ನಾವದೇಕೆ ಅಸಹಾಯಕರಾದೆವು?

05 ಜುಲೈ 15

|ಜೀವನದ ಈ ಪಯಣದಲಿ ನಾವದೇಕೆ ಅಸಹಾಯಕರಾದೆವು,
ಅದೆಷ್ಟು ಸನಿಹರಾದೆವೆಂದರೆ ಪರಸ್ಪರರಿಂದ ದೂರವಾದೆವು|

ನನಗಿಲ್ಲಾವ ಸಂತಸವೂ ದಕ್ಕಿಲ್ಲ ಎಂದೇನಲ್ಲ
ಆದರೆ ಈ ಜೀವನವೆಂದೂ ಜೀವನವೇ ಆಗಿಲ್ಲ
ಯಾಕಿದರ ನಿರ್ಣಯಗಳನ್ನೆಲ್ಲಾ ನಾವು ಸ್ವೀಕರಿಸಿದೆವು?

|ಜೀವನದ ಈ ಪಯಣದಲಿ ನಾವದೇಕೆ ಅಸಹಾಯಕರಾದೆವು,
ಅದೆಷ್ಟು ಸನಿಹರಾದೆವೆಂದರೆ ಪರಸ್ಪರರಿಂದ ದೂರವಾದೆವು|

ನಿನ್ನನ್ನು ಪಡೆದಂದೇ ಕಳೆದುಕೊಂಡ ಅನುಭವವೂ ನನಗಾಯ್ತು
ನೊಂದ ಹೃದಯಕ್ಕಾಗಿ ನಾ ಮರುಗಿದರೆ ಹೃದಯ ನನಗಾಗಿ ಮರುಗಿತ್ತು
ಕಣ್ಣಂಚಿನಿಂದ ಕನಸುಗಳು ಜಾರಿ ಅವೇಕೆ ನುಚ್ಚುನೂರಾದವು

|ಜೀವನದ ಈ ಪಯಣದಲಿ ನಾವದೇಕೆ ಅಸಹಾಯಕರಾದೆವು,
ಅದೆಷ್ಟು ಸನಿಹರಾದೆವೆಂದರೆ ಪರಸ್ಪರರಿಂದ ದೂರವಾದೆವು|

#ಆಸುಮನ
#ಭಾವಾನುವಾದ

क्यों जिन्दगी की राह में मजबूर हो गए
इतने हुए करीब के हम दूर हो गए

ऐसा नहीं के हम को कोई भी खुशी नहीं
लेकिन ये जिन्दगी तो कोई जिन्दगी नहीं
क्यों इसके फैसले हमे मंजूर हो गए

पाया तुम्हे तो हम को लगा तुम को खो दिया हम दिल पे रोये और ये दिल हम पे रो दिया पलकों से ख्वाब क्यों गिरे क्यों चूर हो गए

Advertisements

ನೋವಿನ ಖಜಾನೆ!

17 ಆಗಸ್ಟ್ 14

ನೋವಿನ ಖಜಾನೆ ನಿನ್ನಲ್ಲೂ ಇದೆ ನನ್ನಲ್ಲೂ ಇದೆ
ಹಳೆನೆನಪುಗಳು ನಿನ್ನಲ್ಲೂ ಇವೆ ನನ್ನಲ್ಲೂ ಇವೆ

ಈ ನೋವುಗಳನ್ನು ಗೀತೆಗಳನ್ನಾಗಿಸಿ ಹಾಡಿಬಿಡು
ಹಳೆಯ ರಾಗಗಳು ನಿನ್ನಲ್ಲೂ ಇವೆ ನನ್ನಲ್ಲೂ ಇವೆ

||ನೋವಿನ ಖಜಾನೆ ನಿನ್ನಲ್ಲೂ ಇದೆ ನನ್ನಲ್ಲೂ ಇದೆ||

ನೀನನಗೆ ನಾನಿನಗೆ ಹೇಳಲು ಉಳಿದಿದೆ ಇನ್ನೇನು
ನಿನ್ನ ಮನಸ್ಸೂ ಮರುಳಾಗಿದೆ ನನ್ನದೂ ಆಗಿದೆ

||ನೋವಿನ ಖಜಾನೆ ನಿನ್ನಲ್ಲೂ ಇದೆ ನನ್ನಲ್ಲೂ ಇದೆ||

ನಗರದ ಬೀದಿ ಬೀದಿಗಳಲ್ಲಿ ಗಾಳಿಮಾತು ಹರಡಿದೆ
ಅದರಲ್ಲಿ ನಿನ್ನ ಮಾತೂ ಇದೆ ನನ್ನ ಮಾತೂ ಇದೆ

||ನೋವಿನ ಖಜಾನೆ ನಿನ್ನಲ್ಲೂ ಇದೆ ನನ್ನಲ್ಲೂ ಇದೆ||

ಮಧುಶಾಲೆಯ ಮಾತೇಕೆ ಆಡುವೆ ನೀನು ನನ್ನಲ್ಲಿಂದು
ಅಲ್ಲಿಗೆ ಹೋಗುವ ಅಭ್ಯಾಸ ನಿನಗೂ ಇದೆ ನನಗೂ ಇದೆ

||ನೋವಿನ ಖಜಾನೆ ನಿನ್ನಲ್ಲೂ ಇದೆ ನನ್ನಲ್ಲೂ ಇದೆ||


ಪುಸ್ತಕಗಳಾಚೆಗೂ…!

17 ಆಗಸ್ಟ್ 14

ಬಿಸಿಲಲ್ಲೂ ಅಡ್ಡಾಡು ಮಳೆನೀರಿನಲ್ಲೂ ನೀನೊಮ್ಮೆ ನೆನೆದು ನೋಡು
ಜೀವನವನ್ನರಿಯಲು ಪುಸ್ತಕಗಳಾಚೆಗೂ ನೀನೊಮ್ಮೆ ದೃಷ್ಟಿ ಹರಿಸಿ ನೋಡು.

ಆ ತಾರೆಗಳನ್ನು ನಿನ್ನ ಕಣ್ಣುಗಳೊಳಗೆ ಬೆಳಗಲು ಬಿಡು
ಅವುಗಳಿಗೂ ರೂಪಕೊಟ್ಟು ನೋಡುವ ಅಗತ್ಯವೇನಿದೆ
ಕಲ್ಲುಗಳಿಗೂ ಹೃದಯವಿದೆ ನಾಲಿಗೆಯೂ ಇದೆ ನೋಡು
ತಂದು ನೀನೊಮ್ಮೆ ಮನೆಯ ಗೋಡೆ-ದ್ವಾರಗಳಲ್ಲಿ ಅಲಂಕರಿಸಿ ನೋಡು

ನಮ್ಮ ನೋಟವರಿತ ಅಂತರ ಸುಳ್ಳಾಗಿರಲೂಬಹುದು
ಸಿಕ್ಕರೂ ಬಿಟ್ಟರೂ ಪರವಾಗಿಲ್ಲ, ನೀನೊಮ್ಮೆ ಕೈಚಾಚಿ ನೋಡು
ಬಿಸಿಲಲ್ಲೂ ಅಡ್ಡಾಡು ಮಳೆ ನೀರಿನಲ್ಲಿ ನೀನೊಮ್ಮೆ ನೆನೆದು ನೋಡು
ಜೀವನವನ್ನರಿಯಲು ಈ ಪುಸ್ತಕಗಳಾಚೆಗೂ ನೀನೊಮ್ಮೆ ದೃಷ್ಟಿ ಹರಿಸಿ ನೋಡು.


ಸನ್ನೆ ಬರೀ ಸನ್ನೆಯಿಂದಲೇ!

24 ಮೇ 14

(ಹಿಂದೀ ಚಿತ್ರಗೀತೆಯೊಂದರ ಭಾವಾನುವಾದ)

ಸನ್ನೆ ಬರೀ ಸನ್ನೆಯಿಂದಲೇ ಮನವ ಕದಿಯೋ ಈ ಜಾಣ್ಮೆಯನು ಹೇಳು ನೀನು ಅದೆಲ್ಲಿಂದ ಕಲಿತೆ
ನೋಟದಲ್ಲೇ ಜಾದೂ ಮಾಡುವ ಕಲೆಯನ್ನು ನೀನದೆಲ್ಲಿಂದ ಕಲಿತೆಯೋ ಅಲ್ಲಿಂದಲೇ ನಾ ಕಲಿತೆ!

ನನ್ನ ಮನ ಮೋಡಿಗೊಂಡಿದೆ ನಿನ್ನಿಂದ ಇದರಲ್ಲಿ ನನ್ನದೇನಿದೆ ತಪ್ಪು
ನಿನ್ನೀ ಹಾವಭಾವಗಳೇ ಕಾಡಿವೆ ನನ್ನೀ ಮನವನ್ನು ನೀನಿದನು ಒಪ್ಪು
ಹೀರ್-ರಾಂಝಾ ಲೈಲಾ-ಮಜನೂ ಕತೆಗಳೆಲ್ಲಾ ನಮ್ಮೀ ಕತೆಗಿಂತ ಭಿನ್ನವೆಂದರದು ತಪ್ಪು!

ಪ್ರೀತಿಸುವ ಹೃದಯಗಳೆಂದೂ ಪ್ರೀತಿಯ ಅರಿಕೆ ಮಾಡಿಕೊಳ್ಳುವುದಿಲ್ಲ
ತಮ್ಮ ಮಿಡಿತಗಳನ್ನು ಇತರರಿಗೆ ಎಂದಿಗೂ ಕೇಳಿಸಗೊಡುವುದೂ ಇಲ್ಲ
ತನ್ನ ಬಾಯಿಯಿಂದಲೇ ತನ್ನ ಪ್ರೀತಿಯ ಅರಿಕೆ ಮಾಡಿಕೊಳ್ಳುವುದರಲ್ಲಿ ಸ್ವಾರಸ್ಯವೂ ಇಲ್ಲ!

(ಇಶಾರೋಂ ಇಶಾರೋಂ ಮೆ ದಿಲ್ ಲೇನೇವಾಲೇ ..)


ಹೃದಯವೇನು ಮಾಡೀತು?

18 ಮೇ 14

(ಜೂಲಿ ಚಿತ್ರದ ಗೀತೆಯ ಭಾವಾನುವಾದದ ಪ್ರಯತ್ನ)

ಯಾರಿಗಾದರೂ ಯಾರ ಮೇಲಾದರೂ ಒಲವು 
ಮೂಡಿದರೆ ಹೃದಯದೇನಿಹುದು ತಪ್ಪು
ಯಾರಿಗೆ ಯಾವಾಗ ಯಾರ ಮೇಲೆ ಒಲವು 
ಮೂಡುವುದೋ ಯಾರಿಗೆ ಗೊತ್ತು 

ಈ ಸಮಾಜದ ಕಟ್ಟಳೆಗಳು ಎತ್ತರೆತ್ತರಕ್ಕೆ
ನಿಂತಿರುವ ಅಡ್ಡಗೋಡೆಗಳಂತಿವೆ
ನಿನ್ನ ಹಿಡಿತದಲ್ಲಿ ಏನೂ ಇಲ್ಲ, ಒಲವೇ
ಇಲ್ಲಿ ನನ್ನ ಹಿಡಿತದಲ್ಲೂ ಏನೂ ಇಲ್ಲ

ಪರ್ವತಶ್ರೇಣಿಯ ಮೇಲೆ
ಮೇಘಮಾಲೆಗಳು ಬಾಗುವಂತೆ
ಸಾಗರಮಧ್ಯದಲ್ಲಿ ಅಲೆಗಳು ಮೇಲೇಳುವಂತೆ
ನನ್ನ ಈ ದೃಷ್ಟಿ ಇಲ್ಲಾರದೋ
ಮುಖಾರವಿಂದದ ಮೇಲೆ ನೆಲೆಕಾಣುತ್ತದೆ
ಸಮಾಜದ ಕಟ್ಟಳೆಗಳು ನನ್ನ ಈ
ದೃಷ್ಟಿಯನ್ನು ಅದೆಲ್ಲಿ ತಡೆದು ನಿಲ್ಲಿಸುತ್ತದೆ
ನಿನ್ನ ಹಿಡಿತದಲ್ಲಿ ಏನೂ ಇಲ್ಲ, ಒಲವೇ
ಇಲ್ಲಿ ನನ್ನ ಹಿಡಿತದಲ್ಲೂ ಏನೂ ಇಲ್ಲ

ಬಾ ನಿನ್ನ ನೆನಪಲ್ಲಿ ನಾನು
ಎಲ್ಲರನ್ನೂ ಮರೆತುಬಿಡುವೆ
ಜಗವನ್ನು ನಾನು ನಿನ್ನ ಸುಂದರ
ಚಿತ್ರವನ್ನಾಗಿಸಿಬಿಡುವೆ
ಸಾಧ್ಯವಿದ್ದಿದ್ದರೆ ನನ್ನೀ ಹೃದಯವನ್ನೇ
ತೆರೆದು ತೋರಿಸಿಬಿಡುತ್ತಿದ್ದೆ
ರಕ್ತದೊಂದಿಗೆ ನನ್ನ ನರನಾಡಿಗಳಲ್ಲಿ
ನಿನ್ನದೇ ಒಲವಿನ ಹರಿವೂ ಇದೆ
ನಿನ್ನ ಹಿಡಿತದಲ್ಲಿ ಏನೂ ಇಲ್ಲ, ಒಲವೇ
ಇಲ್ಲಿ ನನ್ನ ಹಿಡಿತದಲ್ಲೂ ಏನೂ ಇಲ್ಲ!


ನಿನ್ನಿಂದ ದೂರವಾದರೆ ನಾನು!

10 ಮೇ 14

(ಒಂದು ಹಳೆಯ ಹಿಂದೀ ಚಿತ್ರಗೀತೆಯ ಭಾವಾನುವಾದದ ಯತ್ನ!)

ನಿನ್ನಿಂದ ದೂರವಾದರೆ ನಾನು
ಅಳುತ್ತಲೇ ಪ್ರಾಣ ಬಿಟ್ಟೇನು
ಅಳುತ್ತಲೇ ಪ್ರಾಣ ಬಿಟ್ಟೇನು

ಬಹಳ ಕೆಟ್ಟದಿದೆ ನೋಡು
ಹೃದಯವನಳಿಸಿ ನಗುವ ಈ ಲೋಕ
ನಾವೆಯೊಂದಕ್ಕೆ ಇಹುದಿಲ್ಲಿ
ದಡವನ್ನು ಸೇರುವ ತವಕ
ತಡೆಯದಿರಲಿ ಯಾರೂ ಇದನ್ನು
ತಡೆಯದಿರಲಿ ಯಾರೂ ಇದನ್ನು
ನಿನ್ನಿಂದ ದೂರವಾದರೆ ನಾನು
ಅಳುತ್ತಲೇ ಪ್ರಾಣ ಬಿಟ್ಟೇನು

ಒಂದಾದೆವಾದರೆ ನಾವೆಂದಿಗೂ
ಅಗಲಲಾರೆವೆಂದೆಣಿಸಿದ್ದೆ ನಾನು
ಒಲವಿನಲೀ ರೀತಿ ವಿಫಲನಾಗುವೆನೆಂದು
ಎಂದೂ ನಿರೀಕ್ಷಿಸಿರಲಿಲ್ಲ ನಾನು
ನನ್ನ ಅದೃಷ್ಟವೇ ಮೋಸ ಮಾಡಿದೆಯೆನ್ನು
ನನ್ನ ಅದೃಷ್ಟವೇ ಮೋಸ ಮಾಡಿದೆಯೆನ್ನು
ನಿನ್ನಿಂದ ದೂರವಾದರೆ ನಾನು
ಅಳುತ್ತಲೇ ಪ್ರಾಣ ಬಿಟ್ಟೇನು

ಆಡಿದ ಮಾತನೆಂದೂ ಮರೆಯದಂತೆ
ಆಣೆಗಳನು ಎಂದೂ ಮುರಿಯದಂತೆ
ನಿರ್ಧರಿಸಿಯಾಗಿದೆ ಇಂದು ನಾವು
ನಿಲ್ಲಿಸದಿರಲು ಭೇಟಿ ಆಗುವುದನ್ನು
ತಡೆಯುವವರು ತಡೆಯಲೊಮ್ಮೆ ನಮ್ಮನ್ನು
ತಡೆಯುವವರು ತಡೆಯಲೊಮ್ಮೆ ನಮ್ಮನ್ನು
ನಿನ್ನಿಂದ ದೂರವಾದರೆ ನಾನು
ಅಳುತ್ತಲೇ ಪ್ರಾಣ ಬಿಟ್ಟೇನು


ಮಂದಿರವೇಕೆ ಬೇಕು?

02 ಮಾರ್ಚ್ 14

 

ರವೀಂದ್ರನಾಥ ಟಾಗೋರರ ಮಾತುಗಳಿರಬೇಕು ಇವು (ಖಾತ್ರಿ ಇಲ್ಲ).
ಎಲ್ಲೋ ಓದಿದೆ. ಕನ್ನಡಕ್ಕೆ ಭಾವಾನುವಾದ ಮಾಡಲು ಯತ್ನಿಸಿದ್ದೇನೆ.
********************************************

ಮಂದಿರಗಳಲ್ಲಿ ದೇವರ ಪಾದಗಳಿಗೆ ಹೂವುಗಳನ್ನು ಸಮರ್ಪಿಸದಿದ್ದರೂ ಪರವಾಗಿಲ್ಲ
ನಮ್ಮ ಮನೆ-ಮನಗಳಲ್ಲಿ ಪ್ರೀತಿಯ ಸುಗಂಧವು ಹರಡಿರುವಂತೆ ನೋಡಿಕೊಳ್ಳೋಣ

ಮಂದಿರಗಳಲ್ಲಿ ಇರುವ ಮೂರ್ತಿಗಳ ಮುಂದೆ ದೀಪಗಳನ್ನು ಹಚ್ಚದಿದ್ದರೂ ಪರವಾಗಿಲ್ಲ
ನಮ್ಮ ಹೃದಯಗಳೊಳಗಿರುವ ಪಾಪದ ಕತ್ತಲೆಯನ್ನು ಮೊದಲು ಹೋಗಲಾಡಿಸೋಣ

ಮಂದಿರಗಳಲ್ಲಿ ಇರುವ ದೇವರ ಮೂರ್ತಿಗಳಿಗೆ ತಲೆಬಾಗಿ ನಮಿಸದಿದ್ದರೂ ಪರವಾಗಿಲ್ಲ
ನಮ್ಮವರ ಮುಂದೆ ಮಾನವೀಯತೆಯಿಂದ ತಲೆಬಾಗುವುದನ್ನೆಂದೂ ಮರೆಯದಿರೋಣ

ಮಂದಿರಗಳಲ್ಲಿ ಮೂರ್ತಿಗಳ ಮುಂದೆ ಮಂಡಿಯೂರಿ ಪ್ರಾರ್ಥಿಸದೇ ಇದ್ದರೂ ಪರವಾಗಿಲ್ಲ
ಕಷ್ಟದಲ್ಲಿರುವವರನ್ನು ಮೇಲೆತ್ತಲಿಕ್ಕಾಗಿ ಬಗ್ಗುವುದನ್ನು ನಾವೆಲ್ಲಾ ಮೊದಲು ಆರಂಭಿಸೋಣ

ನಮ್ಮ ಪಾಪಕರ್ಮಗಳಿಗಾಗಿ ದೇವರ ಮುಂದೆ ನಿಂತು ಕ್ಷಮೆಯಾಚಿಸದಿದ್ದರೂ ಪರವಾಗಿಲ್ಲ
ತಪ್ಪುಗಳಿಗೆ ಯಾಚನಾಭಾವದೊಂದಿಗೆ ಕ್ಷಮೆಯಾಚಿಸುತ್ತಿರುವವರನ್ನು ಸದಾ ಕ್ಷಮಿಸೋಣ