ಸೊಸೈಟಿ ಅಕ್ಕಿ!

17 ಜೂನ್ 12

ಅಪ್ಪಯ್ಯ ಹೇಳಿದ್ದ ಕತೆ- ೦೧

ಒಂದು ಹಳ್ಳಿ. ಅಲ್ಲಿನ ಓರ್ವ ಗೃಹಸ್ಥರ ಮನೆಗೆ ರಾತ್ರಿ ಹೊತ್ತು ಓರ್ವ ಸಾಧು ಭೇಟಿ ನೀಡುತ್ತಾರೆ. ಪಾದಚಾರಿಯಾಗಿ ಒಂದೂರಿನಿಂದ ಇನ್ನೊಂದೂರಿಗೆ ಸಾಗುತ್ತಿದ್ದ ಅವರು ಆ ರಾತ್ರಿಯನ್ನು ಆ ಮನೆಯಲ್ಲಿ ಕಳೆಯುವ ಇಚ್ಛೆ ವ್ಯಕ್ತಪಡಿಸುತ್ತಾರೆ. ಅದಕ್ಕೆ ಒಪ್ಪಿದ ಗೃಹಸ್ಥರು, ಅವರಿಗೆ ಊಟದ ಹಾಗೂ ಮಲಗುವ ವ್ಯವಸ್ಥೆ ಮಾಡಿಕೊಡುತ್ತಾರೆ. ಮುಂಜಾನೆ ಸಾಧುಗಳಿಗೆ ಸ್ನಾನ ಮಾಡಲು ಬಿಸಿ ನೀರು ತುಂಬಿದ ಬಾಲ್ದಿ ಹಾಗೂ ಒಂದು ಕಂಚಿನ ತಂಬಿಗೆ ನೀಡುತ್ತಾರೆ. ಆ ಸಾಧು ಸ್ನಾನ ಮುಗಿಸಿ ಬಂದು, ಚಹಾ ಸೇವನೆ ಮಾಡಿ, ಆ ಗೃಹಸ್ಥರಿಗೆ ಮತ್ತವರ ಮನೆಯವರಿಗೆಲ್ಲಾ ಕೃತಜ್ಞತೆಗಳನ್ನು ತಿಳಿಸಿ, ಮುಂದಿನ ಊರಿಗೆ ಪಯಣ ಬೆಳೆಸುತ್ತಾರೆ. 

ಅರ್ಧ – ಒಂದು ಘಂಟೆಯ ನಂತರ ಆ ಸಾಧು ಮರಳಿ ಆ ಗೃಹಸ್ಥರ ಮನೆಯ ಬಾಗಿಲಲ್ಲಿ ನಿಂತು ಆ ಗೃಹಸ್ಥರನ್ನು ಕರೆಯುತ್ತಿರುತ್ತಾರೆ. ಗೃಹಸ್ಥರು ಓಡೋಡಿ ಬಂದು, “ಏನಾಯ್ತು ಸ್ವಾಮಿಗಳೇ, ನಮ್ಮಿಂದ ಏನಾದರೂ ಅನಾಚಾರ ಆಯ್ತೇ?” ಎಂದು ಕೇಳಿದರು. ಅದಕ್ಕೆ ಆ ಸಾಧು “ಏನಿಲ್ಲ, ತಾವು ನೀಡಿದ್ದ ಕಂಚಿನ ತಂಬಿಗೆಯನ್ನು, ನಾನು ನನಗರಿವಿಲ್ಲದಂತೆಯೇ ನನ್ನ ಜೋಳಿಗೆಯಲ್ಲಿ ಇರಿಸಿಕೊಂಡು ತೆರಳಿದ್ದೆ, ಅಲ್ಲೆಲ್ಲೋ ನದೀ ತೀರದಲ್ಲಿ, ಮಲವಿಸರ್ಜನೆ ಮುಗಿಸಿದ ನನಗೆ ಥಟ್ಟನೇ ಅರಿವಾಯ್ತು. ಹಾಗಾಗಿ ಅದನ್ನು ತಮಗೆ ಒಪ್ಪಿಸಲು ಮರಳಿ ಬಂದೆ”. ಅಂದರು. ಆ ಗೃಹಸ್ಥರು “ಪರವಾಗಿಲ್ಲ ಬಿಡಿ ಅದರಲ್ಲೇನಂತೆ” ಎಂದು ಮರುನುಡಿದರು. 

ಆಗ ಆ ಸಾಧು “ತಾವು ಅನ್ನಕ್ಕೆ ಬಳಸಿದ ಅಕ್ಕಿ ಎಲ್ಲಿಯದು. ಯಾರ ಸಂಪಾದನೆ ಹೇಳ್ತೀರಾ?” ಎಂದು ಕೇಳಿದಾಗ, ತಬ್ಬಿಬ್ಬಾದ ಆ ಗೃಹಸ್ಥ “ನನ್ನ ಹಿರಿಯ ಮಗ ಇಲ್ಲೇ ಪಟ್ಟಣದಲ್ಲಿ ಸೊಸೈಟಿಯಲ್ಲಿ ಕೆಲಸ ಮಾಡುತ್ತಾನೆ. ಅಕ್ಕಿ ಗೋಧಿ ಸಕ್ಕರೆ ಎಲ್ಲಾ ಆತನೇ ತರುವುದು ನಮ್ಮ ಮನೆಗೆ” ಅಂದರು. “ಹೂಂ.. ಯಜಮಾನರೇ ಅದಕ್ಕೇ ನೋಡಿ, ಲೆಕ್ಕ ತಪ್ಪಿಸಿ ತಂದಿರುವ ಅಕ್ಕಿಯಿಂದ ತಯಾರಿಸಿದ ಭೋಜನ ಸ್ವೀಕರಿಸಿದ ನನಗೂ ಕಳ್ಳಬುದ್ಧಿ ಬಂದು ಬಿಡ್ತು, ತಮ್ಮ ತಂಬಿಗೆಯನ್ನೇ ಕೊಂಡೊಯ್ದಿದ್ದೆ, ಮಲ ವಿಸರ್ಜನೆಯಾದ ಮೇಲೆ ತಪ್ಪಿನ ಅರಿವಾಯ್ತು” ಅಂದರು. 

ಅಗ ಆ ಗೃಹಸ್ಥರಿಗೆ ತಮ್ಮ ತಪ್ಪಿನ ಅರಿವಾಯ್ತು. ಆ ಸಾಧುಗಳ ಕ್ಷಮೆ ಕೋರಿ, ಇನ್ನೆಂದೂ ಅಂತಹ ಅಕ್ರಮಕ್ಕೆ ಬೆಂಬಲ ಕೊಡುವುದಿಲ್ಲ. ನನ್ನ ಮಗನಿಗೆ ಇಂದೇ ಬುದ್ಧಿ ಹೇಳುತ್ತೇನೆ” ಎಂದು ಪಶ್ಚಾತ್ತಾಪ ಪಟ್ಟರು.

*****