ಕಡ್ಡಾಯ ಮತದಾನವೇ ಪರಿಹಾರವಲ್ಲ!

27 ಆಕ್ಟೋ 10

 

ಇಂದಿನ ಈ ಭ್ರಷ್ಟ ರಾಜಕೀಯ ವ್ಯವಸ್ಥೆಯಲ್ಲಿ ಏನಾದರೂ ಸುಧಾರಣೆ ಆಗಬೇಕಾದರೆ ಕಡ್ಡಾಯ ಮತದಾನದ ಕಾನೂನು ಜಾರಿಯಾಗಬೇಕು ಎಂಬ ಮಾತುಗಳು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಕೇಳಿಬರುತ್ತಿವೆ. ಆದರೆ, ಕಡ್ಡಾಯ ಮತದಾನದಿಂದ, ಈ  ಕುಲಗೆಟ್ಟ ರಾಜಕೀಯ ವ್ಯವಸ್ಥೆಯಲ್ಲಿ ಕಿಂಚಿತ್ತಾದರೂ ಬದಲಾವಣೆ ಆದೀತೆನ್ನುವುದು ಕನಸಿನ ಮಾತು. ವಿದ್ಯಾವಂತರು ಮತನೀಡದೇ ಉಳಿಯುವುದರಿಂದ, ಯೋಗ್ಯ ಅಭ್ಯರ್ಥಿಗಳು ಚುನಾವಣೆಯಲ್ಲಿ ಸೋತು, ಅಯೋಗ್ಯರು ಗೆದ್ದುಬಂದಿದ್ದಾರೆನ್ನುವುದು ಸತ್ಯಕ್ಕೆ ದೂರವಾದ ಮಾತು.

ಅದು, ಸದ್ಯಕ್ಕೆ ನಮ್ಮ ಮುಂದಿರುವ ಸಮಸ್ಯೆಯೇ ಅಲ್ಲ. ಮುಖ್ಯ ಸಮಸ್ಯೆಯೆಂದರೆ, ಯೋಗ್ಯ ಅಭ್ಯರ್ಥಿಗಳೇ ರಾಜಕೀಯ ಕಣಕ್ಕೇ ಧುಮುಕುತ್ತಿಲ್ಲ ಎನ್ನುವುದು. ಪಕ್ಷಭೇದವಿಲ್ಲದೇ ಎಲ್ಲಾ ಪಕ್ಷಗಳಿಂದಲೂ ಚುನಾವಣಾ ಕಣಕ್ಕೆ ಇಳಿಸಲ್ಪಡುತ್ತಿರುವ ಅಭ್ಯರ್ಥಿಗಳು ಒಂದೋ ರಟ್ಟೆ ಬಲವುಳ್ಳವರು ಅಥವಾ ಹಣಬಲವುಳ್ಳವರು. ಅಭ್ಯರ್ಥಿಗಳ ಆಯ್ಕೆಯಲ್ಲಿ ಯಾವುದೇ ಕನಿಷ್ಠ ಅರ್ಹತೆ ಅಥವಾ ಯೋಗ್ಯತೆಯ ಪರಿಗಣನೆ ಇರುವುದೇ ಇಲ್ಲ. ಯಾವನೇ ಅಭ್ಯರ್ಥಿ ಆಯಾ ಕ್ಷೇತ್ರದಲ್ಲಿ ಗೆಲ್ಲುವ ಕುದುರೆಯಾಗಿರಬೇಕು. ಅಲ್ಲದೇ ಗೆಲ್ಲುವುದಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡುವವನಾಗಿರಬೇಕು. ಅಂಥ ಅಭ್ಯರ್ಥಿಗಳು ಪೈಪೋಟಿಗೆ ನಿಂತವರಂತೆ ತಮ್ಮಿಂದಾದಷ್ಟು ಹಣ ಖರ್ಚು ಮಾಡಿ ಚುನಾವಣೆಯಲ್ಲಿ ಗೆದ್ದು ಬರುತ್ತಿದ್ದಾರೆ. ಗೆದ್ದು ಬಂದನಂತರ ತಾನು ಖರ್ಚು ಮಾಡಿದ ಹಣದ ಹತ್ತರಷ್ಟು ಸಂಪಾದನೆ ಮಾಡುವುದೊಂದೇ ಆತನ ಮೂಲ ಉದ್ದೇಶವಾಗಿರುತ್ತದೆ. ಅದು ನ್ಯಾಯವೇ ಆಗಿದೆ. ಯಾವೊಬ್ಬನೂ ತಾನು ಖರ್ಚುಮಾಡಿದ್ದನ್ನು ವಾಪಾಸು ಗಳಿಸುವ ಪ್ರಯತ್ನ ಮಾಡದೇ ಉಳಿದರೆ ದಡ್ದನೆನಿಸಿಕೊಳ್ಳುತ್ತಾನೆ. ವಿದ್ಯಾವಂತ ಮತದಾರನ ಮಂದೆ ಹೆಚ್ಚಿನ ಆಯ್ಕೆಗಳೇ ಇಲ್ಲ. ಆತನ ಪಾಲಿಗೆ ಎಲ್ಲರ ಮುಖಗಳೂ ಒಂದೇ ತೆರನಾಗಿರುತ್ತವೆ. ಎಲ್ಲಾ ಪಕ್ಷಗಳೂ ಒಂದೇ ಆಗಿರುತ್ತವೆ. ಆತ ಯಾರಿಗೆ ಮತ ನೀಡಿದರೂ ಆತನ ಜೀವನ ಶೈಲಿಯಲ್ಲಿ ಹೆಚ್ಚಿನ ಬದಲಾವಣೆಯ ನಿರೀಕ್ಷೆಯೇ ಇರುವುದಿಲ್ಲ. ಇನ್ನು ಅವಿದ್ಯಾವಂತ ಮತದಾರರ ಪಾಲಿಗೂ ಆಯ್ಕೆಗಳಿಲ್ಲ. ಅವರ ಪಾಲಿಗೆ ಇರುವುದು ತಮ್ಮ ಕೈಗೆ ಸಿಕ್ಕಿದ ನೋಟಿನ ಮತ್ತು ಆ ನೋಟು ನೀಡಿದವರ ಗುರುತು ಮಾತ್ರ. ಪಕ್ಷ ಮತ್ತು ಅಭ್ಯರ್ಥಿ ಇವೆಲ್ಲ್ಲಾ ಅವರ ಪಾಲಿಗೆ ಗೌಣ.

ಹಾಗಾದರೆ ಇಂದಿನ ಆವಶ್ಯಕತೆ ಏನು? 

ನಮ್ಮ ನಾಡಿನಲ್ಲಿ ಮಾಮೂಲಿ ಜವಾನನಿಂದ ಮತ್ತು ಸೈನಿಕನಿಂದ ಹಿಡಿದು, ಯಾವುದೇ ಉನ್ನತ ದರ್ಜೆಯ ಕೆಲಸಕ್ಕೆ ಸೇರಬೇಕಾದರೂ ಕನಿಷ್ಟ ವಿದ್ಯಾರ್ಹತೆಯ ಅಗತ್ಯ ಇದೆ. ಹಾಗಾಗಿ ಯಾವುದೇ ಚುನಾವಣೆಯಲ್ಲಿ  ಅಭ್ಯರ್ಥಿಯಾಗಲೂ ಕನಿಷ್ಠ ವಿದ್ಯಾರ್ಹತೆ ನಿರ್ಧರಿತವಾಗಬೇಕು. ಅಂತೆಯೇ ನಿವೃತ್ತಿಗೂ ವಯಸ್ಸು ನಿರ್ಧರಿತವಾಗಬೇಕು. ಹತ್ತಾರು ಪಕ್ಷಗಳ ಪ್ರಸ್ತುತ ಪದ್ಧತಿಗಿಂತ ದ್ವಿಪಕ್ಷ ಪದ್ಧತಿ ಜಾರಿಯಾಗಬೇಕು. “ಒಂದೋ ಇಲ್ಲಿರು. ಇಲ್ಲಾ ಅಲ್ಲಿರು. ಎರಡೂ ಇಲ್ಲಾಂದ್ರೆ ತೆಪ್ಪಗೆ ತನ್ನ ಮನೆಯಲ್ಲಿರು”, ಅನ್ನುವ ಪದ್ಧತಿ ಬರಬೇಕು . ಚುನಾವಣೆಯಲ್ಲಿ ಒಂದು ಪಕ್ಷದಿಂದ ಸ್ಪರ್ಧಿಸಿದ ಅಭ್ಯರ್ಥಿ, ಕನಿಷ್ಟ ಮುಂದಿನ ಮಹಾ ಚುನಾವಣೆಯ ತನಕ ಅದೇ ಪಕ್ಷದ ಸದಸ್ಯನಾಗಿರಬೇಕು. ಆರಿಸಿ ಹೋದ ಅಭ್ಯರ್ಥಿ ತನ್ನ ಕ್ಷೇತ್ರದ ಜನರ ಎಲ್ಲಾ ಸಮಸ್ಯೆಗಳಿಗೆ ಉತ್ತರ ನೀಡುವವನಾಗಿರಬೇಕು. ತನ್ನ ಕ್ಷೇತ್ರ ಮತ್ತು ಪಕ್ಷಕ್ಕೆ ನಿಷ್ಠಾವಂತನಾಗಿರಬೇಕು. ಮುಂದಿನ ಮಹಾಚುನಾವಣೆಯ ತನಕ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬಾರದು. ಹಾಗೊಮ್ಮೆ ನೀಡಿದರೆ ಮುಂದಿನ ಮೂರು ಮಹಾಚುನಾವಣೆಯಲ್ಲಿ ಸ್ಪರ್ಧಿಸುವ ಅರ್ಹತೆ ಕಳೆದುಕೊಳ್ಳಬೇಕು. ಇನ್ನೊಂದು ಪ್ರಮುಖವಾದ ಆವಶ್ಯಕತೆ ಏನೆಂದರೆ ಯಾವುದೇ  ಚುನಾವಣೆಗಳಲ್ಲಿ, ಯಾರಿಗೂ ಮತನೀಡದೇ ಎಲ್ಲಾ ಅಭ್ಯರ್ಥಿಗಳನ್ನು ತಿರಸ್ಕರಿಸುವ ಸೌಲಭ್ಯವನ್ನು ಮತದಾರನಿಗೆ ಒದಗಿಸಿರಬೇಕು. ಹಾಗೆ ತನ್ನ ಕ್ಷೇತ್ರದ ಮತದಾರರಿಂದ ತಿರಸ್ಕೃತರಾದ ಅಭ್ಯರ್ಥಿಗಳು ಮುಂದಿನ ಮೂರು ಮಹಾ ಚುನಾವಣೆಗಳಲ್ಲಿ ಸ್ಪರ್ಧಿಸುವ ಅರ್ಹತೆ ಕಳೆದುಕೊಳ್ಳಬೇಕು. ಓರ್ವ ಸದಸ್ಯ ಹಠಾತ್ ನಿಧನಾರಾದಾಗ ಅಥವಾ ಅನಾರೋಗ್ಯಪೀಡಿತನಾಗಿ ರಾಜಕೀಯ ನಿವೃತ್ತನಾದಾಗ, ಆತನ ಸಂಬಂಧಿಕರಿಗೆ ಅವಕಾಶವನ್ನು ಕಲ್ಪಿಸುವಾಗಲೂ ಅರ್ಹತೆಯ ಮಾನದಂಡವನ್ನು ಉಪಯೋಗಿಸಿರಲೇಬೇಕು. ಚುನಾವಣೆಯಲ್ಲಿ ಗೆದ್ದ ಎಲ್ಲಾ ಅಭ್ಯರ್ಥಿಗಳು ತಮ್ಮ ಆಸ್ತಿಪಾಸ್ತಿಗಳ ವಿವರವನ್ನು ಪ್ರತಿ ವರ್ಷ ಆಯಾ ಕ್ಶೇತ್ರದ ಮತದಾರರ ಮುಂದೆ, ಸೂಕ್ತ ದಾಖಲೆಗಳ ಸಮೇತ  ಬಹಿರಂಗಪಡಿಸಬೇಕು.

ಈ ಎಲ್ಲಾ ವ್ಯವಸ್ಥೆ ಜಾರಿಯಾದ ನಂತರ ಕಡ್ಡಾಯ ಮತದಾನದ ಕಾನೂನು ಕೂಡ ಜಾರಿಯಾಗಬೇಕು. ಮತದಾನ ಮಾಡದವರಿಗೆ ಶಿಕ್ಷೆ ವಿಧಿಸಬೇಕು. ಆಗಲಷ್ಟೇ, ಮತದಾನ ಮಾಡದ ವಿದ್ಯಾವಂತ ಮತದಾರರನ್ನು ಸಾರಸಗಟಾಗಿ ಎಲ್ಲರೂ ದೂರಬಹುದು. ಎಲ್ಲಿಯ ತನಕ ಈ ಭ್ರಷ್ಟ ರಾಜಕೀಯ ವ್ಯವಸ್ಥೆ ಹೀಗೆಯೇ ಮುಂದುವರಿಯುತ್ತದೆಯೋ, ಅಲ್ಲಿಯತನಕ, ಮತದಾನ ಮಾಡದ ವಿದ್ಯಾವಂತ ಮತದಾರರನ್ನು ಸುಖಾಸುಮ್ಮನೇ ದೂರಿ ಏನೂ ಪ್ರಯೋಜನವಿರದು.

*****

ಈ ಬರಹ ಉದಯವಾಣಿಯ ಮಣಿಪಾಲ, ಹುಬ್ಬಳ್ಳಿ ಮತ್ತು ಮುಂಬಯಿ ಆವೃತ್ತಿಗಳಲ್ಲಿ,

ಬುಧವಾರ, ೨೭ ಅಕ್ಟೋಬರ್ ೨೦೧೦ ರಂದು ಪ್ರಕಟಗೊಂಡಿರುತ್ತದೆ.


ನಲವತ್ತೊಂಬತ್ತರಲ್ಲಿ ವಿಶೇಷವೆನಿಸಿದ ಆ ಮೂರು ದಿನಗಳು!

20 ಜುಲೈ 10

 

ಭಾರತೀಯ ವಾಯುಸೇನೆಯ ಸೇವೆಯಲ್ಲಿದ್ದ ದಿನಗಳವು. ಆಗ ಹರ್ಯಾಣಾದ ಅಂಬಾಲಾ ಎನ್ನುವ ಊರಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ನನ್ನ ಪತ್ನಿಯೊಂದಿಗೆ ವಾಸವಾಗಿದ್ದೆ.
 
ಒಂದು ಮುಂಜಾನೆ ಗಾಢ ನಿದ್ದೆಯಲ್ಲಿದ್ದ ನನಗೆ, ಬಾಗಿಲು ಬಡಿದ ಸದ್ದಿನಿಂದಾಗಿ ಎಚ್ಚರವಾಯ್ತು. ಸಮಯ ನೋಡಿದರೆ ಮುಂಜಾವಿನ ಐದು ಘಂಟೆ.
 
ಆ ಅನಿರೀಕ್ಷಿತವಾದ ಬಾಗಿಲ ತಟ್ಟುವಿಕೆಯಿಂದ ಭಯ, ಆಶ್ಚರ್ಯ ಎರಡೂ ಆಯ್ತು.
 
ಬಾಗಿಲು ತೆರೆದು ನೋಡಿದರೆ ಕೈಯಲ್ಲಿ ಬಿಸಿ ಬಿಸಿ “ಕೇಕ್” ಒಂದನ್ನು ಹಿಡಿದು ಹೇಮಕ್ಕ ನಿಂತಿದ್ದಾರೆ.
ಜೊತೆಗೇ “ಹ್ಯಾಪಿ ಬರ್ತ್‍ಡೇ ಟು ಯೂ…ಸುರೇಶಣ್ಣಾ…” ಎನ್ನುವ ಹಾರೈಕೆ.
 
ಅಂದು ೧೬ ಜುಲಾಯಿ ೧೯೯೦. ನನ್ನ ೨೯ ನೇ ಜನ್ಮದಿನ. ಬಹುಶಃ ನನ್ನ ಜೀವನದಲ್ಲಿ ತೀರ ಭಿನ್ನವಾಗಿ ಆಚರಿಸಲ್ಪಟ್ಟ ಮೊದಲ ಜನ್ಮದಿನ ಅದು. ಅಂದು ನಾನು ಅನುಭವಿಸಿದ ಆನಂದ ಬಣ್ಣಿಸಲಾಗದ್ದು.
 
ಆ ಹೇಮಕ್ಕ ಯಾರು ಅಂತೀರಾ? ವಾಯುಸೇನೆಯಲ್ಲಿ ನನ್ನ ಸಹೋದ್ಯೋಗಿಯಾಗಿದ್ದ ಮಂಗಳೂರಿನವರಾದ ಶ್ರೀಯುತ ಡಿ.ಸಿ. ನಾಣಯ್ಯನವರ ಧರ್ಮಪತ್ನಿ. ಅವರು ನಾವು ವಾಸವಾಗಿದ್ದ ಬಾಡಿಗೆ ಮನೆಯ, ಎದುರುಗಡೆ ಮನೆಯಲ್ಲಿ ವಾಸಿಸುತ್ತಿದ್ದರು.
 
ಮುಂಜಾನೆ ನಾಲ್ಕು ಘಂಟೆಗೆಲ್ಲಾ ಎದ್ದು, ಪತಿ ಪತ್ನಿಯರು ಸೇರಿ ತಯಾರಿಸಿದ್ದ ಕೇಕ್‍ನ ಸವಿಗಿಂತ ಅದರಲ್ಲಿ ಅಡಗಿದ್ದ ಅವರೀರ್ವರ ಪ್ರೀತಿ, ಅಭಿಮಾನ, ಆತ್ಮೀಯತೆಯೇ ಅಧಿಕವಾಗಿತ್ತು. ಸದ್ಯ ಉಡುಪಿಯಲ್ಲಿ ನೆಲೆಸಿರುವ ಅವರ ಮತ್ತು ನನ್ನ ನಡುವಣ ಸ್ನೇಹ, ಇಪ್ಪತ್ತು ವರುಷಗಳ ನಂತರವೂ, ಹಾಗೆಯೇ ಇದೆ.
 
* * * * *
 
ಸರಿಯಾಗಿ ಒಂಭತ್ತು ವರುಷಗಳ ನಂತರ ಅಂದರೆ ೧೬ ಜುಲಾಯಿ ೧೯೯೯. ಆಗ ನಾನು ಬೆಂಗಳೂರಿನಲ್ಲಿ ವಾಯುಸೇನೆಯ ಸೇವೆಯಲ್ಲಿ ಇದ್ದೆ ಅಲ್ಲದೇ ಸಂತ ಜೋಸೇಫ್ ಸಂಧ್ಯಾ ಕಾಲೇಜಿನಲ್ಲಿ “ಪಿಜಿಡಿಸಿಎ” ಅಭ್ಯಾಸ ನಡೆಸುತ್ತಿದ್ದೆ. ಅಂದು ಕಾಲೇಜಿಗೆ ಹೋಗುವಾಗ ಎರಡು ಕಿಲೋ ಸಿಹಿತಿಂಡಿ ತೆಗೆದುಕೊಂಡು ಹೋಗಿದ್ದೆ. ಅಂದು ನನ್ನ ಜನ್ಮದಿನವೆಂದು ಹೇಳಿ ಸಿಹಿತಿಂಡಿ ಹಂಚಿ ಎಲ್ಲರಿಗೂ ಅಶ್ಚರ್ಯಪಡಿಸೋಣ ಎನ್ನುವ ಉದ್ದೇಶ ನನ್ನದಾಗಿತ್ತು.
 
ಆದರೆ ಅಲ್ಲಿ ಆಶ್ಚರ್ಯಪಡುವ ಸರದಿ ನನ್ನದಾಗಿತ್ತು.  ತರಗತಿಯಲ್ಲಿದ್ದ ಅಷ್ಟೂ ಮಂದಿ ತಮ್ಮ ಹಸ್ತಾಕ್ಷರಗಳನ್ನು ಹಾಕಿದ್ದ, ಒಂದು ಸುಂದರವಾದ ಶುಭಾಶಯ ಪತ್ರವನ್ನು ನನಗಾಗಿ ತಯಾರಾಗಿ ಇಟ್ಟುಕೊಂಡು ಕಾಯುತ್ತಿದ್ದರು. ನಾನು ತರಗತಿಯನ್ನು ಪ್ರವೇಶಿಸುತ್ತಿದ್ದಂತೆಯೇ ಎಲ್ಲರೂ ಒಕ್ಕೊರಲಿನಿಂದ “ಹ್ಯಾಪೀ ಬರ್ತ್ ಡೇ ಟು ಯೂ…” ಎಂದು ಹಾಡ ತೊಡಗಿದರು.
 
ಕಂಪ್ಯೂಟರ್ ತರಬೇತಿ ಕೇಂದ್ರದ ಡೀನ್‍ರಿಂದ ನನ್ನ ಜನ್ಮ ದಿನಾಂಕ ತಿಳಿದು, ಆತನೂ ಸೇರಿಕೊಂಡು, ನಾಗೇಂದ್ರ ಪ್ರಸಾದ್, ಕವಿತಾ, ಮೀನಾ ಡಿಸೋಜಾ, ಸೆಲ್ವಮ್ಮ, ಬಸವರಾಜ್, ಸುಗಂಧಿ, ಸೌರವ್, ಎನ್ನುವ ಹಲವೇ ಮಂದಿ ಸೇರಿ ಯೋಜಿಸಿದ ಕಾರ್ಯವದಾಗಿತ್ತು. ಅಂದೂ ನನಗೆ ಆದ ಸಂತಸ ಅಷ್ಟಿಷ್ಟಲ್ಲ. ಎಲ್ಲರಿಗೂ ಸಿಹಿತಿಂಡಿ ಹಂಚಿ ತುಂಬು ಮನದಿಂದ ಧನ್ಯವಾದಗಳನ್ನು ತಿಳಿಸಿದ್ದೆ.
 
* * * * *
 
ಅಲ್ಲಿಂದ ಸರಿಯಾಗಿ ಹನ್ನೊಂದು ವರುಷಗಳ ನಂತರ, ಅಂದರೆ, ಕಳೆದ ೧೬ ಜುಲಾಯಿ ೨೦೧೦ರಂದು ನನಗೆ ಇನ್ನೊಂದು ಆಶ್ಚರ್ಯ ಕಾದಿತ್ತು. ಆತ್ಮೀಯರಾದ ರಾಘವೇಂದ್ರ ನಾವಡರು, ನಾನು ಕಛೇರಿಯನ್ನು ತಲುಪುವ ಮೊದಲೇ, ಹೊರನಾಡಿನಿಂದ ಕರೆಮಾಡಿ ಶುಭ ಹಾರೈಸಿದ್ದಲ್ಲದೇ, “ಹರೀಶ ಆತ್ರೇಯರು ಸಂಪದದಲ್ಲಿ ತಮ್ಮ ಬಗ್ಗೆ ಸುಂದರವಾದ ಲೇಖನ ಬರೆದು ಶುಭ ಹಾರೈಸಿದ್ದಾರೆ” ಅನ್ನುವ ಸುದ್ದಿಯನ್ನೂ ತಲುಪಿಸಿದ್ದರು. ಕಛೇರಿಗೆ ಬಂದು ಸಿರಿಗನ್ನಡ ಸಂಪದ ತೆರೆದು ನೋಡಿದರೆ ಹರೀಶ ಆತ್ರೇಯರ ಶುಭಾಶಯ ಲೇಖನ ನನ್ನನ್ನು ಮಂತ್ರ ಮುಗ್ಧನನ್ನಾಗಿಸಿಬಿಟ್ಟಿತ್ತು. ಅಷ್ಟೊಂದು ದೀರ್ಘವಾದ ಲೇಖನ, ನನ್ನ ಬಗ್ಗೆ ಅಷ್ಟೊಂದು ವಿಚಾರ ಸಂಗ್ರಹಮಾಡಿಕೊಂಡು, ಬಹುಶಃ ನನ್ನನ್ನು ನನಗಿಂತಲೂ ಚೆನ್ನಾಗಿ ಅರಿತವರಂತೆ ಬರೆದಿದ್ದ ಶೈಲಿ, ನನ್ನನ್ನು ಮೌನಕ್ಕೆ ತಳ್ಳಿ ಬಿಟ್ಟಿತ್ತು. ಅಂದಿನ ದಿನವೂ ನನ್ನ ನೆನಪಿನಲ್ಲಿ ಅಚ್ಚಳಿಯದೇ ಉಳಿಯದ ದಿನವಾಗಿ ಮಾರ್ಪಟ್ಟು ಬಿಟ್ಟಿತು. ಆ ನೆನಪನ್ನು ಇನ್ನೂ ಭದ್ರಪಡಿಸಲು ನೆರವಾದದ್ದು ಆತ್ಮೀಯ ಸಂಪದಿಗರಾದ ರಾಘವೇಂದ್ರ ನಾವಡ, ಭಾಗ್ವತ ಮತ್ತು ಗೋಪಾಲ ಮಾ ಕುಲಕರ್ಣಿಯವರು ಅಂದು ನನಗಾಗಿ ಬರೆದು ಪ್ರಕಟಿಸಿದ ಕವನಗಳು ಮತ್ತು ಅಲ್ಲಿನ ಪುಟಗಳಲ್ಲಿ ಪ್ರತಿಕ್ರಿಯೆಗಳ ಮೂಲಕ ನನಗೆ ಶುಭ ಹಾರೈಸಿ ಅಭಿಮಾನ, ಪ್ರೀತಿ ವಿಶ್ವಾಸಗಳ ಮಹಾಪೂರವನ್ನೇ ಹರಿಸಿದ ಸಹೃದಯಿ ಸಂಪದಿಗರು (ಸಿರಿಗನ್ನಡ ಸಂಪದ ಅಂತರ್ಜಾಲ ತಾಣದ ಸದಸ್ಯರು).
 
* * * * *
ನನ್ನ ಜೀವನದಲ್ಲಿ ಬಂದು ಹೋದ ನಲವತ್ತೊಂಭತ್ತು ಜನ್ಮದಿನಗಳ ಪೈಕಿ, ಈ  ಮೂರು ಜನ್ಮದಿನಗಳ ನೆನಪು ನನ್ನ ಮನದಲ್ಲಿ ಸದಾ ಹಸಿರಾಗೇ ಇದೆ ಮತ್ತು ಇರುತ್ತದೆ. ಜೊತೆಗೇ, ನಾನು ಹೀಗೆ, ವಿಭಿನ್ನ ರೀತಿಯಲ್ಲಿ ಜನರ ಆತ್ಮೀಯತೆ ಮತ್ತು ಅಭಿಮಾನ ಗಳಿಸುವುದಕ್ಕೆ, ಕಾರಣವಾದರೂ ಏನಿದ್ದಿರಬಹುದು ಎಂದು ನನ್ನ ಮನಸ್ಸು ಸುದೀರ್ಘ ಚಿಂತನೆಗೆ ಒಳಗಾಗುತ್ತದೆ.
 
 
ನಾನು ಇದಕ್ಕೆಲ್ಲಾ ಅರ್ಹನೇ ಎನ್ನುವ ಪ್ರಶ್ನೆಯೂ ಕಾಡುತ್ತದೆ.
 
 
ಬಹುಶಃ ಇದಕ್ಕೆ ಉತ್ತರ ಹುಡುಕುವುದು ಕಷ್ಟ.

*************************

ಸಿರಿಗನ್ನಡ ಸಂಪದ ತಾಣದಲ್ಲಿ ನನ್ನ ಜನ್ಮದಿನಾಚರಣೆ!

19 ಜುಲೈ 10

 

ಶುಕ್ರವಾರ, ೧೬ ಜುಲಾಯಿ ೨೦೧೦, ನನ್ನ ೪೯ನೇ ಜನುಮದಿನದಂದು ಸಿರಿಗನ್ನಡ ಸಂಪದ ಅಂತರ್ಜಾಲ ತಾಣವೆಂಬ ಸಮುದಾಯದಲ್ಲಿ (http://sampada.net), ಸಹೃದಯಿಗಳಾದ ನನ್ನ ಸಂಪದಿಗ ಮಿತ್ರರು ನನಗೆ ಪ್ರೀತ್ಯಾದರಗಳಿಂದ ಶುಭ ಹಾರೈಸಿದ ಪರಿಯನ್ನು ಕಂಡು, ನನ್ನ ಮನಸ್ಸು ಮುದಗೊಂಡು, ಕಣ್ಣುಗಳು ತುಂಬಿ ಬಂದಿದ್ದವು.

ಹಾರೈಕೆಗಳಿಂದ ತುಂಬಿದ ಆ ಬರಹಗಳ ಮತ್ತು ಆ ನಾಲ್ಕು ಆತ್ಮೀಯ ಬರಹಗಾರರ ಪರಿಚಯ ನಿಮಗೂ ಇರಲಿ, ಎಂಬ ಆಶಯದೊಂದಿಗೆ ಅವುಗಳ ಕೊಂಡಿಯನ್ನು ನೀಡುತ್ತಿದ್ದೇನೆ.

ಹರೀಶ ಆತ್ರೇಯರ ಆಸುಕವಿಗೆ ಶುಭಾಶಯಗಳು”     (ಪಿಡಿಫ್)

ಕೆ.ಎಸ್. ರಾಘವೇಂದ್ರ ನಾವಡರ ಆಸುಮನಕ್ಕೊಂದು ಅಭಿನಂದನೆ”    (ಪಿಡಿಎಫ್)

ಭಾಗ್ವತರ ಆಸುಹೆಗ್ಡೆಯವರಿಗೆ…”    (ಪಿಡಿಎಫ್)

ಗೋಪಾಲ ಮಾ. ಕುಲಕರ್ಣಿಯವರಆಸುಮನ ಕವಿಗಳಿಗೆ…”    (ಪಿಡಿಎಫ್)

ಸಹೃದಯಿ ಸಂಪದಿಗರಿಗೆಲ್ಲಾ ನಾನು, ನನ್ನದೇ ಶೈಲಿಯಲ್ಲಿ, ಸಲ್ಲಿಸಿದ ಕೃತಜ್ಞತೆಗಳು ಹೀಗಿದ್ದವು:

ಸಂಪದಿಗರೇ,

ಮುಂಜಾನೆಯೇ ಈ ಲೇಖನ ಓದಿ ಮನ ತುಂಬಿ ಬಂತು
ಯಾವ ರೀತಿ ಸ್ಪಂದಿಸಿದಲಿ ಎನ್ನುವ ಅನುಮಾನ ಬಂತು

ನನ್ನನ್ನು ನನಗಿಂತಲೂ ಚೆನ್ನಾಗಿ ಹರೀಶ ಅರಿತಿರುವಂತಿದೆ
ನನಗೋ ಇದೀಗ ಜನ್ಮ ಸಾರ್ಥಕವಾಯಿತೆಂದನಿಸುತಿದೆ

ಪದಗಳಲಿ ಬಣ್ಣಿಸಲಾಗದು ನನ್ನಿಂದ ನಿಮ್ಮೀ ಅಭಿಮಾನವನ್ನು
ನನ್ನ ಮನಕೀಗ ಹೊರೆ ಇದನು ನಾ ಹೊತ್ತು ನಡೆಯಬೇಕಿನ್ನು

ನನ್ನಿಂದ ಇದಕ್ಕೆ ಎಂದಿಗೂ ಯಾವುದೇ ಧಕ್ಕೆ ಬಾರದ ತೆರದಿ
ಬಾಳಿ ನಾನು ಕ್ರಮಿಸಬೇಕಾಗಿದೆ ಮುಂದಿನ ನನ್ನ ಬಾಳ ಹಾದಿ

ಇಲ್ಲಿಹವು ನಿಮಗಿದೋ ನನ್ನ ಮುಕ್ತ ಮನದ ಅಭಿವಂದನೆಗಳು
ನನಗೆ ಶುಭ ಹಾರೈಸಿದ ಎಲ್ಲಾ ಸಂಪದಿಗರಿಗೂ ಕೃತಜ್ಞತೆಗಳು

– ಆತ್ರಾಡಿ ಸುರೇಶ ಹೆಗ್ಡೆ


ಹಾಸ್ಯ ಕಲಿಸಿದ ಹಿಂದೀ ಮೇಸ್ಟ್ರು ಇನ್ನಿಲ್ಲವಂತೆ!

10 ಜೂನ್ 10

 

೧೯೭೪ ರಿಂದ ೧೯೭೭ರ ಅವಧಿಯಲ್ಲಿ ನಾನು ಪರ್ಕಳ ಪ್ರೌಢ ಶಾಲೆಯ ವಿದ್ಯಾರ್ಥಿಯಾಗಿದ್ದೆ. ಆಗ ನಮಗೆ ಹಿಂದೀ ಬೋಧನೆ ಮಾಡುತ್ತಿದ್ದ ಕೆ. ಪದ್ಮನಾಭ ಭಟ್ (ಹಿಂದೀ ಪಂಡಿತರು) ಇಹಲೋಕ ತ್ಯಜಿಸಿದ್ದಾರೆ ಎನ್ನುವ ಸಂದೇಶ ನನ್ನ ಸಹೋದರನಿಂದ ಇಂದು ಮುಂಜಾನೆ ಬಂತು. ಉದಯವಾಣಿಯಲ್ಲಿ ಹುಡುಕಿದಾಗ ಸುದ್ದಿಯ ಸಚಿತ್ರ ವರದಿ ಸಿಕ್ಕಿತು.

ಪದ್ಮನಾಭ ಭಟ್ರ ವಿದ್ಯಾರ್ಥಿಗಳಾಗಿದ್ದ ಯಾರೊಬ್ಬರೂ ಅವರ ಹಾಸ್ಯಪ್ರಜ್ಞೆಯನ್ನು ಮರೆಯಲು ಸಾಧ್ಯವೇ ಇಲ್ಲ. ಪ್ರತಿಯೊಂದು ನಿಮಿಷಕ್ಕೂ ಒಂದೊಂದು ಹಾಸ್ಯ ಚಟಾಕಿ ಹಾರಿಸುತ್ತಿದ್ದ, ಎಲ್ಲಾ ಮಾತುಗಳಿಗೂ ಹಾಸ್ಯದ ಲೇಪನ ಕೊಟ್ಟು ಮಾತನಾಡುತ್ತಿದ್ದ ಅವರು, ನನ್ನಲ್ಲಿ ಹಾಸ್ಯಪ್ರಜ್ಞೆ ಮೂಡಿಸಿದ ಎರಡನೇ ಗುರು ಅಂದರೆ ತಪ್ಪಾಗಲಾರದು. ಮೊದಲನೆಯವರು ನಮ್ಮ ತೀರ್ಥರೂಪರು.  ಕಣ್ಣು ಮತ್ತು ಕಿವಿಗಳನ್ನು ತೆರೆದಿಟ್ಟುಕೊಂಡರೆ ಹಾಸ್ಯವನ್ನು ಎಲ್ಲೂ, ಯಾವಾಗಲೂ ಕಾಣಬಹುದು, ಅನುಭವಿಸಬಹುದು ಎನ್ನುವ ಸೂಕ್ಷ್ಮತೆಯ ಅರಿವು ಮಾಡಿಕೊಟ್ಟವರು ಅವರೀರ್ವರು.  ಈಗ ಈರ್ವರೂ ಇಲ್ಲ.
ಆದರೆ, ಹಾಸ್ಯ ಇನ್ನೂ ಜೀವಂತವಾಗಿದೆ ನನ್ನಲ್ಲಿ ಮತ್ತು ಅವರ ಸಾವಿರಾರು ವಿದ್ಯಾರ್ಥಿಗಳ ಜೀವನಗಳಲ್ಲಿ.

ಅಗಲಿದ ಆತ್ಮಕ್ಕೆ ಶ್ರದ್ಧಾಂಜಲಿ ಅರ್ಪಿಸುತ್ತಾ,  ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸುವಂತೆ ಆ ಭಗವಂತನಲ್ಲಿ ಬೇಡುತ್ತೇನೆ.

***************

 

 

 


ನಮ್ಮ ಬೆಂಗ್ಳೂರು ಮತದಾನದ ದಿನ “ಆಲಸಿ ಬೆಂಗಳೂರು” ಯಾಕಾಯ್ತೂ…?!

29 ಮಾರ್ಚ್ 10
 
 
 
ಮತದಾನದ ಮುನ್ನಾದಿನ:
 
“ಅಕ್ಕಾವ್ರೇ…ಅಕ್ಕಾವ್ರೇ…”
 
ನಮ್ಮ ಬಾಗಿಲಿನಲ್ಲಿ ನಿಂತು ಯಾರೋ ಕರೆಯುತ್ತಿದ್ದರು.
 
 
ನನ್ನಾಕೆ ಬಾಗಿಲು ತೆರೆದು ನೋಡಿದರೆ, ನೆರೆಮನೆಯ ಕೆಲಸದಾಕೆ ಮುನಿಯಮ್ಮ ನಿಂತಿದ್ದಳು.
 
“ಏನಮ್ಮಾ…? ಏನು ಬೇಕಿತ್ತು?”
 
“ಏನೂ ಇಲ್ಲ ಅಕ್ಕಾವ್ರೇ… ಅಲ್ಲಿ ಎಲ್ರಿಗೂ ಕಾಸ್ ಕೊಡ್ತಾವ್ರೇ…ನಾನೂ ಇಸ್ಕಂಡ್ ಬಂದೆ… ನಿಮ್ಗೂ ಹೇಳಾವ ಅಂತ ಕೂಗ್‍ದೇ..ಅಕ್ಕಾವ್ರೇ”
 
“ಹೌದಾ… ಎಷ್ಟು ಕಾಸು ಸಿಗ್ತು ನಿಂಗೆ?”
 
“ನನಗೆ ಒಂದ್ ಸಾವ್ರಾ  ಕೊಟ್ರಕ್ಕಾವ್ರೇ…ನಮ್ಮೆಜ್ಮಾನ್ರಿಗೆ…ಐನೂರ್ ಜಾಸ್ತಿ ಕೊಟ್ಟವ್ರೇ…”
 
“ಯಾವ ಪಕ್ಷದೋರಮ್ಮಾ…?”
 
“ನಿನ್ನೆ ಕೊಟ್ರಲ್ಲಾ ಅವ್ರು ದಳದೋರಂತೆ…ಅಕ್ಕಾವ್ರೇ…ಇವತ್ತ್ ಕೊಡ್ತಿರಾದು.. ಕಮಲ್ದ ಪಕ್ಷದೋರಂತೆ…”
 
“ಓಹೋ ನಿನ್ನೇನೂ ತಕ್ಕೋಂಡಿದ್ಯಾ…”
 
“ಕೋಡೋವಾಗ ಬ್ಯಾಡಾಂತ ಹೆಂಗನ್ಲೀ..ಅಕ್ಕಾವ್ರೇ?  ನಾವ್ ತಕ್ಕಂಡಿಲ್ಲಾಂದ್ರೆ ಅವ್ರೆಲ್ಲಾ ತಿಂದ್ ಹಾಕಾಕಿಲ್ವಾ…? ಅಲ್ದೇ ಈ ಕಮಲ್ದ ಪಕ್ಷ ಕೊಡ್ತಿರಾದ್ ಸರ್ಕಾರದ್ ದುಡ್ಡು…ಸರ್ಕಾರದ್ ದುಡ್ಡ್ ನಮ್ಮ್ ದುಡ್ಡೆ ಅಲ್ವಾ ಅಕ್ಕಾವ್ರೇ? ಅದೂನ್ನಾ ಬ್ಯಾಡಾನ್ನಾಕ್ಕಾಯ್ತದಾ?”
 
“ಸರೀನಮ್ಮಾ…ಒಟ್ಟ್ ಎಷ್ಟ್ ಕಾಸ್ ಬಂತು ನಿಮ್ ಮನೆಗೆ..?”
 
“ಎಲ್ಡು ಪಾರ್ಟೀದು ಸೇರ್ ನಾವ್ ಮೂರ್ ಜನಾಕೆ ನಾಲ್ಕೂವರೆ ಸಾವ್ರಾ ಬಂದದೆ ಅಕ್ಕಾವ್ರೇ…”
 
“ಸರಿ ಬಿಡು ಈ ಚುನಾವಣೆಯಿಂದ ನಿಮಗಾದ್ರೂ ಲಾಭ ಆಯ್ತಲ್ವಾ …?”
 
ನಕ್ಕು ನಡೆದಿದ್ದಳು ಮುನಿಯಮ್ಮ…
 
 
 
ಮತದಾನದಂದು ಸಾಯಂಕಾಲ:
 
ನೆರೆಮನೆಗೆ ಕೆಲಸಕ್ಕಾಗಿ ದಿನಾ ಬೆಳಿಗ್ಗೆ ಬರುತ್ತಿದ್ದ ಮುನಿಯಮ್ಮ, ಅಂದು ಸಾಯಂಕಾಲ ಬರುತ್ತಿದ್ದುದನ್ನು ಕಂಡು ನನ್ನಾಕೆ ಕರೆದು ಕೇಳಿದಳು
 
“ಏನ್ ಮುನಿಯಮ್ಮಾ…ವೋಟ್ ಹಾಕಿದ್ರೇನಮ್ಮಾ…?”
 
“ಇಲ್ಲಾ ಅಕ್ಕಾವ್ರೇ..”
 
“ಅದ್ಯಾಕ್ ಮುನಿಯಮ್ಮಾ… ಅಷ್ಟೊಂದು ಕಾಸು ತಗೋಂಡು ವೋಟ್ ಹಾಕ್ದೇ ಹೆಂಗಿದ್ರೀ ನೀವು?
 
“ಇಲ್ಲಾ ಅಕ್ಕಾವ್ರೇ ನಾನ್ ಹೋಗಾಣಂತಿದ್ದೆ… ನಮ್ಮೆಜ್ಮಾನ್ರೇ ಹೇಳಿದ್ರು… ಯಾರ್ಗೂ ಮೋಸ ಮಾಡ್ಬಾರ್ದೂ … ಎಲ್ಡು ಪಾರ್ಟೀಯವ್ರೂ ಕಾಸ್ ಕೊಟ್ಟವ್ರೇ…ಯಾರಿಗ್ ವೋಟ್ ಹಾಕಿದ್ರೂ…ಇನ್ನೊಬ್ರಿಗೆ ಮೋಸ ಮಾಡ್‍ದಂಗೇ… ನಮ್ಮನ್ನ..ನಿಯತ್ತ್ ಇಲ್ದೋರ್ ಅಂತಾರೆ… ಹಂಗಾಗಿ…ನಾವ್ ಹೋಗಾದೇ ಬೇಡಾ ಅಂದ್ಬಿಟ್ರು…”
 
“ಅಯ್ಯೋ ದೇವ್ರೇ…ಹೀಗೆಲ್ಲಾ ಮಾಡ್ಬಾರ್ದಮ್ಮಾ…ವೋಟ್ ಹಾಕ್ದೇ ಇರ್ಬಾರ್ದಮ್ಮಾ…”
 
 
“ನೀವ್ ಹೇಳಾದೂ ಸರೀನೇ ಅಕ್ಕಾವ್ರೇ… ಆದ್ರೆ ನಮ್ಮೆಜ್ಮಾನ್ರ್ ಮಾತ್ನ ಮೀರಕ್ಕಾಯ್ತದಾ? ಅಲ್ದೇ…ನಿನ್ನೆ ರಾತ್ರಿ ಕಾಂಗ್ರೇಸ್ ಲೀಡ್ರು ಗಿರೀಶಪ್ಪಾ ಮೂರ್ ಇಸ್ಕಿ ಬಾಟ್ಲಿ ಬೇರೆ ಕೊಡ್ಸಿದ್ರಾ… ಅದ್ರಾಗ್ ನಂಗೂ ವಸಿ ಬಗ್ಸಿ ಕೊಟ್ಟಿದ್ರು… ನಮ್ಮೆಜ್ಮಾನ್ರು. ಹಂಗಾಗಿ ಮುಂಜಾನಿಂದ ನಂಗೂ ತಲೀನೋವು ಅಕ್ಕಾವ್ರೇ…  ಹಂಗಾಗಿ ನಾನೂ ಮನೀಕ್ಕಂಡಿದ್ದೆ..  ಈವಾಗಷ್ಟೇ ಎದ್ ಈಕಡಿಗ್ ಬಂದೆ ಅಕ್ಕಾವ್ರೇ…..”
 
ಈವಾಗ್ ಕೇಳ್ತೀರಾ ನಮ್ ಬೆಂಗ್ಳೂರು ಮತದಾನದ ದಿನ “ಆಲಸಿ ಬೆಂಗಳೂರು” ಯಾಕಾಯ್ತೂ…ಅಂತಾ?
 
*********************
 
 
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ನಿನ್ನೆ (೨೮ ಮಾರ್ಚ್ ೨೦೧೦ರಂದು) ನಡೆದಿತ್ತು.
 
 

ಮಕ್ಕಳ ಪಾಲಿಗೆ ಅಪ್ಪ ಅಂದರೆ ಒಂದು ಬೆದರುಬೊಂಬೆಯೇ?

30 ನವೆಂ 09
ತಮ್ಮ ತಂದೆ ತಾಯಿಯರ ಬಗ್ಗೆ ಮಕ್ಕಳ ಮನದಲ್ಲಿ ತಮ್ಮದೇ ಆದ ಭಾವನೆಗಳು, ಅಭಿಪ್ರಾಯಗಳು ಮನೆ ಮಾಡಿರುತ್ತವೆ. ತಂದೆ ತಾಯಿಯರು ತುಂಬಾ ಗಂಭೀರವಾಗಿ ಶಿಸ್ತುಬದ್ಧವಾದ ಕಟ್ಟುಪಾಡಿನ ದಿನಚರಿಯನ್ನು ಮಕ್ಕಳ ಮೇಲೆ ಹೇರಿದ್ದರೂ, ಮಕ್ಕಳು ಅವರ ಜೊತೆಗೆ ತೀರ ಸಲುಗೆಯಿಂದ ವರ್ತಿಸುವ ಮಕ್ಕಳೂ ಇರಬಹುದು. ಅದೇ ತರಹ, ತೀರ ಸಲುಗೆಯ ಮಾತಾ ಪಿತರ ಜೊತೆಗೆ  ಗಂಭೀರವಾಗಿ ನಡೆದು ಕೊಳ್ಳುವ ಮಕ್ಕಳೂ ಕಂಡು ಬರಬಹುದು. ಮಕ್ಕಳು ಯಾವ ವಿಷಯಗಳ ಪ್ರಸ್ತಾಪವನ್ನು ತಮ್ಮ  ತಂದೆ ತಾಯಿಯರ ಮುಂದಿಡುತ್ತಾರೋ ಆ ವಿಷಯಗಳ ಗಾಂಭೀರ್ಯಕ್ಕೆ ಅನುಗುಣವಾಗಿ ತಮ್ಮ ಪ್ರಸ್ತಾಪದಲ್ಲೂ ಗಾಂಭೀರ್ಯವನ್ನು ತುಂಬಿಕೊಳ್ಳುತ್ತಾರೆ.
ನಾನು ಚಿಕ್ಕವನಿದ್ದಾಗ, ನನ್ನ ಅಕ್ಕ ಮತ್ತು ಅಣ್ಣಂದಿರು ತಮ್ಮ ಬೇಡಿಕೆಗಳನ್ನು ಅಪ್ಪಯ್ಯನವರ ಮುಂದಿಡಲು ನನ್ನನ್ನು ಬಳಸಿಕೊಳ್ಳುತ್ತಿದ್ದರು. ನಾನು ಅವರಿವರ ಬೇಡಿಕೆಗಳನ್ನು ಅಪ್ಪಯ್ಯನವರ ಮುಂದಿಡುವಾಗ ಯಾವ ಭಯವೂ ಇರುತ್ತಿರಲಿಲ್ಲ. ಅಪ್ಪಯ್ಯನವರ ಆ ಹೊತ್ತಿನ ಮನೋಸ್ಥಿತಿಗನುಗುಣವಾಗಿ ಹತ್ತು ಹಲವು ಬಾರಿ ಬೈಸಿಕೊಂಡದ್ದೂ ಇದೆ. ಹಾಗೆ ಬೈಸಿಕೊಂಡಾಗ ನಾನು ನೊಂದುಕೊಳ್ಳುತ್ತಿರಲಿಲ್ಲ. ಏಕೆಂದರೆ, ಆ ಬೇಡಿಕೆಗಳು ತಿರಸ್ಕೃತವಾದರೆ ನನಗೇನೂ ತೊಂದರೆ ಇರುತ್ತಿರಲಿಲ್ಲ. ಆದರೆ ನನ್ನದೇ ವೈಯಕ್ತಿಕ ಬೇಡಿಕೆಗಳನ್ನು ಅಪ್ಪಯ್ಯನವರ ಮುಂದಿಡಲು ನಾನು ಭಯ ಪಡುತ್ತಿದ್ದೆ. ಸ್ವರವೇ ಬರುತ್ತಿರಲಿಲ್ಲ. ಅಂಜುತ್ತಾ ಅಂಜುತ್ತಾ ಹೇಳುವಾಗ ಮೈಬೆವರಿಸಿಕೊಳ್ಳುತ್ತಿದ್ದೆ. 
ಬಾಲ್ಯದಲ್ಲಿನ ನನ್ನ ಈ ತೆರನಾದ ಅನುಭವಗಳಿಂದಾಗಿ, ನಾನು ನನ್ನ ಮಗಳು ಸ್ಮಿತಾಳನ್ನು ಚಿಕ್ಕಂದಿನಿಂದಲೇ ವಿಭಿನ್ನವಾಗಿ ಬೆಳೆಸುವ ಪ್ರಯತ್ನ ಮಾಡಿದೆ. ಒಂದನೇ ತರಗತಿಯಿಂದಲೇ, ಆಕೆಗೆ ಆಕೆಯಿಂದಲೇ ತಯಾರಿಸಲ್ಪಟ್ಟ, ಆಕೆಯದೇ ಆದ ದಿನಚರಿಯ ವೇಳಾಪಟ್ಟಿ ಇರುತ್ತಿತ್ತು. ಅದರಲ್ಲಿ ಊಟ, ತಿಂಡಿ, ದೂರದರ್ಶನ ವೀಕ್ಷಣೆ, ನಿದ್ದೆ, ಸ್ನಾನ, ಹೀಗೆ ಎಲ್ಲದಕ್ಕೂ ನಿರ್ದಿಷ್ಟ ಸಮಯ ಇರುತ್ತಿತ್ತು. ಶಾಲಾದಿನಗಳಿಗೊಂದು. ರಜಾದಿನಗಳಿಗೊಂದು. ಆಕೆ ದೂರದರ್ಶನ ವೀಕ್ಷಿಸುತ್ತಿದ್ದರೆ ಆಕೆಯ ವೇಳಾಪಟ್ಟಿಯಲ್ಲಿ ಅದು ಇದೆ ಎಂದು ನಂಬಿರುತ್ತಿದ್ದೆ. ಆ ನಂಬಿಕೆಯೊಂದಿಗೇ ಆಕೆಯನ್ನು ಬೆಳೆಸಿದೆ. ಆಕೆಗೆ ನಾನೆಂದೂ ಭಾಷಣ, ಪ್ರಬಂಧ ಬರೆದುಕೊಟ್ಟುದಿಲ್ಲ, ಚಿತ್ರ ಬಿಡಿಸಿಕೊಟ್ಟುದಿಲ್ಲ. ಆಕೆಯಿಂದಲೇ ಬರೆಸುತ್ತಿದ್ದೆ. ಆಮೇಲೆ ಅದನ್ನು ನಾನು ೯೯ ಪ್ರತಿಶತ ಬದಲಾಯಿಸಿದ್ದಿರಲೂಬಹುದು. ಆದರೆ ಆಕೆಗೆ ಅದು ಆಕೆ ಬರೆದದ್ದು ಎನ್ನುವ ಭಾವನೆ ಹುಟ್ಟಿಸಿ ಆಕೆಯಲ್ಲಿ ಸ್ವಾಭಿಮಾನ ಹುಟ್ಟಿಸುವುದಕ್ಕೆ ಸದಾ ಸಹಕರಿಸಿದ್ದೆ. ಆ ಸ್ವಾಭಿಮಾನದಿಂದಾಗಿ,  ಆಕೆ ವಿವಿಧ ಸ್ಪರ್ಧೆಗಳಲ್ಲಿ ಗೆದ್ದು, ಮನೆಗೆ ಹೊತ್ತು ತರುತ್ತಿದ್ದ ಬಹುಮಾನಗಳು, ಪ್ರಮಾಣ ಪತ್ರಗಳು, ಈಗ ಇಲ್ಲಿ ನಮ್ಮ ಕಣ್ಮನ ತುಂಬುತ್ತಿರುತ್ತವೆ.  ಬೆಂಗಳೂರಿನ ಮುರುಗೇಶ್ ಪಾಳ್ಯದಲ್ಲಿರುವ ಭಾರತೀಯ ವಾಯುಸೇನೆಯ ಪ್ರೌಢಶಾಲೆಯಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾಗ, ಆಕೆ ಎರಡು ಬಾರಿ ಸೋನಿ ದೂರದರ್ಶನದ “ಬೋರ್ನ್‍ವಿಟಾ ಕ್ವಿಜ್  ಕಂಟೆಸ್ಟ್” ನಲ್ಲಿ ಭಾಗವಹಿದ್ದಳು. ಅದಕ್ಕಾಗಿ ಡೆಹ್ರಾಡೂನ್ ಮತ್ತು ಕಲ್ಕತ್ತಾ ನಗರಗಳಿಗೆ ಪಯಣ ಮಾಡಿದ್ದಳು ಕೂಡ.
ಈ ಭಯದ ಮಾತಿನ ಬಗ್ಗೆ ಹೇಳಬೇಕೆಂದರೆ, ಆಕೆಗೆ ನಾನು ಚಿಕ್ಕಂದಿನಲ್ಲೇ ಹೇಳಿದ್ದೆ. ಆಕೆ ಯಾವುದೇ ಬೇಡಿಕೆಗಳನ್ನು ನನ್ನ ಮುಂದಿಡುವಾಗಲೂ ಯಾವುದೇ ರೀತಿಯ ಭಯ ಪಡುವ ಅವಶ್ಯಕತೆ ಇಲ್ಲ. ನಿನ್ನ ಬೇಡಿಕೆಗಳನ್ನು ನಾನು ಪೂರೈಸಲು ಶಕ್ತನೆಂದಾದರೆ ಅವುಗಳನ್ನು ಪೂರೈಸಿಯೇ ತೀರುತ್ತೇನೆ. ಇಲ್ಲವಾದರೆ ಇಲ್ಲ. ಆದರೆ ನೀನು ಮುಂದಿಡುವ ಯಾವುದೇ ಬೇಡಿಕೆಗಳಿಗೆ ನಿನಗೆ ಬೈಗುಳ ದೊರೆಯದು. ಅದು ಹಾಗೇಯೇ ನಡೆದುಕೊಂಡು ಬಂದಿತ್ತು ಕೂಡಾ. ಆಕೆಯ ಅಮ್ಮನಿಂದ ತಿರಸ್ಕೃತವಾದ ಬೇಡಿಕೆಗಳನ್ನೂ, ನನ್ನ ಮುಂದಿಟ್ಟು ಪೂರೈಸಿಕೊಂಡದ್ದೂ ಇದೆ. ಆಕೆಗೆ ನನ್ನೊಂದಿಗೆ ಪ್ರೀತಿಭರಿತ ತೀರ ಸಲುಗೆ ಕೂಡ ಇದೆ.
ಇಷ್ಟೆಲ್ಲಾ ಇದ್ದರೂ, ಆಕೆಯ ಮನದ ಒಂದು ಮೂಲೆಯಲ್ಲಿ ನನ್ನ ಬಗ್ಗೆ ಒಂದು ಭಯ ಇದೆ ಎನ್ನುವ ಅರಿವು ನನಗೆ ಹಲವು ಬಾರಿ ಆಗಿದೆ. ತೀರ ಇತ್ತೀಚೆಗಿನ ಉದಾಹರಣೆಯೊಂದು ಈ ಬರಹಕ್ಕೆ ಕಾರಣವಾಯ್ತು.
ಸದ್ಯ ಮಂಗಳೂರಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯಾಗಿರುವ ಆಕೆ  ವಿದ್ಯಾಲಯದ ವಿದ್ಯಾರ್ಥಿನಿ ನಿಲಯದಲ್ಲಿ ಉಳಿದುಕೊಂಡಿರುತ್ತಾಳೆ. ಬಕ್ರೀದ್ ಪ್ರಯುಕ್ತ ೨೮ ನವಂಬರ್ ೨೦೦೯ರ ಶನಿವಾರದ ರಜೆ ಮತ್ತು ಭಾನುವಾರದ ರಜೆ ಸೇರಿ ಎರಡು ದಿನಗಳ ರಜೆ ಒಟ್ಟಿಗೇ ಸಿಕ್ಕಿತ್ತಾದ್ದರಿಂದ, ಶುಕ್ರವಾರದಂದು ಮಂಗಳೂರಿನಿಂದ ನಮ್ಮೂರು ಉಡುಪಿಗೆ ಹೋಗುವ ಬಗ್ಗೆ ನಮ್ಮ ಅನುಮತಿಯನ್ನು ಮೊದಲೇ ಪಡೆದುಕೊಂಡು ಹೊರಟು ಬಿಟ್ಟಿದ್ದಳು.
ಆಕೆಯ ಮಂಗಳೂರಿನಿಂದ ಉಡುಪಿ ತನಕದ ಒಂದೂವರೆ ಘಂಟೆಗಳ ಪ್ರಯಾಣದ ಅವಧಿಯಲ್ಲಿ ಎರಡು ಮೂರು ಬಾರಿ ದೂರವಾಣಿ ಕರೆ ಮಾಡಿ ವಿಚಾರಿಸಿಕೊಳ್ಳುತ್ತಲೇ ಇದ್ದ ನನಗೆ, ಆಕೆ, ತನ್ನ ಸೋಮವಾರದ ಮೊದಲನೇ ಪಾಠ ಎಂಟು ಘಂಟೆಗೆ ಆರಂಭ ಆಗುತ್ತಿದೆಯಾದ್ದರಿಂದ ತಾನು ಭಾನುವಾರ ಸಂಜೆಯೇ ಮಂಗಳೂರಿಗೆ ವಾಪಸು ಬರಬೇಕಾಗಿದೆಯಾಗಿದೆ ಎಂದು ತಿಳಿಸಿದ್ದಳು. ನಾನೂ ಕೂಡ, ಮುಂಜಾನೆ ಐದೂವರೆ ಆರು ಘಂಟೆಯ ಒಳಗೆಲ್ಲಾ ಪ್ರಯಾಣ ಮಾಡೊದು ಬೇಡ ಭಾನುವಾರವೇ ಹಿಂದಿರುಗಿ ಬಿಡು ಅಂದಿದ್ದೆ.
ಆದರೆ ಆಕೆ ತನ್ನ ತಾಯಿಯಲ್ಲಿ ಬೇರೆಯೇ ಬೇಡಿಕೆಯನ್ನು, ನನ್ನ ಒಪ್ಪಿಗೆಗಾಗಿ ಮುಂದಿಟ್ಟಿದ್ದಳು ಎನ್ನುವ ವಿಚಾರ ನಾನು ಶುಕ್ರವಾರ ಕಚೇರಿಯ ಕೆಲಸ ಮುಗಿಸಿ ಮನೆಗೆ ತೆರಳಿದಾಗಲೇ ನನ್ನ ಗಮನಕ್ಕೆ ಬಂದದ್ದು. ಸೋಮವಾರದಂದು ಎಂಟು ಘಂಟೆಯ ಮೊದಲ ಪಾಠಕ್ಕೆ ಹೆಚ್ಚಿನೆಲ್ಲಾ ವಿದ್ಯಾರ್ಥಿಗಳು ಗೈರುಹಾಜರಾಗುವ ಸಾಧ್ಯತೆ ಇದೆಯಾದ್ದರಿಂದ, ತಾನೂ ಕೂಡ, ಸೋಮವಾರ ಮುಂಜಾನೆಯೇ ಉಡುಪಿಯಿಂದ ಹೊರಡುತ್ತೇನೆ ಹಾಗೂ ಒಂಭತ್ತು ಘಂಟೆಯ ಪಾಠಕ್ಕೆ ಹಾಜರಾಗುತ್ತೇನೆ. ಇದಕ್ಕೆ ಅಪ್ಪನವರ ಒಪ್ಪಿಗೆ ಪಡೆದು ತಿಳಿಸಿ ಅಂದಿದ್ದಳಂತೆ.
ಯಾವನೇ ಒಬ್ಬ ತಂದೆಗೆ ಇಂತಹ ಮಾತುಗಳು ಕಿವಿಗೆ ಬಿದ್ದಾಗ, ಕೋಪ ಬರುವ ಸಾಧ್ಯತೆ ಇರಬಹುದೇನೋ. ಕೋಪಿಸಿಕೊಂಡವನು “ಬೇಡ… ಆಕೆ ಎಂಟು ಘಂಟೆಯ ಪಾಠಕ್ಕೆ ಹಾಜರಾಗಲೇ ಬೇಕು” ಅನ್ನಬಹುದು. ಕೋಪಿಸಿಕೊಳ್ಳದವನು, “ಇರಲಿ ಬಿಡು ಆಕೆಗೆ ಇಷ್ಟ ಬಂದ ಹಾಗೆ ಮಾಡಲಿ..” ಅನ್ನಬಹುದು.
ನನಗೆ ಕೋಪವೂ ಬರಲಿಲ್ಲ. ಸುಮ್ಮನಿದ್ದು ಬಿಡುವಂತೆಯೂ ಇರಲಿಲ್ಲ. ಆದರೆ ಮನಸ್ಸಿಗೆ ಸ್ವಲ್ಪ ಬೇಸರ ಆಯ್ತು. ಜೊತೆಗೆ ಮನದಲ್ಲಿ ಪ್ರಶ್ನೆಗಳು ಎದ್ದವು. ಆಕೆಯೊಂದಿಗೆ ಮಾತಾಡಿ ಆ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಳ್ಳಬೇಕೆಂದಿದ್ದೆ.
ಅಂದು ರಾತ್ರಿ ಆಕೆಗೆ ಕರೆ ಮಾಡಿದಾಗ ಆಕೆ ಮತ್ತು ನನ್ನ ನಡುವೆ ನಡೆದ ಸಂಭಾಷಣೆ ಹೀಗಿತ್ತು:
ನಾನು: “ಸಿಮಿ, ನೀನು ಈ ವಿಚಾರವನ್ನು ನನ್ನಲ್ಲಿ ಹೇಳದೇ, ಅಮ್ಮನ ಮುಖಾಂತರ ಹೇಳಿಸಿದ್ದು ಯಾಕೆ?”
ಸಿಮಿ: “ಅಪ್ಪಾ…ನೀವು ಬೈತೀರಿ ಅನ್ನೋ ಭಯ ನನಗೆ”
ನಾನು: “ನಾನು ನಿನಗೆ ಸುಮ್ಮ ಸುಮ್ಮನೇ ಬೈಯೋದಿದೆಯೇ?”
ಸಿಮಿ: “ಇಲ್ಲ”
ನಾನು: “ಮತ್ಯಾಕೆ ಈ ಭಯ?”
ಸಿಮಿ: ಮೌನ.
ನಾನು: “ನಾನು ನಿನ್ನನ್ನು ಮಂಗಳೂರಿನಲ್ಲಿ ಬಿಟ್ಟು ಬರುವಾಗಲೇ ತಿಳಿಸಿದ್ದೆ. ನಿನ್ನ ವಿದ್ಯಾಭ್ಯಾಸದ ಬಗ್ಗೆ ನಿನಗೆ ನೀನೇ ತೀರ್ಪುಗಾರ್ತಿ. ಯಾವ ಪಾಠಕ್ಕೆ ಹಾಜರಾಗಬೇಕು, ಯಾವುದಕ್ಕೆ ಹಾಜರಾಗಬೇಕಿಲ್ಲ ಅನ್ನುವುದು ನಿನಗೆ ಬಿಟ್ಟ ವಿಚಾರ. ನಾವ್ಯಾರೂ ನಿನ್ನನ್ನು ಯಾವುದೇ ಕಾರಣಕ್ಕೂ ರಜೆ ಹಾಕು ಅನ್ನುವಂತಿಲ್ಲ. ಅಲ್ಲದೆ ನಿನಗೆ ಬೇಡವೆಂದೆನಿಸಿದಾಗ ಹೋಗು ಅನ್ನುವಂತೆಯೂ ಇಲ್ಲ. ನಿನ್ನ ಅವಶ್ಯಕತೆಗಳನ್ನು ಪೂರೈಸುವ ಜವಾಬ್ದಾರಿ ಮಾತ್ರ ನಮಗೆ. ಓದು, ಪರೀಕ್ಷೆ, ಫಲಿತಾಂಶ, ಪದವಿ, ಇವೆಲ್ಲದರ ಜವಾಬ್ದಾರಿ ನಿನ್ನದು ಅಂತ ಆಗಲೇ ಹೇಳಿದ್ದೆ. ಇಂದೂ ಕೂಡ ಅದನ್ನೇ ಹೇಳುತ್ತಿದ್ದೇನೆ. ಅಲ್ಲಿನ ವಸ್ತುಸ್ಥಿತಿಯ ಅರಿವು ನಮಗೆ ಇರುವುದಿಲ್ಲ. ನನಗೆ ನನ್ನ ಮೇಲಿರುವ ನಂಬಿಕೆಗಿಂತಲೂ ಜಾಸ್ತಿಯಾದ ನಂಬಿಕೆ ನಿನ್ನ ಮೇಲೆ ಇದೆ. ಹಾಗಾಗಿ, ನಿನ್ನ ಯಾವುದೇ ನಿರ್ಣಯದ ಬಗ್ಗೆ ನನ್ನ ಅಭ್ಯಂತರ ಇರದು. ಆದರೆ, ನಿನಗೆ ಮಾರ್ಗದರ್ಶನ ಬೇಕೆಂದು ನೀನು ಕೇಳಿದಾಗ ಮಾರ್ಗದರ್ಶನ ಮಾಡಲು ನಾನು ಸದಾ ಸಿದ್ಧನಿದ್ದೇನೆ. ಅದಲ್ಲದೆ, ನಿನ್ನ ದಿನಚರಿಯಲ್ಲಿ ಅನವಶ್ಯಕ ಮೂಗು ತೂರಿಸಲಾರೆ. ನೀನು ವಿದ್ಯಾಭ್ಯಾಸದ ಹಾದಿಯಿಂದ ವಿಚಲಿತಳಾಗಿದ್ದಿ ಎನ್ನುವುದು ನನ್ನ  ಅರಿವಿಗೆ ಬಂದರೆ ಮಾತ್ರ, ನಾನು ನನ್ನ ವಿಚಾರಗಳನ್ನು ನಿನ್ನ ಮೇಲೆ ಹೇರಿ ಸರಿದಾರಿಗೆ ತರುವ ಪ್ರಯತ್ನ ಮಾಡುತ್ತೇನೆ, ಅಷ್ಟೇ. ನಿನ್ನ ಅಪ್ಪ ನಾನು, ಹೊಲಗದ್ದೆಗಳಲ್ಲಿ ನಿಲ್ಲಿಸಿಡುವ ಬೆದರುಬೊಂಬೆ ಅಲ್ಲ. ನೀನು ಭಯ ಪಡುವ ಅವಶ್ಯಕತೆಯೇ ಇಲ್ಲ. ನಿನ್ನ ಬೇಡಿಕೆಯನ್ನು ನನ್ನ ಮುಂದಿಡು. ನನಗೊಪ್ಪಿಗೆಯಾದರೆ ಒಪ್ಪಿಗೆ. ಇಲ್ಲಾಂದ್ರೆ ಒಪ್ಪೋಲ್ಲ, ಅಷ್ಟೇ. ನೀನು ಸೋಮವಾರದ ಎಂಟು ಘಂಟೆಯ ಪಾಠಕ್ಕೆ ಹಾಜರಾಗದಿರುವ  ಬಗ್ಗೆ ನನ್ನ ಅಭ್ಯಂತರ ಇಲ್ಲ. ನೀನು ಸೋಮವಾರದ ಮುಂಜಾನೆಯೇ ವಿದ್ಯಾಲಯಕ್ಕೆ ಹಿಂದಿರುಗಬಹುದು.
ನೀನು ಅಂದು  “ಟೀನೇಜರ್” ಎಂಬ ಹಣೆ ಪಟ್ಟಿ ಹೊತ್ತುಕೊಂಡ ನಿನ್ನ ಹದಿಮೂರನೇ ಜನ್ಮದಿನದಂದು ನಾನು ಬರೆದ ಪತ್ರದಲ್ಲಿ ಹೀಗೆ ಬರೆದಿದ್ದೆ ಗೊತ್ತೆ. – ಇಂದಿನಿಂದ ನೀನು ಸರ್ವ ರೀತಿಯಲ್ಲೂ ಸ್ವತಂತ್ರಳು. ನಾವಿಬ್ಬರೂ ಸ್ನೇಹಿತರಂತೆ ಇರಬೇಕು. ನಿನ್ನ ಸ್ವಾತಂತ್ರ್ಯದ ಪರಿಧಿಯಲ್ಲಿ ಸದಾ ನಾನಿರುತ್ತೇನೆ ಅಷ್ಟೇ. ಆದರೆ ನಿನಗೆ ಯಾವುದೇ ಭಯ ಇರಬಾರದು. ನೀನು ಯಾವುದೇ ಕೆಲಸ ಮಾಡುವಾಗಲೂ ನೀನು ಯಾರು ಮತ್ತು ಯಾರ ಮಗಳು ಅನ್ನುವುದನ್ನು ಗಮನದಲ್ಲಿಟ್ಟುಕೊಂಡು ಮಾಡು. ಅಷ್ಟು ಸಾಕು –  ನಿನಗದರ ನೆನಪಿದೆಯೇ?” ಅಂದೆ.
ಸಿಮಿ: “ಹೌದು ಅಪ್ಪ, ನನಗೆ ಅದಿನ್ನೂ ನೆನಪಿದೆ. ಅಲ್ಲದೆ…ಇನ್ನು ಮುಂದೆ ನಾನು ಹಾಗೇಯೇ ಮಾಡುತ್ತೇನೆ…ಆದರೂ ಒಮ್ಮೊಮ್ಮೆ ನೀವು ಬೈತೀರೇನೊ ಅನ್ನುವ ಭಯ ಇರುತ್ತದೆ ನನಗೆ ಅಷ್ಟೆ…” ಅಂದು ನಕ್ಕಳು.
ನನ್ನ ಮಗಳು ಹಾಗೆ ನಡೆದುಕೊಂಡಾಗ ನನ್ನಲ್ಲೇನೋ ಕೊರತೆ ಇದೆಯೇನೋ,  ನಾನು ಬೆದರುಬೊಂಬೆ ಆಗಿ ಬಿಟ್ಟಿದ್ದೆನೇನೋ ಅನ್ನುವ ಅನುಮಾನ  ಮೂಡುತ್ತದೆ.
ಈ ಮಕ್ಕಳು ಯಾಕೆ ಹೀಗೆ? ಮಕ್ಕಳಲ್ಲಿ ಈ ರೀತಿಯ ಭಯ ಯಾಕೆ ಇರುತ್ತದೆ. ಅಪ್ಪನಿಗಿಂತಲೂ ಹೆಚ್ಚಾಗಿ ಅಮ್ಮನಿಂದಲೇ ಬೈಸಿಕೊಂಡಿರುವ ಮಕ್ಕಳೂ ಅಪ್ಪನೆಂದರೆ ಭಯ ಪಡುವುದೇಕೆ? ಅಪ್ಪಂದಿರು ಎಷ್ಟು ಸಲುಗೆಯಿಂದ ಇದ್ದರೂ ಅವರ ಮನದೊಳಗೆ ಅಪ್ಪ ಬೈತಾರೇನೋ ಅನ್ನುವ ಭಯ ಯಾಕೆ? ಅಮ್ಮನನ್ನು ಚಾಣಾಕ್ಷತನದಿಂದ ಒಪ್ಪಿಸಿಕೊಳ್ಳುವ ಮಕ್ಕಳಲ್ಲಿ ಅಪ್ಪಂದಿರನ್ನು ಒಪ್ಪಿಸಲು ಹಿಂಜರಿತ ಏಕೆ? ಅವರೊಳಗಿನ ಈ ಭಯ ಸೂಕ್ತವೇ?
– ಆತ್ರಾಡಿ ಸುರೇಶ್ ಹೆಗ್ಡೆ.

ಮಣಿಪಾಲದ ಸುಂದರ “ಎಂಡ್ ಪಾಯಿಂಟ್”!!!

08 ಏಪ್ರಿಲ್ 09

park

ಈ ಸುಂದರ “ಪಾರ್ಕ್” ಮಣಿಪಾಲದ “ಎಂಡ್ ಪಾಯಿಂಟ್” ನಲ್ಲಿದೆ.

ಬರೇ ಕಲ್ಲು ಮುಳ್ಳುಗಳಿಂದ ತುಂಬಿದ್ದ ಆ ಗುಡ್ಡೆಯಲ್ಲಿ ಇಷ್ಟೊಂದು ಸುಂದರವಾದ “ಪಾರ್ಕ್” ನಿರ್ಮಾಣವಾಗಬಹುದು ಎಂದು ಯಾರೂ ಊಹಿಸಿರಲೇ ಇಲ್ಲ.

ಅಲ್ಲಿ ಒಂದೂವರೆ ಕಿಲೋಮೀಟರ್ ಉದ್ದದ “ಜಾಗಿಂಗ್ ಟ್ರ್ಯಾಕ್” ಇದೆ. ಮುಂಜಾನೆ ಮತ್ತು ಸಾಯಂಕಾಲ ವಾಯುವಿಹಾರಕ್ಕೆ ಹೋಗಲು ಪ್ರಶಸ್ತವಾದ ಸ್ಥಳ.

ಇಲ್ಲಿಂದ ಸೂರ್ಯಾಸ್ತಮಾನದ ದೃಶ್ಯ ಎಷ್ಟು ರಮಣೀಯವೋ ಸೂರ್ಯೋದಯದ ದೃಶ್ಯವೂ ಅಷ್ಟೇ ಮನಮೋಹಕ. ಈ ನೋಟಗಳನ್ನು ಸವಿಯುವುದಕ್ಕಾಗಿ ಅಲ್ಲಲ್ಲಿ ಕೂರುವ ವ್ಯವಸ್ಥೆಗಳನ್ನು ಮಾಡಲಾಗಿದೆ.

suvarna002

ಇಲ್ಲಿಂದ ಪಶ್ಚಿಮಕ್ಕೆ ನೋಡಿದರೆ ಉಡುಪಿ ನಗರ ಮತ್ತು ಅರಬ್ಬೀ ಸಮುದ್ರದತ್ತ ಕಣ್ಣು ಹಾಯುತ್ತದೆ. ಉತ್ತರದ ಇಳಿಜಾರಿನಲ್ಲಿ ಸುವರ್ಣ ನದಿ ಹರಿಯುತ್ತಿರುತ್ತದೆ.

suvarna003

ಪೂರ್ವದ ಇಳಿಜಾರಿನಲ್ಲಿ ಪರ್ಕಳ ಪೇಟೆ ಇದೆ. ದಕ್ಷಿಣಕ್ಕೆ ಮಣಿಪಾಲದ ಕಟ್ಟಡಗಳು ಕಣ್ಣಿಗೆ ಬೀಳುತ್ತವೆ.

ಇಲ್ಲಿಗೆ ಹೋಗುವ ದಾರಿಯಲ್ಲೇ ಉಡುಪಿ ಜಿಲ್ಲಾಧಿಕಾರಿಗಳ ಕಛೇರಿ ನಿರ್ಮಾಣವಾಗುತ್ತಲಿದೆ. ವಿಶಾಲವಾದ ಆಟದ ಮೈದಾನವೂ ಇದೆ.

ಆಟದ ಮೈದಾನಕ್ಕೆ ಹೊನಲು ಬೆಳಕಿನ ವ್ಯಸ್ಥೆಯನ್ನೂ ಒದಗಿಸಲಾಗಿದೆ.
ಮಣಿಪಾಲ ಎನ್ನುವ, ಮುರಕಲ್ಲು ಮತ್ತು ಅಜ್ಜಿಮುಳ್ಳುಗಳಿಂದ ಆವೃತ್ತವಾಗಿದ್ದ ಗುಡ್ಡೆ ಇಂದು ಅಂತರರಾಷ್ಟ್ರೀಯ ಮಟ್ಟದ ನಗರವಾಗಿ ಕಂಗೊಳಿಸುತ್ತಿರುವುದನ್ನು ನೋಡುವಾಗ, ನನ್ನ ಮನಸ್ಸು, ಮಣಿಪಾಲದ ಶಿಲ್ಪಿ ಪದ್ಮಶ್ರೀ ಡಾ. ತೋನ್ಸೆ ಮಾಧವ ಅನಂತ ಪೈಯವರನ್ನು (ಡಾ. ಟಿ. ಎಂ. ಎ. ಪೈ) ನೆನೆಯದೇ ಇರುವುದಿಲ್ಲ. ಅವರಿಗೆ ಅನಂತಾನಂತ ನಮನಗಳು.

ಉಡುಪಿಯತ್ತ ಹೋದರೆ ಇಲ್ಲಿಗೆ ಭೇಟಿ ಕೊಡುವುದನ್ನು ಮರೆಯದಿರಿ.


ಮದ್ದಲೆ ನುಡಿಸಿ ಕಾರ್ಯಕ್ರಮದ ಉದ್ಘಾಟನೆ!

17 ಫೆಬ್ರ 09

parkala012

ಈ ತಿಂಗಳ ೮ ರಂದು ಉಡುಪಿ ಜಿಲ್ಲೆಯ ಪರ್ಕಳದ ಮಂಗಳ ಕಲಾ ಸಾಹಿತ್ಯ ವೇದಿಕೆಯವರು ಹಮ್ಮಿಕೊಂಡಿದ್ದ ತಮ್ಮ ವಾರ್ಷಿಕೋತ್ಸವ ಕಾರ್ಯಕ್ರಮ “ಕನ್ನಡ ಡಿಂಡಿಮ” ದ ಉದ್ಘಾಟನೆಯನ್ನು ಮದ್ದಲೆಯ ಮಾಂತ್ರಿಕ ರಾಷ್ಟ್ರಪ್ರಶಸ್ತಿ ವಿಜೇತ ಶ್ರೀ ಹಿರಿಯಡಕ ಗೋಪಾಲ ರಾವ್ ಅವರು ಮದ್ದಲೆ ನುಡಿಸುವ ಮೂಲಕ ವಿಭಿನ್ನವಾಗಿ ನೆರವೇರಿಸಿದರು.

೯೩ ವರುಷದ ಯುವಕ ಶ್ರೀ ಹಿರಿಯಡಕ ಗೋಪಾಲ ರಾವ್ ಮದ್ದಳೆ ನುಡಿಸಿದಾಗ ಅವರಿಗೆ  ಪರ್ಕಳ ಮಂಗಳ ಕಲಾ ಸಾಹಿತ್ಯ ವೇದಿಕೆಯ ಪೋಷಕರು ಹಾಗೂ ಉಡುಪಿಯ ನ್ಯಾಯವಾದಿ (ನನ್ನ ಅನುಜ) ಶ್ರೀ ಆತ್ರಾಡಿ ಪೃಥ್ವಿರಾಜ್ ಹೆಗ್ಡೆಯವರು ಪ್ರಾರ್ಥನೆ ಹಾಡಿ (ಯಕ್ಷಗಾನದ ಪ್ರಾರ್ಥನೆ) ಜೊತೆ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀ ಅಂಬಾತನಯ ಮುದ್ರಾಡಿಯವರು ವಹಿಸಿದ್ದರು.


ವಿಶೇಷ ಅತಿಥಿಗಳಾಗಿ ಹಿರಿಯ ಲೇಖಕಿ ಶ್ರೀಮತಿ ಇಂದಿರಾ ಹಾಲಂಬಿ (ಗಿರಿವಾಸಿನಿ ಆತ್ರಾಡಿ) ಹಾಗೂ ಹಿರಿಯಡಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಹಾಗೂ ಸಂಶೋಧಕ ಶ್ರೀ ಪಾದೆಕಲ್ಲು ವಿಷ್ಣು ಭಟ್ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.

ವೇದಿಕೆಯ ಅಧ್ಯಕ್ಷ ಶ್ರೀ ರವೀಂದ್ರ ನಾಯಕ್ ಅವರ್ ನೇತ್ರತ್ವದಲ್ಲಿ ಇಡೀ ದಿನ ಹಮ್ಮಿಕೊಳ್ಳಲಾಗಿದ್ದ ವಿವಿಧ ಕಾರ್ಯಕ್ರಮಗಳು ಜನಮೆಚ್ಚುಗೆ ಪಡೆದವು.