ದೆಯಿಂದ ಎಚ್ಚರಿಸುತ್ತಿದ್ದೆನ್ನಮ್ಮನಂತೆ
ಇರಬೇಕೆನ್ನುವರು ಜೀವನದಲಿ ಎಲ್ಲವೂ ನಿಧಾನದಿ ದಕ್ಕುತ್ತಾ
ಅತೀ ಹೆಚ್ಚು ಅತೀ ಶೀಘ್ರದಲಿ ದಕ್ಕಿದರದು ಉಳಿಯದಂತೆ
ಸೂರ್ಯನ ನಡೆಯೂ ಕೂಡ ಸಾರುವಂತಿಹುದು ವೇದಾಂತ
ಎಷ್ಟೇ ದಕ್ಕಿಸಿಕೊಂಡರೂ ಕತ್ತಲ ಶೂನ್ಯದತ್ತಲೇ ಪಯಣವಂತೆ

********************


ಕಾಲಗರ್ಭದಲಿ ಮರೆಯಾಗುತಿಹುದು ಮತ್ತೊಂದು ವರುಷ!

21 ಡಿಸೆ 10

ಕಾಲಗರ್ಭದಲಿ ಮರೆಯಾಗುತಿಹುದು ಈಗ ಮತ್ತೊಂದು ವರುಷ,
ನೋವು ಇದ್ದಿದ್ದರೂ, ತಂದಿತ್ತು ನಮ್ಮ ಬಾಳಲ್ಲಿ ಬಹಳಷ್ಟು ಹರುಷ;

ಆರ್ಥಿಕ ಹಿಂಜರಿತ ಹೋಗಿ, ತೂಗತೊಡಗಿತು ಸಂತಸದ ತೊಟ್ಟಿಲು,
ವೈದ್ಯೆಯಾಗುತ್ತಿರುವ ಮಗಳು ಏರಿಹಳು ಈಗ ಎರಡನೇ ಮೆಟ್ಟಿಲು;

ಅಲ್ಲಿ ಅಮ್ಮನವರ ಆರೋಗ್ಯ ಏರುಪೇರಿಲ್ಲದೇ ಒಂದೇ ಸಮನಾಗಿದೆ,
ಸದ್ಯಕ್ಕೆ ಮನೆಯಲ್ಲಿ, ಆರೋಗ್ಯ ನೆಮ್ಮದಿ ಮನೆ ಮಾಡಿರುವಂತೆ ಇದೆ;

ನ್ಯಾಯವಾದಿ ತಮ್ಮ, ನೋಟರಿಯಾಗಿ ಮೂಡಿಸಿದ ಈ ಮನದಿ ಹೆಮ್ಮೆ,
ಮಗನಿಲ್ಲದೆನಗೆ ಮಗನಲ್ಲವೇ ಆತ, ಎಂಬ ಭಾವನೆ ನನ್ನಲ್ಲಿ ಒಮ್ಮೊಮ್ಮೆ;

ಹೊಸ ಸಂಬಂಧ ಸೇರಿಕೊಂಡಿಲ್ಲ, ಕಳಚಿಕೊಂಡವು ಒಂದೆರಡು ಸದ್ಯ,
ಸ್ನೇಹಿತರ ಸಂಖ್ಯೆ ಹೆಚ್ಚಾಗಿ, ಅದರಲ್ಲಿ ಆಪ್ತರಾದರು ಹಲವರು ಈ ಮಧ್ಯ;

ಸಮಾಜ ಲಗಾಮಿಲ್ಲದೇ, ದಿನದಿಂದ ದಿನಕ್ಕೆ ಹದಗೆಡುತ್ತಲೇ ಸಾಗುತ್ತಿದೆ,
ಭ್ರಷ್ಟಾಚಾರ ಎನ್ನುವುದೇ ರಾಜಕೀಯಕ್ಕೆ ಪರ್ಯಾಯ ಪದವಾಗಿಬಿಟ್ಟಿದೆ;

ವರುಷದ ಬಹುಪಾಲು ನಮ್ಮ ನಾಡು, ಕಳೆಯಿತು ಅರಾಜಕತೆಯಲ್ಲಿಯೇ,
ಭ್ರಷ್ಟ ರಾಜಕಾರಣಿಗಳಲ್ಲೀಗ, ದುಸ್ತರವಾಗಿದೆ ನಿಷ್ಠಾವಂತರ ಆಯ್ಕೆಯೇ;

ಕಾಂಗ್ರೇಸಿನ ಅವಿವಾಹಿತ ಗೂಳಿ, ದೇಶದುದ್ದಕ್ಕೂ ಧೂಳೆಬ್ಬಿಸಿ ಸೋತಿತು,
ದೇಶೀಯರ ದೂಷಿಸಿ, ತಾನೊಬ್ಬ ವಿದೇಶಿ ಎಂಬುದ ಸಾಬೀತು ಪಡಿಸಿತು;

ದಿಲ್ಲಿಯಲಿ ಆಟ ಆಡಿಸಲು ನಿಂತವರೂ, ಕೋಟಿ ಕೋಟಿ ಕೊಳ್ಳೆ ಹೊಡೆದರು,
ಚೀನಾದಲಿ ಚಿನ್ನದ ಬೇಟೆಯಾಡಿ ಮರಳಿದರು, ಕನ್ನಡನಾಡಿನ ಕುವರಿಯರು;

ಎಲ್ಲರದೂ ಮುಖವಾಡ, ಹೇಳುವುದೊಂದಾದರೆ ಮಾಡುವುದು ಮತ್ತೊಂದು,
ಮಾಧ್ಯಮದವರು ಗುದ್ದಿದರು ಜನರನ್ನು, ದಿನವೂ ನೀಡಿ ಸುದ್ದಿ ಹೊಸತೊಂದು;

ಸತ್ಯಾಸತ್ಯತೆಯ ಬಗ್ಗೆ ತಲೆಕೆಡಿಸಿಕೊಳ್ಳಲು, ಅವಕಾಶವೇ ಇಲ್ಲವಾಗಿದೆ ಇಲ್ಲಿ,
ಒಂದರ ಹಿಂದೆ ಇನ್ನೊಂದು ಸುದ್ದಿ, ಸ್ಫೋಟಗೊಳ್ಳುತ್ತಲೇ ಇರುತ್ತದೀ ನಾಡಲ್ಲಿ;

ನಿತ್ಯಾನಂದ ಸ್ವಾಮಿಯ ಕಾಮಕಾಂಡದ ಮೇಲಿಂದ ಸರಿಯಿತು ಪರದೆ ಮೆಲ್ಲಗೆ,
ಪತ್ನಿ-ಮಿತ್ರನ ಅಕ್ರಮ ಸಂಬಂಧ, ಹಾದಿಯಾಯ್ತು ಅತ್ತ ಕೋಟಿಗಟ್ಟಲೆ ಸುಲಿಗೆಗೆ;

ಕನ್ನಡ ಪತ್ರಿಕೋದ್ಯಮದಲ್ಲಿ, ಸುಂಟರಗಾಳಿಯೇ ಬೀಸಿದಂತಾಯ್ತು ಒಮ್ಮೆಗೇ,
ಓದುಗರಿಗೂ ಬೇಸರವಾಯ್ತು,  ಭಟ್ಟರ ತಂಡ ವಿಕದಿಂದ ತೆರಳಿದಾಗ ಹೊರಗೆ;

ಸುಳ್ಳು ಅಪವಾದಕ್ಕೆ ಗುರಿಯಾದ, ಬೆತ್ತಲೆ ಜಗತ್ತಿನ ಸಿಂಹ ನೋಡ ನೋಡುತ್ತಲೇ,
ನೀತಿಯ ಪಾಠ ಮಾಡುತ್ತಿದ್ದ ರವಿಯ ಕಾಮ ಕಥೆ ಬಯಲಾಗಿ, ಆತನಾದ ಬೆತ್ತಲೆ;

ಹೊಸ ವರುಷ, ಹೊಸ ಹರುಷ ತರಲಿ, ನಮ್ಮೆಲ್ಲರ ಬಾಳಿನಲ್ಲೆಂಬುದೇ ಆಶಯ,
ಭ್ರಷ್ಟರ ದುಷ್ಟರ ಅರಾಜಕತೆ ಮುಗಿದು, ಜನ ಕಾಣುವಂತಾಗಲಿ ನೆಮ್ಮದಿಯ!

*************************************


ಆಕೆ ಅಮ್ಮಳಾಗಿಹಳು!

19 ಆಕ್ಟೋ 10

ನನ್ನ ಕಣ್ಮುಂದೆ ನುಡಿ ನಡೆಯ ಕಲಿತಿದ್ದವಳು,
ಚಿತ್ರ ಬಿಡಿಸಿ ತಂದು ನನಗೆ ಒಪ್ಪಿಸುತ್ತಿದ್ದವಳು,
ನನ್ನಿಂದ ಕೈಹಿಡಿಸಿಕೊಂಡು ಬರೆಯ ಕಲಿತ್ತಿದ್ದವಳು,
ತನ್ನ ನೃತ್ಯಕ್ಕೆ ನನ್ನನ್ನು ಸಾಕ್ಷಿಯಾಗಿಸುತ್ತಿದ್ದವಳು,
ಅಕ್ಕರೆಯಿಂದ ತೊಡೆಗಳನೇರಿ ಕೂರುತ್ತಿದ್ದವಳು,
ನನ್ನೆಲ್ಲಾ ಕತೆಗಳಿಗೆ ಕಿವಿಯಾಗಿ ಆಲಿಸುತ್ತಿದ್ದವಳು,
ಇಂದು ತನ್ನದೇ ಕಂದಮ್ಮನಿಗೆ ತಾಯಿಯಾಗಿ,
ಅಲ್ಲಿ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿಹಳು;

ಅಬ್ಬಬ್ಬಾ ಕಾಲದ ಮಹಿಮೆಯೇ!
ಅಬ್ಬಬ್ಬಾ ಈ ಕಾಲದ ವೇಗವೇ!


ವಾಯುಸೇನೆಯಲ್ಲಿ ನನ್ನ ಜೊತೆಗಿದ್ದ,
ನಮ್ಮ ಆತ್ಮೀಯ ಸ್ನೇಹಿತರಾದ
ನಾಣಯ್ಯ-ಹೇಮಕ್ಕನವರ ಮಗಳು,
ನಮ್ಮ ಪಾಲಿಗೂ ಆಕೆ ಮಗಳೇ ಆಗಿರುವವಳು,
ಕಣ್ಮುಂದೆ ಬೆಳೆದು ಆಯುರ್ವೇದ ವೈದ್ಯೆಯಾಗಿ,
ವರುಷದ ಹಿಂದೆ ಸುಂದರನೋರ್ವನ ಪತ್ನಿಯಾಗಿ,
ಈ ಭಾನುವಾರ ಪುಟ್ಟಮ್ಮನಿಗೆ ಅಮ್ಮನಾಗಿಹಳು;

ನಾನು ನಿಂತಲ್ಲೇ ಇದ್ದೇನೆ,
ಇದ್ದ ಹಾಗೆಯೇ ಇದ್ದೇನೆ,
ಎಂಬುದು ಬರಿಯ ಭ್ರಮೆ ನನ್ನೊಳಗೆ,
ಬದಲಾಗಿದೆ ಕಾಲ,
ಬದಲಾಗಿಹರು ನನ್ನವರು,
ಎನ್ನುವುದಷ್ಟೇ ವಾಸ್ತವದರಿವಿನ ಹಾಗೆ!
******************


ದೂರದಿಂದಾಡುವ ನಾಟಕವೇ ಮೆಚ್ಚು!

26 ಜುಲೈ 10

 
 
 ಆ ಅಮ್ಮ ಎಂಭತ್ತರ ಆಸುಪಾಸಿನ ಮುದಿ ಜೀವ

ಮನದಲ್ಲಿ ತುಂಬಿಕೊಂಡಿರುತ್ತಾರೆ ಸದಾ ನೋವ
 

ಆಕೆಗೆ ಎಲ್ಲಾ ಇದ್ದರೂ ಏನೂ ಇಲ್ಲ ಎಂಬ ಕೊರಗು

ನಿರೀಕ್ಷೆಯಲ್ಲೇ ಕಳೆಯುತ್ತಾರೆ ಆಕೆ ಬೆಳಗು ಬೈಗು

 

ಮನೆಯಲ್ಲಿ ಜೊತೆಗಿರುವ ಮಗ-ಸೊಸೆಯರ ದಿನಚರಿ

ಅವರ ನೌಕರಿಯ ನಡುವೆ ಅಮ್ಮನ ಸೇವೆಯಾ ಪರಿ

 

ಅಲ್ಲಿ ಯಾವುದಕ್ಕೂ ಕೊರತೆಯಿಲ್ಲ ಎಲ್ಲವೂ ಸೂಕ್ತ

ಆದರೆ ಆಕೆಗೆ ಬೇಕು ಮಾತಾಡುವವರು ಅಲ್ಲಿ ಮುಕ್ತ

 

ಊಟ ಔಷಧಿ ಎಲ್ಲದಕ್ಕೂ ಇದೆ ಶಿಸ್ತಿನ ವೇಳಾಪಟ್ಟಿ

ಹಗಲೆಲ್ಲಾ ಕೆಲಸದಾಕೆಯೊಂದಿಗೆ ಮನೆಯಲ್ಲಿ ಒಂಟಿ

 

ಆಗಾಗ ಕರೆಮಾಡಿ ವಿಚಾರಿಸುತ್ತಾರೆ ದೂರದವರು

ಅಪರೂಪಕ್ಕೆ ಬಂದು ಮಾತಾಡಿ ಹೋಗುತ್ತಾರವರು

 

ಆಕೆಯ ಮನಕೆ ಅವರೇ ನೋಡಿ ಇಷ್ಟವಾಗುವವರು

ಈ ಮಗ ಸೊಸೆಯರ ಮನದಿಂದ ದೂರ ಮಾಡಿಹರು

 

ಇಲ್ಲಿ ಇದ್ದು ಕರ್ತವ್ಯ ನಿಭಾಯಿಸುವವರಿಗಿಂತಲೂ ಹೆಚ್ಚು

ಕರೆಮಾಡಿ ವಿಚಾರಿಸುವವರ ಆ ಆತ್ಮೀಯತೆಯೇ ಮೆಚ್ಚು

 

ಏನು ಕೊರತೆಯಾಗಿದೆ ಎಂಬುದೇ ಪ್ರಶ್ನೆ ಈ ಮಗನಿಗೀಗಿಲ್ಲಿ

ಅಮ್ಮನ ಆರೈಕೆಯೇ ಆಗುತ್ತಿಲ್ಲ ಎಂಬ ದೂರು ಅನ್ಯರದು ಅಲ್ಲಿ

 

ಆತ್ಮೀಯತೆ ತೋರುವವರು ಇರುವುದೆಲ್ಲಾ ಬಹಳ ದೂರ

ಏನಾದರೂ ಅಗತ್ಯಕ್ಕೆ ಕರೆದರೆ ಒಬ್ಬನೂ ಸನಿಹ ಬಾರ

 

ಆದರೂ ಆಕೆಗ್ಯಾಕೋ ಅರಿವಾಗುತ್ತಿಲ್ಲ ಅವರ ಆ ನಾಟಕ

ಅವರನ್ನು ಕೊಂಡಾಡುತ್ತಾ ಈತನ ತೆಗಳುವುದು ಬೇಕಾ?

***************************

 


ವರ್ಷಕ್ಕೊಂದೇ ಬಾರಿ ಬರಲೇಕೆ ಅಮ್ಮಂದಿರ ದಿನ?

11 ಮೇ 10

 

 

ವಿಶ್ವ ಅಮ್ಮಂದಿರ ದಿನದಂದು ನಾನು

ಅಮ್ಮನವರಿಗೆ ಕರೆಮಾಡಿದ್ದೆ ಎಂದಿನಂತೆ

 

ಅವರದ್ದು “ಯಾವಾಗ ಬರ್ತೀಯಾ?”

ಎನ್ನುವ ಅದೇ ಪ್ರಶ್ನೆ ಮಾಮೂಲಿನಂತೆ

 

ಎಲ್ಲಾ ಮಾತ ಮುಗಿಸಿದರೂ ನನ್ನಿಂದ

“ಇಂದು ನಿಮ್ಮ ದಿನ” ಎಂದು ಹೇಳಲಾಗಲಿಲ್ಲ

 

ನನ್ನ ದಿನಗಳೆಲ್ಲಾ ಆ ಅಮ್ಮನ ದಿನಗಳೇ

ಅನ್ನುವ ಭಾವನೆಯಿಂದ ಹೊರಬರಲಾಗಲಿಲ್ಲ

 

ವರ್ಷಕ್ಕೊಂದೇ ಬಾರಿ ಬರಲೇಕೆ ಹೇಳಿ

ನಮಗೆ ಜನ್ಮ ನೀಡಿರುವ ಅಮ್ಮಂದಿರ ದಿನ

 

ನಮ್ಮ ಅಮ್ಮಂದಿರ ಕೊಡುಗೆಯಲ್ಲದೆ ಬೇರೆ

ಇನ್ನೇನು ನಮ್ಮೀ ಬಾಳಿನ ಪ್ರತಿಯೊಂದು ದಿನ?

*****