ಕಥೆ: ವ್ಯಥೆ!

06 ಆಗಸ್ಟ್ 14

ಇಂದು ಅಪರಾಹ್ನ ಅವಳು ಮತ್ತೆ ಬಂದಿದ್ದಳು.

ಒಂದರ್ಧ ಘಂಟೆ ಮಾತನಾಡಿ ಮರಳಿದಳು.

ಹೋಗುವ ಮೊದಲು ಎಂದಿನಂತೆ ನನ್ನಿಂದ ಆಕೆ ಏನನ್ನು ಪಡೆಯಲು ಬಯಸಿ ಬಂದಿದ್ದಳೋ ಅದನ್ನು ನನ್ನಿಂದ ಪಡೆದಿದ್ದಳು.

ಅದನ್ನು ಆಕೆಗೆ ನಾನೇಕೆ ನೀಡುತಿದ್ದೇನೆ ಅನ್ನುವ ಅರಿವು ನನಗಿಲ್ಲ.

*****

ಸುಮಾರು ಎರಡೂವರೆ ತಿಂಗಳ ಹಿಂದೆ ಹಠಾತ್ ಇಲ್ಲೇ ಸಂಭಾಷಣೆಗೆ ಸಿಕ್ಕಿದವಳು ಮನದ ನೋವನ್ನು ತೋಡಿಕೊಂಡಿದ್ದಳು.

“ಸಾರ್ ನಾನು ಒಂದ ಮಾತು ಹೇಳಲಾ?”

“ಸರ್ ಬೇಡ, ಒಂದೇಕೆ ನೂರು ಹೇಳು. ಏನದು?”

“ನನ್ನನ್ನು ಮದುವೆ ಆಗಬೇಕಾಗಿದ್ದ ನನ್ನ ಪ್ರಿಯಕರ ಓರ್ವರಿಂದ ಸಾಲ ಪಡಿದಿದ್ದ. ಅದಕ್ಕೆ ನಾನು ಜಾಮೀನು ಹಾಕಿದ್ದೆ. ನಾಲ್ಕಾರು ತಿಂಗಳು ನಿಯತ್ತಿನಿಂದ ಮರುಪಾವತಿ ಮಾಡಿದ್ದ ಆತ, ಒಂದು ದಿನ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ. ಆ ಸಾಲವನ್ನು ಮರುಪಾವತಿಸುವ ಜವಾಬ್ದಾರಿ ನನ್ನ ಮೇಲೆ ಬಿತ್ತು. ಇನ್ನೂ ಉದ್ಯೋಗ ಅರಸುತ್ತಿರುವ ನಾನು, ಎರಡೂ ಮೂರು ಕಂತು ತುಂಬಿಸಿದ್ದೇನೆ. ಕೈಲಿದ್ದ ಕಾಸೆಲ್ಲಾ ಖಾಲಿಯಾಗಿದೆ. ನನ್ನ ಅಪ್ಪ ಕೊಡುವ ಕಾಸು ನನ್ನ ಖರ್ಚಿಗೆ ಸಾಲುತ್ತದೆ ಅಷ್ಟೇ. ಏನು ಮಾಡಲಿ? ಯಾರಲ್ಲಿ ಹೇಳಿಕೊಳ್ಳಲಿ? ಅಪ್ಪ ಅಮ್ಮನಿಗೆ ಗೊತ್ತಾದರೆ ಬಡಿದು ಸಾಯಿಸಿಯಾರು ಅನ್ನುವ ಭಯ ನನಗೆ”

“ಎಷ್ಟು ಕಂತು ತುಂಬಲಿದೆ ಇನ್ನು? ಕಂತಿನ ಬಾಬ್ತು ಎಷ್ಟು?”

“ಇನ್ನು ಏಳು ಕಂತುಗಳು ಬಾಕಿ ಇವೆ. ಕಂತಿನ ಮೊತ್ತ ರೂ. .. …..”

“ಸರಿ ನಾಳೆ ಬಂದು ಈ ಬಾರಿಯ ಕಂತಿನ ಬಾಬ್ತನ್ನು ನನ್ನಿಂದ ಪಡೆದುಕೊಂಡು ಹೋಗು”

“ಏನ್ ಸರ್… ನಿಮ್ಮಿಂದಾನಾ…? ಹೇಗೆ? ಯಾಕೆ?”

“ಯಾಕೆ ಅನ್ನುವುದು ನನಗೂ ಗೊತ್ತಿಲ್ಲ. ನೀನು ಇಂದು ಹಠಾತ್ ನನ್ನಲ್ಲಿ ನಿನ್ನ ಕತೆ ವ್ಯಥೆ ಹೇಳಿಕೊಂಡುದರ ಹಿಂದೆ ಏನೋ ಕಾರಣವಿದೆ. ಅದು ನಮ್ಮೀರ್ವರಿಗೂ ಗೊತ್ತಿಲ್ಲ ಅಷ್ಟೇ. ಆದರೆ, ಆ ದೇವರಿಗೆ ಮಾತ್ರ ಗೊತ್ತಿದೆ. ನಾನು ನಿನಗೆ ಸಹಾಯ ಮಾಡ್ತಾ ಇದ್ದೇನೆ. ಅದು ಸಾಲ ರೂಪವಾಗಿ. ನೀನು ನೌಕರಿಗೆ ಸೇರಿದ ಮೇಲೆ ಹಿಂದಿರುಗಿಸು. ಮೋಸ ಮಾಡಬೇಡ, ಅಷ್ಟೇ”.

“ಸರಿ… ನನ್ನ ಪಾಲಿನ ದೇವರು ನೀವು”

“ದೇವರು ನಾನಲ್ಲ. ದೇವರು ತಾನಾಗಿ ಬರುವುದೂ ಇಲ್ಲ. ಯಾರನ್ನಾದರೂ ಕಳಿಸುತ್ತಾನೆ. ಬಹುಶಃ ಈಗ ನನ್ನನ್ನು ಕಳಿಸಿದ್ದಾನೆ. ಆದರೆ ನನಗೆ ಮೋಸ ಮಾಡಬೇಡ. ನಿನ್ನ ಮೊಬೈಲ್ ನಂಬರ್ ಬದಲಾಯಿಸಬೇಡ. ನಿನ್ನನ್ನು ತಲುಪಲು ನನಗಿರುವುದು ಅದೊಂದೇ ಮಾರ್ಗ”.

“ಸರಿ ಸಾರ್… ಎಂದಿಗೂ ಬದಲಾಯಿಸೋಲ್ಲ. ಬದಲಾಯಿಸುವ ಮೊದಲು ನಿಮಗೆ ತಿಳಿಸ್ತೇನೆ”

*****

ಇಂದು ಮೂರನೇ ಕಂತಿನ ಬಾಬ್ತು ನೀಡಿ ಕಳಿಸಿದೆ.

ಬಹುಶಃ ಮುಂದಿನ ನಾಲ್ಕು ಕಂತುಗಳನ್ನೂ ತುಂಬಲು ಸಹಾಯ ಮಾಡಿಯೇನು.

*****

“ಯಾಕೆ?” ಎಂದು ನನ್ನನ್ನು ನಾನು ಅದೆಷ್ಟೇ ಕೇಳಿಕೊಂಡರೂ ಉತ್ತರವಿಲ್ಲ.

ಬಹುಶಃ ನಮ್ಮ ಕೆಲವು ಪ್ರಶ್ನೆಗಳಿಗೆ ಉತ್ತರವೇ ಸಿಗುವುದಿಲ್ಲ.

“ಅವಳ ಪಾಲಿಗೆ ನಾನ್ಯಾರು?”

ಎಂದು ಯೋಚಿಸುವಾಗ “ನನ್ನ ಪಾಲಿಗೆ ನಾನ್ಯಾರು?” ಅನ್ನುವ ಪ್ರಶ್ನೆ ಎದ್ದಿತು ಈ ಮನದಲ್ಲಿ.

ಆಕೆ ಯೋಚಿಸಿದವನು (ದೇವರು) ನಾನಲ್ಲ.

ನಾನು ಯೋಚಿಸಿದವನೂ ನಾನಲ್ಲ.

ಹಾಗಾದರೆ ನಾನ್ಯಾರು?

*****
ಇನ್ನೂ ಇಪ್ಪತ್ತು ತುಂಬಿರದ ಹೆಣ್ಣುಮಗಳು.

ಸಾಲಗಾರರ ಕೈಯಲ್ಲಿ ಆಕೆ ಸಿಲುಕಿಕೊಂಡರೆ ಆಕೆಯ ಪರಿಸ್ಥಿತಿ ಏನಾದೀತು, ಅನ್ನುವ ಒಂದೇ ಒಂದು ಯೋಚನೆ ನನ್ನನ್ನು ಆಕೆಗೆ ಸಹಾಯ ಮಾಡುವಂತೆ ಪ್ರೇರೇಪಿಸಿತು. ಅಷ್ಟೇ.
*****

(“ಕತೆ: ವ್ಯಥೆ”ಗೆ ಪ್ರತಿಕ್ರಿಯೆ ನೀಡಬಹುದು. ಆದರೆ ದಯವಿಟ್ಟು ನನಗಲ್ಲ).


ಕರ್ತವ್ಯ!

21 ಸೆಪ್ಟೆಂ 13

DSC_7731

(ದಿನಾಂಕ ೨೪ ಅಕ್ಟೋಬರ ೨೦೧೩ರ “ತರಂಗ ವಾರಪತ್ರಿಕೆಯಲ್ಲಿ” ಪ್ರಕಟವಾಗಿದೆ)

ಅದೊಂದು ಶನಿವಾರ, ಸಾಯಂಕಾಲದ ಹೊತ್ತು. ಕವಿತಾಳ ಮೊಬೈಲು  ಮತ್ತೆ ಸದ್ದು ಮಾಡುತ್ತಿತ್ತು. ಅರ್ಧ ಘಂಟೆಯಲ್ಲಿ ಇದು ನಾಲ್ಕನೇ ಬಾರಿ. ಒಂದೇ ಸಂಖ್ಯೆಯಿಂದ ಕರೆ ಬರುತ್ತಿದೆ. ಅದು ಒಂದು  ಅಪರಿಚಿತ ಸಂಖ್ಯೆ. ಆಕೆ ಅಪರಿಚಿತ ಸಂಖ್ಯೆಗಳಿಂದ  ಬರುವ ಯಾವ ಕರೆಗಳನ್ನೂ ಸ್ವೀಕರಿಸುವುದಿಲ್ಲ. ಹಾಗಾಗಿ ಸುಮ್ಮನಿದ್ದಾಳೆ.

ಕವಿತಾಳ ಮಗ ಬಂದು ಕೇಳುತ್ತಾನೆ. “ಅಮ್ಮಾ ಯಾರೋ ಗುರುತು ಪರಿಚಯ ಇರುವವರೇ ಇರಬೇಕು. ಒಮ್ಮೆ ಕೇಳಿ ನೋಡು”.

“ಬೇಕಿದ್ದರೆ ನೀನೇ ಕೇಳು” ಎಂದು ಮಗನಿಗೆ ಫೋನ್ ಕೊಡುತ್ತಾಳೆ.

ಆತ ಫೋನ್ ಎತ್ತಿಕೊಂಡು “ಹಲೋ… ಹಲೋ… ಯಾರು ಮಾತಾಡುವುದು? ಯಾರು ಬೇಕಾಗಿತ್ತು?” 

“ಹಲೋ ರಮೇಶಾ… ನಾನು ಕಣೋ, ಲಲಿತಾ… ನಿನ್ನ ಚಿಕ್ಕಮ್ಮ”

“ಏನ್ ಚಿಕ್ಕಮ್ಮಾ? ಇಂದು ನಮ್ಮ ನೆನಪು ಹೇಗಾಯ್ತು ನಿಮಗೆ? ಏನು ವಿಷಯ?”

“ರಮೇಶಾ… ರಮೇಶಾ… “

ಅಳುವ ಸದ್ದು…

“ನಿಮ್ಮ ಅಪ್ಪನಿಗೆ ಹುಷಾರಿಲ್ಲ ಕಣೋ,  ಸೈಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಇದ್ದಾರೆ… ಹೆಚ್ಚು ದಿನ ಬದುಕುವ ಹಾಗೆ ಕಾಣ್ತಿಲ್ಲ… ಅಮ್ಮನಿಗೆ ಹೇಳು… ಇಲ್ಲಿ ಯಾರೂ ಇಲ್ಲ ನಾನೊಬ್ಬಳೇ… ದಯವಿಟ್ಟು ಬನ್ನಿ … ಅಮ್ಮನಿಗೂ ಹೇಳು…ಪ್ಲೀಸ್”

“ಅಮ್ಮಾ, ಅದು ಲಲಿತಾ ಚಿಕ್ಕಮ್ಮ. ಅಪ್ಪ ಸೀರಿಯಸ್ ಆಗಿದ್ದಾರಂತೆ.  ಸೈಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿದ್ದಾರಂತೆ. ಐಸಿಯುನಲ್ಲಿ ಇದ್ದಾರಂತೆ. ಚಿಕ್ಕಮ್ಮ ಒಬ್ಬಳೇ ಇದ್ದಾಳೆ ಆಸ್ಪತ್ರೆಯಲ್ಲಿ. ನಮ್ಮನ್ನು ಬರ್ಲಿಕ್ಕೆ ಹೇಳ್ತಾ ಇದ್ದಾಳೆ”

“ರಮೇಶ್… ನಿನಗೆ ಗೊತ್ತು ನಾನು ಹೋಗೋಲ್ಲಾ ಅಂತ”.

“ದಟ್ಸ್ ರೈಟ್ ಅಮ್ಮಾ… ಬಟ್…”

“ಬಟ್ … ಗಿಟ್ ಏನೂ ಇಲ್ಲ… ನನ್ನಿಂದ ಆಗೋಲ್ಲ ಕಣೋ… ನಿನ್ನ ಅಪ್ಪ ಹಾಗೂ ನಿನ್ನ ಚಿಕ್ಕಮ್ಮನಿಂದ ನಾನು ಅನುಭವಿಸಿರೋದು ಎಷ್ಟು ಅನ್ನುವುದು ನಿನಗೂ ಗೊತ್ತು ತಾನೇ? ನನ್ನೊಂದಿಗೆ ನೀನು ಮತ್ತು ನಿನ್ನ ತಂಗಿಯೂ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದೀರಿ… ನೋವು ತಿಂದಿದ್ದೀರಿ. ಅವುಗಳನ್ನೆಲ್ಲಾ ಮರೆಯೋದು ಹೇಗೆ? ಈಗ ನಾನ್ಯಾಕೆ ಬೇಕಾಯ್ತು ಅವಳಿಗೆ? ಇಲ್ಲ ಕಣೋ, ನಾನು ಹೋಗೋದಿಲ್ಲ… ನಿನಗೆ ಹೋಗುವ ಮನಸ್ಸಿದ್ದರೆ ನಾಳೆ ಬೆಳಿಗ್ಗೆ ಹೋಗಿ ನೋಡಿಕೊಂಡು ಬಾ. ಈಗ ಘಂಟೆ ಆರೂವರೆ. ಕಮ್ಮನಹಳ್ಳಿಯಿಂದ ಕೋರಮಂಗಲಕ್ಕೆ ಹೋಗುವಷ್ಟರಲ್ಲಿ ಘಂಟೆ ಎಂಟಾಗುತ್ತದೆ. ಮತ್ತೆ ರಾತ್ರಿ ಹೊತ್ತು ವಾಪಸು ಬರುವುದೂ ಕಷ್ಟ. ಬೆಳಿಗ್ಗೆ ಹೋಗು”

“ಅಮ್ಮಾ ನಾಳೆ ಹೇಗೂ ಸಂಡೇ . ನಿನಗೂ ರಜೆ ನಮಗೂ ರಜೆ. ಮೂವರೂ ಹೋಗಿ ನೋಡಿಕೊಂಡು ಬರೋಣ…”

“ಇಲ್ಲ ರಮೇಶ್ ನಿನಗೆ ಹೋಗುವ ಮನಸ್ಸಿದ್ದರೆ ಹೋಗಿ ಬಾ… ಇನ್ನು ಈ ವಿಷಯದಲ್ಲಿ ಮಾತು ಮುಂದುವರಿಸುವುದು ಬೇಡ”

“ಸರಿ… ಆಯ್ತಮ್ಮ… ನಿನ್ನಿಷ್ಟ”

ಮಗನೇನೋ ಸುಮ್ಮನಾದ.

ಆದರೆ ಕವಿತಾಳ ಮನದಲ್ಲಿ ಜನಾರ್ದನನ ಚಿತ್ರಗಳು ಸುಳಿಯತೊಡಗಿದವು. ತನ್ನ ಗತಜೀವನದ ದಿನಗಳು ಒಂದೊಂದಾಗಿ ಮೇಲೆ ಮೇಲೆ ಬಂದು ಕಾಡತೊಡಗಿದವು.

ಆಗಿನ್ನೂ ಕಾಲೇಜು ಮುಗಿಸಿದ್ದ ಕವಿತಾ ಒಂದು ಖಾಸಗಿ ಕಂಪನಿಯಲ್ಲಿ ರಿಸೆಪ್ಶನಿಸ್ಟ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಳು. ತಿಂಗಳಿಗೆ ಎಂಟುನೂರ ಐವತ್ತು ರೂಪಾಯಿ ಸಂಬಳ. ಜನಾರ್ದನನ ಪರಿಚಯ ಅಲ್ಲೇ ಆಗಿದ್ದು. ಜನಾರ್ದನ  ಆ ಕಂಪನಿಯ ಕ್ಯಾಂಟೀನು ನಡೆಸುತ್ತಿದ್ದ. ಆತ ಇಪ್ಪತ್ತೈದರ ಯುವಕ. ಈಕೆ ಸುಂದರ ಮೈಕಟ್ಟಿನ ಯುವಕಿ. ಅವರ ಪರಿಚಯ ಸ್ನೇಹಕ್ಕೆ ತಿರುಗಿತ್ತು. ಕ್ಯಾಂತೀನಿನಲ್ಲಿ ಆಕೆಗೆ ಉಚಿತವಾಗಿ ಊಟ ತಿಂಡಿ ದೊರೆಯುತ್ತಿತ್ತು.  ದಿನವೂ  ಮನೆಯಿಂದ ಬರುವಾಗ, ಆತನೊಂದಿಗೆ ಆತನ ಬೈಕಿನಲ್ಲಿ ಬರುತ್ತಿದ್ದಳು. ಆತನಿಗೆ ಆ ಕಂಪನಿಯಲ್ಲಿ ಇನ್ನೂ ಎರಡು ಕಂಪನಿಗಳಲ್ಲಿ ಕ್ಯಾಂಟೀನುಗಳಿದ್ದವು. ಹಾಗಾಗಿ ಸಂಜೆ ಆತ ಸಿಗುತ್ತಿರಲಿಲ್ಲ. ಒಂದೂವರೆ ವರುಷಗಳ ನಂತರ ಆಕೆಯ ಕಂಪನಿಯಲ್ಲಿನ ಕ್ಯಾಂಟೀನಿನ ಕಂಟ್ರಾಕ್ಟ್ ಮುಗಿದಿತ್ತು. ಇನ್ನು ತಾನು ಇಲ್ಲಿಗೆ ಬರಲಾಗುವುದಿಲ್ಲ ಎಂದು ಅರಿತ ಜನಾರ್ದನ, ಕವಿತಾಳಿಗೆ, ತನ್ನ ಕ್ಯಾಟರಿಂಗ್  ಕಂಪನಿಯಲ್ಲೇ ಕೆಲಸ ಕೊಡಿಸುವುದಾಗಿ ಹೇಳಿದ. ಅವರ  ಸ್ನೇಹ ಪ್ರೀತಿಯಾಗಿ ಮಾರ್ಪಾಟು ಆಗಿತ್ತು ಎನ್ನುವ ಅರಿವು ಇಬ್ಬರಿಗೂ ಇತ್ತು. ಒಬ್ಬರನ್ನೊಬ್ಬರು ಬಿಟ್ಟು ಇರುವುದು ಸಾಧ್ಯವಿರಲಿಲ್ಲ. ಹಾಗಾಗಿ , ಕವಿತಾ ಆತನ ಮಾತಿಗೆ ಒಪ್ಪಿಕೊಂಡು, ಈ ಕೆಲಸಕ್ಕೆ ರಾಜೀನಾಮೆ ನೀಡಿದಳು. ಆತನ ಕ್ಯಾಟರಿಂಗ್ ಕಂಪನಿಯಲ್ಲಿ ಮಾರ್ಕೆಟಿಂಗ್ ಮಾಡಲು ಸೇರಿಕೊಂಡಳು. ಈರ್ವರ ದುಡಿಮೆಯಿಂದ, ಅವರ ಕಂಪನಿ ಆರು ತಿಂಗಳೊಳಗೆ, ದಿನಕ್ಕೆ ಐದು ಸಾವಿರ ಊಟ ತಯಾರಿಸುವಷ್ಟು ದೊಡ್ಡದಾಗಿ ಬೆಳೆಯಿತು.

ಒಂದು ದಿನ ಕವಿತಾ ತನ್ನ ವಿಧವೆ ಅಮ್ಮನ ಅನುಮತಿ ಪಡೆದು ಸಮೀಪದ ದೇವಸ್ಥಾನದಲ್ಲಿ ಜನಾರ್ದನನೊಂದಿಗೆ ಸರಳರೀತಿಯಲ್ಲಿ ಹಸೆಮಣೆ ಏರಿದಳು. ಹೊಸ ಸಂಸಾರ ಚೆನ್ನಾಗಿಯೇ ಸಾಗುತ್ತಿತ್ತು. ಕವಿತಾ ಕೆಲಸ ತೊರೆದು ಮನೆಯಲ್ಲೇ ಇರತೊಡಗಿದ್ದಳು. ಮೂರು ವರುಷಗಳಲ್ಲಿ ಎರಡು ಮಕ್ಕಳಾದವು. ರಮೇಶ್ ಮತ್ತು ಗೀತಾ.

ಆದರೆ, ಅದೊಂದು ದಿನ ಆ ಸುಂದರ ಸಂಸಾರದಲ್ಲಿ ಬಿರುಗಾಳಿ ಎದ್ದು ಬಿಟ್ಟಿತು.

ಹೃದಯಾಘಾತದಿಂದ ಕವಿತಾಳ ಅಮ್ಮ ಅಸುನೀಗಿದಾಗ, ಅದುವರೆಗೆ ಅಮ್ಮನೊಂದಿಗೆ ಇದ್ದ, ತಂಗಿ ಲಲಿತಾ ಒಂಟಿಯಾದಳು. ಆಕೆ ಒಬ್ಬಳೇ ಇರುವುದು ಬೇಡವೆಂದು ಕವಿತಾ ಆಕೆಯನ್ನು ತನ್ನ ಮನೆಗೆ ಕರೆದುಕೊಂಡು  ಬಂದಳು. ಜನಾರ್ದನ ಅದಕ್ಕೆ ವಿರೋಧ ವ್ಯಕ್ತಪಡಿಸಲಿಲ್ಲ.  ಲಲಿತಾ ಒಂದು ಖಾಸಗಿ ಕಂಪನಿಯಲ್ಲಿ ನೌಕರಿಯಲ್ಲಿದ್ದಳು. ಜನಾರ್ದನ ಕೆಲಸಕ್ಕೆ ಹೋಗುವಾಗ ಲಲಿತಾಳನ್ನು ಆಕೆಯ ಕಂಪನಿಯವರೆಗೆ ಬೈಕಿನ ಮೇಲೆ ಕೂರಿಸಿಕೊಂಡು ಕರೆದೊಯ್ಯುತ್ತಿದ್ದ.  ಮೂರು ನಾಲ್ಕು ತಿಂಗಳು ಹೀಗೆಯೇ ಸಾಗಿತ್ತು.

ಒಂದು ರಾತ್ರಿ ಹನ್ನೆರಡರ ಸಮಯ. ಮಗು ಗೀತಾ ಅಳುತ್ತಿದ್ದಳಾದ್ದರಿಂದ ಎಚ್ಚೆತ್ತ ಕವಿತಾಳಿಗೆ ಮಂಚದ ಮೇಲೆ ಜನಾರ್ದನ ಕಾಣಿಸಲಿಲ್ಲ. ಮಗುವಿಗೆ ಹಾಲುಣಿಸಿ, ಮಲಗಿಸಿದ ಕವಿತಾ,  ಹೊರಗೆ ಬಂದು ನೋಡುತ್ತಾಳೆ. ಜನಾರ್ದನ ಎಲ್ಲೂ ಕಾಣಿಸುವುದಿಲ್ಲ.  ಎಲ್ಲಾ ಕಡೆ ಹುಡುಕಿದ ಆಕೆ, ಆತನ ಮೊಬೈಲಿಗೆ ಕರೆ ಮಾಡಿದಳು. ಅವರ ಕೋಣೆಯಲ್ಲೇ ಮೊಬೈಲ್ ರಿಂಗ್ ಆಗುವ ಸದ್ದು ಕೇಳಿಸಿತು. ಮೊಬೈಲ್ ಅವರ ಕೋಣೆಯಲ್ಲೇ ಇತ್ತು. ಹಾಗಾದರೆ ಹೊರಗೆಲ್ಲೂ ಹೋಗಿಲ್ಲ. ಹುಡುಕುತ್ತಾ ಬಂದವಳಿಗೆ ಯಾಕೋ ಅನುಮಾನ ಬಂತು. ತಂಗಿಯ ಕೋಣೆಯ ಒಳಗೆ ಬೆಳಕು ಇರುವಂತೆ ಅನಿಸಿತು. ಬಾಗಿಲಿನ ಕೀಲಿಕೈಯ ರಂಧ್ರದಿಂದ ಇಣುಕಿ ನೋಡಿದರೆ ಒಳಗೆ ಮಂಚದ ಮೇಲೆ ಲಲಿತಾ ಮತ್ತು ಜನಾರ್ದನ. ಕವಿತಾಳಿಗೆ ಅಲ್ಲೇ ಕಣ್ಣುಕತ್ತಲೆ ಕವಿದಂತಾಯ್ತು. ರಾತ್ರಿ ಹೊತ್ತು ಆದ್ದರಿಂದ, ಏನೂ ಹೇಳದೇ ನಿಧಾನವಾಗಿ ತನ್ನ ಕೋಣೆಗೆ ಮರಳಿದಳು. ಏನು ಮಾಡಿದರೂ ನಿದ್ದೆ ಬರಲಿಲ್ಲ. ಒಂದು ಒಂದೂವರೆ ಗಂಟೆಯ ಬಳಿಕ ಜನಾರ್ದನ ಬಂದು ಮಲಗಿದ.

ಮಾರನೆಯ ರಾತ್ರಿ ಕವಿತಾ ನಿದ್ದೆ ಬಂದಂತೆ ನಟಿಸಿದಳು. ಹಿಂದಿನ ದಿನದ ಕತೆ ಇಂದೂ ನಡೆಯಿತು. ನಾಲ್ಕಾರು ದಿನಗಳವರೆಗೆ ಸುಮ್ಮನಿದ್ದ ಕವಿತಾ ಒಂದು ದಿನ ಬಾಯಿಬಿಡಬೇಕಾಯ್ತು.

ರಾತ್ರಿ ಎಲ್ಲ ಸೇರಿ ಊಟ ಮುಗಿಸಿದ ಮೇಲೆ, ಕೇಳಿದಳು. ನಮ್ಮ ಮನೆಯಲ್ಲಿ ಏನು ನಡೆಯುತ್ತಿದೆ? ಇದರ ಅರ್ಥ ಏನು? ಇಲ್ಲಿ ನನ್ನ ಸ್ಥಾನ ಏನು? ಜನಾರ್ದನ ಲಲಿತಾಳ ಮುಖ ನೋಡಿದ. ಲಲಿತಾಳೇ ಉದ್ವೇಗಗೊಳ್ಳದೇ ನಿಧಾನವಾಗಿ ಉತ್ತರಿಸಿದಳು

“ಅಕ್ಕಾ… ಸುಮ್ಮನೇ ಇದನ್ನೆಲ್ಲಾ ದೊಡ್ಡ ವಿಷಯ ಮಾಡಿ ಎಲ್ಲರಿಗೂ ಗೊತ್ತಾಗುವಂತೆ ಮಾಡಬೇಡ. ನಿನಗೇನೂ ಕೊರತೆ ಇಲ್ಲ ಇಲ್ಲಿ. ನಾವಿಬ್ಬರೂ ದುಡಿದು ತರುತ್ತೇವೆ. ನೀನು ಮನೆ ಮಕ್ಕಳನ್ನು ನೋಡೀಕೊಂಡಿರು. ಎಲ್ಲರೂ ನೆಮ್ಮದಿಯಿಂದ ಇರೋಣ”.

“ಲಲಿತಾ… ನಾನು ನಿನಗೆ ಮಾಡಿದ  ಉಪಕಾರಕ್ಕೆ ಚೆನ್ನಾಗಿ ಪಾಠ ಕಲಿಸುತ್ತಾ ಇದ್ದೀಯಮ್ಮ ನನಗೆ. ಇದು ನನಗೆ ಬೇಕಾಗಿತ್ತಾ? ನಿನ್ನನ್ನು ತನ್ನ ಮನೆಗೆ ಕರೆದುಕೊಂಡುಹೋಗುತ್ತೇನೆ ಅಂದಿದ್ದ ನಮ್ಮ ಸೋದರಮಾವನೊಂದಿಗೆ ಅಂದೇ ಕಳಿಸಿಕೊಡಬೇಕಿತ್ತು, ಕೇರಳಕ್ಕೆ. ನಿನ್ನ ಬಾಳೂ ಚೆನ್ನಾಗಿರಲಿ ಎಂದು ಜೊತೆಗೆ ಇರು ಅಂದರೆ ನನ್ನ ಮನೆಗೇ ಕನ್ನ ಹಾಕಿದ್ದೀಯಲ್ಲಮ್ಮಾ…ಇದು ನನ್ನಿಂದ ಆಗದ ಮಾತು. ನೀನು ಎಲ್ಲಾದರೂ ಬಾಡಿಗೆಮನೆ ಮಾಡಿಕೊಂಡು ಇದ್ದುಬಿಡು. ಇಲ್ಲಿ ಇರುವುದು ಬೇಡ, ನನ್ನಿಂದ ಇದನ್ನೆಲ್ಲಾ ಸಹಿಸಿಕೊಂಡು ಇರಲಾಗದು”.

ಜನಾರ್ದನ ನಡುವೆ ಬಾಯಿಹಾಕಿದ “ಇಲ್ಲ ಆಕೆ ಎಲ್ಲಿಗೂ ಹೋಗುವುದಿಲ್ಲ. ಆಕೆ ಇಲ್ಲೇ ಇರಬೇಕು. ನಾವು ಹಿಂದಿನದನೆಲ್ಲಾ ಮರೆತು ಬಾಳೋಣ. ಇನ್ನು ಮುಂದೆ ಹಿಂದೆ ನಡೆದಂತೆ ಏನೂ ನಡೆಯದು ನನ್ನ ಮತ್ತು ಲಲಿತಾಳ ನಡುವೆ. ನಂಬು ನನ್ನನ್ನು”

ಜಗಳ ಆಡಿದರೆ ಪರಿಣಾಮ ಏನಾಗಬಹುದು ಅನ್ನುವುದರ ಅರಿವು ಇಲ್ಲ. ಪುಟ್ಟ ಪುಟ್ಟ ಮಕ್ಕಳಿಬ್ಬರು ಇದ್ದಾರೆ. ಜನಾರ್ದನನ ವಿರೋಧ ಕಟ್ಟಿಕೊಂಡರೆ ತನಗೆ ಗತಿ ಯಾರು? ಬೇರೆ ಹೋಗಬೇಕಾದೀತು.  ಈ ಪುಟ್ಟ  ಮಕ್ಕಳನ್ನು ಕಟ್ಟಿಕೊಂಡು ಒಬ್ಬಳೇ ಜೀವನ ಸಾಗಿಸುವುದು ಎಷ್ಟು ಕಷ್ಟ ಅನ್ನುವ ಅರಿವು ಕವಿತಾಳಿಗೂ ಇತ್ತು.  ಹಾಗಾಗಿ ಆತನ ಮಾತಿಗೆ ಒಪ್ಪಿಕೊಳ್ಳದೇ ವಿಧಿ ಇರಲಿಲ್ಲ.

ದಿನ ಕಳೆದಂತೆ ಮನೆಯ ವಾತಾವರಣ ಸುಧಾರಿಸಿದಂತೆ ಕಂಡಿತು. ನಿದ್ದೆಗೆಟ್ಟು ಕಾದು ಕೂತರೂ ಅವರಿಬ್ಬರು ಎಂದೂ ಸಿಕ್ಕಿಬಿದ್ದಿರಲಿಲ್ಲ. ಕವಿತಾಳಿಗೆ ಸಮಾಧಾನವಾಗಿತ್ತು. ಇರಲಿ ಬಿಡು. ಆಕೆ ನನ್ನ ತಂಗಿ. ಈತನೋ ನಾನು ಪ್ರೀತಿ ಮಾಡಿ ವರಿಸಿರುವ ಗಂಡ. ತಪ್ಪುಗಳು ನಡೆದು ಹೋಗಿರಬಹುದು. ಮರೆತು ಮುಂದೆ ಸಾಗೋಣ ಎಂದು ನಿರ್ಧರಿಸಿದಳು.

ಆದರೂ ಪ್ರೀತಿಸಿ ಮದುವೆಯಾದವರು ನಾವು. ಆ ಪ್ರೀತಿ ಎಲ್ಲಿ ಮರೆಯಾಯ್ತು? ಜನಾರ್ದನ ಏಕೆ ಹೀಗೆ ಬದಲಾಗಿಬಿಟ್ಟ? ಅನ್ನುವ ಪ್ರಶ್ನೆಗಳು ಆಕೆಯನ್ನು ಕಾಡದೇ ಇರಲಿಲ್ಲ. ಎಷ್ಟು ಸಲೀಸಾಗಿ ಹೇಳಿಬಿಟ್ಟ, ಹಿಂದಿನದನೆಲ್ಲಾ ಮರೆತುಬಿಡೋಣ, ಅಂತ. ಹಾಗಾದರೆ ಹಿಂದೊಮ್ಮೆ ನಾವಿಬ್ಬರೂ ಪ್ರೀತಿಸಿದ್ದನ್ನೂ ಆತ ಮರೆತುಬಿಟ್ಟನೋ? ಪ್ರೀತಿ ಅಂದರೇನು? ಓರ್ವ ಗಂಡಸು ಏಕಕಾಲದಲ್ಲಿ ಎಷ್ಟು ಹೆಂಗಸರನ್ನು ಪ್ರೀತಿಸಬಲ್ಲ? ಅದೆಲ್ಲಾ ನಿಜಾವ ಪ್ರೀತೀನಾ? ಅಥವಾ ಲೈಂಗಿಕ ಆಸಕ್ತಿಯೋ? ಜನಾರ್ದನನಿಗೆ ತನ್ನ ಲೈಂಗಿಕ ವಾಂಛೆಯನ್ನು ತೀರಿಸಿಕೊಳ್ಳಲು ನನ್ನ ಸಹಕಾರ ಕಡೀಮೆಯಾಗಿತ್ತೇ? ನನ್ನಲ್ಲಿ ಏನು ಕೊರತೆಯಿತ್ತು? ಕವಿತಾಳ ತಲೆಯಲ್ಲಿ ನೂರೆಂಟು ಪ್ರಶ್ನೆಗಳು. ಆದರೂ ಆಕೆಯ ಹೃದಯದಲ್ಲಿ ಜನಾರ್ದನನ ಮೇಲಿನ ಪ್ರೀತಿ ಇನ್ನೂ ಜೀವಂತವಾಗಿತ್ತು. ಆಕೆ ಪ್ರೀತಿಸಿದ್ದು ಆತನೋರ್ವನನ್ನೇ.

ದಿನಗಳು ವಾರಗಳಾಗಿ ತಿಂಗಳುಗಳಾಗಿ ಸಾಗುತ್ತಿದ್ದವು. ಜೀವನ ಮಾಮೂಲಿನಂತೆ ಸಾಗುತ್ತಿತ್ತು. ಅದೊಂದು ಮುಂಜಾನೆ ಲಲಿತಾ ಇದ್ದಕ್ಕಿದ್ದಂತೆ ವಾಂತಿ ಮಾಡುತ್ತಿರುವುದನ್ನು ಕಂಡ ಕವಿತಾ ಗಾಬರಿಯಾದಳು. ಕರೆದು ಕೇಳಿದಳು ಏನಾಗಿದೆ ಅಂತ. ಪಿತ್ತ ಜಾಸ್ತಿ ಆಗಿದೆ ಎಂದು ಸಮಜಾಯಿಷಿ ನೀಡಿದ ಲಲಿತಾ, ಮಿಂದುಟ್ಟು ತಯಾರಾಗಿ ಕೆಲಸಕ್ಕೆ ಹೋಗಿದ್ದಳು. ಮಾರನೇ ದಿನ ಮುಂಜಾನೆ ಲಲಿತಾ ಎದ್ದಿರಲೇ ಇಲ್ಲ. ತಡವಾಗಿ ಎದ್ದವಳು, ತಲೆ ಸುತ್ತಿ ಬರುತ್ತಿದೆ, ವಾಂತಿ ಬರುತ್ತಿದೆ ಎಂದು ಹೇಳಿ ರಜೆ ಹಾಕಿದಳು. ಹೀಗೆಯೇ ನಾಲ್ಕಾರು ದಿನಗಳೂ ಆಕೆ ಅನಾರೋಗ್ಯ ಎಂದು ಹೇಳಿಕೊಂಡಾಗ, ಪರಿಚಯದ ಮಹಿಳಾ ವೈದ್ಯರಿಗೆ ತೋರಿಸಲು ಕವಿತಾಳೇ ಸಲಹೆ ನೀಡಿದಳು. ಜನಾರ್ದನನೊಂದಿಗೆ ವೈದ್ಯರಲ್ಲಿಗೆ ಹೋಗಿ ಬಂದಾಕೆ ಮೌನವಾಗಿದ್ದಳು. ಏನೆಂದು ಹೇಳುತ್ತಿರಲಿಲ್ಲ. ಆಮೇಲೆ ಕವಿತಾಳೇ ಆ ವೈದ್ಯರಿಗೆ ಕರೆಮಾಡಿ ವಿಷಯ ತಿಳಿದುಕೊಳ್ಳಬೇಕಾಯ್ತು. ವಿಷಯ ತಿಳಿದ ಕವಿತಾಳಿಗೆ ಎಲ್ಲಿಲ್ಲದ ಕೋಪ ಬಂದಿತ್ತು. ತಾನು ಹದ್ದಿನ ಕಣ್ಣಿಟ್ಟು ಕಾದಿದ್ದರೂ ಇವರೀರ್ವರೂ ತನಗೆ ಮೋಸಮಾಡಿದರಲ್ಲಾ ಎನ್ನುವ ಬೇಸರ ಮೂಡಿತು. ಇನ್ನು ಇವರೊಂದಿಗೆ ಇರುವುದು ಸಾಧ್ಯವೇ ಇಲ್ಲ ಎಂದು ನಿರ್ಧಸಿದಳು.

ರಾತ್ರಿ ಮತ್ತದೇ ಕತೆ ಶುರು ಆಯ್ತು. ತನ್ನ ಕಣ್ತಪ್ಪಿಸಿ ಅವರಿಬ್ಬರೂ ಹೀಗೆಲ್ಲಾ ಮಾಡುವುದು ಹೇಗೆ ಸಾಧ್ಯವಾಯ್ತು ಎಂದು ತಿಳಿದುಕೊಳ್ಳುವ ಕುತೂಹಲ ಆಕೆಗೆ. ಲಲಿತಾಳೇ ಎಲ್ಲಾ ತಿಳಿಸಿದಳು.

ಜನಾರ್ದನ ಮತ್ತು ಲಲಿತಾ ಕೆಲಸಕ್ಕೆ ಹೋದ ಮೇಲೆ, ಪುಟ್ಟ ಮಕ್ಕಳೊಂದಿಗೆ ಕವಿತಾ ಒಬ್ಬಳೇ ಮನೆಯಲ್ಲಿ ಉಳಿಯುತ್ತಾಳೆ. ಮಕ್ಕಳನ್ನು ಬಿಟ್ಟು  ಆಕೆಗೆ ಸ್ನಾನ ಮಾಡುವುದು ಕಷ್ಟವಾಗುತ್ತಿತ್ತಾದ್ದರಿಂದ, ಕವಿತಾಳೂ ಮುಂಜಾನೆಯೇ, ಎಲ್ಲರಿಗಿಂತ ಮೊದಲೇ ಸ್ನಾನ ಮಾಡುವ ಅಭ್ಯಾಸ ಮಾಡಿಕೊಂಡಿದ್ದಳು. ಆಕೆ ಸ್ನಾನ ಮುಗಿಸಿದ ನಂತರ, ಅವರೀರ್ವರೂ ಸ್ನಾನ ಮಾಡುತ್ತಿದ್ದರು. ಹಾಗಾಗಿ ಕವಿತಾ ಸ್ನಾನಕ್ಕೆ ಹೋದ ಸಮಯವನ್ನು ಅವರೀರ್ವರೂ ತಮ್ಮ ಉಪಯೋಗಕ್ಕೆ ಬಳಸಿಕೊಳ್ಳುತ್ತಾ ಬಂದಿದ್ದರು.

ಏನೋ ಅಚಾತುರ್ಯ ನಡೆದು ಲಲಿತಾ ಗರ್ಭಿಣೀಯಾಗದೇ ಉಳಿದಿದ್ದರೆ, ವಿಷಯ ಹೊರಗೆ ಬರುತ್ತಿರಲೇ ಇಲ್ಲ.

ಎಲ್ಲವನ್ನೂ ಕೇಳಿದ ಕವಿತಾಳಿಗೆ ದುಃಖ ಕೋಪ ಎರಡನ್ನೂ ತಡೆದುಕೊಳ್ಳಲಾಗಲಿಲ್ಲ. ಕೂತಲ್ಲಿಂದ ಎದ್ದವಳೇ, ತಂಗಿಯ ಕೆನ್ನೆಗೆ ಒಂದು ಬಾರಿಸಿದಳು. ಇದರಿಂದ ಕುಪಿತನಾದ ಜನಾರ್ದನ ಕವಿತಾಳ ಕೆನ್ನೆಗೆ ಬಾರಿಸಿದ. “ನಿನಗೆ ಇರಲಿಕ್ಕಾದರೆ ಇರು. ಇಲ್ಲಾಂದ್ರೆ ನಿನ್ನ ದಾರಿ ನೀನು ನೋಡಿಕೋ”  ಅಂತ ಅಂದು ಬಿಟ್ಟ. ಅಲ್ಲಿಗೆ ಎಲ್ಲವೂ ಮುಗಿಯಿತು.

ಮಾರನೇ ದಿನ ಒಂದು ಪೆಟ್ಟಿಗೆಯಲ್ಲಿ ತಮ್ಮ ಬಟ್ಟೆಗಳನ್ನು ತುಂಬಿಸಿಕೊಂಡು, ತನ್ನ ಎರಡು ಚಿಕ್ಕ ಮಕ್ಕಳೊಂದಿಗೆ, ಮನೆಯಿಂದ ಹೊರಟವಳು, ತನ್ನ ಬಾಲ್ಯ ಸ್ನೇಹಿತನಾದ ರವಿರಾಜನ ಸಹಾಯದಿಂದ ಒಂದು ಚಿಕ್ಕ ಮನೆಯನ್ನು ಲೀಸ್ ಮೇಲೆ ಪಡೆದು, ಅಲ್ಲಿ ವಾಸಿಸತೊಡಗಿದಳು. ಮೈಮೇಲಿದ ಚಿನ್ನ ಹಾಗೂ ತನ್ನ ಬ್ಯಾಂಕ್ ಖಾತೆಯಲ್ಲಿ ಜಮಾ ಆಗಿದ್ದ ಒಂದಷ್ಟು ಹಣ ಆಕೆಯ ಸಹಾಯಕ್ಕೆ ಬಂದಿತ್ತು. ಮಕ್ಕಳನ್ನು ಶಿಶು ಕೇಂದ್ರದಲ್ಲಿ ಬಿಟ್ಟು, ಕೆಲಸಕ್ಕೆ ಹೋಗಲು ಆರಂಭಿಸದಳು. ಕ್ಯಾಟರಿಂಗ್ ಕಂಪನಿಗಳಿಗೆ ವ್ಯವಹಾರ ಕುದುರಿಸಿಕೊಟ್ಟು, ಅವರಿಂದ ಕಮಿಷನ್ ಪಡೆಡು ಜೀವನ ಸಾಗಿಸುತ್ತಿದ್ದಳು. ಒಂದಾರು ತಿಂಗಳ ನಂತರ ಒಂದು ಮಾರ್ವಾಡಿಯ ಕ್ಯಾಟರಿಂಗ್ ಕಂಪನಿಯಲ್ಲಿ ಖಾಯಂ ಕೆಲಸಕ್ಕೆ ಸೇರಿಕೊಂಡಳು.

ವರುಷಗಳು ನಿಮಿಷಗಳಂತೆ ಸಾಗಿಹೋದವು. ಕಷ್ಟ ಸುಖಗಳು ಜೊತೆಜೊತೆಯಾಗಿ ಕಣ್ಣಾಮುಚ್ಚಾಲೆ ಆಡುತ್ತಾ, ಕವಿತಾ ಮತ್ತವಳ ಮಕ್ಕಳನ್ನು ಆಡಿಸುತ್ತಾ ಸಾಗಿದವು. ಆದರೂ, ಮಕ್ಕಳಿಗೆ ಚೆನ್ನಾಗಿ ವಿದ್ಯಾಭ್ಯಾಸ ನೀಡಿ,  ಅವರಿಗೆ ಯಾವುದೇ ಕೊರತೆಯಾಗದ ರೀತಿಯಲ್ಲಿ ಬೆಳೆಸಿದ ಆಕೆ, ತಕ್ಕ ಮಟ್ಟಿಗೆ, ನೆಮ್ಮದಿಯಾದ ಜೀವನವನ್ನೇ ಸಾಗಿಸಿದಳು. ಆಕೆಗೆ ತನ್ನ ಮೇಲೆ ಮತ್ತು ತನ್ನ ಮಕ್ಕಳ ಮೇಲೆ ಹೆಮ್ಮೆ ಇತ್ತು. ಮಕ್ಕಳೂ ಅಮ್ಮನ ಪರಿಶ್ರಮಕ್ಕೆ ತಕ್ಕುದಾದ ರೀತಿಯಲ್ಲಿ ಬೆಳೆದರು. ಈಗ ಮಗ ಪದವಿಪೂರ್ವ ತರಗತಿಯಲ್ಲಿದ್ದರೆ, ಮಗಳು ಗೀತ ಒಂಭತ್ತನೇ ತರಗತಿಯಲ್ಲಿ. ಆ ಮಕ್ಕಳಿಗೆ ತನ್ನ ಜೀವನದ ಬಗ್ಗೆ, ಅವರ ಅಪ್ಪನ ಬಗ್ಗೆ ಇದ್ದುದನ್ನು ಇದ್ದ ಹಾಗೆ ಎಲ್ಲವನ್ನೂ ಹೇಳಿ ಬೆಳೆಸಿದ್ದಳು.

ಈ ನಡುವಿನ ಹದಿಮೂರು ವರುಷಗಳಲ್ಲಿ ಕವಿತಾಳಿಗೆ ಯಾವುದಾದರೂ ಸಮಾರಂಭಗಳಲ್ಲಿ ಮಾತ್ರ ಜನಾರ್ದನ ಮತ್ತು ಲಲಿತಾರ ಭೇಟಿ ಆಗುತ್ತಿತ್ತು. ಅವರಿಗೆ ಒಂದು ಗಂಡು ಮಗು ಇತ್ತು. ಕವಿತಾಳ ಮಕ್ಕಳೊಂದಿಗೆ ಜನಾರ್ದನ ಸಿಕ್ಕಾಗಲೆಲ್ಲಾ ಚೆನ್ನಾಗಿಯೇ ಮಾತನಾಡುತ್ತಿದ್ದ. ಮಕ್ಕಳಿಗೆ ಆಗಾಗ ತಿಂಡಿ, ಬಟ್ಟೆ ಕೊಡಿಸುತ್ತಾ ಇದ್ದ ಜನಾರ್ದನ. ಕವಿತಾ ಅದನ್ನೆಂದೂ ವಿರೋಧಿಸುತ್ತಿರಲಿಲ್ಲ. ಆದರೆ ಆಕೆಯೊಂದಿಗೆ ಹೆಚ್ಚಿನ ಮಾತಿಗೆ ಅವಕಾಶವನ್ನೇ ನೀಡುತ್ತಿರಲಿಲ್ಲ ಕವಿತಾ. ಕಡ್ಡಿಮುರಿದಂತೆ ಎರಡು ಮಾತುಗಳನ್ನು ಆಡಿ ಮುಗಿಸಿಬಿಡುತ್ತಿದ್ದಳು. ಆತನೂ ಹೆಚ್ಚು ಒತ್ತಾಯಿಸುತ್ತಿರಲಿಲ್ಲ.

ಈಗ ಹಠಾತ್ ಜನಾರ್ದನನ ಅನಾರೋಗ್ಯದ ಸುದ್ದಿ.

ಕವಿತಾಳಿಗೆ ಇಡೀ ರಾತ್ರಿ ಕಣ್ಣು ಮುಚ್ಚಿ ನಿದ್ರಿಸಲಾಗಲಿಲ್ಲ.

ತನ್ನ ಜೀವನದಲ್ಲಿ ಅದೇನೇ ನಡೆದಿದ್ದರೂ, ಹಿಂದೊಮ್ಮೆ ತಮ್ಮ ನಡುವಿದ್ದ ಆ ಪ್ರೀತಿಗೆ ಒಂದು ಅರ್ಥವಿತ್ತು. ಅದರ ನೆನಪು ಇನ್ನೂ ಕವಿತಾಳ ಮನಸ್ಸಿಗೆ ಮುದನೀಡುತ್ತಿದೆ.

ತಾನು ಈಗ ಏನು ಮಾಡುವುದು ಎನ್ನುವುದೇ ದೊಡ್ಡ ಪ್ರಶ್ನೆಯಾಗಿ ಕಾಡತೊಡಗಿತು.

ಕವಿತಾಳಿಗೆ ಏನೇ ಸಮಸ್ಯೆ ಎದುರಾದರೂ ನೆರವಿಗೆ ಬರುತ್ತಿದ್ದವನು ಆಕೆಯ ಬಾಲ್ಯ ಸ್ನೇಹಿತ ರವಿರಾಜ. ಆಕೆಯಲ್ಲಿ ಸದಾ ನೈತಿಕಬಲವನ್ನು ತುಂಬುತ್ತಿದ್ದಾತ. ಅತೀ ಅಗತ್ಯ ಎನಿಸಿದಾಗ ಆರ್ಥಿಕ ಸಹಾಯವನ್ನೂ ಮಾಡುತ್ತಿದ್ದ. ಆದರೆ ಅವರ ಸ್ನೇಹ ಎಂದೂ ಎಲ್ಲೆ ಮೀರಿರಲಿಲ್ಲ. ಅವರ ನಡುವೆ ಭೇಟಿ ಆಗುತ್ತಿದ್ದುದೇ ಕಡಿಮೆ, ವರ್ಷಕ್ಕೆ ಒಂದೋ ಎರಡೋ  ಬಾರಿ ಅಷ್ಟೇ. ಏನಿದ್ದರೂ ಫೋನಿನಲ್ಲಿ ಮಾತುಕತೆ. ಯಾವಾಗಲಾದರೂ ತನ್ನ ಸಮಸ್ಯೆ ಹೇಳಿಕೊಂಡು ಪರಿಹಾರ ಪಡೆಯುತ್ತಿದ್ದಳು, ಸಲಹೆ ಪಡೆಯುತ್ತಿದ್ದಳು,  ಅಷ್ಟೇ. ರವಿರಾಜನ ಮೇಲೆ ಆಕೆಗೆ ಗೌರವ ಇದ್ದಿತ್ತಾದರೂ, ಆತನನ್ನು ಜನಾರ್ದನನ ಸ್ಥಾನದಲ್ಲಿ ಕೂರಿಸುವುದು ಸಾಧ್ಯವಾಗಿರಲಿಲ್ಲ. ಅದಕ್ಕೆ ಆಕೆಯ ಮನದೊಳಗೆ ಇನ್ನೂ ಜನಾರ್ದನನ ಮೇಲಿದ್ದ ಪ್ರೀತಿಯೂ ಕಾರಣವಾಗಿದ್ದಿರಬಹುದು. ತನ್ನ ಮೊದಲ ಪ್ರೀತಿಯನ್ನು ಕವಿತಾಳಿಂದ ಎಂದಿಗೂ ಮರೆಯಲಾಗಿರಲೇ ಇಲ್ಲ.

ಇಂದೂ ಆತನಿಗೇ ಕರೆಮಾಡಿ ಏನು ಮಾಡಲಿ ಎಂದು ಆತನ ಸಲಹೆ ಕೇಳಿದಳು.

“ಕವಿತಾ, ನಿನ್ನಲ್ಲಿರುವ ಮಾನವೀಯತೆಯ ಪರೀಕ್ಷೆ ನಡೆಯುತ್ತಿದೆ ಇಂದು. ಇಂದು ನೀನು ಏನೂ ಮಾಡದೇ ಇದ್ದು, ನಾಳೆ ಕೊರಗುವುದಕ್ಕಿಂತ, ನಿನ್ನ ಮಕ್ಕಳ ದೃಷ್ಟಿಯಲ್ಲಿ ಚಿಕ್ಕದಾಗುವುದಕ್ಕಿಂತ, ಅವರ ದೃಷ್ಟಿಯಲ್ಲಿ ಮೇಲೇರುವುದು ಒಳ್ಳೆಯದು. ಅವರ ಇಚ್ಛೆಯಂತೆ ಅವರ  ಜೊತೆಗೆ ಆಸ್ಪತ್ರೆಗೆ ಹೋಗಿ ಬಾ. ದುಡ್ಡು ಬರುತ್ತದೆ, ಹೋಗುತ್ತದೆ. ಅದು ಎಲ್ಲಿ ಖರ್ಚಾಗಬೇಕೆಂದಿದೆಯೋ ಅಲ್ಲೇ ಖರ್ಚಾಗಬೇಕು, ಆ ಬಗ್ಗೆ ಚಿಂತಿಸಬೇಡ. ಸಹಾಯ ಬೇಕಿದ್ದರೆ ತಿಳಿಸು” ಅನ್ನುವ ಸಲಹೆ ನೀಡಿದ ರವಿರಾಜ..

ಮುಂಜಾನೆ ಎದ್ದವನೇ ರಮೇಶ್ ಆಸ್ಪತ್ರೆಗೆ ಹೊರಡಲು ಅನುವಾಗಿದ್ದ. ತಂಗಿಯನ್ನೂ ತಯಾರುಗೊಳಿಸಿದ್ದ. ಕವಿತಾಳ ಹತ್ತಿರ ಬಂದವನು  “ಅಮ್ಮಾ, ಒಮ್ಮೆ ಹೋಗಿ ಬರೋಣ. ಡೋಂಟ್ ಸೇ ನೋ. ಏನೇ ಆದರೂ ಹೀ ಈಸ್ ಅವರ್ ಡ್ಯಾಡ್” ಅಂದ.   ಮಾತಿಲ್ಲದೇ ಹೊರಟು ನಿಂತಳು ಕವಿತಾ.

ಆಸ್ಪತ್ರೆಯ ಐಸಿಯು ಹೊರಗಡೆ ಕೂತಿದ್ದ ಲಲಿತಾ, ಎದ್ದು ಅಕ್ಕನನ್ನು ತಬ್ಬಿಕೊಂಡು ಅಳಲು ಆರಂಭಿಸಿದಳು. ಕವಿತಾ “ ಸರಿ ಬಿಡು ಏನಾಗಿದೆ? ವೈದ್ಯರು ಏನು ಹೇಳ್ತಿದಾರೆ?”

ಲಲಿತಾ ಅಂದಳು “ಶ್ವಾಸಕೋಶದಲ್ಲಿ ಕಫ ಹೆಪ್ಪುಗಟ್ಟಿದೆಯಂತೆ.  ಆಪರೇಶನ್ ಮಾಡಬೇಕಂತೆ. ಅದಕ್ಕೆ ಸಹಿ ಮಾಡಿಕೊಡಬೇಕು. ಅವರ ಹೆಂಡತಿ ಎಂದು ನಿನ್ನ ಹೆಸರನ್ನು ಬರೆಸಿದ್ದೇನೆ. ನಿನ್ನ ಅನುಮತಿ ಬೇಕು, ಸಹಿ ಬೇಕು”. 

ವೈದ್ಯರನ್ನು ಭೇಟಿಮಾಡಿದ ಕವಿತಾ ಎಲ್ಲಿ ಹೇಳಿದರೋ ಅಲ್ಲೆಲ್ಲಾ ಸಹಿ ಮಾಡಿಕೊಟ್ಟಳು. ದುಡ್ಡು ಕಟ್ಟಬೇಕು ಅಂದಾಗ, ಡೆಬಿಟ್ ಕಾರ್ಡ್ ಮುಖಾಂತರ ದುಡ್ಡೂ ಕಟ್ಟಿದಳು. ಅಂದೇ ಆಪರೇಶನ್ ಮಾಡಿ ಮುಗಿಸಿದರು. ಶ್ವಾಸಕೋಶದಲ್ಲಿ ಹೆಪ್ಪುಗಟ್ಟಿದ್ದ ಕಫವನ್ನು ಹೊರತೆಗೆದರು. ಮಾರನೇ ದಿನ ಉಸಿರಾಟ ಮಾಮೂಲಿನ ಸ್ಥಿತಿಗೆ ಮರಳಿತು. ಸೋಮವಾರ ನೋಡಲು ಹೋದಾಗ, ಜನಾರ್ದನ ಕಣ್ಣು ಬಿಟ್ಟಿದ್ದ. ಕವಿತಾಳನ್ನು ನೋಡಿ, ಆತನ ಕಣ್ಣುಗಳಿಂದ ಕಣ್ಣೀರು ಹರಿಯತೊಡಗಿತು. ಮಾತಿಲ್ಲ. ಮೌನವಾಗಿಯೇ ತನ್ನ ಕೈಗಳನ್ನು ಜೋಡಿಸಿ ನಮಸ್ಕರಿಸಿದ. ತನ್ನಿಂದ ತಪ್ಪಾಗಿದೆಯೆಂದೂ, ಅಕೆಯ ಉಪಕಾರಕ್ಕಾಗಿ ಧನ್ಯವಾದಗಳನ್ನೂ ತಿಳಿಸುವಂತಿತ್ತು ಆತನ ಭಾವ. ಕವಿತಾಳೂ ಭಾವುಕಳಾದಳು. ಆತನ ಹಸ್ತಗಳನ್ನು ತನ್ನ ಹಸ್ತಗಳಲ್ಲಿ ಇರಿಸಿಕೊಂಡು, ಮೌನವಾಗಿ ಸುರಿಸಿದ ಕಣ್ಣೀರು ಆ ಹಸ್ತಗಳ ಮೇಲೆ ಬಿದ್ದಿತ್ತು.

ಇನ್ನೇನು ಆತ ಸುಧಾರಿಸುತ್ತಿದ್ದಾನೆ. ಎರಡು ದಿನ ಬಿಟ್ಟು ಮನೆಗೆ ಹೋಗಬಹುದು ಎಂದು ತಿಳಿದು ಲಲಿತಾಳ ಕೈಯಲ್ಲಿ ಸ್ವಲ್ಪ ಹಣ ಕೊಟ್ಟು ಮನೆಗೆ ಮರಳಿದಳು.

ಮೂರು ದಿನಗಳ ನಂತರ ಮತ್ತೆ ಲಲಿತಾಳ ಕರೆಬಂತು. ಮಗನೊಂದಿಗೆ ಆಸ್ಪತ್ರೆಗೆ ಹೋದಳು ಕವಿತಾ.  ಜನಾರ್ದನನ ಸ್ಥಿತಿ ತೀರಾ ಹದಗೆಟ್ಟಿತ್ತು. ಪುನಃ ಕೃತಕ ಉಸಿರಾಟದ ಸಾಧನಗಳನ್ನು ಅಳವಡಿಸಿದ್ದರು. ಆತನ ಕಿಡ್ನಿಗಳು ಹಾಗೂ ಲಿವರ್ ಎಲ್ಲಾ ಕೆಟ್ಟುಹೋಗಿವೆ ಅಂದರು ವೈದ್ಯರು. ಯಾವುದೇ ಶಸ್ತ್ರಕ್ರಿಯೆಯಿಂದ ಪ್ರಯೋಜನವಾಗದು. ಬದುಕಿದಷ್ಟು ದಿನ ಬದುಕಬಹುದು, ಅಂದರು. ಅತಿಯಾದ ಮದ್ಯಪಾನದಿಂದಾಗಿ ಈ ಪರಿಸ್ಥಿತಿ ಆಗಿದೆಯಂತೆ. ಅಲ್ಲದೆ ಅಲ್ಲಿ ಉದ್ದದ ಬಿಲ್ ತಯಾರಾಗಿ ಈಕೆಯನ್ನು ಕಾಯುತ್ತಾ ಇತ್ತು. ಮುಂದಿನ ನಾಲ್ಕಾರು ದಿನಗಳಲ್ಲಿ ಇನ್ನಷ್ಟು ಖರ್ಚು ಮಾಡಿಸಿದರು.

ರವಿರಾಜನಿಗೆ ದಿನವೂ ಕರೆಮಾಡಿ ಈ ಎಲ್ಲಾ ವಿಷಯಗಳನ್ನು ತಿಳಿಸುತ್ತಿದ್ದ ಕವಿತಾ, ಈಗ ಏನು ಮಾಡಲಿ ಎಂದು ಆತನನ್ನೇ ಕೇಳಿದಳು.    

“ಜನಾರ್ದನ ಇನ್ನು ಮಾಮೂಲು ಸ್ಥಿತಿಗೆ ಮರಳುವ ಸಾಧ್ಯತೆಗಳಿಲ್ಲ. ಲಿವರ್ ಕೆಟ್ಟಿದೆ, ಕಿಡ್ನಿಗಳು ಕೆಟ್ಟಿವೆ. ಉಸಿರಾಟ ಕಷ್ಟವಾಗುತ್ತಿದೆ. ದಿನದಿಂದ ದಿನಕ್ಕೆ ನಿನ್ನ ಕೈಯಿಂದ ಖರ್ಚು ಮಾಡಿಸಿಯಾರು ಆಸ್ಪತ್ರೆಯವರು. ಬೇರೇನೂ ಸಾಧಿಸಿದಂತಾಗುವುದಿಲ್ಲ. ಉಸಿರಾಟಕ್ಕಾಗಿ ಅಳವಡಿಸಿರುವ ಕೃತಕ ಸಾಧನಗಳನ್ನು  ತೆಗೆಯಲು ಅನುಮತಿ ಪತ್ರ ಸಹಿಮಾಡಿ ಕೊಟ್ಟುಬಿಡು” ಎಂದು ರವಿರಾಜ ಸಲಹೆ ನೀಡಿದ.

ಇಡೀರಾತ್ರಿ ಯೋಚಿಸಿದ ಕವಿತಾ ಮುಂಜಾನೆ ಗಟ್ಟಿಮನಸ್ಸು ಮಾಡಿ ಆಸ್ಪತ್ರೆಗೆ ತೆರಳುತ್ತಾಳೆ. ಜನಾರ್ದನನನ್ನು ನೋಡಲು ಹೋದರೆ, ಸ್ವಲ್ಪವೇ ಕಣ್ಣುಬಿಟ್ಟು, ತಾನು ಜೀವಂತವಾಗಿದ್ದೇನೆ ಅನ್ನುವುದರ ಸೂಚನೆ ನೀಡುತ್ತಿದ್ದ. ಆ ಕಣ್ಣುಗಳಲ್ಲಿ, ತನ್ನ ಯೌವನದ ದಿನಗಳಲ್ಲಿ ಕಂಡಿದ್ದ ಒಲವು ಮತ್ತೆ  ಕಂಡು ಬರುತ್ತಿತ್ತು ಕವಿತಾಳಿಗೆ. ಅನುಮತಿ ಪತ್ರಕ್ಕೆ ಸಹಿ ಹಾಕಲಾಗಲೇ ಇಲ್ಲ. ಹೀಗೆಯೇ ನಾಲ್ಕು ದಿನ ಕಳೆದಳು. ಎಷ್ಟೇ ದೃಢಮನಸ್ಸಿನಿಂದ ತೆರಳಿದರೂ ಆತನ ಕಣ್ಣುಗಳಲ್ಲಿ ಆ ಒಲವನ್ನು, ತನ್ನ ಬಿಂಬವನ್ನು ಕಂಡು, ಸೋತು ಮರಳುತ್ತಿದ್ದಳು.

ಮತ್ತೆ ರವಿರಾಜನಿಗೆ ಕರೆಮಾಡಿ ಸಲಹೆ ಕೇಳಿದಳು.

“ನಾಳೆ ಸೀದಾ ಅಸ್ಪತ್ರೆಯ ಕಚೇರಿಗೆ ಹೋಗು. ಅಲ್ಲಿ ಆ ಅನುಮತಿ ಪತ್ರಕ್ಕೆ ಸಹಿಮಾಡಿ ನಂತರ ಜನಾರ್ದನನನ್ನು  ನೋಡಲು ಹೋಗು” ಅನ್ನುವ ಸಲಹೆ ದೊರೆಯಿತು.

ಇಡೀ ರಾತ್ರಿ ನಿದ್ದೆ ಮಾಡಿರಲಿಲ್ಲ ಕವಿತಾ. ನಾಳೆ ನಾನು ಸಹಿ ಹಾಕಲೇ ಬೇಕು. ತನ್ನಲ್ಲಿರುವ ಹಣವೆಲ್ಲಾ ಖರ್ಚಾಗಿದೆ. ಇನ್ನು ತಡಮಾಡಿದರೆ ಸಾಲ ಮಾಡಬೇಕಾದೀತು. ಸಾಲ ತೀರಿಸುವ ಬಗೆ ಹೇಗೆ? ಇಲ್ಲ. ಇನ್ನು ಸಹಿಸಲು ಸಾಧ್ಯವಿಲ್ಲ. ರವಿರಾಜ ಹೇಳಿದಂತೆಯೇ ಮಾಡುತ್ತೇನೆ ಎಮ್ದು ನಿರ್ಧರಿಸಿದಳು.

ಮಾರನೇ ದಿನ ಸೀದಾ ಆಸ್ಪತ್ರೆಯ ಕಚೇರಿಗೆ ತೆರಳಿದವಳು, ಅನುಮತಿ ಪತ್ರಕ್ಕೆ ಸಹಿಮಾಡಿ, ನಂತರ ಜನಾರ್ದನನನ್ನು ನೋಡಲು ಹೋದಳು. ಆತ ಕಣ್ಮುಚ್ಚಿಕೊಂಡೇ ಇದ್ದ. ಎಚ್ಚರವಿಲ್ಲ. ಸಮಾಧಾನದ ನಿತ್ತುಸಿರುಬಿಟ್ಟಳು ಕವಿತಾ. ಅರ್ಧಗಂಟೆಯ ನಂತರ ವೈದ್ಯರುಗಳು ಬಂದು ಆ ಕೃತಕ ಸಾಧನಗಳನ್ನು ತೆಗೆಯಲು ತೊಡಗಿದರು. ಆಗ ಜನಾರ್ದನ ಕಣ್ಣುಬಿಟ್ಟು “ಏನು ಮಾಡ್ತಿದೀರಿ?” ಅನ್ನುವಂತೆ ಕವಿತಾಳ ಕಡೆ ನೋಡಿ ಸನ್ನೆ ಮಾಡಿ ಕೇಳಿದ. “ನಿನ್ನನ್ನು ಮನೆಗೆ ಕರೆದುಕೊಂಡು ಹೋಗ್ತಾ ಇದ್ದೇವೆ” ಎಂದು ಹೇಳಿದ ಕವಿತಾ ಮುಖ ಮರೆಸಿಕೊಂಡು ಹೊರನಡೆದಳು.

ರವಿರಾಜನಿಗೆ ಸಂದೇಶ ಮಾಡಿದಳು. “ವೆಂಟಿಲೇಟರ್ಸ್ ಅನ್ನು ತೆಗೆಯುತ್ತಿದ್ದೇವೆ L”. ಆತ ಆ ಸಂದೇಶವನ್ನು ಓದಿ, ತಾನು ನೀಡಿದ ಸಲಹೆ ಸೂಕ್ತವಾಗಿತ್ತೋ ಇಲ್ಲವೋ ಅನ್ನುವ ಗೊಂದಲಕ್ಕೆ ಈಡಾದ. ಹತ್ತು ನಿಮಿಷಗಳ ನಂತರ,  ಇನ್ನೂ ಚಿಂತಾಕ್ರಾಂತನಾಗಿದ್ದವನ ಮೊಬೈಲ್ ಸದ್ದು ಮಾಡಿತು.

ಅಲ್ಲಿ ಇನ್ನೊಂದು ಸಂದೇಶ “ಎಲ್ಲಾ ಮುಗಿಯಿತು. ಜನಾರ್ದನ ಇನ್ನಿಲ್ಲ L ಆತನ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ನೀನೂ ಪ್ರಾರ್ಥಿಸು”.

ಮರುತ್ತರ ನೀಡಿದ ರವಿರಾಜ “ಹೂಂ… ನಾನು ಪ್ರಾರ್ಥಿಸುತ್ತೇನೆ. ಯಾವುದು ಸರಿ ಯಾವುದು ತಪ್ಪು ಅನ್ನುವುದು ದೇವರಿಗಷ್ಟೇ ಗೊತ್ತು. ಯಾವತ್ತೂ ಒಂಟಿಯೆಂದೆಣಿಸಬೇಡ. ನನ್ನ ಸಹಾಯ ಬೇಕಿದ್ದಾಗ ತಿಳಿಸು. ನಾನು ನಿಮ್ಮ ಜೊತೆಗಿದ್ದೇನೆ”

ಅಂದು ಜನಾರ್ದನನನ್ನು ತನ್ನ ತಂಗಿಯ ಪಾಲಿಗೆ ಬಿಟ್ಟುಕೊಟ್ಟು ಬರುವಾಗ ಅಷ್ಟೊಂದು ನೊಂದಿರಲಿಲ್ಲವೇನೋ ಕವಿತಾ. ಇಂದು ಜನಾರ್ದನನ ಅಂತ್ಯಕ್ರಿಯೆ ಮುಗಿಸಿದಾಗ ಕವಿತಾಳ ಬಳಿ ಬಿಡಿಗಾಸೂ ಉಳಿದಿರಲಿಲ್ಲ. ಈ ನಡುವಿನ ವರುಷಗಳಲ್ಲಿ ಕೂಡಿಸಿಟ್ಟಿದ್ದ ಮೂರು ಲಕ್ಷ ರೂಪಾಯಿಗಳನ್ನು ಆಸ್ಪತ್ರೆಯಲ್ಲಿ ಜನಾರ್ದನನಿಗಾಗಿ ಖರ್ಚುಮಾಡಿದ್ದಳು.

ಆಸ್ಪತ್ರೆಯಲ್ಲಿ ಶವವನ್ನು ಬಿಡಿಸಿಕೊಳ್ಳಲು ಬಾಕಿ ಇದ್ದ  ಇಪ್ಪತ್ತುಸಾವಿರ ರೂಪಾಯಿಗಳನ್ನು ಕಟ್ಟಬೇಕಿತ್ತು. ಅದನ್ನೂ ರವಿರಾಜನೇ ಕಟ್ಟಿ ಬಂದಿದ್ದ.

ಸಾಯಂಕಾಲ ರುದ್ರಭೂಮಿಯಿಂದ ಮನೆಯತ್ತ ಹೊರಟ ಕವಿತಾಳ ಅಕ್ಕ ಪಕ್ಕ  ರಮೇಶ್ ಮತ್ತು ಗೀತಾ ನಡೆಯುತ್ತಿದ್ದರು. ಕವಿತಾಳ ಕಣ್ಣುಗಳಿಂದ ಧಾರಾಕಾರವಾಗಿ ಕಣ್ಣೀರು ಹರಿಯುತ್ತಿತ್ತು.

ಅವರಿಂದ ಅನತಿ ದೂರದಲ್ಲಿ ಲಲಿತಾಳೂ ಅಳುತ್ತಾ ತನ್ನ ಮಗನೊಂದಿಗೆ ತನ್ನ ಮನೆಯತ್ತ ನಡೆಯುತ್ತಿದ್ದಳು.

ರಮೇಶ್  ಕೇಳಿದ “ಅಮ್ಮಾ… ಯಾಕೆ ಅಳ್ತೀಯಾ? ನಮ್ಮ ಕರ್ತವ್ಯ ನಾವು ಮಾಡಿದ್ದೇವೆ… ಎಲ್ಲಾ ಮರೆತು ಲೆಟ್ ಅಸ್ ಸ್ಟಾರ್ಟ್ ಅ ನ್ಯೂ ಲೈಫ್ …”

ಆತನ ಮಾತು ಕೇಳಿದ ಕವಿತಾಳಿಗೆ ತನ್ನ ಮಗ ತುಂಬಾ ಬೆಳೆದುಬಿಟ್ಟಿದ್ದಾನೆ ಅಂತ ಅನಿಸಿತು.

ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ತನ್ನ ಸ್ನೇಹಿತ ರವಿರಾಜನಿಗೆ, ಕವಿತಾ ತನ್ನ ಕಣ್ಣಿಂದಲೇ ವಂದಿಸಿ, ಧನ್ಯವಾದಗಳನ್ನು ಅರ್ಪಿಸಿದಳು.

ಕವಿತಾ ಮತ್ತೊಮ್ಮೆ ಶೂನ್ಯದಿಂದ ತನ್ನ ಜೀವನವನ್ನು ಆರಂಭಿಸಬೇಕಾಗಿತ್ತು. ಆದರೆ ಅಲ್ಲಿ ಕತ್ತಲಿರಲಿಲ್ಲ. ಎಲ್ಲವನ್ನೂ ಸ್ಪಷ್ಟವಾಗಿ ತೋರಿಸುವ ಶುಭ್ರ ಬೆಳಕು ಇತ್ತು.

*****

 


ಆ ಭೇಟಿ ಬೇಡವಿತ್ತು!

19 ಆಗಸ್ಟ್ 13

“ನಿಮ್ಮೂರಿನಲ್ಲಿರುವ ನನ್ನ ಮಗಳ ಪೀಜಿ ರೂಮಿಗೆ ಹೊರಟಿದ್ದೇನೆ. ನೀನೂ ಊರಿಗೆ ಬಂದಿದ್ದಿ. ಅವಳ ರೂಮಿನ ಹತ್ತಿರ ಬರಲು ಸಾಧ್ಯವೇ ನಿನಗೆ? ನೀನು ಬಂದರೆ ಭೇಟಿ ಆಗಬಹುದಿತ್ತು. ನಿನ್ನನ್ನೊಮ್ಮೆ ಭೇಟಿ ಆಗಬೇಕೆನ್ನುವ ಬಯಕೆ ಇದೆ ಕಣೋ.  ಗಜಾನನ ಬಸ್ಸಿನಲ್ಲಿದ್ದೇನೆ. ಈಗ ಕುಡುಮಲ್ಲಿಗೆ ದಾಟಿ ಬೆಜ್ಜವಳ್ಳಿ ಹತ್ತಿರ ಸಾಗುತ್ತಾ ಇದೆ ಬಸ್ಸು.  ಶಿವಮೊಗ್ಗ ತಲುಪುವಾಗ ಆರು ಘಂಟೆ ಆಗಬಹುದು. ಶಿವಮೊಗ್ಗದ ಬಸ್ ಸ್ಟಾಂಡಿಂದ ಅರ್ಧ ಕಿಮೀ ಹಿಂದೆ ಆಲದ ಮರದ ಸ್ಟಾಪ್ ಇದೆಯಲ್ಲಾ ಅಲ್ಲಿ ಇಳಿದುಕೊಳ್ತೇನೆ. ಅವಳ ರೂಮಿಗೆ ಅಲ್ಲಿಂದ ಅಡ್ಡ ರಸ್ತೆಯಲ್ಲಿ ಒಂದು ಕಿಮೀ ದೂರ ಹೋಗಬೇಕು. ಬರ್ತೀಯಾ? ನಮ್ಮೀರ್ವರಿಗೂ ಇನ್ನು ಇಂತಹ ಅವಕಾಶ ಕೊಡಲಾರ ಆ ದೇವರು”.

“ಹೌದು ಕಣೇ, ಊರಿಗೆ ಬರುವ ಮೊದಲು ನನಗೂ ಬಯಕೆ ಇತ್ತು. ನೀನು ನಮ್ಮೂರಿಗೆ ಬಂದರೆ ನಿನ್ನನ್ನು ಭೇಟಿ ಆಗಬಹುದು ಎನ್ನುವ ವಿಚಾರ ನನ್ನ ತಲೆಯಲ್ಲೂ ಬಂದಿತ್ತು. ಆದರೆ ಈಗ ಯಾಕೋ ಅಳುಕು. ಒಂದು ತರಹದ ಭಯ. ನಾನು ಈ ಸಮಾಜಕ್ಕೆ ಹೆದರುತ್ತಿದ್ದೇನೆ ಅಂತ ಅನಿಸ್ತಾ ಇದೆ. ಏನು ಮಾಡಲಿ? ತಪ್ಪು ಮಾಡಿದವರಿಗೆ ಯಾವ ಭಯವೂ ಇಲ್ಲ. ತಪ್ಪು ಮಾಡದ ನನ್ನಲ್ಲಿ ಅದೇಕೋ ಅಳುಕು ಕಣೇ”

“ಬೇಡ ಬಿಡು. ನಾನು ಹೆಣ್ಣು ಹೆಂಗಸು. ನಿನ್ನನ್ನು ಭೇಟಿ ಆಗಲು ತಯಾರಿದ್ದೇನೆ. ನಿನಗೆ, ಒಂದು ಗಂಡಸಿಗೆ, ಕಷ್ಟ ಆಗ್ತಿದೆ. ಸರಿ, ಬೇಡ ಬಿಡು. ನಾನು ಬಯಸಿದ್ದೇ ತಪ್ಪಾಯ್ತು ನೋಡು”.

*****

ಆಲದ ಮರದ ಸ್ಟಾಪಿನ ಬಳಿ ಬಸ್ಸು ನಿಂತಾಗ, ಎರಡೂ ಕೈಗಳಲ್ಲಿ ಎರಡು ಬ್ಯಾಗುಗಳನ್ನು ಹಿಡಿದುಕೊಂಡು ಆಕೆ ನಿಧಾನವಾಗಿ ಬಸ್ಸಿನಿಂದ ಇಳಿದಳು. ಎದುರುಗಡೆ ಒಂದು ಸ್ಕೂಟರನ್ನು ನಿಲ್ಲಿಸಿಕೊಂಡು ಆತ ಕಾಯ್ತಾ ಇದ್ದಾನೆ. ಆಕೆಯನ್ನು ನೋಡಿದವನು ಸ್ಕೂಟರ್ ಸ್ಟಾರ್ಟ್ ಮಾಡಿ, “ಬಾ ಕೂತುಕೋ…” ಅಂದ. ಆಕೆಯೂ ಮಾತಾಡಲಿಲ್ಲ. ಆತನ ಹಿಂಬದಿಯ ಸೀಟಿನಲ್ಲಿ ಕುಳಿತುಕೊಂಡಳು. ಹಾಸ್ಟೇಲಿನ ಮಾರ್ಗ ಮಧ್ಯೆ ಸ್ಕೂಟರ್ ನಿಲ್ಲಿಸಿ, “ಏನು ಮಾತಾಡಲಿಕ್ಕಿದೆ ಎಲ್ಲಾ ಇಲ್ಲೇ ಮಾತಾಡು. ನಿನ್ನ ಮಗಳ ಮುಂದೆ ನನಗೂ ಕಷ್ಟ. ನಿನಗೂ ಕಷ್ಟ” ಅಂದ. ಆಕೆಗೆ ಮಾತೇ ಹೊರಡಲಿಲ್ಲ. ಕಣ್ತುಂಬ ನೋಡಿದಳು. ತನ್ನ ಕಣ್ತುಂಬಿಕೊಂಡಳು. ಆತನೂ ಆಕೆಯನ್ನು ಕಣ್ತುಂಬಿಕೊಂಡ. ಸಾಕು ಬಿಡು, ಅಂದವನು ಸ್ಕೂಟರ್ ಸ್ಟಾರ್ಟ್ ಮಾಡಿದ. ಮತ್ತೆ ಏರಿ ಕೂತಳು ಆಕೆಯೂ.

*****

ಮಗಳ ರೂಮಿನ ಬಳಿ ಆಕೆಯನ್ನು ಬಿಟ್ಟು, ಆಕೆಯ ಮಗಳಿಗೂ ಹಾಯ್ ಹೇಳಿ, ಆತ ವಾಪಸಾದ.

*****

ನಾಲ್ಕಾರು ದಿನಗಳಿಂದ ಆತನ ಸಂದೇಶವೂ ಇಲ್ಲ. ಕರೆಯೂ ಇಲ್ಲ.

*****

ದಿನಪತ್ರಿಕೆಯ ಪುಟಗಳನ್ನು ತಿರುವು ಹಾಕುತ್ತಿದ್ದವಳಿಗೆ ಆತನ ಭಾವಚಿತ್ರ ಕಂಡಂತಾಯ್ತು. ತೆರೆದು ಓದಿದಳು. ಕಣ್ಣುಗಳನ್ನು ನಂಬದಾದಳು. ಆತ ಇನ್ನಿಲ್ಲ. ಆಕೆಯನ್ನು ಮಗಳ ರೂಮಿನ ಬಳಿ ಬಿಟ್ಟು ಹೋದ ದಿನವೇ ರಸ್ತೆ ಅಪಘಾತವೊಂದರಲ್ಲಿ ಇಹಲೋಕ ತ್ಯಜಿಸಿದ್ದ.

***

ಏನಿದು ವಿಧಿಲೀಲೆ?

ಎಲ್ಲಿಯದೀ ಬಂಧ?

*****

ಆತ ತನ್ನ ಬ್ಲಾಗ್‍ನಲ್ಲಿ ಪ್ರಕಟಿಸುತ್ತಿದ್ದ ಸ್ವರಚಿತ ಚಿತ್ರಗಳನ್ನು ಸದಾ ಮೆಚ್ಚಿ ಪ್ರತಿಕ್ರಿಯಿಸುತ್ತಿದ್ದ ಆಕೆಗೆ ಈಗ ಎರಡು ತಿಂಗಳ ಹಿಂದೆ ಆತನೇ ಒಮ್ಮೆ ಸಂದೇಶ ಕಳುಹಿಸಿ, “ತಮ್ಮ ಅಭಿಮಾನಕ್ಕಾಗಿ ಧನ್ಯವಾದಗಳು, ಸದಾ ನನ್ನ ಚಿತ್ರಗಳನ್ನು ಮೆಚ್ಚಿ ಪ್ರತಿಕ್ರಿಯಿಸುತ್ತಾ ಇದ್ದೀರಿ” ಅಂದಿದ್ದ.

ಅಲ್ಲಿಂದ ಸ್ನೇಹ ಶುರುವಾಗಿತ್ತು. ಗಂಭೀರವಾಗಿ ಒಂದೋ ಎರಡೋ ಮಾತುಗಳು ಅಷ್ಟೇ. ಆದರೂ ದಿನಕ್ಕೊಮ್ಮೆ ಕರೆ ಮಾಡಿ ಮಾತನಾಡುತಿದ್ದರು.

ಭೇಟಿ ಆಗಬೇಕೆಂಬ ಆಸೆ ಇಲ್ಲ ಅಂತ ಇಬ್ಬರೂ ಅಂದಿದ್ದರು.

ಆದರೆ, ಭೇಟಿ ಆಗುವ ಬಯಕೆಯನ್ನು ಪರಸ್ಪರರಲ್ಲಿ ವ್ಯಕ್ತಪಡಿಸಿದ್ದರು.

ಬೇಡ ಬೇಡ ಅನ್ನುತ್ತಾ ಭೇಟಿಯೂ ಆಯ್ತು.

ಆದರೆ ಈಗ?

ಇನ್ನು ಮುಂದೆ?

ಬರೀ ನೆನಪು ಅಷ್ಟೇ.

ಆ ಭೇಟಿ ಬೇಡವಿತ್ತು.

ಆತನನ್ನು ಆಕೆ ಭೇಟಿ ಆಗದೇ ಇದ್ದಿದ್ದರೇ ಚೆನ್ನಾಗಿರುತ್ತಿತ್ತು ಅಂತ ಆಕೆಗೆ ಅನಿಸತೊಡಗಿತ್ತು.

ತಾನು ಕರೆದಿದ್ದೇ ತಪ್ಪಾಯ್ತೇ?

ಛೇ!

*****


ನೆನಪಾಗಿ ಕಾಡುವ ಕೆಂಪಿ!

19 ಮೇ 13
ಇದು ಸರಿ ಸುಮಾರು ನಲವತ್ತು ವರುಷಗಳ ಹಿಂದಿನ ಕತೆ. ಅಂದೊಂದು ದಿನ ಮುಂಜಾನೆ ಹಿರಿಯಡಕ ಶಾಲೆಗೆ ಹೋಗುತ್ತಿರುವಾಗ ಹಾದಿಯಲ್ಲಿ ಹಠಾತ್ತನೇ ನನ್ನ ಕೆಂಪಿ ಎದುರಾಗಿದ್ದಳು. ಆಕೆಯನ್ನು ಕಂಡಾಗ ನನಗಾದ ನನ್ನ ಖುಷಿಗೆ ಪಾರವೇ ಇರಲಿಲ್ಲ.

ಹತ್ತಿರ ನಿಂತು ಮಾತಾಡಿಸಿದರೆ ಮರಳಿ ಮಾತೇ ಇಲ್ಲ. ಕಣ್ಣುಗಳಿಂದ ಬರೀ ಕಣ್ಣೀರ ಧಾರೆ. ಸರಿ ನೀನು ಮನೆಗೆ ಹೋಗಿರು. ನಾನು ಶಾಲೆಗೆ ಹೋಗಬೇಕು. ಸಾಯಂಕಾಲ ಬರ್ತೇನೆ ಎಂದು ಹೇಳಿ ಕಳುಹಿಸಿದ್ದೆ. ನಾನು ಶಾಲೆಗೆ ಹೋದರೂ ಹಗಲಿಡೀ ಕೆಂಪಿಯದೇ ಯೋಚನೆಗಳು. ಸಂಜೆ ತನಕ ಇರ್ತಾಳೋ ಇಲ್ವೋ? ನಮ್ಮನ್ನೆಲ್ಲಾ ಬಿಟ್ಟು ಹೋದವಳು ಹೀಗೆ ಹಠಾತ್ ಮರಳಿದ್ದೇಕೆ? ಇನ್ನು ನಮ್ಮ ಮನೆಯಲ್ಲೇ ಉಳಿಯುತ್ತಾಳೋ?

ಸಾಯಂಕಾಲ ಶಾಲೆ ಮುಗಿದ ಮೇಲೆ, ಮೂರು ಮೂರೂವರೆ ಕಿಲೋಮೀಟರುಗಳಷ್ಟು ದೂರದಲ್ಲಿದ್ದ ನಮ್ಮ ಮನೆಯನ್ನು ತಲುಪಲು ಮುಕ್ಕಾಲು ಗಂಟೆ ಬೇಕಾಗುತ್ತಿತ್ತು. ಜಾಸ್ತಿ ವೇಗವಾಗಿ ನಡೆಯಲೂ ಭಯ. ಮಧ್ಯಾಹ್ನ ಶಾಲೆಯಲ್ಲಿ ತಿಂದಿದ್ದ ಅಮೇರಿಕನ್ ಉಪ್ಪಿಟ್ಟು ಅದಾಗಲೇ ಜೀರ್ಣವಾಗಿದ್ದು, ಅದು ತನ್ನ ಕರಾಮತ್ತು ತೋರಿಸಿ ಬಿಡಬಹುದೆಂಬ ಅನುಮಾನ ಇರುತ್ತಿತ್ತು.

ಮನೆಗೆ ಬಂದರೆ ಕೆಂಪಿ ಇಲ್ಲ. ಅಮ್ಮನಲ್ಲಿ ಕೇಳಿದೆ. ಕೆಂಪಿ ಬಂದಿದ್ದು ಹೌದು. ಬಾಯಾರಿಕೆ ನೀಡಿದೆ. ಕುಡಿದಳು. ಆಮೇಲೆ ನಿನ್ನ ಅಪ್ಪಯ್ಯ ಅವರಿಗೆ ವಿಷಯ ತಿಳಿಸಿದ್ದರಿಂದ, ಅವರೇ ಬಂದು ಕರೆದುಕೊಂಡು ಹೋದರು.

ಏನು ಮಾಡಬಹುದಾಗಿತ್ತು ನಾನು. ಅಳು ಬಂತು. ಮನಸಾರೆ ಅತ್ತೆ. ಅಂದಿನ ದಿನದಿಂದ ಈ ನಡುವಿನ ಇಷ್ಟೊಂದು ವರುಷಗಳಲ್ಲಿ ಹಲವುಬಾರಿ ನೆನಪಾಗಿ ಕಾಡಿದ್ದಾಳೆ ಕೆಂಪಿ. ಅಳಿಸಿದ್ದಾಳೆ. ಈಗೀಗ ಅಳುವಿಲ್ಲವಾದರೂ ನೆನಪಾದಾಗ ಹೃದಯ ಭಾರವಾಗುವುದಂತೂ ನಿಜ.

ನಾನು ನಮ್ಮ ಮನೆಯಿಂದ ಒಂದು ಕಿಲೋಮೀಟರ್ ದೂರದ ಅಂಜಾರು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದ ಸಮಯ ಅದು. ಆಗ ನನಗೊಂದು ಭಯಂಕರ ಖಾಯಿಲೆ ಕಾಡಿತ್ತು. ಸುಮಾರು ಏಳೆಂಟು ತಿಂಗಳು ನಾನು ಶಾಲೆಗೇ ಹೋಗಿಲ್ಲ. ನಮ್ಮ ಮೂರನೇ ತರಗತಿಯ ಬಗ್ಗೆ ನನಗೆ ಅಷ್ಟೊಂದು ನೆನಪು ಉಳಿದಿಲ್ಲದಿರಲು ಇದೇ ಕಾರಣ. ಆದರೂ ಭಡ್ತಿ ಸಿಕ್ಕಿತ್ತು ಆ ಮಾತು ಬೇರೆ. ಲಿವರ್ ಸಮಸ್ಯೆಯಿಂದಾಗಿ, ಮೈಯೆಲ್ಲಾ ಊತ ಉಂಟಾಗಿತ್ತು. ಉಪ್ಪು ಮತ್ತು ಖಾರ ತಿನ್ನುವಂತಿರಲಿಲ್ಲ. ಉಪ್ಪಿನಕಾಯಿಯ ಡಬ್ಬ ಕೈಗೆ ಸಿಕ್ಕರೆ ಕದ್ದು ತಿನ್ನುತ್ತಿದ್ದೆ. ನಿರ್ಬಂಧವಿದ್ದ ವಸ್ತುಗಳ ಮೇಲೆ ನನಗೆ ಅತೀವ ಆಸೆ ಆಗ. ಉಪ್ಪಿನಕಾಯಿ ಡಬ್ಬವನ್ನು ನನ್ನ ಕೈಗೆ ಸಿಗದಂತೆ, ಮೇಲೆ ಎಲ್ಲೋ ಅಡಗಿಸಿ ಇಡುತ್ತಿದ್ದರು. ನನ್ನಿಂದಾಗಿ ಮನೆಯವರೆಲ್ಲರಿಗೂ ಒಂದು ರೀತಿಯಲ್ಲಿ ಕಷ್ಟ. ನಾನು ತಿನ್ನಲಾಗದ ತಿನಿಸನ್ನು ಅವರು ತಿನ್ನುವಾಗ ಅವರಿಗೆಲ್ಲಾ ಬೇಸರ.

ವೈದ್ಯರಾಗಿದ್ದ ಅಪ್ಪಯನ್ನವರೂ ಕೈಸೋತಿದ್ದರು. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ, ಉಡುಪಿಯ ಆಯುರ್ವೇದ ಆಸ್ಪತ್ರೆ, ಅಲ್ಲದೇ ಇನ್ನೂ ಅದೆಷ್ಟೋ ನಾಟಿ ವೈದ್ಯರುಗಳ ಔಷಧಿಗಳನ್ನು ಪ್ರಯೋಗಿಸಿದರೂ ಗುಣಮುಖ ನಾಗಿರಲಿಲ್ಲ. ನನ್ನ ಆಸೆಯನ್ನು ಕೈಬಿಡುವಂತೆ ವೈದ್ಯರುಗಳೇ ಸೂಚಿಸಿದ್ದರು. ಆ ದಿನದ ನಂತರ ಅಪ್ಪಯ್ಯ ನನಗೆ ಕದ್ದು ಮುಚ್ಚಿ ಮಸಾಲೆ ದೋಸೆ ತಂದು ತಿನ್ನಿಸಿದ್ದೂ ಇದೆ. ಅಮ್ಮ ಅದರಿಂದ ಕೊರಗಿದ್ದೂ ಇದೆ. ಆಗಿನ ದಿನಗಳಲ್ಲಿ, ನನ್ನನ್ನು ಖುಷಿಯಾಗಿ ಇರಿಸಲು, ರಾತ್ರಿ ಕ್ಲಿನಿಕಿನಿಂದ ಮರಳಿದ ಮೇಲೆ, ನನಗೆ ಒಂದು ರೂಪಾಯಿಯ ಪಾವಲಿ ನೀಡುವ ಅಭ್ಯಾಸ ಮಾಡಿಕೊಂಡಿದ್ದರು ಅಪ್ಪಯ್ಯ. ಅದನ್ನು ಒಂದು ಡಬ್ಬಿಯಲ್ಲಿ ಹಾಕಿ ಭದ್ರವಾಗಿ ಶೇಖರಿಸಿ ಇಡುತ್ತಿದ್ದೆ ನಾನು.

ಒಂದು ದಿನ ಅದ್ಯಾವುದೋ ಹಾರ್ಮೋನಿಯಂ ಮಾಸ್ಟರರೊಬ್ಬರು ನಮ್ಮ ಮನೆಗೆ ಬಂದಿದ್ದರು. ನನ್ನ ಖಾಯಿಲೆಯ ಬಗ್ಗೆ ತಿಳಿದ ಅವರು ಪಾಣಾಜೆಯಲ್ಲಿನ ಆಯುರ್ವೇದ ಪಂಡಿತರೋರ್ವರ ಹೆಸರನ್ನು ಸೂಚಿಸಿ, ಅಲ್ಲಿಗೆ ನನ್ನನ್ನು ಕರೆದುಕೊಂಡು ಹೋಗಲು ಹೇಳಿದ್ದರು. ಆ ಪಂಡಿತರು, ಈಗಿನ ಖ್ಯಾತ ಪತ್ರಕರ್ತ ಶೀ ಈಶ್ವರ ದೈತೋಟರ ತೀರ್ಥರೂಪರು. ಅವರಲ್ಲಿಗೆ ನಾಲ್ಕಾರು ಭೇಟಿ ನೀಡಿ, ಅವರು ನೀಡಿದ ಔಷಧಿ ಸೇವಿಸಿ ನಾನು ಅಂದು ಮರುಜನ್ಮ ಪಡೆದಿದ್ದೆ. ನನಗೆ ಮರುಜನ್ಮ ನೀಡಿದವರು ಈಶ್ವರ ದೈತೋಟರವರ ತೀರ್ಥರೂಪರು.

ವಿಷಯ ಅದಲ್ಲ.

ನಾನು ಗುಣಮುಖನಾದ ನಂತರ, ನಾನು ಒಟ್ಟುಗೂಡಿಸಿದ್ದ, ಆ ಒಂದು ರೂಪಾಯಿಯ ಪಾವಲಿಗಳನ್ನು ಲೆಕ್ಕ ಹಾಕಿ ನೋಡಿದರೆ, ಸುಮಾರು ಇನ್ನೂರೈವತ್ತು ರೂಪಾಯಿಗಳಾಗಿದ್ದವು. ನಮ್ಮ ಅಪ್ಪಯ್ಯ, ಆ ದುಡ್ಡನ್ನು ತೆಗೆದುಕೊಂಡು ನನಗೊಂದು ಹಸುವನ್ನು ಖರೀದಿಸಿ ನಮ್ಮ ಹಟ್ಟಿಯಲ್ಲಿ ಕಟ್ಟಿದ್ದರು. ಆ ಹಸುವೇ ಕೆಂಪಿ. ಆಕೆ ನನ್ನ ಬಾಲ್ಯದ ಸಂಗಾತಿಯಾಗಿ ಬಿಟ್ಟಿದ್ದಳು.

ಆಕೆಯ ಸಕಲ ಆರೈಕೆ ನನ್ನದೇ. ಹಿರಿಯರ ಲೆಕ್ಕಾಚಾರ ನನ್ನ ಅರಿವಿಗೆ ಬಂದಿರಲೇ ಇಲ್ಲ. ಹಟ್ಟಿಯಲ್ಲಿರುವ ಆ ಹಸು ನನ್ನದಾಗುವುದು ಹೇಗೆ ಅನ್ನುವ ಪ್ರಶ್ನೆಯೇ ಎದ್ದಿರಲಿಲ್ಲ. ಹೊಲಗಳ ಅಂಚಿನಲ್ಲಿ ಬೆಳೆಯುವ ಹಸಿಹುಲ್ಲನ್ನು ತಂದು ಕೆಂಪಿಗೆ ತಿನ್ನಿಸುವ ಕೆಲಸವೂ ನಡೆಯುತ್ತಿತ್ತು. ಎರಡು ಮೂರು ವರುಷ ನಮ್ಮೊಂದಿಗೆ ಇದ್ದ ಕೆಂಪಿಯನ್ನು, ಒಂದು ದಿನ ನನಗೆ ತಿಳಿಸದೇ, ನನ್ನನ್ನು ಕೇಳದೇ ಮಾರಿಬಿಡಲಾಗಿತ್ತು. ಮನೆಯಿಂದ ದೂರದ ಒಂದು ಕೊಯ್ಲು ಎನ್ನುವ ಹೊಲದಲ್ಲಿ ಕೂಳೆ ಕೀಳಲು ಹೋಗಿದ್ದಾಗ, ಇತ್ತ ಕೆಂಪಿಯ ವ್ಯವಹಾರ ನಡೆಸಿ, ಹಿರಿಯಡಕದ ಲಕ್ಷ್ಮಣ ಆಚಾರಿ ಅನ್ನುವವರ ಮನೆಗೆ ಕರೆದೊಯ್ಯಲಾಗಿತ್ತು.

ಭತ್ತದ ಪೈರಿನ ಕಟಾವು ಆದನಂತರ ಹೊಲದಲ್ಲಿ ಉಳಿದಿರುವ ಅದರ ಬುಡವನ್ನು ಕೂಳೆ ಅನ್ನುತ್ತೇವೆ. ಅವುಗಳನ್ನು ಕಿತ್ತು ತಂದು ಹಸುಗಳಿರುವ ಹಟ್ಟಿಯಲ್ಲಿ ಹಾಸಲಾಗುತ್ತಿತ್ತು. ಹಾಗೆ ಅಂದು ಕೂಳೆ ಕಿತ್ತುಕೊಂಡು ಮರಳಿದಾಗ, ಹಟ್ಟಿಯಲ್ಲಿ ಕೆಂಪಿ ಇರಲಿಲ್ಲ. ಅಂದು ನಾನು ಅತ್ತು ಸುರಿಸಿದ ಕಣ್ಣೀರಿಗೆ ಕೊನೆಯಿರಲಿಲ್ಲ. ಬೇರೆ ಹಸು ಕೊಂಡಾಗ ಅದು ನಿನಗೇ ಕೊಡ್ತೇವೆ ಅನ್ನುವ ಅಮ್ಮನವರ ಸಮಾಧಾನದ ನುಡಿಗಳು ಅಂದು ವಿಫಲವಾಗಿದ್ದವು. ಆಮೇಲೆ ಮತ್ತೊಂದು ಹಸು ಬಂತು. ಹೋಯ್ತು. ಆದರೆ ಕೆಂಪಿಯಷ್ಟು ಆಪ್ತವಾಗಿದ್ದಿಲ್ಲ ಯಾರೂ.

ಅದಾಗಿ ಮೂರು ನಾಲ್ಕು ದಿನಗಳ ನಂತರ, ನಾನು ಹಿರಿಯಡಕದ ಹಿರಿಯ ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದಾಗ ಹಾದಿಯಲ್ಲಿ ನನಗೆ ಎದುರಾಗಿ ಕಣ್ಣೀರು ಸುರಿಸಿದ್ದ ಕೆಂಪಿ, ಆಗಾಗ ನನಗೆ ನೆನಪಾಗುವುದರಲ್ಲಿ ಅರ್ಥವಿಲ್ಲವೇ ಹೇಳಿ.

(ಕಾಗುಣಿತಗಳ ತಪ್ಪುಗಳು ಇರುವ ಸಾಧ್ಯತೆ ಇದೆ. ದಯವಿಟ್ಟು ತಿಳಿಸಿ ಉಪಕರಿಸಿ)


ಆಮೇಲೆ ಹೆಸರಿಡೋಣ! *** ಭಾಗ -೨ ***

19 ಫೆಬ್ರ 13

 

ಅಂದು 1980ರ ಆಗಷ್ಟ್ ತಿಂಗಳ 28ರ ದಿನಾಂಕವಿದ್ದಿರಬೇಕು. ಮುಂಜಾನೆ ಏಳೂವರೆ-ಎಂಟರ ಸಮಯ ಬೆಂಗಳೂರಿನ ಕಬ್ಬನ್ ರಸ್ತೆಯಲ್ಲಿರುವ “ಏರ್ಮೆನ್ ಸೆಲೆಕ್ಷನ್ ಸೆಂಟರ್” ನ ಮುಂದೆ ನೂರಾರು ಮಂದಿ ಹಾಜರಿದ್ದೆವು. ನಾನು ಮುಂಬಯಿಯಿಂದ ಬಂದಿದ್ದೆ. ಕರ್ನಾಟಕದ ಮೂಲೆ ಮೂಲೆಗಳಿಂದ ನನ್ನಂಥ ಇತರ ಹುಡುಗರು ಬಂದಿದ್ದರು. ಅಲ್ಲಿ ಎಲ್ಲರದೂ ಅಪರಿಚಿತ ಮುಖಗಳೇ. ಎದೆಯೊಳಗೆ ಒಂಥರಾ ಭಯ.  ಏನಾಗುತ್ತೋ ಏನೋ ಅನ್ನುವ ಆತಂಕ. ಸಾಲಾಗಿ ನಿಲ್ಲುವಂತೆ ಆದೇಶ ಬಂತು. ಸಾಲಿನಲ್ಲಿ ನಿಂತಿದ್ದವರ ಮೇಲೆ ಕಣ್ಣು ಹಾಯಿಸಿದಾಗ ನನ್ನ ಪ್ರಾಥಮಿಕ ಶಾಲೆಯ ಸಹಪಾಠಿ ಕಾಣಿಸಿದ್ದ. ಓಹ್ ಒಬ್ಬನಾದರೂ ಇದ್ದಾನಲ್ಲಾ ಅನ್ನುವ ಸಮಾಧಾನ ಆಯ್ತು.

ಉಪೇಂದ್ರ ಮತ್ತು ನಾನು ಹಿರಿಯಡಕದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, 1972 ರಿಂದ 1974ರವರೆಗೆ, ಆರು ಮತ್ತು ಏಳನೇ ತರಗತಿಗಳಲ್ಲಿ ಒಟ್ಟಿಗೇ ಕಲಿಯುತ್ತಿದ್ದವರು. ಅಂದು ಆತನೂ ವಾಯುಸೇನೆಯ ಕದತಟ್ಟಲು ಬಂದು ನಿಂತಿದ್ದ. ಮುಂದಿನ ಎರಡು ದಿನಗಳಲ್ಲಿ, ದೈಹಿಕ ಪರೀಕ್ಷೆಗಳು, ಲಿಖಿತ ಪರೀಕ್ಷೆಗಳು ಹಾಗೂ ಸಂದರ್ಶನಗಳು ನಡೆದವು. ನನಗಿಂತ ಮುಂದಿದ್ದ ಆತನ ಆಯ್ಕೆ “ಮೆಕ್ಯಾನಿಕಲ್ ಗ್ರೂಫ್” ನಲ್ಲಿ ಆಗಿತ್ತು. ಹಾಗಾಗಿ ನಾನು ಸಂದರ್ಶನಕ್ಕೆ ಹೋದಾಗ, ನನಗೂ “ಮೆಕ್ಯಾನಿಕಲ್ ಗ್ರೂಪ್” ಕೊಡಿ ಎಂದು ಬೇಡಿಕೆ ಸಲ್ಲಿಸಿದ್ದೆ. ಈರ್ವರೂ ಜೊತೆಜೊತೆಗೆ ಒಂದೇ ಕೇಂದ್ರದಲ್ಲಿ ತರಬೇತಿ ಪಡೆಯಬಹುದು ಅನ್ನುವ ದೂರಾಲೋಚನೆ. ಆದರೆ ವಾಯುಸೇನೆಯ ಅಧಿಕಾರಿಗೆ ಅದು ಸರಿಕಾಣಲಿಲ್ಲ. ಲಿಖಿತ ಪರೀಕ್ಷೆಗಳಲ್ಲಿ ನಾನು ಪಡೆದಿದ್ದ ಅಂಕಗಳನ್ನು ಪರಿಶೀಲಿಸಿ, “ಉಹೂಂ ನಿನ್ನನ್ನು ಇಲೆಕ್ಟಾನಿಕ್ ಗ್ರೂಪಿಗೆ ಸೇರಿಸುತ್ತಿದ್ದೇನೆ” ಅಂತ ಅಂದರು. ಮನಸ್ಸಿಗೆ ಬೇಸರವಾಗಿತ್ತು.

ಆಯ್ಕೆಯ ಪ್ರಕ್ರಿಯೆಗಳು ಮುಗಿದ ಮೇಲೆ ನಾನು ಮುಂಬಯಿಗೆ ವಾಪಸ್ಸಾದರೆ ಆತ ನಮ್ಮೂರಿಗೆ ತೆರಳಿದ್ದ. ಮುಂದೆ ನಾಲ್ಕು ತಿಂಗಳ ನಂತರ ಅಂದರೆ 1981ರ ಜನವರಿ ತಿಂಗಳ ಒಂದನೇ ತಾರೀಕಿನಂದು ಬೆಂಗಳೂರಿನ ಅದೇ ಕಛೇರಿಯಲ್ಲಿ ಹಾಜರಿರಬೇಕೆಂದು ಕರೆ ಬಂದಿತ್ತು. ಅಲ್ಲಿನ ಔಪಚಾರಿಕತೆಗಳನ್ನು ಮುಗಿಸಿ ಜಾಲಹಳ್ಳಿಯ ತರಬೇತಿ ಕೇಂದ್ರಕ್ಕೆ ಕಳುಹಿಸಿದ್ದರು. ಉಪೇಂದ್ರ ಮದರಾಸಿನ ತಾಂಬ್ರಂ ತರಬೇತಿ ಕೇಂದ್ರಕ್ಕೆ ಕಳುಹಿಸಲ್ಪಟ್ಟಿದ್ದ.

೧೫ ತಿಂಗಳ ತರಬೇತಿ ಮುಗಿಸಿ ನಾನು ಪ್ಂಜಾಬ್ ರಾಜ್ಯದ ಪಠಾಣಕೋಟ್‍ಗೆ ಹೋಗಿದ್ದರೆ ಆತ ಹರ್ಯಾಣಾ ರಾಜ್ಯದ ಅಂಬಾಲಾ  ವಾಯುನೆಲೆಯನ್ನು ಸೇರಿದ್ದ. ಲ್ಲಿ ಒಂದೂವರೆ ವರುಷ ಸೇವೆ ಸಲ್ಲಿಸಿ ನಾನು ಮತ್ತೆ ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ತರಬೇತಿ ಕೇಂದ್ರಕ್ಕೆ ಬಂದಿದ್ದೆ. ಅಲ್ಲಿ ಮತ್ತೆ ಒಂದು ವರುಷದ ತರಬೇತಿ ಮುಂದುವರೆದಿತ್ತು. 1985ರ ಮೇ ತಿಂಗಳಲ್ಲಿ ಅಂಬಾಲಾದ ವಾಯುನೆಲೆಗೆ ಹೋದಾಗ, ಉಪೇಂದ್ರ ತಾನೂ ಹೆಚ್ಚಿನ ಪರಬೇತಿ ಪಡೆದು ವಾಪಸಾಗಿದ್ದ.

ನಮ್ಮನ್ನು ಅಂದು ಬೇರೆ ಬೇರೆ ಗ್ರೂಪುಗಳಿಗೆ ಸೇರಿಸಿದುದರಿಂದ ನಮಗೆ  ಪ್ರಯೋಜನವೇ ಆಗಿತ್ತು. ಒಂದೇ ಗ್ರೂಪಿನಲ್ಲಿ ಒಟ್ಟಿಗೇ ತರಬೇತಿ ಪಡೆದಿದ್ದರೆ, ಒಂದೇ ಕಡೆ ಸೇವೆ ಸಲ್ಲಿಸುವ ಅವಕಾಶ ಸಿಗುವುದು ಕಷ್ಟವಿತ್ತು. ಅಲ್ಲಿದ್ದ ನಾಲ್ಕೈದು ವರುಷ ನಾವು, ನಮ್ಮ ಪ್ರಾಥಮಿಕ ಶಾಲೆಯ ಸ್ನೇಹ ಬಂಧವನ್ನು ಮುಂದುವರಿಸಿಕೊಂಡು ಹೋದೆವು. ಇನ್ನೂ ಭದ್ರಗೊಳಿಸಿಕೊಂಡೆವು. ನಮ್ಮ ಚಿಂತನೆಗಳಲ್ಲಿ ಹೆಚ್ಚಿನ ಸಾಮ್ಯ ಹೊಂದಿರುವ ನಾವು, ಒಂದು ರೀತಿಯಲ್ಲಿ ಸಹಮನಸ್ಕರಾಗಿದ್ದರೂ, ನಾನು ನುಡಿವಷ್ಟು ನೇರವಾಗಿ, ನಿಷ್ಠುರವಾಗಿ ನುಡಿಯುವವನಲ್ಲ ಉಪೇಂದ್ರ. ನಮ್ಮ ನಡುವೆ ಯಾವುದೇ ಔಪಚಾರಿಕತೆಗಳಿಗೆ ಆಸ್ಪದವಿರಲಿಲ್ಲ.

ಅಂಬಾಲಾದಲ್ಲಿ ಸೇವೆ ಸಲ್ಲಿಸುತ್ತಿದ್ದ ಸಮಯದಲ್ಲೇ ಆತನ ವಿವಾಹವಾಗಿತ್ತು. ಆತನ ಪತ್ನಿಯಾಗಿ ಬಂದಾಕೆ, ನಡೆದುಕೊಳ್ಳುತ್ತಿದ್ದ ರೀತಿಯಿಂದಾಗಿ, ನನ್ನ ಪಾಲಿಗೆ ಆಕೆ ಹೊಸಬಳಾಗಿ ಕಂಡಿರಲೇ ಇಲ್ಲ. ಬಹುಶಃ ಆತ ನನ್ನ ಬಗ್ಗೆ ಅದಾಗಲೇ ಹೇಳಿರುವ ವಿಚಾರಗಳು ಅದಕ್ಕೆ ಕಾರಣವಾಗಿರಬಹುದು. ಮುಂದೆ ನಾನು ವಿವಾಹವಾಗಲು ಊರಿಗೆ ಬಂದಿದ್ದಾಗ ಆತ ಅಲ್ಲಿಂದ ಗೋರಖಪುರಕ್ಕೆ ವರ್ಗವಾಗಿ ಹೋಗಿದ್ದ. ಅದಾಗಿ ಮೂರು ವರುಷಗಳ ನಂತರ   1992ರಲ್ಲಿ ನಾನೂ ಗೋರಖಪುರಕ್ಕೆ ತೆರಳಿದೆ. ನಮ್ಮನ್ನು ಆತನೇ ಸ್ವಾಗತಿಸಿ ತನ್ನ ಮನೆಗೆ ಕರೆದೊಯ್ದಿದ್ದ.

ವಾಯುಸೇನೆಯ ವತಿಯಿಂದ ಸಿಗುವ ಮನೆಗಳಲ್ಲಿ ಎರೆಡೆರಡು ಸಂಸಾರಗಳು ಅನ್ಯೋನ್ಯತೆಯಿಂದ ಬಾಳುವುದು ಸಾಧ್ಯವಿತ್ತು ಅನ್ನುವುದರ ಅರಿವು ಬಹುಶಃ ತಮಲ್ಲಾರಿಗೂ ಇರಲಾರದು. ಆತನಿಗೆ ಅದಾಗಲೇ ಮನೆ ದೊರೆತಿತ್ತಾದ್ದರಿಂದ ಆತನ ಜೊತೆಗೇ ನಾವೂ ಇದ್ದೆವು. ಒಂದೂವರೆ ವರುಷಗಳ ಕಾಲ ಜೊತೆಗೇ ಜೀವನ ಸಾಗಿಸಿದ್ದೆವು. ಅಲ್ಲಿಂದ ಆತ ಪೂನಾಕ್ಕೆ ವರ್ಗವಾಗಿ ಹೋದ. ಮುಂದೆ ನಾಲ್ಕು ವರ್ಷ ಕಳೆದು ನಾನು ಬೆಂಗಳೂರಿಗೆ ಬಂದಾಗ ಅತನೂ ಬೆಂಗಳೂರಿಗೆ ಬಂದಿದ್ದ. ಆತನನ್ನು ಸಂಸಾರ ಸಮೇತ ಸ್ವಾಗತಿಸಲು ಈ ಬಾರಿ ನಾವು ಕಾದಿದ್ದೆವು.

ಮೂರು ವರುಷಗಳ ಕಾಲ ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿದೆವು. ನಡುವೆ ನಾವಿಬ್ಬರೂ ಸಂತ ಜೋಸೇಫರ ಸಂಧ್ಯಾಕಾಲೇಜಿಗೆ ಸೇರಿದೆವು. ನಾನು “ಪಿಜಿಡಿಸಿಎ” ಪೂರ್ತಿಗೊಳಿಸಿದೆ. ಆತನೂ ಪ್ರೋಗ್ರಾಮಿಂಗ್ ಡಿಪ್ಲೋಮಾ ಪೂರೈಸಿದ. ಮುಂದೆ 2001ರ ಜನವರಿ ಮೂವತ್ತೊಂದರಂದು ವಾಯುಸೇನೆಗೆ ಅಂತಿಮ “ಸೆಲ್ಯೂಟ್” ಸಲ್ಲಿಸಿ ನಾವು ನಮ್ಮ ಸಮವಸ್ತ್ರವನ್ನು ಕೆಳಗಿಳಿಸಿದ್ದೆವು. ನಾಗರೀಕ ಜೀವನ ಸಾಗಿಸುವ ಬಗ್ಗೆ ಈರ್ವರಲ್ಲೂ ಉತ್ಸುಕತೆ ಇತ್ತು. ಏನಾದರೂ ಭಿನ್ನವಾದ ಉದ್ಯೋಗ ಮಾಡಬೇಕೆಂಬ ಇಚ್ಛೆ ಇಬ್ಬರಲ್ಲೂ ಇತ್ತು. ಆಗ ಈರ್ವರಲ್ಲೂ ಆಸಕ್ತಿ ಮೂಡಿಸಿದ್ದು, “ಇಂಟರ್ನೆಟ್ ಕೆಫೆ” ಯ ಉದ್ಯಮ.

ಜಂಟಿ ಪಾಲುಗಾರಿಕೆಯಲ್ಲಿ ಮಾರತಹಳ್ಳಿಯಲ್ಲಿ ಒಂದು ಅಂಗಡಿ ಬಾಡಿಗೆಗೆ ಪಡೆದು, ನೆಟ್ ಪಾಯಿಂಟ್ ಅನ್ನುವ ಇಂಟರ್ನೆಟ್ ಸರ್ವೀಸ್ ಸೆಂಟರ್ ಸ್ಥಾಪಿಸಿದೆವು. ಅಲ್ಲಿನ ವ್ಯವಹಾರ ನಮ್ಮೀರ್ವರ ಎರಡು ಸಂಸಾರಗಳನ್ನು ಸಾಗಿಸುವುದಕ್ಕೆ ಸಂಪೂರ್ಣ ಸಹಕಾರಿಯಾಗದು ಅನ್ನುವ ಅರಿವಾದಾಗ ಆತ ನೌಕರಿಗೆ ಸೇರಿಕೊಂಡ. ನಾನು ಅಲ್ಲಿಯೇ ವ್ಯವಹಾರ ನೋಡಿಕೊಳ್ಳುತ್ತಿದ್ದೆ. ಆತ ಭಾನುವಾರಗಳಂದು ಬಂದು ನನಗೆ ರಜೆ ನೀಡುತ್ತಿದ್ದ. ಆತನ ನೌಕರಿ ಚೆನ್ನಾಗಿತ್ತಾದ್ದರಿಂದ, ಹಾಗೂ ಇನ್ನಿತರ ಕಾರಣಗಳಿಂದ,  ಪಾಲುಗಾರಿಕೆಯಿಂದ ಬೇರೆಬೇರೆಯಾದೆವು. ನಮ್ಮನಡುವೆ ಮೂರು ದಶಕಗಳ ಹಿಂದೆ ಬೇರುಬಿಟ್ಟು ಭದ್ರವಾಗಿದ್ದ ನಂಬಿಕೆ ವಿಶ್ವಾಸಗಳು ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಯಕ್ಕೆ ಎಡೆಮಾಡಿಕೊಟ್ಟಿರಲಿಲ್ಲ.

ಮುಂದಿನ ಎರಡು ವರುಷ ನಾನು ಆ ವ್ಯವಹಾರವನ್ನು ನಡೆಸಿಕೊಂಡು ಬಂದೆ. 2004 ರ ಮೇ 26ರ ಮುಂಜಾನೆ ಎಂದಿನಂತೆ ಅಂಗಡಿಯ ಬಾಗಿಲು ತೆರೆಯಲು ಹೋದರೆ ಬಾಗಿಲು ತೆರೆದುಕೊಂಡೇ ಇತ್ತು. ಒಳಗಿನ ಎಲ್ಲಾ ಕಂಪ್ಯೂಟರುಗಳೂ ಕಳುವಾಗಿದ್ದವು. ಒಂದು ಕ್ಷಣಕ್ಕೆ ಏನು ಮಾಡುವುದೆಂದೇ ತೋಚಲಿಲ್ಲ. ಪೋಲೀಸರಿಗೆ ದೂರು ಕೊಟ್ಟದ್ದಾಯ್ತು. ಉಪೇಂದ್ರನಿಗೂ ಕರೆ ಮಾಡಿ ತಿಳಿಸಿದೆ. ಕಛೇರಿಯಿಂದ ಕೂಡಲೇ ಬಂದ. ಬಂದು ಮಾಡುವುದಾದರೂ ಏನಿತ್ತು. ಸಾಂತ್ವನದ ಮಾತನಾಡುವುದು ತೀರ ಔಪಚಾರಿಕತೆ ಅನ್ನುವ ಅರಿವು ನನಗಿದ್ದಂತೆ ಆತನಿಗೂ ಇತ್ತು. ಒಂದೆರಡು ಗಂಟೆ ಜೊತೆಗಿದ್ದು ಕೆಲಸಕ್ಕೆ ಮರಳಿದ.

ಮುಂದಿನ ದಿನಗಳಲ್ಲಿ ನಾನು ನೌಕರಿಗೆ ಸೇರಿಕೊಂಡೆ.

ನಮ್ಮ ಸ್ನೇಹ ಹಿಂದಿನಂತೆಯೇ ಇಂದೂ ಇದೆ. ನಮ್ಮ ನಡುವೆ ಮಾತು ಕಡಿಮೆ. ಭೇಟಿಯಂತೂ ಆಗದೇ ವರುಷಗಳೇ ಕಳೆದಿವೆ. ಕರೆ ಮಾಡಿದರೆ, “ಹೂಂ ಹೇಳು” ಅನ್ನುವುದರಿಂದಲೇ ಸಂಭಾಷಣೆ ಶುರುವಾಗುವುದು. ಔಪಚಾರಿಕತೆ ಈಗಲೂ ಇಲ್ಲ. ನಿನ್ನೆ ಬಿಟ್ಟ ಮಾತುಕತೆ ಇಂದು ಮುಂದುವರಿಸಿದಂತೆ. ನನ್ನ ಹೆಚ್ಚಿನೆಲ್ಲ ಸ್ನೇಹಿತರ ಜೊತೆಗಿನ ಸಂಭಾಷಣೆಗಳೂ ಹೀಗೇಯೇ ಇರುತ್ತವೆ. ಆತ ನನ್ನಷ್ಟು ನಿಷ್ಟುರನಲ್ಲ. ನನ್ನಷ್ಟು ಭಾವುಕಜೀವಿಯೂ ಅಲ್ಲ.

ನಮ್ಮ ನಡುವೆ ಸಂಪರ್ಕ ಇಲ್ಲವೆನ್ನಲಾಗದು, ಇದೆ. ಇದೆಯನ್ನಲಾಗದು, ಮಾತುಕತೆ ಆಗದೇ ವರುಷ ಕಳೆದಿದೆ ಆಗಲೇ. ಆದರೂ ಆತ, ಆತನ ಪತ್ನಿ, ಇಬ್ಬರು ಹೆಣ್ಣುಮಕ್ಕಳ ಪಾಲಿಗೆ ನಾನೆಂದೂ ದೂರವಾಗಿಲ್ಲ. ಅಂದು ಆ ಮಕ್ಕಳಿಗೆ ಚುರೇಚ್ ಮಾಮನಾಗಿದ್ದ ನಾನು ಇಂದು ಸುರೇಶ್ ಮಾಮನಾಗಿದ್ದೇನೆ ಅಷ್ಟೇ ವ್ಯತ್ಯಾಸ. ಅವರು ನನ್ನ ಮನದಿಂದ ದೂರವಾಗಿಲ್ಲ. ಆಗುವುದೂ ಇಲ್ಲ. ಮಾತಾಡಲು ವಿಷಯ ಇಲ್ಲ. ಆದರೆ ಮಾತಾಡಿಲ್ಲ ಅಂತ ಅನಿಸುವುದೂ ಇಲ್ಲ. ಬಹುಶಃ ನಮ್ಮ ನಡುವೆ, ಸಂಭಾಷಣೆ ನಮಗರಿವಿಲ್ಲದೇ ನಡೆಯುತ್ತಲೇ ಇರುತ್ತದೆ, ಮೌನವಾಗಿ. ಯುವ ಪ್ರೇಮಿಗಳ ನಡುವೆ ಅನವರತ ನಡೆಯುವಂತೆ.

ಇಂತಹ ಬಾಂಧವ್ಯವನ್ನು ಕೊನೆಗೊಳಿಸುವುದಾದರೂ ಹೇಗೆ? ಏಕೆ? ಛೇ…!

ಸ್ನೇಹವನ್ನು ಅರಿಯದವರು ಸ್ನೇಹಕ್ಕೆ ಬೆಲೆಕಟ್ಟಲು ಅಶಕ್ತರಾಗಿರಬಹುದು. ಸ್ನೇಹಕ್ಕೆ ಬೆಲೆಕಟ್ಟಲಾಗದು ಅನ್ನುವುದರ ಅರಿವು ಸ್ನೇಹ ಮಾಡಿದವರಿಗಷ್ಟೇ ಗೊತ್ತು.

(ಮುಂದುವರಿಸಬೇಕಿದೆ)

(ಮುಂದೆ ಯಾರು ನೆನಪಾದಾರು? ನೋಡೋಣ, ಅಲ್ಲವೇ?)

(ತಪ್ಪುಗಳಿದ್ದರೆ ತಿಳಿಸಿ ಉಪಕರಿಸಿ)


ಆಮೇಲೆ ಹೆಸರಿಡೋಣ!

08 ಫೆಬ್ರ 13
“ಈ ಸ್ನೇಹ, ದೋಸ್ತಿ, ಬಾಂಧವ್ಯ ಅನ್ನೋದೆಲ್ಲಾ ಬರೀ ಬಾಯಿಮಾತು ಕಣೋ. ಇಲ್ಲಿ ಯಾರಿಗೆ ಯಾರೂ ಇಲ್ಲ. ನಾನಂತೂ ಯಾರನ್ನೂ ನಂಬುವುದಿಲ್ಲ. ಎಲ್ಲರದೂ ಮುಖವಾಡವೇ. ಎಲ್ಲಾ ಸ್ನೇಹದ ಹಿಂದೆ ಸ್ವಾರ್ಥ ಇದ್ದೇ ಇದೆ. ಸ್ವಾರ್ಥ ಇಲ್ಲದೇ ಯಾರೂ ಯಾರಿಗೂ ಆಪ್ತರಾಗುವುದಿಲ್ಲ. ತಮಗೆ ಯಾವುದೇ ರೀತಿಯ ಲಾಭ ಮಾಡಲಾಗದವರ ಸ್ನೇಹ ಯಾರಿಗೂ ಬೇಡ. ಅಂಥವರನ್ನು ಯಾರೂ ಕೇಳುವವರಿಲ್ಲ. ನಿನಗಿನ್ನೂ ಭ್ರಮೆ ಬಿಟ್ಟಿಲ್ಲ. ಈ ಸ್ನೇಹ, ಬಾಂಧವ್ಯ ಅಂತ ನಿನ್ನ ಜೀವನವನ್ನು ಹಾಳು ಮಾಡಿಕೊಳ್ತಾ … ಇದ್ದೀಯ. ನಿನ್ನ ಬಾಳಿನ ಹೆಚ್ಚಿನೆಲ್ಲಾ ಸಮಯವನ್ನು ಅನ್ಯರಿಗಾಗಿ ಕಳೆಯುವ ನಿನ್ನ ಈ ಹುಚ್ಚುತನದಿಂದಾಗಿ ನೀನು ನಿನ್ನ ಜೀವನದಿಂದ ದೂರವಾಗುತ್ತಾ ಇದ್ದೀಯ. ಅದರ ಅರಿವು ನಿನಗೆ ಯಾಕೆ ಆಗ್ತಾ ಇಲ್ಲ? ನಿನ್ನ ಬಾಳಿನ ಅರ್ಥ ಏನು? ಉದ್ದೇಶ ಏನು? ಬೇರೆಯವರ ಗುಂಗಿನಲ್ಲೇ ಬಾಳುವುದು ನೀನು ನಿನ್ನ ಬಾಳಿಗೆ ನೀಡುತ್ತಿರುವ ಅರ್ಥವೇ? ನೋಡು, ಮುಂದೊಂದು ದಿನ ನೀನೂ ಪಶ್ಚಾತ್ತಾಪ ಪಡುವೆ. ಈಗಲೇ ನನ್ನ ಮಾತು ಕೇಳಿ ಈ ಭ್ರಮೆಯಿಂದ ಹೊರಬಂದು ಬಿಡು. ನಿನ್ನ ಜೀವನವನ್ನು ಬಿಂದಾಸ್ ಆಗಿ ಜೀವಿಸುವುದನ್ನು ಅಭ್ಯಾಸಮಾಡಿಕೊಂಡು ಬಿಡು. ಭಾವನಾತ್ಮಕ ಸಂಬಂಧಗಳ ಬಂಧನದಲ್ಲಿ ಸಿಲುಕಿಕೊಂಡು ನರಳುತ್ತಾ ಇರಬೇಡ”.ಅಬ್ಬಾ… ಎಂಥಾ ಮಾತುಗಳು! ಇವತ್ಯಾಕೋ ಅವನು ವಿಪರೀತ ಗಂಭೀರನಾಗಿಯೇ ಸಲಹೆ ನೀಡುತ್ತಿದ್ದ. ಉಪದೇಶ ಮಾಡುತ್ತಿದ್ದ. ನಾನು ಮೌನವಾಗಿ ಕೇಳುತ್ತಲೇ ಇದ್ದೆ. ಯಾವಾಗಲೂ ಹಾಗೆಯೇ. ಆತ ಆವೇಶಭರಿತನಾಗಿ ಮಾತನಾಡಲು ಆರಂಭಿಸಿದನಾದರೆ, ನಡುವೆ ಉತ್ತರಿಸುವ ಧೈರ್ಯ ನನ್ನಲ್ಲಿರುವುದಿಲ್ಲ. ಮಾತನಾಡಲು ಬಿಡುವುದೂ ಇಲ್ಲ ಆತ. ಮೊದಲು ಬಾಯಿಮುಚ್ಚಿಕೊಂಡು ನಾನು ಹೇಳುವುದನ್ನು ಕೇಳು ಅಂತಾನೆ. ಅದು ನನಗೆ ರೂಢಿಯಾಗಿದೆ. ಬಡಬಡನೇ ಮಾತನಾಡಿದ ಆತ, ಬಟ್ಟೆ ತೊಟ್ಟುಕೊಂಡು ತಯಾರಾಗಿ ಹೊರಗೆ ಹೊರಟುಹೋದ.

ಆತ ಅತ್ತ ಹೋದ. ನಾನು ನನ್ನೊಳಗೆ ಇಳಿದೆ. ಅಂತರ್ಮುಖಿಯಾದೆ. ನನ್ನನ್ನೇ ನಾನು ಪ್ರಶ್ನಿಸಲು ಆರಂಭಿಸಿದೆ. ಅನ್ವೇಷಿಸಲು ಆರಂಭಿಸಿದೆ. ಹೌದಾಗಿರಬಹುದೇ? ಆತ ಹೇಳಿದ್ದೆಲ್ಲಾ ನಿಜವಾಗಿರಬಹುದೇ? ಈಗ ನನ್ನ ಜೊತೆಗಿರುವ ಸ್ನೇಹಿತರೆಲ್ಲಾ ಮುಂದೊಂದು ದಿನ ನನ್ನನ್ನು ತೊರೆದುಬಿಡಬಹುದೇ? ನಾನು ಎಲ್ಲರಿಂದಲೂ ತಿರಸ್ಕೃತನಾಗಿ ಬಾಳುವ ದಿನವೂ ಬರಬಹುದೇ? ಅಷ್ಟು ಸುಲಭವಾಗಿ ಆತನ ಅರಿವಿಗೆ ಬರುವ ಮಾತುಗಳು ಹಾಗೂ ವಿಷಯಗಳು ನನ್ನ ಅರಿವಿಗೆ ಯಾಕೆ ಬರುವುದಿಲ್ಲ? ಪಶ್ಚಾತ್ತಾಪ ಪಡುವ ದಿನಗಳು ಬರಬಹುದು ಅಂತಾನಲ್ಲಾ. ಹಾಗಿದ್ದರೆ, ನಾನು ಈಗಿಂದೀಗಲೇ ಜಾಗರೂಕನಾಗಬೇಕಲ್ಲವೇ?

ನಾನು ನನಗರಿವಿಲ್ಲದೇ ನನ್ನ ಬಾಳಿನ ಅವಿಭಾಜ್ಯ ಅಂಗವಾಗಿ ಹೋಗಿರುವ ನನ್ನ ಆಪ್ತ ಸ್ನೇಹಿತರ ಬಗ್ಗೆ ಯೋಚಿಸಲು ಆರಂಭಿಸಿದೆ. ಒಬ್ಬೊಬ್ಬರನ್ನಾಗಿ ನೆನಪಿಸಿಕೊಳ್ಳಲು ತೊಡಗಿದೆ.

ಮೊದಲು ನೆನಪಾಗಿದ್ದು ಮೇರಿ ಜೋಸೆಫ್.

ಈಗ ಕೇರಳದ ಅದ್ಯಾವುದೋ ಊರಿನಲ್ಲಿರುವ ಆಕೆ ಹದಿನೈದು ದಿನಕ್ಕೊಮ್ಮೆಯಾದರೂ ಕರೆಮಾಡಿ ವಿಚಾರಿಸುತ್ತಾರೆ. ನಾನೂ ಆಕೆಗೆ ಕರೆ ಮಾಡುತ್ತಿರುತ್ತೇನೆ. ವಿಷಯ ಏನೂ ಇರುವುದಿಲ್ಲ. ಆದರೂ ಕಾಲು-ಅರ್ಧ ಘಂಟೆ ಮಾತಾಡುತ್ತೇವೆ. ಬೆಂಗಳೂರಿನಲ್ಲಿ ನಮ್ಮ ಮನೆಯಿಂದ ಎರಡು ಬೀದಿಗಳಾಚೆ ವಾಸವಾಗಿದ್ದ ಆಕೆಯ ಭೇಟಿ ಆಗಿದ್ದೇ ಒಂದು ವಿಶೇಷ ರೀತಿಯಲ್ಲಿ, ವಿಶೇಷ ಘಟನೆಯಾಗಿ. ಅಂದು ಶುಕ್ರವಾರ, ೯ ನವಂಬರ್ ೨೦೦೭. ಮುಂಜಾನೆ ಐದೂಕಾಲರ ಸಮಯ. ನಾನು ವಾಯುವಿಹಾರಕ್ಕೆಂದು ಹೊರಟಿದ್ದೆ. ಮನೆಬಾಗಿಲಿಗೆ ಬೀಗ ಹಾಕಿ ಬೀದಿಗಿಳಿದಾಗ, ಒಂಟಿ ಹೆಂಗಸೊಂದು ಭಾರವಾದ ಬ್ಯಾಗ್ ಹಿಡಿದುಕೊಂಡು ಬರುತ್ತಿದ್ದುದನ್ನು ಕಂಡೆ. ಕೈಯಿಂದ ಕೈಯಿಗೆ ಬದಲಾಯಿಸುತ್ತಾ ಕಷ್ಟ ಪಡುತ್ತಿದ್ದ ಆಕೆಯಿಂದ ಆ ಬ್ಯಾಗ್ ಅನ್ನು ತೆಗೆದುಕೊಂಡು ಬಸ್ ನಿಲ್ದಾಣದವರೆಗೆ ಜೊತೆಯಲ್ಲೇ ನಡೆದೆ. ಚೆನ್ನೈಗೆ ತೆರಳಬೇಕಿದ್ದ ಆಕೆಗೆ ಶುಭ ಹಾರೈಸಿ ಕಳುಹಿಸಿದ್ದೆ. ಆ ನಡುವಿನ ೧೫ ನಿಮಿಷಗಳ ನಮ್ಮ ಸೀಮಿತ ಮಾತುಕತೆಯಲ್ಲಿ, ಆಕೆಯ ಮೊಬೈಲ್ ನಂಬರ್ ನನ್ನ ಮೊಬೈಲಿನಲ್ಲೂ ನನ್ನ ಮೊಬೈಲ್ ನಂಬರ್ ಆಕೆಯ ಮೊಬೈಲಿನಲ್ಲೂ ದಾಖಲಾಗಿಬಿಟ್ಟಿದ್ದವು. ಔಪಚಾರಿಕವಾಗಿ, ಜಾಗ್ರತೆಯಾಗಿ ಹೋಗಿ. ಪರವೂರಿನಲ್ಲಿ ಎಚ್ಚರದಿಂದಿರಿ. ಚೆನ್ನೈಯನ್ನು ತಲುಪಿದ ಕೂಡಲೇ ಕರೆಮಾಡಿ ತಿಳಿಸಿ ಅಂದಿದ್ದೆ. ಅಪರಾಹ್ನ ಎರಡೂವರೆಗ ಚೆನ್ನೈ ತಲುಪಿದ ಆಕೆ ಕರೆ ಮಾಡಿದ್ದೂ ಅಲ್ಲದೇ, ಅಲ್ಲಿರುವಷ್ಟು ದಿನಗಳಲ್ಲಿ ಪ್ರತಿ ದಿನ ಕರೆ ಮಾಡುತ್ತಿದ್ದರು. ಒಂದು ವಾರ ಬಿಟ್ಟು ಬೆಂಗಳೂರಿಗೆ ಮರಳಿದ ಮೇಲೂ ನಮ್ಮ ನಡುವಣ ಸಂಪರ್ಕ ಮುಂದುವರೆದಿತ್ತು. ಯಾವುದೇ ಅರ್ಥ, ಅಡ್ಡ ಹೆಸರು ಇಲ್ಲದೇ ಮುಂದುವರಿದ ಆ ಸ್ನೇಹ ಮುಂದಿನ ಮೂರು ವರುಷಗಳ ಕಾಲ ನಮ್ಮನ್ನು ಇನ್ನೂ ಹತ್ತಿರಕ್ಕೆ ತಂದಿತ್ತು.

ಅವಿವಾಹಿತೆಯಾಗಿದ್ದ ಹಾಗೂ ಒಂಟಿ ಬಾಳು ನಡೆಸುತ್ತಿದ್ದ ಆಕೆಗೆ ಅಗತ್ಯವಿದ್ದಾಗಲೆಲ್ಲಾ ನನ್ನಿಂದಾದ ಸಹಾಯ ಮಾಡುತ್ತಾ ಬಂದಿದ್ದೆ. ಸ್ವಂತ ಮನೆಯನ್ನು ಹೊಂದಿ, ಆರ್ಥಿಕವಾಗಿ ಸದೃಢಳಾಗಿದ್ದ ಆಕೆಗೆ ಹಣದ ಸಹಾಯ ಬೇಕಾಗಿಯೇ ಇರಲಿಲ್ಲ. ಆದರೆ, ಒಂಟಿಯಾಗಿದ್ದ ಆಕೆ, ಬ್ಯಾಂಕಿಗೆ ಹೋಗುವಾಗ, ಅಂಚೆ ಕಛೇರಿಗೆ ಹೋಗುವಾಗ, ಬಿಬಿಯಂಪಿ ಕಛೇರಿಗೆ ಹೋಗುವಾಗ ನಾನು ಜೊತೆಗಿದ್ದು ಧೈರ್ಯ ತುಂಬಿದ್ದೆ. ಅಗತ್ಯ ಸಹಾಯ ಮಾಡಿದ್ದೆ. ಆಕೆಯ ಮನದ ದುಗುಡಗಳನ್ನು ಆಕೆ ಒಮ್ಮೊಮ್ಮೆ ಹಂಚಿಕೊಳ್ಳಲು ಬಯಸಿದಾಗ ಆಲಿಸುವ ಕಿವಿಯಾಗಿದ್ದೆ. ನನ್ನ ಬಾಳಿನ ಕಿಂಚಿತ್ ಸಮಯವನ್ನು ಆಕೆಗಾಗಿ ಮೀಸಲಿರಿಸಿದ್ದೆ. ದಿನಕ್ಕೆ ಎರಡು ಬಾರಿ ಚರ್ಚಿಗೆ ನಡೆದುಕೊಂಡೇ ಹೋಗಿ ಬರುತ್ತಿದ್ದ ಆಕೆ, ಉಳಿದ ಸಮಯದಲ್ಲಿ ಇಲ್ಲಿನ ತನ್ನ ಸ್ನೇಹಿತರ ಭೇಟಿ ಮಾಡುತ್ತಿದ್ದರು. ಅಥವಾ ಮನೆಯಲ್ಲಿ ಕೂತು ಓದುತ್ತಿದ್ದರು. ಕ್ರಿಕೆಟ್ ಆಟ ವೀಕ್ಷಿಸುತ್ತಿದ್ದರು.

ಆಗಾಗ ಆಕೆಗೆ ನನ್ನೊಂದಿಗೆ ಮಾತನಾಡುವ ಅಗತ್ಯ ಬೀಳುತ್ತಿತ್ತು. ಅಂತೆಯೇ, ನನಗೂ ಅಕೆಯೊಂದಿಗಿನ ಮಾತುಕತೆ ರೂಢಿಯಾಗಿಬಿಟ್ಟಿತ್ತು. ಭೇಟಿ ಕಡಿಮೆಯಾಗಿದ್ದರೂ ಸಂಪರ್ಕ ಸದಾ ಇರುತ್ತಿತ್ತು. ಎರಡು ವರುಷಗಳ ನಂತರ ಆಕೆಯ ಇಲ್ಲಿನ ಮನೆಯನ್ನು ಮಾರಾಟಮಾಡುವಾಗಲೂ ಸಹಕರಿಸಿದ್ದೆ. ನಂತರ ಆಕೆ ಬೆಂಗಳೂರನ್ನು ಬಿಟ್ಟು, ತನ್ನ ತವರೂರಾದ ಕೇರಳಕ್ಕೆ ಹೊರಟು ನಿಂತಾಗ, ಅಕೆಯ ಕಣ್ಣಂಚಿನಿಂದ ಅನಾಯಾಸವಾಗಿ ಜಾರುತ್ತಿದ್ದ ಕಣ್ಣೀರ ಹನಿಗಳು ನನ್ನಲ್ಲಿ ಸಾರ್ಥಕ ಹಾಗೂ ಧನ್ಯತಾ ಭಾವ ಮೂಡಿಸಿದ್ದು ಸುಳ್ಳಲ್ಲ. ಆಕೆ ಕೇರಳಕ್ಕೆ ತೆರಳಿ ಈಗಾಗಲೇ ಮೂರು ವರುಷಗಳಾಗಿವೆ. ಇನ್ನೂ ಆಕೆಯ ಕರೆಗಳು ಬರುತ್ತಿರುತ್ತವೆ. ಕಳೆದ ಅಕ್ಟೋಬರ್ ನವಂಬರ್ ತಿಂಗಳ ತನಕ, ಐದಾರು ವರುಷಗಳಿಂದ, ನಾನು ರವಾನಿಸುತ್ತಿದ್ದ ಸುಪ್ರಭಾತದ ಸಂದೇಶಗಳನ್ನು ಮೆಚ್ಚಿ ಕೊಂಡಾಡುತ್ತಿದ್ದವರು ಅವರು. ಎಲ್ಲವನ್ನೂ ಒಂದು ಪುಸ್ತಕದಲ್ಲಿ ಬರೆದಿಟ್ಟುಕೊಳ್ಳುತ್ತಿದ್ದೇನೆ ಅನ್ನುತ್ತಿದ್ದ ಆಕೆಗೆ, ಮುಂದೆ ಅವುಗಳನ್ನು ಓದುವವರು ಯಾರು ಎಂಬುದು ತಿಳಿದಿಲ್ಲ.

ಆಕೆಗೆ ಆಗಲೇ ಎಪ್ಪತ್ತು ವರುಷಗಳಿಗೂ ಮೀರಿ ವಯಸ್ಸಾಗಿದೆ. ಮುಂದೊಂದು ದಿನ ಆಕೆಯಿಂದ ಬರುವ ಕರೆಗಳು ನಿಂತು ಹೋದರೆ ಅಥವಾ ನಾನು ಕರೆ ಮಾಡಿದಾಗ ಒಂದು ದಿನ ಅತ್ತಲಿಂದ ಉತ್ತರ ಸಿಗದೇ ಹೋದರೆ, ಕಾರಣ ತಿಳಿಸುವವರು ಯಾರೂ ಇಲ್ಲ. ಆಗ ನಾನಾಗಿಯೇ ಅರ್ಥೈಸಿಕೊಳ್ಳಬೇಕೇನೋ.

ಹಿಂದಿನ ಅದ್ಯಾವುದೋ ಜನ್ಮದಲ್ಲಿ, ಯಾವುದೋ ರೂಪದಲ್ಲಿ ಇದ್ದು, ಉಳಿದು ಹೋಗಿದ್ದ ಬಾಂಧವ್ಯದ ಕೊಂಡಿ, ಇಂದು ಈ ಜನುಮದಲ್ಲಿ ಮರುಜೋಡಣೆಗೊಂಡಿತ್ತು. ಆ ಬಾಂಧವ್ಯ ಸ್ವಲ್ಪ ಕಾಲ, ಹೀಗೆ ಈ ರೂಪದಲ್ಲಿ ಮುಂದುವರಿದಿದೆ ಅಷ್ಟೇ. ಈ ಬಾಂಧವ್ಯದಲ್ಲಿ ಯಾವ ಸ್ವಾರ್ಥವಿತ್ತು? ಯಾವ ಸ್ವಾರ್ಥವಿದೆ? ಈತನ ಮಾತುಗಳನ್ನು ಒಪ್ಪಿಕೊಂಡು ಈ ಸ್ನೇಹವನ್ನು ಒಮ್ಮಿಂದೊಮ್ಮೆಗೇ ಮುರಿದುಬಿಡಲೇ? ಆಕೆಗೆ ಯಾವ ಕಾರಣ ನೀಡಲಿ?
****
(ಮುಂದುವರಿಸಬೇಕಿದೆ)
(ಮುಂದೆ ಯಾರು ನೆನಪಾದಾರು? ನೋಡೋಣ, ಅಲ್ಲವೇ?)

(ತಪ್ಪುಗಳಿದ್ದರೆ ತಿಳಿಸಿ ಉಪಕರಿಸಿ)


ಪರಾವಲಂಬನೆ!

22 ಜುಲೈ 12

ಅಪ್ಪಯ್ಯ ಹೇಳಿದ್ದ ಕತೆ – ೦೬

ಒಂದು ಊರಿನಲ್ಲಿ ಒಬ್ಬರು ಆಯುರ್ವೇದ ವೈದ್ಯರಿದ್ದರು. ಅವರ ಮನೆಯ ಆವರಣದಲ್ಲೇ, ಬೀದಿಯ ಕಡೆಗೆ ತೆರೆದಿರುವ ಕೋಣೆಯಲ್ಲಿ ತಮ್ಮ ಚಿಕಿತ್ಸಾಲಯವನ್ನು ಹೊಂದಿದ್ದರು. ಮನೆಯಲ್ಲಿಯೇ ಆಯುರ್ವೇದ ಕಷಾಯಗಳ, ಲೇಹಗಳ ತಯಾರಿ ನಡೆಯುತ್ತಿತ್ತು. ಅವರ ಈ ಎಲ್ಲಾ ಕೆಲಸಗಳಲ್ಲಿ ಹಾಗೂ ಮನೆಯ ಇನ್ನಿತರ ಕೆಲಸಗಳಲ್ಲಿ ಅವರಿಗೆ ಸದಾ ಸಹಕಾರಿಯಾಗಿ ಇರುತ್ತಿದ್ದವನು ಆ ವೈದ್ಯರ ಚಿಕ್ಕಮ್ಮನ ಮಗ. ವಯಸ್ಸಿನಲ್ಲಿ ಹತ್ತು ಹನ್ನೆರಡು ವರುಷ ಕಿರಿಯನಾದ ಆತ ಎಲ್ಲದರಲ್ಲೂ ನಿಸ್ಸೀಮ. ಚಿಕಿತ್ಸಾಲಯದ ಕೆಲಸವಾಗಲೀ, ಮನೆಯೊಳಗಿನ ಹಾಗೂ ಅಡುಗೆ ಮನೆಯಲ್ಲಿನ ಕೆಲಸವಾಗಲೀ, ಏನೇ ಆದರೂ ಅಚ್ಚುಕಟ್ಟಾಗಿ ಮಾಡುವವನಾಗಿದ್ದ. ಮಾಂಸಾಹಾರಿಗಳಾದ ಅವರ ಮನೆಯಲ್ಲಿ ಮೀನು ಕೋಳಿಯ ಅಡುಗೆ ಆಗಬೇಕಾದರೂ, ತನ್ನ ಅತ್ತಿಗೆಗೆ, ಎಲ್ಲಾ ತಯಾರಿ ಮಾಡಿಕೊಡುತ್ತಿದ್ದದು ಆತನೇ. ಕೋಳಿಯ ಪುಕ್ಕಗಳನ್ನು ತೆಗೆದು, ಕತ್ತರಿಸಿ, ತಯಾರಿ ಮಾಡಿಕೊಡುವುದೂ ಆತನ ಕೆಲಸವಾಗಿತ್ತು. ತನ್ನ ಕೆಲಸ ಕಾರ್ಯಗಳಿಂದ ತನ್ನ ಅಣ್ಣನ ಮೆಚ್ಚುಗೆಗೂ ಪಾತ್ರನಾಗಿದ್ದ. ಎಲ್ಲದಕ್ಕೂ ಮಿಗಿಲಾಗಿ ಈರ್ವರಲ್ಲೂ ವಿಮರೀತ ಹಾಸ್ಯ ಪ್ರಜ್ಞೆ ಇತ್ತು. ಅದು ಅವರೀರ್ವರನ್ನು ಯಾವುದೇ ಭಿನ್ನಭಿಪ್ರಾಯಗಳಿಗೆ ಆಸ್ಪದ ಮಾಡಿಕೊಡದಂತೆ ಆಪ್ತ ಬಂಧದಲ್ಲಿ ಕಟ್ಟಿಹಾಕಿದಂತಿತ್ತು.

ಆದರೆ, ಒಂದು ವಿಷಯ ಮಾತ್ರ ತಮ್ಮನ ಮನಸ್ಸನ್ನು ಯಾವಾಗಲೂ ಕೊರೆಯುತ್ತಿತ್ತು. “ನನ್ನ ಈ ಅಣ್ಣ, ಎಲ್ಲದಕ್ಕೂ ನನ್ನನ್ನೇ ಅವಲಂಬಿಸಿರುತ್ತಾನಲ್ಲಾ? ನಾಳೆ ನಾನು ವಿವಾಹವಾಗಿ, ಬೇರೆ ಮನೆಮಾಡಿಕೊಂಡು, ಹೋದರೆ ಏನು ಮಾಡಿಯಾನು? ಈತ ಇಷ್ಟೊಂದು ಪರಾವಲಂಬಿ ಆಗಿರುವುದು ಒಳ್ಳೆಯಯದಲ್ಲ. ಈತನಿಗೆ ಒಂದು ಪಾಠ ಕಲಿಸಬೇಕು” ಎಂದು ನಿರ್ಧರಿಸುತ್ತಾನೆ.

ಒಂದು ದಿನ ಸಾಯಂಕಾಲದ ಸಮಯ ಆ ವೈದ್ಯರು ತಮ್ಮ ಚಿಕಿತ್ಸಾಲಯದಲ್ಲಿ ಕೂತಿರುವಾಗ, ಅವರ ಚಿಕಿತ್ಸಾಲಯದ ಮುಂದಿನ ಬೀದಿಯಲ್ಲಿ ಒಂದು ಕೋಳಿ ಅತ್ತಿಂದ ಇತ್ತ, ಇತ್ತಿಂದ ಅತ್ತ ತಿರುಗಾಡುತ್ತಾ ಇರುವುದನ್ನು ನೋಡುತ್ತಾರೆ. ನೋಡಿದವರು, ಮತ್ತೆ ಮತ್ತೆ ಕೋಳಿಯನ್ನೇ ನೋಡುತ್ತಾರೆ. ಕೂಡಲೇ ತನ್ನ ತಮ್ಮನನ್ನು ಕರೆದು “ಏನೋ ಇದು? “ಡ್ರೆಸ್” ಮಾಡಿದ ಕೋಳಿಯ ಫ್ಯಾಷನ್ ಪರೇಡ್ ನಡೀತಿದೆ ಇಲ್ಲಿ, ಇದು ನಿನ್ನದೇ ಕೆಲಸ ಇರಬೇಕು ಅಂತ ನನಗೆ ಚೆನ್ನಾಗಿ ಗೊತ್ತು, ಏನಿದು? ಆ ಕೋಳಿಯ ಮೈಮೇಲೆ ಒಂದು ಪುಕ್ಕವೂ ಇಲ್ಲ. ಹೀಗೆ ಜೀವಂತ ಕೋಳಿಯ ಪುಕ್ಕ ತೆಗೆದು ಬಿಟ್ಟಿರುವುದಾದರೂ ಏಕೆ?” ಎಂದು ಕೇಳುತ್ತಾರೆ.  

ಆಗ ಅವರ ತಮ್ಮ ನಗುತ್ತಾ “ಹೂಂ… ಅಣ್ಣಾ… ಅದು ನಾನೇ ಮಾಡಿರೋದು. ಒಂದು ವೇಳೆ ನಾನು ಮನೆಯಲ್ಲಿ ಇಲ್ಲದಾಗ, ನಿಮಗೆ ಕೋಳಿ ಪಲ್ಯ ತಿನ್ನಬೇಕು ಅಂತ ಮನಸ್ಸಾದರೆ, ಇರಲಿ ಅಂತ ಕೋಳಿಯ ಪುಕ್ಕಗಳನ್ನೆಲ್ಲಾ ತೆಗೆದು ತಯಾರು ಮಾಡಿ ಇಟ್ಟಿದ್ದೇನೆ. ಪುಕ್ಕಗಳನ್ನು ತೆಗೆಯುವ ಕೆಲಸವೇ ಇರುವುದಿಲ್ಲ ನಿಮಗೆ” ಅನ್ನುತ್ತಾನೆ.

ತನ್ನ ತಮ್ಮನ ಮೇಲೆ ಕಿಂಚಿತ್ತೂ ಕೋಪಗೊಳ್ಳದ ಆ ವೈದ್ಯರು ನಗುತ್ತಲೇ “ಬಹಳ ಘಾಟಿ ಕಣೋ ನೀನು, ನಿನ್ನಿಂದ ಒಳ್ಳೆಯ ಪಾಠ ಕಲಿತು ಬಿಟ್ಟೆ ನಾನು, ಸರಿ ಅತ್ತಿಗೆಗೆ ಹೇಳಿ ಕೋಳಿ ಸಾರು ಮಾಡಿಸು, ಇನ್ನು ಮುಂದೆ ನಾನೂ ಸಹಕರಿಸುತ್ತೇನೆ ಅಂತ ಹೇಳು ಅತ್ತಿಗೆಗೆ” ಎಂದು ಮೆಚ್ಚುಗೆಯಿಂದ ಸೂಚಿಸುತ್ತಾರೆ.  

ನಾವು ಎಂದಿಗೂ ಸಂಪೂರ್ಣವಾಗಿ ಅನ್ಯರ ಮೇಲೆ ಅವಲಂಬಿತರಾಗಿರಬಾರದು. ಅಲ್ಲದೇ ಯಾವನೇ ಒಬ್ಬ ವ್ಯಕ್ತಿ, ತಾನು ಇಲ್ಲದೇ ಇದ್ದರೆ, ಇಲ್ಲಿ ಯಾವ ಕೆಲಸವೂ ನಡೆಯದು, ಅನ್ನುವ ಅಹಂ ಕೂಡಾ ಹೊಂದಿರಬಾರದು. ಈ ಎರಡೂ ಕೂಡ ಮಾನವನಿಗೆ ಕೇಡನ್ನೇ ಉಂಟು ಮಾಡುತ್ತವೆ.
*****


ನಮಗೇನು ಬೇಕು?

15 ಜುಲೈ 12

ಅಪ್ಪಯ್ಯ ಹೇಳಿದ್ದ ಕತೆ ೦೫

ಹೆಚ್ಚಾಗಿ ಮಾವಿನ ಮರಗಳಲ್ಲಿ ಹಾಗೂ ಗೇರು ಮರಗಳಲ್ಲಿ, ತಿಳಿಯಾದ ಕೆಂಪು-ಕೇಸರಿ ಬಣ್ಣದ ಹಾಗೂ ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿರುವ ಇರುವೆಗಳು ಅಡ್ಡಾಡುತ್ತಿರುತ್ತವೆ. ಅವುಗಳು ನಮ್ಮ ಮೈಮೇಲೆ ಹರಿದಾಡಿದರೆ, ನಮ್ಮನ್ನು ಕಡಿಯದೇ ಇರುವುದಿಲ್ಲ. ಕಡಿದರೆ ವಿಪರೀತ ಉರಿತ. ಅವುಗಳಿಗೆ ನಾವು “ತಬುರು” ಎಂದು ಕರೆಯುತ್ತಿದ್ದೆವು. ಬಹುಶಃ ಅದು ತುಳು ಭಾಷೆಯ ಪದವಾಗಿರಬಹುದು. ಕನ್ನಡದಲ್ಲಿ ಏನನ್ನುತ್ತಾರೋ ಗೊತ್ತಿಲ್ಲ. ನಮ್ಮನ್ನು ಕಡಿವ ಆ ತಬುರುಗಳನ್ನು ನಾವು ಹಿಸುಕಿ ಹಾಕುವುದು ಸರ್ವೇ ಸಾಮಾನ್ಯವಾಗಿತ್ತು.

ಇದೇಕೆ ಹೀಗೆ? ಎಂದು ನಾವು ಬಾಲ್ಯದಲ್ಲಿ ಒಮ್ಮೆ ನಮ್ಮ ಅಪ್ಪಯ್ಯನವರನ್ನು ಕೇಳಿದ್ದಾಗ ಅವರು ಹೇಳಿದ್ದ ಮಾತುಗಳಿವು.

ಒಮ್ಮೆ ಈ ತಬುರುಗಳೆಲ್ಲಾ ಒಂದು ಸಭೆ ನಡೆಸಿದವು. “ನಮ್ಮನ್ನು ಮನುಜರು ಹಿಸುಕಿ ಹಿಸುಕಿ ಸಾಯಿಸುತ್ತಿದ್ದಾರೆ. ಇದನ್ನು ತಡೆಯಲು ನಾವು ದೇವರ ಮೊರೆ ಹೋಗೋಣ. ತಪಸ್ಸು ಮಾಡಿ ದೇವರಲ್ಲಿ ವರ ಬೇಡೋಣ” ಎಂದು ನಿರ್ಧರಿಸಿದವು. ಒಂದು ಸುಮುಹೂರ್ಥದಲ್ಲಿ, ಎಲ್ಲಾ ತಬುರುಗಳೂ ತಪಸ್ಸಿಗೆ ಕೂತು ಬಿಟ್ಟವು. ಕೊನೆಗೂ ದೇವರು ಪ್ರತ್ಯಕ್ಷರಾಗಿ “ನಿಮ್ಮ ಸಮಸ್ಯೆ ಏನು? ಏನು ಬೇಕಾಗಿದೆ? ಒಂದು ವರ ನೀಡುತ್ತೇನೆ. ಬೇಡಿಕೊಳ್ಳಿ” ಅಂದರು. ಆಗ ಆ ತಬುರುಗಳೆಲ್ಲಾ ನಾನು ಕೇಳುತ್ತೇನೆ, ನಾನು ಕೇಳುತ್ತೇನೆ ಎಂದು ಹಾರಾಡತೊಡಗಿದವು. ಇದನ್ನು ಕಂಡ ದೇವರು “ನಿಮ್ಮಲ್ಲಿ ಯಾರಾದರೂ ಒಬ್ಬರು, ಒಂದು ವರ ಕೇಳಿ, ನೀಡುತ್ತೇನೆ” ಅನ್ನುತ್ತಾರೆ.

ಆಗ ಒಂದು ತಬುರು, “ಸುಮ್ಮನಿರಿ ನಾನು ಕೇಳುತ್ತೇನೆ” ಎಂದು ಅನ್ಯ ತಬುರುಗಳನ್ನೆಲ್ಲಾ ಸುಮ್ಮನಿರಿಸಿ “ದೇವರೇ, ನಮ್ಮ ಸಮಸ್ಯೆ ಏನೆಂದರೆ, ನಾವು ಯಾವ ಮನುಜರನ್ನು ಕಡಿಯುತ್ತೇವೆಯೋ, ಆ ಮನುಜರು ನಮ್ಮನ್ನು ಹಿಸುಕಿ ಹಿಸುಕಿ ಸಾಯಿಸುತ್ತಿದ್ದಾರೆ. ಹಾಗಾಗಿ ’ಕಡಿದ ಕೂಡಲೇ ಸಾಯುವಂತೆ ವರ ನೀಡಿ ನಮಗೆ’’’ ಎಂದು ಬೇಡಿಕೆ ಸಲ್ಲಿಸುತ್ತದೆ. ಕೂಡಲೇ ದೇವರು “ತಥಾಸ್ತು” ಎಂದು ನುಡಿದು ಅದೃಶ್ಯರಾಗುತ್ತಾರೆ.

ಆ ತಬುರುಗಳೆಲ್ಲಾ ಸಂತೋಷದಿಂದ, “ಇನ್ನು ಕಡಿದ ಕೂಡಲೇ ಸಾವು, ಕಡಿದ ಕೂಡಲೇ ಸಾವು” ಎಂದು ಹಾಡುತ್ತಾ ಮರಳುತ್ತವೆ.

ಆಗ ನಾವು “ಆದರೆ ಇಂದಿಗೂ ಮನುಜ ಆ ತಬುರುಗಳು ಕಡಿದ ಕೂಡಲೇ, ಅವುಗಳನ್ನು ಹಿಸುಕಿ ಸಾಯಿಸುತ್ತಿದ್ದಾನೆ. ಮನುಜರು ಯಾರೂ ಆ ತಬುರುಗಳು ಕಡಿದ ಕೂಡಲೇ ಸಾಯಿತ್ತಿಲ್ಲವಲ್ಲಾ? ದೇವರಲ್ಲಿ ವರ ಪಡೆದು ಏನು ಪ್ರಯೋಜನವಾಯ್ತು?” ಎಂದು ಕೇಳಿದೆವು. ನಮ್ಮ ಈ ಪ್ರಶ್ನೆಗಳಿಗೆ ಅಪ್ಪಯ್ಯ ಉತ್ತರಿಸಿದ್ದು ಹೀಗೆ.

“ದೇವರು ವರ ಬೇಡಿಕೊಳ್ಳಿ ಅಂದಾಗ, ತಮಗೆ ಏನು ಬೇಕು ಅನ್ನುವುದನ್ನು ಅರಿತುಕೊಂಡು, ಒಂದಿಷ್ಟೂ ಅಪಾರ್ಥ ಅಥವಾ ಅನರ್ಥಗಳಿಗೆ ಎಡೆಮಾಡಿಕೊಡದಂತೆ, ಸ್ಪಷ್ಟವಾಗಿ, ಬೇಡಿಕೊಳ್ಳಬೇಕಿತ್ತು. ಆದರೆ, ಹಾಗೆ ಮಾಡುವ ಬದಲು ’ಕಡಿದ ಕೂಡಲೇ ಸಾಯುವಂತೆ ವರ ನೀಡಿ’ ಎಂದು ಬೇಡಿಕೊಂಡು, ಮೋಸ ಹೋಯಿತು.  ಹಾಗೆಯೇ, ನಮ್ಮ ಜೀವನದಲ್ಲಿ ನಮಗೆ ಏನು ಬೇಕು ಅನ್ನುವುದರ ಅರಿವು ನಮಗೆ ಚೆನ್ನಾಗಿ ಇರಬೇಕು. ಅದಿಲ್ಲವಾದರೆ, ನಮಗೆ ಒದಗುವ ಅವಕಾಶಗಳನ್ನು ನಾವು ಸದುಪಯೋಗಪಡಿಸಿಕೊಳ್ಳದೇ, ಅವು ನಮ್ಮ ಕೈತಪ್ಪಿಹೋಗುತ್ತವೆ”

*****


ಅತಿಥಿ ಸತ್ಕಾರ!

08 ಜುಲೈ 12

ಅಪ್ಪಯ್ಯ ಹೇಳಿದ್ದ ಕತೆ – ೦೪

ಬಹು ದಿನಗಳ ಹಿಂದೆ ಓರ್ವ ಹರಿದಾಸರು ಇದ್ದರು. ಅವರಿಗೆ ತಮ್ಮದೇ ಆದ ಯಾವು ಬಂಧು ವರ್ಗಗಳಿರಲಿಲ್ಲ. ಹಾಗಾಗಿ ಒಂದೂರಿನಿಂದ ಇನ್ನೊಂದು ಊರಿಗೆ ಪಯಣಿಸುತ್ತಾ, ಆ ಊರ ಶಾಲೆಗಳಲ್ಲೋ, ದೇವಸ್ಥಾನಗಳಲ್ಲೋ ಹರಿಕಥಾ ಕಾಲಕ್ಷೇಪ ನಡೆಸಿಕೊಡುತ್ತಿದ್ದರು. ಆಯಾ ಊರಿನ ಹಿರಿಯ ಗೃಹಸ್ಥರ  ಮನೆಗಳವರು ನೀಡುವ ಊಟೋಪಾಚಾರಗಳನ್ನು  ಸ್ವೀಕರಿಸುತ್ತಿದ್ದರು.

ಹತ್ತೂರುಗಳನ್ನು ಪದೇ ಪದೇ ಸುತ್ತಾಡುವ ಆ ಹರಿದಾಸರಿಗೆ, ತಮ್ಮ ಆದರಾತಿಥ್ಯ ಮಾಡುವ  ಅಂಥ ಪ್ರತಿ ಮನೆಯವರೊಂದಿಗೂ ಪರಿಚಯ ಬೆಳೆದುಬಿಟ್ಟಿತ್ತು. ಆದರೆ, ಒಂದು ಊರಿನ ಗೃಹಸ್ಥರ ವರ್ತನೆ ಅನ್ಯರ ಮನೆಯವರ ವರ್ತನೆಗಿಂತ ತುಂಬಾ ಭಿನ್ನವಾಗಿ ಕಂಡುಬರುತ್ತಿತ್ತು. ಎಲ್ಲಾ ಮನೆಗಳವರೂ ಊಟೋಪಚಾರ ನೀಡಿ ಕಳುಹಿಸುತ್ತಿದ್ದರಾದರೂ, ಆ ಮನೆಯವರೆಲ್ಲರ ಪರಿಚಯ ಹೆಚ್ಚಾಗಿ ಆಗುತ್ತಿರಲಿಲ್ಲ. ಅದರೆ ಆ ಒಂದು ಗೃಹಸ್ಥರ ಮನೆಯಲ್ಲಿ ಎಲ್ಲರ ಪರಿಚಯವೂ ಆಗಿಬಿಟ್ಟಿತ್ತು. ಅದಕ್ಕೆಲ್ಲಾ ಆ ಗೃಹಸ್ಥರೇ ಕಾರಣರಾಗಿದ್ದರು.

ಹರಿದಾಸರು ಆ ಗೃಹಸ್ಥರ ಮನೆಯೊಳಗೆ ಕಾಲಿಟ್ಟರೆ ಸಾಕು, ಆ ಗೃಹಸ್ಥರು ಮನೆಯ ಸದಸ್ಯರನ್ನೆಲ್ಲಾ ಕರೆದು ಪರಿಚಯ ಮಾಡಿಕೊಡುತ್ತಿದ್ದರು. ಅವರಲ್ಲಿ ಒಬ್ಬೊಬ್ಬರಿಗೂ ಒಂದೊಂದು ರೀತಿಯಲ್ಲಿ ಹರಿದಾಸರ ಊಟೋಪಚಾರಗಳಲ್ಲಿ ನೆರವಾಗುವಂತೆ ಆದೇಶ ನೀಡುತ್ತಿದ್ದರು. ಓರ್ವ ಸದಸ್ಯ ನೀರು ನೀಡಿದರೆ, ಇನ್ನೋರ್ವ ಒರೆಸುವ ಬಟ್ಟೆ ನೀಡಬೇಕಾಗುತ್ತಿತ್ತು, ಹೀಗೆ ಅತಿಥಿ ಸತ್ಕಾರದಲ್ಲಿ, ಆಲ್ಲಿ ಎಲ್ಲರಿಗೂ ಒಂದೊಂದು ಕೆಲಸ ಇದ್ದೇ ಇರುತ್ತಿತ್ತು. ಹರಿದಾಸರು ಮನೆಯಿಂದ ಹೊರಡಲು ತಯಾರಾಗಿ ನಿಂತಾಗ, ಆ ಗೃಹಸ್ಥರು ಮತ್ತೆ ಆ ಮನೆಯ ಸದಸ್ಯರನ್ನೆಲ್ಲಾ ಕರೆದುಕೊಂಡು, ಹರಿದಾಸರ ಜೊತೆಗೆ ಬೀದಿಯ ಕೊನೆಯ ತನಕ ನಡೆದು ಬಂದು, ನಮಸ್ಕರಿಸಿ ಬೀಳ್ಕೊಡುತ್ತಿದ್ದರು. ಹರಿದಾಸರಿಗೆ ನಮಸ್ಕಾರ ಮಾಡುವಂತೆ ಎಲ್ಲರಿಗೂ ಸೂಚಿಸುತ್ತಿದ್ದರು. ಅವರಲ್ಲಿ ಒಂದು ಮೂರು ವರುಷದ ಚಿಕ್ಕ ಮಗು ಕೂಡ ಇರುತ್ತಿತ್ತು. ಆ ಮಗು ಕೂಡ ಈ ನಿಯಮವನ್ನು ಪಾಲಿಸಬೇಕಾಗುತ್ತಿತ್ತು.

ಈ ವರ್ತನೆ ಬೇರೆ ಯಾರ ಮನೆಯಲ್ಲೂ ಕಾಣ ಸಿಗದೇ ಇದ್ದುದರಿಂದ, ಹರಿದಾಸರ ತೀರ ಕುತೂಹಲಕ್ಕೆ ಕಾರಣವಾಗಿತ್ತು. ಒಂದು ದಿನ ಹೀಗೆಯೇ ಬೀದಿಯ ಕೊನೆಯಲ್ಲಿ ಎಲ್ಲರಿಂದಲೂ ಬೀಳ್ಕೊಳ್ಳುವ ಸಂದರ್ಭದಲ್ಲಿ, ಆ ಗೃಹಸ್ಥರನ್ನು ಪ್ರಶ್ನಿಸುತ್ತಾರೆ. “ಮಹನೀಯರೇ, ತಾವು ಪ್ರತಿ ಬಾರಿಯೂ ನಾನು ಬಂದಾಗ ಎಲ್ಲರಿಗೂ ಪರಿಚಯಿಸುವುದು, ಹಾಗೂ ಎಲ್ಲರಿಂದಲೂ ನನ್ನ ಉಪಚಾರ ಮಾಡಿಸುವುದು ಮತ್ತು ಕೊನೆಗೆ ಎಲ್ಲರಿಂದಲೂ ನಮಸ್ಕಾರ ಮಾಡಿಸಿ ಬೀಳ್ಕೊಡುವುದು, ಇವೆಲ್ಲದರ ಹಿಂದಿನ ಉದ್ದೇಶವೇನು, ಮರ್ಮವೇನು ಎಂದು ನಾನು ಅರಿಯಬಹುದೇ?”

ಆಗ ಆ ಗೃಹಸ್ಥರು, “ಸ್ವಾಮೀ, ತಾವು ನಮ್ಮ ಅತಿಥಿಗಳು. ಅತಿಥಿಗಳು ದೇವರಿಗೆ  ಸಮಾನ ಅನ್ನುವುದನ್ನು ನಮ್ಮ ಹಿರಿಯರು ನಮಗೆ ಬೋಧಿಸಿದ್ದಾರೆ. ಆ ನಿಟ್ಟಿನಲ್ಲಿ,  ಅತಿಥಿಗಳ ಉಪಚಾರ ಮಾಡುವುದು  ನಮ್ಮ ಮನೆಯ ಸದಸ್ಯರೆಲ್ಲರ ಕರ್ತವ್ಯವಲ್ಲವೇ? ಇನ್ನು ಈ  ಚಿಕ್ಕ ಮಗುವನ್ನೂ ಬಿಡದೇ ಎಲ್ಲರನ್ನೂ ಈ ಬೀದಿಯುದ್ದಕ್ಕೂ ಕರೆದುಕೊಂಡು ಬರುವುದಕ್ಕೆ ಕಾರಣವೂ ಕೂಡ ಅದೇ ಆಗಿದೆ. ಮನೆಗೆ ಬಂದ ಅತಿಥಿಗಳನ್ನು, ಎಲ್ಲರೂ ಒಂದೇ ಮನಸ್ಸಿನಿಂದ, ಸ್ವಾಗತಿಸಿ, ಉಪಚರಿಸಿ, ಬೀಳ್ಕೊಡುವ ಅಗತ್ಯ ಇದೆಯೆನ್ನುವುದನ್ನು ನಾನು ನನ್ನ ಮನೆಯ ಸದಸ್ಯರೆಲ್ಲರಿಗೂ ಕಲಿಸಿಕೊಡಬೇಕಾದುದು ನನ್ನ ಕರ್ತವ್ಯ.  ನನ್ನ ಹಿರಿಯರು ನನಗೆ ಕಲಿಸಿದುದನ್ನು, ನಾನು ನನ್ನ ಕಿರಿಯರಿಗೆ ಕಲಿಸಿಕೊಡಬೇಕಾಗಿದೆ. ಹಾಗಾಗಿಯೇ ಈ ಪರಿಪಾಠ ಇಟ್ಟುಕೊಂಡು ಅದನ್ನು ಪಾಲಿಸುತ್ತಿದ್ದೇನೆ. ಮುಂದೆ ಅವರ ಜೀವನದಲ್ಲಿ ಅವರು ಇದೇ ಸಂಸ್ಕೃತಿ, ಸಂಸ್ಕಾರವನ್ನು ಉಳಿಸಿಕೊಂಡು, ಬೆಳೆಸಿಕೊಂಡು, ತಮ್ಮ ಮುಂದಿನ ಪೀಳಿಗೆಗೆ ತಿಳಿಸಿಕೊಡುತ್ತಾ ಸಾಗಬೇಕಲ್ಲವೇ?” ಅಂದರು.

ಹರಿದಾಸರಿಗೆ ಅತೀವ ಆನಂದವಾಯ್ತು. “ಮಹನೀಯರೇ, ತುಂಬಾ ಸಂತಷವಾಯ್ತು.  ತಮ್ಮ ಈ ನೀತಿ ಪಾಠವನ್ನು ಇನ್ನು ಮುಂದೆ ನನ್ನ ಹರಿಕಥೆಗಳ  ಮುಖಾಂತರ ಈ ಹತ್ತೂರ ಜನರಿಗೆ ತಲುಪಿಸುತ್ತೇನೆ” ಎಂದು ನುಡಿದು, ನಮಸ್ಕರಿಸಿ, ಬೀಳ್ಕೊಂಡು, ಮುಂದಿನೂರಿಗೆ ಸಾಗಿದರು.

*****

 


ಮನುಜ ಮನಸ್ಸು ಮಾಡಿದರೆ…!

01 ಜುಲೈ 12

ಅಪ್ಪಯ್ಯ ಹೇಳಿದ್ದ ಕತೆ – ೦೩

ಒಂದು ರಾಜ್ಯದ ರಾಜನಿಗೆ ಸುಂದರಿಯಾದ ಒಬ್ಬಳೇ ಒಬ್ಬಳು ಮಗಳಿದ್ದಳು. ಆಕೆಯ ಮೇಲೆ ರಾಜನಿಗೆ ತುಂಬಾ ಪ್ರೀತಿ. ಆಕೆ ಕೇಳಿದ್ದನ್ನೆಲ್ಲಾ ಆತ ಕೊಡಿಸುತ್ತಿದ್ದ. ಆಕೆ ಧರಿಸುವಂತಹ ಯಾವುದೇ ಒಡವೆ, ಉಡುಗೆ ತೊಡುಗೆಗಳನ್ನು, ತನ್ನ ರಾಜ್ಯದಲ್ಲಿ ಇನ್ನಾರೂ ಧರಿಸಿರಬಾರದು ಎನ್ನುವ ಬಯಕೆ ಆತನದ್ದಾಗಿತ್ತು. ಹಾಗಾಗಿ ಆಕೆಗಾಗಿ ಒಡವೆ ಅಥವಾ ಉಡುಗೆಗಳನ್ನು ಖಾಸಗಿ ಚಿನಿವಾರರ ಹಾಗೂ ದರ್ಜಿಗಳಿಂದಲೇ ತಯಾರಿಗೊಳಿಸುತ್ತಿದ್ದ.

ಆದರೂ ಒಮ್ಮೊಮ್ಮೆ ಆತನ ರಾಜಕುಮಾರಿ ಧರಿಸಿದ ಒಡವೆ ಅಥವಾ ಉಡುಗೆ ತೊಡುಗೆಗಳ ತರಹದ್ದೇ ಒಡವೆ ಅಥವಾ ಉಡುಗೆಗಳನ್ನು ಆ ನಾಡಿನಲ್ಲಿ ಇನ್ನಾರೋ ಧರಿಸಿಕೊಂಡು ಅಡ್ಡಾಡುತ್ತಿರುವುದು ಆತನ ಕಣ್ಣಿಗೆ ಬೀಳುತ್ತಿತ್ತು. ಈ ಬಗ್ಗೆ ಬಹಳಷ್ಟು ಯೋಚಿಸಿದ ರಾಜ, ತನ್ನ ಮಂತ್ರಿಯನ್ನು ಕರೆದು ಇದಕ್ಕೆ ಕಾರಣ ಹಾಗೂ ಪರಿಹಾರವನ್ನು ಸೂಚಿಸುವಂತೆ ಕೇಳುತ್ತಾನೆ. ಆಗ ಮಂತ್ರಿ, “ಮುಂದಿನ ಬಾರಿ ನಮ್ಮ ರಾಜಕುಮಾರಿಗೆ ಉಡುಗೆಯನ್ನು ತಯಾರಿಗೊಳಿಸುವಾಗ, ಆ ಉಡುಗೆ ತಯಾರಾಗುವ ತನಕ ದರ್ಜಿಯನ್ನು ಅರಮನೆಯಲ್ಲಿಯೇ ಉಳಿಸಿಕೊಂಡು, ಆತ ತನ್ನ ಮನೆಗೆ ಹೋಗದಿರುವಂತೆ ಮಾಡೋಣ” ಎಂದು ಸೂಚಿಸುತ್ತಾನೆ. ಅದಕ್ಕೆ ರಾಜ ಒಪ್ಪಿಗೆ ನೀಡುತ್ತಾನೆ.

ಮುಂದೊಂದು ದಿನ ರಾಜಕುಮಾರಿಗಾಗಿ ಹೊಸ ಉಡುಗೆ ತಯಾರಿಸಬೇಕಾದಾಗ, ಖಾಸಗಿ ದರ್ಜಿಯನ್ನು ಅರಮನೆಗೆ ಕರೆಸಿ, ಆತನಿಗೆ ಬಟ್ಟೆ ನೀಡಿ, ರಾಜಕುಮಾರಿಯ ಉಡುಗೆ ತಯಾರಾಗುವ ತನಕ, ಆತ ತನ್ನ ಮನೆಗೆ ಹೋಗಬಾರದೇಂದು ಅಪ್ಪಣೆ ಮಾಡುತ್ತಾರೆ. ಆತನ ಊಟ ಮತ್ತು ವಿಶ್ರಾಮದ ವ್ಯವಸ್ಥೆಯನ್ನು ಅರಮನೆಯ ಆವರಣದಲ್ಲಿ ಬಿಗಿ ಬಂದೋಬಸ್ತಿನೊಂದಿಗೆ ಮಾಡಲಾಗಿರುತ್ತದೆ. ದರ್ಜಿಗೆ ಇದೆಲ್ಲಾ ಏಕೆ ಎನ್ನುವುದು ಅರಿವಾಗಿತ್ತು. ಕಳೆದ ಬಾರಿ ರಾಜಕುಮಾರಿಯ ಉಡುಗೆ ತಯಾರಿಸಿ ಉಳಿದ ಬಟ್ಟೆಯಿಂದ, ಅಂತಹದೇ ಉಡುಗೆಯನ್ನು ತನ್ನ ಚಿಕ್ಕ ಮಗಳಿಗೂ ತಯಾರಿಸಿ ಕೊಟ್ಟಿದ್ದ ಆತ. ಈ ಬಾರಿ ಅದು ಸಾಧ್ಯವಿಲ್ಲ ಎನ್ನುವುದೂ ಅರಿವಾಗಿತ್ತು.

ಐದಾರು ದಿನಗಳು ಕಳೆದ ನಂತರ, ಆ ದರ್ಜಿಯ ಪತ್ನಿ ತನ್ನ ಆ ಕಿರಿಮಗಳನ್ನು ಯಾವುದೋ ಕಾರಣಕ್ಕೆ ಬೈದು ಮನೆಯಿಂದ ಹೊರಗಟ್ಟಿ, ಹೋಗಿ ನಿನ್ನ ಅಪ್ಪನೊಂದಿಗೇ ಇರು ಅನ್ನುತ್ತಾಳೆ. ಅಕೆ ಅಳುತ್ತಾ ಅರಮನೆಯತ್ತ ಹೆಜ್ಜೆ ಹಾಕುತ್ತಾಳೆ. ತನ್ನ ಮಗಳು ಬರುತ್ತಿರುವುದನ್ನು ಕಿಟಕಿಯಿಂದಲೇ ನೋಡಿದ ದರ್ಜಿ, ಇತ್ತ ಕಡೆ ಬರಬೇಡ ಎಂದು ಗದರುತ್ತಾನೆ. ಆತ ಎಷ್ಟು ಗದರಿದರೂ ಆಕೆ ಕೇಳದಿದ್ದಾಗ, ತನ್ನ ಬೂಡ್ಸುಗಳನ್ನು ಒಂದಾದ ಮೇಲೆ ಒಂದರಂತೆ ಆಕೆಯತ್ತ ಎಸೆದು ಮನೆಗೆ ಹೋಗುವಂತೆ ಹೇಳುತ್ತಾನೆ. ತನ್ನ ತಂದೆಯ ಕೋಪವನ್ನು ಮನಗಂಡ ಆ ಬಾಲಕಿ ಮರಳಿ ತನ್ನ ಮನೆಯತ್ತ ಹೆಜ್ಜೆ ಹಾಕುತ್ತಾಳೆ.

ರಾಜಕುಮಾರಿಯ ಉಡುಗೆ ತಯಾರಾದ ಮೇಲೆ ಆ ದರ್ಜಿಯನ್ನು ಅರಮನೆಯಿಂದ ತನ್ನ ಮನೆಗೆ ಹೋಗಲು ಅನುಮತಿ ನೀಡುತ್ತಾರೆ. ಮುಂದೊಂದು ದಿನ, ರಾಜಕುಮಾರಿಯ ಸಖಿಯರಲ್ಲಿ ಯಾರೋ ರಾಜಕುಮಾರಿಗೆ ಒಂದು ಸುದ್ದಿ ಮುಟ್ಟಿಸುತ್ತಾರೆ. ಅದೇನೆಂದರೆ, ರಾಜಕುಮಾರಿಯ ಹೊಸ ಉಡುಗೆಯ ತರಹದೇ ಆದ ಉಡುಗೆಯನ್ನು ಆ ದರ್ಜಿಯ ಕಿರಿಯ ಮಗಳು ಧರಿಸಿಕೊಂಡು ಅಡ್ಡಾಡುತ್ತಿದ್ದುದನ್ನು ಆ ಸಖಿಯರು ನೋಡಿರುತ್ತಾರೆ. ರಾಜಕುಮಾರಿ ರಾಜನಿಗೆ ದೂರು ಸಲ್ಲಿಸುತ್ತಾಳೆ.

ರಾಜ ಆ ದರ್ಜಿಯನ್ನು ದರ್ಬಾರಿಗೆ ಕರೆಸಿ ವಿಚಾರಣೆ ನಡೆಸುತ್ತಾನೆ. “ಅರಮನೆಯಲ್ಲಿ ಬಂಧನದಲ್ಲಿ ಇದ್ದಾಗಲೂ ನಿನ್ನಿಂದ ಆ ಬಟ್ಟೆಯನ್ನು ಹೊರ ಸಾಗಿಸಲು ಅದು ಹೇಗೆ ಸಾಧ್ಯವಾಯಿತು” ಎಂದು ಕೇಳುತ್ತಾನೆ. ಆಗ ಆ ದರ್ಜಿ, “ಮಹಾರಾಜರೇ, ಒಂದು ದಿನ ನನ್ನ ಕಿರಿ ಮಗಳು ಅಳುತ್ತಾ ಅರಮನೆಯತ್ತ ಬಂದಿದ್ದಳು, ಆಕೆಯನ್ನು ಗದರಿಸುತ್ತಾ ನಾನು ನನ್ನೆರಡೂ ಬೂಡ್ಸುಗಳನ್ನು ಆಕೆಯತ್ತ ಎಸೆದಿದ್ದೆ. ಆ ಬೂಡ್ಸಿನೊಳಗೆ ನಾನು ಬಟ್ಟೆಯನ್ನೂ ಮನೆಗೆ ರವಾನಿಸಿದ್ದೆ” ಎಂದು ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಾನೆ.

ಆಗ ರಾಜ “ಮಂತ್ರಿಗಳೇ, ಈತನಿಗೆ ಯಾವ ಶಿಕ್ಷೆಯನ್ನು ನೀಡಬೇಕು?” ಎಂದು ತನ್ನ ಮಂತ್ರಿಯ ಸಲಹೆಯನ್ನು ಕೇಳುತ್ತಾನೆ. ಅದಕ್ಕೆ ಉತ್ತರವಾಗಿ ಮಂತ್ರಿ “ಮಹಾರಾಜರೇ, ಈ ದರ್ಜಿಗೆ ಬಹುಮಾನ ಕೊಟ್ಟು ಕಳಿಸಬೇಕು, ಏಕೆಂದರೆ ಈತ ನಮಗೊಂದು ಪಾಠ ಕಲಿಸಿದ್ದಾನೆ. ಅದೇನೆಂದರೆ, ಮನುಷ್ಯ, ಮನಸ್ಸು ಮಾಡಿದರೆ, ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ, ತಾನು ಅಂದುಕೊಂಡುದನ್ನು ಸಾಧಿಸಿ ತೋರಿಸಬಲ್ಲ”. ಮಹಾರಾಜನು ಈ ಉತ್ತರದಿಂದ ಸಂತುಷ್ಟಗೊಂಡು, ಆ ದರ್ಜಿಗೆ ಬಹುಮಾನ ನೀಡಿ ಕಳಿಸುತ್ತಾನೆ.

*****