ಸಮಾನರಲ್ಲಿ ನಡೆಯಲಿ!

26 ಆಕ್ಟೋ 14

ಸಖೀ,
ನೀನು ನನ್ನಂತಿಲ್ಲ ಅನ್ನುವುದನ್ನು ಅರಿಯದವಳು ನೀನಲ್ಲ
ನಾನು ನಿನ್ನಂತಿಲ್ಲ ಅನ್ನುವುದನ್ನು ಅರಿಯದವನು ನಾನಲ್ಲ;

ಆದರೂ ಪರಸ್ಪರರ ನಡುವಣ ಪೈಪೋಟಿ ಇನ್ನೂ ನಿಂತಿಲ್ಲ
ಸಮಾನರಲ್ಲೇ ಪೈಫೋಟಿ ನಡೆಯಲಿ ನಮ್ಮ ನಡುವಲ್ಲಲ್ಲ!


ಕಾಲಕೂಡಿ ಬಾರದಿದ್ದರೆ?

26 ಆಕ್ಟೋ 14

ಸಖೀ,
ನಿನ್ನತ್ತ ಹಾರಿಬಿಟ್ಟಿದ್ದ ಪಾರಿವಾಳ ಅದ್ಯಾವ ಕಡೆ ಹಾರಿಹೋಯ್ತೋ ಗೊತ್ತಿಲ್ಲ
ಜೊತೆಗೆ ರವಾನಿಸಿದ್ದ ಪ್ರೀತಿಯ ಪತ್ರ ಅದ್ಯಾರ ಕೈಸೇರಿತೋ ತಿಳಿಯಲಿಲ್ಲ;

ನಮ್ಮ ಭಕುತಿಯ ಪ್ರಾರ್ಥನೆಗಳೂ ಬ್ರಹ್ಮಾಂಡದಲ್ಲಿ ಕಳೆದುಹೋಗಬಹುದು
ಕಾಲಕೂಡಿ ಬಂದಾಗ ಮಾತ್ರವೇ ಪರಮಾತ್ಮನನ್ನು ತಲುಪಲೂಬಹುದು!


ದಿನಪತ್ರಿಕೆಗಳು!

26 ಆಕ್ಟೋ 14

ಸಖೀ,
ಈಗೀಗ ದಿನಪತ್ರಿಕೆಗಳ ತೂಕ ಜಾಸ್ತಿ
ಸುದ್ದಿ ಕಮ್ಮಿ ಜಾಹೀರಾತುಗಳು ಜಾಸ್ತಿ
ಪ್ರಕಟಿಸುವವರಿಗೆ ಜಾಹೀರಾತಿಗಾಗಿ
ಖರೀದಿಸುವವರಿಗೆ ಕೇವಲ ರದ್ದಿಗಾಗಿ!


ಕಣ್ಣು ದೀಪ!

26 ಆಕ್ಟೋ 14

ಸಖೀ,
ಸಾಲು ಸಾಲು ದೀಪಗಳೇ ಬೇಕಿಲ್ಲ
ಮನೆ ಮನಗಳ ಬೆಳಗಲು ನನಗಿಲ್ಲಿ
ನಿನ್ನೀ ಜೋಡಿ ಕಣ್ಣುಗಳೇ ಸಾಕಲ್ಲಾ
ದಾರಿದೀಪಗಳಾಗಿರಲೆನ್ನೀ ಬಾಳಲ್ಲಿ?


ಹಣತೆ ಹಚ್ಚುತ್ತೇನೆ!

20 ಆಕ್ಟೋ 14

ಸಖೀ,
ಹಣತೆ ಹಚ್ಚುತ್ತೇನೆ ಎಂದು ನಾನಂದ ಕೂಡಲೇ
ರಾಷ್ಟ್ರಕವಿಯ ಕವಿತೆಯ ನೀ ಗುನುಗುನಿಸಬೇಡ
ಮುದಗೊಂಡ ಮನದೊಳಗೆ ಸಂಭ್ರಮಿಸಬೇಡ;

ದಿನಕ್ಕೆ ಮೂರು ಗಂಟೆಗಳಂತೆ ವಿದ್ಯುತ್ ಕಡಿತ
ಕತ್ತಲಲ್ಲಿ ಬಟ್ಟಲು ಎಲ್ಲೆಂದು ನಮಗೆ ಕಾಣುತ್ತಾ?
ಬಂದು ಕೂತುಕೋ ನೀನೂ ಒಟ್ಟಿಗೆ ಉಣ್ಣುತ್ತಾ!


ಬದಲಾವಣೆ!

19 ಆಕ್ಟೋ 14

ಸಖೀ,
ನಮ್ಮ ಪಾಲಿಗೆ ಆದರ್ಶಪ್ರಾಯರಾಗಿದ್ದವರೂ
ಕೀಳಾಗಿ ಕಂಡುಬರುತ್ತಾರೆಮಗೆ ಒಮ್ಮೊಮ್ಮೆ
ಕಾರಣ ಕೆಲವೊಮ್ಮೆ ಅವರ ನಡತೆ ಹಾಗೂ
ಬದಲಾದ ನಮ್ಮ ದೃಷ್ಟಿಕೋಣ ಒಮ್ಮೊಮ್ಮೆ!


ಏಕೆ ಚಿಂತೆ?

19 ಆಕ್ಟೋ 14

ಸಖೀ,
ದೇವರ ಮೇಲಿರುವ ನಮ್ಮ ಭಕುತಿ, ಭಕುತಿಯ ಜೊತೆಗಿರುವ ಶ್ರದ್ದೆ
ನಮ್ಮಾತ್ಮಕ್ಕೆ ವಂಚಿಸದಂತಿದ್ದರಾಯ್ತು, ಬೇಡ ಬೇರೆಯವರ ಚಿಂತೆ:

ನಮ್ಮ ಭಕುತಿಯನ್ನೇ ಮೂದಲಿಸುವವರಿದ್ದರೆ ಉತ್ತರಿಸಬೇಕಾಗಿಲ್ಲ
ಸೇರಬೇಕಾದಲ್ಲಿಗೆ ಸೇರಿದ ಮೇಲೆ ಏಕೀ ಅಂತೆ ಕಂತೆಯ ಚಿಂತೆ?


ಕೊರಗುತ್ತಿರಬೇಕು!

19 ಆಕ್ಟೋ 14

ಸಖೀ,
ಮಕ್ಕಳ ಅಪ್ರಬುದ್ಧ ನುಡಿಗಳನ್ನೆಲ್ಲಾ ಹೊಟ್ಟೆಗೆ ಹಾಕಿಕೊಂಡು ಬಾಳುತ್ತೇವೆ
ನಮ್ಮದೇ ರೀತಿಯಲ್ಲಿ ನೋವಾಗದಂತೆ ಅರಿವು ಮೂಡಿಸುತ್ತಾ ಇರುತ್ತೇವೆ;

ದೊಡ್ಡವರೂ ಕೆಲವೊಮ್ಮೆ ಅಪ್ರಬುದ್ಧರಂತೆಯೇ ವರ್ತಿಸಿದರೆ ನಮಗೆ ನೋವು
ಅರಿವು ಮೂಡಿಸಲೂ ಆಗದೇ ಒಳಗೊಳಗೇ ಕೊರಗುತ್ತಾ ಇರಬೇಕು ನಾವು;

ಆತ್ಮಕ್ಕೆ ಘಾಸಿಯಾಗುತ್ತಿದ್ದರೂ ಆತ್ಮಹತ್ಯೆಯ ಬಗ್ಗೆ ಯೋಚಿಸುವಂತಿಲ್ಲ ಕಣೆ
ನಮ್ಮ ದುರಾದೃಷ್ಟಕ್ಕೆ ಸದಾ ಚಚ್ಚಿಕೊಳ್ಳುತ್ತಿರಬೇಕು ನಾವು ನಮ್ಮದೇ ಹಣೆ!


ಬಿಡುಗಡೆ ಮೇಲೆ ಹೋದಾಗಷ್ಟೇ!

19 ಆಕ್ಟೋ 14

ಸಖೀ
ನಾವು ಕೆಟ್ಟವರು ಎಂದನ್ನುವ ಜನರಿಂದ ದೂರವೇ ಉಳಿದರೂ
ನಮ್ಮ ಮನೋಭಾವವನ್ನು ಹೀಗಳೆವವರಿಂದ ದೂರವಾದರೂ
ಮತ್ತೆ ನಮ್ಮನ್ನು ಬೇತಾಳದಂತೆ ಬೆಂಬತ್ತುವುದಿದೆ ಈ ವಿಧಿಲೀಲೆ
ನಮಗಿದರಿಂದ ಬಿಡುಗಡೆ ಒಮ್ಮೆಯೇ ನಾವೇ ಹೋದಾಗ ಮೇಲೆ!


ಗೆಲುವು!

19 ಆಕ್ಟೋ 14

ಸಖೀ,
ಪೈಪೋಟಿಗೆ ಇಳಿದರೆ ಎಲ್ಲರನ್ನೂ ಸೋಲಿಸಬಲ್ಲೆವು
ಪೈಪೋಟಿಗೆ ಇಳಿಯದೇ ನಾವೆಲ್ಲರನ್ನು ಗೆಲ್ಲಬಲ್ಲೆವು
ಸೋಲಿಸುವುದಷ್ಟೇ ಈ ಬಾಳಿನ ಗಮ್ಯವಾಗದಿರಲಿ
ಎಲ್ಲರನ್ನೂ ಗೆಲ್ಲುವ ಯತ್ನವಿಲ್ಲಿ ಜೀವಂತವಾಗಿರಲಿ!