ಜನರಿಗೇನು!

21 ಸೆಪ್ಟೆಂ 14

ಸಖೀ,
ನನ್ನ ಮಾತುಗಳ ಅರ್ಥ ನಿನಗೆಷ್ಟಾಯ್ತೋ ಗೊತ್ತಿಲ್ಲ
ಜನರೆಲ್ಲಾ ಅವರವರದೇ ಅರ್ಥ ಕೊಡುತಿಹರಲ್ಲಾ
ನಮ್ಮನ್ನು ಅವರ ಮಾಪಕಗಳಲ್ಲಿ ಅಳೆಯುತಿಹರಲ್ಲಾ
ನಮ್ಮ ನಡುವೆ ಇಲ್ಲದ ಬಿರುಕನ್ನೂ ಕಾಣುತಿಹರಲ್ಲಾ!


ಅರಿವಾಗಲೇ ಇಲ್ಲ!

21 ಸೆಪ್ಟೆಂ 14

ಸಖೀ,
ನಿನ್ನನ್ನೇ ನೆನೆನೆನೆದು ನಿನ್ನ ನೆನಪಿನ ಮಳೆಯಲ್ಲಿ ನೆನೆದಿದ್ದ ನನ್ನನ್ನು
ಬಾನಿಂದ ಸುರಿದ ಮಳೆ ಒದ್ದೆಯಾಗಿಸಿದ ಅರಿವು ನನಗಾಗಲೇ ಇಲ್ಲ
ಕಚೇರಿಯಿಂದ ಹೊರಟದ್ದು ಗೊತ್ತು ಮನೆಯೊಳಗೆ ಬಂದದ್ದು ಗೊತ್ತು
ನಡುವಿನ ಅಷ್ಟುದ್ದದ ಹಾದಿ ಸವೆದುದರ ಅರಿವು ನನಗಾಗಲೇ ಇಲ್ಲ!


ಅರ್ಥದಿಂದಲೇ ಬಾಳಿಗರ್ಥವೇ?

18 ಸೆಪ್ಟೆಂ 14

ಸಖೀ,
ಖಾಲಿ ಜೇಬು
ಕೈಹಾಕಿ ತಡಕಾಡಿದರೂ ಬಿಡಿಗಾಸಿಲ್ಲ;
ಖಾಲಿ ಮನಸ್ಸು
ಹುಡುಕಿದರೂ ಅಲ್ಲಿ ಭಾವ ಹಸನಾಗಿಲ್ಲ;
ಅರ್ಥವೇ ಅರ್ಥ
ನೀಡುವುದೇನೋ ಮನಸ್ಥಿತಿಗೂ ಅಲ್ಲಾ?
ಅರ್ಥ ಇಲ್ಲದೆಯೂ
ಈ ಬಾಳಿಗೊಂದು ಅರ್ಥ ನೀಡಬೇಕಲ್ಲಾ?
ಅರ್ಥಪೂರ್ಣವಾಗಿ
ಬಾಳಲು ಅರ್ಥ ಇರಲೇಬೇಕೆಂದೇನಿಲ್ಲವಲ್ಲಾ?
ಅರ್ಥ ಇದ್ದವರು
ಬಾಳಿಗೊಂದು ಅರ್ಥವನು ಖರೀದಿಸುವರಿಲ್ಲಿ;
ಅರ್ಥ ಇಲ್ಲದವರು
ತಾವೇ ತಮ್ಮ ಬಾಳಿಗೆ ಅರ್ಥ ನೀಡಬಹುದಿಲ್ಲಿ!


ಅದು ಬೇರೆ ಇದು ಬೇರೆ!

18 ಸೆಪ್ಟೆಂ 14

ಸಖೀ,
ನೀನು ನುಡಿಯುವುದೆಲ್ಲವೂ ನನಗೆ ಮೆಚ್ಚುಗೆ ಆಗಲೇಬೇಕು ಎಂದೇನಿಲ್ಲ
ನನ್ನ ಮೆಚ್ಚುಗೆ ನಮ್ಮ ನಡುವಿರುವ ಗೆಳೆತನವನ್ನು ಅವಲಂಬಿಸಿರುವುದಿಲ್ಲ
ನಮ್ಮ ವೈಚಾರಿಕ ಭಿನ್ನಾಭಿಪ್ರಾಯಗಳೆಂದೂ ಸ್ನೇಹದ ನಡುವೆ ಬಾರದಿರಲಿ
ಈ ಬಂಧ ಸದಾ ವ್ಯಕ್ತಿನಿಷ್ಠ ಹಾಗೂ ಅಭಿಪ್ರಾಯ ವಸ್ತುನಿಷ್ಠವಾಗಿಯೇ ಇರಲಿ!


ಯಾರನ್ನು ದೂರಬಹುದು?

18 ಸೆಪ್ಟೆಂ 14

ಸಖೀ,
ಮಹರ್ಷಿ ವಿಶ್ವಾಮಿತ್ರರ ತಪಸ್ಸನ್ನು ಭಂಗಪಡಿಸಿ ಮೇನಕೆ ತಾಯಿ ಆಗಿದ್ದಳಂದು
ಆಶ್ರಮವಾಸಿ ಶಾಕುಂತಲೆಯ ದುಷ್ಯಂತ ಛೇಡಿಸಿ ಗರ್ಭದಾನ ಮಾಡಿದ್ದನಂದು
ಕುಂತಿಯ ವಿವಾಹದ ತನಕ ಮಂತ್ರವನ್ನು ಮುನಿ ನಿಷ್ಕ್ರಿಯವಾಗಿರಿಸಲಿಲ್ಲವೇಕೆ? 
ನಮ್ಮ ಚರಿತ್ರೆಯೇ ಹೀಗಿರಲು ಯಾರನ್ನು ದೂರಬಹುದೆಂದು ನೀ ಕೇಳೆಯೇಕೆ?


ಜ್ಞಾನದಕ್ಷಿ ತೆರೆದಿರಲಿ!

18 ಸೆಪ್ಟೆಂ 14

ಸಖೀ,
ನಿನ್ನ ಕಣ್ಣುಗಳ ಒಳಗೆಯೇ ಸುಳ್ಳು ಅಡಗಿ ಕೂತಿದೆ
ರೆಪ್ಪೆಗಳನ್ನು ತೆರೆದುನೋಡು ಕಣ್ಮುಂದೆ ಸತ್ಯವಿದೆ
ಬಾಳಿನ ಸತ್ಯಕ್ಕೆ ಕುರುಡಳಾಗಿ ಇದ್ದು ಬಿಡಬೇಡ ನೀ
ಸದಾ ಜ್ಞಾನದಕ್ಷಿಗಳ ತೆರೆದಿರಿಸಿಕೊಂಡೇ ಇರು ನೀ!


ನಿಲ್ಲಿಸೆ ನಿನ್ನಾಟ!

18 ಸೆಪ್ಟೆಂ 14

ಸಖೀ,
ನಾನು ಸುಮ್ಮನಿದ್ದಾಗಲೂ ಸುಮ್ಮನೇ ಇರಗೊಡದೇ
ಸತಾಯಿಸುವ ನಿನ್ನ ನೆನಪುಗಳಿಗೆ ಯಾಕಿಷ್ಟು ಹಟ?
ನನ್ನೊಳಗೆ ಒಂದಾಗಿ ನೀನೇ ಇಲ್ಲಿರುವಾಗ ನಿನ್ನಯ
ನೆನಪುಗಳಿಗೆ ಇನ್ನೇನು ಕೆಲಸ, ನಿಲ್ಲಿಸೆ ನಿನ್ನೀ ಆಟ!


ಬೇಕಿಹುದೇನು?

18 ಸೆಪ್ಟೆಂ 14

ಸಖೀ,
ನೊಂದಿರುವ ನನ್ನ ಈ ಮನಕೆ ಔಷಧಿ
ನಿನ್ನ ಕಣ್ರೆಪ್ಪೆಗಳ ನಡುವೆ ಅಡಗಿಹುದು;
ಕಂಗಳನ್ನರಳಿಸಿ ನನ್ನ ಕಂಗಳಲ್ಲಿ ಕಣ್ಣಿಟ್ಟು
ನೋಡೊಮ್ಮೆ, ನನಗಿನ್ನೇನು ಬೇಕಿಹುದು?


ನಿರ್ಲಿಪ್ತ!

15 ಸೆಪ್ಟೆಂ 14

ಸಖೀ,
ಒಮ್ಮೊಮ್ಮೆ ಕಂಡು ನಗುತ್ತಾರೆ
ಒಮ್ಮೊಮ್ಮೆ ಕರೆದು ಮಾತಾಡಿಸುತ್ತಾರೆ
ಒಮ್ಮೊಮ್ಮೆ ಮಾತಿಗೆ ಮೆಚ್ಚುಗೆ ಸೂಚಿಸುತ್ತಾರೆ
ಒಮ್ಮೊಮ್ಮೆ ಮಾತಿಗೆ ಮಾತು ಜೋಡಿಸುತ್ತಾರೆ
ಒಮ್ಮೊಮ್ಮೆ ಇದ್ದೂ ಇರದವರಂತೆ ಇದ್ದುಬಿಡುತ್ತಾರೆ
ಒಮ್ಮೊಮ್ಮೆ ಕಣ್ಣಿಗೇ ಕಾಣಿಸದಂತೆ ಮರೆಯಾಗುತ್ತಾರೆ
ಎಲ್ಲರೂ ನನ್ನವರೇ ಇವರೆಲ್ಲರೂ ನಿಜಕ್ಕೂ ನನ್ನಾತ್ಮೀಯರೇ
ನಾನು ಸದಾ ನಿರ್ಲಿಪ್ತ, ಎಲ್ಲರೂ ನನ್ನ ಜೀವನದಂಗವಾದವರೇ!


ಜನರ ಸಖ್ಯ ಮಾಡಿನೋಡು!

15 ಸೆಪ್ಟೆಂ 14

ಸಖೀ,
ಈ ಜೀವನರಂಗದ ಉದ್ದಗಲದರಿವಿಲ್ಲದೇ ಮಾತನಾಡದಿರು
ಸದಾ ಇರುವಲ್ಲಿಯೇ ಇದ್ದು ನೀನು ಈ ಜಗದಿಂದ ಮರಳದಿರು
ಹತ್ತೂರು ಸುತ್ತಿ, ನೂರಾರು ಜನರ ಸಖ್ಯವನು ಮಾಡಿನೋಡು
ನೀನು ಈ ಜಗದಿಂದ ಮರಳುವ ಮಾತನ್ನೇ ಮರೆವೆ ನೋಡು!