ಜೈ ಭಗವಾನ್!

30 ಮಾರ್ಚ್ 15

ತನ್ನ ಗಂಡ ಎಲ್ಲಿ, ಯಾರೊಂದಿಗೆ, ಎಷ್ಟು ಮದ್ಯಸೇವನೆ ಮಾಡಿಕೊಂಡು ಬಂದಿದ್ದಾನೆ ಅನ್ನುವುದರ ಅರಿವು ಹೆಂಡತಿಗೆ ಹಾಗೂ ತಾನು ಕೆಲಸದಲ್ಲಿದ್ದಾಗ ತನ್ನ ಹೆಂಡತಿ ಎಲ್ಲಿಗೆ ಹೋಗ್ತಾಳೆ, ಏನು ಮಾಡ್ತಾಳೆ ಅನ್ನುವುದರ ಅರಿವು ಗಂಡನಿಗೆ, ಆಗದೇ ಇರುವ ಈ ದಿನಗಳಲ್ಲಿ ಐದಾರು ಸಾವಿರ ವರುಷಗಳ ಹಿಂದೆ ಜೀವಿಸಿದ್ದ ಎಂದು ನಂಬಲಾಗಿರುವ ಶ್ರೀರಾಮ, ಆಗ ಯಾವ ಆಹಾರ ಸೇವಿಸುತ್ತಿದ್ದ ಹಾಗೂ ಯಾವ ಪಾನೀಯ ಸೇವಿಸುತ್ತಿದ್ದ ಅನ್ನುವುದರ ಅರಿವು ಇಂದು ಯಾರಿಗಾದರೂ ಇದೆಯೆಂದಾದರೆ, ಆತ “ಭಗವಾನ”ನೇ ಆಗಿರಬೇಕು!

ಜೈ ಭಗವಾನ್!


ಹಬ್ಬದ ಸಂಭ್ರಮ!

26 ಆಕ್ಟೋ 14

ಇದಕ್ಕಿಂತ ಸಂಭ್ರಮದ ಹಬ್ಬವಿದೇಯೇ ನನ್ನ ಪಾಲಿಗೆ?

ನನ್ನನ್ನು ಒಮ್ಮೆಯೂ ಭೇಟಿಯಾಗದ,
ನಮ್ಮ ಅಪ್ಪಯ್ಯನವರನ್ನು ನನ್ನ ಮಾತುಗಳ ಮೂಲಕವಷ್ಟೇ ತನ್ನ ಅರಿವಿಗಿಳಿಸಿಕೊಂಡ
ಒಂದು ಪರಿಶುದ್ಧ ಆತ್ಮದಿಂದ ಇಂದು ನನಗೆ ಬಂದಿರುವ ಸಂದೇಶ:

“ನನಗ್ಯಾಕೆ ನಿಮ್ಮ ಅಪ್ಪಯ್ಯನ ನೆನಪು…?
ಅದೂ ಕಣ್ಣು ಒದ್ದೆಯಾಗೋ ಅಷ್ಟು !
ನಿಮ್ಮೊಳಗಿನ ಅಪ್ಪಯ್ಯ ಒಳಗೂ ಹೊರಗೂ ಬೆಳಕಾಗಿ ಬೆಳಗಲಿ.
ದೀಪಾವಳಿಯ ಶುಭಾಶಯಗಳು!”.

ಒಂದು ಆತ್ಮದಿಂದ ಇನ್ನೊಂದು ಆತ್ಮದೆಡೆಗೆ ಸತತವಾಗಿ ಸದಾ ಹರಿಯುತ್ತಿರುವ, ಅದ್ಯಾವುದೋ ದಿವ್ಯಶಕ್ತಿಗೆ ನಮೋನಮಃ


“ನಾನು” ಉಳಿಯದಿರಲಿ!

19 ಆಕ್ಟೋ 14

ಸಖೀ,

ನಾವು ಈ ಜಗವನ್ನು ತೊರೆದು ಹೋಗುವಾಗ, “ನಾನು” ಇಲ್ಲದ ನಮ್ಮನ್ನು ಈ ಜಗದಲ್ಲಿ ಉಳಿಸಿಹೋಗಬೇಕು.

ಈ ಜಗದಲ್ಲಿ ನಮ್ಮೆಲ್ಲಾ ಕರ್ಮ ಕರ್ತವ್ಯಗಳಲ್ಲಿ, ನಮ್ಮವರಿಗೆ “ನಾನು” ಇಲ್ಲದ ನಾವಷ್ಟೇ ಕಂಡು ಬರುತ್ತಿರಬೇಕು.

ಇಲ್ಲಿನ ನಮ್ಮೆಲ್ಲಾ ಸತ್ಕರ್ಮಗಳಿಗೂ ನಮ್ಮಲ್ಲಿ ಪ್ರತಿಯೊಬ್ಬರ “ನಾನು” ಲಗತ್ತಿಸಲ್ಪಟ್ಟರೆ ಹೇಗಾದೀತು ಹೇಳು.

ತಂತಾನೇ ಬೆಳೆಯುತ್ತಿರುವ ನಮ್ಮ ಕುಕರ್ಮಗಳ ಪಟ್ಟಿಯನ್ನು ಮೀರುವಂತೆ, ನಮ್ಮ ಸತ್ಕರ್ಮಗಳ ಪಟ್ಟಿಯನ್ನು ಬೆಳೆಸುತ್ತಾ ಸಾಗಬೇಕು.

ನಮ್ಮ ಕಿಂಚಿತ್ ಸತ್ಕರ್ಮಗಳ ಪಟ್ಟಿಯನ್ನೇ ನಾವು ಸದಾ ನೋಡುತ್ತಾ ಕುಳಿತುಬಿಟ್ಟರೆ ಮುಂದಿನ ದಿನಗಳಲ್ಲಿ ನಮ್ಮ ಖಾತೆಯಲ್ಲಿ ಪಾಪ ಸಂಚಯವಾಗದಂತೆ ತಡೆಯುವ ದಾರಿಯಾದರೂ ಯಾವುದು ಹೇಳು.

“ನಾನು” ಇಲ್ಲದ ನೀನು, “ನಾನು” ಇಲ್ಲದ ನಾನು, ಸೇರಿ ಒಂದಾಗಿ “ನಾವು”, ಸತ್ಕರ್ಮಗಳನ್ನು ಮಾಡುತ್ತಾ, ನಮ್ಮ ಕರ್ತವ್ಯಗಳನ್ನು ನಿಭಾಯಿಸುತ್ತಾ ಇರೋಣ.


ಜೀವ ನಿರ್ಜೀವ!?

19 ಆಕ್ಟೋ 14

ಒಂದು ಮರದ ಹಲಗೆಗೆ ನಾಲ್ಕು ಮರದ ಕಾಲುಗಳನ್ನು ಜೋಡಿಸಿ ಮೇಜನ್ನು ತಯಾರಿಸಲಾಗಿದೆ. ಇದನ್ನು ಮತ್ತು ಇಂತಹ ವಸ್ತುಗಳನ್ನು ನಾವೆಲ್ಲಾ ನಿರ್ಜೀವ ವಸ್ತು ಅನ್ನುತ್ತೇವೆ.

ಆದರೆ ನಾನು ಈಗೀಗ ಅವನ್ನು ನಿರ್ಜೀವ ಅನ್ನುವುದಕ್ಕೂ ಹಿಂಜರಿಯುತ್ತೇನೆ.

ಏಕೆ ಅಂತೀರಾ?

ಒಂದು ಹಲಗೆ, ತನ್ನದೇ ಆಕಾರದಲ್ಲಿ ಉಳಿದಿರುತ್ತದೆ, ತನ್ನ ಸಾಮರ್ಥ್ಯಕ್ಕನುಗುಣವಾಗಿ ತನ್ನ ಮೇಲಿರುವ ಭಾರವನ್ನು ಸಹಿಸುತ್ತದೆ.

ತನ್ನ ಮೇಲಿರುವ ಭಾರ ತನ್ನ ತಡೆದುಕೊಳ್ಳುವ ಸಾಮರ್ಥ್ಯದ ಮಿತಿಯನ್ನು ಮೀರಿದಾಗ ತುಂಡಾಗುತ್ತದೆ.

ನಾವೂ ಹಾಗೆಯೇ.

ನಮ್ಮ ಸಾಮರ್ಥ್ಯವನ್ನು ಮೀರಿದ ಹೊರೆ, ಹೊಡೆತ ಬಿದ್ದಾಗ ಬಲಿಯಾಗುತ್ತೇವೆ, ಅಂಗಾಂಗಗಳನ್ನು ಮುರಿದುಕೊಳ್ಳುತ್ತೇವೆ.

ನಮಗೂ (ಜೀವಿಗಳಿಗೂ) ಆ ಹಲಗೆಗೂ (ನಿರ್ಜೀವ ವಸ್ತುವಿಗೂ) ವ್ಯತ್ಯಾಸ ಇಲ್ಲವೆಂದಾಯ್ತಲ್ಲವೇ?

***


ಅನುಕಂಪ ಬೇಡ – ಸಹಾನುಭೂತಿ ಇರಲಿ!

19 ಆಕ್ಟೋ 14

ಸಖೀ,
ಬಡವರ ಗುಡಿಸಲುಗಳ ಅಂದಗೆಟ್ಟ ಗೋಡೆಗಳನ್ನು, ಸೀಮೆ ಎಣ್ಣೆ ಬುಡ್ಡಿಗಳನ್ನು, ಸೌದೆಒಲೆಗಳ ಹೊಗೆಯ, ಬೀಡಿ ಸಿಗರೇಟುಗಳ ಹಾಗೂ ಬೆವರಿನ ವಾಸನೆಗಳನ್ನು ಸುಂದರ ರಂಜನೀಯ ಪದಗಳಲ್ಲಿ ವರ್ಣಿಸಿ, ಬಡತನವನ್ನು ಬಿಂಬಿಸುವ ಅವರ ಚಿತ್ರಗಳಿಂದ ನಮ್ಮ ಮನ-ಮನೆಗಳ ಗೋಡೆಗಳನ್ನು ಅಲಂಕರಿಸುತ್ತಾ, ಅವರ ಬಡತನಕ್ಕೆ ಹಾಗೂ ಕಷ್ಟಗಳಿಗೆ ನಾವೂ ಸ್ಪಂದಿಸುತ್ತಿದ್ದೇವೆ ಅನ್ನುವ ಭ್ರಮೆಯಲ್ಲಿ, ಅನುಕಂಪದ ಮೊಸಳೆಕಣ್ಣೀರು ಸುರಿಸುವ, ನಮಗೆ ಇವೆಲ್ಲವುಗಳಿಂದ ಬಿಡುಗಡೆ ಬೇಕಾಗಿದೆ.

ಅದಕ್ಕೆ ಬದಲಾಗಿ, ಅವರ ಕಷ್ಟಗಳಿಗೆ ಸಹಾನುಭೂತಿಯಿಂದ ಸ್ಪಂದಿಸುತ್ತಾ, ಸಪಾತ್ರರಾದವರಿಗೆ ನಮ್ಮಿಂದ ಸಾಧ್ಯವಾದಷ್ಟು, ಸಾಧ್ಯವಾದ ರೀತಿಯಲ್ಲಿ ಸಹಾಯಮಾಡುತ್ತಾ, ಅವರ ಬಾಳಿನಲ್ಲಿ ಏನಾದರೂ ಬದಲಾವಣೆ ತರುವ ನಿಟ್ಟಿನಲ್ಲಿ ಯತ್ನಿಸುವ ಅಗತ್ಯವಷ್ಟೇ ಬೇಕಾಗಿದೆ.

ಇದನ್ನು ನೀನು, ನಾನು ಮತ್ತು ನಮ್ಮ ಹಾಗೆ ಇರುವವರನ್ನು ಮನದಲ್ಲಿ ಇರಿಸಿಕೊಂಡು ಬರೆದಿರುವುದು, ಅಷ್ಟೇ.

ನಮ್ಮ ಹಾಗೆ ಇರದಿರುವವರು, ಇದನ್ನು ಓದಿ ತಲೆ ಕೆಡಿಸಿಕೊಂಡರೆ, ನೀನು, ನಾನು ಮತ್ತು ನಮ್ಮ ಹಾಗೆ ಇರುವವರು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ.


ಸ್ಪಂದನೆ!

19 ಆಕ್ಟೋ 14

ಕಿರಿಕಿರಿ ಉಂಟುಮಾಡುವ ಸನ್ನಿವೇಶಗಳಲ್ಲಿ ಮೌನವಾಗಿಯೇ ಇರಲು ರೂಢಿಮಾಡಿಕೊಂಡಿರುವ ನಾನು, ಈಗೀಗ ಅನುಭವಿಸುತ್ತಿರುವ ಸುಖ, ಹಿಂದೆಲ್ಲಾ ನಾನು ಸುಖಾಸುಮ್ಮನೇ ಕ್ರೋಧಿತನಾಗಿ ಸ್ಪಂದಿಸುತ್ತಿದ್ದ ಸನ್ನಿವೇಶಗಳನ್ನು ನೆನಪಿಸುತ್ತಿರುತ್ತದೆ.

ಆಗೆಲ್ಲಾ, ನನಗೆ ನಗು ಬರುತ್ತಿರುತ್ತದೆ.

ಯಾವುದೇ ಸನ್ನಿವೇಶಗಳನ್ನು ನಮ್ಮಿಂದ ಸುಲಭದಲ್ಲಿ ಬದಲಿಸಲಾಗುವುದಿಲ್ಲ. ಅಂತಹ ಸನ್ನಿವೇಶಗಳಿಗೆ ನಾವು ಸ್ಪಂದಿಸುವ ಪರಿಯನ್ನು ಮಾತ್ರ ನಾವು ಬದಲಾಯಿಸಿಕೊಳ್ಳಬಹುದು.


ಕ್ಷಮಾಯಾಚನೆ!

05 ಆಕ್ಟೋ 14

ಹದಿನಾರು ವರುಷಗಳ ಹಿಂದೆ, ೧೯೯೮ರ ಮೇ ೨೮ ರಂದು, ಒಂದು ಘಟನೆ ನಡೆದಿತ್ತು.

ನನ್ನ ತಮ್ಮನ ಗುರುಗಳ ವೈವಾಹಿಕ ದಶಮಾನೋತ್ಸವದ ಸಂಭ್ರಮಾಚರಣೆಯ ಸಮಾರಂಭದಲ್ಲಿ ನಾನೂ ಹಾಜರಾಗಿದ್ದೆ.

ಕಾರ್ಯಕ್ರಮ ಮುಗಿದಾಗ ಸ್ವಲ್ಪ ಹೊತ್ತು ಏನೇನೋ ಮಾತುಕತೆ ನಡೆಯುತ್ತಿತ್ತು.

ನನ್ನ ತಮ್ಮನ ಸ್ನೇಹಿತರೋರ್ವರು, “ಇನ್ನೊಮ್ಮೆ ಎಲ್ಲಿಗಾದರೂ “ಹನಿಮೂನ್” ಪ್ಲಾನ್ ಮಾಡಿ ಸರ್. ನಾನೂ ಬರ್ತೇನೆ ಜೊತೆಗೆ ಹೋಗೋಣ” ಎಂದು ಆ ಗುರುಗಳಿಗೆ ಸಲಹೆನೀಡಿದರು.

ಥಟ್ಟನೇ ನಾನು, “ಶಿವಪೂಜೆಯಲ್ಲಿ ಕರಡಿಯ ಹಾಗೆ ತಾವ್ಯಾಕೆ?” ಅಂದೆ.

(ಅದು ಕರಡಿಯಲ್ಲ ಕರಡಿಗೆ ಅನ್ನುವ ಅರಿವು ನನಗಿರಲಿಲ್ಲ ಆಗ. ಅದನ್ನು ನಾನು ತಿಳಿದದ್ದು ನನ್ನ ಮಿತ್ರ ಶ್ರೀವತ್ಸ ಜೋಶಿಯವರಿಂದ)

ಅದು ಅಲ್ಲಿ ತಮಾಷೆಯಾಗಿಯೇ ಸ್ವೀಕೃತವಾಗಿತ್ತು ಅನ್ನುವ ನಂಬಿಕೆಯಲ್ಲಿದ್ದವನು ನಾನು.

ಆದರೆ ಹೊರಗೆ ಬಂದು ಮನೆಯತ್ತ ಸಾಗುವಾಗ ನನ್ನ ತಮ್ಮ “ನೀವು ನನ್ನ ಸ್ನೇಹಿತನನ್ನು ಆ ರೀತಿ ಕರಡಿ ಅಂದದ್ದು ಸರಿ ಇರಲಿಲ್ಲ” ಎಂದು ನನಗೆ ಹೇಳಿದಾಗ ಎಚ್ಚತ್ತುಕೊಂಡೆ.

“ಇಲ್ಲ ಮಾರಾಯಾ, ಅದು ತಮಾಷೆ ಅಷ್ಟೇ” ಎಂದಂದೆನಾದರೂ, ಅದು ನನ್ನ ಮನಸ್ಸಿನಲ್ಲಿ ಉಳಿದೇ ಹೋಗಿತ್ತು.

ರಜೆ ಮುಗಿಸಿ ವಾಪಸಾದ ಮೇಲೆ ಅದೇಕೋ ಆ ಘಟನೆ ಪದೇ ಪದೇ ನೆನಪಾಗಿ, ನನ್ನನ್ನು ಪೀಡಿಸಲು ತೊಡಗಿತು.

ಒಂದು ದಿನ ತಮ್ಮನಿಗೆ ಕರೆಮಾಡಿದಾಗ, ಆತನ ಸ್ನೇಹಿತರನ್ನು ಮಾತಿಗೆ ಕರೆದು, “ನಾನು ಅಂದು ಆ ರೀತಿ ಹೇಳಿ ನಿಮ್ಮ ಮನಸ್ಸಿಗೆ ನೋವು ಮಾಡಿದುದಕ್ಕಾಗಿ ದಯವಿಟ್ಟು ಕ್ಷಮಿಸಿ” ಎಂದು ಕ್ಷಮೆಯಾಚಿಸಿದೆ.

“ಅಯ್ಯೋ, ಅದರ ಬಗ್ಗೆ ನಾನೇನೂ ತಿಳಿದುಕೊಂಡಿಲ್ಲ” ಅಂದರು.

“ನೀವು ಏನಾದರೂ ತಿಳಿದುಕೊಂಡಿದ್ದೀರೋ ಇಲ್ಲವೋ ಅನ್ನುವುದು ಮುಖ್ಯವಲ್ಲ ನನಗೆ. ಆದರೆ ನನ್ನ ತಮ್ಮನಿಗೆ ಅದು ಅಸಹನೀಯವಾಗಿತ್ತು. ಆತನಿಗೆ ನೋವಾಗಿತ್ತು. ಆತನ ದೃಷ್ಟಿಯಲ್ಲಿ, ನಾನು ಆತನ ಸ್ನೇಹಿತರಿಗೆ ನೋವುಂಟುಮಾಡಿದ ಅಪರಾಧಿಯಾಗಿ ಉಳಿಯಬಾರದು. ಹಾಗಾಗಿ ಕ್ಷಮೆ ಕೇಳುತ್ತಿದ್ದೇನೆ. ದಯವಿಟ್ಟು ಕ್ಷಮಿಸಿ” ಎಂದು ಬೇಡಿಕೊಂಡೆ.

ನಾನು ಅಂದು ತಮಾಷೆಯೇ ಮಾಡಿದ್ದರೂ ತಮ್ಮನ ದೃಷಿಯಲ್ಲಿ ಮಾದರಿಯಾಗುಳಿಯುವ ಅಗತ್ಯ ಇತ್ತು.

ಅಲ್ಲದೆ, ಅಂದು ನನ್ನ ತಮ್ಮನಿಂದ ನಾನೂ ಒಂದು ಪಾಠ ಕಲಿತಿದ್ದೆ.

ನಮ್ಮ ಅತ್ಮೀಯರ ಸ್ನೇಹಿತರನ್ನು ನಾವು ಲಘುವಾಗಿ ಪರಿಗಣಿಸಿ ಅವರ ಬಗ್ಗೆ ಏನು ಬೇಕಾದರೂ ಹೇಳಬಹುದಾದ ಸ್ವಾತಂತ್ರ್ಯ ನಮಗಿರುವುದಿಲ್ಲ.

ಅದರಿಂದ, ಆ ಸ್ನೇಹಿತರಿಗಿಂತ, ಹೆಚ್ಚಾಗಿ ನೊಂದುಕೊಳ್ಳುವವರು ನಮ್ಮ ಆತ್ಮೀಯರು, ಅನ್ನುವ ಪಾಠವದು.

ಹಾಗಾಗಿ ಕ್ಷಮೆ ಯಾಚಿಸಿದ್ದೆ.

*******************


“ದೊಡ್ಡವರು – ಸಣ್ಣವರು” – ಒಂದು ಸಂಭಾಷಣೆ!

05 ಆಕ್ಟೋ 14

“ಅವರು ದೊಡ್ಡವ್ಯಕ್ತಿ. ಅವರು ನಮ್ಮ ಜೊತೆಗೆ ಮಾತನಾಡಲು ಸಮಯ ನೀಡುತ್ತಿದ್ದಾರೆ ಅಂದರೆ ಅದು ನಮ್ಮ ಭಾಗ್ಯ”

“ದೊಡ್ಡ (ಅಥವಾ ಸಣ್ಣ) ವ್ಯಕ್ತಿಯ, ವ್ಯಾಖ್ಯಾನ ಏನು?”

“ತುಂಬಾ ತಿಳಿದವರು, ಜ್ಞಾನಿಗಳು, ಚೆನ್ನಾಗಿ ಬರೆಯುವವರು ಅವರ ಮುಂದೆ ನಾವು ಏನೂ ಅಲ್ಲ. ಹಾಗಾಗಿ ಅವರು ದೊಡ್ಡವರು”

“ಅದು ನಿಮ್ಮ ಭಾವನೆ”

“ಯಾಕೆ? ಎಲ್ಲರಿಗೂ ಅವರು ದೊಡ್ಡವರೇ ಅಲ್ಲವೇ?”

“ಸರಿ, ಮೋದಿ… ನಮ್ಮ ಪ್ರಧಾನಿ ನರೇಂದ್ರ ಮೋದಿ ದೊಡ್ಡವರೋ ಸಣ್ಣವರೋ?”

“ಅರೇ… ಅವರು ಬಹಳ ದೊಡ್ಡವರು. ಸಣ್ಣವರು ಹೇಗಾಗ್ತಾರೆ?”

“ಹಾಗಾಗಿದ್ದರೆ, ಕಡಿಮೆ ಪಕ್ಷ ಭಾರತದ ೧೨೫ ಕೋಟಿ ಮಂದಿಯಾದರೂ, ಮೋದಿಯವರನ್ನು “ದೊಡ್ಡವರು” ಎಂದು ಒಪ್ಪಬೇಕಿತ್ತು. ಒಪ್ಪುತ್ತಿದ್ದಾರೋ?”

“ಇಲ್ಲ”

“ಯಾಕೆ?”

“ಕೆಲವರಿಗೆ ಮೋದಿಯವರು ಇಷ್ಟ ಆಗುವುದಿಲ್ಲ”

“ಹಾಗಂದ ಮೇಲೆ, ಅವರವರ ಮನದ ಭಾವನೆಗಳನ್ನು ಅವಲಂಬಿಸಿಯೇ ಓರ್ವ ವ್ಯಕ್ತಿ ದೊಡ್ಡವನು ಅಥವಾ ಸಣ್ಣವನು ಎಂದು ನಿರ್ಧಾರ ಆಗುವುದು ಅಲ್ಲವೇ?

ವ್ಯಕ್ತಿ ಬದಲಾಗುವುದಿಲ್ಲ.

ವ್ಯಕ್ತಿ ದೊಡ್ಡವನೋ ಅಥವಾ ಸಣ್ಣವನೋ ಅನ್ನುವುದನ್ನು, ನಮ್ಮ ಅನುಭವಕ್ಕೆ ಅಥವಾ ನಮ್ಮ ಅವಗಾಹನೆಗೆ ಬಂದ ವ್ಯಕ್ತಿತ್ವದ ಪರಿಚಯವನ್ನು ಹಾಗೂ ಅದಕ್ಕೆ ನಮ್ಮ ಮನದಲ್ಲಿ ಉಂಟಾದ ಭಾವಸ್ಪಂದನಗಳನ್ನು ಅವಲಂಬಿಸಿ ನಾವೇ ನಿರ್ಧಾರಮಾಡುವುದು, ಅಲ್ಲವೇ?”

“ಹೂಂ … ಹೌದು ಈಗ ಅರ್ಥವಾಯ್ತು, ಗುರುಗಳೇ”

“ಸರಿ, ಕೊನೆಗೂ ಅರ್ಥವಾಯ್ತಲ್ಲಾ? ಧನ್ಯವಾದಗಳು. 🙂 🙂 “


ಜೀವಂತವಾಗಿಡಬೇಕು!

07 ಆಗಸ್ಟ್ 14

ಪುರೋಹಿತಶಾಹಿ, ಬ್ರಾಹ್ಮಣರು, ಶೂದ್ರರು, ದಲಿತರು, ರೇಪ್, ಸ್ತ್ರೀಶೋಷಣೆ, ಪುರುಷ ವಿರೋಧಿ, ದಲಿತಪರ, ಪ್ರಗತಿಪರ, ದಲಿತ ವಿರೋಧಿ, ಪ್ರಗತಿಪರರ ವಿರೋಧಿ, ಇವುಗಳ ಬಗ್ಗೆ ಎಲ್ಲರೂ ಮಾತಾಡಿ ಆಯ್ತಲ್ಲಾ?

ಮುಂದಿನ ತಿಂಗಳು, ಅಂದರೆ, ಸಪ್ಟಂಬರ ಒಂದರಿಂದ, ಸ್ವಚ್ಛ ಸಮಾಜವೋ ಹಾಗಾದರೆ?

ಆಮೇಲೆ, ಇನ್ನಾವ ವಿಷಯ ಉಳಿದಿರುತ್ತದೆ, ಬರೆಯಲು, ಕೊರೆಯಲು, ಪ್ರತಿಭಟಿಸಲು, ಮೆರವಣಿಗೆ ನಡೆಸಲು?

ಒಂದು ವೇಳೆ ನಮಗೆ, ವಿಷಯ ಬೇಕು ಅಂತಾದರೆ, ಈ ವಿಷಯಗಳನ್ನು ಸಾಯಲು ಬಿಡಲೇಬಾರದು, ಸದಾ ಜೀವಂತವಾಗಿ ಇಡಬೇಕು.

ಜೀವಂತವಾಗಿ ಇಡೋಣವೇ? ಸಹಕರಿಸುತ್ತೀರಾ?


ಕುಲಸಚಿವರ ಆಯ್ಕೆಗೊಂದು ಪ್ರಶ್ನೆ!

30 ಜುಲೈ 14

ನಮ್ಮ ಅಪ್ಪಯ್ಯನವರಿಂದ ಕೇಳಿದ್ದ ೧೯೫೦ರ ದಶಕದ ಒಂದು ಘಟನೆಯ ನೆನಪು.

ಆಗ ನಮ್ಮ ಅಪ್ಪಯ್ಯನವರು (ಡಾ.ಯು.ಚಂದ್ರಶೇಕರ) ಕುಡುಮಲ್ಲಿಗೆಯಲ್ಲಿ ವೈದ್ಯಕೀಯ ವೃತ್ತಿಯಲ್ಲಿ ತೊಡಗಿದ್ದರು.

ಅವರ “ಕ್ಲಿನಿಕ್”ಗೆ (ಪ್ರೇಮಾ ಮೆಡಿಕಲ್ ಹಾಲ್) ಶ್ಯಾಮ ಶೆಟ್ಟಿ ಅನ್ನುವ ಹುಡುಗ ಆಗಾಗ ಬರುತ್ತಿದ್ದರು.

ಅಪ್ಪಯ್ಯನವರ ಸಹಕಾರದಿಂದ, ಪ್ರೌಢಶಾಲಾ ಶಿಕ್ಷಣ ಮುಗಿಸಿದ್ದ ಆತ, ಶಿಕ್ಷಕರ ಆಯ್ಕೆಗಾಗಿ ನಡೆವ ಮೌಖಿಕ ಪರೀಕ್ಷೆಗೆ ತೆರಳುವ ಮುನ್ನ ನಮ್ಮ ಅಪ್ಪಯ್ಯನವರಲ್ಲಿಗೆ ಬಂದು ತಮಗೆ ಆಶೀರ್ವದಿಸುವಂತೆ ಬೇಡಿದರಂತೆ.

ಅವರಿಗೆ ಶುಭಹಾರೈಸಿದ ಅಪ್ಪಯ್ಯನವರು, “ಒಂದು ವೇಳೆ, ಅಲ್ಲಿ ನಿನ್ನನ್ನು, ಕನ್ನಡದ ಮಹಾನ್ ಗ್ರಂಥ ಯಾವುದು ಹಾಗೂ ಅದನ್ನು ಬರೆದವರು ಯಾರು ಎಂದು ಕೇಳಿದರೆ, ಶ್ರೀರಾಮಾಯಣ ದರ್ಶನಂ ಹಾಗೂ ಕುವೆಂಪು ಎಂದು ಉತ್ತರ ನೀಡು”, ಎಂದು ಹೇಳಿ ಕಳುಹಿಸಿದ್ದರಂತೆ.

ಕಾಕತಾಳೀಯ ಅನ್ನುವಂತೆ ಆ ಪ್ರಶ್ನೆಯನ್ನು ಕೇಳಿದ್ದೂ ಆಗಿತ್ತು, ಆತ ಸಂತಸದಿಂದ ಉತ್ತರಿಸಿದ್ದೂ ಆಗಿತ್ತು. ಖುಷಿಯಿಂದ ಬಂದು ನಮ್ಮ ಅಪ್ಪಯ್ಯನವರಿಗೆ ವರದಿ ಸಲ್ಲಿಸಿದ್ದೂ ಆಗಿತ್ತು.

ನಂತರ ಶಿಕ್ಷಕರಾಗಿ ನಲವತ್ತು ವರುಷ ಸೇವೆ ಸಲ್ಲಿಸಿ ನಿವೃತ್ತರಾದುದೂ ಆಯ್ತು.

ಇಂದು ಅದೇಕೋ ಅಂದಿನ ಈ ಘಟನೆ ನೆನಪಾಯ್ತು.

ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರ ನೇಮಕ ಮಾಡುವಾಗ, ಅಭ್ಯರ್ಥಿಗಳಿಗೆ ಈ ಪ್ರಶ್ನೆಯನ್ನು ಕೇಳಿದ್ದರೆ, ಬಹುಶಃ ಇಂದು ಈ ಸನ್ನಿವೇಶ ನಿರ್ಮಾಣವಾಗಿರುತ್ತಲೇ ಇಲ್ಲ ಎಂದು ಅನಿಸುತ್ತಿದೆ.