ನಿದ್ದೆಯಿಲ್ಲದ ರಾತ್ರಿ!

15 ಜುಲೈ 15

ಸಖೀ,
ನನ್ನ ಮನ ಮನೆಗಳನ್ನು
ಬೆಳಗಿತು ನಿನ್ನ ಮುಖಾರವಿಂದ,
ತಾರೆಗಳಂತೆ ಮಿನುಗಿದವು
ಆ ಕಂಗಳು ಚೆಲುವೊಲವಿನಿಂದ;

ನಿಲ್ಲದ ನಿನ್ನ ಮಾತುಗಳು
ತಡೆಹಿಡಿದವು ನನ್ನನ್ನು ನಿದ್ರಿಸದಂತೆ,
ಮುಂಗುರುಳಿನಾಟ ನನ್ನ
ಮೈಮರೆಸಿತು ನನಗೇ ಅರಿಯದಂತೆ;

ನಿನ್ನ ಮೈಯ ಕಂಪು ನನ್ನ
ಒಳಗೆ ಮತ್ತೇರಿಸುತ್ತಲಿತ್ತು ಮೆಲ್ಲನೇ,
ಕನಸೋ ಇಲ್ಲ ನನಸೋ
ಎಂದರಿಯದೇ ನಾನಿದ್ದೆ ಸುಮ್ಮನೇ;

ಅತ್ತ ಕೋಳಿ ಕೂಗುತ್ತಾ
ಸೂಚನೆ ನೀಡಿತ್ತು ಬೆಳಗಾಯಿತೆಂದು
ರಾತ್ರಿಯೂ ಸುಸ್ತಾಗಿ ಕೈ
ಚೆಲ್ಲಿ ನುಡಿಯಿತು ತಾ ಹೊರಟೆನೆಂದು!


ನಿರ್ಲಿಪ್ತ!

13 ಜುಲೈ 15

ಸಖೀ,
ನೀನು ನಕ್ಕಾಗಲೂ
ನಿನ್ನಂದವನ್ನು ಬಣ್ಣಿಸಿ ಬರೆದೆ
ನೀನು ಅತ್ತಾಗಲೂ
ನಿನ್ನಂದವನ್ನು ಬಣ್ಣಿಸಿ ಬರೆದೆ;

ನಿನ್ನ ಭಾವಗಳಿಗೆ
ನಾನು ಸ್ಪಂದಿಸಲೇ ಇಲ್ಲ ಹೆಣ್ಣೇ
ನಿನ್ನ ಅಂದವನ್ನಷ್ಟೇ
ಆಸ್ವಾದಿಸುತ್ತಾ ನಾ ನಿಂತೆ ಕಣೇ;

ಬರೆಯುವ ಹುಚ್ಚು
ಮನೆಮಾಡಿದಂದಿನಿಂದ ಹೀಗೆಯೇ
ನಿರ್ಲಿಪ್ತನಾಗಿಯೇ
ಇರುವೆ ನಾ ನೀನಿದ್ದರೂ ಬಳಿಯೇ!


ಆತ್ಮಸಖ್ಯ!

13 ಜುಲೈ 15

ಸಖೀ,
ದೈಹಿಕ ಸುಖವು ತಾತ್ಕಾಲಿಕ
ಆತ್ಮಸಂತೃಪ್ತಿಯಷ್ಟೇ ಶಾಶ್ವತ;
ಎಲ್ಲ ಸ್ನೇಹವೂ ತಾತ್ಕಾಲಿಕ
ಕೇವಲ ಆತ್ಮಸಖ್ಯ ಶಾಶ್ವತ;

ಆತ್ಮಗಳು ಒಂದಾದ ಮೇಲೆ
ದೇಹಗಳ ಮಿಲನ ಅನಗತ್ಯ,
ಲಕ್ಷ್ಮಣರೇಖೆಗಳು ದೇಹಕ್ಕಷ್ಟೇ
ಆತ್ಮಗಳಿಗೆ ಸೀಮೆ ಇಲ್ಲ ಸತ್ಯ;

ಜಾಗೃತ ಮನಕಿಂದು ಇಷ್ಟವಿದೆ
ನಾಳೆ ಇಷ್ಟವಾಗದಿರಬಹುದು,
ಆತ್ಮ ಮೆಚ್ಚಿದರೆ ಇಂದಿನಿಷ್ಟವೇ
ಜನ್ಮಾಂತರದಲೂ ಇರಬಹುದು!


ಸುಖಿ!

13 ಜುಲೈ 15

ಸಖೀ,
ನಿನ್ನೆಲ್ಲಾ ಮಾತುಗಳನ್ನು ನಾನು
ಕೇಳಿಯೂ ಕೇಳಿಸಿಕೊಳ್ಳದಂತಿರುವೆ;
ಈಗ ನೀನೂ ಸುಖಿಯಾಗಿರುವೆ,
ನೋಡು ನಾನೂ ಸುಖಿಯಾಗಿರುವೆ!


ದೇವರೂಟ!

13 ಜುಲೈ 15

ಸಖೀ,
ಹಸಿವಿಲ್ಲದವರನ್ನು ಕರೆದು ಭಕ್ಷ್ಯಗಳ
ಉಣ್ಣಲಿತ್ತು ಆ ದೇವರನು ನೆನೆದೊಡೆ
ದೇವರು ಬರುವರೇ ಹಸಿದವರ ಬಿಟ್ಟು
ಉಂಡವರು ಬೆನ್ನುತಟ್ಟಿ ಹೊಗಳುವೆಡೆ?


ನಾನೂ ಕಮ್ಮಿ ಇಲ್ಲ!

13 ಜುಲೈ 15

ಸಖೀ,
ಅಂದು ಅಪ್ಪ ಸೇದಿ ಎಸೆದ ಬೀಡಿ
ತುಂಡು ಇನ್ನೂ ಸುಡುತ್ತಲೇ ಇತ್ತು,
ಜೊತೆಗೆ ನನ್ನೊಳಗಿನ ಬಂಡಾಯಕ್ಕೆ
ನಿಧಾನವಾಗಿ ಕಿಚ್ಚು ಹಚ್ಚುತ್ತಲಿತ್ತು;

ಎತ್ತಿ ಬಾಯಿಗಿಟ್ಟುಕೊಂಡು, ಸೇದಿ
ಎದೆತುಂಬಿಕೊಂಡೆ, ತಲೆ ಸುತ್ತಿಬಂತು,
ಹೊರಗುಗುಳಿದ ಆ ಹೊಗೆಯೊಂದಿಗೆ
ಓರ್ವ ಕ್ರಾಂತಿಕಾರನ ಜನನವಾಯ್ತು!

(ಕ್ರಾಂತಿಕಾರಿ ಸಾಹಿತ್ಯರಚನೆಯ ಒಂದು ಯತ್ನ. ಪ್ರಶಸ್ತಿ ಸಿಗಲೂಬಹುದು 🙂 )


ಪೋಷಿಸೋಣ!

12 ಜುಲೈ 15

ಸಖೀ,
ದಿನ ಒಂದೆರಡರಲ್ಲೇ ಸಂಬಂಧಗಳಿಲ್ಲಿ
ಬೆಳೆದು ಮನಗಳಿಗೆ ಆಪ್ತವೆನಿಸುವುದಿಲ್ಲ,
ಸುಪ್ತಚೇತನಗಳ ಮೇಲೆ ಪ್ರೀತಿಯ ಮಳೆ
ಸುರಿದರದು ಬೆಳೆಯದೇ ಉಳಿಯುವುದಿಲ್ಲ;

ಎಲ್ಲವಕ್ಕೂ ಅವುಗಳದಾದ ಸಮಯವಿದೆ
ಎಲ್ಲವಕ್ಕೂ ಅವುಗಳದೇ ಕಾರಣವೂ ಇದೆ

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಇಂದಿಲ್ಲಿ
ಆಪ್ತವಾಗಿದೆಯಾದರದು ಸುಮ್ಮನೇ ಅಲ್ಲ
ಪರಸ್ಪರ ಗೌರವದಿಂದ ಪೋಷಿಸದೇ ಇದ್ದರೆ
ಬಿರುಕುಬಿಟ್ಟು ಮನ ನೊಂದೀತು ಸುಳ್ಳಲ್ಲ!


ಸಹಮನಸ್ಕರಾದರೆ ಸಾಕು!

09 ಜುಲೈ 15

ಸಖೀ,

ಸ್ನೇಹಿತರಲ್ಲಿ, ನಿಜ ಹೇಳು ನೀ,
ಹಿರಿಯರಾರು, ಕಿರಿಯರಾರು?

ಸಹಮನಸ್ಕರಲ್ಲಿ ವಯಸ್ಸಿನ
ಅಂತರ ಹುಡುಕುವವರಾರು?

ನಿಸ್ವಾರ್ಥ ಸ್ನೇಹವು ಸದಾ ಕಾಲ
ಹಸಿರಾಗಿದ್ದು ಮುದ ನೀಡುತ್ತದೆ,

ಪರಸ್ಪರ ಹೇರಿಕೆಯಾಗದಿರೆ ಸ್ನೇಹ
ಬಂಧವೂ ಸುದೀರ್ಘ ಬಾಳುತ್ತದೆ!


ಭಾವಶೂನ್ಯ!

09 ಜುಲೈ 15

ಸಖೀ,
ನೀನು ನಕ್ಕಾಗಲೂ
ನಿನ್ನಂದವನ್ನು ಬಣ್ಣಿಸಿ ಬರೆದೆ
ನೀನು ಅತ್ತಾಗಲೂ
ನಿನ್ನಂದವನ್ನು ಬಣ್ಣಿಸಿ ಬರೆದೆ;

ನಿನ್ನ ಭಾವಗಳಿಗೆ
ನಾನು ಸ್ಪಂದಿಸಲೇ ಇಲ್ಲ ಹೆಣ್ಣೇ
ನಿನ್ನ ಅಂದವನ್ನಷ್ಟೇ
ಆಸ್ವಾದಿಸುತ್ತಾ ನಾ ನಿಂತೆ ಕಣೇ;

ಬರೆಯುವ ಹುಚ್ಚು
ಮನೆಮಾಡಿದಂದಿನಿಂದ ಹೀಗೆಯೇ
ನಿರ್ಲಿಪ್ತನಾಗಿಯೇ
ಇರುವೆ ನಾ ನೀನಿದ್ದರೂ ಬಳಿಯೇ!


ನಾವದೇಕೆ ಅಸಹಾಯಕರಾದೆವು?

05 ಜುಲೈ 15

|ಜೀವನದ ಈ ಪಯಣದಲಿ ನಾವದೇಕೆ ಅಸಹಾಯಕರಾದೆವು,
ಅದೆಷ್ಟು ಸನಿಹರಾದೆವೆಂದರೆ ಪರಸ್ಪರರಿಂದ ದೂರವಾದೆವು|

ನನಗಿಲ್ಲಾವ ಸಂತಸವೂ ದಕ್ಕಿಲ್ಲ ಎಂದೇನಲ್ಲ
ಆದರೆ ಈ ಜೀವನವೆಂದೂ ಜೀವನವೇ ಆಗಿಲ್ಲ
ಯಾಕಿದರ ನಿರ್ಣಯಗಳನ್ನೆಲ್ಲಾ ನಾವು ಸ್ವೀಕರಿಸಿದೆವು?

|ಜೀವನದ ಈ ಪಯಣದಲಿ ನಾವದೇಕೆ ಅಸಹಾಯಕರಾದೆವು,
ಅದೆಷ್ಟು ಸನಿಹರಾದೆವೆಂದರೆ ಪರಸ್ಪರರಿಂದ ದೂರವಾದೆವು|

ನಿನ್ನನ್ನು ಪಡೆದಂದೇ ಕಳೆದುಕೊಂಡ ಅನುಭವವೂ ನನಗಾಯ್ತು
ನೊಂದ ಹೃದಯಕ್ಕಾಗಿ ನಾ ಮರುಗಿದರೆ ಹೃದಯ ನನಗಾಗಿ ಮರುಗಿತ್ತು
ಕಣ್ಣಂಚಿನಿಂದ ಕನಸುಗಳು ಜಾರಿ ಅವೇಕೆ ನುಚ್ಚುನೂರಾದವು

|ಜೀವನದ ಈ ಪಯಣದಲಿ ನಾವದೇಕೆ ಅಸಹಾಯಕರಾದೆವು,
ಅದೆಷ್ಟು ಸನಿಹರಾದೆವೆಂದರೆ ಪರಸ್ಪರರಿಂದ ದೂರವಾದೆವು|

#ಆಸುಮನ
#ಭಾವಾನುವಾದ

क्यों जिन्दगी की राह में मजबूर हो गए
इतने हुए करीब के हम दूर हो गए

ऐसा नहीं के हम को कोई भी खुशी नहीं
लेकिन ये जिन्दगी तो कोई जिन्दगी नहीं
क्यों इसके फैसले हमे मंजूर हो गए

पाया तुम्हे तो हम को लगा तुम को खो दिया हम दिल पे रोये और ये दिल हम पे रो दिया पलकों से ख्वाब क्यों गिरे क्यों चूर हो गए