ಸಹಾನುಭೂತಿ ಇಲ್ಲ!

02 ಜನ 16

ಸಖೀ,
ನೋವುಂಡವರ ಬಗ್ಗೆ ಬರೆದೂ ಬರೆದೂ ತಿಂದದ್ದದೆಷ್ಟೋ,
ಅದರಲ್ಲಿ ನೊವುಂಡವರಿಗೆ ಆಗಿರುವ ಲಾಭವಾದರದೆಷ್ಟೋ;

ಬರಿ ಅನುಕಂಪದ ಮಾತುಗಳನಾಡಿ ಮೆಚ್ಚುಗೆ ಗಳಿಸುವಾಟ,
ಸಹಾನುಭೂತಿ ಕಿಂಚಿತ್ತೂ ಇಲ್ಲ ಬರಿ ಸ್ವಾರ್ಥದ ಮೋಸದಾಟ;

ಅಲ್ಲಾರೋ ಶಾಂತಿಯ ಪತಾಕೆ ಹಾರಿಸಿದರೂ ಹೊಟ್ಟೆಉರಿ,
ಸಮಾಜದ ಧೃವೀಕರಣಕ್ಕೆ ಪಣತೊಟ್ಟಿದ್ದಾರೆ ಇದನ್ನು ಅರಿ!

#ಆಸುಮನ


ಗಮನ ಇರುವುದಿಲ್ಲ!

02 ಜನ 16

ಸಖೀ,
ನೀನು ನನ್ನ ಕಣ್ಣಿದಿರು ಇರುವ ತನಕ
ನನಗೆ ಬೇರೆ ಯಾವುದರ ಬಗ್ಗೆಯೂ
ಗಮನ ಇರುವುದಿಲ್ಲ,

ನೀನು ಮರೆಯಾದಾಗ ನನಗೆ ನಿನ್ನದೇ
ಹುಡುಕಾಟ, ಇನ್ನಾವುದರ ಬಗ್ಗೆಯೂ
ಗಮನ ಇರುವುದಿಲ್ಲ!

‪#‎ಆಸುಮನ‬


ಅಧಿಪತ್ಯ!

01 ಜನ 16

ಸಖೀ,
ಕೆಲವು ಸಂಬಂಧಗಳು ಕೈಜಾರಿಹೋಗುತ್ತಿವೆ
ಅನ್ನುವುದರ ಅರಿವು ನಮಗಾಗುತ್ತಿರುತ್ತದೆ,

ಅದಕ್ಕೆ ನಾಳೆ ನಮ್ಮನ್ನೇ ಹೊಣೆಗಾರರನ್ನಾಗಿ
ಮಾಡಬಹುದೆಂಬ ಅರಿವೂ ನಮಗಿರುತ್ತದೆ;

ಆದರೇನು ಮಾಡೋಣ ಹೇಳು, ಅನುಮಾನ
ಪೂರ್ವಗ್ರಹಗಳೆಲ್ಲಾ ಬಲಿಷ್ಟಗೊಂಡ ಹಾಗಿವೆ,

ನಂಬಿಕೆ ದುರ್ಬಲಗೊಂಡಾಗ ಪ್ರಶ್ನೆಗಳೇ ನಮ್ಮ
ಮನದಲ್ಲಿ ಅಧಿಪತ್ಯವನ್ನು ಸ್ಥಾಪಿಸಿ ಬಿಡುತ್ತವೆ!

‪#‎ಆಸುಮನ‬


ನಾನು ನಿನಗೆ, ನೀನು ನನಗೆ!

01 ಜನ 16

ಸಖೀ,
ಗೋಡೆಯ ಮೇಲಿನ ಕ್ಯಾಲೆಂಡರ್ ಬದಲಾಯಿತಷ್ಟೇ
ನಮ್ಮ ಹಣೆಬರಹ ಹೀಗೆಯೇ, ನಿನಗಿದು ಗೊತ್ತಷ್ಟೇ?

ಕೊರಗುತ್ತಾ ಇರುವವರಿಗೆ ಇದೂ ದಿನ ಮತ್ತೊಂದು,
ಸಂತಸ ಪಡಲು ಕಾರಣಗಳಿವೆ ನೂರು ಮತ್ತೊಂದು,

ನಾಡಿನ ಎಲ್ಲಾ ಮನೆಗಳ ಒಳಗೂ ಕತೆ ಒಂದೇ ಐತಿ,
ನೀನು ನನಗೆ ನಾನು ನಿನಗೆ ಸುಖ ದುಃಖದ ಸಂಗಾತಿ,

ವರುಷ ವರುಷದ ನಂತರ ವರ್ಷ ಹೀಗೆ ಬರುತಿರಲಿ,
ಮನೆ ಮಂದಿಯ ಮನಗಳಲಿ ಹರ್ಷ ತುಂಬುತಿರಲಿ,

“ವರಿ” ಇಂದ “ಬರ”ದ ವರೆಗೆ ನಾವಿರೋಣ ಜೊತೆಗೆ,
ಹೇಳಲು ಇನ್ನೇನಿದೆ, ನಾನು ನಿನಗೆ, ನೀನು ನನಗೆ!

‪#‎ಆಸುಮನ‬


೨೦೧೬ರ ಹಾರ್ದಿಕ ಶುಭಹಾರೈಕೆಗಳು

01 ಜನ 16

ಹೊಸ ವರುಷವಿಡೀ ಹರುಷವಿರಲಿ,
ಈ “ವರಿ”ಯಿಂದ ಆ “ಬರ”ದವರೆಗೂ
ನಿಮಗ್ಯಾವುದೇ “ವರಿ” ಇಲ್ಲದೇ ಇರಲಿ,
ನಿಮ್ಮ ಹರ್ಷಕ್ಕೆಂದೂ “ಬರ” ಬಾರದಿರಲಿ,
ಆರೋಗ್ಯವು ಸದಾ ಉತ್ತಮವಾಗಿರಲಿ,
ಪ್ರತಿಯೊಬ್ಬರ ಮನ ಮನದೊಳಗೂ
ನೆಮ್ಮದಿಯು ಸದಾ ಮನೆ ಮಾಡಿರಲಿ!

ಎಲ್ಲರಿಗೂ ಹೊಸ ವರುಷ ೨೦೧೬ರ ಹಾರ್ದಿಕ ಶುಭಹಾರೈಕೆಗಳು.

‪#‎ಆಸುಮನ‬