ಇಲ್ಲಿರುವ ಚೌಕಾಸಿ ಅಲ್ಲಿಲ್ಲ ಏಕೆ?

17 ಫೆಬ್ರ 13

ಗಂಡಸರು ತಮಗೆ ಬೇಕಾದ ವಸ್ತುಗಳನ್ನು ಹೆಚ್ಚಿನ ಚೌಕಾಸಿ ಮಾಡದೆ ಸೂಕ್ತವಾದದ್ದಕ್ಕಿಂತ ಸ್ವಲ್ಪ ಹೆಚ್ಚಾದ ಬೆಲೆಯನ್ನೇ ಕೊಟ್ಟು ಖರೀದಿ ಮಾಡುತ್ತಾರೆ. ಆದರೆ, ಹೆಂಗಸರು ಸುದೀರ್ಘವಾದ ಚೌಕಾಸಿ ಅಥವಾ ಚರ್ಚೆ ಮಾಡಿ ಸೂಕ್ತವಾದದ್ದಕ್ಕಿಂತ ಸ್ವಲ್ಪ ಕಡಿಮೆ ಬೆಲೆಕೊಟ್ಟು, ಆದರೆ, ತಮಗೆ ಅಗತ್ಯವೇ ಇಲ್ಲದ, ವಸ್ತುಗಳನ್ನು ಖರೀದಿಸುತ್ತಾರೆ ಅನ್ನುವುದು ಮೊಬೈಲ್‌ಗಳ ಮೂಲಕ ಚಾಲ್ತಿಯಲ್ಲಿರುವ ಒಂದು ನಗೆಹನಿ (ಎಸ್ಸೆಮ್ಮೆಸ್ ಪೀಜೆ).

ಅದರ ಸತ್ಯಾಸತ್ಯತೆಯ ಬಗ್ಗೆ ಸದ್ಯಕ್ಕೆ ಯಾರೂ ತಲೆಕೆಡಿಸಿಕೊಳ್ಳ ಬೇಕಾಗಿಲ್ಲ. ಏಕೆಂದರೆ, ಅದು ನನ್ನ ಈ ಲೇಖನದ ವಿಷಯವೇ ಅಲ್ಲ.

ತರಕಾರಿ ಕೊಂಡುಕೊಳ್ಳುವಾಗ, ಬಟ್ಟೆ ಖರೀದಿಸುವಾಗ, ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವಾಗ, ಹೀಗೇ ಎಲ್ಲಾ ಕಡೆಗಳಲ್ಲಿ ಜನರು ಚೌಕಾಸಿ ಮಾಡುವುದನ್ನು ನಾನು ಕಂಡಿದ್ದೇನೆ. ಒಮ್ಮೊಮ್ಮೆ ಆ ಚೌಕಾಸಿಯ ವಾದಗಳಿಂದ ಕಿರಿಕಿರಿಗೊಂಡಿದ್ದೇನೆ. ಇನ್ನು ಕೆಲವೊಮ್ಮೆ, ಕೆಲವರ ಆ ವಾದಗಳ ಧಾಟಿಯನ್ನು ಮೆಚ್ಚಿದ್ದೇನೆ. ಚೌಕಾಸಿ ಮಾಡುವ ಶೈಲಿಯನ್ನು ಕಲಿತಿದ್ದೇನೆ. ಕೆಲವೊಮ್ಮೆ ನಾನು ಕೂಡ, ಹೀಗೆ ಕಲಿತ ಆ ವಿದ್ಯೆಯ ಪ್ರಯೋಗವನ್ನೂ ಮಾಡಿದ್ದೇನೆ.

ನಾನು ಎಷ್ಟೇ ಚೌಕಾಸಿ ಮಾಡಿ ಒಂದು ವಸ್ತುವನ್ನು ಖರೀದಿ ಮಾಡಿದ್ದರೂ, ನನ್ನ ಮನೆಯ ಇನ್ನೊರ್ವ ಸದಸ್ಯ, ನನ್ನ ಪಕ್ಕದ ಮನೆಯವನು, ಓರ್ವ ಸಹೋದ್ಯೋಗಿ ಅಥವಾ ಇನ್ನೊರ್ವ ಗೆಳೆಯ ಅದೇ ವಸ್ತುವನ್ನು ನಾನು ಕೊಟ್ಟ ಬೆಲೆಗಿಂತ ಕಡೆಮೆ ಬೆಲೆಗೆ ಖರೀದಿ ಮಾಡಿದ್ದೇನೆ ಅಂತ ಕೊಚ್ಚಿ ಕೊಂಡದ್ದಿದೆ. ಅಥವಾ ನನಗೆ ಚೌಕಾಸಿ ಮಾಡಲು ಬರುವುದಿಲ್ಲ, ನಾನು ಕೊಟ್ಟ ಬೆಲೆ ತುಂಬಾ ಜಾಸ್ತಿ ಆಯ್ತು ಅಂತ ಹೀಯಾಳಿಸಿದ್ದಿದೆ. ಆಗ ನಾನು ನನ್ನಲ್ಲಿರುವ ಚೌಕಾಸೀಶಕ್ತಿಯ ಕೊರತೆಯ ಬಗ್ಗೆ ಒಳಗೊಳಗೇ ನೊಂದು ಕೊಂಡದ್ದಿದೆ. ನನಗೆ ಚೌಕಾಸೀ ಶಕ್ತಿಯನ್ನು ಕರುಣಿಸುವಾಗ ಏಕೆ ಚೌಕಾಸಿ ಮಾಡಿದೆ ಅಂತ ದೇವರಿಗೆ ಮೊರೆಯಿಟ್ಟದ್ದೂ ಇದೆ. ಈ ತೆರನಾದ ಅನುಭವ ನಿಮಗೂ ಆಗಿರಬಹುದು. ನೀವೂ ನನ್ನಂತೆ ನೊಂದು ಕೊಂಡಿರಬಹುದು.

ಎಲ್ಲಾ ವ್ಯಾಪಾರಿಗಳಿಗೂ ತಮ್ಮಲ್ಲಿಗೆ ಬರುವ ಪ್ರತಿಯೊಬ್ಬ ಗಿರಾಕಿಯೂ ಚೌಕಾಸಿ ಮಾಡಿಯೇ ಮಾಡುತ್ತಾನೆ ಅನ್ನುವುದು ಮನದಟ್ಟವಾಗಿರುತ್ತದೆ. ಹಾಗಾಗಿಯೇ, ವಸ್ತುವಿನ ಬೆಲೆಯನ್ನು ಮೂರು ನಾಲ್ಕು ಪಟ್ಟು ಏರಿಸಿಯೇ ಮಾರಾಟಕ್ಕೆ ಇಟ್ಟಿರುತ್ತಾರೆ. ಇತ್ತ ಕೆಲ ಗ್ರಾಹಕರು ಅದನ್ನು ಅರ್ಧದಷ್ಟಕ್ಕೆ ಇಳಿಸಿ ಶೇಕಡಾ ಐವತ್ತು ಇಳಿಸಿದೆ ಎಂಬ ಸಂತಸದಲ್ಲಿ ಹೋಗಬಹುದು. ಇನ್ನು ಕೆಲ ಘಾಟಿ ಗ್ರಾಹಕರು ತಮ್ಮ ಚೌಕಾಸೀ ಕುಶಲತೆಯಿಂದ ಅದರ ನಿಜವಾದ ಮಾರಾಟ ಬೆಲೆಗೆ ಇಳಿಸುವಲ್ಲಿ ಯಶಸ್ವಿಯಾಗಬಹುದು.

ಒಟ್ಟಾರೆ ನೋಡಿದರೆ ಎಲ್ಲಾ ಗ್ರಾಹಕರಿಗೂ ಚೌಕಾಸಿ ಮಾಡಿ ಕಡಿಮೆ ಬೆಲೆಗೆ ಖರೀದಿ ಮಾಡಿದೆವೆಂಬ ನೆಮ್ಮದಿ ಇದ್ದರೆ, ವ್ಯಾಪಾರಿಗಳು ತಾವು ನಿಗದಿ ಪಡಿಸಿದ ಮಾರಾಟ ಬೆಲೆಗಳಿಗಿಂತ ಕಡಿಮೆ ಬೆಲೆಗೆ ಮಾರಾಟವಾಗಿಲ್ಲ, ತಮಗೆ ನಷ್ಟವೇನೂ ಆಗಿಲ್ಲವಲ್ಲ ಎಂಬ ಸಂತಸದಲ್ಲಿರುತ್ತಾರೆ.

ಎಲ್ಲಾ ಅಂಗಡಿಗಳಲ್ಲಿ, ಎಲ್ಲಾ ವಸ್ತುಗಳ ಖರೀದಿಯಲ್ಲಿ ಚೌಕಾಸಿ ಅಥವಾ ಚರ್ಚೆ ನಡೆಯುತ್ತದೆ. ಕಡಿತಗಳು, ಜೊತೆಗೆ ಉಚಿತ ಕೊಡುಗೆಗಳೂ ಇರುತ್ತವೆ. ಔಷಧಿ ಅಂಗಡಿಗಳಲ್ಲೂ ಚೌಕಾಸಿ ಮಾಡುವವರನ್ನು ಕಂಡಿದ್ದೇನೆ. ಊಟದ ಹೋಟೇಲುಗಳಲ್ಲೂ ಈಗೀಗ ಚೌಕಾಸಿ ನಡೆಯುತ್ತದೆ. ನಾವು ೧೫ ಜನ ಬರುತ್ತಿದ್ದೇವೆ, ನಿಮ್ಮ ಬಫೆ ಊಟದ ಬೆಲೆಯನ್ನು ಪ್ರತಿ ತಲೆಗೆ ಮುನ್ನೂರರಿಂದ ಇನ್ನೊರೈವತ್ತಕ್ಕೆ ಇಳಿಸಿ, ಅಂತ ದುಂಬಾಲು ಬಿದ್ದು, ಅದರಲ್ಲಿ ಸಫಲರಾಗುವವರೂ ಇದ್ದಾರೆ.

ಆದರೆ, ಜನರು ಯಾವುದೇ ರೀತಿಯ ಚೌಕಾಸಿ ಮಾಡದೆ, ವ್ಯಾಪಾರಿ ಹೇಳಿದ ಬೆಲೆ ಕೊಟ್ಟು ಖರೀದಿ ಮಾಡುವುದೂ ಇದೆ. ವಸ್ತುಗಳ ಮೇಲೆ ನಮೂದಿಸಲ್ಪಟ್ಟಿರುವ ಗರಿಷ್ಟ ಮಾರಾಟ ಬೆಲೆಗಿಂತಲೂ ಜಾಸ್ತಿ ಬೆಲೆ ಕೊಟ್ಟು ಕೊಂಡುಕೊಳ್ಳುವ ಜನರೂ ಇದ್ದಾರೆ, ಅಂತಹ ವಸ್ತುಗಳೂ ಇವೆ.

ಆ ವಸ್ತುಗಳು ಯಾವುವು ಅಂತ ಕೇಳ್ತೀರಾ? ಅವು ವಿಷೇಷ ವರ್ಗಕ್ಕೆ ಸೇರಿದವುಗಳು. ಅವುಗಳಿಂದ ಮಾನವ ಶರೀರಕ್ಕೆ ಆಗುವ ಲಾಭಕ್ಕಿಂತ ನಷ್ಟವೇ ಜಾಸ್ತಿ. ಅವುಗಳ ಪಟ್ಟಿಯಲ್ಲಿ ಮಾದಕ ಪದಾರ್ಥಗಳು. ತಂಪು ಪಾನೀಯಗಳು, ಬೀಡಿ, ಸಿಗರೇಟು, ಹೊಗೆಸೊಪ್ಪು ಮಿಶ್ರಿತ ಅಡಿಕೆಪುಡಿಯ ಪೊಟ್ಟಣಗಳು ಮತ್ತು ವಿವಿಧ ರೀತಿಯ ಮದ್ಯಗಳು ಸೇರಿವೆ. ಇವುಗಳ ಬೆಲೆಗಳ ಮೇಲೆ ಚೌಕಾಸಿ ನಡೆಯುವುದೇ ಇಲ್ಲ. ಅಲ್ಲಿ ಯಾವುದೇ ರೀತಿಯ ಚರ್ಚೆಯೇ ಇಲ್ಲ. ಸ್ವದೇಶದಲ್ಲಿ ತಯಾರಾಗುವ ವಿದೇಶೀ ಮದ್ಯಗಳ ಬಾಟಲಿಗಳ ಮೇಲೆ ಅವುಗಳ ಗರಿಷ್ಟ ಮಾರಾಟ ಬೆಲೆ ಕೂಡ ನಮೂದಾಗಿರುವುದಿಲ್ಲ. ಅದರರ್ಥ ಅವುಗಳ ಬೆಲೆಗಳ ಮೇಲೆ ನಿಯಂತ್ರಣವೇ ಇಲ್ಲ.

ವಾಹನಗಳಲ್ಲಿ ಮತ್ತು ವಿಹಾರ ಸ್ಥಳಗಳಲ್ಲಿ, ಇಂತಹ ವಸ್ತುಗಳಿಗೆ ಹೆಚ್ಚಿನ ಬೆಲೆ ತೆರುವುದು ಮಾಮೂಲಾಗಿದೆ. ಅದನ್ನು ನಾವು ನೀವೂ ಒಪ್ಪಿಕೊಂಡೂ ಆಗಿದೆ. ಆದರೆ, ನಮ್ಮ ಊರೊಳಗೂ ಈ ರೀತಿ ಅಧಿಕ ಬೆಲೆ ಕೇಳುವ ವ್ಯಾಪಾರಿಗಳನ್ನು ಮತ್ತು ತುಟಿ ಪಿಟಕ್ಕೆನ್ನದೇ ಆ ಬೆಲೆ ತೆತ್ತು ಖರೀದಿ ಮಾಡುವ ಗ್ರಾಹಕರನ್ನು ಕಾಣಬಹುದು. ಇದೇಕೆ ಹೀಗೆ? ಇನ್ನಿತರ ಎಲ್ಲಾ ಕಡೆ ಇರುವ ಈ ಬಾರ್ಗೇನ್ ಸಂಸ್ಕೃತಿ, ಬಾರ್‌ಗಳಲ್ಲಿ ಇರುವುದೇ ಇಲ್ಲ. ಹೀಗ್ಯಾಕೆ? 

ನಾವು ನಮ್ಮ ಹವ್ಯಾಸಗಳಿಗೆ, ದುರಭ್ಯಾಸಗಳಿಗೆ ಖರ್ಚು ಮಾಡುವಾಗ ಲೆಕ್ಕಾಚಾರ ಮಾಡುವುದೇ ಇಲ್ಲ. ಆ ಖರ್ಚು ಎಷ್ಟೇ ಆದರೂ, ಮಾಡಿಯೇ ಮಾಡುತ್ತೇವೆ. ಒಂದು ವೇಳೆ ಕೈಯಲ್ಲಿ ಕಾಸಿಲ್ಲದಿದ್ದರೂ, ಸ್ನೇಹಿತರಿಂದ ಸಾಲ ಪಡೆದಾದರೂ ಖರ್ಚು ಮಾಡಿಯೇ ತೀರುತ್ತೀವೆ.

ಮನುಷ್ಯ ತನ್ನ ದುರಭ್ಯಾಸಗಳಿಗೆ ಸಾಲ ಮಾಡಿದಷ್ಟು, ಅಗತ್ಯದ ವಸ್ತುಗಳ ಖರೀದಿ ಬಗೆಗಿನ ಖರ್ಚಿಗಾಗಿ ಮಾಡುವುದಿಲ್ಲ. ಆದರೆ ತನ್ನ ಸಂಸಾರದ ಸದಸ್ಯರು ಏನಾದರೂ ಬೇಡಿಕೆ ಮುಂದಿಟ್ಟಾಗ, ಅದರ ಬಗ್ಗೆ ಯೋಚನೆ ಮಾಡಿ, ಗಹನವಾದ ಚಿಂತನೆ ಮಾಡಿ, ಬಹಳಷ್ಟು ಲೆಕ್ಕಾಚಾರ ಮಾಡಿ, ಅತ್ಯಂತ ಕಷ್ಟದಿಂದ ಖರ್ಚು ಮಾಡುತ್ತಾನೆ. ತಾನು ಎಷ್ಟು ಕಷ್ಟದಿಂದ ಖರೀದಿ ಮಾಡುತ್ತಿದ್ದೇನೆ ಅನ್ನುವುದನ್ನು ಬೇಡಿಕೆ ಮುಂದಿಟ್ಟವರಿಗೆ ಮನದಟ್ಟು ಮಾಡುವ ಪ್ರಯತ್ನ ಕೂಡ ಮಾಡಿರುತ್ತಾನೆ. ಇದೇಕೆ ಹೀಗೆ?
***********


ಸಂಕುಚಿತ ಮನೋಭಾವದವರಿಗೆ ವರಸೆಯಾದ ವಡ್ಡರ್ಸೆ ವೇದಿಕೆ!

19 ಮೇ 12

ಕಳೆದ ಭಾನುವಾರ, ಬೆಂಗಳೂರಿನ ಯವನಿಕಾ ಸಭಾಭವನದಲ್ಲಿ, ವಡ್ಡರ್ಸೆ ರಘುರಾಮ ಶೆಟ್ಟಿ ಪ್ರತಿಷ್ಠಾನದ ಉದ್ಘಾಟನಾ ಸಮಾರಂಭವಿತ್ತು. ಸಭಿಕನಾಗಿ, ನಾನೂ ಆ ಸಮಾರಂಭದಲ್ಲಿ  ಉಪಸ್ಥಿತನಿದ್ದೆ.  ದಿವಂಗತ ವಡ್ಡರ್ಸೆ ರಘುರಾಮ ಶೆಟ್ಟಿಯವರನ್ನು ತೀರ ಹತ್ತಿರದಿಂದ ಅರಿತಿದ್ದ ನನಗೆ ಅವರ  ಮೇಲಿದ್ದ  ಅಭಿಮಾನ, ಹೆಚ್ಚಿನ ನಿರೀಕ್ಷೆಗಳೊಂದಿಗೆ ಅಲ್ಲಿಗೆ ಕರೆದೊಯ್ದಿತ್ತು. ಆದರೆ, ಅಲ್ಲಿಂದ ಸಭೆ ಮುಗಿಯುವ ಮೊದಲೇ ಹೊರ ನಡೆದು ಬಂದ ನನ್ನ ಮನದಲ್ಲಿ, ನಿರಾಸೆ ಹಾಗೂ ಬೇಸರ ಮೂಡಿತ್ತು.

ದಿವಂಗತ ವಡ್ಡರ್ಸೆ ರಘುರಾಮ ಶೆಟ್ಟಿಯವರನ್ನು ನೆನೆಸಿಕೊಂಡರೆ, ಅವರ ಜೊತೆ ಜೊತೆಗೇ ನೆನಪಾಗುವುದು ಎರಡು ವಿಷಯಗಳು. ಮೊದಲನೆಯದಾಗಿ ಪ್ರಜಾವಾಣಿ ದಿನಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾಗುತ್ತಿದ್ದ ಅವರ ಅಂಕಣ  “ಸದನ ಸಮೀಕ್ಷೆ”  ಹಾಗೂ ೧೯೮೦ರ ದಶಕದ ಮಧ್ಯಕಾಲದಲ್ಲಿ ಮಂಗಳೂರಿನಿಂದ ಪ್ರಕಟವಾಗುತ್ತಿದ್ದ, ಓದುಗರ ಒಡೆತನದ,   “ಮುಂಗಾರು” ದಿನ ಪತ್ರಿಕೆ. ಶಾಸನ ಸಭೆಗಳು ನಡೆಯುವ ದಿನಗಳಲ್ಲಿ, ದಿನವಿಡೀ ಸದನದ ಪತ್ರಕರ್ತರ ಗ್ಯಾಲರಿಯಲ್ಲಿ ಕೂತು, ಅಲ್ಲಿನ ಆಗುಹೋಗುಗಳನ್ನು ಮೂಕ ಪ್ರೇಕ್ಷಕಕನಾಗಿ ವೀಕ್ಷಿಸಿ, ಸಾಯಂಕಾಲದ ನಂತರ ಪ್ರಜಾವಾಣಿಯ ಕಛೇರಿಗೆ ಮರಳಿ, ಅಂದಿನ ವರದಿಯನ್ನು  ಬರೆದು ಒಪ್ಪಿಸಿ ಬರುವಾಗ ಕೆಲವೊಮ್ಮೆ ಮಧ್ಯರಾತ್ರಿ ಕಳೆದಿರುತ್ತಿತ್ತೇನೋ. ಸದನ ಸಮೀಕ್ಷೆಯಲ್ಲಿ ವಡ್ಡರ್ಸೆಯವರು, ರಾಜಕೀಯ ನಾಯಕರನ್ನು ಹೆಸರಿಸಲು ಬಳಸುತ್ತಿದ್ದ ಸಂಕ್ಷಿಪ್ತ ಪದಗಳು ಓದುಗರನ್ನು ಆಕರ್ಷಿಸುತ್ತಿದ್ದವು. ವಸ್ತುನಿಷ್ಠವಾದ ಹಾಗೂ ನಿಷ್ಟುರವಾದ ನೇರ ನುಡಿಯ ಸಮೀಕ್ಷೆ ಪ್ರಕಟವಾಗುತ್ತಿದ್ದ ಆ ದಿನಗಳಲ್ಲಿ, ವಡ್ಡರ್ಸೆಯವರು  ಅಧಿಕಾರಾರೂಢ ಪಕ್ಷದ ಸದಸ್ಯರ ಹಾಗೂ ಮಂತ್ರಿಗಳ ಕೆಂಗಣ್ಣಿಗ ಗುರಿಯಾಗಿದ್ದರು. ಹಾಗಾಗಿ, ಅವರ ಮನೆಯಲ್ಲಿ ಹಲವಾರು ದಿನ ಪೊಲೀಸ್ ಬಂದೋಬಸ್ತು ಕೂಡ ಇತ್ತು. ಇಂದು ಅಂತಹ ನೇರ ನುಡಿಯ ಪತ್ರಕರ್ತರು ಎಷ್ಟಿದ್ದಾರೆ? ಎಲ್ಲಿದ್ದಾರೆ?

ಇನ್ನು ಮುಂಗಾರು ಪತ್ರಿಕೆಯ ಯಶೋಗಾಥೆಯನ್ನು ಅಥವಾ ದುರಂತವನ್ನು, ವಡ್ಡರ್ಸೆಯವರೊಂದಿಗೆ ಮುಂಗಾರು ಪತ್ರಿಕೆಯಲ್ಲಿ ದುಡಿದಿದ್ದ, ಪತ್ರಕರ್ತ ಚಿದಂಬರ ಬೈಕಂಪಾಡಿಯವರು ಬರೆದಿರುವ ಹೊತ್ತಗೆಯಲ್ಲಿ ವಿವರವಾಗಿ ಓದಬಹುದು.

ಅಂದು “ವರಶೆ” ಪ್ರತಿಷ್ಠಾನದ ಉದ್ಘಾಟನೆಯ ಔಪಚಾರಿಕ ಸಮಾರಂಭ ಐದು ನಿಮಿಷಗಳಲ್ಲಿ ಮುಗಿದು ಹೋಗಿತ್ತು. ಆ ನಂತರದ ಮತ್ತಷ್ಟೇ ನಿಮಿಷಗಳಲ್ಲಿ, ವಡ್ಡರ್ಸೆಯವರ ನೆನಪೂ ಅಲ್ಲಿಂದ ಮರೆಯಾಗಿ ಹೋಗಿತ್ತು. ಮುಂದೆ ಅಲ್ಲಿ ನಡೆದದ್ದು “ಹಿಂದುಳಿದ ವರ್ಗಗಳ ಸಮಸ್ಯೆಗಳು ಹಾಗೂ ಪರಿಹಾರಗಳು” ಎನ್ನುವ ವಿಷಯದ ಮೇಲಿನ ಭಾಷಣ ಹಾಗೂ ಸಂವಾದ.

ಮೊದಲು ಮಾತನಾಡಿದ, ಆಂಧ್ರಪ್ರದೇಶದಿಂದ ಬಂದಿದ್ದ, ಈ ದೇಶದ ಪ್ರಸಿದ್ಧ ದಲಿತ ಸಾಹಿತಿ ಹಾಗೂ ಬುದ್ಧಿಜೀವಿ ಎಂದು ಗುರುತಿಸಿಕೊಂಡಿರುವ, ಶ್ರೀ ಕಾಂಚ ಇಲಯ್ಯ ಅವರು, ತಮ್ಮ ಭಾಷಣದುದ್ದಕ್ಕೂ, ನನ್ನಂತಹ ತೆರೆದ ಮನಸ್ಸಿನ ಸಭಿಕರಿಗೆ ಅತೀವ ನಿರಾಸೆ ಉಂಟು ಮಾಡಿದರು. ಹಿಂದುಳಿದ ವರ್ಗಗಳ ಯಾವತ್ತೂ ಸಮಸ್ಯೆಗಳಿಗೆ, ಅವರನ್ನೆಲ್ಲಾ ಶತಮಾನಗಳಿಂದಲೂ ಹಿಂದೂ ಧರ್ಮ ವ್ಯವಸ್ಥೆಯಲ್ಲಿ, ಬ್ರಾಹ್ಮಣರ ಕಾಲುಬುಡದಲ್ಲಿ   ಇಟ್ಟಿರುವುದೊಂದೇ ಕಾರಣವಾಗಿದೆ ಎನ್ನುವ ವೇದವಾಕ್ಯದೊಂದಿಗೆ ಆರಂಭಿಸಿ, ತಮ್ಮ ಭಾಷಣದುದ್ದಕ್ಕೂ  ಬ್ರಾಹ್ಮಣ ಜಾತಿಯನ್ನೇ ವಿರೋಧಿಸುತ್ತಾ ಸುದೀರ್ಘವಾಗಿ ಮಾತನಾಡಿದರು. ಇದು ಅಲ್ಲಿದ್ದ ನನ್ನಂತಹ ಸಭಿಕರಿಗಷ್ಟೇ ಅಲ್ಲದೆ ವೇದಿಕೆಯಲ್ಲಿ ಅಂದು ಸಭಾಧ್ಯಕ್ಷರಾಗಿ  ಆಸೀನರಾಗಿದ್ದ, ವಿಧಾನ ಪರಿಷತ್ತಿನ ಮಾಜಿ ಸಭಾಪತಿ  ಸುದರ್ಶನ್ ಅವರಿಗೂ ಕಿರಿಕಿರಿ ಉಂಟುಮಾಡಿತ್ತು. ಅವರ ಭಾಷಣ ಮುಗಿಯುವ ಹೊತ್ತಿಗಾಗಲೇ, ದುರ್ಬಲ ಮನಸ್ಸಿನ ಕೆಲವು ಸಭಿಕರ ಮನಗಳೊಳಗೆ, ಒಂದು ರೀತಿಯ ಬ್ರಾಹ್ಮಣ ವಿರೋಧಿಭಾವ ಚಿಗುರೊಡೆಯಲು ಕಾಲಕೂಡಿಬಂದಿತ್ತು. ಬುದ್ಧಿಜೀವಿ ಅನಿಸಿಕೊಂಡಿರುವ ಕಾಂಚ ಇಲಯ್ಯನವರು ತಮ್ಮ ಉದ್ದೇಶ ಏನು ಅನ್ನುವುದನ್ನು ಸಭಿಕರಿಗೆ ಮನದಟ್ಟುಮಾಡುವಲ್ಲಿ ವಿಫಲರಾಗುತ್ತಲೇ ಸಾಗಿದ್ದರು. ಹಿಂದುಳಿದ ವರ್ಗಗಳ ಮುಂದಿನ ನಡೆ ಬ್ರಾಹ್ಮಣರ ವಿರುದ್ಧ ಯುದ್ಧವನ್ನೇ ಸಾರುವುದು ಎನ್ನುವ ತಮ್ಮ ನಿಲುವನ್ನು ಅವರು ಅಂದು ಘಂಟಾಘೋಷವಾಗಿ ಸಾರಿ ಬಿಟ್ಟಿದ್ದರು. ರಾಮ ಮನೋಹರ್ ಲೋಹಿಯಾರನ್ನು ಬಾಯಿ ತುಂಬಾ ಜರೆದರು. ಅವರ ಕಹಿನುಡಿಗಳಿಗೆ ತುತ್ತಾಗದ ಮೆಲ್ವರ್ಗದ ನಾಯಕರುಗಳೇ ಉಳಿದಿರಲಿಲ್ಲ. ಎಲ್ಲರೂ ತಪ್ಪು. ಯಾರೂ ಸರಿಯಿಲ್ಲ. ಹಿಂದುಳಿದ ವರ್ಗಗಳ ನಾಯಕರೆನಿಸ್ಕೊಂಡ ಬಾಬಾ ಸಾಹೇಬ್ ಅಂಬೇಡ್ಕರ್, ಮಹಾತ್ಮಾ ಫುಲೆ ಹಾಗೂ ತಾನು ಮಾತ್ರ ಸರಿ ಎನ್ನುವ ಅವರ ವಾದ ನನಗಂತೂ ಅಪ್ರಬುದ್ಧ ಅನಿಸಿತ್ತು. ಬ್ರಾಹ್ಮಣರು ಅರ್ಚಕರಾಗಿರುವ ದೇವಸ್ಥಾನಗಳಲ್ಲಿ, ತನ್ನಂತಹ ಹಿಂದುಳಿದ ವರ್ಗಗಳ ಜನರಿಗೆ ಅರ್ಚಕ ಹುದ್ದೆ ನೀಡಿ ಎಂದು ಬೇಡಿಕೆ ಇಟ್ಟ ಅವರ ಬಗ್ಗೆ ಹೇಸಿಗೆ ಆಗಿತ್ತು.ದೇವರ ಮತ್ತು ಮಾನವರ ನಡುವೆ ಮಧ್ಯವರ್ತಿಗಳಾಗಿರುವ ಪುರೋಹಿತಶಾಹಿ ವರ್ಗ ಎಲ್ಲಾ ಮತ ಧರ್ಮಗಳಲ್ಲೂ ಇದೆ. ಅದಕ್ಕೂ ಬ್ರಾಹ್ಮಣ ಜಾತಿಗೂ ಸಂಬಂಧ ಕಲ್ಪಿಸಿ ಜಾತಿ ನಿಂದನೆ ಮಾಡುತ್ತಾ ಸಾಗಿದರೆ ಏನಾದೀತು, ಹೇಳಿ. ಹಿಂದುಳಿದ ವರ್ಗದ ಜನಗಳ ಮನಸ್ಸು ಕಲುಷಿತಗೊಂಡಾವು, ಅಷ್ಟೇ. ಸಮಸ್ಯೆಯನ್ನು ಉದೇಶಿಸಿ ಪರಿಹಾರ ಮಾರ್ಗ ಹುಡುಕಬೇಕೇ ಹೊರತು, ವ್ಯಕ್ತಿಗಳನ್ನು ಜಾತಿಗಳನ್ನು ಉದ್ದೇಶಿಸಿಕೊಂಡು ಹುಡುಕಿದರೆ, ಪರಿಹಾರವೊಂದು ಮರೀಚಿಕೆ ಆದೀತು..

ಅವರ ಭಾಷಣ ಮುಗಿದ ಕೂಡಲೇ ಎದ್ದು ಹೊರನಡೆಯಬೇಕೆಂಬ ಇಚ್ಛೆ ಇದ್ದಿತ್ತಾದರೂ, ಮುಂಗಾರು ಪತ್ರಿಕೆಯಲ್ಲಿ ಶೆಟ್ಟರ ಸಹೋದ್ಯೋಗಿಗಳಾಗಿದ್ದ ದಿನೇಶ್ ಅಮೀನ್ ಮಟ್ಟು ಹಾಗೂ ಇಂದೂಧರ ಹೊನ್ನಾಪುರ ಅವರಿಂದ ಶೆಟ್ಟರ ಬಗ್ಗೆ ಬರಬಹುದಾದ ಮಾತುಗಳ ನಿರೀಕ್ಷೆ ಇತ್ತು ನನಗೆ. ಹಾಗಾಗಿ ಕೂತು ಬಿಟ್ಟೆ. ದಿನೇಶ ಅಮೀನ್ ನನ್ನ ನಿರೀಕ್ಷೆಯಂತೆ ಶೆಟ್ಟರ ಬಗ್ಗೆ ಮನ ಮುಟ್ಟುವಂತೆ ಮಾತನಾಡಿ, ತನ್ನ ಇಂದಿನ ಸ್ಥಿತಿಗತಿಗೆ ಕಾರಣೀಭೂತರಾದ ಶೆಟ್ಟರನ್ನು ನೆನೆದು ಶ್ರದ್ಧಾಂಜಲಿ ಅರ್ಪಿಸಿದರು. ತಮ್ಮ ಮಾತನ್ನು ಮುಂದುವರಿಸುತ್ತಾ, ಕಾಂಚ ಇಲಯ್ಯನವರು ಹುಟ್ಟುಹಾಕಿದ್ದ ಕ್ರಾಂತಿಯ ವಾತಾವರಣವನ್ನು ಸಾಕಷ್ಟು ಶಾಂತಗೊಳಿಸುವಲ್ಲಿ ಸಫಲರಾದರು. ಮಧ್ಯವರ್ತಿಗಳು ಬೇಡವಾದರೆ, ಬ್ರಾಹ್ಮಣರು ಅರ್ಚಕರಾಗಿರುವ ದೇವಸ್ಥಾನಗಳನ್ನು ಬಹಿಷ್ಕರಿಸಿ, ಅವರ ದೇವಸ್ಥಾನಗಳಲ್ಲಿ ಅರ್ಚಕ ಹುದ್ದೆ ನೀಡಿ ಎಂಬ ಬೇಡಿಕೆ ಇಡುವ ಅಗತ್ಯ ಏನಿದೆ ಎಂದು ಕೇಳುತ್ತಾ, ಕಾಂಚ ಇಲಯ್ಯನವರ ಮಾತುಗಳಿಗೆ ತಮ್ಮ ವಿರೋಧ ವ್ಯಕ್ತಪಡಿಸಿದರು. ಅಲ್ಲಿಗೆ ನಮ್ಮೀರ್ವರಿಗೂ ಸ್ವಲ್ಪ ಸಮಾಧಾನ ಆಯ್ತು. ಅಷ್ಟು ಸಾಕು ಎಂದು ಅಲ್ಲಿಂದ ಎದ್ದು ಬಂದೆವು.

ದಿನೇಶ್ ಅಮೀನರ ಮಾತುಗಳು ನನಗೆ ಸಮಾಧಾನ ನೀಡಲು ನನ್ನದೇ ಆದ ಕಾರಣಗಳಿವೆ. ಅದೇನೆಂದರೆ ಜೀವನದಲ್ಲಿ ನಾನು ತಾಳಿರುವ ನಿಲುವು ಹಾಗೂ ಪಾಲಿಸಿಕೊಂಡು ಬಂದಿರುವ ನನ್ನದೇ ಆದ ತತ್ವವೂ ಅದೇ ಆಗಿದೆ. ನನಗೆ ಒಪ್ಪಿಗೆ ಇಲ್ಲವಾದರೆ, ದೂರ ಇದ್ದು ಬಿಡೋದು ಅಷ್ಟೇ. ಮೂರ್ತಿ ಪೂಜೆ, ಇನ್ನಿತರ ಯಾವುದೇ ಪೂಜೆಯನ್ನು ಒಪ್ಪದ ನಾನು ದೇವಸ್ಥಾನಗಳಿಗೆ ದೇವರನ್ನು ಅರಸುತ್ತಾ ಭೇಟಿ ನೀಡಿ ವರ್ಷಗಳು ಬಹುಶಃ  ನಲತ್ತರ ಮೇಲಾಗಿವೆ. ದೇವರ ಮತ್ತು ನನ್ನ ನಡುವೆ ಯಾವುದೇ ಮಧ್ಯವರ್ತಿಗಳನ್ನು ನಾನು ಒಪ್ಪುವುದಿಲ್ಲ. ಮಂತ್ರ, ಪೂಜೆ, ಹವನ ಹೋಮಗಳಿಗೆ ನನ್ನ ಮನ ಒಪ್ಪುವುದಿಲ್ಲ. ಪ್ರಾಥಮಿಕ ಶಾಲಾದಿನಗಳಲ್ಲಿ ಓದಿದ್ದ, ಮಾತಾಪಿತರುಗಳೇ ಈ ಭೂಮಿಯ ಮೇಲಿನ ದೇವರುಗಳು,  ದೇವರು ಸರ್ವಂತರ್ಯಾಮಿ ಮತ್ತು  ಪರೋಪಕಾರ ಹಾಗೂ  ಧರ್ಮ ಬದ್ಧವಾಗಿ ನಾವು ನಿರ್ವಹಿಸುವ ಕರ್ತವ್ಯಗಳೇ ಆ ದೇವರಿಗೆ ಸಲ್ಲಿಸುವ ಪೂಜೆಯಾಗಿದೆ, ಎನ್ನುವ ಮಾತುಗಳನ್ನು, ಪೂರ್ತಿಯಾಗಿ ನಂಬಿ ಅದರಂತೆಯೇ ಬಾಳಿಕೊಂಡು ಬಂದವನು ನಾನು. ಕಷ್ಟ ಬಂದಾಗ ದೇವರನ್ನು ನಾನು ದೂಷಿಸುವುದಿಲ್ಲ. ನನ್ನ ಕಷ್ಟ ಸುಖಗಳಿಗೆ ನನ್ನ ಕರ್ಮವೇ ಕಾರಣ ಎಂದು ದೃಢವಾಗಿ ನಂಬಿರುವವನು ನಾನು.

ಈ ಪ್ರತಿಷ್ಠಾನದ ಬಗ್ಗೆ ಕೆಲವು ಒಳ್ಳೆಯ ಅಂಶಗಳಿವೆ. ಈ ಪ್ರತಿಷ್ಠಾನ ಸಾರ್ವಜನಿಕರಿಂದ ಅಥವಾ ಸರಕಾರ ಅಥವಾ ಖಾಸಗಿ  ಸಂಸ್ಥೆಗಳಿಂದ ಯಾವುದೇ ದೇಣಿಗೆಯನ್ನು ಸ್ವೀಕರಿಸುವುದಿಲ್ಲ. ಬದಲಾಗಿ,  ವಡ್ಡರ್ಸೆಯವರ ಕೃತಿಗಳನ್ನು ಮುದ್ರಿಸಿ ಮಾರಾಟ ಮಾಡುವುದರಿಂದ ಗಳಿಸುವ ಧನ ಹಾಗೂ ಅವರ ಮೂರು ಗಂಡು ಮಕ್ಕಳು ತಮ್ಮ ನ್ಯಾಯಸಮ್ಮತವಾದ ಆದಾಯದಿಂದ ನೀಡುವ ದೇಣಿಗೆಯನ್ನು ಮಾತ್ರ ಸ್ವೀಕರಿಸಿ ನಡೆಸಲ್ಪಡುವ ಉತ್ತಮ ಉದ್ದೇಶವನ್ನು ಹೊಂದಿದೆ.  ವಡ್ಡರ್ಸೆಯವರ ಮೂರು ಗಂಡು ಮಕ್ಕಳೂ ಸದ್ಯ ಹೊರದೇಶಗಳಲ್ಲಿ ಉನ್ನತ ವ್ಯಾಸಂಗ ಹಾಗೂ ನೌಕರಿಯಲ್ಲಿದ್ದಾರೆ. ಅವರಲ್ಲಾರೂ ಈ ಪ್ರತಿಷ್ಠಾನದ ಸದಸ್ಯರಾಗಿ ಇರುವುದಿಲ್ಲ. ವಡ್ಡರ್ಸೆಯವರೊಂದಿಗೆ  ಗುರುತಿಸಿ ಕೊಂಡಿದ್ದ, ಡಾ ಪುಟ್ಟಸ್ವಾಮಿ, ದಿನೇಶ ಅಮೀನರಂತಹ ಹಲವು ಪ್ರತಿಷ್ಠಿತ ವ್ಯಕ್ತಿಗಳಷ್ಟೇ ಅಲ್ಲಿ ಇರುತ್ತಾರೆ.

ಆದರೆ, ಪ್ರತಿಷ್ಠಾನ ಕೇವಲ ಬ್ರಾಹ್ಮಣ ವಿರೋಧಿ ನಿಲುವಿಗೇ ಅಂಟಿಕೊಂಡು ಬಿಟ್ಟರೆ, ಬರಿಯ ಹಿಂದುಳಿದ ವರ್ಗಗಳ ಸಮಸ್ಯೆಗಳಿಗೇ  ಜೋತುಹಾಕಿಕೊಂಡು ಬಿಟ್ಟರೆ,  ಮುಂದಿನ ದಿನಗಳಲ್ಲಿ, ಒಂದು ರೀತಿಯ ಸಾಮಾಜಿಕ ಧ್ರುವೀಕರಣಕ್ಕೆ ಹಾಗೂ ಯುವಜನತೆಯ ಮಾನಸಿಕ ಗೊಂದಲಕ್ಕೆ ಕಾರಣವಾದೀತೇ ಎನ್ನುವ ಅನುಮಾನ ಇದ್ದೇ ಇದೆ. ಆ ದಿಟ್ಟ, ನೇರ ನುಡಿಯ ವಡ್ಡರ್ಸೆ ರಘುರಾಮ ಶೆಟ್ಟರ ನೆನಪು ಕೇವಲ ಕೆಲವು ಸಮಾಜ ವಿರೋಧಿ ವ್ಯಕ್ತಿಗಳ ಕೈಗೊಂಬೆಯಾಗಿ ಉಳಿದುಬಿಡಬಹುದೇನೋ ಎನ್ನುವ   ಭಯ ನನಗೆ. ಅದರಿಂದಾಗಿ ಅಂದು ಒಂದು ರೀತಿಯ ನಿರಾಸೆ ಹಾಗೂ ಬೇಸರವಾಗಿತ್ತು. ಸಾಂಪ್ರದಾಯಿಕವಾಗಿ ಪ್ರೌಢಶಾಲಾ ಶಿಕ್ಷಣವನ್ನಷ್ಟೇ ಪಡೆದಿದ್ದ, ವಡ್ಡರ್ಸೆಯವರು ಕನ್ನಡ ಹಾಗೂ ಆಂಗ್ಲ ಭಾಷೆಗಳೆರಡರ ಮೇಲೂ ಹಿಡಿತ ಸಾಧಿಸಿ, ಆಂಗ್ಲದ ಡೆಕ್ಕನ್ ಹೆರಲ್ಡ್ ಹಾಗೂ ಕನ್ನಡದ ಪ್ರಜಾವಾಣಿ ಪತ್ರಿಕೆಗಳೆರಡರಲ್ಲೂ ದುಡಿದು ಪ್ರಸಿದ್ಧರಾಗಿದ್ದು ಅವರ ಕರ್ತವ್ಯ ನಿಷ್ಠೆ ಹಾಗೂ ಸಾಧನಾ ಮನೋಭಾವವನ್ನು ಬಿಂಬಿಸುತ್ತದೆ. ಅಂತಹ  ವಡ್ದರ್ಸೆಯವರನ್ನು ಓರ್ವ ಧೀಮಂತ ಪತ್ರಕರ್ತನಾಗಿ ಗುರುತಿಸಿ ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಿ ಉಳಿಸಬೇಕಾದ ಆವಶ್ಯಕತೆ ಇದೆ. ಅದು ಬಿಟ್ಟು, ಹಿಂದುಳಿದ ಮತ್ತು ದಲಿತ ವರ್ಗಗಳ ಸಮಸ್ಯೆಗಳಿಗಷ್ಟೇ ಪ್ರತಿಷ್ಠಾನದ ಉದ್ದೇಶಗಳನ್ನು ಸೀಮಿತಗೊಳಿಸಿ,  ವಡ್ಡರ್ಸೆ ಯವರನ್ನು ಓರ್ವ ಬ್ರಾಹ್ಮಣ ವಿರೋಧೀ ಖಳನಾಯಕನನ್ನಾಗಿ ಬಿಂಬಿಸಿ ಶಾಶ್ವತವಾಗಿ ಉಳಿಸಿಬಿಟ್ಟರೆ, ಅದಕ್ಕಿಂತ ದೊಡ್ಡ ದುರಂತ ಅಥವಾ ವಿಶ್ವಾಸಘಾತಕ ಕೆಲಸ ಇನ್ನೊಂದಿರದು!

ವೈಕುಂಠವಾಸಿಯಾಗಿರುವ ವಡ್ಡರ್ಸೆಯವರ ಆತ್ಮವೇ ಪ್ರತಿಷ್ಠಾನದ ಮುಂದಾಳುಗಳಿಗೆ ಮಾರ್ಗದರ್ಶನ ನೀಡುತ್ತಾ ಮುಂದುವರೆಸಲಿ ಎನ್ನುವುದಷ್ಟೇ ಈಗ ಈ ಮನದ ಆಶಯ!

*********


ಮಾತುಗಳು ಕೇಳುಗರ ನೆನಪಲ್ಲಿ ಸದಾ ಉಳಿಯುವಂತಿರಬೇಕು!

05 ಮೇ 12

ನಾವು ಅನ್ಯರಿಗೆ ಇಷ್ಟವಾಗುವುದು ನಮ್ಮ ಮಾತುಗಳಿಂದ. ನಾವು ಬರಹಗಾರರಾಗಿದ್ದರೆ ನಮ್ಮ ಬರಹಗಳಲ್ಲಿ ನಾವು ವ್ಯಕ್ತಪಡಿಸುವ ಭಾವಗಳಿಂದಾಗಿ, ನಾವು ಆರಿಸುವ ವಿಷಯಗಳಿಂದಾಗಿ ಹಾಗೂ ನಮ್ಮ ಮಾತು ಅಥವಾ ಬರಹಗಳಲ್ಲಿ ನಾವು ಪದಗಳನ್ನು  ಬಳಸುವ ಶೈಲಿಯಿಂದಾಗಿ. ಕೇಳುಗರಿಗೆ ಅಥವಾ  ಓದುಗರ ಮನಕ್ಕೊಪ್ಪುವಂತೆ,   ಹೆಚ್ಚು ಹೆಚ್ಚು  ಆಪ್ತವಾಗಿ ಒಪ್ಪಿಸುವ ನಮ್ಮೊಳಗಿನ ಕಲೆಯಿಂದಾಗಿ.

ಇಲ್ಲೋರ್ವನ ಉದಾಹರಣೆ ಇದೆ. ಆತ  ತನ್ನ ವೃತ್ತಿಯಲ್ಲಿ  ಒಳ್ಳೆಯ ಸಾಧನೆ ಮಾಡಿ ಪ್ರಖ್ಯಾತನಾಗಿರುವುದರ ಜೊತೆಗೇ, ಹವ್ಯಾಸಿ ಭಾಷಣಕಾರನಾಗಿಯೂ ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸಿರುತ್ತಾನೆ. ವಿವಿಧ ಸಮಾರಂಭಗಳಿಗೆ ಕರೆಸಿ ಆತನಿಂದ ಭಾಷಣ ಏರ್ಪಡಿಸುವವರೂ ಇದ್ದಾರೆ. ಆತನ  ಮಗ ವಿದ್ಯಾಭ್ಯಾಸ ಮಾಡುತ್ತಿರುವ ಶಾಲೆಯಲ್ಲಿ, ಗಣತಂತ್ರ ದಿವಸದಂದು ಧ್ವಜಾರೋಹಣ ಮಾಡಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡಲು ಆತನನ್ನು ಕರೆಸಿದ್ದರು. ಭಾಷಣ ಮಾಡಲು ಸಿಗುವ ಯಾವುದೇ ಅವಕಾಶವನ್ನು ಸುಲಭದಲ್ಲಿ, ಕಾರಣವಿಲ್ಲದೇ  ಬಿಡಲೊಲ್ಲದ ಆತ, ಒಪ್ಪಿಕೊಂಡು ಹೋಗಿದ್ದ. ಅಂದು  ಧ್ವಜಾರೋಹಣ ಮಾಡಿ ಮುಗಿಸಿ,  ಭಾಷಣ ಆರಂಭಿಸಿದಾಗ, ಆ ಶಾಲೆಯ ಒಂದನೇ ತರಗತಿಯಿಂದ ಹತ್ತನೇ ತರಗತಿವರೆಗಿನ ವಿದ್ಯಾರ್ಥಿಗಳು, ಆತನ ಮುಂದೆ ಆಸೀನರಾಗಿ, ಆತನ ಮಾತುಗಳಿಗೆ ಕಿವಿಕೊಡುತ್ತಿದ್ದರು. ಆತನ ವಾಗ್ಝರಿಗೆ ಮೈಮರೆತ ಮಕ್ಕಳಿಗೆ ಸಮಯದ ಪರಿವೆಯೇ ಇರಲಿಲ್ಲ. ರಾಷ್ಟ್ರ ಪ್ರೇಮದ ಮಾತಿನಿಂದ ಶುರುವಾದ ಆತನ ಭಾಷಣ, ಕತೆ ಉಪಕತೆಗಳೊಂದಿಗೆ ಮುಂದುವರೆದು, ಮುಗಿದಾಗ, ಅಲ್ಲಿ ನೆರೆದಿದ್ದ ವಿದ್ಯಾರ್ಥಿಗಳನ್ನು ಹಾಗೂ ಅಧ್ಯಾಪಕ ವೃಂದವನ್ನು ಮಂತ್ರ ಮುಗ್ಧರನ್ನಾಗಿಸಿ, ಇನ್ನಾವುದೋ ಲೋಕಕ್ಕೆ ಕೊಂಡೊಯ್ದುಬಿಟ್ಟಿತ್ತು. ಅಂದು ಶಾಲೆಯಿಂದ ಮನೆಗೆ ತೆರಳಿದ ಮಕ್ಕಳು ತಮ್ಮ ತಾಯಿ ತಂದೆಯವರಿಗೆ ಒಪ್ಪಿಸಿದ ವರದಿಯಿಂದಾಗಿ, ಸಂಜೆಯೊಳಗಾಗಿ ಸುತ್ತಮುತ್ತಲಿನ ನಾಲ್ಕು ಊರುಗಳಲ್ಲಿ ಆತ ಮನೆಮಾತಾಗಿ ಹೋಗಿಬಿಟ್ಟಿದ್ದ.  ಇದಕ್ಕೆಲ್ಲಾ ಕಾರಣ ಸಂದರ್ಭವನ್ನು ಅರಿತು, ನೆರೆದ ಸಭಿಕರ ಮನದಿಂಗಿತವನ್ನು ತಿಳಿದು, ಅವರಿಗೆ ಅರ್ಥವಾಗುವ ಭಾಷೆಯಲ್ಲಿ, ಶೈಲಿಯಲ್ಲಿ ಮಾತನಾಡುವ ಆತನ ಕಲೆ.

ಇಲ್ಲಿ ನಾನು ಭಾಷೆ ಎನ್ನುವಾಗ, ಅದನ್ನು  ಕನ್ನಡ, ಹಿಂದಿ ಅಥವಾ ಆಂಗ್ಲ ಎನ್ನುವ ಅರ್ಥದಲ್ಲಿ ಬಳಸಿಲ್ಲ. ಕನ್ನಡವೇ ಆಗಿರಲಿ ಅಥವಾ ಇನ್ನಾವುದೇ ಅನ್ಯ ಭಾಷೆಯೇ ಆಗಿರಲಿ, ಅದರಲ್ಲಿ ಹಲವು ವಿಧಗಳಿವೆ. ಹಳ್ಳಿಯಲ್ಲಿ ಆಡುವ ಭಾಷೆಗೂ, ಪಟ್ಟಣದಲ್ಲಿ ಆಡುವ ಭಾಷೆಗೂ ನಡುವೆ ವ್ಯತ್ಯಾಸ ಇದೆ. ಮಕ್ಕಳು ಬಳಸುವ ಭಾಷೆಗೂ, ಹಿರಿಯರು ಬಳಸುವ ಭಾಷೆಗೂ ವ್ಯತ್ಯಾಸ ಇದೆ. ಹಾಗಾಗಿ, ನಾವು ಯಾರನ್ನು ಉದ್ದೇಶಿಸಿ ಮಾತನಾಡುತ್ತಿದ್ದೇವೆ, ಯಾವ ಮಟ್ಟದ ಭಾಷೆಯಲ್ಲಿ, ಯಾವ ವಿಷಯದ ಕುರಿತು ಮಾತನಾಡಿದರೆ ನೆರೆದ ಸಭಿಕರಿಗೆ  ಅರ್ಥವಾದೀತು ಎನ್ನುವ ಅರಿವು ಇರಿಸಿಕೊಂಡು, ಮಾತನಾಡಿದರೆ, ಅದು ಶತ ಪ್ರತಿ ಶತ ಪ್ರಯೋಜನಕಾರಿಯಾದೀತು, ಪ್ರತಿ ಮನವನ್ನೂ ಮುಟ್ಟೀತು.

ಸಂದರ್ಭವನ್ನು ಅರಿಯದೇ, ಸಿಕ್ಕ ಅವಕಾಶವನ್ನು ತನ್ನ ಮನಸ್ಥಿತಿ, ತನ್ನ ಸ್ವಂತದ ನಿಲುವು ಅಥವಾ ತನ್ನ ಸ್ವಹಿತಾಸಕ್ತಿಯನ್ನು ಗುರಿಯಾಗಿಟ್ಟುಕೊಂಡು, ಅಸಂಬದ್ಧವಾಗಿ, ಮಾತನಾಡಲು ಆರಂಬಿಸಿದರೆ, ನೆರೆದ ಸಭಿಕರಿಗೆ ಕಿರಿಕಿರಿ ಉಂಟಾಗಬಹುದು. ಸಭಿಕರು ತಮ್ಮ ಸಂಯಮ ಕಳೆದುಕೊಂಡು ಸಿಟ್ಟಾಗಲೂ ಬಹುದು. ಅಲ್ಲಿನ ವಾತಾವರಣ ಕೆಟ್ಟುಹೋಗಬಹುದು. ಸಂವಾದ ಅಥವಾ ಗೋಷ್ಟಿಯಲ್ಲಿ ಹೀಗಾದರೆ, ಅದು ಅತಿರೇಕವನ್ನು ತಲುಪಬಹುದು. ಕೊನೆಗೆ ಯಾವ ರೂಪವನ್ನು ಪಡೆಯಬಹುದು ಎನ್ನುವುದನ್ನೂ ಊಹಿಸಲಾಗದು.

ಮದುವೆ ಮನೆಯಲ್ಲಿ ವಧೂವರರನ್ನು ಹರಸಲು ಬಂದವರು, ಶುಭಶಕುನದ ಮಾತುಗಳನ್ನು ಆಡಿ, ವಧೂವರರನ್ನು ಹರಸುವ ಬದಲು, ಯಾರೋ ಸ್ವರ್ಗಸ್ಥರಾದ ಕುಟುಂಬದ ಹಿರಿಯರೋರ್ವರ ಗೈರುಹಾಜರಿಯನ್ನು ಅಲ್ಲಿದ್ದವರಿಗೆ  ನೆನಪಿಸಿ, ನೆರೆದಿದ್ದ ಕುಟುಂಬದ ಸದಸ್ಯರನ್ನೆಲ್ಲಾ  ಶೋಕ ಸಾಗರದಲ್ಲಿ ಮುಳುಗಿಸಿ ಹೋದರೆ ಹೇಗಾದೀತು?

ಸ್ವರ್ಗಸ್ಥರಾದವರಿಗೆ ನುಡಿನಮನ ಅರ್ಪಿಸಲು ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಲು ಕರೆಸಲ್ಪಟ್ಟವರು, ದೈವಾಧೀನರಾದವರ ಬಗ್ಗೆ ಒಂದೆರಡು ಮಾತನಾಡಿ ಶ್ರದ್ಧಾಂಜಲಿ ಅರ್ಪಿಸಿ ಹೋಗುವ ಬದಲು, ಅಗತ್ಯಕ್ಕಿಂತ ಹೆಚ್ಚಾಗಿ, ಮೃತರ ಕುಟುಂಬದ ಅಲ್ಲಿರುವ ಇತರ ಸದಸ್ಯರ ನಡುವಿನ ಮನಸ್ತಾಪ, ಆ ಕುಟುಂಬದೊಳಗಿನ ಒಡಕು, ಇವನ್ನೆಲ್ಲಾ, ಏನೂ ಅರಿಯದ ಸಭಿಕರ ಮುಂದೆ ಬಹಿರಂಗಗೊಳಿಸಿ, ಶೋಕಗ್ರಸ್ತ ಕುಟುಂಬದ ಸದಸ್ಯರಿಗೆ ಕಸಿವಿಸಿ ಉಂಟುಮಾಡಿಹೋದರೆ ಹೇಗಾದೀತು?

ನಾವು ಮಾತನಾಡುವಾಗ, ನಮ್ಮ ಮಾತಿನುದ್ದಕ್ಕೂ, ನಾವು ಆರಿಸಿಕೊಂಡಿರುವ ವಿಷಯಕ್ಕೆ ಬದ್ಧರಾಗಿ ಉಳಿದುಕೊಳ್ಳಬೇಕಾದ ಆವಶ್ಯಕತೆ ತುಂಬಾ ಇದೆ. ಭಾಷಣಕಾರರಾಗಿ ನಾವು  ಕೇಳುಗರಿಗೆ ಪ್ರಿಯನಾಗುವುದು, ನಮ್ಮ ವಾಕ್ಚಾತುರ್ಯ, ಸಮಯ ಪ್ರಜ್ಞೆ ಹಾಗೂ ಮಾತನಾಡುವ ಶೈಲಿಯಿಂದಾಗಿ. ಕೆಲವರು ಮಾತು ಆರಂಭಿಸಿ ನಿಮಿಷ ಕಳೆಯುವುದರಲ್ಲೇ ಸಭಿಕರನ್ನು ನಿದ್ರಾಲೋಕಕ್ಕೆ ಒಯ್ದಿರುತ್ತಾರೆ. ಇನ್ನು ಕೆಲವರು ತಮ್ಮ ಭಾಷಣದುದ್ದಕ್ಕೂ ಸಭಿಕರನ್ನು ಎಚ್ಚರವಾಗಿ ತಮ್ಮೊಂದಿಗೇ ಇರಿಸಿಕೊಂಡು ಹೋಗುತ್ತಾರೆ. ಬರಹಗಳು ಹೇಗೆ ತಮ್ಮ ಒಟ್ಟಂದದಿಂದಾಗಿ ಓದುಗರನ್ನು ಆರಂಭದಿಂದ ಕೊನೆಯವರೆಗೆ  ಓದಿಸಿಕೊಂಡು ಹೋಗಬೇಕೋ,  ಹಾಗೆಯೇ ಮಾತುಗಳೂ ಕೂಡ ಇರಬೇಕು, ಕೇಳುಗರಿಗೆ ಕಿಂಚಿತ್ತೂ ಕಿರಿಕಿರಿ ಉಂಟುಮಾಡದೇ, ಅವರಲ್ಲಿ ಆಸಕ್ತಿ ಮೂಡಿಸುತ್ತಾ, ಜಾಗ್ರತವಾಗಿರಿಸಿಕೊಂಡು ಸಾಗಬೇಕು. ಕೆಲವೊಮ್ಮೆ ಭಾಷಣಕಾರನ ಮಾತಿನ ಶೈಲಿಯೇ ಸಭಿಕರನ್ನು ಆಕರ್ಷಿಸುತ್ತದೆ. ಕೆಲವೊಮ್ಮೆ ಆ ಶೈಲಿ, ವಿಷಯ ಗಾಂಭೀರ್ಯದ ಕೊರತೆಯನ್ನೂ ಮುಚ್ಚಿಹಾಕುವಲ್ಲಿ ಸಹಕಾರಿಯಾಗಬಹುದು. ಆದರೆ, ಶೈಲಿಯನ್ನೇ ಬಂಡವಾಳ ಮಾಡಿಕೊಂಡು, ತನಗೆ ಸಿಕ್ಕ ಅವಕಾಶಗಳನ್ನೆಲ್ಲಾ ತನ್ನ ಬೇಳೆ ಬೇಯಿಸಿಕೊಳ್ಳುವ ಕಾಯಕಕ್ಕೆ ಯಥಾವತ್ತಾಗಿ ಬಳಸಿಕೊಳ್ಳಲು ಮುಂದಾದರೆ ಆಪತ್ತು ತಪ್ಪಿದ್ದಲ್ಲ.

ತಮ್ಮ ವಾಕ್ಚಾತುರ್ಯದಿಂದ ಸಭಿಕರನ್ನು ಮಂತ್ರಮುಗ್ಧರನ್ನಾಗಿಸುವ ಕಲೆಯನ್ನು ಹೊಂದಿದ್ದ ರಾಜಕೀಯ ನಾಯಕರುಗಳಲ್ಲಿ,  ಮಾಜೀ ಪ್ರಧಾನ ಮಂತ್ರಿಗಳಾದ ಜವಹಾರ ಲಾಲ ನೆಹರೂ, ಶ್ರೀಮತಿ ಇಂದಿರಾಗಾಂಧಿ, ಅಟಲ ಬಿಹಾರಿ ವಾಜಪೇಯಿಯವರೊಂದಿಗೆ, ದಿ. ಪ್ರಮೋದ ಮಹಾಜನ್, ಲಾಲ್ ಕೃಷ್ಣ ಆಡ್ವಾಣಿ ಹಾಗೂ ಜಾರ್ಜ್ ಫೆರ್ನಾಂಡೀಸ್ ಇವರು ಪ್ರಮುಖರು. ನೆಹರೂರನ್ನುಳಿದು ಅನ್ಯರ ಭಾಷಣಗಳಿಗೆ ನಾನೂ ಕಿವಿಯಾಗಿದ್ದೆ. ಅವರ ವಾಕ್ಚಾತುರ್ಯಕ್ಕೆ ಮಾರುಹೋಗದವರಿಲ್ಲ ಎನ್ನುವ ಮಾತನ್ನು ಪಕ್ಷಭೇದ ಮರೆತು ಎಲ್ಲರೂ ಒಪ್ಪಿಕೊಳ್ಳಬಹುದೆಂದು ನನ್ನ ಅನಿಸಿಕೆ. ಈಗ ಅಂತಹ ವಾಕ್ಪಟುಗಳೇ ಇಲ್ಲ ಅನ್ನುವುದು ಬೇಸರದ ವಿಷಯ.

ಮಾತುಗಾರಿಕೆಗೆ ಪೂರಕವಾಗುವ ಇನ್ನೊಂದು ಪ್ರಮುಖ ಅಂಶ ಹಾಸ್ಯಪ್ರಜ್ಞೆ. ಹಾಸ್ಯದ ಮೋಡಿಗೆ ಮರುಳಾಗದವರು ಇಲ್ಲ ಎನ್ನುವಷ್ಟು ವಿರಳ. ಏಕೆಂದರೆ ನಗುವುದನ್ನು ಇಷ್ಟಪಡದವರು ಯಾರಿದ್ದಾರೆ ಹೇಳಿ.  ಹಾಸ್ಯ ಪ್ರಜ್ಞೆ ಇರುವ ಭಾಷಣಕಾರನಿಗೆ ಸಭಿಕರನ್ನು ತನ್ನೊಂದಿಗೇ ಇರಿಸಿಕೊಳ್ಳಲು ಕಷ್ಟವಾಗುವುದೇ ಇಲ್ಲ. ಆದರೆ ಹಾಸ್ಯವೂ ಕೂಡ ಆರೋಗ್ಯಕರವಾಗಿ ಇರಬೇಕಾದುದು ಅತಿ ಮುಖ್ಯ.

ಮಾತನಾಡುವಾಗ ನಮ್ಮ ಹಾವಭಾವಗಳ ಬಗ್ಗೆಯೂ ಕಾಳಜಿ ವಹಿಸುತ್ತಿರಬೇಕು. ನಮ್ಮ ಮುಖದ ಭಾವ ಮತ್ತು ಕೈಗಳ ಚಲನೆಗಳು ಅನಾವಶ್ಯಕವೆಂದು ಕಂಡು ಬರಬಾರದು. ಇವು ನಮ್ಮ ಮಾತುಗಳಿಗೆ ಪೂರಕವಾಗಿದ್ದಲ್ಲಿ ಮಾತ್ರ ಸ್ವೀಕಾರಾರ್ಹವಾಗುತ್ತವೆ. ಹಾಗಿಲ್ಲವಾದಲ್ಲಿ ಸಭಿಕರಿಗೆ ಕಿರಿಕಿರಿ ಉಂಟಾಗಬಹುದು. ವಿಷಯವನ್ನು ಬಿಟ್ಟು ನಮ್ಮ ಹಾವಭಾವಗಳ ಮೇಲಿನ ಗಮನವೇ ಜಾಸ್ತಿಯಾಗಬಹುದು.

ಮಾತನಾಡುವಾಗ, ಪದೇ ಪದೇ ಅನಾವಶ್ಯಕ ಪದಗಳನ್ನು ಬಳಸುವ ಅಭ್ಯಾಸವೂ ಕೆಲವರಿಗಿದೆ. ಹೆಚ್ಚಿನ ರಾಜಕೀಯ ನಾಯಕರುಗಳು ಹಾಗೂ ವಾರ್ತಾ ವರದಿಗಾರರು ಬಳಸುವ “ತಕ್ಕಂಥ”, “ಒಂದು, ”ಎಲ್ಲೋ ಒಂದು ಕಡೆ” , “ಒಂದು ಕೆಲಸ ಮಾಡಿ” ಅಥವಾ “ಏನಪ್ಪಾ ಅಂತಂದ್ರೆ” ಇಂಥ ಪದಗಳು ಕೇಳುಗರಿಗೆ ತುಂಬಾ ಕಿರಿಕಿರಿ ಉಂಟುಮಾಡುತ್ತವೆ. ಆಂಗ್ಲದಲ್ಲಿ ಮಾತನಾಡುವವರು ಕೂಡ, “ಯೂ ನೋ”, “ಐ ಮೀನ್” ಹಾಗೂ “ಲೈಕ್” ಅನ್ನುವ ಪದಗಳನ್ನು ಅನಾವಶ್ಯಕವಾಗಿ ಬಳಸುವುದನ್ನು ನಾವು ಕೇಳಿರುತ್ತೇವೆ.  ನಮ್ಮಲ್ಲಿನ ಪದ ಭಂಡಾರದಿಂದ, ಸೂಕ್ತ ಸಮಯದಲ್ಲಿ, ಸೂಕ್ತ ಪದಗಳನ್ನು ಆರಿಸಿಕೊಳ್ಳಲು ನಾವು ವಿಫಲರಾದಾಗ, ಖಾಲಿ ಜಾಗವನ್ನು ತುಂಬಲು ಇಂಥ ಪದಗಳನ್ನು ಬಳಸುತ್ತೇವೆ. ಇದನ್ನು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಮಾಡಿಕೊಂಡಾಗ ನಮ್ಮ ಮಾತುಗಳಿಗೆ ಸಿಗುವ ಬೆಲೆ ಜಾಸ್ತಿಯಾಗುತ್ತದೆ.

ನಾವು ಮಾತನಾಡುವಾಗ ನಮ್ಮ ಸ್ವರದಲ್ಲಿನ ಏರಿಳಿತಗಳು ನಮ್ಮ ಮಾತುಗಳಲ್ಲಿನ ಭಾವಕ್ಕೆ ಅನುಗುಣವಾಗಿರಬೇಕು. ಅನಾವಶ್ಯಕವಾಗಿ ಉಚ್ಛ ಸ್ವರದಲ್ಲಿ ಮಾತನಾಡುವುದಾಗಲೀ ಅಥವಾ ತೀರ ಕೆಳಸ್ತರದಲ್ಲಿ ಮಾತನಾಡುವುದಾಗಲೀ, ನಮ್ಮ ಮಾತುಗಾರಿಕೆಗೆ ಪೂರಕವಾಗುವುದಿಲ್ಲ.

ನಾವು ಸ್ವತಃ ಕೇಳುಗರ ಮುಂದೆ ಇಲ್ಲದಾಗಲೂ ನಮ್ಮ ಮಾತುಗಳಿಂದ ಕೇಳುಗರನ್ನು ಕಟ್ಟಿಹಾಕುವ ಶಕ್ತಿ ನಮ್ಮಲ್ಲಿರಬೇಕು. ಆಕಾಶವಾಣಿಯ ಉದ್ಘೋಷಕರಾಗಲೀ, ವಾರ್ತಾ ಓದುಗರಾಗಲೀ ನಮಗೆ ಇಷ್ಟವಾಗುವುದು ಅವರ ಸ್ವರಗಳಲ್ಲಿ ಕಂಡುಬರುವ, ಮಾತುಗಳಿಗೆ ಪೂರಕವಾಗುವ ಏರಿಳಿತಗಳಿಂದಾಗಿ. ದೆಹಲಿ ಅಕಾಶವಾಣಿಯಲ್ಲಿ ಬಹಳ ಹಿಂದೆ ಕನ್ನಡ ವಾರ್ತೆ ಓದುತ್ತಿದ್ದ ರಂಗರಾವ್, ಉಪೇಂದ್ರ ರಾವ್ ಹಾಗೂ ಸುಧಾ ದಾಸ್, ಆಂಗ್ಲ ವಾರ್ತೆ ಓದುತ್ತಿದ್ದ ಬರುಣ್ ಹಾಲ್ದಾರ್, ವಿಜಯ್ ಡೇನಿಯಲ್ಸ್ ಹಾಗೂ ರಿಣಿ ಖನ್ನ, ಹಿಂದೀ ವಾರ್ತೆ ಓದುತ್ತಿದ್ದ ದೇವಕಿ ನಂದನ್ ಪಾಂಡೆ ಹಾಗೂ  ಸಂಸ್ಕೃತ ವಾರ್ತೆ ಓದುತಿದ್ದ ಬಲದೇವಾನಂದ ಸಾಗರ ಇವರೆಲ್ಲಾ ನಮ್ಮ ನೆನಪಿನಲ್ಲಿ ಇಂದಿಗೂ ಉಳಿದಿದ್ದಾರಾದರೆ, ಅದು ಅವರ ಓದುವಿಕೆಯ ಶೈಲಿಯಿಂದಾಗಿ ಅಷ್ಟೇ. ವಿಷಯಕ್ಕೆ ಪೂರಕವಾದ ಸ್ಪಷ್ಟ ಉಚ್ಛಾರ ಮತ್ತು ಸ್ವರಗಳಲ್ಲಿನ ಏರಿಳಿತಗಳೊಂದಿಗೆ, ಅವರೆಲ್ಲಾ, ಇಂದಿಗೂ ನಮ್ಮ ಕಿವಿಯೊಳಗೆ ಮಾರ್ದನಿ ಮೂಡಿಸುತ್ತಿರುತ್ತಾರೆ.  ದೂರದರ್ಶನ ಬಂದ ನಂತರ ಆಕಾಶವಾಣಿಯಲ್ಲಿ ಸುದ್ದಿಗಳು ಬಿತ್ತರವಾಗುತ್ತಿವೆಯಾದರೂ, ಅವುಗಳನ್ನು ಕೇಳುವ ಆಸಕ್ತಿ ನಮ್ಮಲ್ಲಿ ಉಳಿದಿಲ್ಲ.

ನಮ್ಮ  ಮಾತುಗಳು  ಕೇಳುಗರ ನೆನಪಿನಲ್ಲಿ ಸದಾ ಉಳಿಯುವಂತಿರಬೇಕು, ಅಲ್ಲವೇ? ಹಾಗಾದರೆ,  ನನ್ನೀ ಮಾತುಗಳೂ ತಮ್ಮ ನೆನಪಿನಲ್ಲಿ ಸದಾ ಉಳಿಯಬಹುದೇ?

*****************


ಯುವಜನತೆಗೆ ಯಾರಿದ್ದಾರೆ ಆದರ್ಶಪ್ರಾಯರು?

04 ಡಿಸೆ 11

 

ನಮ್ಮ ನಾಡಿನುದ್ದಗಲಕ್ಕೂ, ಸೋಂಕಿನಂತೆ ಪ್ರತಿ ಮನೆಗೂ ಹರಡಿರುವ ಭ್ರಷ್ಟಾಚಾರವೆಂಬ ಈ ವ್ಯಾಧಿಯನ್ನು ಬೇರುಸಹಿತ ಕಿತ್ತು, ಒದ್ದೋಡಿಸುವ ನಿಟ್ಟಿನಲ್ಲಿ ಜನ ಜಾಗೃತಿ ಮೋರ್ಛಾಗಳು ಹಾಗೂ ಸತ್ಯಾಗ್ರಹಗಳು ಆರಂಭವಾದುವೇನೋ ನಿಜ. ಆದರೆ ಅವುಗಳ ಜೊತೆ ಜೊತೆಗೇ, ಸಮಾಜದ ಪ್ರತಿರಂಗದಲ್ಲೂ ಧೀಮಂತ ವ್ಯಕ್ತಿತ್ವಗಳು ನಾಗರಿಕರ ಮುಂದೆ ತಮ್ಮ ಅನೈತಿಕ ಹಾಗೂ ಭ್ರಷ್ಟ ನಡತೆಯಿಂದಾಗಿ ನಗ್ನವಾಗುತ್ತಲೇ ಸಾಗುತ್ತಿವೆ. ಇದಿಷ್ಟೇ ಆಗಿದ್ದಿದ್ದರೆ ಸಮಸ್ಯೆ ಇದ್ದಿರಲಿಲ್ಲ. ಈ ಲೇಖನವೂ ಅವಶ್ಯಕ ಎಂದೆನಿಸುತ್ತಿರಲಿಲ್ಲ. ನಮ್ಮ ಮನಸ್ಸಿಗೆ ತೀರ ಘಾಸಿ ಉಂಟು ಮಾಡುವ ವಿಚಾರವೆಂದರೆ ಅಪವಾದ ಹೊರಿಸುವವರು, ಆರೋಪ ಎದುರಿಸುತ್ತಿರುವವರು, ವಿಚಾರಣೆ ನಡೆಸುವವರು, ಎಲ್ಲರೂ ಪರಸ್ಪರರ ಮೇಲೆ, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಮಟ್ಟಕ್ಕಿಳಿದು, ಅವಮಾನಕರ ಹೇಳಿಕೆಗಳನ್ನು ನೀಡುತ್ತಿರುವುದು.

ನಿವೃತ್ತ ನ್ಯಾಯಮೂರ್ತಿಯಾದರೇನು ಹಾಗೂ ನಿವೃತ್ತ ಲೋಕಾಯುಕ್ತರಾದರೇನು, ಪೋಲೀಸ್ ಇಲಾಖೆಯ ಅಧಿಕಾರಿಗಳಾದರೇನು, ಎಲ್ಲರ ಬಗ್ಗೆಯೂ ಮುಲಾಜಿಲ್ಲದೇ, ಮಾಜೀ ಹಾಗೂ ಹಾಲಿ ಮುಖ್ಯಮಂತ್ರಿಗಳು, ಮಂತ್ರಿಗಳು, ಅಧಿಕಾರಿಗಳು ತಮ್ಮ ಮನಕ್ಕೆ ಬಂದ ರೀತಿಯಲ್ಲಿ ಅವಮಾನಕರ ಮಾತುಗಳನ್ನು  ಹೊರಹಾಕುತ್ತಾರೆ. ಎರಡು ದಿನ ಬಿಟ್ಟು, ಮತ್ತೆ  ಇವರು ಅವರೆಲ್ಲರ ಮಾತುಗಳಿಗೆ ಉತ್ತರಿಸುತ್ತಾ ಹೋಗುತ್ತಾರೆ. ಓರ್ವ ಮಾಜಿ ಮುಖ್ಯಮಂತ್ರಿಯಂತೂ, ತಾನು ಅದೆಷ್ಟೇ ಅನೈತಿಕ ಹಾಗೂ ಭ್ರಷ್ಟ ನಡತೆಯ ಆರೋಪಗಳ ಕೂಪದಲ್ಲಿ ಮುಳುಗಿದ್ದರೂ, ಅನ್ಯರು ಅದ್ಯಾವ ಹುದ್ದೆಯಲ್ಲಿದ್ದರೂ ಲೆಕ್ಕಿಸದೇ, ಅವರೆಲ್ಲರ ಮಾನ ಹರಾಜು ಹಾಕುವ ಮಾತನ್ನಾಡುತ್ತಾನೆ. ಆತನ ಅಥವಾ ಆತನ ಕುಟುಂಬದ ಮೇಲೆ ಆರೋಪಗಳು ಬಂದಾಗಲೆಲ್ಲಾ, ಆರೋಪ ಹೊರಿಸಿದವರ ಹಾಗೂ ವಿಚಾರಣೆ ನಡೆಸುವವರ ಪೂರ್ವಾಪರಗಳನ್ನು ಸದ್ಯವೇ ಸಾರ್ವಜನಿಕವಾಗಿ ಬಿಚ್ಚಿಡುತ್ತೇನೆ ಎಂಬ ಬೆದರಿಕೆಯನ್ನು ಒಡ್ಡುತ್ತಲೇ ಸಾಗುತ್ತಾನೆ. ಬಿಚ್ಚಿಡುತ್ತೇನೆ ಎಂದುದರ ಪಟ್ಟಿ ಅದೆಷ್ಟೇ ದೊಡ್ಡದಿದ್ದರೂ, ಸಾಕ್ಷಿ ಸಮೇತವಾಗಿ ಬಿಚ್ಚಿಟ್ಟ ದಾಖಲೆಗಳು ಮಾತ್ರ ಇದುವರೆಗೂ ಅಪ್ರಾಮುಖ್ಯವಾಗಿಯೇ ಉಳಿದಿವೆ. ಇವನ್ನೆಲ್ಲಾ ನೋಡುವಾಗ, ಕೇಳುವಾಗ, ಇವರೆಲ್ಲಾ ಆ ಪ್ರಾಥಮಿಕ ಮಕ್ಕಳ ಮಟ್ಟದಿಂದ ಇನ್ನೂ ಮೇಲೇರಿ ಬಂದಿಲ್ಲವೇನೋ ಎಂದನಿಸುತ್ತದೆ, ಅಲ್ಲವೇ?

ಭ್ರಷ್ಟ ನಾಯಕರುಗಳು ಜಾಮೀನು ಪಡೆದು ಮನೆಗೆ ಬಂದರೆ, ದಾರಿಯುದ್ದಕ್ಕೂ ಮಾಧ್ಯಮದವರ ಕ್ಯಾಮೆರಾ ಕಣ್ಣುಗಳು ಹಿಂಬಾಲಿಸುತ್ತವೆ. ಯುದ್ಧವನ್ನು ಗೆದ್ದುಬಂದ ಯೋಧರಂತೆ ವಿಜಯದ ನಗೆ ಬೀರುವ ಈ ನಾಯಕರುಗಳ ಹಿಂಬಾಲಕರುಗಳ ವಿಜಯಘೋಷ ಮುಗಿಲು ಮುಟ್ಟುತ್ತದೆ. ಭ್ರಷ್ಟಾಚಾರದ ಆರೋಪ ಹೊತ್ತಿರುವ ನೆರೆರಾಜ್ಯದ ಮುಖ್ಯಮಂತ್ರಿ ನ್ಯಾಯಾಲಯದಲ್ಲಿ ವಿಚಾರಣೆಗಾಗಿ ಹಾಜರಾಗಲು ಬಂದರೆ, ಸ್ವಾಗತಕ್ಕೆ ನಮ್ಮ ರಾಜಧಾನಿಯಲ್ಲಿ, ರಾತ್ರಿ ಬೆಳಗಾಗುವುದರ ಒಳಗೆ,  ಸ್ವಾಗತ ಕಮಾನುಗಳು, ಸ್ವಾಗತ ಫಲಕಗಳು, ಎದ್ದು ನಿಲ್ಲುತ್ತವೆ. ಭ್ರಷ್ಟರೊಂದಿಗೆ ಗುರುತಿಸಿಕೊಳ್ಳಲು ಇಂದು ಯಾರೂ ಹಿಂಜರಿಯುತ್ತಿಲ್ಲ. ಅನೈತಿಕತೆಯ ಆರೋಪಗಳನ್ನೆಲ್ಲಾ ದುಡ್ಡಿನ ಕಂತೆಗಳಲ್ಲಿ ಮುಚ್ಚಿಟ್ಟು ಆರೋಪ ಹೊರಿಸಿದವರೊಂದಿಗೆ ರಾಜಿ ಮಾಡಿಕೊಂಡು, ರಾಜಾರೋಷವಾಗಿ ಅಡ್ಡಾಡುವವರು ನಮ್ಮ ಪಾಲಿಗೆ ಇಂದು ನಾಯಕರುಗಳಾಗಿದ್ದಾರೆ. ಈ ನಾಯಕರುಗಳು ಯಾರಿಗೆ ಆದರ್ಶಪ್ರಾಯರಾದಾರು?  

ಶಾಲಾ ಕಾಲೇಜುಗಳಲ್ಲಿ ಅಭ್ಯಾಸ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಈ ಸಮಾಜದಲ್ಲಿರುವ ಯುವ ಜನತೆಗೆ ಈ ಹಿರಿಯ ನಾಯಕರುಗಳು ಅಥವಾ ಅಧಿಕಾರಿಗಳು ಯಾವ ರೀತಿಯ ಮಾರ್ಗದರ್ಶನ ನೀಡುತ್ತಿದ್ದಾರೆ? ಕಿರಿಯ ಜನಾಂಗ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಇಂದು ಯಾರ ಆದರ್ಶವನ್ನು ಪಾಲಿಸಬೇಕು? ಶತಕಗಳ ಅಥವಾ ದಶಕಗಳ ಹಿಂದೆ ಇಂದಿನದಕ್ಕಿಂತ ತೀರ ಭಿನ್ನವಾದ ಅದ್ಯಾವುದೋ ಸಾಮಾಜಿಕ ವ್ಯವಸ್ಥೆಯ ನಡುವೆ ಜೀವಿಸಿ ಗತಿಸಿಹೋದವರ ಜೀವನಾದರ್ಶಗಳನ್ನಷ್ಟೇ ಪಾಲಿಸಬೇಕೇ? ಆದರ್ಶ ವ್ಯಕ್ತಿಗಳೇ ಸಿಗದ ವಾತಾವರಣ ಏಕೆ ನಿರ್ಮಾಣವಾಗುತ್ತಿದೆ?

ನಿಷ್ಠಾವಂತರೆಂಬ ಹೆಸರು ಗಳಿಸಿದ್ದವರೂ ದಿನಬೆಳಗಾಗುವಷ್ಟರಲ್ಲಿ ಬಣ್ಣ ಕಳಚಿಕೊಳ್ಳುತ್ತಿದ್ದಾರೆ. ನಿನ್ನೆಯ ತನಕ ಯಾರನ್ನು ತಮ್ಮ ಆದರ್ಶ ಎಂದು ಯುವ ಜನತೆ ಪರಿಗಣಿಸುತ್ತಿತ್ತೋ, ಆ ವ್ಯಕ್ತಿಗಳು ಇಂದು ಸಮಾಜದೆದುರು ತಮ್ಮ ಕುಕೃತ್ಯಗಳಿಂದಾಗಿ ನಗ್ನರಾಗುತ್ತಿದ್ದಾರೆ. ನೀತಿ ಪಾಠ ಮಾಡುವ ಮಾಧ್ಯಮ ಲೋಕದ ಧೀಮಂತ ವ್ಯಕ್ತಿತ್ವಗಳೂ ಈ ಧಂಧೆಯಲ್ಲಿ ಸಿಲುಕಿಕೊಂಡು ತಮ್ಮ ಭ್ರಷ್ಟ ಹಾಗೂ ಅನೈತಿಕ ಜೀವನದ ಮಗ್ಗುಲನ್ನು ಸಮಾಜಕ್ಕೆ ಪರಿಚಯಿಸುತ್ತಾ ಸಾಗುತ್ತಿವೆ.  ಸಾಹಿತಿಗಳಲ್ಲಿ ಯಾರಿಗಾದರೂ ಪ್ರಶಸ್ತಿ ನೀಡಿ ಗೌರವಿಸಿದರೆ, ಆ ಸಾಹಿತಿಯನ್ನು ಒಪ್ಪದ, ಸಾಹಿತಿಗಳದೇ ಇನ್ನೊಂದು ವರ್ಗ ಆ ಸಾಹಿತಿಯ ಅವಹೇಳನೆಗೆ ಮುಂದಾಗುತ್ತದೆ. ಪ್ರಶಸ್ತಿ, ಸನ್ಮಾನಗಳೆಂಬ ಗೌರವಗಳೆಲ್ಲಾ ಮಾರಾಟಕ್ಕಿಟ್ಟ ವಸ್ತುಗಳಂತಾಗುತ್ತಿವೆ. ರಾಜಕೀಯ ಪುಢಾರಿಗಳೂ ಇನ್ಯಾರೋ ಬರೆದುಕೊಟ್ಟ ಸಾಹಿತ್ಯವನ್ನು ತಮ್ಮದೆಂದು ಪ್ರಕಟಿಸಿ, ಅವಕ್ಕೂ ಪ್ರಶಸ್ತಿಗಿಟ್ಟಿಸಿಕೊಂಡು ಹೆಮ್ಮೆ ಪಡುತ್ತಾರೆ. ಸಾರಸ್ವತ ಲೋಕದಲ್ಲಿ ತಮ್ಮ ಹೆಸರಗಳನ್ನು ಅಮರಗೊಳಿಸಿದೆವೆಂದು ಬೀಗುತ್ತಾರೆ. ತಮ್ಮ ಬೆನ್ನುಗಳನ್ನು ತಾವೇ ತಟ್ಟಿಕೊಳ್ಳುತ್ತಾರೆ. ವಿದ್ಯಾಲಯಗಳಲ್ಲಿನ ಅಧ್ಯಾಪಕ ವೃಂದವೂ ದಿನಗಳೆದಂತೆ ತನ್ನ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ವಿಫವಾಗುತ್ತಾ ಸಾಗಿದೆ. ಉತ್ತಮ ಬಾಳನ್ನು ಕಟ್ಟಿಕೊಡುವ ವಿದ್ಯೆ ನೀಡುವ ಬದಲು, ಉತ್ತಮ ಹಣಗಳಿಕೆಯ ನೌಕರಿ ಪಡೆಯುವುದಕ್ಕಾಗಿ, ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗುವುದಷ್ಟೇ ಪ್ರಾಮುಖ್ಯ ಎಂದು ಹೇಳಿಕೊಡುತ್ತಿವೆ. ಜೀವನದ ಅರ್ಥ, ಬರೀ ಅರ್ಥ ಗಳಿಕೆಯಲ್ಲಿಯೇ ಇದೆ ಎಂದು ಸಾರುತ್ತಿದೆ.   

ನೈತಿಕತೆ ಹಾಗೂ ಪ್ರಾಮಾಣಿಕತೆಯೊಂದಿಗೆ ಯಾವುದೇ ನೌಕರಿ ಮಾಡುವ ಅಥವಾ ಜೀವನ ಸಾಗಿಸುವ ಪರಿಸ್ಥಿತಿ ಈಗ ಬಹುಶಃ ಎಲ್ಲೂ ಇಲ್ಲ. ಭ್ರಷ್ಟರ ನಡುವೆ, ಅನೀತಿವಂತರ ನಡುವೆ, ತನ್ನತನವನ್ನು ಉಳಿಸಿಕೊಂಡು ಬಾಳುವವರ ಪಾಲಿಗೆ, ಉಸಿರುಗಟ್ಟಿಸಿಕೊಂಡು ಸಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಸಾಮಾಜಿಕ ಜಾಗೃತಿ ಮೂಡಿಸುವ ಪಣತೊಟ್ಟು ಮುಂದಾಳುತನ ಹೊತ್ತು ಸಾಗುವವರ ಮೇಲೇ ದಿನ ಬೆಳಗಾದರೆ ಹೊಸ ಹೊಸ ಆಪಾದನೆಗಳನ್ನು ಹೊರಿಸಿಯೋ, ಹಲ್ಲೆ ನಡೆಸಿಯೋ, ಅವರನ್ನು ಅವರ ಗುರಿಯಿಂದ ವಿಮುಖಗೊಳಿಸುವ ಪ್ರಯತ್ನ ಸದಾ ಸಾಗುತ್ತಿದೆ. ಇದಕ್ಕೆಲ್ಲ ಭ್ರಷ್ಟ ಪಟ್ಟಭದ್ರ ಹಿತಾಸಕ್ತಿಗಳೇ ಕಾರಣ ಎನ್ನುವುದೂ ಜಗಜ್ಜಾಹೀರು.

ಇದರಿಂದ ಯುವ ಜನತೆಗೆ ಒಮ್ಮೆಗೇ ಭ್ರಮ ನಿರಸನವಾದಂತಾಗಿದೆಯಾದರೆ ಆಶ್ಚರ್ಯವಿಲ್ಲ.  ರಾಜಕೀಯವೂ ಬೇಡ, ಸಾಮಾಜಿಕ ಸೇವೆಯೂ ಬೇಡ, ಸಾಹಿತ್ಯವೂ ಬೇಡ, ಯಾವ ಓದೂ ಬೇಡ. ನಾವು ನಮಗಿಷ್ಟ ಬಂದ ರೀತಿಯಲ್ಲಿ ಬದುಕೋಣ ಎಂಬ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. “ಎಲ್ಲರೂ ಕಳ್ಳರೇ …  ಹಾಗಾಗಿ, ನಾವೂ ಕಳ್ಳರಾಗೋಣ; ಎಲ್ಲರೂ ಭ್ರಷ್ಟರೇ … ಹಾಗಾಗಿ, ನಾವೂ ಭ್ರಷ್ಟರಾಗೋಣ”. ಎನ್ನುವ ಮನಸ್ಥಿತಿಯನ್ನು ಯುವ ಜನತೆಯಲ್ಲಿ ತುಂಬುತ್ತಾ ಸಾಗುತ್ತಿದೆ ಈ ಸಮಾಜ.

ಹಾಗಾಗಿ  “ನಾವು ಯಾರನ್ನು ಹಿಂಬಾಲಿಸಬೇಕು… ಹಾಗೂ ಯಾರಿದ್ದಾರೆ ನಮಗೆ ಆದರ್ಶಪ್ರಾಯರು?” ಎಂದು  ಯುವ ಜನತೆ ಕೇಳುತ್ತಿರುವ ಈ ಪ್ರಶ್ನೆಗೆ ಉತ್ತರ ಯಾರಲ್ಲಿದೆ? ನಮ್ಮಲ್ಲಿದೆಯೇ ಅಥವಾ ನಿಮ್ಮಲ್ಲಿದೆಯೇ? 


ನಮ್ಮ ಭಾವಕ್ಕೂ ಭಾವಾಭಿವ್ಯಕ್ತಿಗೂ ಸಂಬಂಧ ಇರಬೇಡವೇ?

25 ಜುಲೈ 11

 

ದಿನವೂ ಸಂಜೆ ಏಳೂವರೆಗೆಲ್ಲಾ ಮನೆ ಸೇರುತ್ತಿದ್ದ ಆಕೆಯ ಗಂಡ ಅಂದು ಎಂಟಾದರೂ ಬಂದಿರಲಿಲ್ಲ. ಎಂಟೂವರೆಯಾಯ್ತು … ಒಂಭತ್ತಾಯ್ತು… ಆತನ ಆಗಮನಕ್ಕಾಗಿ ಕಾಯುತ್ತಿದ್ದ ಆಕೆಗೆ ಈ ಕಾಯುವಿಕೆಯನ್ನು ಸಹಿಸಲಾಗುತ್ತಿಲ್ಲ. ಆತನಿಗೆ ಕರೆ ಮಾಡಿದರೆ, ಅತ್ತಲಿಂದ ಉತ್ತರವಿಲ್ಲ. ಆಕೆಯ ಬೇಸರ, ದುಃಖ ಜಾಸ್ತಿ ಆಗುತ್ತಾ ಹೋಯ್ತು. ಏನಾಯ್ತೋ…? ಹತ್ತಾರು ಕೆಟ್ಟ ಕೆಟ್ಟ ಯೋಚನೆಗಳು ಆಕೆಯ ತಲೆಯಲ್ಲಿ ಸುತ್ತಾಡ ತೊಡಗಿದವು. ಸರಿಯಾಗಿ ಒಂಭತ್ತೂವರೆಗೆ ಪತಿರಾಯನ ಆಗಮನವಾಯ್ತು. ಅದನ್ನು ದೂರದಿಂದಲೇ ಅರಿತುಕೊಂಡ ಆಕೆ, ಒಮ್ಮೆಗೇ ಮೌನಿಯಾಗುತ್ತಾಳೆ. ಒಳಬಂದ ಗಂಡನತ್ತ ಕತ್ತೆತ್ತಿ ನೋಡುವುದಿಲ್ಲ, ಆತನಿಗೆ ಮುಖ ಕೊಟ್ಟು ಮಾತಾಡಿಸುವುದಿಲ್ಲ. ಆತ ತಾನು ತಡವಾಗಿ ಬಂದುದಕ್ಕೆ ಕಾರಣ ನೀಡಲು ಆರಂಭಿಸಿದಾಗಲೂ ಮೌನವೇ ಉತ್ತರ. ಆತ ಮುಂದುವರಿಸದೇ ಅರ್ಧಕ್ಕೇ  ನಿಲ್ಲಿಸಿದ. ಮೌನದಲ್ಲೇ ಊಟವೂ ಮುಗಿಯಿತು. ಊಟ ಮಾಡಿದ ತಟ್ಟೆ ಬಟ್ಟಲುಗಳನ್ನು ತೊಳೆದಿಟ್ಟು ಬಂದವಳಿಗೆ ಮೌನವನ್ನು ಮುಂದುವರಿಸುವುದು ಕಷ್ಟವಾಗತೊಡಗಿತು. ಇಷ್ಟು ಹೊತ್ತು ಕಟ್ಟಿ ಹಾಕಿದ್ದ ಬೇಸರ, ದುಃಖವೆಲ್ಲಾ ಕೋಪಾಗ್ನಿಯಾಗಿ ಕಟ್ಟೆಯೊಡೆದು ಬರಲಾರಂಬಭಸಿತು. ಒಂದೇ ಸಮನೆ  ಗಂಡನ ಮೇಲೆ ತನ್ನ ಕೋಪವನ್ನು ಹರಿಹಾಯತೊಡಗಿದಳು. “ನಿಮಗೋಸ್ಕರ ನಾನು ಇಲ್ಲಿ ಕಾಯ್ತಾ ಕೂರಬೇಕು…  ನಿಮಗೆ ಜವಾಬ್ದಾರಿಯೇ ಇಲ್ಲ… ಮನೆಯಿಂದ ಹೊರಗೆ ಹೋದ ಮೇಲೆ ಮನೆಯ ಬಗ್ಗೆ ನೆನಪೇ ಇರುವುದಿಲ್ಲ…  ಮನೆಯಲ್ಲಿ ಒಬ್ಬಳು ಕಾಯ್ತಾ ಇದ್ದಾಳೆ ಅನ್ನುವ ನೆನಪಾದ್ರೂ ಬೇಡವೇ ನಿಮಗೆ…” ಇತ್ಯಾದಿ… ಇತ್ಯಾದಿ.

ಈ ಮೊದಲೇ ತಾನು ತಡವಾದುದಕ್ಕೆ ಕಾರಣವನ್ನು ಹೇಳಲಾರಂಭಿಸಿದ್ದನಾದರೂ ಕೇಳಿರದ ಹೆಂಡತಿ, ಈಗ ತನ್ನ ಮೇಲೆ ಈ ರೀತಿ ಕೋಪದ ಪ್ರದರ್ಶನ ಮಾಡುತ್ತಿರುವುದು ಆತನಿಗೆ ಹಿಡಿಸಲಿಲ್ಲ. ಆಕೆಯ ಮಾತುಗಳಿಗೆ ಈತನ ಪ್ರತಿಮಾತುಗಳು ಹೊರಬಂದವು. ಮಾತಿಗೆ ಮಾತು ಬೆಳೆದು ಅಲ್ಲಿ ಪುಟ್ಟ ವಾಕ್ಸಮರವೇ ನಡೆದು ಹೋಯ್ತು. ಮತ್ತೆಲ್ಲಾ ಸ್ಮಶಾನ ಮೌನ ಆ ಮನೆಯನ್ನು ಆವರಿಸಿತು. ಹರೆಯಕ್ಕೆ ಇನ್ನೂ ಕಾಲಿಡದ, ಅವರ ಮಕ್ಕಳು ಅಲ್ಲಿ ಮೂಕ ಪ್ರೇಕ್ಷಕರಷ್ಟೇ.

ಯಕ್ಷಗಾನ ಕೇಂದ್ರದಲ್ಲಿ ಬೇಸಿಗೆಯ ತರಬೇತಿ ಶಿಬಿರಕ್ಕೆ ಸೇರಿದ್ದ ಒಂಭತ್ತು ವರುಷದ ಕೃಷ್ಣ ಅಂದು ದಿನವಿಡೀ ಮನೆಯಲ್ಲಿಲ್ಲ. ಪಕ್ಕದ ಜಿಲ್ಲಾಕೇಂದ್ರದಲ್ಲಿನ ಒಂದು ಯಕ್ಷಗಾನ ಪ್ರದರ್ಶನಕ್ಕೆ ಆತನನ್ನೂ ಕರೆದೊಯ್ದಿದ್ದರು ಕೇಂದ್ರದವರು. ಆತನ ಗೈರುಹಾಜರಿ ಆತನ ಅಜ್ಜಿಗೆ ತುಂಬಾ ಕಿರಿಕಿರಿಯನ್ನೂ ಬೇಸರವನ್ನೂ ಉಂಟುಮಾಡಿದೆ. ತನ್ನ ಮಗನನ್ನು ಕರೆದು ಕೇಳಿದರು. “ಅಷ್ಟು ಚಿಕ್ಕ ಹುಡುಗನನ್ನು ಅಷ್ಟೊಂದು ದೂರ ಯಾಕೆ ಕಳಿಸಿದ್ದು ಮಾರಾಯಾ, ಏನಾದ್ರೂ ಆದರೆ ಏನು ಮಾಡೋದು?” ಅತ “ಇಲ್ಲಮ್ಮಾ … ಏನೂ ಸಮಸ್ಯೆ ಇಲ್ಲ. ಯಕ್ಷಗಾನದ ಕೇಂದ್ರದ ಯಜಮಾನರೂ ಹೋಗಿದ್ದಾರೆ. ಅವರು ಜಾಗ್ರತೆವಹಿಸಿ ಮಕ್ಕಳನ್ನು ವಾಪಾಸು ಕರೆದುಕೊಂಡು ಬರುತ್ತಾರೆ, ಆ ಬಗ್ಗೆ  ಚಿಂತೆ ಬೇಡ ನಿಮಗೆ. ನಾನು ಆತನ ಅಪ್ಪನಲ್ಲವೇ… ನನಗೆ ಜವಾಬ್ದಾರಿ ಇಲ್ಲವೇನಮ್ಮಾ…?” ಅಂದ. ಅಷ್ಟೇ… ಅಜ್ಜಿಯ ಬೇಸರ ಕೋಪದ ರೂಪ ತಾಳಿತು. ಮಗನಿಗೆ ಮತ್ತು ಆತನ ಜೊತೆಗೆ ಸೊಸೆಗೂ ಸಹಸ್ರನಾಮ ಹಾಕಿದರು. ತನ್ನ ಮನಬಂದಂತೆಲ್ಲಾ ಬೈಗುಳದ ಸುರಿಮಳೆಗೈದರು. “ಮಕ್ಕಳನ್ನು ಹೇಗೆ ಬೆಳೆಸಬೇಕೆಂಬ ಅರಿವಿಲ್ಲ.  ಇವರಿಗೆಲ್ಲಾ ಮಕ್ಕಳ್ಯಾಕೆ ಬೇಕು…” ಇತ್ಯಾದಿ … ಇತ್ಯಾದಿ.

ಈ ಎರಡೂ ಸನ್ನಿವೇಶಗಳನ್ನು ಕೂಲಂಕಷವಾಗಿ ಗಮನಿಸಿದಾಗ, ಅಲ್ಲಿ ಹೆಂಡತಿ ಹಾಗೂ ಇಲ್ಲಿ ಅಜ್ಜಿ ಈರ್ವರಿಗೂ ಆಗಿದ್ದು ಬೇಸರ. ಆದರೆ ಅವರೀರ್ವರೂ ವ್ಯಕ್ತಪಡಿಸಿದ್ದು, ಹೊರಹಾಕಿದ್ದು ಕೋಪವನ್ನು. ಇವು ಉದಾಹರಣೆಗಳಷ್ಟೇ. ನಾವೆಲ್ಲರೂ ನಮ್ಮ ಮನದೊಳಗಿನ ಭಾವನೆಗಳನ್ನು ಅವುಗಳ ಮೂಲ ರೂಪಗಳಲ್ಲಿಯೇ ಹೊರಗೆಡಹಲು ಸತತವಾಗಿ ವಿಫಲರಾಗುತ್ತಲೇ ಇರುತ್ತೇವೆ ಅಥವಾ ಪ್ರಯತ್ನಿಸುವುದೇ ಇಲ್ಲ. ಇದರಿಂದಾಗಿ ಸಂಬಂಧಗಳು ಮತ್ತು ಬಾಂಧವ್ಯಗಳು ಕೆಡುತ್ತಿವೆ. ಇವು ನಮ್ಮ ಮನೆಗಳಲ್ಲಿ ಇರಬಹುದು, ಕಛೇರಿಯ ಸಹೋದ್ಯೋಗಿಗಳ ನಡುವೆಯೊ ಇರಬಹುದು ಅಥವಾ ಸಮಾಜದಲ್ಲಿ ಇರಬಹುದು. ನಮ್ಮಲ್ಲಿ ಹೆಚ್ಚಿನವರು ನಮಗೆ ಬೇಸರವಾದಾಗಲೂ ವ್ಯಕ್ತಪಡಿಸುವುದು ಕೋಪವನ್ನು, ಕೋಪ ಬಂದಾಗಲೂ ವ್ಯಕ್ತಪಡಿಸುವುದು ಕೋಪವನ್ನು. ಅದೇಕೆ ಹೀಗೆ? ನಾವು ಬೇಸರವಾದಾಗ ನಮ್ಮ ಬೇಸರವನ್ನು ವ್ಯಕ್ತಪಡಿಸಲು ಪ್ರಯತ್ನಿಸದೇ ಕೋಪಗೊಳ್ಳುವುದೇಕೆ?

ಒಂದು ವೇಳೆ ಗಂಡನಿಗಾಗಿ ಕಾಯುತ್ತಾ ಬೇಸರಿಸುತ್ತಿದ್ದ ಹೆಂಡತಿ, ತನ್ನ ಗಂಡನ ಆಗಮನವಾಗುತ್ತಿದ್ದಂತೆ, ಬೇಸರವನ್ನೆಲ್ಲಾ, ಮನದ ದುಃಖವನ್ನೆಲ್ಲಾ ಅಳುವಿನ ರೂಪದಲ್ಲೋ ಅಥವಾ ಬೇಸರವನ್ನೇ ಸೂಚಿಸುವ ಮಾತುಗಳ ರೂಪದಲ್ಲೋ ಹೊರಹಾಕಿದ್ದಿದ್ದರೆ,  ಗಂಡನಿಗೆ ಆಕೆಯ ಕಾಳಜಿಯ ಅರಿವಾಗುತ್ತಿತ್ತಲ್ಲವೇ?  ಆಕೆಗೆ ಬೇಸರ ಆಗಿದೆ ಎನ್ನುವುದರ ಅರಿವೂ ಆಗುತ್ತಿತ್ತಲ್ಲವೇ? ಆತನಲ್ಲಿ ಆ ಅರಿವು ಮೂಡಿಸಿದ್ದರೆ, ಆತ ಮುಂದಿನ ದಿನಗಳಲ್ಲಿ ಎಚ್ಚರಿಕೆ ವಹಿಸುವ ಸಾಧ್ಯತೆಗಳಿರುವುದಿಲ್ಲವೇ? ಇನ್ನು ಆ ಅಜ್ಜಿ,  ಮೊಮ್ಮಗನ ಸುರಕ್ಷತೆಯ ಬಗ್ಗೆ ಬೇಸರಗೊಂಡವರು, ಬೇಸರ ತಾಳಲಾರದೇ ಅತ್ತುಬಿಡಬಹುದಿತ್ತಲ್ಲವೇ? ಅಳು ಏಕೆ ಬಂದಿಲ್ಲ … ಕೋಪ ಯಾಕೆ ಬಂದಿತ್ತು?

ಎರಡೂ ಸನ್ನಿವೇಶಗಳಲ್ಲಿ, ತಮ್ಮ ಹಕ್ಕು ಸ್ಥಾಪನೆಯ ಯತ್ನ ನಡೆದಿದೆಯೆಂದು ಅನಿಸುವುದಿಲ್ಲವೇ? ತಮ್ಮನ್ನು ಕೇಳಿಕೊಂಡೇ ಎಲ್ಲವೂ ನಡೆಯಬೇಕು ಅನ್ನುವ ಅಹಂಭಾವ ಕಂಡುಬರುವುದಿಲ್ಲವೇ? ಬೇಸರವಾದ ಮನದಲ್ಲಿ ಅಹಂಭಾವ ಮೂಡಿಸಿಕೊಂಡು,  ಕೋಪದ ಮೂಲಕ  ಅನ್ಯರ ಮೇಲೆ ಸವಾರಿ ಮಾಡುವ ಪ್ರಯತ್ನ ನಡೆದಿಲ್ಲವೇ? ಇದರಿಂದ ಸಾಧಿಸಿದ್ದಾದರೂ ಏನು? ಸಂಬಂಧಗಳು ಕೆಡಬಹುದು ಅಷ್ಟೇ. ಆ ಗಂಡ ತನ್ನ ಹೆಂಡತಿಯನ್ನು ಇನ್ನೂ ಜಾಸ್ತಿ ನಿರ್ಲಕ್ಷಿಸಬಹುದು. ಇತ್ತ ಈ ಅಜ್ಜಿಯನ್ನು  ಮನೆಯಲ್ಲಿನ ಎಲ್ಲರೂ ಲೆಕ್ಕದಿಂದ ಹೊರಗಿಟ್ಟು ವ್ಯವಹರಿಸಬಹುದು. ಅಲ್ಲದೇ, ಎಲ್ಲದಕ್ಕೂ ಮಿಗಿಲಾಗಿ ಎರಡೂ ಕಡೆ ಜನರು ಸುಳ್ಳು ಹೇಳಲು ಆರಂಭಿಸಬಹುದು.

ಇನ್ನು ಕೆಲವೊಮ್ಮೆ ನಮ್ಮಿಂದ ಯಾವುದೋ ಅಚಾತುರ್ಯ ನಡೆದಿರುತ್ತದೆ. ಅದು ಅನ್ಯರ ಮನಸ್ಸನ್ನು  ನೋಯಿಸಿರುತ್ತದೆ. ಅದನ್ನು ಅರಿತು ನಾವು ಕ್ಷಮೆ ಕೇಳಲು ಸಿದ್ಧರಾಗುತ್ತೇವೆ. ಆ ವ್ಯಕ್ತಿಯ ಮುಂದೆ “ಸಾರಿ ಕಣೋ …ಕ್ಷಮಿಸಿ ಬಿಡೊ” ಅಥವಾ “ಸಾರಿ ಕಣ್ರೀ ನನ್ನಿಂದ ತಪ್ಪಾಯ್ತು … ಕ್ಷಮಿಸಿ ಬಿಡಿ” ಅನ್ನುತ್ತೇವೆ. ಆದರೆ, ನಮ್ಮಲ್ಲಿ ಆಗ ಕ್ಷಮಾಯಾಚನೆಯ ಭಾವ ಸಂಪೂರ್ಣವಾಗಿ ಆವರಿಸಿರುತ್ತದೆಯೇ? ಪಶ್ಚಾತ್ತಾಪದ ಭಾವ ತುಂಬಿ, ಇನ್ನೇನು ಅಳು ಬಂದು ಬಿಡಬಹುದೇನೋ ಅನ್ನುವ ಸ್ಥಿತಿ ಇರುತ್ತದೆಯೇ?  ಒಂದು ವೇಳೆ ಆ ವ್ಯಕ್ತಿ ನಮ್ಮ ಕ್ಷಮಾಯಾಚನೆಯನ್ನು ಸ್ವೀಕರಿಸದೇ ನಿರ್ಲಕ್ಷಿಸಿದರೆ ಅಥವಾ ತಿರಸ್ಕರಿಸಿದರೆ, ನಮ್ಮ ಪ್ರತಿಕ್ರಿಯೆ ಹೇಗಿರುತ್ತದೆ? ನಾವು ಇನ್ನೂ ಬೇಸರಗೊಳ್ಳುತ್ತೇವೆಯೇ? ಇಲ್ಲ, ಹಾಗಾಗುವುದೇ ಇಲ್ಲ. ಹೆಚ್ಚಿನ ಸನ್ನಿವೇಶಗಳಲ್ಲಿ ನಮಗೆ ಬೇಸರ ಆಗುವುದಿಲ್ಲ, ಕೋಪ ಬರುತ್ತದೆ. ನಾವು ಕ್ಷಮೆ ಕೇಳಿದರೂ ಆ ವ್ಯಕ್ತಿ ನಿರ್ಲಕ್ಷಿಸಿದುದನ್ನು ಕಂಡಾಗ ಸಿಡಿಯುತ್ತೇವೆ. ಮರುಕ್ಷಣವೇ ಆ ವ್ಯಕ್ತಿಯನ್ನು ಬೈಯ್ಯುವುದಕ್ಕೆ ಆರಂಭಿಸುತ್ತೇವೆ. “…ನಾನು ಸಾರಿ ಕೇಳಿದ್ದೆನಲ್ಲಾ… ಇನ್ನೇನು ನಿಂದು… ” ಎಂದು ಹಾರಾಡುತ್ತೇವೆ. ಇದು ಸರಿಯೇ? ಆ ವ್ಯಕ್ತಿಯ ಪ್ರತಿಕ್ರಿಯೆ ಏನೇ ಇದ್ದರೂ, ಪಶ್ಚಾತ್ತಾಪ ಪಟ್ಟುಕೊಂಡು ಬಂದಿರುವವರು ಕೋಪಿಸಿಕೊಳ್ಳಬಾರದಲ್ಲವೇ? ನಮ್ಮ ಬೇಸರ, ಪಶ್ಚಾತ್ತಾಪ, ದುಃಖ ಇವೆಲ್ಲಾ ಇನ್ನೂ ಜಾಸ್ತಿಯಾಗಿ ನಮಗೆ ಅಳುವೇ ಬರಬೇಕಾಗಿತ್ತಲ್ಲವೇ?  ಆದರೆ ಹಾಗೆ ಆಗುವುದಿಲ್ಲ ಏಕೆ? ಕ್ಷಮೆ ಕೇಳುವುದಷ್ಟೇ ಮುಖ್ಯವೇ? ಕ್ಷಮಾಯಾಚನೆಯ ಭಾವ, ಅಥವಾ ತಪ್ಪಿತಸ್ಥ, ಮನೋಭಾವ ನಮ್ಮಲ್ಲಿ ಇರಬೇಕಾದುದರ ಅಗತ್ಯವಿಲ್ಲವೇ? ಕ್ಷಮಾಯಾಚನೆಯ ಭಾವವೇ ಇಲ್ಲದವನಿಗೆ ಕ್ಷಮೆ ನೀಡುವುದು ಸೂಕ್ತವೇ?

ನಮ್ಮ ಮನದೊಳಗೆ ಯಾವ ಭಾವನೆ ಇದೆಯೋ ಅದೇ ಭಾವನೆಯನ್ನು ನಾವು ವ್ಯಕ್ತಪಡಿಸಿದರೆ, ಅದನ್ನು ಅನ್ಯರು ಅರ್ಥೈಸಿಕೊಂಡರೆ ಸಂಬಂಧಗಳು ಕೆಡದೇ ಉಳಿಯಬಹುದೇನೋ. ಸಂತೋಷವಾದಾಗ ಸಂತೋಷ, ಬೇಸರವಾದಾಗ ಬೇಸರ, ಕೋಪ ಬಂದಾಗಲಷ್ಟೇ ಕೋಪವನ್ನು ತೋರ್ಪಡಿಸಬಹುದಲ್ಲವೇ? ನಮ್ಮಲ್ಲಿ ಹೆಚ್ಚಿನವರು ಬೇಸರವನ್ನು ವ್ಯಕ್ತಪಡಿಸಲು ಅರಿತೇ ಇಲ್ಲ. ನಾವು ಬೇಸರಗೊಂಡಾಗಲೂ, ಕೋಪಗೊಂಡಾಗಲೂ ಕೋಪವನ್ನೇ ವ್ಯಕ್ತಪಡಿಸುತ್ತಿರುತ್ತೇವೆ. ಹಾಗಾದರೆ ಬೇಸರದ ಅಭಿವ್ಯಕ್ತಿ ಏಕೆ ಕಾಣೆಯಾಗಿದೆ? ಎಲ್ಲರಲ್ಲೂ ಅಸಹನೆ ಮನೆಮಾಡಿಕೊಂಡು, ಕೋಪ ಏಕೆ ತಾಂಡವವಾಡುತ್ತದೆ? ನಮ್ಮ ಭಾವಕ್ಕೂ ಭಾವಾಭಿವ್ಯಕ್ತಿಗೂ ಸಂಬಂಧ ಇರಬೇಡವೇ?
**********

ಈ ಲೇಖನ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ೩೧ ಜುಲಾಯಿ ೨೦೧೧ ರಂದು, ಪ್ರಕಟವಾಗಿದೆ

ಉದಯವಾಣಿಯ ಮಣಿಪಾಲ ಮತ್ತು ಮುಂಬಯಿ ಆವೃತ್ತಿಗಳಲ್ಲಿ  ೨೪ ಜುಲಾಯಿ ೨೦೧೧ ರಂದು  ಪ್ರಕಟವಾಗಿದೆ


ಯೋಜನೆಗಳ ಮುಂದುವರಿಕೆಯೇ ಸತ್ಯಸಾಯಿಬಾಬಾರಿಗೆ ನಿಜವಾದ ಶ್ರದ್ಧಾಂಜಲಿ!

26 ಏಪ್ರಿಲ್ 11

“…ಯಾವ ಸರಕಾರವೂ ಮಾಡಲಾಗದ ಸಾಧನೆ ಮಾಡಿದ್ದ ಮಹಾನ್ ಮನುಷ್ಯ, ಆತ ಮನುಷ್ಯನೇ ಅಲ್ಲ ಆತನೋರ್ವ ಮಹಾನ್ ಸಂತ.  ಅವರಿಂದ ನಾವು ಮತ್ತು ಈ ಸಮಾಜ ಕಲಿಯಲಿಕ್ಕೆ ಬಹಳಷ್ಟಿದೆ. ಅವರ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ…”.

ಪುಟ್ಟಪರ್ತಿಯ ಶ್ರೀ ಸತ್ಯಸಾಯಿಬಾಬಾ ತನ್ನ ಇಹಲೋಕದ ಪಯಣವನ್ನು ಮೊಟಕುಗೊಳಿಸಿ (೯೬ ವರುಷ ಬದುಕುತ್ತೇನೆ ಅಂತ ಅವರೇ ಹೇಳಿದ್ದರಂತೆ, ಹಾಗಾಗಿ ಮೊಟಕುಗೊಳಿಸಿದರೇನೋ ಎನ್ನುವ ಅನುಮಾನ ನನಗೆ) ಪರಲೋಕದತ್ತ ಮುಖಮಾಡಿ ಹೊರಟು ಹೋದ ಮೇಲೆ, ಅವರ ನಿಧನಕ್ಕೆ ಸಂತಾಪ ಸೂಚಿಸಲು ಕ್ಯಾಮೆರಾ ಮುಂದೆ ನಿಂತ ರಾಜಕಾರಣಿಗಳೆಲ್ಲಾ ನುಡಿದ ಮಾತುಗಳಲ್ಲಿ ನನಗೆ ಅದೇಕೋ ಏಕತಾನತೆ ಕಂಡುಬಂದಿತ್ತು.

ನಿಜ, ಈ ಲೋಕದಿಂದ ಮರಳುವ ಯಾವೊಬ್ಬ ವ್ಯಕ್ತಿಯ ಸ್ಥಾನವನ್ನೂ ಇನ್ನೊರ್ವ ವ್ಯಕ್ತಿ ತುಂಬಲು ಸಾಧ್ಯವಿಲ್ಲ. ಆದರೆ, ಸತ್ಯ ಸಾಯಿಬಾಬಾ ಮಾಡಿದ ಜನೋಪಯೋಗಿ ಕೆಲಸಗಳನ್ನು ಯಾವುದೇ ಸರಕಾರವೂ ಮಾಡಲಾಗದು ಅನ್ನುವುದೇಕೆ. ಮಾಡಲಾಗಿಲ್ಲ ನಿಜ. ಏಕೆ ಮಾಡಲಾಗಿಲ್ಲ ಎಂದು ಯೋಚಿಸಬಾರದೇಕೆ? ಏಕೆಂದರೆ, ಮಾಡಬೇಕೆಂಬ ಇಚ್ಛಾಶಕ್ತಿ ಇದ್ದಿರಲೇ ಇಲ್ಲ. ಹಳ್ಳಿಯ ಮನೆಯೊಂದರಲ್ಲಿ ಮಲಗಿ ರಾತ್ರಿ ಕಳೆದು ತಾನು ಮಹಾನ್ ಸಾಧನೆಗೈದೆ ಎಂದು ಹೇಳಿಕೆಯನ್ನು ನೀಡುವ ರಾಜಕಾರಣಿ ನಾಯಕ, ತನ್ನ ಒಂದು ದಿನದ ವಾಸ್ತವ್ಯಕ್ಕಾಗಿ, ಹಳ್ಳಿಗಳಿಗೆ ನಗರದಿಂದ ವಿದ್ಯುತ್ ಬೀಸಣಿಗೆ (ಫ್ಯಾನ್) ಮತ್ತು ಕಕ್ಕಸುಗಳನ್ನೇ ಹೊತ್ತುಕೊಂಡು ಹೋಗಿರುತ್ತಿದ್ದ. ಹಳ್ಳಿಯ ಬಡಜನರ ಸಮಸ್ಯೆಗಳನ್ನು ಪರಿಹರಿಸುವತ್ತ ಯಾವುದೇ ಗಮನ ಹರಿಸದೇ, ವೈಯಕ್ತಿಕ ಲಾಭದ ಲೆಕ್ಕ ಮಾತ್ರ ಹಾಕುವ ನಮ್ಮ ರಾಜಕಾರಣಿಗಳು ಸಾಯಿಬಾಬಾರ ನಿಧನಕ್ಕೆ ಕಣ್ಣೀರು ಸುರಿಸಿ ಸಂತಾಪ ವ್ಯಕ್ತಪಡಿಸುವಾಗ ನನಗೇಕೋ ನಗುಬರುತ್ತಿತ್ತು.

ಕಾಡುಗಳ್ಳ ವೀರಪ್ಪನ್ ರಾಜಕುಮಾರರನ್ನು ಅಪಹರಿಸಿದ ಘಟನೆಯ ಹಿಂದಿನ ಸತ್ಯವನ್ನೇ ಈ ನಾಡಿನ ಜನತೆಯಿಂದ ಮರೆಮಾಚಿದ ಮಾಜೀ ಮುಖ್ಯಮಂತ್ರಿಯೋರ್ವರು, ಮೊನ್ನೆ ಸತ್ಯ ಸಾಯಿಬಾಬಾರ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದುದನ್ನು ಕಂಡಾಗ, ಶ್ರೀ ಸತ್ಯ ಸಾಯಿಬಾಬಾರ ಹೆಸರಿನಲ್ಲಿನ “ಸತ್ಯ” ಎಂಬ ಪದದ ಅರ್ಥವೇನೆಂದು ಯೋಚಿಸತೊಡಗಿದ್ದೆ.

ಅತಿವೃಷ್ಟಿಯಲ್ಲಿ ಮನೆಕಳೆದುಕೊಂಡವರಿಗೆ ಎರಡು ವರುಷಗಳಾದರೂ ಮನೆಕಟ್ಟಿಸಿಕೊಡಲಾಗದ, ರಾಜ್ಯದ ರಾಜಧಾನಿಯಲ್ಲಿ ಪ್ರತಿ ಮಳೆಗೂ ಮೋರಿಯಲ್ಲಿ ಕೊಚ್ಚಿಹೋಗುವ ಮಕ್ಕಳ ಪ್ರಾಣವನ್ನು ಉಳಿಸಲಾಗದ, ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಶ್ರೀ ಸತ್ಯ ಸಾಯಿಬಾಬಾರ ನಿಧನಕ್ಕೆ ಮರುಗಿದ್ದನ್ನು ಕಂಡಾಗ ಮೈಪರಚಿಕೊಳ್ಳುವಂತಾಗಿತ್ತು.

ಪ್ರತೀ ವರುಷ ಪ್ರಶಾಂತಿನಿಲಯಕ್ಕೆ ಭೇಟಿ ನೀಡಿ ವಾಪಾಸಾಗುತ್ತಿದ್ದ ರಾಜಕಾರಣಿಗಳಲ್ಲಿ, ಸಾಯಿಬಾಬಾರ ಸಂದೇಶಗಳಿಗೆ ತನ್ನ ಜೀವನವನ್ನು ಮುಡಿಪಾಗಿಟ್ಟು ನಿಷ್ಠೆಯಿಂದ ಜನಸೇವೆಗೈದವರು ಎಷ್ಟು ಮಂದಿ ಇದ್ದಾರೆ? ಆತನ ಕಾಲಿಗೆ ನಮಸ್ಕರಿಸಿ, ಅತನ ಆಶೀರ್ವಾದ ಪಡೆದು ಬಂದಿದ್ದೇವೆ ಎಂದು ಸುದ್ದಿಮಾಧ್ಯಮಗಳ ಮುಂದೆ ತನ್ನ ಬಾಬಾ ಭಕ್ತಿಯನ್ನು ಪ್ರದರ್ಶಿಸಿದವರು ಆತನ ಮನೋಧರ್ಮಕ್ಕೆ ಅಥವಾ ಸಿದ್ಧಾಂತಗಳಿಗೆ ವಿರುದ್ಧವಾಗಿಯೇ ಬದುಕಲು ಅದು ಹೇಗೆ ಸಾಧ್ಯವಾಗುತ್ತದೆ? ಸುಳ್ಳು, ಕಪಟ, ಭ್ರಷ್ಟಾಚಾರ, ಅತ್ಯಾಚಾರ ಎಲ್ಲವನ್ನೂ ಮೈಗೂಡಿಸಿಕೊಂಡು, ತನ್ನ ಅಧಿಕಾರದ ಕಾಲಾವಧಿಯಲ್ಲಿ ತನಗಾದಷ್ಟು ಸಂಪತ್ತನ್ನು ಕ್ರೋಡೀಕರಿಸಿಕೊಳ್ಳಬೇಕು ಎನ್ನುವ ಬರೀ ಒಂದಂಶದ ಕಾರ್ಯಕ್ರಮವನ್ನೇ ನಡೆಸುವ ಈ ರಾಜಕಾರಣಿಗಳು, ಈ ನಾಡಿಗೆ ಪ್ರೇಮದ ಸಂದೇಶ ನೀಡಿದ ಆ ಸತ್ಯಸಾಯಿಬಾಬಾರ ನಿಧನಕ್ಕೆ ಅದ್ಯಾವ ಮುಖ ಹೊತ್ತು ಸಂತಾಪ ಸೂಚಿಸುತ್ತಾರೆ?

ಆರ್ಥಿಕ ಪರಿಸ್ಥಿತಿ ಹದಗೆಟ್ಟಾಗ ಆತ್ಮಹತ್ಯೆಗೆ ಯತ್ನಿಸಿದ್ದ ಚಿತ್ರ ನಿರ್ದೇಶಕನೋರ್ವ ಬಾಬಾ ನಿಧನರಾದಂದು ಸುದ್ದಿವಾಹಿನಿಯೊಂದರಲ್ಲಿ ದಿನವಿಡೀ ಆ ಬಾಬಾರನ್ನು ಕೊಂಡಾಡಿದ ಪರಿ, ನಿಜಕ್ಕೂ ವಾಕರಿಕೆ ಬರಿಸುತ್ತಿತ್ತು. ಜೀವನವನ್ನು ಏನೆಂದೇ ಅರ್ಥಮಾಡಿಕೊಳ್ಳದೇ, ಓರ್ವ ಹೇಡಿಯಂತೆ ಆತ್ಮಹತ್ಯೆಗೆ ಯತ್ನಿಸಿದ್ದಾತ, ತಾನು  ಬಾಬಾರ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡವನು ಎಂದರೆ ಯಾರು ನಂಬುತ್ತಾರೆ ಹೇಳಿ. ಜೀವನದಲ್ಲಿ ಸಮಸ್ಯೆ ಎದುರಾದಾಗ ಆತ ಪುಟ್ಟಪರ್ತಿಗೇಕೆ ಹೋಗಿ ಬಾಬಾರಿಂದ ಪರಿಹಾರ ಕೇಳಿರಲಿಲ್ಲ? ತಾನು ಆಡುವ ನುಡಿಗೂ ತನ್ನ ನಡೆಗೂ ಅಂತರ ಇರದಂತೆ ಬಾಳಿದರೆ ಮಾತ್ರ ಜನರು ನಂಬಿಯಾರು ಮತ್ತು ಮೆಚ್ಚಿಕೊಂಡಾರು. ಹಣೆಯೊಳಗೂ ಬರಿಯ ಬೂದಿಯೇ ಇರುವುದೆಂದಾದರೆ, ಹಣೆಯ ಮೇಲೆಲ್ಲಾ ವಿಭೂತಿ ಮೆತ್ತಿಕೊಂಡರೆ ಏನು ಪ್ರಯೋಜನ?

ನಾನು ಸಾಯಿಬಾಬಾರನ್ನು ಪೂಜಿಸುವುದಿಲ್ಲ. ಆದರೆ, ಸಾಯಿಬಾಬಾರ ಮಾತುಗಳನ್ನು ಅವರ ಪುಸ್ತಕಗಳಲ್ಲಿ ಓದಿದ್ದೇನೆ. ಅವರ ಸಂದೇಶಗಳನ್ನು ಮೆಚ್ಚಿಕೊಂಡಿದ್ದೇನೆ. ನನಗೆ ವ್ಯಕ್ತಿ ಮುಖ್ಯವಾಗುವುದಿಲ್ಲ. ಯಾವುದೇ ವ್ಯಕ್ತಿ ನೀಡಿದ ಸಂದೇಶಗಳಷ್ಟೇ ಮುಖ್ಯವಾಗುತ್ತವೆ. ಸಾಯಿಬಾಬಾ ತೋರಿಸುತ್ತಿದ್ದ ಪವಾಡಗಳನ್ನು ನಾನು ಒಪ್ಪುವುದಿಲ್ಲ. ಜನ ಮರುಳೋ ಜಾತ್ರೆ ಮರುಳೋ ಅನ್ನುತ್ತಾರೆ. ಹಾಗೆಯೇ, ವಿಭೂತಿ, ಲಿಂಗ, ಚಿನ್ನದ ಸರ, ಇಂತಹ ವಸ್ತುಗಳನ್ನು ಬಾಬಾ ಗಾಳಿಯಲ್ಲಿ ಸೃಷ್ಟಿಸಿ ನೀಡಿದಾಗ ಆತನನ್ನು ಪೂಜಿಸಲು ಆರಂಭಿಸಿದರೇ ವಿನಾ ಸಾಯಿಬಾಬಾರ ಸಂದೇಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನವನ್ನು ಹೆಚ್ಚಿನವರು ನಡೆಸಲೇ ಇಲ್ಲ.

ತಾನು ಇಂತಹವರ ಭಕ್ತ, ತಾನು ಇಂತಹವರ ಅನುಯಾಯಿ ಎನ್ನುವುದರ ಪ್ರದರ್ಶನಕ್ಕೆ ನೀಡಿದಷ್ಟು ಪ್ರಾಮುಖ್ಯ ತಾನು ಏನು ಎಂಬುದರ ಬಗ್ಗೆ ನೀಡುವುದೇ ಇಲ್ಲ ಹೆಚ್ಚಿನವರು. ಮಾತಾಪಿತರ ಮೇಲಿನ ಪ್ರೀತಿ ಮತ್ತು ಗೌರವವನ್ನು ಮೆರೆದ ಶ್ರೀರಾಮನ ಭಕ್ತರೆಂದು ಕರೆಸಿಕೊಳ್ಳುವವರ ಮನೆಗಳಲ್ಲಿ ಮುದಿ ಮಾತಾಪಿತರು ಮಕ್ಕಳ ಆರೈಕೆಗಾಗಿ ಹಾತೊರೆಯುತ್ತಲೇ ಇದ್ದರೆ, ಆ ಮನೆಯೊಳಗೆ ಸಹೋದರರು ಪರಸ್ಪರರ ವಿರುದ್ಧ ಕತ್ತಿ ಮಸೆಯುತ್ತಾ ಇರುವುದು ನಮ್ಮ ಕಣ್ಣಿಗೆ ಬಿದ್ದರೆ ಆಶ್ಚರ್ಯವಿಲ್ಲ. ಹಬ್ಬ ಹರಿದಿನಗಳಲ್ಲಿ, ಮುಂಜಾನೆ ದೇವಸ್ಥಾನಗಳಿಗೆ ಸುತ್ತು ಹಾಕಿ ಕಛೇರಿಗೆ ನಿಯಮಿತ ಸಮಯಕ್ಕಿಂತ ಒಂದೆರಡು ಘಂಟೆ ತಡವಾಗಿ ತಲುಪುವುವವರನ್ನು ನನ್ನಂತೆ ನೀವೂ ಕಂಡಿರಬಹುದು. ತನ್ನ ವೃತ್ತಿಧರ್ಮವ ಮರೆತು ಮಾಡಿದ ಪೂಜೆ ಅದ್ಯಾವ ದೇವರಿಗಿಷ್ಟವೋ ನಾನರಿಯೆ. ರಾಮನವಮಿ, ಶ್ರೀಕೃಷ್ಣ ಜನ್ಮಾಷ್ಟಮಿ, ವಿನಾಯಕ ಚೌತಿಗಳನ್ನು  ತಪ್ಪದೇ ಆಚರಿಸುವ ನಮಗೆ, ನಮ್ಮ ಕುಟುಂಬದಲ್ಲಿ ಒಂದು ಪೀಳಿಗೆಯ ಹಿಂದಿನವರ ಜನ್ಮದಿನಾಂಕಗಳು ನೆನಪಿವೆಯೇ?

ನಾವು ಯಾರ ಭಕ್ತರು, ಯಾರ ಹಿಂಬಾಲಕರು, ಯಾರನ್ನು ಪೂಜಿಸುತ್ತೇವೆ ಅನ್ನುವುದು ಎಳ್ಳಷ್ಟೂ ಪ್ರಾಮುಖ್ಯವಲ್ಲ. ನಾವು ಯಾರ ಸಂದೇಶಗಳನ್ನು, ನೀತಿ ಪಾಠಗಳನ್ನು, ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬಾಳುತ್ತಿದ್ದೇವೆ, ನಮ್ಮ ಜೀವನದಿಂದ ನಮ್ಮ ಕಿರಿಯರಿಗೆ ನಾವು ನೀಡುತ್ತಿರುವ ಸಂದೇಶಗಳೇನು ಅನ್ನುವುದಷ್ಟೇ ಪ್ರಾಮುಖ್ಯವಾಗಬೇಕು.

ಸತ್ಯ ಸಾಯಿಬಾಬಾ ಅಥವಾ ಅಂತಹ ಓರ್ವ ವ್ಯಕ್ತಿಯ ಸಾವಿನಿಂದ ಆತನ ಅನುಯಾಯಿಗಳಿಗೆ, ಆತನ ನೀತಿಪಾಠವನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು ಬಾಳುವವರಿಗೆ ಹೆಚ್ಚಿನ ನಷ್ಟವೇನೂ ಆಗಲಾರದು. ಆದರೆ ಪ್ರತಿ ವರುಷ ಪುಟ್ಟಪರ್ತಿಗೆ ಭೇಟಿ ನೀಡಿ ಸಾಯಿಬಾಬಾರ ಪಾದಗಳಿಗೆ ನಮಸ್ಕರಿಸಿ, ಅದರ ಪ್ರಚಾರವನ್ನು ನಾಲ್ಕು ಊರುಗಳಲ್ಲಿ ಮಾಡಿ ಬರುತ್ತಿದ್ದವರಿಗೆ ನಿಜವಾಗಿಯೂ ತುಂಬಲಾರದ ನಷ್ಟವಾಗಿರಬಹುದು.

ಸಾಯಿಬಾಬಾರ ಯೋಜನೆಗಳನ್ನು ಈಗಿನ ಗತಿಯಲ್ಲೇ  ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಅಲ್ಲಿನ “ಟ್ರಸ್ಟ್”ನ ಮೇಲೆ ಇದೆ. ಆ “ಟ್ರಸ್ಟ್” ತನ್ನ ಜವಾಬ್ದಾರಿಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಿಕೊಂಡು ಹೋಗಲು ವಿಫಲವಾದರೆ ಅಥವಾ ಬಾಬಾ ಕ್ರೋಡೀಕರಿಸಿರುವ ಆ ಅಪಾರ ಸಂಪತ್ತನ್ನು ಒಂದುವೇಳೆ ಲೂಟಿಮಾಡಿ ತಮ್ಮ ಸ್ವಂತಕ್ಕೆ ಬಳಸುವ ಕೆಟ್ಟ ಮನಸ್ಸು ಮಾಡಿದರೆ, ಆಗ ಸಾಯಿಬಾಬಾರ ಅಗಲಿಕೆಯಿಂದ, ಸಾಯಿಬಾಬಾರ ಯೋಜನೆಗಳಿಂದ ಪ್ರಯೋಜನ ಪಡೆಯುತ್ತಿದ್ದ ಜನ ಸಾಮಾನ್ಯರಿಗೆ ನಷ್ಟವಾದೀತು, ಬಡಬಗ್ಗರಿಗೆ ನಷ್ಟವಾದೀತು.

ಮಹಾಮಾತೆ ತೆರೆಸಾ ಅಳಿದ ನಂತರ ಆ ಮಿಷನರಿಗಳ ಬಗ್ಗೆ ಈಚಿನ ದಿನಗಳಲ್ಲಿ ಹೆಚ್ಚಿನ ಸುದ್ದಿಯೇ ಕೇಳಿಬರುತ್ತಿಲ್ಲ. ಹಾಗಾಗಿಯೇ ಓರ್ವ ವ್ಯಕ್ತಿಯಷ್ಟೇ ಪ್ರಾಮುಖ್ಯನಾಗಿಬಿಟ್ಟು, ಆತನ ಅಗಲಿಕೆಯ ನಂತರ ಆತನ ಎಲ್ಲಾ ಯೋಜನೆಗಳೂ ಹಳಿತಪ್ಪಿದಂತಾಗಬಾರದು. ಸಾಯಿಬಾಬಾ ಅಳಿದರೇನಂತೆ, ಆತನ ಸಂದೇಶಗಳು ಆತನ ಅನುಯಾಯಿಗಳಿಗೆ ಸನ್ನಡತೆಯಿಂದ, ಸನ್ಮಾರ್ಗದಲ್ಲಿ ಮುನ್ನಡೆಯುವಂತೆ ದಾರಿದೀಪವಾಗಿ ಕಾಪಾಡುತ್ತಿರಲಿ.

ಸಾಯಿಬಾಬಾರ ದೌರ್ಬಲ್ಯಗಳೇನೇ ಇದ್ದಿದ್ದರೂ, ಸಾಮಾಜಿಕ ಸೇವೆಯ ವಿಭಿನ್ನ ಕ್ಷೇತ್ರಗಳಲ್ಲಿ ನಿಸ್ವಾರ್ಥಿಯಾಗಿ ಆತ ಗೈದ ಸಾಧನೆಗಳನ್ನು ಅಲ್ಲಗಳೆಯಲಾಗದು. ಆ ಎಲ್ಲಾ ಯೋಜನೆಗಳನ್ನೂ ಕಿಂಚಿತ್ತೂ ಲೋಪವಾಗದಂತೆ, ಕಿಂಚಿತ್ತೂ ಅನುಮಾನಕ್ಕೆ ಎಡೆಮಾಡಿಕೊಡದಂತೆ, ಪಾರದರ್ಶಕ ರೀತಿಯಲ್ಲಿ, ಮುಂದುವರಿಸಿಕೊಂಡು ಹೋಗಲು ಸಾಯಿಬಾಬಾ “ಟ್ರಸ್ಟ್”ನ ಸದಸ್ಯರು ಪಣತೊಟ್ಟರೆ, ಅಗಲಿದ ಆತ್ಮಕ್ಕೆ ನಾವೆಲ್ಲರೂ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಎನಿಸುವುದು.
**********

ಈ ಲೇಖನ ಇಂದು ಉದಯವಾಣಿಯ ಮಣಿಪಾಲ ಮತ್ತು ಮುಂಬಯಿ ಆವೃತ್ತಿಗಳಲ್ಲಿ ಪ್ರಕಟವಾಗಿರುತ್ತದೆ.


ನಿಸ್ವಾರ್ಥ ರಾಷ್ಟೀಯ ನಾಯಕತ್ವದ ಕೊರತೆ ಇಂದು ನೀಗಿದೆ

18 ಏಪ್ರಿಲ್ 11

 

ಮುಂಜಾನೆ ಗಂಟೆ ಏಳೂಕಾಲು. ಮೂರನೇ ತರಗತಿಯಲ್ಲಿ ಕಲಿಯುತ್ತಿರುವ ಮಗು ಇನ್ನೂ ಸುಖ ನಿದ್ದೆಯಲ್ಲಿದೆ. ತಾಯಿ ಹೋಗಿ ಮಗನನ್ನು ಎಬ್ಬಿಸುತ್ತಾಳೆ. “ಏಳು ಮಗಾ, ಶಾಲೆಗೆ ಹೋಗ್ಬೇಕು, ತಡ ಮಾಡಿದ್ರೆ ಶಾಲೆಯ ಬಸ್ಸು ಹೋಗಿ ಬಿಡುತ್ತದೆ, ಬೇಗ ಏಳು… ಬೇಗ ಏಳು”. ಮಗ ಏಳುವ ಲಕ್ಷಣವೇ ಕಾಣುತ್ತಿಲ್ಲ. ತಾಯಿ ಮೆಲ್ಲಗೇ ಆತನ ಕಿವಿಯಲ್ಲಿ ಉಸುರುತ್ತಾಳೆ, “ನಿನಗೆ ಇಷ್ಟವಾದ ತಿಂಡಿ ಮಾಡಿದ್ದೇನೆ. ಜೊತೆಗೆ ಎರಡು ಚಾಕಲೇಟು ಕೂಡ ಕೊಡ್ತೇನೆ. ಜಾಣ ಮರಿ ಬೇಗ ಏಳು”. ಚಾಕಲೇಟಿನ ಹೆಸರು ಕಿವಿಗೆ ಬೀಳುತ್ತಲೇ ಮಗನ ಮುಖದಲ್ಲಿ ನಸು ನಗು. ಕೂಡಲೇ ಎದ್ದು ಕುಳಿತು, “ಮೊದಲು ಚಾಕಲೇಟು ಕೊಡು, ಆಮೇಲೆ ಬರ್ತೇನೆ” ಅಂತಾನೆ. ತಾಯಿ ಕೂಡಲೇ ಚಾಕಲೇಟುಗಳನ್ನು ನೀಡ್ತಾಳೆ. ಮಗ ಎದ್ದು ಬೇಗ ಬೇಗನೇ ಪ್ರಾತಃವಿಧಿಗಳನ್ನು ಪೂರೈಸಿ ಶಾಲೆಗೆ ಶಾಲಾ ವಾಹನದಲ್ಲಿಯೇ ಹೋಗುತ್ತಾನೆ.

ಸಾಯಂಕಾಲ ಶಾಲೆಯಿಂದ ಮರಳುವ ಮಗ, ಶಾಲೆಯಲ್ಲಿ ಹೇಳಿರುವ ಮನೆಗೆಲಸಗಳನ್ನು ಮಾಡಲು ಉದಾಸೀನ ತೋರಿದಾಗ ಮತ್ತೆ ಅದೇ ತಾಯಿ, “ಹಣ್ಣಿನ ರಸ ಕೊಡುತ್ತೇನೆ, ತಂಪು ಪಾನೀಯ ಕೊಡ್ತೇನೆ, ಬಾ ಏನೆಲ್ಲಾ ಮನೆಗೆಲಸ ಕೊಟ್ಟಿದ್ದಾರೋ ಎಲ್ಲಾ ಮಾಡಿ ಮುಗಿಸು” ಅಂತಾಳೆ. ಮಗ ನಗುನಗುತ್ತಾ ಒಪ್ಪಿಕೊಳ್ತಾನೆ. ಹಾಗಲ್ಲವಾದರೆ, ಒಮ್ಮೊಮ್ಮೆ ಆ ತಾಯಿಯೇ ತನ್ನ ಮಗನ ಮನೆಗೆಲಸಗಳನ್ನೆಲ್ಲಾ ಮಾಡಿಮುಗಿಸಿ ಕೊಟ್ಟುಬಿಡುತ್ತಾಳೆ.

ಇದು ಒಂದು ಮನೆಯ ಕಥೆಯಲ್ಲ, ಒಂದು ದಿನದ ಕಥೆಯೂ ಅಲ್ಲ. ಇದು ಹೆಚ್ಚಿನ ಎಲ್ಲಾ ಮನೆಗಳಲ್ಲೂ ಹೆಚ್ಚಿನೆಲ್ಲಾ ದಿನಗಳಲ್ಲೂ ನಡೆಯುವ ಕಥೆ. ಅಲ್ಲದೆ, ಇದು ಮನೆಯೊಳಗಿನ ಭ್ರಷ್ಟಾಚಾರದ ಒಂದು ನಿದರ್ಶನ ಅಷ್ಟೇ.

ಸಾಮಾನ್ಯವಾಗಿ ಗಮನಿಸಿದಾಗ ನಮಗೆ ಇದರಿಂದೇನೂ ಅನಿಸದು. ತೀರ ಸಾಮಾನ್ಯ ವಿಷಯವಾಗಿಯೇ ಕಂಡುಬರುವುದು. ಆದರೆ ವಿಮರ್ಶಾತ್ಮಕವಾಗಿ ನೋಡಿದಾಗ, ನಮಗೆ ಕಂಡುಬರುವುದೇ ಬೇರೆ. ಪುಟ್ಟ ಪುಟ್ಟ ಮಕ್ಕಳಿಗೆ ಲಂಚ ತಿನ್ನುವ ಅಭ್ಯಾಸವನ್ನು ನಾವು ಆಗಲೇ ಕಲಿಸಿಯಾಗಿರುತ್ತದೆ. ಇನ್ನು ಮಕ್ಕಳ ವಯಸ್ಸು ಬದಲಾಗುತ್ತಾ ಹೋದಂತೆ, ಮಕ್ಕಳಿಗೆ ನೀಡುವ ಲಂಚವೂ ಬದಲಾಗುತ್ತಾ ಹೋಗುತ್ತದೆ.  ಆ ಅಭ್ಯಾಸ ಕಾಲ ಕಳೆದಂತೆ ಬೆಳೆಯುತ್ತಾ ಹೋಗುತ್ತದೆ. ಇಂದು ಗಿಡನೆಟ್ಟು ಪೋಷಿಸುವ ನಾವು, ನಾಳೆ ಆ ಮರಗಳ ಕೊಂಬೆಗಳನ್ನು ಎಷ್ಟೇ ಕಡಿದರೂ, ಅದರ ಬೇರನ್ನು ಕಿತ್ತೊಗೆಯಲು ನಮ್ಮಿಂದ ಸಾಧ್ಯವಾಗುವುದಿಲ್ಲ.

ನಾವು ನಮ್ಮ ಮಕ್ಕಳಿಗೆ, ನಮ್ಮ ಕಿರಿಯರಿಗೆ, ಮಾರ್ಗದರ್ಶಕರಾಗಬೇಕು. ಅವರ ಕೆಲಸಗಳಿಗೆ ನಾವೇ ಬದಲೀ ವ್ಯವಸ್ಥೆಯಾಗಿ ಮಾರ್ಪಡಬಾರದು. ಅವರ ಕೆಲಸಗಳನ್ನು ಅವರೇ ಮಾಡುವಂತೆ ಸದಾ ಹುರಿದುಂಬಿಸಬೇಕು. ಸಮಯ ಪಾಲನೆಯ ಬಗ್ಗೆ, ಕರ್ತವ್ಯ ನಿಷ್ಠೆಯ ಬಗ್ಗೆ ಸರಿಯಾದ ಅರಿವು ಮೂಡಿಸಬೇಕು. ಇವುಗಳಿಂದ ದೂರವುಳಿದಾಗ ಅವರಿಗೆ ಬಾಳಿನಲ್ಲಿ ಆಗುವ ನಷ್ಟದ ಅರಿವು ಅವರಿಗೆ ಮನದಟ್ಟಾಗುವಂತೆ ವಿವರಿಸಬೇಕು. ಅವರ ವಿದ್ಯಾಭ್ಯಾಸವೋ, ಜೀವನವೋ, ಇನ್ನೊಂದೋ ಅದೇನೇ ಇದ್ದರೂ ಅದು ಅವರಿಗಾಗಿ, ನಮಗಾಗಿ ಅಲ್ಲ. ಮಾತಾಪಿತರಿಗಾಗಿ ಅಲ್ಲ. ಅವರು ಅವುಗಳಿಂದ ವಿಮುಖರಾದರೆ ಮಾತಾಪಿತರಿಗಾಗುವ ನೋವಿಗಿಂತಲೂ, ಅಧಿಕವಾಗಿ ಅವರಿಗೇ ನಷ್ಟವಾಗುತ್ತದೆ, ನೋವುಂಟಾಗುತ್ತದೆ, ಸೋಲುಂಟಾಗುತ್ತದೆ ಎನ್ನುವುದನ್ನು ಚಿಕ್ಕಂದಿನಲ್ಲೇ ಮನದಟ್ಟು ಮಾಡಿಕೊಡಬೇಕು. ಇದರಿಂದ ಮಕ್ಕಳು ಒಳ್ಳೆಯ ಜೀವನವನ್ನು ರೂಪಿಸಿಕೊಳ್ಳುವತ್ತ ಮಾರ್ಗದರ್ಶನ ನೀಡಿದಂತಾಗುತ್ತದೆ ಅಲ್ಲದೆ, ಅವರು ಭ್ರಷ್ಟರಾಗದಂತೆ ತಡೆದಂತೆಯೂ ಆಗುತ್ತದೆ.

ಲಂಚ ಪಡೆಯುವುದನ್ನಷ್ಟೇ ಭ್ರಷ್ಟಾಚಾರ ಎನ್ನಲಾಗದು. ಓರ್ವ ವ್ಯಕ್ತಿ ತನ್ನ ವಯಸ್ಸು, ವೃತ್ತಿ ಮತ್ತು ಸ್ಥಾನಕ್ಕೆ ಸರಿಯಾದ ನೈತಿಕ ಕರ್ತವ್ಯದಿಂದ ವಿಮುಖನಾದರೆ, ತನ್ನ ವೃತ್ತಿ ಧರ್ಮ, ಸ್ಥಾನ ಧರ್ಮ ಅಥವಾ ವಯಸ್ಸಿನ ಧರ್ಮಕ್ಕೆ ವಿರುದ್ಧವಾದ ಯಾವುದೇ ಕೆಲಸ ಮಾಡಿದನಾದರೂ ಆತ ಭ್ರಷ್ಟನೆನಿಸಿಕೊಳ್ಳುತ್ತಾನೆ. ಈ ದೃಷ್ಟಿಕೋನದಿಂದ ನೋಡುವಾಗ ಪ್ರತಿಯೊಂದು ಮನೆಯಲ್ಲೂ ಪ್ರತಿಯೊಂದು ಮನದಲ್ಲೂ ಭ್ರಷ್ಟಾಚಾರ ಮನೆ ಮಾಡಿದೆ ಎನ್ನುವುದರ ಅರಿವು ನಮಗಾಗುತ್ತದೆ.

ಹಾಗಾಗಿ ನಮ್ಮೆಲ್ಲರ ಮನ ಮನೆಗಳಿಂದ ಭ್ರಷ್ಟಾಚಾರವನ್ನು ಬೇರು ಸಹಿತ ಕಿತ್ತೊಗೆಯಲು ನಾವೆಲ್ಲರೂ ಪಣತೊಡಬೇಕಾಗಿದೆ.. ಈ ಪ್ರಸ್ತುತ ಜನಾಂಗಕ್ಕಲ್ಲದಿದ್ದರೂ ನಮ್ಮ ಮುಂದಿನ ಪೀಳಿಗೆಗಾಗಿಯಾದರೂ ಒಂದು ಭ್ರಷ್ಟಾಚಾರ ಮುಕ್ತ ಸುಂದರ ಸಮಾಜವನ್ನು ಬಿಟ್ಟುಹೋಗುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸಬೇಕಾಗಿದೆ.

ನಮ್ಮೆಲ್ಲರ ಮನಗಳಲ್ಲೂ ಈ ಭ್ರಷ್ಟಾಚಾರದ ವಿರುದ್ಧ ಸಮರ ಸಾರಬೇಕೆಂಬ ಇಚ್ಛೆ ಇದ್ದೇ ಇದೆ.  ಏಕೆಂದರೆ ನಾವೆಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಭ್ರಷ್ಟಾಚಾರದ ಪಿಡುಗಿಗೆ ಬಲಿಯಾದವರೇ. ಬಿಡುವಿಲ್ಲದ ದಿನಚರಿಯ ನಡುವೆ ಸಮಯದ ಅಭಾವದಿಂದಾಗಿಯೋ, ನೈತಿಕ ಬೆಂಬಲದ ಕೊರತೆಯಿಂದಾಗಿಯೋ, ಹೋರಾಡುವ ಚೈತನ್ಯ ಮತ್ತು ಶಕ್ತಿಯ ಕೊರತೆಯಿಂದಾಗಿಯೋ, ಒಲ್ಲದ ಮನಸ್ಸಿನಿಂದ, ನಮ್ಮ ಸಿಟ್ಟನ್ನು ಅಸಹಾಯಕರಾಗಿ ಒಳಗೊಳಗೇ ನುಂಗಿಕೊಳ್ಳುತ್ತಾ  ಭ್ರಷ್ಟಾಚಾರವನ್ನು ಸಹಿಸುತ್ತಾ ಬಂದಿದ್ದೇವೆ. ಅಥವಾ ಭ್ರಷ್ಟಾಚಾರದಲ್ಲಿ ನಾವೂ ಪಾಲುದಾರರಾಗಿದ್ದೇವೆ.

ಇಂದು ದೂರದ ನಾಡಿನಲ್ಲಿ ಅಣ್ಣಾ ಹಜಾರೆ ಎನ್ನುವ ಅಪರಿಚಿತ ವ್ಯಕ್ತಿ ಸೆಟೆದು ನಿಂತಾಗ, ಯಾರೋ ನಮ್ಮ ಮನದ ಬೇಗುದಿಯನ್ನು ಹೊರಹಾಕಲು ನಮಗೆ ಸಹಾಯ ಮಾಡಲು ನಿಂತಂತೆ ಕಂಡು ಬರುತ್ತಾರೆ. ಹಾಗಾಗಿ, ನಾವು ನಮ್ಮ ಬೇಸತ್ತ ಅಸಹಾಯಕ ಮನದ ದುಗುಡಗಳನ್ನು, ಘೋಷಣೆಗಳ ಮೂಲಕ, ಚರವಾಣಿ ಸಂದೇಶಗಳ ಮೂಲಕ, “ಫೇಸ್ ಬುಕ್, ಟ್ವಿಟ್ಟರ್‍‍ಗಳಂತಹ” ಮಾಧ್ಯಮಗಳ ಮೂಲಕ ಹೊರಹಾಕಲು ಧೈರ್ಯತಾಳುತ್ತೇವೆ.  ನಮಗೆ ಆ ವ್ಯಕ್ತಿ ಅಷ್ಟೊಂದು  ಮುಖ್ಯವಾಗುವುದಿಲ್ಲ. ಆತನ ನಿಸ್ವಾರ್ಥ ಧೋರಣೆ ನಮಗೆ ಮುಖ್ಯವಾಗುತ್ತದೆ ಮತ್ತು ಆಪ್ತವಾಗುತ್ತದೆ. ಈ ದೇಶದ ಜನತೆಯಲ್ಲಿ ದೈರ್ಯ ತುಂಬಿ, ಜನತೆಯನ್ನು  ಮನ್ನಡೆಸಿಕೊಂಡು ಹೋಗಬಲ್ಲ ನಿಸ್ವಾರ್ಥಿ ನಾಯಕನೊಬ್ಬನ ಕೊರತೆಯನ್ನು ನೀಗಿಸಬಲ್ಲ ವ್ಯಕ್ತಿ ಅದು ಯಾರೇ ಆದರೂ ಅವರು ಸ್ವಾಗತಾರ್ಹರೇ. ಈಗ ಅಣ್ಣಾ ಹಜಾರೆ ಆ ಕೊರತೆಯನ್ನು ನೀಗಿದ್ದಾರೆ. ಹಾಗಾಗಿ ಅವರು ಸ್ವಾಗತಾರ್ಹರು. ನಮ್ಮ ಸಂಪೂರ್ಣ ಬೆಂಬಲಕ್ಕೆ ಅರ್ಹರು, ಭಾಜನರು.

ಬಹುಶಃ ಮಹಾತ್ಮಾ ಗಾಂಧಿಯವರ ನಂತರ ಈ ದೇಶ ಕಂಡ ಪ್ರಥಮ ರಾಷ್ಟ್ರೀಯ ನಾಯಕ ಅಣ್ಣಾ ಹಜಾರೆ ಎಂದರೆ ಅತಿಶಯೋಕ್ತಿಯೆನಿಸದು. ೧೯೭೦ರ ದಶಕದ ಉತ್ತರಾರ್ಧದಲ್ಲಿ, ಆಗಿನ ಪ್ರದಾನಿ ದಿ. ಇಂದಿರಾ ಗಾಂಧಿಯವರು ದೇಶದಲ್ಲಿ  ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಿ ಸರ್ವಾಧಿಕಾರ ನಡೆಸಿದ್ದರು. ಆಗ ಆಕೆಯ  ವಿರುದ್ದ ಸಮರ ಸಾರಿದ್ದ ಜಯಪ್ರಕಾಶ್ ನಾರಾಯಣ್ ಕೂಡ ದಕ್ಷಿಣ ಭಾರತದ ರಾಜ್ಯಗಳಲ್ಲಿ ಅಷ್ಟೊಂದು ಸಫಲರಾಗಿರಲಿಲ್ಲ.  ಅವರ ನಾಯಕತ್ವ ಉತ್ತರ ಭಾರತದ ರಾಜ್ಯಗಳಿಗಷ್ಟೇ ಸೀಮಿತವಾಗಿ ಬಿಟ್ಟಿತ್ತು. ಮಾರ್ಚ್ ೧೯೭೭ರಲ್ಲಿ  ನಡೆದ ಮಹಾಚುನಾವಣೆಯಲ್ಲಿ ದಕ್ಷಿಣದ ರಾಜ್ಯಗಳಿಂದ ಕಾಂಗ್ರೇಸ್ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ವಿಜಯ ಗಳಿಸಿದ್ದರು.

ಆದರೆ, ಈಗ ಪ್ರಕಟವಾಗಿರುವ ರಾಷ್ಟ್ರವ್ಯಾಪಿ ಬೆಂಬಲದಿಂದಾಗಿ ಇಂದು ಅಣ್ಣಾ ಹಜಾರೆಯವರಲ್ಲಿ ನಾವು ಓರ್ವ ರಾಷ್ಟನಾಯಕನನ್ನು ಕಾಣಲು ಸಾಧ್ಯವಾಗಿದೆ ಎಂದು ಅನಿಸುತ್ತಿದೆಯಾದರೆ ಅದರಲ್ಲಿ ತಪ್ಪೇನಿಲ್ಲ. ಇದುವರೆಗೆ ಇದ್ದ ರಾಷ್ಟ್ರೀಯ ನಾಯಕತ್ವದ ಕೊರತೆ ನೀಗಿದೆ ಎಂದು ನಮಗೀಗ ಅನಿಸುತ್ತಿದೆ. ಅಣ್ಣಾ ಹಜಾರೆಯವರು ಯಾವುದೇ ರಾಜಕೀಯ ಪಕ್ಷದತ್ತ ವಾಲದೇ, ಯಾವುದೇ ಪಟ್ಟ ಭದ್ರ ಹಿತಾಸಕ್ತಿಗಳ ಕೈವಶವಾಗದೇ, ತನ್ನ ಇಂದಿನ ಧೋರಣೆಗಳನ್ನೇ ಉಳಿಸಿಕೊಂಡು ಇದ್ದಷ್ಟು ದಿನ ನಾವು ಅವರನ್ನು ಕಣ್ಣು ಮುಚ್ಚಿಕೊಂಡು, ತುಂಬು ಮನದಿಂದ ಹಿಂಬಾಲಿಸಬಹುದು.

ಇನ್ನೇನು ಬೇಕು ನಮಗೆ? ಇನ್ನು ಕಾಯುವುದೇಕೆ? ಈ ದೇಶವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ಎಲ್ಲರೂ ಒಂದಾಗಿ ಮುನ್ನಡೆಯೋಣ. ಮನೆ ಮನೆಯಲ್ಲೂ, ಮನ ಮನದಲ್ಲೂ, ಭ್ರಷ್ಟಾಚಾರ ವಿರೋಧೀ ಬೀಜವನ್ನು ಬಿತ್ತೋಣ ಮತ್ತು ಅದನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಾ,  ನೈತಿಕತೆಯ ನೀರು ಮತ್ತು ಧಾರ್ಮಿಕತೆಯ ಗೊಬ್ಬರ ನೀಡುತ್ತಾ ಪೋಷಿಸೋಣ. ನಮ್ಮ ಮುಂದಿನ ಪೀಳಿಗೆಗೆ ಭ್ರಷ್ಟಾಚಾರ ಮುಕ್ತ ಸಮಾಜವನ್ನು ನಿರ್ಮಾಣಗೊಳಿಸೋಣ. ಬದಲಾವಣೆ ಕಾಣಬೇಕಾಗಿರುವ ಹತ್ತು ಹಲವು ಕ್ಷೇತ್ರಗಳಲ್ಲಿ, ನಿಧಾನವಾಗಿ ಬದಲಾವಣೆಗಳನ್ನು ತರೋಣ. ನಮ್ಮ ನಿಮ್ಮೆಲ್ಲರ ಬೆಂಬಲ ಇಲ್ಲದೇ ಅಣ್ಣಾ ಹಜಾರೆಯಂಥ ನಾಯಕರದೂ ಒಂಟಿ ದನಿಯಾದೀತು. ಅರಣ್ಯ ರೋದನವಾದೀತು. ಹಾಗಾಗಿ ನಾವೆಲ್ಲರೂ ಮನದೊಳಗಿನ ಸುಪ್ತ ಇಚ್ಛಾಶಕ್ತಿಯನ್ನು ಜಾಗೃತಗೊಳಿಸೋಣ.

ಬರಿಯ ಜನ ಲೋಕಪಾಲ ಮಸೊದೆಯೊಂದೇ ಸಾಧಿಸದು ಏನನ್ನೂ, ಪ್ರತಿ ಭಾರತೀಯನೂ ಮೆರೆಯದೇ ಇದ್ದರೆ ತನ್ನ ಇಚ್ಛಾಶಕ್ತಿಯನ್ನು.
*****

ಉದಯವಾಣಿಯ ಮಣಿಪಾಲ ಮತ್ತು ಮುಂಬಯಿ ಆವೃತ್ತಿಗಳಲ್ಲಿ ಶನಿವಾರ (೧೬ ಎಪ್ರಿಲ್ ೨೦೧೧) ದಂದು ಪ್ರಕಟವಾಗಿರುವ ಲೇಖನ! (ಅದನ್ನು ನೇರವಾಗಿ ವೀಕ್ಷಿಸಲು ಈ ಕೊಂಡಿಯನ್ನು ಬಳಸಿ)

ಇದೇ ಲೇಖನ ಈ ವಾರದ “ನಿರಂತರ ಕರ್ನಾಟಕ” ವಾರಪತ್ರಿಕೆಯಲ್ಲಿ ಹಾಗೂ ಉದಯವಾಣಿಯ ಬೆಂಗಳೂರು ಮತ್ತು ಹುಬ್ಬಳ್ಳಿ  ಆವೃತ್ತಿಗಳಲ್ಲಿ ಬುಧವಾರ, ೨೦ ಎಪ್ರಿಲ್ ೨೦೧೧ರಂದು ಪ್ರಕಟವಾಗಿದೆ.


ಭಾಷೆಯ ಕಲಿಕೆಗೆ, ಕಲಿಕೆಯ ಮಾಧ್ಯಮ ಅಡ್ಡಿಯಾಗಬಾರದು!

18 ಮಾರ್ಚ್ 11

ಕನ್ನಡಿಗರು ಅನ್ಯ ಭಾಷಿಗರ ಜೊತೆಗೆ ಮಾತನಾಡುವಾಗ ಮಾತೃಭಾಷೆಯನ್ನು ಬಳಸದೇ, ಅನ್ಯರ ಭಾಷೆಯಲ್ಲಿಯೇ ವ್ಯವಹರಿಸುತ್ತಾರೆ ಅನ್ನುವ ಅಪವಾದ ಇದೆ. ಆದರೆ, ಇದು ಬೆಂಗಳೂರಿನಂತಹ ನಗರ ಪ್ರದೇಶಗಳಿಗೇ ಮಾತ್ರ ಸೀಮಿತ. ಹಳ್ಳಿಗಳಲ್ಲಿ, ಅಥವಾ ಚಿಕ್ಕ ಪಟ್ಟಣಗಳಲ್ಲಿ ಇದು ಹೆಚ್ಚಾಗಿ ಕಂಡುಬರುವುದಿಲ್ಲ.

ನಗರ ಪ್ರದೇಶಗಳಲ್ಲಿ ವಾಸಿಸುವ ನಾವು ಕನ್ನಡಿಗರು ಯಾವ ಪರಭಾಷಿಗರೊಂದಿಗೆ ಇದ್ದರೂ, ಅವರೊಂದಿಗೆ ವ್ಯವಹರಿಸಲು ಬೇಕಾದ ಭಾಷೆಯನ್ನು ಬಳಸುತ್ತೇವೆ. ಇದಕ್ಕೆ ಕಾರಣವೇನೆಂದರೆ ನಗರ ಪ್ರದೇಶಗಳಲ್ಲಿ ವಾಸಿಸುವ ಹೆಚ್ಚಿನ ಕನ್ನಡಿಗರು ಪರಭಾಷೆಗಳನ್ನು ಕಲಿಯುವುದರಲ್ಲಿ ನಿಸ್ಸೀಮರು. ಅಲ್ಲದೇ, ಅನ್ಯಭಾಷಿಗರು ನಮ್ಮ ಮಾತೃಭಾಷೆಯನ್ನು ಆಡಲು ಹೋಗಿ, ಅದರ ಮೇಲೆ ಅತ್ಯಾಚಾರ ನಡೆಸುವುವುದನ್ನು ತಪ್ಪಿಸಲು, ಕನ್ನಡಿಗರು ಅವರದೇ ಭಾಷೆಯಲ್ಲಿ ಮಾತಾಡುವ ಯತ್ನ ಮಾಡಿ ತಮ್ಮ ವ್ಯವಹಾರವನ್ನು ಅದಷ್ಟು ಬೇಗ ಮುಗಿಸುವ ಮನಸ್ಸು ಮಾಡುತ್ತೇವೆ. ನಾವು ಅನ್ಯ ಭಾಷೆಯ ಮೇಲೆ ಅತ್ಯಾಚಾರ ನಡೆಸಿದರೂ ಪರವಾಗಿಲ್ಲ, ಆದರೆ, ಅನ್ಯರು ನಮ್ಮ ಭಾಷೆಯ ಮೇಲೆ ಅತ್ಯಾಚಾರ ನಡೆಸುವುದನ್ನು ನಾವು ಸಹಿಸುವುದಿಲ್ಲ, ಎಂದೂ ಹೇಳಬಹುದು.

ಯೋಚಿಸಿ ನೋಡಿದರೆ ಹೆಚ್ಚಿನ ಸಂದರ್ಭಗಳಲ್ಲಿ ಆಗುವುದೇ ಹೀಗೆ. ಇದನ್ನು ನಾನು ಸರಿಯೆಂದೂ ಅಥವಾ ನಾನು ಕೂಡ ಎಲ್ಲಾ ಸಂದರ್ಭಗಳಲ್ಲೂ ಇದನ್ನೇ ಮಾಡುತ್ತೇನೆ ಎಂದೂ ಅನ್ನಲಾರೆ. ಆದರೆ, ಮನುಜನ ಮಾನಸಿಕ ಸ್ಥಿತಿಯನ್ನು ವಿಭಿನ್ನ ದೃಷ್ಟಿಕೋನದಿಂದ ಅರಿಯುವ ಯತ್ನ ಮಾಡಿದ್ದೇನೆ ಅಷ್ಟೇ. ಹೀಗಾಗುವುದಕ್ಕೆ ನಮಗೆ ನಮ್ಮ ಮಾತೃಭಾಷೆಯ ಮೇಲಿರುವ ಪ್ರೇಮವೇ ಕಾರಣವಾಗಿರಬಹುದು ಅನ್ನುವುದು ನನ್ನ ಅನಿಸಿಕೆ. ಇದನ್ನು ಮಾತೃಭಾಷೆಯ ಮೇಲಿನ ಪ್ರೇಮದ ಕೊರತೆ ಅನ್ನುವವರೂ ಇದ್ದಾರೆ. ಆದರೆ, ನನಗೆ ಹಾಗನಿಸದು.

ಇನ್ನು ಕೆಲವೊಮ್ಮೆ, ಇಬ್ಬರು ಕನ್ನಡಿಗರು, ಪರಸ್ಪರರೊಂದಿಗೆ ಕನ್ನಡೇತರ ಭಾಷೆಯಲ್ಲಿ ವ್ಯವಹರಿಸುತ್ತಾರಾದರೆ, ಅಲ್ಲಿ, ಅವರೀರ್ವರಿಗೂ ಮಾತೃಭಾಷೆಯ ಮೇಲಿನ ಪ್ರೇಮದ ಕೊರತೆ ಇದೆ ಅಥವಾ ಕೀಳರಿಮೆಯೇ ಕಾರಣ ಎಂದು ನನ್ನ ಅನಿಸಿಕೆ. ಮಾತೃಭಾಷೆಯಲ್ಲಿ ಮಾತನಾಡಿದರೆ, ಅಕ್ಕಪಕ್ಕದವರು ತಮ್ಮನ್ನು ಅವಿದ್ಯಾವಂತರೆಂದು ಪರಿಗಣಿಸಬಹುದೆನ್ನುವ ಅಳುಕೂ ಇರಬಹುದೇನೋ.

ನಿನ್ನೆ ಅಂತರ್ಜಾಲದ ಸ್ನೇಹಿತರೋರ್ವರು ಕನ್ನಡನಾಡಿನಲ್ಲಿ ಕನ್ನಡದ ಬೆಳವಣಿಗೆಗಾಗಿ ಏನು ಮಾಡಬಹುದು? ಎನ್ನುವ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಬಹುಷ: ಈ ಪ್ರಶ್ನೆಗೆ ಇರುವ ಒಂದೇ ಒಂದು ಉತ್ತರವನ್ನು ರಾಷ್ಟ್ರಕವಿ ಕುವೆಂಪುರವರು ದಶಕಗಳಷ್ಟು ಹಿಂದೆಯೇ ನೀಡಿದ್ದಾರೆ. “ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀನು ಕನ್ನಡವಾಗಿರು” ಎನ್ನುವ ಆ ಕವಿವಾಣಿಯೇ ಸಾರ್ವಕಾಲಿಕ ಸತ್ಯವಾದ ಸೂಕ್ತಿ.   ಕನ್ನಡಿಗ ತನ್ನ ಒಳಗೂ ಹೊರಗೂ ಸದಾ ಕನ್ನಡಿಗನಾಗಿ ಇದ್ದರೆ ಮತ್ತು ಯಾವುದೇ ಕೀಳರಿಮೆ ಹೊಂದಿರದೇ, ಕನ್ನಡವನ್ನು ಬಳಸುತ್ತಾ ಇದ್ದರೆ, ಅಷ್ಟೇ ಸಾಕು. ಕನ್ನಡವನ್ನು ಬಳಸೋಣ, ಕನ್ನಡವನ್ನು ಬೆಳೆಸೋಣ, ಕನ್ನಡವನ್ನು ಉಳಿಸೋಣ ಹಾಗೂ ಸಾಧ್ಯವಾದರೆ ಅನ್ಯರಿಗೂ ಕನ್ನಡವನ್ನು ಕಲಿಸೋಣ ಎಂಬೀ ಮಾತುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಾಕು. ಕನ್ನಡ ಅಳಿಯುವುದಿಲ್ಲ. ಕನ್ನಡಿಗರೂ ಅಳಿಯುವುದಿಲ್ಲ.

ಸರಕಾರೀ ಶಾಲೆಗಳಿಗೆ ಹೋಗುವ ಮಕ್ಕಳಲ್ಲಿ ಹೆಚ್ಚಿನವರು ಬಡವರು. ಆ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ನಡೆಸಿದರೆ, ಖಾಸಗೀ ಶಾಲೆಗೆ ಹೋಗುವ ಶ್ರೀಮಂತರ ಮಕ್ಕಳು ಆಂಗ್ಲ ಮಾಧ್ಯಮದಲ್ಲಿ ಅಭ್ಯಾಸ ನಡೆಸುತ್ತಾರೆ. ಇದು ಬಡ ಯುವ ಜನತೆಯಲ್ಲಿನ ಕೀಳರಿಮೆಗೆ ಕಾರಣವಾಗುತ್ತದೆ ಹಾಗೂ ಯುವ ಸಮಾಜದಲ್ಲಿನ ಧ್ರುವೀಕರಣಕ್ಕೆ ಕಾರಣವಾಗುತ್ತದೆ. ಇದನ್ನು ಹೋಗಲಾಡಿಸುವತ್ತ ಸರಕಾರ ಗಂಭೀರ ಚಿಂತನೆ ನಡೆಸಬೇಕಾಗಿದೆ.

ಸರಕಾರೀ ಶಾಲೆಗಳಲ್ಲೂ ಖಾಸಗೀ ಶಾಲೆಗಳಲ್ಲಿ ದೊರೆಯುವ ಶಿಕ್ಷಣ ಮಟ್ಟವನ್ನು ಕಾಯ್ದುಕೊಂಡರೆ, ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯೋಜನವಾದೀತು. ಪ್ರೌಢ ಶಾಲೆಯವರೆಗೆ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ನಡೆಸಿದವರು ಕನ್ನಡ ಸಾಹಿತ್ಯವನ್ನು ಓದಿ ಅರಗಿಸಿಕೊಳ್ಳಬಲ್ಲರೆಂಬ ಖಾತ್ರಿ ಏನಿಲ್ಲ. ಅದೇ ಮಾತು ಆಂಗ್ಲ ಮಾಧ್ಯಮದಲ್ಲಿ  ಪ್ರೌಢ ಶಿಕ್ಷಣವನ್ನು ಪಡೆದವರ ಬಗ್ಗೆ ಮತ್ತು ಆಂಗ್ಲ ಸಾಹಿತ್ಯದ ಬಗ್ಗೆಯೂ ಹೇಳಬಹುದು. ಭಾಷೆಯಲ್ಲಿ, ಸಾಹಿತ್ಯದ ಓದಿನಲ್ಲಿ ಪ್ರೌಢಿಮತೆ ಸಾಧಿಸಲು, ಮಕ್ಕಳಲ್ಲಿ ಓದಿನ ಪರಿಪಾಠವನ್ನು ಬೆಳೆಸುವ ಪದ್ಧತಿ ಶಾಲೆಗಳಲ್ಲಿ ಇರಬೇಕು. ಸಾಹಿತ್ಯ ರಚನೆಗಳನ್ನು ಓದಿಸುವ, ಅರ್ಥೈಸಿ ಹೇಳುವ ಪರಿಪಾಠವನ್ನು ಪಠ್ಯೇತರ ಚಟುವಟಿಕೆಯಾಗಿ ಎಲ್ಲಾ ಶಾಲೆಗಳಲ್ಲಿ ಅಳವಡಿಸಿಕೊಳ್ಳಬೇಕು.

ಇನ್ನೊಂದು ಮಾತು. ಅಂಗ್ಲ ಮಾಧ್ಯಮದಲ್ಲಿ ಕಲಿತ ಮಕ್ಕಳ ಕನ್ನಡ ಭಾಷಾ ಜ್ಞಾನ ಸಾಮಾನ್ಯವಾಗಿ ಉತ್ತಮವಾಗಿರುವುದಿಲ್ಲ, ಹಾಗೆಯೇ ಕನ್ನಡ ಮಾಧ್ಯಮದಲ್ಲಿ ಕಲಿತ ಮಕ್ಕಳ ಆಂಗ್ಲ ಭಾಷಾ ಜ್ಞಾನ ಉತ್ತಮವಾಗಿರುವುದಿಲ್ಲ. ಇತರ ಎಲ್ಲಾ ವಿಷಯಗಳಿಗೆ ನೀಡುವಷ್ಟೇ ಸಮಾನ ಪ್ರಾಧಾನ್ಯವನ್ನು ಭಾಷಾ ವಿಷಯಗಳಿಗೊ ನೀಡಬೇಕು. ಯಾವ ಮಾಧ್ಯಮದಲ್ಲಿ ಕಲಿತಿದ್ದೇವೆ ಅನ್ನುವುದಕ್ಕಿಂತಲೂ, ನಮ್ಮ ಭಾಷೆಯ ಅಭ್ಯಾಸ ಯಾವ ಮಟ್ಟದಲ್ಲಿ ಇತ್ತು ಅನ್ನುವುದು ಪ್ರಾಮುಖ್ಯವಾಗುತ್ತದೆ. ಬಾಷಾ ಕಲಿಕೆಯಲ್ಲಿ ಉತ್ತಮ ಗುಣಮಟ್ಟವನ್ನು ಕಾಪಾಡಿಕೊಂಡು ಬರುವ ನಿಟ್ಟಿನಲ್ಲಿ ಮಹತ್ಕಾರ್ಯಗಳು ನಡೆಯಬೇಕಾಗಿದೆ.  ಈ ಕಾರ್ಯದಲ್ಲಿ ಭಾಷಾ ಅಧ್ಯಾಪಕರುಗಳ ಜವಾಬ್ದಾರಿ ಪ್ರಾಮುಖ್ಯವಾದುದು. ತಮ್ಮದು ಬರಿಯ ನೌಕರಿಯಾಗಿರದೇ, ಒಂದು ಭಾಷೆಯ ಬೆಳವಣಿಗಾಗಿ ತಾವು ನೀಡುತ್ತಿರುವ ಕೊಡುಗೆ ಎಂದು ಪರಿಗಣಿಸಿ, ತಮ್ಮನ್ನು ತಾವು ಈ ಮಹತ್ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು.

ಮಾತೃಭಾಷೆಯಾದ ಕನ್ನಡ ಮತ್ತು ವ್ಯಾವಹಾರಿಕವಾಗಿ ಅನಿವಾರ್ಯವಾಗಿರುವ ಆಂಗ್ಲ ಭಾಷೆ ಇವೆರಡರಲ್ಲೂ  ಪ್ರೌಢಿಮತೆ ಸಾಧಿಸುವ ಮಕ್ಕಳು ಯಾವ ಮಾಧ್ಯಮದಲ್ಲಿ ಕಲಿತರೂ ಪರವಾಗಿಲ್ಲ. ಮಾಧ್ಯಮದ ಆಯ್ಕೆಯನ್ನು ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ಬಿಟ್ಟರೆ ಅನಾಹುತವೇನೂ ಆಗದು. ಆದರೆ ಯಾವುದೇ ಮಾಧ್ಯಮದ ಶಾಲೆಗಳಲ್ಲಿ, ಮಾತೃಭಾಷೆಯನ್ನು ಒಂದು ವಿಷಯವಾಗಿ ಸಮಾನ ಪ್ರಾಧಾನ್ಯ ನೀಡಿ ಕಟ್ಟುನಿಟ್ಟಾಗಿ ಕಲಿಸುವ ಬಗ್ಗೆ ಸರಕಾರ ಕ್ರಮ ತೆಗೆದುಕೊಳ್ಳಬೇಕು. ಈ ವಿಷಯದಲ್ಲಿ ಯಾವುದೇ ರೀತಿಯ ರಿಯಾಯಿತಿ ನೀಡಬಾರದು. ಒಂದು ಭಾಷೆಯ ಕಲಿಯುವಿಕೆಗೆ ಕಲಿಕೆಯ ಮಾಧ್ಯಮ ಅಡ್ಡಿಯಾಗಬಾರದು.

*****

 

ನಿರಂತರ ಕರ್ನಾಟಕ ವಾರಪತ್ರಿಕೆಯಲ್ಲಿ ಈ ವಾರ ಪ್ರಕಟವಾಗಿರುವ ಲೇಖನ

 

 


ನಮ್ಮಲ್ಲಿ ಈ ಅಸಹನೆ ಏಕೆ ಮನೆಮಾಡಿದೆ?

14 ಮಾರ್ಚ್ 11

 

ಚಿತ್ರನಟಿ ಹೇಮಾಮಾಲಿಯವರನ್ನು ರಾಜ್ಯಸಭೆಗೆ ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ ಕ್ರಮವನ್ನು ವಿರೋಧಿಸಿತ್ತಾ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಶ್ರೀ ಗಿರೀಶ್ ಕಾರ್ನಾಡ್ ಅವರು ಆಕೆಯನ್ನು ರಾಜಕೀಯರಂಗದಲ್ಲಿ ಹೆಡ್ಡಿ ಎಂದು ಕರೆದರು. ಅದಕ್ಕೂ ತೀವ್ರ ಟೀಕೆಗಳು ಹೊರಬಂದವು. ಟೀಕೆಗಳಷ್ಟೇ ಬಂದಿದ್ದರೆ ಒಪ್ಪಬಹುದಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಇದೆಯೆಂದು ಸ್ವೀಕರಿಸಬಹುದಿತ್ತು. ಆದರೆ ಆದದ್ದೇನು? ಕಾರ್ನಾಡರ ಹೇಳಿಕೆಯನ್ನು ವಿರೋಧಿಸಲು ಹೊರಟವರು, ಅವರು ಹಿರಿಯ ಸಾಹಿತಿ ಎಂಬುದನ್ನೇ ಮರೆತು, ಅವರ ಪೂರ್ವಾಪರವನ್ನೆಲ್ಲಾ ಜಾಲಾಡಿದರು.

ಇನ್ನು ಬೆಳಗಾವಿಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನದ ಉದ್ಘಾಟನೆಯ ಜವಾಬ್ದಾರಿಯನ್ನು ಇನ್ಫೋಸಿಸ್ ಸ್ಥಾಪಕ ಶ್ರೀ ನಾರಾಯಣ ಮೂರ್ತಿಯವರಿಗೆ ವಹಿಸಿಕೊಟ್ಟಿರುವ ರಾಜ್ಯ ಸರ್ಕಾರದ ನಿರ್ಧಾರ ಪ್ರಕಟಗೊಂಡ ದಿನದಿಂದ, ಕನ್ನಡ ಸಾರಸ್ವತ ಲೋಕದಲ್ಲಿ ಅದೇಕೋ ಅಲ್ಲೋಲ ಕಲ್ಲೋಲ,   ಕಾರ್ಗಿಲ್ ಗಡಿಯಲ್ಲಿ ಪಾಕಿಸ್ತಾನೀ  ಪಡೆಗಳು ಲಗ್ಗೆ ಇಟ್ಟಾಗ ಉಂಟಾದ ಸಂಚಲನ ನಾಡಿನುದ್ದಗಲಕ್ಕೂ ಕಂಡುಬಂತು.

ಆದರೆ ಆದದ್ದೇನು ಮತ್ತು ಅದಕ್ಕೆ ಕಾರಣಗಳೇನು ಎಂದು ಯೋಚಿಸುವಾಗ, ಮೇಲ್ಮಟ್ಟಕ್ಕೆ ತೋರಿಬರುವುದು ನಮ್ಮ ಸಮಾಜದಲ್ಲಿ ಹೆಚ್ಚು ಹೆಚ್ಚಾಗಿ ಕಂಡುಬರುತ್ತಿರುವ ಅಸಹನೆ. ಈ ಅಸಹನೆ, ತಮ್ಮ ದೈನಂದಿನ ಖಾಸಗಿ ಜೀವನಕ್ಕೆ ಸಂಬಂಧಪಟ್ಟಿರುವುದಲ್ಲ. ಇದು ಸಮಾಜದಲ್ಲಿ ತಮಗಿರುವ ವೈಯಕ್ತಿಕ ಪ್ರತಿಷ್ಠೆಗಾಗಿ ಹೋರಾಡುತ್ತಿರುವವರ ಅಸಹನೆ. ವೈಚಾರಿಕ ಭಿನ್ನಾಭಿಪ್ರಾಯ ಮಾತ್ರ  ಎನ್ನುವ ಸೋಗಿನಲ್ಲಿ, ಕನ್ನಡನಾಡಿನ ಜನತೆ ತಮ್ಮಲ್ಲಿನ ಒಗ್ಗಟ್ಟಿನ ಕೊರತೆಯನ್ನು ಮೇಲಿಂದ ಮೇಲೆ ಹೊರಗೆಡಹುತ್ತಿದೆ.

ಯಾವುದಾದರೂ ಒಂದು ಒಳ್ಳೆಯ ಕೆಲಸಕ್ಕೆ ನಾವು ನೀಡುವ ಸಮ್ಮತಿ ದಾನವೇ, ಎಲ್ಲಾ ದಾನಗಳಿಗಿಂತಲೂ ದೊಡ್ಡದಾದ ದಾನವೆಂದು ನುಡಿಯುತ್ತಿದ್ದ ನನ್ನ ತಂದೆಯವರ ಮಾತು ನನಗೆ ಈ ಸಂದರ್ಭದಲ್ಲಿ ನೆನಪಿಗೆ ಬರುತ್ತದೆ. ಈ ಸಮ್ಮತಿ ದಾನದ ಕೊರತೆ ಈಗೀಗ ಹೆಚ್ಚು ಹೆಚ್ಚಾಗಿ ಕಂಡು ಬರುತ್ತಿದೆ. ಯಾವುದೇ, ಸಭೆ, ಸಮಾರಂಭ, ಅಭಿವೃದ್ಧಿ ಕಾರ್ಯಕ್ರಮ, ಸಾಹಿತ್ಯ ಸಮ್ಮೇಳನ, ಏನೇ ಒಂದು ಕಾರ್ಯಕ್ರಮ ಆಯೋಜನೆಗೊಂಡಿರಲಿ. ಅಲ್ಲಿ ಸದಭಿಪ್ರಾಯ ವ್ಯಕ್ತಪಡಿಸಿ, ಭಾಗವಹಿಸಿ, ಶುಭಕೋರುವವರ್ ಇರುವಂತೆಯೇ, ತಮ್ಮದು ಅಭಿವ್ಯಕ್ತಿ ಸ್ವಾತಂತ್ರ್ಯ ಅಥವಾ ಸಾಮಾಜಿಕ ಜವಾಬ್ದಾರಿ ಎನ್ನುವ ಸೋಗಿನಲ್ಲಿ, ವಿರೋಧದ ಕಿಚ್ಚು ಹಚ್ಚುವವರೂ ಕಂಡು ಬರುವುದು ಸಾಮಾನ್ಯವಾಗಿಬಿಟ್ಟಿದೆ. ಈ ಕಿಚ್ಚು ಹಚ್ಚುವವರು, ಕಿಚ್ಚು ಹಚ್ಚಿ ತಮ್ಮ  ಕೆಲಸವಾಯಿತು ಎಂದು ಸುಮ್ಮನಾಗುತ್ತಾರೆ, ಮುಂದಿನ ದಿನಗಳಲ್ಲಿ, ಪರ ವಿರೋಧಿ ಬಣಗಳ ನಡುವೆ ವಾಕ್ಸಮರಗಳು, ವಾದ ವಿವಾದಗಳು ನಡೆಯುತ್ತವೆ. ಆದರೆ,  ಯಾವುದೇ ನಿಷ್ಕರ್ಷೆಗೆ ತಲುಪದೆ ತಣ್ಣಗಾಗಿಬಿಡುತ್ತವೆ. ಮುಂದೆ ಇನ್ನಾವುದೋ ಕಾರ್ಯಕ್ರಮ ಬಂದಾಗ, ಮತ್ತದೇ ಪುನರಾವರ್ತನೆ.

ಈ ನಡುವಿನ ದಿನಗಳಲ್ಲಿ, ಮೂರಾಬಟ್ಟೆಯಾಗುವುದು ಗಣ್ಯರ ಖಾಸಗಿ ಜೀವನ. ಅವರು ಎಂದೋ, ಯಾವುದೋ ಸಂದರ್ಭದಲ್ಲಿ, ಯಾವುದೋ ಅರ್ಥದೊಂದಿಗೆ ಮಾತನಾಡಿದ ಪದಗಳಿಗೆ ಇಂದು ಅರ್ಥ, ಅನರ್ಥ, ಅಪಾರ್ಥ ಎಲ್ಲವನ್ನೂ ನೀಡಲಾಗುತ್ತದೆ. ಗಾಳಿಸುದ್ದಿಗಳಿಗೆಲ್ಲಾ ರೆಕ್ಕೆಪುಕ್ಕ ಕಟ್ಟಿ ಸಂಶಯದಾಗಸದಲ್ಲಿ ಹಾರಲು ಬಿಡಲಾಗುತ್ತದೆ. ಸಾಮಾಜಿಕ ಜವಾಬ್ದಾರಿಯ ಗುತ್ತಿಗೆ ಪಡೆದುಕೊಂಡಿದ್ದೇವೆ ಎಂದು ತಿಳಿದುಕೊಂಡವರು, ಗಣ್ಯ ವ್ಯಕ್ತಿಗಳ ಚಾರಿತ್ರ್ಯಹರಣಕ್ಕೆ ಇಳಿದುಬಿಡುತ್ತಾರೆ. ವಿಷಯಾಂತರವಾಗುತ್ತದೆ. ಮಾತುಗಳು, ವಾದ ವಿವಾದಗಳು ಹಾದಿ ತಪ್ಪುತ್ತವೆ. ಮೂಲ ವಿಷಯ ಅಥವಾ ಮೂಲ ಘಟನೆ ಮರೆತು ಹೋಗಿರುತ್ತದೆ. ಅಲ್ಲಿ ಸಂಬಂಧಪಟ್ಟ ಮೂಲ ವ್ಯಕ್ತಿ ಮೂಕ ಪ್ರೇಕ್ಷಕರಾಗಿ ಉಳಿದುಬಿಡುತ್ತಾರೆ. ಮುಂದೆ ನಡೆಯುವುದು ವಾದ ಪ್ರತಿವಾದ ಮಂಡಿಸುವವರ ನಡುವಿನ ಪ್ರತಿಷ್ಟೆ ಮಾತ್ರ.  ಜನರನ್ನು ಓದುಗರನ್ನು ಎಲ್ಲಿಂದ ಎಲ್ಲಿಗೋ ಒಯ್ದುಬಿಡುವ ವಾದ ವಿವಾದಗಳು ಯಾವುದೇ ರೀತಿಯ ಅಂತಿಮ ತೀರ್ಪನ್ನು ನೀಡುವುದೇ ಇಲ್ಲ. ಏಕೆಂದರೆ ಅಲ್ಲಿ ಯಾವೊಬ್ಬ ತೀರ್ಪುಗಾರನೂ    ಇರುವುದಿಲ್ಲ. ಅಲ್ಲದೆ, ಅಷ್ಟರಲ್ಲಿ, ಮತ್ತೊಂದು ಘಟನೆ, ಮತ್ತೋರ್ವ ವ್ಯಕ್ತಿ ವಿವಾದದ ಸುಳಿಗೆ ಸಿಕ್ಕಿ ಪತ್ರಿಕೆಗಳ ಮುಖಪುಟವನ್ನು ಅಲಂಕರಿಸಿಯಾಗಿರುತ್ತದೆ. ಮತ್ತದೇ ಘಟನೆಗಳ ಪುನರಾವರ್ತನೆ. ಅದೇ ಅಂತ್ಯವಿಲ್ಲದ ವಾದ ವಿವಾದಗಳು.

ಅಭಿವಕ್ತಿ ಸ್ವಾತಂತ್ರ್ಯ ಎನ್ನುವ ಅಸ್ತ್ರದ ಬಳಕೆ ಈಗ ಮಾಮೂಲಾಗಿ ಬಿಟ್ಟಿದೆ. ಆ ಅಸ್ತ್ರವನ್ನು ಬಳಸಲು ತನಗಿರುವ ಅರ್ಹತೆ ಏನು? ತಾನು ಆ ಅಸ್ತ್ರವನ್ನು ಯಾರ ವಿರುದ್ಧವಾಗಿ, ಯಾವುದರ ವಿರುದ್ಧವಾಗಿ ಬಳಸುತ್ತಿರುವೆನೋ, ಆ ವ್ಯಕ್ತಿ ಅಥವಾ ವಿಷಯದ ಬಗ್ಗೆ ತನಗಿರುವ ಜ್ಞಾನ ಎಷ್ಟು, ತಾನು ಬಳಸುವ ಮಾತುಗಳಿಂದ, ಪರರಿಗೆ ಯಾವ ರೀತಿ ಅವಮಾನವಾಗುತ್ತಿದೆ ಎನ್ನುವುದರ ಗೋಜಿಗೇ ಹೋಗದೇ, ತಾನು ಸುಮ್ಮನಿರುವುದೇ ಮಹಾಪರಾಧ ಎನ್ನುವ ಒಂದೇ ಭಾವದೊಂದಿಗೆ, ಯದ್ವಾ ತದ್ವಾ ಹೇಳಿಕೆಗಳನ್ನು ನೀಡುತ್ತಾರೆ. ಬರಹಗಳನ್ನು ಬರೆದು ಪ್ರಕಟಿಸುತ್ತಾರೆ. ಪ್ರಸ್ತುತ ವಿಷಯದ ಪರಿಧಿಯಿಂದ ಹೊರಗೆ ಅಪ್ರಸ್ತುತವಾದ ವಿಷಯಗಳ ಮೇಲೆ  ಕೈಯಾಡಿಸಿ, ಗಣ್ಯ ವ್ಯಕ್ತಿಗಳ ಮಾನ ಜಾಲಾಡುವ ಯತ್ನಗಳು ಸದಾ ನಡೆಯುತ್ತಲೇ ಇರುತ್ತವೆ. ಈ ಪರಿಪಾಠ ಒಮ್ಮೊಮ್ಮೆ ನೈತಿಕತೆಯ ಚೌಕಟ್ಟನ್ನೂ ಮೀರಿ ಬೆಳೆದು ಬಿಡುತ್ತದೆ ಎನ್ನುವುದು ಶೋಚನೀಯ ವಿಚಾರ.

ಪತ್ರಿಕೆಗಳು ತಮ್ಮ ವ್ಯಾಪಾರೀ ಧೋರಣೆಗಳಿಂದಾಗಿ ಇಂಥ ಘಟನೆಗಳಿಗೆ ಒತ್ತು ನೀಡುತ್ತಾ ಬಂದಿವೆ. ಲೇಖನಗಳನ್ನು, ವಾದ ವಿವಾದಗಳನ್ನು ಯಾವುದೇ ತಿದ್ದುಪಡಿ ಇಲ್ಲದೇ ಪ್ರಕಟಿಸಿ, “ಇಲ್ಲಿ ಇರುವವು ಲೇಖಕರ ವೈಯಕ್ತಿಕ ಅನಿಸಿಕೆಗಳು, ಅವುಗಳಿಗೆ ಪತ್ರಿಕೆ ಅಥವಾ ಸಂಪಾದಕರು ಜವಾಬ್ದಾರರಲ್ಲ” ಅನ್ನುವ ಟಿಪ್ಪಣಿ ನೀಡಿ ಕೈತೊಳೆದುಕೊಂಡುಬಿಡುತ್ತವೆ.

ವಾಹನ ಚಲಾಯಿಸುವ ಸ್ಪರ್ಧೆಗಳಲ್ಲಿ ಪದಕಗಳನ್ನು ಗೆದ್ದಿರುವಾತ, ಒಂದು ದಿನ ಅಪಘಾತಮಾಡಿದಾಗ, ಆತನ ಹಿಂದಿನ ಎಲ್ಲಾ ಸಾಧನೆಗಳನ್ನು ನಗಣ್ಯವಾಗಿಸಿ, ಆತನೋರ್ವ ಸಮಾಜವಿರೋಧಿ ಎನ್ನುವ ರೀತಿಯಲ್ಲಿ ಬಿಂಬಿಸಲಾಗುತ್ತದೆ. ಇದು ಯಾವ ನ್ಯಾಯ? ಅಪಘಾತ ನಡೆಸಿದ ತಪ್ಪಿಗೆ ಶಿಕ್ಷೆಯಾಗಬೇಕು, ಅನ್ನುವುದು ಸರಿ. ಆದರೆ, ಆತನ ಜನ್ಮ ಜಾಲಾಡಿ, ಚಾರಿತ್ರ್ಯಹನನ ಮಾಡುವ ಆವಶ್ಯಕತೆ ಇರುವುದಿಲ್ಲ. ಅತ ಎಂದೋ, ಯಾವುದೋ ಹಳ್ಳಿಯ  ಯಾವುದೋ ರಸ್ತೆಯ ಬದಿಯಲ್ಲಿ ಬಹಿರ್ದೆಶೆಗೆ ಕೂತಿದ್ದ ಅನ್ನುವಂಥ ಕ್ಷುಲ್ಲಕ ವಿಷಯಗಳಿಗೆ ಪ್ರಾಮುಖ್ಯ ನೀಡಿ ಪ್ರಕಟಿಸಿ, ಹೇಳಿಕೆಗಳನ್ನು ನೀಡಿ, ಆ ವ್ಯಕ್ತಿಯನ್ನು ಜೀವಂತ ಶವವಾಗಿಸುವ ಅನಗತ್ಯ ಯತ್ನಗಳು ಏಕೆ ನಡೆಯಬೇಕು ಅನ್ನುವುದೇ ಅರ್ಥವಾಗುವುದಿಲ್ಲ.

ನಮ್ಮಲ್ಲಿ ಈ ಅಸಹನೆ ಏಕಿದೆ? ಯಾವುದೇ ಘಟನೆಗಳಿಗೆ ವಸ್ತುನಿಷ್ಠ ಪ್ರತಿಕ್ರಿಯೆ ನೀಡುವಲ್ಲಿ ನಾವು ವಿಫಲರಾಗುತ್ತಿರುವುದೇಕೆ? ಯಾವು ಯಾವುದೋ ಘಟನೆಗಳಿಗೆ ಗಂಟು ಹಾಕಿ, ತುಲನೆ ಮಾಡಿ, ತಿರಸ್ಕರಿಸಿಬಿಡುವುದೇಕೆ? ಶಾಂತಚಿತ್ತದಿಂದ ಪ್ರತಿಸ್ಪಂದಿಸುವುದು ಮತ್ತು ಪ್ರತಿಕ್ರಿಯಿಸುವುದು ನಮಗೆ ಅಸಾಧ್ಯವಾಗುತ್ತಿರುವುದೇಕೆ?

ಇವಕ್ಕೆಲ್ಲಾ ಕಾರಣ ನಮ್ಮ ಆಹಾರ ಪದ್ಧತಿಯೇ ಇರಬಹುದೇ? ನಮ್ಮ ಜೀವನ ಪದ್ಧತಿಯೇ ಇರಬಹುದೇ? ಸ್ವಪ್ರತಿಷ್ಠೆ, ಅಸಹಾಯಕತೆ ಅಥವಾ ಸಂಕುಚಿತ ಮನೋಭಾವ ಕಾರಣವಾಗಿರಬಹುದೇ? ಅಥವಾ ಅನ್ಯರ ಏಳಿಗೆಯನ್ನು ಕಂಡಾಗ, ಪರೋಕ್ಷವಾಗಿ ಪ್ರಕಟಗೊಳ್ಳುವ ನಮ್ಮೊಳಗಿನ ಹೊಟ್ಟೆಕಿಚ್ಚು ಇದಾಗಿರಬಹುದೇ? ವಾಸ್ತವವನ್ನು ಸ್ವೀಕರಿಸಲು ಅಸಮರ್ಥರಾಗಿರುವುದರ ಸೂಚನ ಇದಾಗಿರಬಹುದೇ?  ಜೀವನದಲ್ಲಿ ಯಾವುದೋ ಮರೀಚಿಕೆಯ ಹಿಂದೆ ಓಡುತ್ತಿರುವಾಗ, ನಮಗೆ ಆಗಾಗ ಅಗುವ ಸೋಲಿನ ಅನುಭವವನ್ನು ನಮ್ಮೊಳಗೆ ಅದುಮಿಡುತ್ತಾ, ಆಂತರಿಕ ಒತ್ತಡವನ್ನು, ಇನ್ನಾವುದೋ ರೀತಿಯಲ್ಲಿ ಹೊರಹಾಕಲು ಕಂಡುಕೊಂಡ ಪರೋಕ್ಷ ಮಾರ್ಗವೇ? ಖಾಸಗಿ ಜೀವನದಲ್ಲಿನ ನೆಮ್ಮದಿಯ ಕೊರತೆ, ಸಾರ್ವಜನಿಕವಾಗಿ ಸದಾ ಸುದ್ದಿಯಲ್ಲಿ ಇರಬೇಕೆನ್ನುವ ಅಪೇಕ್ಷೆಯಾಗಿ ಮಾರ್ಪಟ್ಟಿರಬಹುದೇ?

ಈ ನಿಟ್ಟಿನಲ್ಲಿ ಚಿಂತನೆ ನಡೆಸುವ ಅಗತ್ಯ ಇದೆ. ಎಲ್ಲದಕ್ಕೂ ಒಂದೇ ಅಸ್ತ್ರವನ್ನು ಬಳಸುವ ಬದಲು, ಸಂದರ್ಭೋಚಿತವಾಗಿ ಸ್ಪಂದಿಸುವ ಮತ್ತು ಪ್ರತಿಕ್ರಿಯಿಸುವ ಅಗತ್ಯ ಇದೆ. ಇದೆಯಲ್ಲವೇ?

******

“ನಿರಂತರ ಕರ್ನಾಟಕ” ವಾರಪತ್ರಿಕೆಯಲ್ಲಿ ಈ ವಾರ ಪ್ರಕಟವಾಗಿರುವ ಲೇಖನ


ಅಮೂಲ್ಯ ನಾಲ್ಕು ಕ್ಷಣಗಳು!

09 ಫೆಬ್ರ 11

೭೭ನೇ ಸಾಹಿತ್ಯ ಸಮ್ಮೇಳನದ ಕೊನೆಯ ದಿನ ನಾನು ಹಾಜರಾಗಿದ್ದೆ. ಮುಂಜಾನೆಯ ಹಾಸ್ಯಗೋಷ್ಟಿಯಲ್ಲಿ ಪಾಲ್ಗೊಂಡಿದ್ದ ಶ್ರೀ ಕಬ್ಬಿನಾಲೆ, ಶ್ರೀಮತಿ ಭುವನೇಶ್ವರಿ ಹೆಗಡೆ, ಶ್ರೀ ಪ್ರಾಣೇಶ್ ಮತ್ತು ಶ್ರೀ ಕೃಷ್ಣೇ ಗೌಡರು ನಮ್ಮನ್ನು ಹಾಸ್ಯದ ಕಡಲಲ್ಲಿ ತೇಲಿಸಿದರಾದರೂ, ನಿರೂಪಕರು “ಆಸ್ಯ ಗೋಷ್ಟಿ … ಆಸ್ಯ ಕಲಾವಿದ … ಆಸ್ಯ ಆಸ್ಯ ” ಎನ್ನುತ್ತಾ ಪದೇ ಪದೇ ಹಾಸ್ಯಾಸ್ಪದರಾಗಿ, ಸಾಕಷ್ಟು ಕಿರಿಕಿರಿಯುಂಟುಮಾಡಿದ್ದರು.

ಸನ್ಮಾನ ಸಮಾರಂಭ ನೀರಸವೆನಿಸಿತ್ತಾದರೂ ನನ್ನ ಪರಿಚಯದ ಡಾ. ನಾ. ಸೋಮೇಶ್ವರ ಮತ್ತು ಡಾ. ಭಾಸ್ಕರಾನಂದ ಕುಮಾರ ಅವರ ಸನ್ಮಾನ ಮನಕ್ಕೆ ಮುದ ನೀಡಿತ್ತು.

ಶ್ರೀ ಸಾ.ರಾ.ಗೋವಿಂದು ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ ಯಾಕೆ ಮಾಡಿದ್ರು ಅನ್ನುವುದೇ ನನಗೆ ಕೊನೆಗೂ ಅರ್ಥ ಆಗಲಿಲ್ಲ.

ಇನ್ನು ನಿರೂಪಕಿ ಭಾನುಮತಿ ಸೋಮಶೇಕರ್ ಅವರಿಂದ ಶ್ರೀಮತಿ ಗಿರಿಜಾ ಲೋಕೇಶ್ ಅವರ ಪರಿಚಯ ಕೇಳಿ ಸುಸ್ತಾಗಿ ಬಿಟ್ಟೆ. “ಹತ್ತು ಹಲವು ದಶಕಗಳ ಕಾಲ ಚಿತ್ರರಂಗ ಮತ್ತು ಕಿರುತೆರೆಗಳಲ್ಲಿ ನಟಿಸಿರುವ….” ಅಂದಾಗ ಗಿರಿಜಾ ಲೋಕೇಶ್ ರಿಗೆ ನೂರು ವರುಷಗಳಿಗೂ ಹೆಚ್ಚು ಪ್ರಾಯ ಆಗಿದೆಯೇ ಅನ್ನುವ ಪ್ರಶ್ನೆ ನನ್ನ ಮನದಲ್ಲಿ ಮೂಡಿತು.

ಅಲ್ಲದೇ ಧನ್ಯವಾದ ಸಮರ್ಪಣೆ ಮಾಡುವಾಗ, ಸನ್ಮಾನ ಸಮಾರಂಭದಲ್ಲಿ ತಮ್ಮ ದಿವ್ಯ ಸಾನಿಧ್ಯವನ್ನು ನೆರವೇರಿಸಿಕೊಟ್ಟ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರ್ಶ್ರೀ ವಿರೇಂದ್ರ ಹೆಗ್ಗಡೆಯವರಿಗೆ ಧನ್ಯವಾದಗಳು ಅಂತ ಅಂದರು.  ಯಾರೇ ಆದರೂ ತಮ್ಮ ಸಾನಿಧ್ಯವನ್ನು ನೆರವೇರಿಸಿಕೊಡುವುದು ಹೇಗೋ ಅರ್ಥವೇ ಆಗಲಿಲ್ಲ.

ಜನಗಣಮನ  ಬ್ಲಾಗ್ ನ ಶ್ರೀ ರಾಕೇಶ್ ಶೆಟ್ಟಿಯವರನ್ನು ಪತ್ತೆ ಮಾಡಿ ಅವರೊಡನೆ ಭೋಜನಕ್ಕೆಂದು ಹೊರ ನಡೆದಾಗ ಸಂಪದಿಗ ಜಯಂತ್ ರಾಮಾಚಾರ್ ಬಂದು ತಮ್ಮ ವಿವಾಹದ ಆಮಂತ್ರಣ ಪತ್ರಿಕೆ ನೀಡಿ “ಖಂಡಿತ ಕುಟುಂಬ ಸಮೇತ ಬರಬೇಕು ಸಾರ್” ಎಂದು ಕರೆದು ಹೊದರು.

ಸಣ್ಣ ಉಪಾಹಾರಗೃದಲ್ಲಿ ಮೊಸರನ್ನ ತಿಂದು ವಾಪಸ್ಸಾದಾಗ ಸನ್ಮಾನ ಸಮಾರಂಭ ಇನ್ನೂ ಮುಂದುವರಿದಿತ್ತು. ನಾನು ಕೂತಲ್ಲೇ ತೂಕಡಿಸುತ್ತಾ, ಹಲವಾರು ನೀರಸ ಭಾಷಣಗಳಿಗೆ ಕಿವಿಯಾದೆ. ಅಂತೂ ಇಂತೂ ಸನ್ಮಾನ ಕಾರ್ಯಕ್ರಮ ಮುಗಿಯಿತು.

ಅಪರಾಹ್ನ ಮೂರೂವರೆಯ ಸಮಯ. ಬಹಿರಂಗ ಅಧಿವೇಷನದಲ್ಲಿ ಶ್ರೀ ಪುಂಡಲೀಕ ಹಾಲಂಬಿಯವರಿಂದ ನಿರ್ಣಯಗಳ  ಮಂಡನಾಕಾರ್ಯ ನಡೆಯುತ್ತಿತ್ತು. ಸಭಾಂಗಣದಿಂದ ಹಾಗೇ ಹೊರನಡೆದು ಬಂದಾಗ, ಮಾಧ್ಯಮ ಕೇಂದ್ರದ ಪಕ್ಕದಲ್ಲಿ ಸಾಲು ಸಾಲಾಗಿ ನಿಂತಿದ್ದ ರೋಗಿ ವಾಹನಗಳ (೧೦೮) ಎದುರುಗಡೆ ವಿಜಯಕರ್ನಾಟಕದ ತಾಂತ್ರಿಕ ಅಂಕಣ ಬರಹಗಾರ ಶ್ರೀಯುತ ಹಾಲ್ದೊಡ್ಡೇರಿ ಸುಧೀಂದ್ರ, ದಟ್ಸ್ ಕನ್ನಡ ಡಾಟ್ ಒನ್ ಇಂಡಿಯಾ ಡಾಟ್ ಇನ್ ನ ಸಂಪಾದಕ ಶ್ರೀಯುತ ಶ್ಯಾಮ್ ಸುಂದರ್, ಸಂಸತ್ ಸದಸ್ಯ ಶ್ರೀಯುತ ಜನಾರ್ದನ ಸ್ವಾಮಿ ಮತ್ತು ಓರ್ವ ಮಹಿಳೆ ನಿಂತಿದ್ದರು.

ಹಾಲ್ದೊಡ್ಡೇರಿಯವರನ್ನು ಮೊದಲೊಮ್ಮೆ ಭೇಟಿಯಾಗಿ ಪರಿಚಯಿಸಿಕೊಂಡಿದ್ದೆ. ಹಾಗಾಗಿ ಅವರತ್ತ ಮುಗುಳ್ನಗೆ ಬೀರಿ “ನಮಸ್ಕಾರ” ಅಂದೆ. ಶ್ಯಾಮಸುಂದರ್ ರಿಗೆ ಕೈಕೊಟ್ಟು ಕುಲುಕಿ, ಕಿವಿಯಲ್ಲಿ “ನಾನು ಆಸು ಹೆಗ್ಡೆ” ಎಂದುಸಿರಿ ಪರಿಚಯಿಸಿಕೊಂಡೆ. ಆಗ ಸುಧೀಂದ್ರ “ಯಾರು ಅಂತ ಗೊತ್ತಾಗ್ಲಿಲ್ಲ” ಅಂದ್ರು. “ನಾವು ಮೊದಲೇ ಭೇಟಿ ಆಗಿದ್ದೀವೆ, ನಾನು ಆಸುಮನ ಬ್ಲಾಗ್‍ನ  ಆಸು ಹೆಗ್ಡೆ” ಅಂದೆ. “ಓಹ್ ಗೊತ್ತಾಯ್ತು ಗೊತ್ತಾಯ್ತು ನೀವು ಆತ್ರಾಡಿ ಸುರೇಶ ಹೆಗ್ಡೆಯವರು” ಅಂದ್ರು. “ಹೌದು” ಎಂದು ನಕ್ಕು ತಲೆಯಾಡಿಸಿದೆ. ಜನಾರ್ದನ ಸ್ವಾಮಿಯವರಿಗೂ ನಮಸ್ಕಾರ ಮಾಡಿ ಕೈಕೊಟ್ಟು ಕುಲುಕಿ, “ನಾನೀಗ ನೀವು ಹಿಂದೆ ಇದ್ದ ಸಂಸ್ಥೆಯಲ್ಲಿ ದುಡಿಯುತ್ತಿರುವವನು” ಅಂದೆ. “ಯಾವುದದು? ನಾನು ಹಲವಾರು ಸಂಸ್ಥೆಗಳಲ್ಲಿ ದುಡಿದಿದ್ದೆ” ಅಂದರು. ಆಗ ನಾನು ಈಗಿರುವ ಸಂಸ್ಥೆಯ ಹೆಸರನ್ನೂ ಹೇಳಿದೆ. “ಹಾಂ… ಹೌದು ಹೌದು ಒಳ್ಳೆಯದು” ಅಂದರು.

ಆಗ ಪಕ್ಕದಲ್ಲಿ ಇದುವರೆಗೆ ಮೌನಿಯಾಗಿ ನಿಂತಿದ್ದ ಆ ಅಪರಿಚಿತ ಮಹಿಳೆಯ ಸ್ವರ ಕೇಳಿಸಿತು “ತಮ್ಮನ್ನು ಮೂಡಬಿದರೆಯ ಆಳ್ವಾಸ್ ನುಡಿಸಿರಿಯಲ್ಲಿ ಭೇಟಿ ಮಾಡಿಸಬೇಕೆಂದು ಪ್ರಕಾಶ ಶೆಟ್ಟಿಯವರು ಬಹಳ ಪ್ರಯತ್ನಿಸಿದ್ದರು, ನೀವು ಅಂದು ಅಲ್ಲಿ ಅವರಿಗೆ ಸಿಗುವಾಗ ನಾನು ಅಲ್ಲಿಂದ ತೆರಳಿಯಾಗಿತ್ತು” ಅಂದರು. ಆಗ ಥಟ್ಟನೇ ನೆನಪಾಯ್ತು ನನಗೆ. ಅಂದು ದ ಸಂಡೇ ಇಂಡಿಯನ್ ನ ವಿನ್ಯಾಸ ಕಲಾವಿದ ಪ್ರಕಾಶ್ ಶೆಟ್ಟಿ ಉಳೆಪಾಡಿಯವರು, ಸುಪ್ತ ದೀಪ್ತಿ ಬ್ಲಾಗ್ ನ ಜ್ಯೋತಿ ಮಹಾದೇವ ಅವರನ್ನು ನನಗೆ ಭೇಟಿ ಮಾಡಿಸುವ ಬಗ್ಗೆ ಮಾತಾಡಿದ್ದರು ಎಂಬುದು. “ಓಹ್ ನೀವು ಜ್ಯೋತಿ ಮಹಾದೇವ ಅಲ್ವೇ?” ಎಂದು ನಮಸ್ಕರಿಸಿದೆ. ಹೌದು ಎಂದು ಪ್ರತಿ ನಮಸ್ಕರಿಸಿದರು.

ಶ್ಯಾಮ್ ಸುಂದರ್ ಅವರು “ನೋಡಿ ನಿಮಗೆಲ್ಲಾ ಏನನ್ನಿಸುತ್ತೋ ಗೊತ್ತಿಲ್ಲ. ನನಗನಿಸುವುದು ಏನೆಂದರೆ, ಈ ನಾಲ್ಕು ಕ್ಷಣಗಳನ್ನು ನಾವು ಇಲ್ಲಿ ಈ ರೀತಿ ಒಂದಾಗಿ ಮಾತಾಡಿ ಕಳೆಯುತ್ತ ಇದ್ದೇವೆ. ಇವು ನಮ್ಮ ಜೀವನದ ಅಮೂಲ್ಯ ಕ್ಷಣಗಳಾಗಿ ನಮ್ಮ ನೆನಪಿನಲ್ಲಿ ದಾಖಲಾಗಿ ಉಳಿದು ಬಿಡುತ್ತವೆ. ಏನಂತೀರಾ?” ಅಂದರು. ಜನಾರ್ದನ ಸ್ವಾಮಿ, ಸುಧೀಂದ್ರ ಹಾಗೂ ನಾನು “ಹೌದು ಹೌದು ನಿಮ್ಮ ಮಾತು ನಿಜ” ಎಂದು ಒಫ್ಪಿಕೊಂಡೆವು. ಜ್ಯೋತಿಯವರು “ಈ ಕ್ಷಣಗಳಷ್ಟೇ ಅಲ್ಲ ಸಾರ್, ನಮ್ಮ ಜೀವನದ ಪ್ರತಿಯೊಂದು ಕ್ಷಣವೂ ಅತ್ಯಮೂಲ್ಯ ನೆನಪಾಗಿ ದಾಖಲಾಗಿ ಉಳಿದುಬಿಡುತ್ತದೆ” ಎಂದು ದನಿಗೂಡಿಸಿದರು. ಹೌದೆನಿಸಿತು. ಹೀಗೆಯೇ ವಿಶ್ವೇಶ್ವರ ಭಟ್ಟರು ವಿಜಯ ಕರ್ನಾಟಕದಿಂದ ಹೊರಬಂದ ನಂತರದ ವಿಜಯ ಕರ್ನಾಟಕ ಹೇಗಿದೆ ಎನ್ನುವ ಬಗ್ಗೆ , ಹಾಗೂ ಭಟ್ಟರ ಮತ್ತು ಬೆಳಗೆರೆಯವರ ನಡುವಿನ ಸಮರದ ಬಗ್ಗೆ,  ಅಲ್ಲದೆ ಇನ್ನಿತರ ಹಲವು ವಿಷಯಯಗಳ ಬಗ್ಗೆ ಸ್ವಲ್ಪ ಮಾತಾಡಿದೆವು.

ಪುಸ್ತಕ ಮಳಿಗೆಗಳತ್ತ ಹೋಗೋಣ ಎಂದು ಹೊರಟರೆ ಜನಜಂಗುಳಿ ನೋಡಿ ಭಯವಾಯ್ತು. ಅಂತೆಯೇ ಹಿಂತಿರುಗಿದೆವು. ಅಲ್ಲದೇ ಅಲ್ಲಿನ ಆ ಧೂಳಿನಿಂದಾಗಿ ಮುಂದಿನ ಒಂದು ವಾರ ನನ್ನ ನಾಸಿಕ ಮುಷ್ಕರ ಹೂಡಬಹುದೆನ್ನುವ ಭಯವೂ ಇತ್ತು ನನ್ನಲ್ಲಿ.

ನಂತರ ಶ್ಯಾಮ್ ಮಾಧ್ಯಮ ಕೇಂದ್ರದತ್ತ ಹೋದರು. ಸುಧೀಂದ್ರ ಮತ್ತು ಜನಾರ್ದನ ಸ್ವಾಮಿಯವರು ಇನ್ನೆತ್ತಲೋ ತೆರಳಿದರು. ಬಹುಶಃ ನಿರ್ಗಮಿಸಿದರೇನೋ. ಜ್ಯೋತಿ ಮಹಾದೇವ ಮತ್ತು ನಾನು ಒಂದರ್ಧ ಘಂಟೆ ಮಾತಾಡುತ್ತ ನಿಂತಿದ್ದೆವು. ತೀರ ಸರಳ ವ್ಯಕ್ತಿತ್ವದ ಜ್ಯೋತಿಯವರ ಪರಿಚಯ ಸಂತಸ ನೀಡಿತ್ತು. ಅಮೇರಿಕಾ ದೇಶದಲ್ಲಿದ್ದು ಮರಳಿ ಈಗ ಉಡೂಪಿ ಸಮೀಪದ ಮಣಿಪಾಲದಲ್ಲಿ ನೆಲೆಸಿರುವ ಅವರದ್ದು, ಮಣಿಪಾಲದಲ್ಲೇ ನೌಕರಿ ಮಾಡುತ್ತಿರುವ ಪತಿ ಮತ್ತು ಸುರತ್ಕಲ್‍ನ  ಕಾಲೇಜಿನಲ್ಲಿ ಕಲಿಯುತ್ತಿರುವ ಮಗನ ಜೊತೆಗಿನ ಮೂರು ಸದಸ್ಯರ ಪುಟ್ಟ ಸಂಸಾರವಂತೆ. ಸಮ್ಮೋಹಿನಿಯ ಮೂಲಕ ಚಿಕಿತ್ಸೆ ನೀಡುವ ಕಲೆಯಲ್ಲಿ (ಹಿಪ್ನೋಥೆರಪಿ) ತರಬೇತಿ ಪಡೆದಿರುವ ಆಕೆ ಸದ್ಯ ಅದನ್ನೇ ವೃತ್ತಿಯಾಗಿಸಿಕೊಂಡಿದ್ದಾರಂತೆ. ತನ್ನ ಭಾವಬಿಂಬ ಎನ್ನುವ ಮುದ್ರಿತ ಕವನ ಸಂಕಲನವನ್ನು ನನಗಾಗಿ ನೀಡಿದರು. ಅದರ ಓದು ಇನ್ನೂ ಬಾಕಿ ಇದೆ.

ಹರಿವ ಲಹರಿ ಮತ್ತು ಸುಪ್ತ ದೀಪ್ತಿ ಎನ್ನುವ ಎರಡು ಬ್ಲಾಗ್ ಗಳಲ್ಲಿ ನಿರಂತರವಾಗಿ ಬರೆಯುತ್ತಿರುವ ಆಕೆಯೊಂದಿಗೆ ಅಂದು ಅಲ್ಲಿ ಕಳೆದ ಆ ಅರೆಗಳಿಗೆ ಬಲು ಸುಂದರವೆನಿಸಿತ್ತು. ಅಷ್ಟರಲ್ಲಿ, ಆಕೆಯ ಅನಿವಾಸಿ ಭಾರತೀಯ ಮಿತ್ರ ತ್ರಯರು ಅಲ್ಲಿಗೆ ಬಂದು ಮಾತಾಡಲು ತೊಡಗಿದ್ದರಾದ್ದರಿಂದ, ನಾನು ಜ್ಯೋತಿಯವರಿಗೆ ನಮಸ್ಕರಿಸಿ “ನಾನಿನ್ನು ಬರುತ್ತೇನೆ” ಅಂದೆ.  ಅಷ್ಟು ಹೊತ್ತು ಒಂಟಿಯಾಗಿದ್ದ ಆಕೆಗೆ ಜೊತೆ ನೀಡಿದುದಕ್ಕಾಗಿ ಆಕೆ ನನಗೆ ಕೃತಜ್ಞತೆ ಸಲ್ಲಿಸಿದರು.  ಅವರಿಂದ ಬೀಳ್ಕೊಂಡು ಮತ್ತು ಆ ಜನ ಜಾತ್ರೆಯಿಂದ ಹೊರಹೊರಟು ನಾನು ಮನೆಯ ದಾರಿ ತುಳಿದೆ.