ನಿನ್ನ ಕಂಗಳಲ್ಲಿ ಕಂಪನ್ನೀವ ರಹಸ್ಯವಿದೆ!

12 ಜನ 14

 

ಇನ್ನೊಂದು ಹಿಂದೀ ಗೀತೆಯ ಭಾವಾನುವಾದದ ಯತ್ನ:
(ಆಪ್ ಕೀ ಆಂಖೋಂ ಮೆ ಕುಛ್ ಮೆಹಕೀ ಹುವೀ ಸೀ ರಾಝ್ ಹೈ)

ನಿನ್ನ ಈ ಕಂಗಳಲ್ಲಿ ಅದೇನೋ ಕಂಪನ್ನೀವ ರಹಸ್ಯವಿದೆ
ನಿನಗಿಂತಲೂ ನಿನ್ನ ನೋಟವೇ ಬಲು ಸುಂದರವಾಗಿದೆ
ನಿನ್ನ ಈ ಕಂಗಳಲ್ಲಿ ಅದೇನೋ ಕಂಪನ್ನೀವ ರಹಸ್ಯವಿದೆ

ಅಧರಗಳು ಅಲುಗಿದರೆ ಹೂಗಳು ಅರಳುತ್ತವೆ ಅವೆಲ್ಲೋ
ನಿನ್ನ ಕಂಗಳೊಳಗಿಂದಲೇ ತಟವನ್ನು ಸೇರಬಹುದೆಲ್ಲೋ
ನಿನ್ನೀ ಮೌನವೇ ಸ್ವರವಾಗಿ ನನ್ನ ಕಾಡುತ್ತಿದೆಯಲ್ಲೋ

ನಿನ್ನ ಈ ಕಂಗಳಲ್ಲಿ ಅದೇನೋ ಕಂಪನ್ನೀವ ರಹಸ್ಯವಿದೆ
ನಿನಗಿಂತಲೂ ನಿನ್ನ ನೋಟವೇ ಬಲು ಸುಂದರವಾಗಿದೆ
ನಿನ್ನ ಈ ಕಂಗಳಲ್ಲಿ ಅದೇನೋ ಕಂಪನ್ನೀವ ರಹಸ್ಯವಿದೆ

ನಿನ್ನೀ ಮಾತುಗಳಲ್ಲಿನ್ನೇನೋ ತುಂಟಾಟ ಅಡಗಿಲ್ಲ ತಾನೇ
ನಿನ್ನ ಹವ್ಯಾಸವಲ್ಲ ಹೊಗಳುವುದು ಹೀಗೆ ಸುಖಾಸುಮ್ಮನೇ
ಇದೂ ನಿನ್ನ ಮೋಸದಾಟದ ಹೊಸದೊಂದು ಶೈಲಿಯೇನೋ

ನಿನ್ನ ಈ ಕಂಗಳಲ್ಲಿ ಅದೇನೋ ಕಂಪನ್ನೀವ ರಹಸ್ಯವಿದೆ
ನಿನಗಿಂತಲೂ ನಿನ್ನ ನೋಟವೇ ಬಲು ಸುಂದರವಾಗಿದೆ
ನಿನ್ನ ಈ ಕಂಗಳಲ್ಲಿ ಅದೇನೋ ಕಂಪನ್ನೀವ ರಹಸ್ಯವಿದೆ


ತನು ಚಂದನವು ಮನ ಚಂಚಲವು (ಲತಾ)!

12 ಜನ 14

 

ಲತಾ ಮಂಗೇಶ್ಕರ್ ಹಾಡಿರುವ, ಸರಸ್ವತೀ ಚಂದ್ರ ಚಿತ್ರದ “ಚಂದನ್ ಸ ಬದನ್ ಚಂಚಲ್ ಚಿತುವನ್” ಹಾಡಿನ ಭಾವಾನುವಾದದ ಯತ್ನ.

ತನು ಚಂದನವು ಮನ ಚಂಚಲವು
ಬಲುಮೋಹಕ ನಿನ್ನಾ ಮುಗುಳ್ನಗು
ದೋಷಿ ಎಂದೆನ್ನ ಹಳಿಯದಿರಿ 
ಈ ಮನವಾದರೆ ಹುಚ್ಚ, ಪ್ರೀತಿಯಲಿ

ನಿನ್ನೀ ಬಟ್ಟಲುಕಂಗಳು ನೀಲಾಗಸದಂತೆ
ಕಳೆದು ಹೋಗಲೇ ನಾನು ಹಕ್ಕಿಯಂತೆ
ನಿನ್ನ ಬಾಹುಗಳ ಆಸರೆಯೊಂದಿದ್ದರೆ ಸಾಕು
ಜ್ವಾಲೆಗಳ ಮೇಲೂ ನಾ ನಿದ್ರಿಸುವೆನಂತೆ
ಬೇಸರಗೊಂಡಿದ್ದ ಈ ಮನವೂ ಓಲಾಡಿದೆ
ನಿನ್ನ ಮೋಹಕ ನಡೆ ಆ ಪರಿಯಿಹುದಂತೆ

ತನು ಸುಂದರ ಮನವೂ ಸುಂದರ
ನೀನೇ ಸೌಂದರ್ಯದ ಮೂರುತಿಯು
ಇನ್ನಾರಿಗೂ ನೀನು ಬೇಡಾದರೂ
ನನಗಿದೆ ನಿನ್ನಯ ಬಲು ಹಂಬಲವು
ಈ ಮೊದಲೇ ಪರಿ ಪರಿ ನೊಂದಿಹುದು
ನೀನಿನ್ನೂ ನೋಯಿಸದಿರೀ ಮನವನ್ನು


ಅದೆಲ್ಲಿಂದ ಬಂದವೋ ಮೋಡಗಳು!

04 ಜನ 14

 

(ಚಶ್ಮೆ ಬದ್ಧೂರ್ ಚಿತ್ರದ “ಕಹಾಂ ಸೇ ಬದ್‍ರಾ” ಗೀತೆಯ ಭಾವಾನುವದದ ಯತ್ನ)

ಅದೆಲ್ಲಿಂದ ಬಂದವೋ ಮೋಡಗಳು
ನನ್ನ ಕಣ್ಣ ಕಾಡಿಗೆಯೂ ಕರಗುತಿದೆ

ನನ್ನ ನಿದ್ರೆ ಪ್ರಿಯನೊಂದಿಗೆ ತೆರಳಿದೆ
ಸ್ವಪ್ನಸುಮಗಳೀಗ ಶುಷ್ಕಗೊಂಡಿವೆ
ತುಟಿಗಳ ತನಕ ಬಂದ ಅಮೃತವೂ
ವಿಷವಾಗಿ ಬದಲಾಗಿ ಹೋದಂತಿದೆ
ಅದೆಲ್ಲಿಂದ ಬಂದವೋ ಮೋಡಗಳು
ನನ್ನ ಕಣ್ಣ ಕಾಡಿಗೆಯೂ ಕರಗುತಿದೆ

ಮೋಡಗಳೀ ಹೃದಯವನ್ನಾವರಿಸುತ್ತಿವೆ
ನಿರ್ದಯಿ ಪವನ ಹೆಚ್ಚಿಸುತಿಹನಗ್ನಿ ಜ್ವಾಲೆ
ಈ ಕಣ್ಣುಗಳಿಂದ ಸೋನೆ ಸುರಿಯುತ್ತಲಿದೆ
ಮರುಳು ಮನವಿನ್ನೂ ಅಳುತ್ತಲೇ ಇದೆ
ಅದೆಲ್ಲಿಂದ ಬಂದವೋ ಮೋಡಗಳು
ನನ್ನ ಕಣ್ಣ ಕಾಡಿಗೆಯೂ ಕರಗುತಿದೆ!


ಮಡಿಲಲ್ಲಿ ತಲೆಯಿರಿಸಿ!

28 ಡಿಸೆ 13

(ಹಿಂದೀ ಚಿತ್ರಗೀತೆಯ ಭಾವಾನುವಾದದ ಯತ್ನ)

ನಿನ್ನಯ ಮಡಿಲಲ್ಲಿ ತಲೆಯನ್ನಿರಿಸಿ ರೋದಿಸಿದೆ
ನನ್ನ ನೋವಿನ ಕತೆಯ ಕೇಳಿಸುತ್ತಾ ರೋದಿಸಿದೆ

ಈ ಜೀವನ ನನ್ನಲ್ಲಿ ಬೇಸರ ತುಂಬಿದಾಗಲೆಲ್ಲಾ
ಭಯದಿಂದ ನಿನ್ನ ಸನಿಹವೇ ಬಂದು ನಿಂತೆನಲ್ಲಾ
ತಗ್ಗಿಸಿದ ತಲೆಯ ತಗ್ಗಿಸಿಕೊಂಡೇ ನಾ ರೋದಿಸಿದೆ

ಈ ಸಂಜೆ ಕಣ್ಣೀರಿಳಿಸುತ್ತಾ ಬಳಿ ಬಂದಾಗಲೆಲ್ಲಾ
ಸುತ್ತಲೂ ನೋವಿನ ಛಾಯೆ ಆವರಿಸಾದಗಲೆಲ್ಲಾ
ನೆನಪಿನ ದೀಪವನು ಬೆಳಗಿ ನಾನು ರೋದಿಸಿದೆ

ವಿರಹದ ನೋವನ್ನು ನನ್ನಿಂದ ಸಹಿಸಲಾಗುವುದಿಲ್ಲ
ನಿನ್ನನ್ನು ಅಗಲಿ ನನ್ನಿಂದ ಇನ್ನು ಬಾಳಲಾಗುವುದಿಲ್ಲ
ಒಲವಿನಲ್ಲಿ ಅದೇನನ್ನೆಲ್ಲಾ ಸಹಿಸಿಕೊಂಡು ರೋದಿಸಿದೆ

(ಆಪ್ ಕೇ ಪೆಹಲೂಂ ಮೆ ಆಕರ್ ರೋದಿಯೇ)


ನಿನ್ನ ಬಾಳು ಎನ್ನದಿರು!

30 ನವೆಂ 13

(ಭಾವಾನುವಾದ)

||ನನ್ನೊಲವೇ, 
ನನ್ನನ್ನೇ ನಿನ್ನ ಬಾಳು ಎಂದು ಕರೆಯದಿರು, 
ನನ್ನೊಲವೇ||

ಅರಿವಿಲ್ಲದವರಂತೆ
ನನ್ನನ್ನೇ ನಿನ್ನ ಬಾಳು ಎಂದು ಕರೆಯದಿರು
ಸದಾ ಎಲ್ಲಿ ಉಳಿಯುವುದು ಈ ಬಾಳು?
ಅರಿವಿಲ್ಲದವರಿಗೆ ಏನು ಗೊತ್ತು, ಬಿಡು,
ಆದರೆ ಅರಿತೂ ಹೋಗುವವರು ಯಾರು 
ತೊರೆದು ಈ ಬಾಳನ್ನು?

||ನನ್ನೊಲವೇ, 
ನನ್ನನ್ನೇ ನಿನ್ನ ಬಾಳು ಎಂದು ಕರೆಯದಿರು, 
ನನ್ನೊಲವೇ||

ನನ್ನೀ ಒಣಗಿದ ಕಣ್ಣುಗಳು 
ಸುರಿಸಿದ್ದವೆಷ್ಟೋ ಬಾರಿ ಸೋನೆಯನ್ನು
ಆದರೆ ಈ ನೆನೆದ ಕಣ್ರೆಪ್ಪೆಗಳು ಬಿಟ್ಟಿರಲಿಲ್ಲ 
ಜಾರಲೆಂದೂ ಎರಡು ಹನಿಗಳನ್ನು

||ನನ್ನೊಲವೇ, 
ನನ್ನನ್ನೇ ನಿನ್ನ ಬಾಳು ಎಂದು ಕರೆಯದಿರು, 
ನನ್ನೊಲವೇ||

ತುಟಿಗಳು ಬಾಗಿವೆ ತುಟಿಗಳ ತಾಕಿವೆ 
ಉಸಿರು ಉಸಿರಲಿ ಸೇರಿ ಒಂದಾದಂತಿದೆ
ನುಡಿದು ಬಿಡು ನೀನು ಕಣ್ಣುಗಳಿಂದ 
ಈ ಎರಡು ಜೋಡಿ ತುಟಿಗಳ ಮಾತುಗಳನ್ನು

||ನನ್ನೊಲವೇ, 
ನನ್ನನ್ನೇ ನಿನ್ನ ಬಾಳು ಎಂದು ಕರೆಯದಿರು, 
ನನ್ನೊಲವೇ||


ಜ್ಯೋತಿ!

21 ನವೆಂ 13

 
(ಭಾವಾನುವಾದ)

ಅಹೋರಾತ್ರಿ ಬೆಳಗುತಿಹುದಾದರೂ ಜ್ಯೊತಿ
ನನ್ನ ಮನಮಂದಿರದಲ್ಲಿ ಇನ್ನೂ ಕತ್ತಲಿಹುದು
ಅದೆಲ್ಲಿರುವೆಯೋ ಓ ನನ್ನ ಸಾಥಿ, ನೀನು
ಜೊತೆಯಾದರೆ ನನ್ನೀ ಬಾಳು ಬೆಳಗಬಹುದು

ಪ್ರತಿ ಹೆಜ್ಜೆಯಲೂ ಎಡವುತಿರುವೆ ನಾನು
ಸೂರ್ಯ ಚಂದ್ರರೂ ತೋರುತ್ತಿಲ್ಲ ಹಾದಿ
ನನ್ನ ಇನಿಯನ ದರ್ಶನವಾಗಲು ಎನಗೆ
ಅಂಥ ಬೆಳಕು ತುಂಬಿಬಿಡಲೊಮ್ಮೆ ಮನದಿ

ನನ್ನೊಂದಿಗನ್ಯಾಯ ಎಸಗಿದವರು ಯಾರು
ಎಂಬ ರಹಸ್ಯವನ್ನು ಯಾರಾದಾರೂ ಹೇಳಿ
ದೀಪ ಹಚ್ಚಿದವರ ಮನೆಯನ್ನು ಬೆಳಗದೇ
ಇತರರ ಮನೆಯ ಬೆಳಗುತಿರುವುದೇಕೆ ಹೇಳಿ

ನನ್ನ ಗಮ್ಯ ಯಾವುದು ಎಂಬ ಅರಿವೂ ಇಲ್ಲ
ಯಾರ ನಿರೀಕ್ಷೆ ಈ ಕಣ್ಣುಗಳಿಗೆ ಎಂಬರಿವಿಲ್ಲ
ನದಿಯಲಿ ಅಲೆಗಳೇಳಿಬೀಳುವಂತೆ, ಮನದ
ಪಯಣವೂ ಕುತೂಹಲಕಾರಿಯಾಗಿಹುದಲ್ಲಾ?

http://www.youtube.com/watch?v=SA_PmbS7O6k


ನೀನು ನೀಡುವೆಯಾದರೆ ಭರವಸೆ!

03 ನವೆಂ 13

(ಭಾವಾನುವಾದದ ಯತ್ನ)

ನೀನು ನೀಡುವೆಯಾದರೆ ಸದಾ ಜೊತೆಗಿರುವ ಭರವಸೆ
ನಾನು ಹೀಗೆಯೇ ಕವಿತೆ ಬರೆಯುತ್ತಾ ಇರಬೇಕೆಂಬಾಸೆ 
ನನ್ನನ್ನು ನೋಡಿ ಇರುವೆಯಾದರೆ ನೀ ಮುಗುಳ್ನಗುತ್ತಾ 
ಹಾಡುತ್ತಾ ಇರುವೆ ನಾನು ಸದಾ ನಿನ್ನನ್ನು ನೋಡುತ್ತಾ 

ಕಣ್ಮುಂದೆ ಅದೆಷ್ಟೋ ಸುಂದರಿಯರು ಹಾದು ಹೋದರು
ನಾನಿದುವರೆಗೂ ಯಾರನ್ನೂ ಕರೆದಿಲ್ಲ ಜೊತೆ ನೀಡೆಂದು
ನಿನ್ನನ್ನು ನೋಡಿದ ಕ್ಷಣದಿಂದೀ ಕಂಗಳು ನುಡಿಯುತ್ತಲಿವೆ
ನಿನ್ನ ಮೊಗದಿಂದ ದೃಷ್ಟಿ ಕೀಳುವುದಿನ್ನು ಅಸಾಧ್ಯವೆಂದು
ನೀನೆನ್ನ ದೃಷ್ಟಿಯೊಳಗೇ ಲೀನಳಾಗಿ ಕೂರುವೆಯಾದರೆ
ಮಾತು ಕೊಡುವೆ ಅನ್ಯರಿಂದ ಮುಖ ಮರೆಸುವೆನೆಂದು

ನಾನು ವರುಷಗಳಿಂದ ಕನಸುಗಳಲ್ಲಿ ಹುಡುಕಾಡುತ್ತಿದ್ದೆ
ಅರಿತೆನೀಗ ನೀನು ಅದೇ ಅಮೃತಶಿಲಾಮೂರ್ತಿ ಎಂದು
ನೀನು ತಿಳಿಯಬೇಕಾಗಿಲ್ಲ ನಿನ್ನ ಸರ್ವಸ್ವ ನಾನು ಎಂದು
ಆದರೆ ನಾನು ಅರಿತಿರುವೆ ನೀನೇ ನನ್ನ ಅದೃಷ್ಟವೆಂದು
ನೀನು ನನ್ನನ್ನು ನಿನ್ನವನೆಂದು ತಿಳಿವ ಕೃಪೆದೋರಿದರೆ
ವಸಂತದ ತೋರಣ ಕಟ್ಟುತಿರುವೆ ನಿನಗಾಗೆಂದೆಂದೂ

ಏಕಾಂಗಿಯಾಗಿ ಅದೆಷ್ಟು ದೂರ ನಡೆದು ಬಂದಿಹೆ ನಾನು
ಅನಿಸುತಿದೆ ಇನ್ನು ಈ ಒಂಟಿಪಯಣವೇ ಅಸಾಧ್ಯವೆಂದು
ಬಾಳಲ್ಲಿ ಒಲವು ತುಂಬುವ ಆಸರೆ ನಮಗೆ ದಕ್ಕದೇ ಇದ್ದರೆ
ತಿಳಿನೀ ಯೌವನದ ದಿನಗಳ ಕಳೆಯುವುದೆಷ್ಟು ಕಷ್ಟವೆಂದು
ಸದಾ ನೀನನ್ನ ಜೊತೆಜೊತೆಗೆ ಸಾಗುತ್ತಾ ಇರುವೆಯಾದರೆ
ನಕ್ಷತ್ರಗಳ ಹಾಸು ಹಾಸುವೆ ನಾನೀ ಬುವಿಯ ಮೇಲಿಂದು

ಮೂಲ ಗೀತೆ: ತುಮ್ ಅಗರ್ ಸಾಥ್ ದೇನೇ ಕಾ


ಕೇಶರಾಶಿಗಳ ನೆರಳಲ್ಲಿ!

02 ನವೆಂ 13

(ಭಾವಾನುವಾದದ ಯತ್ನ)

ನಿನ್ನ ಕೇಶರಾಶಿಗಳ ನೆರಳಲ್ಲೇ ನನ್ನ ಸಂಜೆಯ ಕಳೆವೆ
ಈ ಜನುಮದ ಪಯಣವನೀ ಕ್ಷಣವೇ ನಾ ಮುಗಿಸುವೆ

ಕಣ್ಣುಗಳು ಸಂಧಿಸೆ ಒಲವಿಗಂತ್ಯ ಹೇಗೆಂದು ಕೇಳುವೆ
ಕಣ್ಣು ಮರೆಸಿ ಕೂತರೆ ನಾನು ಮನದಲ್ಲೇ ವಂದಿಸುವೆ

ಮನದ ಮೇಲಿನ್ನು ನಿನ್ನದೇ ರಾಜ್ಯಭಾರ ಎರಡು ಮಾತಿಲ್ಲ
ಸೋಲುಗಳು ಎದುರಾದರವನ್ನು ಸ್ವೀಕರಿಸಲು ನಾನಿಹೆನಲ್ಲ

ನಿನ್ನ ಕೇಶರಾಶಿಗಳ ನೆರಳಲ್ಲೇ ನನ್ನ ಸಂಜೆಯ ಕಳೆವೆ
ಈ ಜನುಮದ ಪಯಣವನೀ ಕ್ಷಣವೇ ನಾ ಮುಗಿಸುವೆ!

 

ಮೂಲ ಗೀತೆ: ತುಮಾರಿ ಝುಲ್ಫ಼್ ಕೆ ಸಾಯೇ ಮೆ


ದೂರದಲೇ ನಿಂತು ಆಡದಿರು ಮಾತು!

01 ನವೆಂ 13

(ಭಾವಾನುವಾದದ ಯತ್ನ)

ದೂರದಲೇ ನಿಂತು ಆಡದಿರು ಮಾತು, ನೀ ನನ್ನ ಸನಿಹ ಬಂದುಬಿಡು
ನಮ್ಮ ನೆನಪಿನಲ್ಲುಳಿಯಲೀ ಇರುಳು, ನೀ ನನ್ನ ಸನಿಹ ಬಂದುಬಿಡು

ನಿನ್ನನ್ನು ಸ್ಪರ್ಶಿಸುವ ಆಸೆ ಅದೆಂದಿನಿಂದಲೋ ಈ ಮನದಲ್ಲಿಹುದು
ಇಂದು ಹಿಡಿತದಲ್ಲೇ ಇಲ್ಲ ಬಯಕೆಗಳು, ನೀ ನನ್ನ ಸನಿಹ ಬಂದುಬಿಡು 

ತಂಗಾಳಿಯೂ ನೋಡು ಈ ದೇಹದ ದಾಹವನು ಹೆಚ್ಚಿಸುತಿಹುದು
ಪ್ರಾಣವನೇ ಕಿತ್ತೀತು ಈ ಮಳೆಯು, ನೀ ನನ್ನ ಸನಿಹ ಬಂದುಬಿಡು 

ನನ್ನಿಂದೀ ತರಹ ನಾಚಿಕೊಂಡು ದೂರಹೋಗುವ ಅಗತ್ಯ ಎಲ್ಲಿಹುದು
ಸಂಗಾತಿ ನೀನನಗೀ ಜನುಮಪೂರ್ತಿ, ನೀ ನನ್ನ ಸನಿಹ ಬಂದುಬಿಡು

ದೂರದಲೇ ನಿಂತು ಆಡದಿರು ಮಾತು, ನೀ ನನ್ನ ಸನಿಹ ಬಂದುಬಿಡು
ನಮ್ಮ ನೆನಪಿನಲ್ಲುಳಿಯಲೀ ಇರುಳು, ನೀ ನನ್ನ ಸನಿಹ ಬಂದುಬಿಡು

ಮೂಲ ಗೀತೆ: ದೂರ್ ರೆಹಕರ್ ನ ಕರೋ ಬಾತ್ ಕರೀಬ್ ಆಜಾವೋ

 


ಸಂಬಂಧ ಬರೀ ಹೆಸರಷ್ಟೆ!

29 ಆಕ್ಟೋ 13

(ಭಾವಾನುವಾದದ ಯತ್ನ)

ಆಣೆ, ಭಾಷೆ, ಪ್ರೀತಿ, ನಿಷ್ಠೆ, ಮಾತಷ್ಟೇ ಬರೀ ಮಾತಷ್ಟೇ
ಯಾರಿಗೆ ಯಾರೂ ಇಲ್ಲ ಇಲ್ಲಿ, ಸಂಬಂಧ ಬರೀ ಹೆಸರಷ್ಟೆ!

ನಿನ್ನ ಕಣ್ಣೆದುರು ದೇವದೂತನಿದ್ದರೂ ನೀನು ಉಳಿಯಲಾರೆ ಇಲ್ಲಿ
ನಿನ್ನ ಕರುಳಿನಕುಡಿಯೇ ಕೊನೆಗೆ ನಿನ್ನ ಚಿತೆಗೆ ಕೊಳ್ಳಿ ಇಡುವುದಿಲ್ಲಿ
ಆಗಸದಲಿ ಹಾರಾಡುವವನೂ ಮಣ್ಣಿನಲ್ಲಿ ಮಣ್ಣಾಗಿ ಹೋಗಬೇಕಿಲ್ಲಿ

||ಆಣೆ, ಭಾಷೆ, ಪ್ರೀತಿ, ನಿಷ್ಠೆ, ಮಾತಷ್ಟೇ ಬರೀ ಮಾತಷ್ಟೇ
ಯಾರಿಗೆ ಯಾರೂ ಇಲ್ಲ ಇಲ್ಲಿ, ಸಂಬಂಧ ಬರಿ ಹೆಸರಷ್ಟೆ||

ನಿನ್ನ ನಲಿವಲ್ಲಿ ಜೊತೆಗೆ ನಲಿದವರೂ ಕಷ್ಟದಲಿ ಮುಖಮರೆಸುವರು
ಜಗದೆಲ್ಲಾ ಮಂದಿ ನಿನ್ನವರಾಗಿ ನಿನ್ನ ಮನವನ್ನೇ ನೋಯಿಸುವರು
ದೇವರಿಗೇ ಮೋಸಮಾಡುವವರು ನಿನ್ನನ್ನು ಹೇಗಾದರೂ ಬಿಟ್ಟಾರು? 

||ಆಣೆ, ಭಾಷೆ, ಪ್ರೀತಿ, ನಿಷ್ಠೆ, ಮಾತಷ್ಟೇ ಬರೀ ಮಾತಷ್ಟೇ
ಯಾರಿಗೆ ಯಾರೂ ಇಲ್ಲ ಇಲ್ಲಿ, ಸಂಬಂಧ ಬರಿ ಹೆಸರಷ್ಟೆ||

Koyee kisee kaa nahee yeh jhuthe naate hain naato kaa kya
Kasme waade pyaar wafa sab baate hain baato kaa kya

Hoga masiha -2 saamane tere, phir bhee naa tu bach paayega
Teraa apana -2 khun hee aakhir tujhako aag lagayega
 Aasmaan me -2 udane waale mitti me mil jaayega
 Kasme waade pyaar wafa sab baate hain bato kaa kya

 Sukh me tere -2 saath chalenge, dukh me sab mukh modenge
 Duniya waale -2 tere bankar teraa hee dil todenge
 Dete hain -2 bhagwan ko dhokha, insaan ko kya chhodenge
 Kasme waade pyaar wafa sab, baate hain baato kaa kya