ನದಿಯಂತೆ ಬಾಳು!

08 ಜನ 16

ಸಖೀ,
ನದಿಯ ಹಾಗೆಯೇ ಇದೆ ನಮ್ಮೀ ಬಾಳು
ಆತನನು ಸೇರುವವರೆಗೂ ದಿನಾ ಗೋಳು,

ಹತ್ತಾರೂರು ಗುಡ್ಡ ಕಣಿವೆಗಳನು ಸುತ್ತಾಡಿ
ಆತನನೇ ಸೇರುವುದೀ ದೇಹಾತ್ಮದ ಜೋಡಿ;

ದೇಹವ ತೊರೆದಾತ್ಮ ಪರಮಾತ್ಮನಲಿ ಲೀನ,
ಮಣ್ಣಿನ ಈ ದೇಹ ಮತ್ತೆ ಮಣ್ಣಲ್ಲೇ ವಿಲೀನ;

ಹುಟ್ಟು ಸಾವಿನ ನಡುವೆ ಬರಿಯ ಹಾರಾಟ
ಫಲವ ತಿನ್ನಲಾಗದಿದ್ದರೂ ಸದಾ ಹೋರಾಟ!

‪#‎ಆಸುಮನ‬

Advertisements

ಸೆಲ್ಫೀ!

08 ಜನ 16

ಸಖೀ,
ಸದಾ ನಿನ್ನನ್ನೇ ಹಿಂಬಾಲಿಸುತ್ತಿರುವ ನನಗೆ
ನನ್ನ ಗೋಜೂ ಇರುವುದಿಲ್ಲ ಒಮ್ಮೊಮ್ಮೆ,

ನನ್ನತ್ತ ನಾನೇ ಗಮನಹರಿಸಿಕೊಳ್ಳಲೆಂದೇ
“ಸೆಲ್ಫೀ”ಯ ಮೊರೆಹೋಗುವೆ ಕೆಲವೊಮ್ಮೆ!

‪#‎ಆಸುಮನ‬


ಹುತಾತ್ಮರಾಗಲು!

08 ಜನ 16

ಸಖೀ,
ದೇಶಕ್ಕಾಗಿ ಬಲಿಯಾಗುವುದಕ್ಕೂ ಅದೃಷ್ಟವಿರಬೇಕು,
ಅದನ್ನು ನಾವು ಮೊದಲೇ ಬರೆಸಿಕೊಂಡೇ ಬಂದಿರಬೇಕು,

ಬಲಿಯಾದವರನ್ನಷ್ಟೇ ಕೊಂಚಕಾಲ ಸುದ್ದಿಯಾಗಿಸುತ್ತಾರೆ,
ನಾಡಿನ ಉದ್ದಗಲಕ್ಕೂ ಜನರೆಲ್ಲರೂ ಕೊಂಡಾಡುತ್ತಿರುತ್ತಾರೆ,

ಬಲಿಯಾಗದೇ ಉಳಿದವರನ್ನು ಇಲ್ಲೆಲ್ಲರೂ ನಿರ್ಲಕ್ಷಿಸುತ್ತಾರೆ,
ಅವರನ್ನು ಪಿಂಚಣಿಗಾಗಿ ವರುಷಗಟ್ಟಳೆ ಧರಣಿ ಕೂರಿಸುತ್ತಾರೆ!

‪#‎ಆಸುಮನ‬


ನಾ ಹುಡುಗ ಸಾಗರವಲ್ಲ!

03 ಜನ 16
ಸಖೀ,
ನೂರಾರು ನದಿಗಳ ಸಂಗಮ ಅನ್ನುವರಲ್ಲಾ
ಅದಕೇ ಅಂದೆ ನಾನು ಹುಡುಗ ಸಾಗರವಲ್ಲ
 
ನದಿಯಂತೆ ಹರಿವ ನನಗೆ ನಿನ್ನದಷ್ಟೇ ಗಮ್ಯ
ಅನುಮಾನಿಸದು ನಿನ್ನ ಮನ, ಬಾಳು ರಮ್ಯ;
 
ನಿನ್ನನ್ನು ಯಾರೆಷ್ಟೇ ಇಷ್ಟಪಟ್ಟರೂ ಚಿಂತೆ ಇಲ್ಲ
ನಾನು ನಿನ್ನಲ್ಲಿ ಒಂದಾದರೆ ಅದಷ್ಟೇ ಸಾಕಲ್ಲಾ
 
ನನ್ನ ಪ್ರೀತಿ ಭಗವಂತನ ಮೇಲಿನ ಭಕ್ತಿಯಂತೆ
ಭಕ್ತರು ನೂರಾರು ನನಗೋರ್ವನೇ ದೇವರಂತೆ
 
ನೀನು ನನಗಾಗಿ ಕಾದೆಯೋ ಇಲ್ಲವೋ ಬೇಕಿಲ್ಲ
ನಾನು ನಿನಗಾಗಿ ಬರುವೆ ಸುತ್ತಿ ಈ ಜಗವೆಲ್ಲಾ!
 
#ಆಸುಮನ
 

 


ನದಿಯಾಗುವಾಸೆ!

03 ಜನ 16

ಸಖೀ,
ಕವಿಗಳು ಹೆಣ್ಣನ್ನು ನದಿಗೆ ಹೋಲಿಸಿದರು
ಮತ್ತೀ ಗಂಡನ್ನು ವಿಶಾಲ ಸಾಗರವೆಂದರು,

ನನಗಾದರೋ ನಿಂತಲ್ಲೇ ನಿಂತಿರುವ ಆ
ಸಾಗರಕ್ಕಿಂತ ಓಡುವ ನದಿಯಾಗುವಾಸೆ,

ನೀ ಸಾಗರವಾದರೆ, ನಾನು ಊರೂರು
ಅಲೆದು ಓಡೋಡಿ ನಿನ್ನನ್ನು ಸೇರುವಾಸೆ,

ಆ ಸೆಳೆತದಲಿ ತವಕದಲಿ ಇರುವ ಮುದ
ಕಾಯುತ್ತಿರುವುದರಲ್ಲಿ ಎಲ್ಲಿದೆ ಕೂಸೇ?

#ಆಸುಮನ


ಸಹಾನುಭೂತಿ ಇಲ್ಲ!

02 ಜನ 16

ಸಖೀ,
ನೋವುಂಡವರ ಬಗ್ಗೆ ಬರೆದೂ ಬರೆದೂ ತಿಂದದ್ದದೆಷ್ಟೋ,
ಅದರಲ್ಲಿ ನೊವುಂಡವರಿಗೆ ಆಗಿರುವ ಲಾಭವಾದರದೆಷ್ಟೋ;

ಬರಿ ಅನುಕಂಪದ ಮಾತುಗಳನಾಡಿ ಮೆಚ್ಚುಗೆ ಗಳಿಸುವಾಟ,
ಸಹಾನುಭೂತಿ ಕಿಂಚಿತ್ತೂ ಇಲ್ಲ ಬರಿ ಸ್ವಾರ್ಥದ ಮೋಸದಾಟ;

ಅಲ್ಲಾರೋ ಶಾಂತಿಯ ಪತಾಕೆ ಹಾರಿಸಿದರೂ ಹೊಟ್ಟೆಉರಿ,
ಸಮಾಜದ ಧೃವೀಕರಣಕ್ಕೆ ಪಣತೊಟ್ಟಿದ್ದಾರೆ ಇದನ್ನು ಅರಿ!

#ಆಸುಮನ


ಗಮನ ಇರುವುದಿಲ್ಲ!

02 ಜನ 16

ಸಖೀ,
ನೀನು ನನ್ನ ಕಣ್ಣಿದಿರು ಇರುವ ತನಕ
ನನಗೆ ಬೇರೆ ಯಾವುದರ ಬಗ್ಗೆಯೂ
ಗಮನ ಇರುವುದಿಲ್ಲ,

ನೀನು ಮರೆಯಾದಾಗ ನನಗೆ ನಿನ್ನದೇ
ಹುಡುಕಾಟ, ಇನ್ನಾವುದರ ಬಗ್ಗೆಯೂ
ಗಮನ ಇರುವುದಿಲ್ಲ!

‪#‎ಆಸುಮನ‬